ಕಲಿಕಾ ಮಾಧ್ಯಮ ಮತ್ತು ಏಳಿಗೆ!

ಕರ್ನಾಟಕದಲ್ಲಿ ಅನುದಾನರಹಿತ ಖಾಸಗಿ ಶಾಲೆಗಳು ೧ರಿಂದ ೪ನೇ ತರಗತಿಯ ವರೆಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಬೇಕಾಗಿಲ್ಲ, ಬೇಕಾದ್ರೆ ಇಂಗ್ಲೀಷಲ್ಲಿ ಕೊಡಬಹುದು ಅಂತ ನಮ್ಮದೇ ಮುಖ್ಯ ನ್ಯಾಯಾಲಯ ತೀರ್ಪು ಕೊಟ್ಟಿದೆ.
ಈ ಸುದ್ದಿ ಹೊರಕ್ ಬರ್ತಿದ್ದಂಗೇ ಇಂಗ್ಲೀಷ್ ಮಾಧ್ಯಮಗಳಿಗೆ ಏನೋ ದೊಡ್ಡ ಹಬ್ಬದ ಊಟ ಬಡಿಸಿದಂಗಾಗಿದೆ ಗುರು! ಅವುಗಳ ಪ್ರಕಾರ ಈ ತೀರ್ಪಿಂದ ಜಾಗತೀಕರಣದ ರಣರಂಗದಲ್ಲಿ ಸಾರ್ವಭೌಮತ್ವ ಪಡ್ಕೊಳಕ್ಕೆ ನಮಗೆ ಇನ್ನು ಒಂದೇ ಗೇಣು ದೂರ ಉಳ್ದಿರೋದು! ಆದ್ರೆ ನಿಜವಾದ ಸಂಗತಿ ಏನಪ್ಪಾ ಅಂದ್ರೆ ಈ ಮಾಧ್ಯಮಗಳಿಗಾದರೂ ಆಗಲಿ, ಆ ಶಾಲಾ ಮಾಲೀಕರಿಗಾದರೂ ಆಗಲಿ ನಾಡಿನ ಏಳಿಗೆ ಅನ್ನೋದು ಬೇಕಾಗೇ ಇಲ್ಲ ಅನ್ನೋದನ್ನ ಮಾತ್ರ ಇದು ತೋರುಸ್ತಿರೋದು. ಯಾಕೆ ಅಂತೀರಾ?

ಶಿಕ್ಷಣ ತಜ್ಞನ ಪೋಜು ಕೊಡೋ ವ್ಯಾಪಾರಿಗಳು!

ಯಾಕೇಂದ್ರೆ ತಾಯ್ನುಡಿಯಲ್ಲೇ ಮಕ್ಕಳಿಗೆ ಕಲಿಕೆ ಅತ್ಯಂತ ಪರಿಣಾಮಕಾರಿಯಾಗಿ ಕೊಡಕ್ಕಾಗೋದು ಅಂತ ಬೀದೀಲ್ ಹೋಗೋ ವಿಜ್ಞಾನಿಗಳೆಲ್ಲಾ ಹೇಳ್ತಿದಾರೆ. ಎರಡಕ್ಕೆ ಎರಡು ಕೂಡುದ್ರೆ ನಾಲ್ಕು ಅಂತ ಇವ್ರಿಗೆ ತಿರ್ಗಾ ಏನಾದ್ರೂ ಹೇಳ್ಕೊಡ್ಬೇಕಾ? ಇಲ್ಲ. ಇವ್ರುಗೂ ಗೊತ್ತಿದೆ ತಾಯ್ನುಡಿಯಲ್ಲಿ ಕಲಿಸಿದರೇ ಕಲಿಕೆ ಚೆನ್ನಾಗಿ ಆಗೋದು ಅಂತ. ಆದ್ರೆ ಕಲಿಕೆ ಆಗೋದಲ್ಲವಲ್ಲ ಇವ್ರಿಗೆ ಬೇಕಾಗಿರೋದು... ಇವ್ರುಗೆ ಬೇಕಾಗಿರೋದು ಬರೀ ತಮ್ಮ ಜೋಬು ತುಂಬಿಸಿಕೊಳೋದು, ಅಷ್ಟೆ. ಅದಕ್ಕೆ ನಾಡು ನಾಯಿ ಪಾಲಾದ್ರೇನು? ಮಕ್ಳು ಅನ್ನದ್ ಬದ್ಲು ಸಗಣಿ ತಿಂದ್ರೇನು? ತಮ್ಮ ಜೋಬು ತುಂಬುದ್ರೆ ಆಯ್ತು, ಅಷ್ಟೆ. ಈ "ಶಿಕ್ಷಣ ತಜ್ಞರ" ಉದ್ದೇಶ ಇಷ್ಟೇ: ಇಂಗ್ಲೀಷೇ ಇವತ್ತಿನ ದಿನ ದೇವ್ರು ಅನ್ನೋ ಸುಳ್ಳು ಬೊಗಳಿ ಪೋಷಕರ್ನ ಮರುಳು ಮಾಡಿ ತಮ್ಮ ವ್ಯಾಪಾರ ಹೆಚ್ಚುಸ್ಕೊಳೋದು.

ಇಂಗ್ಲಿಷ್ ಮಾಧ್ಯಮದೋರ್ ಬೆಂಬಲ ಯಾಕೆ?

ಇನ್ನು ಇಂಗ್ಲೀಷ್ ಮಾಧ್ಯಮಗಳಿಗೆ ಈ ಮಕ್ಕಳೇ ತಾನೆ ಮುಂದೆ ಮಾರುಕಟ್ಟೆ? ಮಕ್ಕಳು ಕನ್ನಡದಿಂದ ದೂರ ಹೋದಷ್ಟೂ ಇಂಗ್ಲೀಷ್ ಮಾಧ್ಯಮಗಳಿಗೆ ಸುಗ್ಗಿ! ಅದಕ್ಕೇ ಇವರಿಬ್ಬರೂ ಸೇರಿ ಮಾಡಿರೋ ಹೀನವಾದ ಕೆಲ್ಸ ಇದು. ಇನ್ನು ಈ ತೀರ್ಪು ಸಿಕ್ಕಮೇಲೆ ಜಾಗತೀಕರಣದ ಮೃಷ್ಟಾನ್ನ ತಿನ್ನಕ್ಕೆ "ಗೋವಿಂದ" ಅನ್ನೋದು ಒಂದು ಬಾಕಿ ಅಂತ ಅನ್ಕೊಂಡಿರೋ ಈ ಪೆದ್ದಮುಂಡೇವಕ್ಕೆ ತಲೇಲಿ ಜೇಡಿಮಣ್ಣೇ ಇರೋದು. ಇವ್ರು ಇಡೀ ಕರ್ನಾಟಕವನ್ನ ಒಂದು ಕಾಲ್-ಸೆಂಟರ್ ಆಗಿಸಕ್ಕೆ ಹೊರಟಿರೋದನ್ನ ನೋಡಿದರೆ ಇವರಿಗೆ ಎಂಜಲೇ ಮೃಷ್ಟಾನ್ನ ಆಗೋಗಿದ್ಯೋ ಏನೋ ಅನ್ನಿಸುತ್ತೆ! ನಿಜವಾದ ಬುದ್ಧಿವಂತರಿಗೆ ಜಾಗತೀಕರಣದ ಮೃಷ್ಟಾನ್ನ ತಿನ್ನಬೇಕಾದರೆ ಬೇಕಾಗಿರೋದು ಇಂಗ್ಲೀಷಲ್ಲ, ನಿಜವಾದ ಜ್ಞಾನ-ವಿಜ್ಞಾನಗಳ ಅರಿವು ಅನ್ನೋದು ಗೊತ್ತು. ಜಾಗತೀಕರಣದ ಲಾಭ ಪಡಿಯಕ್ಕೆ ನಮಗೆ ಬೇಕಾಗಿರೋದು ಡಸ್-ಪುಸ್ ಅಂತ ಇಂಗ್ಲೀಷಲ್ಲಿ ಫೋನ್ ಉತ್ತರಿಸೋರಲ್ಲ, ನಿಜವಾಗಿ ಇಡೀ ನಾಡಿನ ಪ್ರತಿಭೆಯನ್ನೆಲ್ಲ ಸದ್ಬಳಕೆ ಮಾಡಿಕೊಳ್ಳಬಲ್ಲ ಒಂದು ಶಿಕ್ಷಣ ವ್ಯವಸ್ಥೆ. ಆ ಶಿಕ್ಷಣ ವ್ಯವಸ್ಥೆ ಕನ್ನಡದ್ದೇ ಆಗಿರಬೇಕು ಅನ್ನೋದ್ರಲ್ಲಿ ಎರಡು ಮಾತಿಲ್ಲ.
ಕನ್ನಡದ ಚಿಂತಕರು ಕೈಕಟ್ಟಿ ಕೂರಬಾರದು!

ಇನ್ನು ಕನ್ನಡ ಮಾಧ್ಯಮಗಳು ಮತ್ತೆ ಕನ್ನಡದ "ಚಿಂತಕ"ರೋ - ಈ ತೀರ್ಪು ಕನ್ನಡಕ್ಕೆ ಮರಣಶಾಸನ ಅಂತ ಕರ್ಕೊಂಡು ಕಣ್ಣೀರು ಸುರುಸ್ತಿದಾರೇ ಹೊರತು ಇನ್ನೇನೂ ಮಾಡಕ್ಕಾಗಲ್ಲ ಅನ್ನೋಹಂಗೆ ಕೈಕಟ್ಟಿ ಕೂತ್ಕೊಂಡಿದಾರೆ! ಕನ್ನಡ ಉಳಿಯಕ್ಕಾಗೋದು ಸರ್ಕಾರ ಒತ್ತಡ ತರೋದ್ರಿಂದ ಮಾತ್ರ ಅಂತ ಅನ್ಕೊಂಡಿರೋ ಇವರ ಅಸಹಾಯಕತೆಗೆ ಬಡ್ಕೋಬೇಕು! ಇವರ ಈ ಚಿಂತನೆಯೇ ಸರಿಯಿಲ್ಲ. ಕನಸು ಕಾಣೋ ಯೋಗ್ತೇನೂ ಇಲ್ಲ ಇವ್ರಿಗೆ. ಹೀಗೆ ಹೇಡಿಗಳಂಗೆ ಕಣ್ಣೀರು ಸುರ್ಸೋ ಬದ್ಲು ಕನ್ನಡಾನ ಶಿಕ್ಷಣದ ಎಲ್ಲಾ ಕ್ಷೇತ್ರಗಳಲ್ಲೂ ಮತ್ತು ಎಲ್ಲಾ ಮಟ್ಟಗಳಲ್ಲೂ ಅನುಷ್ಠಾನ ಮಾಡೋ ಸಂಸ್ಥೆಗಳ್ನ ಹುಟ್ಟಾಕೋ ಪ್ರಯತ್ನ ಮಾಡ್ಬೇಕು, ಅದಕ್ಕೆ ಬೇಕಾದ ತರಬೇತಿಗಳ್ನ ಕೊಡಿಸಬೇಕು ಗುರು! ಇಸ್ರೇಲು ಜಪಾನು ಚೈನಾಗಳು ಮಾಡಿದಮೇಲೆ ಕರ್ನಾಟಕದ ಕೈಯಲ್ಲಿ ಇದು ಆಗಲ್ಲ ಅಂತ ಯಾಕ್ ಅನ್ಕೋಬೇಕು? ಇಸ್ರೇಲಲ್ಲಿ ಟೆಕ್ನಿಯಾನ್ ಅಂತ ಒಂದು ವಿಶ್ವವಿದ್ಯಾಲಯ ಇದೆ. ಅದರ ಅದ್ಭುತವಾದ ಇತಿಹಾಸ ಏನಪ್ಪಾ ಅಂದ್ರೆ - ಹೊಸ ಹೀಬ್ರೂ ಭಾಷೆ ಇನ್ನೂ ಎಳವೆಯಲ್ಲಿ - ಅಂದ್ರೆ ದಿನಬಳಕೆಯ ಪದಗಳೂ ಅದರಲ್ಲಿ ಇರದಿದ್ದಾಗ - ಇಸ್ರೇಲಿಗಳು ತಮ್ಮ ಭಾಷೆ ಬಿಟ್ಟುಕೊಡದೆ ಟೆಕ್ನಿಯಾನ್ ನಲ್ಲಿ ಹೀಬ್ರೂ ಮಾಧ್ಯಮದಲ್ಲೇ ಶಿಕ್ಷಣ ಕೊಡಬೇಕು ಅಂತ ಗಟ್ಟಿಯಾಗಿ ಕೂತ್ರು ಗುರು! ಎಷ್ಟು ಸ್ವಾಭಿಮಾನ, ಎಷ್ಟು ಮಾಡೇ ತೀರ್ತೀವಿ ಅನ್ನೋ ಭರವಸೆ! ಇವತ್ತಿನ ದಿನ ಅದೇ ಟೆಕ್ನಿಯಾನ್ ಪ್ರಪಂಚದಲ್ಲಿ ಮುಂಚೂಣಿಯಲ್ಲಿರೋ ತಾಂತ್ರಿಕ ವಿಶ್ವವಿದ್ಯಾಲಯ; ಅದರಲ್ಲಿ ಇವತ್ತಿಗೂ ಹೀಬ್ರೂನಲ್ಲಿ ಜನ ಪಿ.ಎಚ್.ಡಿ. ಮಾಡ್ತಾರೆ ಅಂದ್ರೆ ನಮ್ಮ ಕನ್ನಡಿಗರಿಗೆ ನಂಬಕ್ಕೇ ಆಗಲ್ಲ! ಅವತ್ತು ಹೊಸ ಹೀಬ್ರೂ ಯಾವ ಹೀನಾಯಮಾನ ಸ್ಥಿತಿಯಲ್ಲಿತ್ತೋ ಆ ಸ್ಥಿತಿಯಲ್ಲೇನು ಕನ್ನಡ ಇಲ್ಲ. ಆದ್ರೆ ನಮ್ಮ ಚಿಂತಕರಿಗೆ / ಆಳೋರಿಗೆ ದಿಟ್ಟತನ ಕಡಿಮೆಯಾಗಿರೋದ್ರಿಂದ ಇವತ್ತಿನ ದಿನ ಕನ್ನಡ ಮಾಧ್ಯಮ ಶಿಕ್ಷಣ ಅಂದ್ರೆ ಅದು ಯಾರ್ಗೂ ಬೇಡ್ದೆ ಇರೋದು ಅಂತ ಕನ್ನಡಿಗರು ಅನ್ಕೊಂಡಿರೋದು. ಈ ಒಂದು ಕೀಳರಿಮೆ ನಮ್ನ ಕತ್ತಲೆಯಿಂದ ಕಗ್ಗತ್ತಲೆಗೆ ಕರ್ಕೊಂಡ್ ಹೋಗ್ತಿದೆ, ನಾವು ಸತ್ತ ಹೆಣಗಳಂಗೆ ಹೋಗ್ತಿದೀವಿ, ಅಷ್ಟೆ.
ಸರ್ಕಾರಕ್ಕೆ ದೂರದೃಷ್ಟಿ ಇರ್ಬೇಕು

ಇವತ್ತಿನ ಕೂಳು ಗಿಟ್ಟಿಸಿಕೊಳಕ್ಕೆ ಹುರುಳಿಲ್ಲದ ತತ್ವವಾದ ಸಾರ್ಕೊಂಡು "ಇಂಗ್ಲೀಷ್ ಮಾಧ್ಯಮ! ಇಂಗ್ಲೀಷ್ ಮಾಧ್ಯಮ" ಅಂತ ಬಡ್ಕೋತಿರೋ ಚಿಲ್ಲರೆ ವ್ಯಾಪಾರಿಗಳಿಗೆ ದೂರದೃಷ್ಟಿಯಿಲ್ಲ ಅಂದ್ರೆ ಹಾಳಾಗೋಗ್ಲಿ, ಆದ್ರೆ ಸರ್ಕಾರಕ್ಕಾದರೂ ಭವಿಷ್ಯದ ಬಗ್ಗೆ ಕಾಳಜಿ ಇರಬೇಡವೆ? ನಮ್ಮ ಸರ್ಕಾರಕ್ಕೂ ಕನ್ನಡ ಮಾಧ್ಯಮ ಅಂದ್ರೆ ಬರೀ ಹಳ್ಳೀ ಹೈಕ್ಳಿಗೆ ಅನ್ನಿಸಿದೆಯಲ್ಲ ಇದಕ್ಕೆ ಏನು ಬಡ್ಕೋಬೇಕು? ನಾಡಿನ ಮಕ್ಕಳೆಲ್ಲ ನಿಧಾನವಾಗಿ ಕನ್ನಡ ಕಡೆಗಣಿಸ್ತಾ ಇರೋದನ್ನ ನೋಡ್ಕೊಂಡು ಕೂತಿರೋ ನಮ್ಮ ಸರ್ಕಾರಕ್ಕೆ ಇದರಿಂದ ನಾಡಿನ ವಿನಾಶ ದಿನೇ ದಿನೇ ಆಗ್ತಿರೋದು ಅರ್ಥ ಆಗ್ತಿಲ್ಲವಲ್ಲ ಗುರು?! ಸರ್ಕಾರಾನೂ ಆ ಜುಜುಬಿ ವ್ಯಾಪಾರಿಗಳ ಥರ ಯೋಚ್ನೆ ಮಾಡೋದ್ನ ಬಿಟ್ಟು ಕನ್ನಡದಲ್ಲಿ ಉನ್ನತಶಿಕ್ಷಣ ದೊರಕಿಸಿಕೊಡೋ ದೂರಗಾಮಿ ಯೋಜನೆಗಳಿಗೆ ಕೈ ಹಾಕಬೇಕು, ಹಣ ಹೂಡಬೇಕು. ಸರ್ಕಾರವಾದರೂ ಇವತ್ತಿನ ಕೂಳಿನ ಯೋಚ್ನೆ ಬಿಟ್ಟು (ಇದ್ಯಲ್ಲ, ಇನ್ನೆಷ್ಟು ಬೇಕು?) ದೊಡ್ಡ ಕೆಲಸಕ್ಕೆ ಕೈ ಹಾಕಬೇಕು ಗುರು!

ಕನ್ನಡಿಗನ ಉದ್ಧಾರ ಕನ್ನಡದಿಂದ್ಲೇ ಸಾಧ್ಯ ಅಂತ ಅರ್ಥ ಮಾಡ್ಕೊಂಡಿರೋ ಮುತ್ಸದ್ದಿಗಳು ಎಲ್ಲ ಎಲ್ಲೀಗ್ ಹೋದ್ರು? ಕನ್ನಡದ ಟೆಕ್ನಿಯಾನ್ ಗಳ್ನ ಹುಟ್ಟಾಕ್ತೀನಿ ಅನ್ನೋ ಗುಂಡಿಗೆಯ ಕನ್ನಡಿಗರು ಎಲ್ಲ ಎಲ್ಲೀಗ್ ಹೋದ್ರು? ಎಲ್ಲಾ ಸತ್ತು ಹೆಣಗಳಾಗಿದಾರೋ ಹೇಗೆ? ಅಥವಾ ಎಲ್ಲಾ ತಮ್ಮ ಆತ್ಮಗಳ್ನ ಮಾರ್ಕೊಂಡಿದಾರೋ ಹೇಗೆ?

3 ಅನಿಸಿಕೆಗಳು:

Anonymous ಅಂತಾರೆ...

ನಮ್ಮೌರಿಗೆ "ನಮ್ಮಸ್ಥಿಕೆ" ಭಾವನೆ, ಸ್ವಾಭಿಮಾನ ಎಲ್ಲ ಕೊಂಚ ಕಡಿಮೆ ಕಣ್ರೀ. ಏನ್ ಮಾಡಕ್ ಆಗತ್ತೆ. ಇಂಗ್ಲೀಷ್ ಮಾಧ್ಯಮದ ಶಾಲೆಗಳಲ್ಲಿ ಕನ್ನಡ ಮಾತಾಡಿದ್ರೆ ಮಕ್ಕಳಿಗೆ ದಂಡ ಹಾಕ್ತಾರೆ ಅಂಥ ನಮಗೆಲ್ಲ ಚೆನ್ನಾಗಿ ಗೊತ್ತು. ಸ್ವಲ್ಪ ಯೋಚನೆ ಮಾಡಿ. ಕರ್ನಾಟಕದಲ್ಲೇ ಇದ್ದು, ಕನ್ನಡವನ್ನ ಮಾತಾಡಿದ್ರೆ ದಂಡ ಹಾಕ್ತಾರೆ ಅಂದ್ರೆ ನಮ್ಮ ಪರಿಸ್ಥಿತಿ ಎಷ್ಟು ಹೀನ ಅಂತ. ನಾವು ಇನ್ನು ಇಂಗ್ಲಿಷ್ ಆಡಳಿತದ ಕೆಳಗೆ ಇದ್ದಿವಿ ಅನ್ನೋ ಭಾವನೆ ಬರತ್ತೆ.

ಇನ್ನು ಸರ್ಕಾರದ ಬಗ್ಗೆ ಮಾತಾಡಿ ಅಥವಾ ಅವರನ್ನ ಬೈದು ಏನು ಪ್ರಯೋಜನ. ಬರೋ ರಾಜಕಾರಣಿಗಳೆಲ್ಲ ರಾಜಕೀಯ ಮಾಡ್ಕೊಂಡು, ತಮ್ ಜೋಬು ತುಂಬಿಸಿಕೊಂಡು ಹಾಯಾಗಿ ಇರ್ತಾರೆ ವಿನಃ ಅವ್ರ ತಲೇಲಿ ಇಂಥ ವಿಷಯಗಳೆಲ್ಲ ಹೊಲಿಯೋದೇ ಇಲ್ಲ ಗುರು.

Anonymous ಅಂತಾರೆ...

ಅಡ್ಬಿದ್ದೆ ಗುರೂ. ಈ ಹೈಕೋರ್ಟ್ ಆದೇಸದಾಗೆ ನಮ್ಗೆ ಅನುಕೂಲ ಆಗೋ ಹಾಗೆ ಒಂದು ಬತ್ತಿ ಇಟ್ಟವ್ರೆ ಕಣಣ್ಣೋ.. ಅದೇನಪಾ ಅಂದ್ರೆ ಈ ಎಲ್ಲಾ ಅನುದಾನ ರಹಿತ ಶಾಲೆಗಳೂ ಇಂಗ್ಲಿಸ್ನಾಗೆ ಕಲ್ಸ್ ಬೇಕಿದ್ರೆ ಗೌರ್ನ್ ಮೆಂಟ್ದ್ ಪರ್ಮಿಸನ್ ಬೇಕಾಗ್ತದೆ ಅಂತ. ಏನ್ ಯಾರ್ಗಾದ್ರು ಈ ವಿಸ್ಯದ ಬಗ್ಗೆ ಯೇನಾದ್ರೂ ಹೆಚ್ಚಿಗೆ ಗ್ಯಾನ ಐತಾ ಗುರೂ?

Anonymous ಅಂತಾರೆ...

medium of teaching english aadru parvagilla kannada ondu bhasheyaagi 10 (PUC II aadre innu olledE) varege kaddayavagi kalisabeku......

Kanndadalli hechhina vidhyabhyasakke sariyada anukoola ee hottinalli irada karaNa english madhyama nanage uchita anta ansutte ..... aadre 1st matte 2nd anta bere maadde 1-12 elrigu onde kannada bhashe kalsbeku ....

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails