ನ್ಯಾಯವಾಗಿ ಬದ್ಧತೆ ಜೊತೆ ಯೋಜನೇನೂ ಬೇಕು

ರಾಜ್ಯದ ಎಲ್ಲಾ ಕೆಳನ್ಯಾಯಾಲಯಗಳಲ್ಲಿ (ಕನ್ನಡದ ಅನುಷ್ಠಾನ "ಕೆಳಗೆ" ಆದ್ರೆ ಸಾಕು ಅನ್ನೋ ಬುದ್ಧಿಗೆ ಬಡ್ಕೋಬೇಕು!) "ಆದಷ್ಟೂ" ಕನ್ನಡದಲ್ಲೇ ಕಲಾಪ ನಡಿಸಿ ಅಂತ ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ನಿರ್ದೇಶನ ನೀಡಿದಾರೆ.

ಈ "ಆದಷ್ಟೂ" ಅನ್ನೋದರ ಅರ್ಥವಾದರೂ ಏನು? ಪೂರ್ತಿ ಮಾಡಕ್ಕೆ ಏನು ಅಡ್ಡಿಗೆ ಬಂದಿದೆ? ಈ ಪ್ರಶ್ನೇನ ತೂಗಿ ತೂಗಿ ನೋಡಿದಾಗ ಗೊತ್ತಾಗೋದು ಇಷ್ಟೇ: ಇವರಿಗೆ ಯಾರಿಗೂ ಕನ್ನಡದಲ್ಲಿ ನಿಜವಾಗಲೂ ನ್ಯಾಯಾಲಯಗಳು ಕೆಲಸ ಮಾಡಬೇಕು ಅನ್ನೋ ಗುರಿ ನೆಲೆನಿಂತಿಲ್ಲ; ಉಪಚಾರಕ್ಕೆ ತಾವೂ ಕನ್ನಡಕ್ಕಾಗಿ "ಕೈ" ಎತ್ತುತ್ತಾರೆ, ಅಷ್ಟೆ!

ಕನ್ನಡ ಬರೋ ನ್ಯಾಯಾಧೀಶರು ಕಲಾಪಗಳ್ನ ಮತ್ತು ತೀರ್ಪನ್ನ ಕನ್ನಡದಲ್ಲಿ ನೀಡಬಹುದು ಅನ್ನೋ ಈ ಸುತ್ತೋಲೆ ಯಾಕೋ ಸಿನಿಮಾಗೆ ಹೋಗೋರು ಟಿಕೆಟ್ ತೊಗೊಂಡು ಹೋಗಬಹುದು ಅಂದಂಗಾಯ್ತು! ಅಂದ್ರೆ ಇದು ಒಪ್ಪಿಗೆ ಕೊಟ್ಟಿರೋಹಂಗಿದ್ಯೇ ಹೊರ್ತು ಅಪ್ಪಣೆ ಇದ್ದಂಗಿಲ್ಲ!

ಜನಕ್ಕಾಗಿ ವ್ಯವಸ್ಥೆಯಿರಬೇಕು, ವ್ಯವಸ್ಥೆಗಾಗಿ ಜನ ಅಲ್ಲ!


ಕನ್ನಡ ನಾಡಲ್ಲಿ ತಲತಲಾಂತರದಿಂದ್ಲೂ ನ್ಯಾಯ ಮತ್ತು ತೀರ್ಪುಗಳು ಇಂಗ್ಲಿಷ್ ಭಾಷೇಲೇ ಇರ್ತಿದ್ವಾ? ನಮ್ಮ ನ್ಯಾಯಾಲಯಗಳಲ್ಲಿ ನಮ್ಮದಲ್ಲದ ಭಾಷೇಲಿ ಕಲಾಪ ಮಾಡ್ತೀವಿ, ತೀರ್ಪು ನೀಡ್ತೀವಿ ಅನ್ನೋದು, ರಾಜ್ಯ ಉಚ್ಛನ್ಯಾಯಾಲಯದ ಕಲಾಪ ಇಂಗ್ಲಿಷ್ ಭಾಷೇಲೇ ಇರೋದು ಸರಿ ಅಂದುಕೊಳ್ಳೋದು - ಇವೆಲ್ಲಾ ಜನರಿಂದ ನ್ಯಾಯಾನ ಮತ್ತು ನ್ಯಾಯಾಲಯಾನ ದೂರ ಮಾಡಿದಹಾಗಾಗಲ್ವಾ ಗುರು? ನ್ಯಾಯಾಲಯಗಳು ಜನರಿಗೆ ಅರ್ಥವಾಗೋ ಭಾಷೇಲೇ ಕಲಾಪ ನಡೆಸಬೇಕು, ತೀರ್ಪುಗಳ್ನ ಕೊಡಬೇಕು ಅಂತ ಹೊಸದಾಗಿ ಬುದ್ಧಿವಂತರಿಗೆ ಹೇಳಬೇಕಾಗಿಲ್ಲ.

ಜನರಿಗಾಗಿ ವ್ಯವಸ್ಥೆಗಳು ಇರಬೇಕೇ ಹೊರತು ಇರೋ ವ್ಯವಸ್ಥೆಗಳಿಗಾಗಿ ಜನರಲ್ಲ ಅನ್ನೋದನ್ನ ಮರೀಬಾರದು. ಒಟ್ನಲ್ಲಿ ಈಗಿರೋ ವ್ಯವಸ್ಥೆಯಲ್ಲಿ ಮಾಡಬೇಕಾಗಿರೋದನ್ನ ಮಾಡಕ್ಕಾಗ್ತಿಲ್ಲ ಅನ್ನೋದಕ್ಕಿಂತ ಮಾಡಬೇಕಾಗಿರೋದನ್ನ ಮಾಡಕ್ಕೆ ಎಂಥಾ ವ್ಯವಸ್ಥೆ ಕಟ್ಟಬೇಕು ಅನ್ನೋ ಪ್ರಶ್ನೆ ನಮ್ಮ ಜನಕ್ಕೆ ಯಾವಾಗ ಬರತ್ತೋ! ಮುಟ್ಟಬೇಕಾದ ಗುರಿಗೆ ಬದ್ಧತೆ ಇದ್ದಿದ್ದರೆ ಈ ಕುಂಟುನೆಪಗಳ್ನೆಲ್ಲ ಕೊಡ್ತಿರ್ಲಿಲ್ಲ ಗುರು!

ಆಶಯ-ಬದ್ಧತೆಗಳು ಇದ್ದರೆ ಸಾಲದು, ಯೋಜನೆ ಇರಬೇಕು!

ನ್ಯಾಯಾಲಯಗಳಲ್ಲಿ ಕನ್ನಡದ ಅನುಷ್ಠಾನ ಮಾಡೋದು ನಿಜವಾಗಲೂ ನ್ಯಾಯಾಂಗದ ಆಶಯವೇ ಆಗಿದ್ದರೆ ಅದನ್ನ ಆಗುಮಾಡಿಸೋಕೆ ಹಾಕಿಕೊಂಡಿರೋ ಯೋಜನೆ ಎಲ್ಲಿ? ಆ ಗುರಿ ಮುಟ್ಟೋ ದಾರೀಲಿ ದಾಟಬೇಕಾದ ಮೈಲಿಗಲ್ಲುಗಳು, ಯಾವಾಗ ಯಾವ ಮೈಲಿಗಲ್ಲು ದಾಟಬೇಕು ಅನ್ನೋ ಮಾಹಿತಿಯನ್ನ ಇವರು ಬೆಳಕಿಗೆ ತರಬೇಕು. ಯೋಜನೆ ಇಲ್ಲದೆ ಅದೆಷ್ಟು ಸುತ್ತೋಲೆಗಳ್ನ ಹೊರಡ್ಸುದ್ರೂ ಅದು ಬರೀ ಕಾಟಾಚಾರ ಆಗ್ಬುಡುತ್ತೆ ಗುರು. ಇನ್ನು ನೂರು ವರ್ಷ ಆದ್ರೂ "ಆ ಕೊರತೆ ಇದೆ, ಈ ಕೊರತೆ ಇದೆ, ಅದಿಲ್ಲ, ಇದಿಲ್ಲ, ಮಣ್ಣಿಲ್ಲ ಮಸಿಯಿಲ್ಲ" ಅನ್ನುತ್ಲೇ ಇರ್ಬೇಕಾಗುತ್ತೆ ಅಷ್ಟೆ. ಒಟ್ನಲ್ಲಿ ಆಶಯ ನಿಜವಾಗಿರಬೇಕಾಗಿರೋದು ಒಂದಾದರೆ ಆಶಯದ ಜೊತೆ ಯೋಜನೇನೂ ಇರಬೇಕಾಗಿರೋದು ಇನ್ನೊಂದು. ಯೋಜನೆ ಎಲ್ಲಿ ಸ್ವಾಮಿ ಅಂತ ಕೇಳ್ಮ?

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails