ಅನಿಯಂತ್ರಿತ ವಲಸೆ ಒಕ್ಕೂಟಕ್ಕೇ ಮಾರಕ

ಭಾರತೀಯ ಕಾಂಗ್ರೆಸ್ಸಿನ ಸೋನಿಯಾ ಮ್ಯಾಡಮ್ಮೋರು ಇತ್ತೀಚಿಗೆ ’ಪ್ರಾದೇಶಿಕವಾದ ಚಿಂತನೆ ಸಂಕುಚಿತ ಮನೋಭಾವವಾಗಿದೆ ಮತ್ತು ಅದು ದೇಶದ ಒಗ್ಗಟ್ಟಿಗೆ ಮಾರಕ. ಈ ದೇಶದಲ್ಲಿ ಯಾರು ಎಲ್ಲಿಗೆ ಬೇಕಾದರೂ ಹೋಗಿ ಬದುಕಬಹುದು. ವಲಸೆಯಿಂದ ಭಾರತದ ಒಗ್ಗಟ್ಟು ಹೆಚ್ಚುತ್ತದೆ’ ಎಂದಿದ್ದಾರೆ. ನಿಜವಾಗ್ಲೂ ಅನಿಯಂತ್ರಿತ ವಲಸೆಯಿಂದ ಭಾರತದ ಒಗ್ಗಟ್ಟು ಉಳ್ಯುತಾ ಅಥ್ವಾ ಮುರಿಯುತ್ತಾ ಅಂತ ಮೇಡಮ್ನೋರಿಗೆ ನಮ್ಮೂರ ಕಾಂಗ್ರೆಸ್ನೋರು ತಿಳಿಹೇಳ್ಬೇಕಾಗಿದೆ.

ಭಾಷಾವಾರು ಪ್ರಾಂತ್ಯ ರಚನೆ ಮತ್ತು ಪ್ರಾದೇಶಿಕತೆ

1929ರಲ್ಲಿ ನಡೆದ ಲಾಹೋರಿನ ಕಾಂಗ್ರೆಸ್ ಅಧಿವೇಶನದಲ್ಲೇ ಭಾರತವನ್ನು ಒಂದು ಪರಿಣಾಮಕಾರಿ ಒಕ್ಕೂಟವನ್ನಾಗಿಸಬೇಕಾದರೆ ಎಲ್ಲ ಭಾಷೆ, ಭಾಷಿಕ ಜನಾಂಗ ಮತ್ತು ಭಾಷಾ ಪ್ರದೇಶಗಳಿಗೆ ಸಮಾನವಾದ ಸ್ಥಾನಮಾನ ನೀಡುವ ಬಗ್ಗೆ ಪ್ರಸ್ತಾಪಿಸಲಾಯಿತು. ಹಾಗಾಗೇ ಎಲ್ಲಕ್ಕೂ ಸಮಾನ ಸ್ಥಾನ ನೀಡುವ ಭರವಸೆ ನೀಡಿಯೇ ಭಾರತ ಒಕ್ಕೂಟವನ್ನು ರಚಿಸಲಾಯಿತು. ಅಂದರೆ ಒಂದು ಪ್ರದೇಶದ ಆಡಳಿತ, ವ್ಯವಹಾರ, ವ್ಯವಸ್ಥೆಗಳೆಲ್ಲಾ ಅಲ್ಲಿನ ಜನರ ಭಾಷೆಯಲ್ಲಿಯೇ ನಡೆಯುವುದು ಸರಿಯಾದದ್ದು ಎನ್ನುವ ನಿಲುವು ತಳೆಯಲಾಯಿತು. ಆ ಕಾರಣಕ್ಕಾಗಿಯೇ ಸ್ವತಂತ್ರ ಬಂದು ಭಾರತವು ಒಕ್ಕೂಟ ರಾಷ್ಟ್ರವಾದ ನಂತರ ಭಾಷಾವಾರು ರಾಜ್ಯಗಳನ್ನು ರಚಿಸಲಾಯಿತು. ಪ್ರತಿ ಪ್ರದೇಶದ ಅನನ್ಯತೆಯನ್ನು ಉಳಿಸಿ ಬೆಳೆಸಿ ವೈವಿಧ್ಯತೆಯಲ್ಲಿ ಏಕತೆ ಎಂದೂ ಹೇಳಿಕೊಳ್ಳಲಾಯಿತು.

ವಲಸೆ ಮತ್ತು ಅನನ್ಯತೆ

ಒಂದು ಪ್ರದೇಶಕ್ಕೆ ವಲಸೆ ಬರುವ ಪರಭಾಷಿಕ ತನ್ನ ಜೊತೆ ತನ್ನ ಭಾಷೆ, ಸಂಸ್ಕೃತಿ, ಆಚರಣೆಗಳೆಲ್ಲವನ್ನೂ ಹೊತ್ತು ತರುತ್ತಾನೆ. ಅವುಗಳನ್ನು ತನ್ನ ಮನೆಯ ಒಳಗೆ ಮಾತ್ರಾ ಇಟ್ಟುಕೊಳ್ಳದೆ ತನ್ನ ಸುತ್ತಲಿನ, ತಾನು ವಲಸೆ ಬಂದ ನಾಡಿನ ಸಮಾಜಕ್ಕೂ ಅಂಟಿಸಲು ಹೋದರೆ ಮಾತ್ರಾ ಸಮಸ್ಯೆ ಉಂಟಾದೀತು. ಮುಂಬೈ ಮಹಾನಗರ ಪಾಲಿಕೆ ಆಳ್ವಿಕೆಯ ಆಡಳಿತ ಅಲ್ಲಿಗೆ ವಲಸೆ ಬಂದವರ ಭಾಷೆಯಲ್ಲಿ ಇರಬೇಕು ಎಂದು ಒತ್ತಾಯ ಮಾಡುವ ಸ್ಥಿತಿ ಆಗ ಬರೋದು. ವಲಸಿಗ ಯಾವ ಊರನ್ನೂ ಉದ್ಧಾರ ಮಾಡಲು ವಲಸೆ ಬರೋದಿಲ್ಲ. ಬದಲಾಗಿ ಬೆಳೀತಿರೋ ಊರಲ್ಲಿ ತಾನು ಉದ್ಧಾರ ಆಗೋಕ್ಕಿರೋ ಅವಕಾಶ ಹುಡ್ಕೊಂಡು ತನ್ನ ಬೇಳೆ ಬೇಯುಸ್ಕೊಳಕ್ಕೆ ಬರ್ತಾನೆ. ಹಾಗೆ ಬಂದೋನು ಆ ಪ್ರದೇಶ ಹೊಂದಿರುವ ಭಾಷೆ, ಸಂಸ್ಕೃತಿ, ಆಚರಣೆಗಳ ಅನನ್ಯತೆಗಳಿಗೆ ಮಾರಕವಾಗಿ ನಡೆದುಕೊಳ್ಳುವುದು ತಪ್ಪಲ್ವೇನು?

ವಲಸೆ ಮತ್ತು ಉದ್ಯೋಗ

ಈಗಾಗಲೇ ನಮ್ಮಲ್ಲಿ ಒಂದು ಕೆಲಸಕ್ಕೆ ಬೇಕಾದ ಪರಿಣಿತಿ ಇರೋನು ಇದ್ದಾಗ ಅದೇ ಕೆಲಸಕ್ಕೆ ಒಬ್ಬ ವಲಸೆ ಬರುವುದು ಎಂದರೆ ಆ ಮಣ್ಣಿನ ಮಕ್ಕಳಲ್ಲಿ ಒಬ್ಬನ ಉದ್ಯೋಗ ಅವಕಾಶಕ್ಕೆ ಕಲ್ಲು ಬಿದ್ದಹಾಗಾಗುತ್ತದೆ. ವಲಸೆ ಬಂದ ವ್ಯಕ್ತಿಗಳು ಒಂದು ಸಂಸ್ಥೆಯಲ್ಲಿ ಉನ್ನತ ಸ್ಥಾನ ಪಡೆದರೆ ತಮ್ಮ ನಾಡಿನಿಂದ ಮತ್ತಷ್ಟು ಜನರು ವಲಸೆ ಬರಲು ಪ್ರೇರಣೆ ನೀಡುವ ಮೂಲಕ ಸ್ಥಳೀಯರ ಮತ್ತಷ್ಟು ಉದ್ಯೋಗಾವಕಾಶಗಳನ್ನು ಮಣ್ಣುಪಾಲು ಮಾಡಲು ಕಾರಣರಾಗುತ್ತಾರೆ. ಬೆಂಗಳೂರಿನಲ್ಲಿ ಇಂಥಾ ಸಂಸ್ಥೆ ಆರಂಭವಾಗುತ್ತದೆ, ಇದಕ್ಕೆ ಇಷ್ಟು ಜಮೀನು ವಶ ಮಾಡ್ಕೋತೀವಿ ಅಂತನ್ನೋರು ಆ ಉದ್ಯೋಗಗಳು ಯಾರಿಗೆ ಸಿಗ್ತಿವೆ ಅನ್ನೋದನ್ನು ಕೂಡಾ ಹೇಳ್ಬೇಕಾಗುತ್ತೆ. ನಮ್ಮ ಮನೆ ಮಕ್ಕಳ ಬದುಕನ್ನು ಬೀದಿಪಾಲು ಮಾಡಿ ಯಾರೋ ಕಂಡು ಕೇಳರಿಯದವನಿಗೆ ಕೆಲಸದ ಅವಕಾಶ ಮಾಡಿಕೊಡೋದು ಸರೀನಾ? ನಿಜಕ್ಕೂ ಅನಿಯಂತ್ರಿತ ವಲಸೆಗೆ ಕಡಿವಾಣ ಬೇಕು.

ಪ್ರಾದೇಶಿಕ ಚಿಂತನೆ ಮತ್ತು ಒಗ್ಗಟ್ಟು

ನಾನಾ ಭಾಷಾ ಸಮುದಾಯಗಳು ಒಂದು ಒಕ್ಕೂಟದಲ್ಲಿ ಇರುವಾಗ ಆ ಒಕ್ಕೂಟ ವ್ಯವಸ್ಥೆ ಹೇಗಿರಬೇಕು ಅನ್ನೋದ್ನ ಅರ್ಥ ಮಾಡ್ಕೋಬೇಕಿದೆ. ಒಕ್ಕೂಟದ ಅಂಗವಾದ ಎಲ್ಲ ಪ್ರದೇಶಗಳೂ ಭಾರತದ ಜೊತೆ ಕೊಟ್ಟು ತೆಗೆದುಕೊಳ್ಳೋ ಪರಸ್ಪರ ಲಾಭದ ಸಿದ್ಧಾಂತವೇ ಒಕ್ಕೂಟದ ತಳಹದಿ ಆಗಬೇಕಿದೆ. ಪ್ರತಿ ಪ್ರದೇಶದ ಜನಸಮುದಾಯದ ಏಳಿಗೆಯ ಸ್ವಾತಂತ್ರ ಆ ಪ್ರದೇಶಗಳಿಗೆ ಇರಬೇಕಾಗಿದೆ. ಆಯಾ ಪ್ರದೇಶಗಳ ಜನತೆಯ ಏಳಿಗೆಯ ಜೊತೆಗೆ ತಮ್ಮ ಭಾಷೆ, ಸಂಸ್ಕೃತಿ, ಆಚರಣೆಗಳನ್ನು ಉನ್ನತಿಗೇರಿಸುವ ಹಕ್ಕು ನೀಡಬೇಕಾಗಿದೆ. ಕನ್ನಡಿಗರು ಕರ್ನಾಟಕವನ್ನು, ತಮಿಳರು ತಮಿಳುನಾಡನ್ನೂ, ಪಂಜಾಬಿಗಳು ಪಂಜಾಬನ್ನೂ ಉದ್ಧಾರ ಮಾಡಬೇಕಾಗಿದೆ. ಆ ಮೂಲಕವೇ ಭಾರತ ಬಲಿಷ್ಠವಾಗಬೇಕಾಗಿದೆ.
ಪ್ರಾದೇಶಿಕ ಚಿಂತನೆಯೆಂದರೇ ಪರಭಾಷೆಗಳ ಬಗ್ಗೆ ಅಸಹನೆ, ದ್ವೇಷ ಅಂದುಕೊಳ್ಳುವುದು ಮತ್ತು ಆ ಕಾರಣದಿಂದ ಒಕ್ಕೂಟ ವ್ಯವಸ್ಥೆ ಕುಸಿಯುವುದು ಎನ್ನುವುದು ತಪ್ಪು ಕಲ್ಪನೆಯಾಗಿದೆ. ನಿಜವಾದ ಒಗ್ಗಟ್ಟಿಗೆ ಕಾರಣವಾಗುವುದು ಪ್ರತಿ ಪ್ರದೇಶದ ಅನನ್ಯತೆಯನ್ನು ಕಾಯ್ದುಕೊಳ್ಳುವ ಭರವಸೆ, ಪ್ರತಿ ಪ್ರದೇಶದ ಜನರಿಗೂ ಉದ್ಯೋಗ ಅವಕಾಶದ, ಏಳಿಗೆಯ ಅವಕಾಶ ಒದಗಿಸಿಕೊಡುವುದರಲ್ಲಿದೆಯೇ ಹೊರತು ಒಂದು ಸಮೃದ್ಧ ಪ್ರದೇಶದ ಸ್ವತ್ತನ್ನು ಏಳಿಗೆ ಹೊಂದಿರದ ಪ್ರದೇಶದ ಜನರಿಗೆ ಹಂಚುವುದರಲ್ಲಿ ಅಲ್ಲ. ಬಿಹಾರದಂತಹ ಪ್ರದೇಶಗಳ ಗುಳೆ ಹೋಗುವ ಜನರ ಏಳಿಗೆಗೆ ದಾರಿ, ಅವರನ್ನು ಬೇರೆ ಬೇರೆ ಪ್ರದೇಶಗಳಿಗೆ ವಲಸೆ ಹೋಗಲು ಪ್ರೇರೇಪಿಸುವುದರಲ್ಲಿ ಇಲ್ಲ. ಬದಲಾಗಿ ಅವರ ನೆಲದಲ್ಲೇ ಉದ್ದಿಮೆಗಳ ಉದ್ಯೋಗಗಳ ಅವಕಾಶ ಒದಗಿಸಿಕೊಡುವುದರಲ್ಲಿದೆ. ಏನಂತೀ ಗುರು?

6 ಅನಿಸಿಕೆಗಳು:

Anonymous ಅಂತಾರೆ...

ಆದರೆ...

ನಮ್ಮದು ಪೂರ್ಣ ಒಕ್ಕೂಟ ವ್ಯವಸ್ಥೆ ಅಲ್ಲ....

ನಮಗೆ ಕೇಂದ್ರೀಕೃತ-ಆಡಳಿತಕ್ಕಾಗಿ ಕೇಂದ್ರ-ಸರಕಾರ ಹಾಗೂ ವಿಕೇಂದ್ರೀಕೃತ ಆಡಳಿತಕ್ಕಾಗಿ ರಾಜ್ಯ-ಸರಕಾರಗಳು ಇವೆ.


ಭಾಷಾಧಾರ-ರಾಜ್ಯ-ರಚನೆ ಕೇವಲ, ರಾಜ್ಯ-ರಚನೆಗೊಂದು ವಿಧಾನ. ಭಾಷಾಧಾರ-ರಾಜ್ಯಗಳಿಂದ ಇಷ್ಟೊಂದು ಕ್ಲಿಷ್ಟತೆಗಳು ಸಮಸ್ಯೆಗಳನ್ನು ಎದುರಿಸಬೇಕಾದರೆ, ಭಾಷಾಧಾರಿತ-ರಾಜ್ಯ-ರಜನೆಯ ಬದಲು ಬೇರೆ ವಿಧಾನದಲ್ಲಿ ರಾಜ್ಯ-ರಚನೆಗೆ ಕೇಂದ್ರೆ ಮುಂದಾಗುವುದು ಒಳ್ಳೆಯದು.

ವಲಸೆ ಸಮಸ್ಯೆಯಲ್ಲ..!! ನಿಯಂತ್ರಿಸಬೇಕಾಗೂ ಇಲ್ಲ....

ಸಮಾನತೆ ಮತ್ತು ಸಮಾನ-ಸೌಲಭ್ಯ ಎಲ್ಲರ ಹಕ್ಕು!!

Anonymous ಅಂತಾರೆ...

ಪೂರ್ಣ ಒಕ್ಕೂಟ ವ್ಯವಸ್ಥೆ ಆಗಿಲ್ಲದೆ ಇರೋದೇ ತೊಂದರೆ. ಒಟ್ಟಿಗೆ ಸೇರುವಾಗ ಹಾಗೆ ಆಶ್ವಾಸನೆ ಕೊಟ್ಟು ಈಗ ಕೈ ಕೊಟ್ಟಿದ್ದಾರೆ!

ಭಾಷೆ ಬಿಟ್ಟು ಬೇರೆ ಏನಾದರೂ ಮಾನದಂಡ ಇಟ್ಟುಕೊಂಡು ಹೊಸದಾಗಿ ರಾಜ್ಯಗಳ ವಿಂಗಡಣೆ ಮಾಡುವುದಕ್ಕೆ ಭಾರತ ಸರ್ಕಾರ ಏನಾದರೂ ಹೊರಟರೆ ಪ್ರಪಂಚದ ಈ ಭಾಗದಲ್ಲಿ ಶಾಂತಿ ಉಳಿಯುವುದಿಲ್ಲ!

Anonymous ಅಂತಾರೆ...

ಕೇಂದ್ರ ಸರ್ಕಾರವು ಆಗಲೇ ದ್ವಿತೀಯ ರಾಜ್ಯ-ಪುರಚನಾ-ಆಯೋಗವನ್ನು ರಚಿಸಿದೆ..

ಈ ವರ್ಷ ಆಯಾ ಭಾಷಿಕರ ಗಣತಿಯೂ ನಡೆದಿದೆ.

ಇರುವ ವಸ್ತು ಸ್ಥಿತಿಯಲ್ಲಿ, ಅಂದ್ರೆ ಸಂಪೂರ್ಣ-ಒಕ್ಕೂಟ-ವ್ಯವಸ್ಥೆಅಲ್ಲದ ಸ್ಥಿತಿಯಲ್ಲಿ... ಈ ಯೋಚನೆ, ಯೋಜನೆಯಲ್ಲ ಸುಲಭಸಾಧ್ಯವಲ್ಲ...

ಮೊದಲು ಸಂಪೂರ್ಣ-ಒಕ್ಕೂಟ-ವ್ಯವಸ್ಥೆಯನ್ನು ಸಾಧಿಯಲು ಪ್ರಯತ್ನಿಸಬೇಕು. ಆ ಕಡೆಗೆ ನಮ್ಮ ಜನನಾಯಕರ ಮನವಿದ್ದಂತಿಲ್ಲ... ಮನವಿರುವವರು ಜನನಾಯಕರು, ಚುನಾಯಿತರೂ ಅಲ್ಲ.

ಇಂತೀ ವಂದನೆಗಳೊಂದಿಗೆ ವಿದಾಯ

Rohith B R ಅಂತಾರೆ...

ಮೊದಲನೆಯ anonymous ಅವರೆ..
ವಲಸೆ ಸಮಸ್ಯೆ ಅಲ್ಲ ಅನ್ನುವ ವಿತಂಡಕ್ಕೇ ಇಲ್ಲಿ ಉತ್ತರ ಕೊಡಲಾಗಿರುವುದು. ಅದನ್ನು ವಿರೋಧಿಸಿ ವಲಸೆ ವಿರೋಧವಲ್ಲ ಅನ್ನುವ ಬದಲು, ಅದು ಏಕೆ ಹಾಗೆ, ಏಕೆ ನಿಯಂತ್ರಣವೂ ಅನವಶ್ಯ ಅಂತ ವಿವರಿಸಿ ಚರ್ಚೆಗೆ ಇಳಿಯಿರಿ. ಕೇವಲ ಮಾತು ಆಡಿ, ಹಕ್ಕು ಗಿಕ್ಕು ಅಂತ ಹೇಳಿ ಹೋದರೆ ನಿಮ್ಮ ಮಾತು ಅಪೂರ್ಣವಾದೀತು..

ಮತ್ತಿನ್ನೊಂದು ಮಾತು. ಭಾರತದ ಭೂಪ್ರದೇಶದಲ್ಲಿ ಜನರು ತಾವಿರುವ ಜಾಗಗಳನ್ನು ಬಿಡದೇ, ಜನರಿಗೆ ಒಂದು ಚೂರೂ ಕಷ್ಟವಾಗದೇ ಒಂದು ದೇಶ ಅಂತ ಕಟ್ಟಲು ಆಧಾರ ಭಾಷೆಯೊಂದೇ. ಇನ್ಯಾವ ಆಧಾರದ ಮೇಲೂ ವಿಕೇಂದ್ರೀಕೃತ ವ್ಯವಸ್ಥೆ ಕಟ್ಟಲು ಅಸಾಧ್ಯ. ದೇಶದ ಒಗ್ಗಟ್ಟು ಭಾಷೆಯೆಂಬ ಈ ಒಗ್ಗಟ್ಟಿನಲ್ಲೇ ಇರುವುದು ಎಂಬುದು ಆಗ ಗೊತ್ತಿದ್ದಷ್ಟು ಈಗಲೂ ಗೊತ್ತಾದರೆ ಒಳ್ಳೇದು..

ತಿಳಿಗಣ್ಣ ಅಂತಾರೆ...

ಚನ್ನಾಗಿದೆ ಬರಹ.

Anonymous ಅಂತಾರೆ...

ಸುಮ್ಸುಮ್ನೆ ಸ್ವಾಮಿ...

ನನ್ನ ಅನಿಸಿಕೆ ಅಭಿಪ್ರಾಯ ಹೇಳಿದೇನು, ನಿಮಗೆ ಹಿಡಿಸದಿದ್ದರೆ ಯಾವ ಭಾದೆಯಿಲ್ಲ. ನೀವು ಹಿಡಿಸಲಿಲ್ಲ ಅನ್ನಬಹುದು.

ಆದರೆ ನಾನು ಪ್ರತ್ತಾಪಿಸಿದ ಅಂಶಗಳು 'ವಿತಂಡ’ ಅಂದುದು ಸಕಾರಣವಲ್ಲ. ಬಹುಶಃ ನಿಮಗೆ ಅವು ಪೂರ್ಣತಃ ಅರ್ಥವಾಗಿಲ್ಲ.

ಅಂಶಗಳು
೧) ನಮ್ಮದು ಸಂಪೂರ್ಣ-ಒಕ್ಕೂಟ-ವ್ಯವಸ್ಥೆಯಲ್ಲ. ಆದುದರಿಂದ ’ವಲಸೆ ನಿಯಂತ್ರಣ’, ’ವಲಸೆ ಪತ್ರ/ವಿಸಾ’ ಇಂತಹ ಕಾನೂನುಗಳನ್ನು ಕೇವಲ ರಾಜ್ಯಸರಕಾರಗಳ ಇಚ್ಛೆಯ ಮೇಲೆ ತರಲಾಗದು.

ಅಂತಹ ಕಾನೂನುಗಳಿಗೆ ಕೇಂದ್-ಸರಕಾರರದ ಸಮ್ಮತಿ ಬೇಕೇ ಬೇಕು. ಕೇಂದ್ರ-ಸರಕಾರ ಎಂದೂ ಇಂತಹ ಕಾನೂನುಗಳಿಗೆ ಸಮ್ಮತಿಸಲಾರದು.

೨)ರಾಜ್ಯ-ವಿಂಗಡಣೆಗೆ ಭಾಷೆಯೊಂದು ಪ್ರಬಲ ಆಧಾರ. ಆದರೆ ಕೇಂದ್ರವೂ ಈ ಭಾಷೆಯ ಮೇಲೇ ಇರುವ ಕರ್ನಾಟಕವನ್ನೂ ಮೂರು-ನಾಲ್ಕು ಹೋಳು ಮಾಡಬಹುದು.

ಒಂದೆಡೆ ತುಳು, ಕೊಡವರ ಮಾತಾದರೇ.. ನಮ್ಮ ರಾಜ್ಯದಲ್ಲಿರುವ ೮% ತೆಲುಗು, ೧೩% ಉರ್ದು ಭಾಷಿಕ ಮಂದಿಗೂ ಅವರವರ ರಾಜ್ಯ ಎಂದು ಕೇಂದ್ರ-ಸರಕಾರ ಮಾಡಬಹುದು.

೬೫% ಕನ್ನಡಿಗರಿರುವ ಕರ್ನಾಟಕವನ್ನು ೮೪% ಮಳಯಾಳಿಗಳ ಕೇರಳಕ್ಕೂ, ೭೪% ತಮಿಳರ ತಮಿಳುನಾಡಿಗೂ, ಆಂದ್ರಕ್ಕೂ ಹೋಲಿಸಲಾಗದು. ಆಂದ್ರ

ಇವು ಕೇವಲ ಅಭಿಪ್ರಾಯಗಳು! ನಿಮ್ಮ ಟೀಕೆಯಲ್ಲ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails