ನಾವು ಕೀಳು ಜನ ಅಲ್ಲ, ಕೀಳರಿಮೆ ಜನ!

ಮೊನ್ನೆಮೊನ್ನೆ ಪ್ರಜಾವಾಣೀಲಿ ಬಂದ ವರದಿ ಪ್ರಕಾರ ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ ಮಾಡಿದರೆ ಉನ್ನತ ಹುದ್ದೆಗಳಿಗೆ ಏರಕ್ಕೆ ತೊಂದರೆಯೇನಿಲ್ಲ ಅಂತ ನ್ಯಾಯಾಧೀಶರು ಅಭಿಪ್ರಾಯ ನೀಡಿದಾರೆ. ಇದು ನಿಜ, ಗುರು. ಕನ್ನಡ ಮಾಧ್ಯಮದಲ್ಲಿ ಓದಿದರೆ ಏನೋ ಊನವಾಗಿಹೋಗತ್ತೆ ಅಂತ ಕನ್ನಡಿಗರು (ಹೆಚ್ಚಾಗಿ ನಗರಗಳಲ್ಲಿರೋರು) ಅಂದುಕೊಂಡಿರೋದು ಅವೈಜ್ಞಾನಿಕ. ಇದು ಇಡೀ ಕರ್ನಾಟಕ ಸೇರಿ ನಿಧಾನವಾಗಿ ತೊಗೋತಿರೋ ವಿಷ.

ವಿಶ್ವ ಸಂಸ್ಥೆಯ ಸಂಶೋಧನೆಯ ಪ್ರಾಕಾರವೂ ತಾಯ್ನುಡಿಯಲ್ಲಿ ಕಲಿಕೆ ಬಹುಮುಖ್ಯ. ಜರ್ಮನಿ, ಜಪಾನ್, ಚೀನ ಮುಂತಾದವುಗಳ ಏಳ್ಗೆ-ಸಾಧನೆಗಳ ಹಿಂದೆ ದೊಡ್ಡದೇನು ಗುಟ್ಟಿಲ್ಲ ಗುರು. ಇವರೆಲ್ಲರ ಶಿಕ್ಷಣ ವ್ಯವಸ್ಥೆ ಅವರವರ ತಾಯ್ನುಡಿಯಲ್ಲಿಯೇ ಇದೆ ಅನ್ನೋದೇ ಅವರ ಏಳ್ಗೆಗೆ ಅತಿಮುಖ್ಯವಾದ ಕಾರಣ. ಇಂತಹ ವ್ಯವಸ್ಥೆ ಇಟ್ಟ್ಕೊಂಡಿರೋ ದೇಶಗಳಿಂದ ಹೊರಬಂದಿರೋ ಪೇಟೆಂಟುಗಳ ಸಂಖ್ಯೆ, ಹೊಸ ತತ್ವಾನ್ವೇಷಣೆಗಳ ಸಂಖ್ಯೆಗೆ ಭಾರತದಿಂದ ಹೊರಬಂದಿರೋದನ್ನ ಹೋಲಿಸಿದರೆ ನಾಚಿಕೆ ಆಗತ್ತೆ ಗುರು! ಈ ದೇಶಗಳಿಗೂ ಭಾರತಕ್ಕೂ ಇರೋ ವೆತ್ಯಾಸ ಏನಪ್ಪಾ ಅಂದ್ರೆ ಶಿಕ್ಷಣ ವ್ಯವಸ್ಥೆ! ನಾವು ಜರ್ಮನ್ನರಿಗಿಂತ, ಜಪಾನಿಗಳಿಗಿಂತ, ಚೀನಾದೋರಿಗಿಂತ ಕೀಳು ಜನರೇನಲ್ಲ, ಆದರೆ ಪ್ರಾಯಶಃ ಪ್ರಪಂಚದಲ್ಲಿ ಮಿಗಿಲಿಲ್ಲದಷ್ಟು ಕೀಳರಿಮೆಯಿರೋ ಜನರು ನಾವು, ಅಷ್ಟೆ!

ಸುಟ್ಟಾಕ್ಬೇಕು ಆ ಕೀಳರಿಮೇನ! ಕನ್ನಡಿಗರಷ್ಟೆ ಅಲ್ಲ, ಭಾರತದೋರೆಲ್ಲ ಇಂಗ್ಲೀಷಿಗೆ ಕಣ್ಮುಚ್ಚಿಕೊಂಡು ಮೊರೆ ಹೋಗೋದು ಪೆದ್ದತನಾನೂ ಹೌದು, ನಮ್ಮ ಮಕ್ಕಳಿಗೆ ಮಾಡ್ತಿರೋ ಮೋಸಾನೂ ಹೌದು. ನಿಧಾನವಾಗಿ ಇದನ್ನ ರಿಪೇರಿ ಮಾಡ್ಬೇಕು, ಕನ್ನಡದ ಮಾಧ್ಯಮಕ್ಕೆ ನಮ್ಮ ಮಕ್ಕಳನ್ನ ಸೇರಿಸೋದು ಹೆಚ್ಚಬೇಕು, ಕನ್ನಡದ ಶಿಕ್ಷಣ ವ್ಯವಸ್ಥೆ ಮತ್ತಷ್ಟು ಚೆನ್ನಾಗಿ ಆಗಬೇಕು, ನಮ್ಮ ಮಕ್ಕಳನ್ನ ಜಾಗತೀಕರಣದಲ್ಲಿ ನಿಜವಾದ ಆಟಗಾರರಾಗಕ್ಕೆ ಅನುವು ಮಾಡ್ಕೊಡಬೇಕು, ಇವತ್ತಿನಂಗೆ ಬರೀ ತ್ಯಾಪೆ ಕೆಲಸಗಾರರಾಗಿರ್ಲಿ ಅಂತ ಬಿಡಬಾರದು ಗುರು!

ಈ ಬದಲಾವಣೆ ಮಾಡುವಾಗ ಕೆಲವು ದಿನ ಇಂಗ್ಲೀಷಿನ ಶಿಕ್ಷಣ ವ್ಯವಸ್ಥೆ ಇಟ್ಟುಕೊಳ್ಳದೆ ಬೇರೆ ದಾರಿಯಿಲ್ಲ. ಆದರೆ ಅದನ್ನೇ ಶಾಶ್ವತವಾಗಿ ನಂಬಿಕೊಳ್ಳದೆ ಜೊತೆಜೊತೆಗೇ ಕನ್ನಡದ ಶಿಕ್ಷಣ ವ್ಯವಸ್ಥೇನ ಭದ್ರ ಮಾಡ್ಕೋಬೇಕು ಗುರು. ಇದು ನಮ್ಮ ನಿಮ್ಮೆಲ್ಲರ ಕರ್ತವ್ಯ.

1 ಅನಿಸಿಕೆ:

Anonymous ಅಂತಾರೆ...

೧೯೮೦ ರ ದಶಕದಲ್ಲಿ ಚೀನಾ, ಭಾರತಕ್ಕಿಂತ ಹಿಂದುಳಿದ ರಾಷ್ಟ್ರವಾಗಿತ್ತು. ಎರಡೂ ಕಡೆ ಸರಿ ಸುಮಾರು ಒಟ್ಟಾಗೆ ಜಾಗತೀಕರಣ ಪ್ರಾರಂಭವಾಯಿತು. ಈಗ ಚೀನಾದವರು ಭಾರತಕ್ಕಿಂತ ಸುಮಾರು ಹತ್ತು ಪಟ್ಟು ಮುಂದುವರೆದಿದ್ದಾರೆ. ಇದರ ಅರ್ಥ ಏನೆಂದರೆ ದೇಶ ಮುಂದುವರಿಯಬೇಕಾದರೆ ಇಂಗ್ಲೀಷ್ನ ಅವಶ್ಯಕತೆ ಇಲ್ಲ. ಅಷ್ಟೇ ಅಲ್ಲ ಬರಿ ಇಂಗ್ಲೀಷ್ನಲ್ಲಿ ಕಲಿತರೆ ಹೆಚ್ಚು ಮುಂದುವರೆಯುವುದಿಲ್ಲ ಹಾಗು ಮಾತೃ ಭಾಷೆಯಲ್ಲಿ ಕಲಿತಲ್ಲಿ ಹೆಚ್ಚು ಮುಂದುವರೆಯುತ್ತೇವೆ. ಈ ಸತ್ಯವನ್ನು ಆದಷ್ಟು ಬೇಗ ಅರಿತು ಅಳವಡಿಸಿಕೊಳ್ಳುವುದು ಭಾರತೀಯರಿಗೆ ಒಳ್ಳೆಯದು
- ತಿಮ್ಮಣ್ಣ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails