ಬೋಸ್ ಸಿದ್ದಾಂತ ಏನು ಗೊತ್ತಾ?

ಇವ್ರು ಸತ್ಯೇಂದ್ರನಾಥ್ ಬೋಸ್. ಇವತ್ತಿನ ದಿನ ಪ್ರಪಂಚದ ಎಲ್ಲಾ ಜನರಲ್ಲೂ, ಅದರಲ್ಲೂ ವಿಶೇಷವಾಗಿ ವಿಜ್ಞಾನ ವಲಯದಲ್ಲೂ ಬಲು ಚರ್ಚಿತ ಹೆಸರು ಇವರದ್ದು. ಇತ್ತೀಚಿಗೆ ವಿಜ್ಞಾನಿಗಳು ಬ್ರಹ್ಮಾಂಡದ ಹುಟ್ಟಿನ ಮೂಲ ಹುಡುಕಲು ಅನುಕೂಲ ಮಾಡಿ ಕೊಡೊ, ಪ್ರೋಟಾನುಗಳನ್ನು ಢಿಕ್ಕಿ ಹೊಡ್ಸೋ ಮೂಲಕ ಮಹಾಸ್ಪೋಟದ ಗುಟ್ಟು ರಟ್ಟು ಮಾಡೊ ದಿಕ್ಕಲ್ಲಿ ದೊಡ್ಡ ಸಾಧನೆ ಮಾಡಿರೋದನ್ನು ನಾವು ಓದಿ ಬಲ್ಲೆವಷ್ಟೆ? ಈ ಸಂಶೋಧನೆಯ ಮೂಲ ವಿಜ್ಞಾನಿಗಳಲ್ಲಿ ಪ್ರಮುಖರು ಆಲ್ಬರ್ಟ್ಟ್ ಐನ್‍ಸ್ಟೈನ್ ಹಾಗೂ ಸತ್ಯೇಂದ್ರನಾಥ್ ಬೋಸ್ ಅವರುಗಳು.
ಬಂಗಾಳದ ಮೇಧಾವಿ ವಿಜ್ಞಾನಿ ಬೋಸ್ ಅವರನ್ನು ಜಗತ್ತಿನಾದ್ಯಂತ ಗೌರವಿಸ್ತಾರೆ. ಆಲ್ಬರ್ಟ್ಟ್ ಐನ್‍ಸ್ಟೈನ್ ಅಂತಹ ಹಿರಿಯ ವಿಜ್ಞಾನಿಯೇ ಬೋಸ್ ಬರೆದಿದ್ದ ಒಂದು ಪ್ರಬಂಧಕ್ಕೆ ತಮ್ಮ ಲೇಖನವೊಂದನ್ನು ಸೇರಿಸಿರುವುದು, ನಂತರ ಇದನ್ನು ಐನ್‍ಸ್ಟೈನ್-ಬೋಸ್ ಸ್ಟಾಟಿಸ್ಟಿಕ್ಸ್ ಎಂದು ಕರೆಯಲಾಗಿರುವುದು, ಇವೆಲ್ಲಾ ಇವರ ವಿಜ್ಞಾನದಲ್ಲಿನ ಪರಿಣಿತಿ ತೋರಿಸುತ್ತೆ ಗುರು! ಇಷ್ಟೇ ಅಲ್ಲದೆ ಭೌತಶಾಸ್ತ್ರದಲ್ಲಿ ಇವರ ನೆನಪಿನಲ್ಲಿ ಒಂದು ಕಣ - ಬೋಸಾನ್ - ಎಂದೇ ಇದೆ. ಇದೆಲ್ಲಾ ಸರಿ, ಆದ್ರೆ ಇವರ ಬಗ್ಗೆ ಏನ್ಗುರುಗೆ ಏಕೆ ಆಸಕ್ತಿ ಅಂತೀರಾ? ಅದು ಇವರು ಇದೆಲ್ಲಾ ಸಾಧನೆಗೆ ತಾಯ್ನುಡಿಯಲ್ಲಿನ ಕಲಿಕೆಯೇ ಸಾಧನವೆಂದು ಪ್ರತಿಪಾದನೆ ಮಾಡಿದ್ರು ಅನ್ನೋ ವಿಷಯ ಗುರು!

ಇವರು ತಾಯ್ನುಡಿಯಲ್ಲಿನ ಕಲಿಕೆಯ ಪ್ರತಿಪಾದಕ

ಇವರ ವಿಜ್ಞಾನ ಜೀವನದ ಶುರುವಿನಲ್ಲಿದ್ದ ಭೌತಶಾಸ್ತ್ರದ ಹಲವಾರು ಚಿಂತನೆಗಳು ಜರ್ಮನ್ ಭಾಷೆಯಲ್ಲಿದ್ವಂತೆ. ಹಾಗಾಗಿ ಜರ್ಮನ್ ಭಾಷೆಯನ್ನ ಮೊದಲು ಕಲಿತು, ನಂತರ ಅವುಗಳ ಸಾರವನ್ನ ಹೀರಿದೋರು ಇವರು! ಹೀಗಿರುವಾಗ ಒಂದು ವಿಷಯವನ್ನು ಹೀರಲು ಮತ್ತು ಹೊರಹಾಕಲು ಒಬ್ಬ ಮನುಷ್ಯನ ತಾಯ್ನುಡಿ ಎಷ್ಟು ಮುಖ್ಯ ಅಂತ ಇವರಿಗೆ ಚೆನ್ನಾಗಿಯೇ ಅರಿವಾಗಿತ್ತು. ಅದಕ್ಕಾಗೇ ಇವರು ಮುಂದೆ ತನ್ನ ನಾಡಿಗರಿಗೆ ವಿಜ್ಞಾನವನ್ನು ತಾಯ್ನುಡಿಯಲ್ಲೇ ಕಲಿಸಬೇಕೆಂದು "ವಂಗೀಯ ವಿಜ್ಞಾನ ಪರಿಷತ್" ಎಂಬ ಹೆಸರಿನಲ್ಲಿ ಒಂದು ಚಳವಳಿಯನ್ನೇ ಹುಟ್ಟುಹಾಕಿದ್ರು ಗುರು! ಇವರನ್ನ ನೋಡಿದರೆ ನಿಜವಾದ ತಿಳುವಳಿಕೆ ಇರೋರು ಖಂಡಿತವಾಗಿಯೂ ಮಾತೃಭಾಷಾ ಶಿಕ್ಷಣದ ಪರವೇ ಇರ್ತಾರೆ ಅಂತ ಸಾಬೀತೇ ಆಗತ್ತೆ ಗುರು!

ಭೌತಶಾಸ್ತ್ರದಲ್ಲಿ ಐನ್‍ಸ್ಟೈನ್ ಸಮಕ್ಕೆ ಬೆಳೆದಿದ್ದ ಇವರು, ಹಲವಾರು ಇತರ ವಿಜ್ಞಾನಗಳಲ್ಲೂ ಆಳವಾದ ಅಧ್ಯಯನ ಮಾಡಿದೋರು. ಜ್ಞಾನ ವಿಜ್ಞಾನ ತಂತ್ರಜ್ಞಾನದಲ್ಲಿ ಏನಾದ್ರೂ ಸಾಧನೆಯ ಶಿಖರ ಏರಬೇಕು ಅಂದ್ರೆ ಮಾತೃಭಾಷೆಯೊಂದೇ ಸಾಧನ ಎಂದು ಅಂತ ಶಿಖರದ ಮೇಲೆ ನಿಂತೇ ಸಾರಿದ ಸತ್ಯೇಂದ್ರನಾಥ ಬೋಸರ ಈ ಸಿದ್ಧಾಂತಾನ್ನ ನಾವು ಮರೀಬಾರ್ದು ಗುರು.

ಇಂಥ ಉನ್ನತ ಚಿಂತನೆಯ ಉನ್ನತ ಮನುಜನಾದ ಸತ್ಯೇಂದ್ರನಾಥ ಬೋಸ್ ಅವ್ರಿಗೆ ಇಗೋ ನಮ್ಮ ಒಂದು ನಮನ ಗುರು!

6 ಅನಿಸಿಕೆಗಳು:

Anonymous ಅಂತಾರೆ...

ಜೊತೆಗೆ ಇನ್ಫೋಸಿಸ್ ನಾರಾಯಣ ಮೂರ್ತಿಯಂತಹ ಇಂಗ್ಲೀಷ್ ಮಾಧ್ಯಮ ಪ್ರತಿಪಾದಕರೂ ಇರುವಂತದ್ದು ವಿಪರ್ಯಾಸ.

Anonymous ಅಂತಾರೆ...

Ondu olleya Mahithi thilisikottiddakke Vandane. ಉನ್ನತ ಚಿಂತನೆಯ ಉನ್ನತ ಮನುಜನಾದ ಸತ್ಯೇಂದ್ರನಾಥ ಬೋಸ್ ಅವ್ರಿಗೆ ಇಗೋ ನಮ್ಮ ಒಂದು ನಮನ

Anonymous ಅಂತಾರೆ...

ಇಲ್ಲಿ ನಮ್ಮ ಕನ್ನಡದವರೇ ಆದ ಡಾ!! ಸಿ.ಆರ್ ಚಂದ್ರಶೇಖರ್, ಇವರು ಖಗೋಳಜ್ಞ...... ಖಗೋಳವನ್ನು ಕನ್ನಡದಲ್ಲೇ ಅದ್ಯಯನ ಮಾಡಬೇಕೆಂದು "ಗ್ರೀಕ್ ಬಾಷೆ"ಯಲ್ಲಿದ್ದ ಅನೇಕ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿದರು.

ಇವ್ರು ಕನ್ನಡದವರು ಅನ್ನೋಕೆ ಹೆಮ್ಮೆ ಆಗ್ತಿದೆ ಅಲ್ವಗುರು......????

Anonymous ಅಂತಾರೆ...

ಡಾ!! ಸಿ.ಆರ್ ಚಂದ್ರಶೇಖರ್ ಮತ್ತು ಬೋಸ್ ರವರ ಉದಾಹರಣೆಗಳು ಸರ್ಕಾರ ಮು೦ದಿಟ್ಟುಕೊಳ್ಳಲಿ. ತಕ್ಷಣವೇ, ಸ೦ಸ್ಕೃತ ವಿಶ್ವವಿದ್ಯಾಲಯ ಕಟ್ಟೋದನ್ನು ಬದಿಗಿಟ್ಟು, ಇಲ್ಲಿರುವ ಜನರ, ಸರ್ವಧರ್ಮದವರ, ಸರ್ವ ಜನಾ೦ಗದವರ ಭಾಷೆಯಾಗಿರುವ ಕನ್ನಡದಲ್ಲಿ ಒ೦ದು ಭವ್ಯವಾದ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿಯೇಬಿಡಲಿ. ನಾಡಿನ ಸರ್ಕಾರ ಇ೦ದೇ ಎಚ್ಚೆತ್ತುಕೊಳ್ಳಲಿ, ಮೊಳಗಲಿ ನಾಡ ದೀಪವು.. ಮೂಡಲಿ ನವಸುಪ್ರಭಾತವು.

Unknown ಅಂತಾರೆ...

Olle mahiti kottiddeera. thumbaa chennagide. He is great!! viparyaasa enu andre ivaru Einstein samakaaleenaru aadru bahala janarige ivara parichaya aagilla annodu.

Priyank ಅಂತಾರೆ...

ಇತ್ತೀಚೆಗೆ ಸುದ್ದಿಯಲ್ಲಿರುವ "ದೇವಕಣ" God particle ಅನ್ನು ವಿಜ್ಞಾನಿಗಳು ಹಿಗ್ಸ್ ಬೋಸಾನ್ ಎಂದು ಕರೆಯುತ್ತಾರೆ. ಬೋಸಾನ್ ಎಂದು ಕರೆಯುವುದು ಇದೇ ಸತ್ಯೇಂದ್ರನಾಥ್ ಬೋಸ್ ಅವರಿಗೆ ಗೌರವ ಸೂಚಿಸಲು.
ವಿಜ್ಞಾನದಲ್ಲಿ ಮೇರು ಸಾಧನೆ ಮಾಡಿರುವ ಇವರು ತಾಯ್ನುಡಿಯಲ್ಲಿ ಕಲಿಕೆಯೇ ಮೇಲು ಎಂಬುದನ್ನು ಪ್ರತಿಪಾದಿಸಿದ್ದರು ಎಂಬುದನ್ನು ತಿಳಿದು ನಲಿವಾಯಿತು.
ಇಂಗ್ಲೀಶ್ ಮೂಲಕ ಕಲಿಕೆಯೇ ನಿಜವಾದ ಕಲಿಕೆ ಎಂದು ನಂಬಿರುವ ಕನ್ನಡಿಗರ ಕಣ್ಣುಪೊರೆ, ಬೋಸ್ ಸಿದ್ದಾಂತವನ್ನು ನೋಡಿಯಾದರೂ ಹೊರಟು ಹೋಗುವುದೇನೋ !

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails