ಕನ್ನಡದ ಪುಸ್ತಕಗಳಿಗೆ ಡಿಮಾಂಡಪ್ಪೋ ಡಿಮಾಂಡು!

ಈ ಬಾರಿಯ ಬೆಂಗ್ಳೂರು-ಪುಸ್ತಕೋತ್ಸವದಲ್ಲಿ ಕನ್ನಡ ಪುಸ್ತಕ ಪ್ರಕಾಶಕರ ಮತ್ತು ಮಾರಾಟಗಾರರ ಸಂಖ್ಯೆ ಸಕ್ಕತ್ ಹೆಚ್ಚಾಗಿದೆ ಅಂತ ಪ್ರಜಾವಾಣಿ ವರದಿ ಮಾಡಿದೆ. ಹೋದ ವರ್ಷ ಶುರುವಾದ ಈ ಪುಸ್ತಕ ಸಂತೇಲಿ ಕನ್ನಡ ಪುಸ್ತಕೋದ್ಯಮಿಗಳಿಗೆ ಬರೀ 15 ಮಳಿಗೆಗಳು ಇದ್ದವು. ಅದೇ ಈ ವರ್ಷ ನೋಡಿ, ಇಡಕ್ಕೆ ನಿರ್ಧರಿಸಿರೋ ಸುಮಾರು 300 ಮಳಿಗೆಗಳಲ್ಲಿ 50 ಮಳಿಗೆ ಕನ್ನಡ ಪುಸ್ತಕೋದ್ಯಮಕ್ಕೇ ನೀಡಲಾಗಿದೆ. ಕರ್ನಾಟಕದಲ್ಲಿ, ಅದೂ ಬೆಂಗ್ಳೂರಲ್ಲಿ ಕನ್ನಡ ಪುಸ್ತಕಗಳಿಗೆ ಬೇಡಿಕೆ ಸಕ್ಕತ್ತಿದೆ, ಮತ್ತೆ ಹೆಚ್ತಾನೂ ಇದೆ ಗುರು!

ಕನ್ನಡಿಗರು ಕನ್ನಡದ ಪುಸ್ತಕಗಳ್ನೇ ಹೆಚ್ಚಾಗಿ ಓದಬೇಕು

ಮನುಷ್ಯ ಪುಸ್ತಕವನ್ನ ಓದೋದು ಗ್ನಾನ ಸಂಪಾದನೆ ಮತ್ತು ಹೊಸ ವಿಷಯಗಳ್ನ ತಿಳ್ಕೊಳೋ ಹಂಬಲ, ಮನರಂಜನೆ ಮತ್ತು ಸುದ್ದಿ-ಸಮಾಚಾರಗಳಿಗಾಗಿ. ಈ ಅವಷ್ಯಕತೆಗಳ್ನ ಸರಿಯಾಗಿ ಪೂರೈಸಕ್ಕಾಗೋದು ಅವನ ಭಾಷೇಲೇ ಅನ್ನೋದು ಯಾವ ಚಿಪಣಿ-ತಂತ್ರಗ್ನಾನವೂ ಅಲ್ಲ! ಮನುಷ್ಯನ ಮಾನಸಿಕ ಹಾಗು ಬೌದ್ಧಿಕ ವ್ಯವಸ್ಥೆಗಳ್ನ ಹತ್ತಿರದಿಂದ ನೋಡಿದ್ರೆ ಒಂದು ಅಂಶ ಸ್ಪಷ್ಟ ಆಗತ್ತೆ. ಅದೇನಪ್ಪಾಂದ್ರೆ ಮನುಷ್ಯ ಓದುವಾಗ, ಮಾತಾಡುವಾಗ, ಒಳಮನಸ್ಸಿನಲ್ಲಿ ಆ ವಿಚಾರಗಳ್ನ ಯೋಚನೆ ಮಾಡೋದು ಅವನ ಸ್ವಂತ ಭಾಷೆಯಲ್ಲೇ. ಇಲ್ಲಿ ಕನ್ನಡವೇ ಆ ಭಾಷೆ. ಕನ್ನಡಿಗನ ಬುದ್ದಿಗೆ ನೇರವಾಗಿ ನಾಟೋದು ಅವನ ಸ್ವಂತ ಭಾಷೇನೇ. ಹೆಚ್ಚು ಕಾಲ ನೆನಪಲ್ಲಿ ಉಳಿಯೋದೂ ಅದು ಅವನ ಭಾಷೇಲಿದ್ರೇನೇ. ಇದು ಮನುಷ್ಯನ ಸಹಜ ಗುಣ ಗುರು.

ಅನುವಾದ, ಅನುವಾದ, ಅನುವಾದ!

ಕನ್ನಡದಲ್ಲಿ ಓದೋದೇ ನಮಗೆ ಒಳ್ಳೇದು ಅಂದಮೇಲೆ ಬೇರೆಬೇರೆ ಭಾಷೆಗಳಲ್ಲಿರೋ ಗ್ನಾನವನ್ನ ನಮ್ಮದಾಗಿಸಿಕೊಳಕ್ಕೆ ಒಂದು ಏರ್ಪಾಡಿರಬೇಕಲ್ಲ? ಅದೇ ಅನುವಾದ. ಬೇರೆ ಭಾಷೆಗಳ ಪುಸ್ತಕಗಳು ಹೇರಳವಾಗಿ ಕನ್ನಡಕ್ಕೆ ಅನುವಾದ ಆಗಬೇಕು ಗುರು! ಇವತ್ತಿನ ದಿನ ಯೂರೋಪಿನ ಭಾಷೆಗಳಲ್ಲಿ ಅದೆಷ್ಟು ಅನುವಾದಗಳಾಗತ್ವೆ ಅಂತ ನೋಡಿದರೆ "ಅಬ್ಬಾ!" ಅನ್ನೋಹಾಗಾಗತ್ತೆ!

ಯೂರೋಪಲ್ಲಿ ಅನುವಾದ ಅನ್ನೋದೇ ಒಂದು ದೊಡ್ಡ ಉದ್ಯಮ. ನೆದರ್ಲ್ಯಾಂಡ್ಸು, ಜರ್ಮನಿ, ಫ್ರಾನ್ಸ್, ಇಸ್ರೇಲ್, ಜಪಾನ್ - ಈ ದೇಶಗಳಲ್ಲಿ ನಿಮಗೆ ಆಯಾ ದೇಶದ ಭಾಷೆಗಳ್ನ ಬಿಟ್ಟು ಬೇರೆ ಭಾಷೆಯ ಪುಸ್ತಕಗಳೇ ಸಿಗಲ್ಲ ಅಂದ್ರೆ ನಂಬ್ತೀರಾ? ನಿಜ ಗುರು! ಯಾಕೆ? ಯಾಕೇಂದ್ರೆ ಔರಿಗೆ ಗೊತ್ತು ತಿಳುವಳಿಕೆಗಾಗಲಿ ಮನರಂಜನೆಗಾಗಲಿ ಅವರ ನುಡಿಯೇ ಸರಿಯಾದ ಸಾಧನ ಅಂತ! ಮುಕ್ತವಾಗಿ ಅಲ್ಲಿಂದಿಲ್ಲೀಗೆ ಇಲ್ಲಿಂದಲ್ಲೀಗೆ ಅನುವಾದಗಳು ನಡೀತಾನೇ ಇರ್ತವೆ ಯೂರೋಪಲ್ಲಿ.

ಭಾಷಾವಾರು ರಾಜ್ಯಗಳ ಒಕ್ಕೂಟವಾಗಿರೋ ಭಾರತದಲ್ಲಿ ಕೂಡ ಅನುವಾದ-ಉದ್ಯಮಕ್ಕೆ ಸಕ್ಕತ್ ಸ್ಕೋಪಿದೆ. ಆದರೂ ಇದನ್ನ ಸಮರ್ಪಕವಾಗಿ ಬಳಸಿಕೊಂಡು ನಾವು ದುಡ್ಡೂ ಮಾಡ್ಕೋತಿಲ್ಲ, ನಮ್ಮ ಜನರ ಗ್ನಾನವೂ ಹೆಚ್ತಿಲ್ಲ! ಆದ್ದರಿಂದ ಕನ್ನಡದಲ್ಲಿ ಇವತ್ತು ಸಿಗದೇ ಇರೋ ಸಾಹಿತ್ಯ ಬೇರೆ ಭಾಷೆಗಳಲ್ಲಿ ಇದ್ದರೆ ಅವುಗಳ್ನ ಹೆಚ್ಚುಹೆಚ್ಚು ಕನ್ನಡಕ್ಕೆ ಅನುವಾದ ಮಾಡಬೇಕು, ಓದಿ ನಾವು ಮುಂದುವರೀಬೇಕು ಗುರು.

6 ಅನಿಸಿಕೆಗಳು:

Rohith B R ಅಂತಾರೆ...

ಸಕ್ಕತ್ತಾಗ್ ಹೇಳಿದೀರ ಗುರು! ರಜ ಹಾಕಾದ್ರು ಈ ಸಂತೆಗೆ ಭೇಟಿ ನೀಡ್ಬೇಕು ಕನ್ನಡದೋರು..

ಅದೂ ಅಲ್ದೆ ಕನ್ನಡ ಪುಸ್ತಕಗಳ್ನ ಓದೋದಕ್ಕೆ ನಮ್ಗೆ ಹೆಮ್ಮೆ ಕೂಡ ಆಗ್ಬೇಕು ಗುರು! ಏನಂತೀರ? ಜಗತ್ತಿನಲ್ಲಿರುವ ಸುಮಾರು 6000 ಭಾಷೆಗಳಲ್ಲಿ ಕೇವಲ 300 ಭಾಷೆಗಳ್ಗೇ ಮಾತ್ರ ತನ್ನದೇಮ್ ಆದ ಲಿಪಿ ಇರೋದು. ಇದ್ರಲ್ಲಿ ಕನ್ನಡ ಕೂಡ ಒಂದು.. ಹಿಂದಿಗೂ ಇಲ್ಲ ಈ ಹೆಗ್ಗಳಿಕೆ! ಇಷ್ಟು ಒಳ್ಳೊಳ್ಳೆ ಗುಣಗಳಿರೋ ಕನ್ನಡ ಭಾಷೆಯಲ್ಲಿ ಬರೋ ಪುಸ್ತಕಾಳ್ನ ಓದೋಕ್ಕೆ ನಮ್ಗೆ ಹೆಮ್ಮೆನೂ ಆಗ್ಬೇಕು..

ಮತ್ತಿನ್ನೊಂದ್ ವಿಷ್ಯ ಏನಂದ್ರೆ ನಮ್ಮ ಮಾರುಕಟ್ಟೆಗಳಲ್ಲಿ ಕನ್ನಡ ಪುಸ್ತಕಗಳ್ನ ಮಾರಕ್ಕಿರೋ ಪುಸ್ತಕಗಳು ಈ ರೀತಿ ಹೆಚ್ಚು ಪುಸ್ತಕಗಳ್ನ ಮಾರಕ್ ಶುರು ಅಚ್ಚ್ಕೊಂಡ್ರೆ ಎಲ್ಲ್ರೂ ಇದೇ ಮಾರಾಟ ಶುರು ಮಾಡ್ಕೊತಾರೆ.. ಮಾರುಕಟ್ಟೇಲಿ ಕನ್ನಡದೋರೇ ಅಂಗ್ಡೀಗಳಲ್ಲಿ ಜಾಸ್ತಿ ಇರ್ತಾರೆ. ಆಗ ಆ ಅಂಗ್ಡಿ ಒಳ್ಗೆ ಹೋದಾಗ ತಮಿಳಲ್ಲಿ ಮಾತಾಡ್ಸಿ ಔಮಾನ ಮಾಡಿದ್ರು ಈ ಅಂಗ್ಡೀಲಿ ಹಿಂದಿ ಮಾತಾಡ್ಸಿ ಔಮಾನ ಮಾಡಿದ್ರು ಎಂಬ ಘಟನೆಗಳು ಕಮ್ಮಿ ಆಗತ್ತೆ ಅಲ್ವ ಗುರು?!

Rohith B R ಅಂತಾರೆ...

ಇದಕ್ಕೇ ಸಹಾಯ-ದನಿಯಾಗಿ ಇರೋಹಾಗೆ ಇತ್ತು ಗುರು ಶನಿವಾರದ ವಿ.ಕ ದ 9ನೇ ಪುಟದಲ್ಲಿ ಮಾರ್ಕೆಟಿಂಗ್ ಕುರಿತ ಒಂದು ಅಮೂಲ್ಯ ಪುಸ್ತಕದ ವಿಶ್ಲೇಷಣೆ.. ಕನ್ನಡದಲ್ಲಿ ಮಾರ್ಕೆಟಿಂಗ್ ಅಂತಹ ವಿಷಯದಲ್ಲೇ ಪುಸ್ತಕಗಳು ಬರ್ತಿದೆ ಅಂದ್ರೆ ಇದು ಸಾಮಾನ್ಯವಾದ ಸನ್ನಿವೇಶ ಅಲ್ಲ ಅಲ್ವ? ಕನ್ನಡದಲ್ಲಿ ನಿಜ್ವಾಗ್ಲೂ ಏನೋ ಹೊಸ ಸುವರ್ಣ ಯುಗ ಆರಂಭವಾಗಲಿದೆ ಅನ್ಸತ್ತೆ.. ಈಗ್ಲೇ ಕನ್ನಡಿಗರು ಕನ್ನಡಾನ ಅಪ್ಪಿಕೊಂಡ್ರೆ ಮುಂದೆ ಸಕ್ಕತ್ ಲಾಭ ಇರತ್ತೆ!!

ಇನ್ನೊಂದು ಸಮಾಚಾರ ಇತ್ತು ಇದೇ ಪತ್ರಿಕೇಲಿ.. ಅನುವಾದಿತ ಕವನ ಸ್ಪರ್ಧೆ.. ಇದು ಇಂಗ್ಲೀಷಿನ ಒಂದಿಷ್ಟು ಕವನಗಳನ್ನು ಕನ್ನಡಕ್ಕೆ ಅನುವಾದ ಮಾಡೋ ಸ್ಪರ್ಧೆ! ನಿಮ್ಮ ಮಾತು ಇವರ ಮಾತು ಸಕ್ಕತ್ ಒಂದೇ ಟೋನಲ್ಲಿದೆ ಗುರು!

Anonymous ಅಂತಾರೆ...

nijavaaglu tumba olle suddi,, kannada prakashana prakashisuttide annabahudu.

IT keshtradalliro saaviraaru jana karnataka-da oLa bhagadinda bandavaru,, avara oorallella innu kannada maathu, oduvudu yella jivantha vaagide,, aa janarella mattashtu kananda pustaka kharidisuvudara mulakha kannada pustaka mudraNakke innashTu scope kodabeku..

Anonymous ಅಂತಾರೆ...

ಮೊನ್ನೆ ನಾನೂ ಈ ಜಾತ್ರೆಗೆ ಹೋಗಿದ್ದೆ. ಒಂದು ಕನ್ನಡ ಪುಸ್ತಕವನ್ನೂ ಕೊಂಡೆ. ಕನ್ನಡ ಪುಸ್ತಕ ಮಳಿಗೆಗಳು ಹೆಚ್ಚಾಗಿದ್ದುದು ಸಂತೋಷದ ವಿಷಯ. ಶ್ರೀಯುತ ಎಸ್.ಎಲ್.ಬಯ್ರಪ್ಪ ನವರೇ ಅಲ್ಲಿನ ಮಳಿಗೆಗಳಲ್ಲಿ ನಿಜವಾದ ಸ್ಟಾರ್. ಬಹಳಷ್ಟು ಮಳಿಗೆಗಳಲ್ಲಿ ಅವರವೇ ಹೆಚ್ಚು ಪುಸ್ತಕಗಳಿದ್ದವು. ಇಂತಹ ಬರಹಗಾರರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಬರಬೇಕು. ಇವರಿಗೆ ಗ್ನಾನಪೀಠ ಪ್ರಶಸ್ತಿ ಇನ್ನೂ ಸಿಗದಿರುವುದು ಸೋಜಿಗದ ಸಂಗತಿ. ಇಂತಹ ಬರಹಗಾರರಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು.

Anonymous ಅಂತಾರೆ...

ನನಗೆ ಒಂದು ಮಾಹಿತಿ ಬೇಕಿದೆ. ಶಿವಕೋಟ್ಯಾಚಾರ್ಯರ ’ವಡ್ಡಾರಾಧನೆ’ ಯ ಸರಳ ಕನ್ನಡ ಅನುವಾದ ಕೃತಿ ಯಾವುದಾದರೂ ಇದೆಯೇ ತಿಳಿಸಿ. ಡಿ.ಎಲ್.ಎನ್ ರವರು ಇದರ ಅರ್ತವನ್ನು ಕುರಿತು ಬರೆದಿದ್ದಾರೆ. ಆದರೆ ಅವರು ಕೇವಲ ಹಳೆಗನ್ನಡ ಪದಗಳ ಅರ್ತವನ್ನು ಬರೆದು ಕೊಂಡು ಹೋಗಿದ್ದಾರೆ.

Anonymous ಅಂತಾರೆ...

ನಾನು ಕಳೆದ ವರ್ಷವೂ ಈ ಪುಸ್ತಕ ಜಾತ್ರೆಗೆ ಹೋಗಿದ್ದೆ, ಈ ವರ್ಷವೂ ಹೋಗಿದ್ದೆ. ಆದರೆ ನನ್ನ ನೆನಪಿನಿಂದ ಕಳೆದ ವರ್ಶ ಕೇವಲ ೧೫ ಮಳಿಗೆಗಳು ಮಾತ್ರ ಕನ್ನಡ ಪುಸ್ತಕೋದ್ಯಮಿಗಳಿಗಿತ್ತು ಅನೋದು ಸುಳ್ಳು ಹಾಗೂ ಈಸಲ ಮಾತ್ರ ಮೂರು ಪಟ್ಟು ಜಾಸ್ತಿಯಾಗಿದೆ ಅನ್ನೋದು ಕೂಡ. ಕಳೆದ ವರ್ಷಕ್ಕಿಂತ ಈ ಬಾರಿ ಸ್ವಲ್ಪ ಕನ್ನಡದ ಮಳಿಗೆಗಳು ಹೆಚ್ಚಿವೆ ನಿಜ.

ಕನ್ನಡಕ್ಕೆ (ನಿಜವಾದ) ಕನ್ನಡಿಗರಿಂದ ಯಾವಾಗಲೂ ಅಪಮಾನವಾಗಿಲ್ಲ - ಅದು ಕೇವಲ ಕನ್ನಡಿಗರಾಗಿದ್ದೂ ಬೇರೆಯವರಾಗಿರುವ ಮಂದಿಯಿಂದಷ್ಟೇ ಅನ್ನೋದು ನನ್ನ ಅಭಿಪ್ರಾಯ. ನಿಜವಾದ ಕನ್ನಡಿಗನಿಗೆ ಕನ್ನಡಕ್ಕೆ ಪೂಜ್ಯತೆಕೊಡು ಅಂತ ಬೇಡಿಕೊಳ್ಳುವ ಅವಶ್ಯಕತೆಯಿಲ್ಲ. ಅದು ಅವನಲ್ಲಿ ಇರುತ್ತೆ. ಹಾಗೆ ಇಲ್ಲದವನಹತ್ರ ಎಷ್ಟುಹೇಳಿದರೂ ಅದು - ಕೋಣನ ಮುಂದೆ ಕಿನ್ನರಿ ನುಡಿಸಿದಂಗೆ. ಜೊತೆಗೆ ಯಾವುದೇ ಪ್ರೀತಿಯನ್ನ ಪ್ರಯತ್ನಪೂರಕವಾಗಿ ಬರಿಸಲಾಗದು ಅಲ್ವೆ?

ಮತ್ತೊಂದು ವಿಚಾರ. ನೀವು ನಿಮ್ಮ ಬರಹದಲ್ಲಿ "ಗ್ನಾನ" ಅಂತ ಬರೆದಿದ್ದೀರ - "ಮನುಷ್ಯ ಪುಸ್ತಕವನ್ನ ಓದೋದು ಗ್ನಾನ ಸಂಪಾದನೆ ಮತ್ತು ..." ಅನ್ನೋ ಸಾಲು. ನನಗೆ ತಿಳಿದ ಮಟ್ಟಿಗೆ ಅದು "ಜ್ಞಾನ"ವೇ ಹೊರತು "ಗ್ನಾನ"ವಲ್ಲ. ಅದು ಕೀಲಿಮಣೆಯಿಂದಾದ ತಪ್ಪು ಎಂದುಭಾವಿಸಿ ತಿಳಿಸುತ್ತಿದ್ದೇನೆ. :)

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails