ಕಾವೇರೀನ ಸಮುದ್ರದ ಪಾಲು ಮಾಡಾಕ ನಮ್ಮ ಕಡಿಯಿಂದ ಕಸಗೊಂಡ್ರನಾ?

ಎರಡು ವರ್ಷದಾಗ ಪುಗಸಟ್ಟಿ ಸಮುದ್ರಕ್ಕ ತಮಿಳುನಾಡಿಂದ ಹೊಂಟಿರೋ ಕಾವೇರಿ ನೀರು 500 ಟಿ.ಎಂ.ಸಿ ಅಂತ 15ನೇ ಅಕ್ಟೋಬರ ತಾರೀಕಿನ ಕನ್ನಡಪ್ರಭದ ವರದಿ ಹೇಳಾಕ್ ಹತ್ತೈತ್ರೀಯಪ್ಪಾ. ವರ್ಷಕ್ಕ ಬರೋಬ್ಬರಿ 250 ಟಿ.ಎಂ.ಸಿ ನೀರು ಉಣಾಕ ಉಡಾಕ ಇಲ್ಲದಾಂಗ ಸಮುದ್ರ ಸೇರಕ್ ಹತ್ತೈತಿ ಅಂದ್ರ ಯಾರಿಗ್ ತಾನ ಹೊಟ್ಟಿ ಉರಿಯಂಗಿಲ್ರೀ?
ಮೊನ್ನಿ ಕಾವೇರಿ ನ್ಯಾಯಮಂಡಲಿ ಮಂದಿ ಕೊಟ್ಟಿರೋ ಕಡೀ ತೀರ್ಪಿನಾಗ ತಮಿಳುನಾಡಿನ ಪಾಲು 419 ಟಿಎಂಸಿ ನೀರಾದರ ನಮ್ ಕರ್ನಾಟಕಕ್ ಸಿಗೋದು 270 ಟಿ.ಎಂ.ಸಿ. ಅಂದರ, ಈ ತಮಿಳುನಾಡು ಮಂದಿ ಸುಖಾಸುಮ್ನೆ ಸಮುದ್ರಕ್ಕ ಸೋರಿಕಿ ಮಾಡ್ತಿರೋದು ಕರ್ನಾಟಕದ ಒಂದು ವರ್ಷದ್ ಬಾಬ್ತು ಆಗಿರೋ 250 ಟಿ.ಎಂ.ಸಿ ಯಷ್ಟು ನೀರನ್ನ ಗುರು!

ಈ ಪರಿ ಚೆಲ್ಲೋ ನೀರು ಉಳೀತಂದ್ರ ನಮ್ಮ ನೀರಿನ ಸಮಸ್ಯೆ ಬಗೆಹರಿದಂಗೇ ಆತಲ್ಲೋ ಗುರು?

ತಮಿಳು ಮಂದಿ ಭಾಳ ನೀರು ಕೇಳಾಕ್ ಹತ್ತಾರ ಗುರು!


ಕಾವೇರಿ ನದಿಯಾಗ ಒಂದು ವರ್ಷದಾಗ ಹರಿಯೋ ನೀರು ಅಜಮಾಸು 740 ಟಿಎಂಸಿ ಐತಿ. ತಮಿಳುನಾಡು ವರ್ಷಕ್ 566 ಟಿಎಂಸಿ ನೀರು ಬೇಕಂತೈತಿ. ತಮಿಳುನಾಡಾಗ್ ಹುಟ್ಟಿ ಕಾವೇರಿಯಾಗ ಕೂಡೋ ನೀರಿನ ಪ್ರಮಾಣ 252 ಟಿಎಂಸಿ ಅಷ್ಟ್ ಐತಿ. ಅಂದ್ರ ತಮಿಳುನಾಡಾಗ್ ಹುಟ್ಟೋ ಅಷ್ಟೂ ನೀರು ಸಮುದ್ರದ ಪಾಲೇ ಆದಂಗ್ ಆತಲ್ರೀಪಾ! ಏನ್ ಅನ್ಯಾಯಾ ಗುರು!

ನೀರು ರಗಡ್ ಬಂದು ನದಿ ತುಂಬಿ ಉಳಕಿ ನೀರು ಸಮುದ್ರಕ್ ಹೋದ್ರ ಏನ್ ತ್ರಾಸು ಅಂತೀರೇನ್ರೀಪಾ? ಹೀಂಗಾ ಪೋಲಾಗೋ ನೀರಿನ ಒಂದೊಂದು ಹನಿನೂ ಸರೀಗ್ ಬಳಸ್ಕೊಂಡ್ರ, ಅಂಥ ಒಂದ್ ಛಲೋ ತೀರ್ಮಾನಕ್ಕ ನಾವ್ ಎರಡೂ ರಾಜ್ಯಗಳ್ ಬಂದ್ವೂ ಅಂದ್ರ ಈ ನೀರು ಹಂಚಿಕಿ ಕಿತ್ತಾಟ ಇರಂಗೇ ಇಲ್ಲಾ ಅನ್ನಿಸ್ತೈತಿ. ಖರೀ ಅಂದ್ರಾ... ಸಮುದ್ರಾ ಸೇರಾಕ್ ಹತ್ತಿರೋ ಈ 250 ಟಿಎಂಸಿ ನೀರೇನು ಸಮುದ್ರದ ದಡದಾಗ್ ಹುಟ್ಟೋದಲ್ಲ. ಕಾವೇರಿ ನದಿ ಕೂಡಾ ನಡನಡಕ್ಕ ಸೇರ್ಕೊಂತಾ, ಹರಕೊಂತಾ ಬರೂದು. ಈ ನೀರನ್ನ ಹಿಡಿದಿಟ್ಟುಕೊಂಡು ನೀರಿಲ್ಲದ ಕಾಲದಾಗ ಬಳಸಿಕೊಂಡ್ರಾ, ನಾವಿಬ್ರೂ ಬಡ್ದಾಡೋದು ತಪ್ಪತೈತಿ ಗುರು!

ಆಷ್ಟು ಕೇಳೋ ಮಂದಿ 340 ಟಿಎಂಸಿ ನೀರು ಚೆಲ್ಲಾಕ ಹತ್ತಾರ!


ತಮಿಳುನಾಡಾಗ ಭೂಮಿ ಒಳಗಿರೋ ನೀರಿನ ಪ್ರಮಾಣ 150 ಟಿಎಂಸಿ, ಕೊಲೆರೂನ್ ಅಣಿಕಟ್ಟಿ ಸೋರಿಕಿ 102 ಟಿಎಂಸಿ, ಟೈಲ್ ಮತ್ತ ರೆಗ್ಯುಲೇಟರ್ ಸೋರಿಕಿ 88 ಟಿಎಂಸಿ, ಅಂದಾಜು ಮಳೀನೀರು 50 ಟಿಎಂಸಿ... ಹೀಂಗ ಖಾಲಿ ಕಳ್ಕೊಳೋ ನೀರಿನ ಪ್ರಮಾಣ 340 ಟಿಎಂಸಿ. ಈ ಪರೀ ನೀರ್ ಸೋರಿಕಿ ಆಗೂದನ್ನ ಖರೇನಾ ತಪ್ಪುಸಿದ್ರ ತಮಿಳುನಾಡು, ಕರ್ನಾಟಕದ ಪ್ರಾಣ ಹಿಂಡಿ ನೀರು ಬಸಿಯೋದು ತಪ್ತೈತಿ. ಹಾಲು ಕೊಡೋ ದನದ್ ಮೊಲಿಯಾಗ ರಕ್ತ ಹಿಂಡೋದ್ ತಪ್ತೈತಿ!

ಎರಡೂ ಕಡೀ ಮಂದಿ ನೀರು ಚೆಲ್ಲೋ ಬದಲು ಕೂಡಿಡೋದ ಪರಿಹಾರ


ನಮ್ ಕರ್ನಾಟಕದಾಗ ಮ್ಯಾಕೀದಾಟು ಅನ್ನೂ ಕಡೀ ಕಟ್ಟೋಣು ಅಂತ ಇರೋ ಅಣಿಕಟ್ಟಿ ಕಟಗೊಂಡ್ರ, ತಮಿಳು ನಾಡು, ಕರ್ನಾಟಕ ಎರಡೂ ಕಡೀ ಕಾವೇರಿ ನದೀ ಹರಿಯೋ ದಾರೀಮಟ ಈಟೀಟೇ ಸಣ್ಸಣ್ಣ ಅಣಿಕಟ್ಟುಗಳನ್ನು ಕಟಗೊಂಡ್ರಾ, ಹಾಂಗ್ ಆ ನೀರನ್ನ ಹಿಡಿದಿಟ್ಟುಕೊಂಡರಾ ಈ ತಲೀನೋವು ಹೋಗಂಗಿಲ್ಲೇನು?

ಈ ನೀರು ಹಂಚಿಕಿ ರಾಜ್ಯ ರಾಜ್ಯಗಳಿಗೆ ಅಂತ್ ಅನ್ನೂ ಬದಲು ತಾಲೂಕವಾರು ಹಂಚಿಕೆ ಮಾಡುದ್ರಾ ಛಲೋ ಅಲ್ಲೇನು? ಆಯಾ ಪ್ರದೇಶದಾಗ ಹುಟ್ಟೋ ನೀರನ್ನ ಅಲ್ಲಲ್ಲೇ ಕೂಡಿಟ್ಟುಕೊಂಡು ಬಳ್ಸೋ ಪದ್ದತಿ ಛಲೋ ಅನ್ನುಸ್ತೈತಿ... ಏನಂತೀ ಗುರೂ?
ತಮಿಳುನಾಡಾಗ ಕಾವೇರಿ ನದಿಗೆ ಇರೋದು ೯೩ ಟಿಎಂಸಿ ನೀರು ಹಿಡ್ದಿಡೋ ಮೆಟ್ಟೂರು ಅಣಿಕಟ್ಟಿ ಒಂದಾ. ಮತ್ ನಮ್ಮ ಕರ್ನಾಟಕದಾಗ್ ಇರೋ ಕೆ.ಆರ್.ಎಸ್ ನಾಗ ಹಿಡುಸೋದು ಅದಕ್ಕಿಂತಲೂ ಕಡಿಮೇನೆ. ಅವೆರಡೂ ತುಂಬಿ ತುಳಕಾಕ್ ಹತ್ತದ್ರಾ ಮ್ಯಾಗಿಂದೆಲ್ಲಾ ಖರೇ ಸಮುದ್ರದ ಪಾಲಾಕ್ಕೈತಿ.

ಕರ್ನಾಟಕ ಸರ್ಕಾರ ಮತ್ತ ತಮಿಳುನಾಡು ಸರ್ಕಾರಗಳು ಮಾತುಕತಿ ಬಾಗ್ಲಾ ಮತ್ ತಗೀಬೇಕು. ಎರಡೂ ಕಡೀ ನೀರಾವರಿ ತಜ್ಞರನ್ನು ಎದ್ರಾಬದ್ರಾ ಕುಂಡ್ರುಸಿ ಮಾತುಕತಿ ಆಡಬೇಕು. ಪರಿಹಾರ ಕಂಡ್ಕೋಬೇಕು. ಇದ್ ಆಗೂಣಿಲ್ಲಾ ಅನ್ನೂದಾದ್ರ, ದಿಲ್ಲಿಯಾಗಿನ ನಮ್ ಕೇಂದ್ರ ಸರ್ಕಾರ, ಎರಡೂ ರಾಜ್ಯಗಳಿಗ ನೀರು ಹಂಚಿಕೀನಾ ವೈಜ್ಞಾನಿಕವಾಗಿ ರೂಪಿತವಾದ ಸೂತ್ರದ ಮೂಲಕ ಮಾಡಬೇಕು. ಅದಕ್ಕೂ ಮೊದಲ, ನಮ್ಮ ಕೇಂದ್ರ ಸರ್ಕಾರ ರಾಜ್ಯ ರಾಜ್ಯಗಳ ನಡೂಕಿನ ನದಿ ನೀರಿನ ತಗಾದಿ ಪರಿಹಾರ ಮಾಡಕ್ಕ ಒಂದ್ "ರಾಷ್ಟ್ರೀಯ ಜಲನೀತಿ"ನ ಹುಟ್ ಹಾಕ್ಬೇಕು. ಏನಂತೀ ಗುರು?

ಕೊನೀ ಹನಿ
ದೇಶ ದೇಶಗಳ ಮಧ್ಯದಾಗೇ, ನದಿ ನೀರು ಹಂಚಿಕಿ ಒಪ್ಪಂದ ಸಾಧ್ಯ ಆಗೋಣಿರೂವಾಗ, ಒಂದೇ ದೇಶದ ಎರಡು ರಾಜ್ಯಗಳ ತಗಾದೀಗೂ ಒಂದ್ ಪರಿಹಾರ ಕಂಡುಕೊಳ್ಳೋದು ತ್ರಾಸ್ ಆಗಂಗಿಲ್ಲಾ ಅನ್ಸತೈತಿ ಗುರು! ನಮ್ಮ ಸರ್ಕಾರಗಳು ತುಸಾ ಮನಸ್ ಮಾಡಬೇಕ್ ಅಷ್ಟೆ.

7 ಅನಿಸಿಕೆಗಳು:

Anonymous ಅಂತಾರೆ...

haudu olleya lekhana. kaleda sumaaru varshagalinda tamma tamma raajakiya jagalagalanne maadikondu raajyada samasyegalannella moolegumpu maadidare namma janapratinidhigalu. anthahudaralli kaaveri vishya yaavaga bage harisuttaro en kathe no.
kedra sarkaaradavarantu karnaatakakke malataayi dhorane anusarisuttale bandiddare. innadaru raajyada bagge raajyada samasyegala bagge gamana harisali.

Anonymous ಅಂತಾರೆ...

adakka helodu namma mandya, mysooru, hasana, kodagu, bengaluru itara jillyaga iro mandi mali neeru ella sersi itkoludu bala shane vishya. avara avara halliyaga avarella keri, katti madkoludu ragad upyoga agtada guru. idakka namma raitarga swalpa buddivantaru anniskondiro nam IT mandi margadarshana kododu bala jaroor annistada - karuNaa

Vijendra ( ವಿಜೇಂದ್ರ ರಾವ್ ) ಅಂತಾರೆ...

che!! yake avrige inta buddi bandideyo....Agatya illdidru sumne hatakke biddu kaaveri neeranna tamma kade elkolta iddare...

Anonymous ಅಂತಾರೆ...

ಸ್ವಾಮೀ,

ಅದು ’ಕೊಲೆರೂನ್’ ಅಣೆಕಟ್ಟು ಅಲ್ಲ, ಕೊಲ್ಲಿಡಮ್ ಅಣೆಕಟ್ಟು.

ನೀವು ವಿಷಯ ಹೇಳಿರುವುದು ಸರಿಯಾಗೇ ಇದೆ- ಆದರೆ ಅದರಲ್ಲಿ ಸಣ್ಣಪುಟ್ಟ ತಪ್ಪು ಇರೋದು ಯಾಕೆಂದು ತೋರಿಸಿದೆ. ಸ್ವಲ್ಪ ತಿದ್ದಿಬಿಡಿ!

-ನೀಲಾಂಜನ

ಬನವಾಸಿ ಬಳಗ ಅಂತಾರೆ...

ನೀಲಾಂಜನ ಅವರೇ,ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.
ಈ ಲಿಂಕ್ ನೋಡಿ - 'http://en.wikipedia.org/wiki/Kaveri_River#Kaveri_in_Tamil_Nadu'. ಕೊಲ್ಲಿಡಮ್ ಅನ್ನು ಕೊಲೆರೂನ್ ಎಂದೂ ಕರೆದಿದ್ದಾರೆ.

ನನ್ನಿ
ಏನ್ ಗುರು

Anonymous ಅಂತಾರೆ...

ಅದೇನಂದ್ರೆ, ಇಂಗ್ಲಿಷರ ಬಾಯಿ ಹೊರಳದೆ, ಮಡಕೇರಿನ Marcara, ಧಾರವಾಡನ Dharwar ಅನ್ನಲಿಲ್ಲ್ವೇ, ಹಾಗೇ ಕೊಲ್ಲಿಡಂ ಅನ್ನೋದನ್ನ Coleroon ಅಂತ ಕೊಂದಿದ್ದಾರೆ ಅವರು ಅಷ್ಟೇ :೦)

-ನೀಲಾಂಜನ

ಬನವಾಸಿ ಬಳಗ ಅಂತಾರೆ...

ಮಾಹಿತಿಗಾಗಿ ಧನ್ಯವಾದಗಳು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails