’ಗುರುತಿನ ಚೀಟಿ’ ಅನ್ನೋ ವ್ಯವಸ್ಥೆಯ ಕನ್ನಡಿ!

ಇತ್ತೀಚೆಗೆ ಮತದಾರರ ಗುರುತಿನ ಚೀಟಿ ವಿತರಣೇಲಿ ಆಗ್ತಿರೋ ಒಂದು ಯಡವಟ್ಟಿನ ಕಥೆ ಇದು ಗುರು. ಗುರುತು ಚೀಟಿ ಕೊಡ್ತಿದಾರೆ ಅಂತಾ ದಿನವಿಡೀ ಸಾಲಲ್ಲಿ ನಿಂತು, ಬಿಸಿಲಲ್ಲಿ ಬೆಂದು ಬೇಸತ್ತು ಕೊನೆಗೂ ಚೀಟಿ ಸಿಕ್ತಪ್ಪ ಅಂತ ಮನೆಗೆ ತಂದು ನೋಡುದ್ರೆ... ತಕ್ಕಳಪ್ಪ! ತಂದೆ ಹೆಸ್ರು ಕನ್ನಡದಲ್ಲಿ ಒಂದು, ಇಂಗ್ಲಿಷಲ್ಲಿ ಮತ್ತೊಂದು! ಯಾಕ್ರಿ ಸ್ವಾಮಿ ಹಿಂಗ್ ಮಾಡುದ್ರಿ ಅಂತಾ ಕೇಳುದ್ರೆ ಈ ಚೀಟಿ ಮಾಡ್ಕೊಡ್ತಿದ್ದ ಮಹಾನುಭಾವರಿಗೆ ಕನ್ನಡ ಓದಕ್ಕೆ ಬರೆಯಕ್ಕೇ ಬರಲ್ಲ ಅನ್ನೋ ಆಘಾತಕಾರಿ ಅಂಶ ಹೊರಗೆ ಬಿತ್ತು! ಕನ್ನಡ ಓದಕ್ಕೆ ಬರದೆ ಇರೋರು ಕನ್ನಡದಲ್ಲಿ ಹೆಸರನ್ನು ಹ್ಯಾಗಪ್ಪಾ ಟೈಪು ಮಾಡುದ್ರು ಅಂದ್ರೆ ಇಂಗ್ಲಿಷಲ್ಲಿ ಟೈಪ್ ಮಾಡೋದು, ಕನ್ನಡ ಅಕ್ಷರದಲ್ಲಿ ಮೂಡುತ್ತೆ ಅನ್ನೋದೆ... ತಾವು ಮಾಡಿದ್ದು ಅದ್ಲು ಬದ್ಲು ಕಂಚಿ ಕದ್ಲು ಆದ್ರೆ ಏನಪ್ಪ ಮಾಡೋದು ಅನ್ನೋ ಆತಂಕವೂ ಇಲ್ದೆ ತಪ್ಪು ತಪ್ಪಾಗಿ ಮತದಾರರ ಗುರುತಿನ ಚೀಟಿ ಮಾಡಿಕೊಡ್ತಿದ್ರು ಅಂದ್ರೆ ಇದು ನಿಜಕ್ಕೂ ನಮ್ಮ ವ್ಯವಸ್ಥೆಗೆ ಹಿಡಿಯೋ ಕನ್ನಡಿ ಆಗಿದೆ ಗುರು!
ಗುರುತು ಪತ್ರ ತಪ್ಪಿಲ್ಲದೇ ಇರಬೇಕಾದುದ್ರ ಮಹತ್ವ

ಈ ಗುರುತು ಪತ್ರ ಬರೀ ಮತ ಚಲಾವಣೆಗೆ ಮಾತ್ರಾ ಬಳಕೆ ಆಗಲ್ಲ, ಇದನ್ನು ಎಲ್ಲೆಲ್ಲಿ ವಿಳಾಸ ಖಾತ್ರಿಗೆ ದಾಖಲೆ ಬೇಕು ಅಂತಾರೋ ಅಲ್ಲೆಲ್ಲಾ ಬಳುಸ್ಬೋದು. ಅಂದ್ರೆ ಪಾಸ್ ಪೋರ್ಟು, ಡ್ರೈವಿಂಗ್ ಲೈಸೆನ್ಸು... ಎಲ್ಲಾ ಕಡೆ. ಇಂಥಾ ಮಹತ್ವದ ದಾಖಲೆ ಪತ್ರಾನ ವಿತರಣೆ ಮಾಡೋವಾಗ ಸರಿಯಾಗಿ ತಪ್ಪಿಲ್ಲದೇ ಮಾಡದೇ ಹೋದ್ರೆ ಏನೇನೆಲ್ಲಾ ಅನಾಹುತಾ ಆದೀತಲ್ವಾ ಗುರು? ಬದುಕಿದ್ದವ್ರು ಸಾಯಬೌದು, ಇಲ್ದೇ ಇದ್ದೋರು ಹುಟ್ಕೋಬೌದು, ಅನಧಿಕೃತವಾಗಿ ಇಲ್ಲಿರೋರು ತಮ್ಮ ಇರುವನ್ನು ಅಧಿಕೃತ ಮಾಡ್ಕೊಂಡು ಏನುಬೇಕಾದ್ರೂ ಮಾಡ್ಬೌದಲ್ಲಾ ಗುರು? ಇಲ್ಲಿರೋ ಮಾಹಿತಿ ತಪ್ಪು ತಪ್ಪಾಗಿದ್ರೆ ’ಗುರುತಿನ ಚೀಟಿ’ ’ಪ್ರಜಾಪ್ರಭುತ್ವ’ ’ಚುನಾವಣೆ’ ಅನ್ನೋದಕ್ಕೆಲ್ಲಾ ಅರ್ಥವೇ ಇರಲ್ಲ ಅಷ್ಟೆ. ಇದು ಒಂದು ಸಮಸ್ಯೆ ಆದ್ರೆ ಸರಿಯಾದ ಮನುಷ್ಯಂಗೆ ತಪ್ಪು ತಪ್ಪು ಗುರುತು ಚೀಟಿ ಕೊಟ್ಟು ಇಂಥಾ ಚೀಟಿ ತೊಗೊಂಡು ಮತದಾನ ಮಾಡಕ್ಕೆ ಆಗದ ಹಾಗೆ ಆದ್ರೆ ಅವನ ಮೂಲಭೂತ ಹಕ್ಕುನ್ನೇ ಕಿತ್ಕೊಂಡ ಹಾಗಾಗೋದು ಇನ್ನೊಂದು ಸಮಸ್ಯೆ.
ಯಾಕೆ ಹೀಗಾಗುತ್ತೆ?
ಗುರುತು ಚೀಟಿ ನೀಡೋ ಕೆಲಸಾನ ಚುನಾವಣಾ ಆಯೋಗದೋರು ಕೆಲ ಸಂಸ್ಥೆಗಳಿಗೆ ವಹಿಸಿರ್ತಾರೆ. ಇಂಥಾ ಸಂಸ್ಥೆಗಳೋರಿಗೆ ಈ ಕೆಲಸ ಮಾಡಕ್ಕೆ ಇರಬೇಕಾದ ಸಲಕರಣೆ, ಅರ್ಹತೆಗಳು ಇದೆಯೋ ಇಲ್ವೋ ನೋಡಬೇಕಾದ್ರೆ ಅವರಿಗೆ ಕನ್ನಡ ಬರುತ್ತಾ ಅಂತ್ಲೂ ಗಮನಿಸಿರಲ್ಲ, ಕನ್ನಡ ಬರಬೇಕು ಅನ್ನೋ ಕಟ್ಟಳೇನೂ ವಿಧಿಸಿರಲ್ಲ. ಹಾಗೆ ಮಾಡಿದ್ದಿದ್ರೆ ಹೀಗಾಗ್ತಾನೂ ಇರಲಿಲ್ಲ. ಯಾರೋ ಹೊರಗಿನವ್ರಿಗೆ ಈ ಕೆಲ್ಸ ಒಪ್ಪಿಸಿದ್ರ ಪರಿಣಾಮವೇ ಇಂಥಾ ತಪ್ಪುಗಳಿಗೆ ಕಾರಣ! ಕನ್ನಡ ನಾಡಿನಲ್ಲಿ ಗುರುತು ಪತ್ರ ಮಾಡೋ ಕೆಲ್ಸಾನ ತಮಿಳುನಾಡು ಮೂಲದ ಮೈಕ್ರೋಟೆಕ್ ಸಂಸ್ಥೆಗೆ ಯಾಕೆ ಒಪ್ಪಿಸಬೇಕಿತ್ತು? ಇಲ್ಲಿ ಆ ಸಂಸ್ಥೆ, ಈ ಕೆಲಸಕ್ಕೆ ಕನ್ನಡವರನ್ಯಾಕೆ ನೇಮಕ ಮಾಡ್ಕೊಳ್ಳಿಲ್ಲಾ? ಇದೆಲ್ಲಾ ಭಾರತದಲ್ಲಿ ಆಡಳಿತ ವ್ಯವಸ್ಥೆ ತಪ್ಪುಗಳಿರೋ ಗುರುತು ಚೀಟಿಯ ಹಾಗೇ ಇರೋದ್ನ ತೋರುಸ್ತಾ ಇದೆ ಅನ್ನಿಸ್ತಿಲ್ವಾ ಗುರು?
ಸರಿಯಾದ ಚೀಟಿಯ ಜಾಗದಲ್ಲಿ ಹತ್ತು ತಪ್ಪು ತುಂಬಿರೋ ಚೀಟಿ ಮುದ್ರಣ ಮಾಡ್ತಿರೋ ಈ ಕನ್ನಡ ಬಾರದ ಕೆಲ್ಸಗಾರರಿಂದ ಸರ್ಕಾರದ ಮತ್ತು ನಮ್ಮ ಹಣ ಮತ್ತು ಸಮಯ ಎರಡೂ ದಂಡ ಆಗ್ತಿದೆ! ಚುನಾವಣೆ ಮುಗಿದೋದ್ರು ನಮ್ಮ ಹತ್ರ ಗುರುತು ಚೀಟಿ ಮಾತ್ರ ಇರಲ್ಲ. ನಮ್ಮ ಮತದ ಹಕ್ಕೂ ಕೈ ತಪ್ಪೋಗತ್ತೆ! ನಮಗೆ ಬೇಕಾದೋರು ಆಯ್ಕೆಯಾಗದೆ ಇರಕ್ಕೆ ಇದು ನೆರವಾಗೋಗತ್ತೆ! ಕನ್ನಡಿಗರಿಗೆ ಸಿಗಬೇಕಾಗಿದ್ದ, ಸಹಜವಾಗಿಯೇ ಕನ್ನಡಿಗರದ್ದಾದ ಕೆಲಸವೂ ಖೋತಾ!
ನಾಳೆ ಹೀಗೂ ಆಗಬಹುದಲ್ವಾ?
ಒಂದು ಸಣ್ಣ ಚೀಟಿಯ ಕೆಲ್ಸಕ್ಕೂ ಪರಭಾಷಿಕರನ್ನು ಕರೆತಂದು ಚುನಾವಣಾ ಆಯೋಗ ಕನ್ನಡಿಗರಿಗೆ ಸಿಗಬಹುದಾದ ಈ ಉದ್ಯೋಗವನ್ನು ಕಿತ್ತುಕೊಂಡಿದ್ದರ ಜೊತೆಗೆ ಪ್ರಜಾಪ್ರಭುತ್ವವನ್ನು ಜನರಿಂದ ದೂರ ಮಾಡ್ತಿದೆ. ಸರಳವಾದ ಒಂದೊಳ್ಳೆ ವ್ಯವಸ್ಥೆ ಕಲ್ಪಿಸೋ ಬದಲು ಇಂತಹ ಹುನ್ನಾರಗಳ ಫಲವಾಗಿ ಮುಂದೊಂದು ದಿನ "ಈ ಗುರುತು ಪತ್ರ ಕನ್ನಡದಲ್ಲಿ ಇರೋದ್ರಿಂದಲೇ ಸಮಸ್ಯೆ-ಬೇರೆ ಭಾಷೆಯೋರು ಇದನ್ನು ತಯಾರಿಸಕ್ಕೆ ಆಗಲ್ಲ-ಭಾರತದ ಆಡಳಿತ ಭಾಷೆ ಹಿಂದಿ, ಹಾಗಾಗಿ ಹಿಂದೀ ಮತ್ತು ಇಂಗ್ಲಿಷಲ್ಲಿ ಮಾತ್ರಾ ಗುರುತು ಚೀಟಿ ಇರಬೇಕು-ಇದನ್ನು ತಯಾರಿಸೋರು ಕಡ್ಡಾಯವಾಗಿ ಹಿಂದೀ ಕಲೀಲಿ-ಹೇಗೂ ಹಿಂದೀನ ಶಾಲಾ ಹಂತದಿಂದಲೇ ಹೇಳಿಕೊಡ್ತೀವಲ್ಲಾ" ಅಂತಾರೇನೋ.
ಒಂದು ಸರಿಯಾದ ಚುನಾವಣಾ ಪ್ರಕ್ರಿಯೇಲಿ ಪ್ರತಿಯೊಂದು ಹಂತದ ಕೆಲ್ಸದಲ್ಲೂ ಪ್ರಾದೇಶಿಕ ಭಾಷಾ ಪ್ರಯೋಗ ಮುಂದಿರಬೇಕು. ಗುರುತಿನ ಚೀಟಿಯೇ ಇರಲಿ, ಮತದಾನದ ಜಾಹಿರಾತುಗಳೇ ಇರಲಿ, ಪಕ್ಷಗಳ ಪ್ರಣಾಳಿಕೆ ಅಥ್ವಾ ಇತರ ಮುದ್ರಣಗಳೇ ಇರಲಿ, ಚುನಾವಣಾ ಆಯೋಗದ ನೀತಿ ನಿಯಮಗಳೇ ಇರಲಿ, ಮತಗಟ್ಟೆಗಳಲ್ಲಿನ ನಿರ್ದೇಶನಗಳಿರಲಿ, ಮತ ಚೀಟಿ ಅಥವಾ ಯಂತ್ರವೇ ಇರಲಿ... ಎಲ್ಲದ್ರಲ್ಲೂ ಕನ್ನಡವೇ ಇರಬೇಕು. ಇಲ್ದೇ ಹೋದಲ್ಲಿ ಆ ಚುನಾವಣೆ ಪರಿಣಾಮಕಾರಿಯಾಗಿ ನಡೆದೀತಾ ಅನ್ನೋ ಅನುಮಾನ ತರೋದು ಸತ್ಯಾ ಗುರು!

1 ಅನಿಸಿಕೆ:

Amarnath Shivashankar ಅಂತಾರೆ...

innondu shocking vishya andre, valasigarigu mata haakuva hakku ide annodu..namma office nalli bere oorgalinda bandiro ellarunu hogi mata chalaayisiddare..ondu vaLe raajakeeya pakshagalige idara bagge chintane haridare, kannadEtara abhyarthigaLnu nilsi alpasankhyaatara manavolistaare....konege kannadigara mata bank ge lagge kooda haaktaare..valase kaayide sariyilla nammalli..valasigarige mata chalaayisuva hakku kodabaardu

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails