ಬಂಡವಾಳ ಹರಿದು ಬರಲು ಗಟ್ಟಿನೀತಿ ಬೇಕು


ಕರ್ನಾಟಕದಲ್ಲಿ ಟಾಟಾ ಸಂಸ್ಥೆಯೋರು ನ್ಯಾನೋ ಮಾದರಿ ಕಾರುಗಳನ್ನು ತಯಾರಿಸೋ ಘಟಕಾನ ಕಡೆಗೂ ಆರಂಭಿಸುವುದಿಲ್ಲ ಎನ್ನುವ ತೀರ್ಮಾನ ತೆಗೆದುಕೊಂಡರು. ಈ ಘಟನೆಯನ್ನು ನೆಪವಾಗಿಟ್ಟುಕೊಂಡು ಮುಂದೇನಾಗಬೇಕು ಅಂತ ಚೂರು ನೋಡೋಣ ಬಾ ಗುರು!
ಉದ್ದಿಮೆಗಾರಿಕೆ ಮತ್ತು ಉದ್ಯೋಗಾವಕಾಶ!

ನಮ್ಮ ನಾಡಲ್ಲಿ ಉದ್ದಿಮೆಗಳ ಆರಂಭಕ್ಕಿರೋ ಮುಖ್ಯವಾದ ಆಯಾಮ ಸರ್ಕಾರಕ್ಕೆ ತೆರಿಗೆ ಮೂಲಕ ದೊರೆಯುವ ಆದಾಯ, ನಾಡಿನ ಜನರಿಗೆ ನೇರವಾಗಿ ಸಿಗಬಹುದಾದ ಉದ್ಯೋಗಗಳು ಮತ್ತು ಈ ಉದ್ದಿಮೆಗಳಿಗೆ ಪೂರಕವಾಗಿ ಆರಂಭವಾಗೋ ಇತರೆ ಉದ್ದಿಮೆಗಳು. ಈ ಉದ್ದೇಶಗಳ ಈಡೇರಿಕೆಗಾಗಿಯೇ ಸರ್ಕಾರಗಳು ಉದ್ದಿಮೆ ಆರಂಭಿಸಲು ಉತ್ತೇಜನ ಕೊಡ್ತಾ, ಕಡಿಮೆ ದರದಲ್ಲಿ ನೆಲ, ನೀರು, ವಿದ್ಯುತ್ ಇವುಗಳನ್ನು ಉದ್ದಿಮೆದಾರರಿಗೆ ನೀಡುತ್ತದೆ. ಇಂತಿಷ್ಟು ತೆರಿಗೆ ವಿನಾಯ್ತಿ, ಇಷ್ಟು ವರ್ಷದ ತೆರಿಗೆ ರಜಾಗಳನ್ನು ನೀಡುತ್ತದೆ. ಇಷ್ಟೆಲ್ಲಾ ಇದ್ದಾಗ್ಲೂ ನಮ್ಮ ಸರ್ಕಾರ ಈ ಬಾರಿ ಟಾಟಾ ಸಂಸ್ಥೆಯನ್ನು ಸೆಳೆಯಲು ಯಾಕೆ ವಿಫಲವಾಯ್ತು ಅಂತ ನೋಡುದ್ರೆ ಕರ್ನಾಟಕದ ರಾಜಕೀಯ ಸ್ಥಿತಿಗತಿ, ಇಲ್ಲಿನ ರೈತ ಸಮುದಾಯದ ಪ್ರತಿಕ್ರಿಯೆಗಳು, ಉದ್ದಿಮೆ ಎದುರಿಸಲು ಉಂಟಾಗಬಹುದಾದ ತೊಡಕುಗಳು, ವಿದ್ಯುತ್ ಪೂರೈಕೆಯಲ್ಲಿನ ಸಮಸ್ಯೆಗಳು, ಸರ್ಕಾರದ ನಿಯಮಾವಳಿಗಳ ಅಸ್ಥಿರತೆ/ ಅಸ್ಪಷ್ಟತೆ ಇವೆಲ್ಲಾ ಪ್ರಮುಖ ಪಾತ್ರ ವಹಿಸಿದ ಹಾಗೆ ಕಾಣ್ತಿದೆ ಗುರು!

ರೈತರ ಮನವೊಲಿಕೆಯ ಮಹತ್ವ!

ಉದ್ದಿಮೆ ಆರಂಭಕ್ಕಾಗಿ ನೆಲ ವಶಪಡಿಸಿಕೊಳ್ಳಲು ಸರ್ಕಾರ ಅನುಸರಿಸೋ ನೀತಿ ಮತ್ತಷ್ಟು ಸುಧಾರಿಸಬೇಕಾಗಿದೆ. ಕೈಗಾರಿಕಾ ಪ್ರದೇಶಗಳನ್ನು ಗುರುತಿಸಬೇಕಾದಾಗ ಅಲ್ಲಿ ಏನೇನಿರಬೇಕು ಅನ್ನೋದು ಸ್ಪಷ್ಟವಾಗಿರಬೇಕು. ಅಂತಹ ಭೂಮಿಯನ್ನು ನೀಡುವ ರೈತನಿಗೆ ಏನೆಲ್ಲಾ ಪರಿಹಾರ ಕೊಡಬೇಕು ಅನ್ನೋದು ರೈತನನ್ನು ಪ್ರೋತ್ಸಾಹಿಸೋ ಹಾಗಿರಬೇಕು. ದೇವನಹಳ್ಳಿ ಸುತ್ತಲ ಭೂಮಿನ ಸರ್ಕಾರ ವಶ ಪಡಿಸಿಕೊಂಡಾಗ ಯಾವ ಬೆಲೆಗೆ ಕೊಂಡುಕೊಳ್ತು? ಇವತ್ತು ಅದರಲ್ಲಿ ಎಷ್ಟು ಭಾಗ ಮಾತ್ರಾ ವಿಮಾನ ನಿಲ್ದಾಣಕ್ಕೆ ಅಗತ್ಯವಿದೆ? ಉಳಿದದ್ದನ್ನು ಯೋಜನೆಯಲ್ಲೇ ವಾಣಿಜ್ಯ ಉದ್ದೇಶಕ್ಕೆ ಅಂತ ತೋರಿಸಿ... ವಿಮಾನ ನಿಲ್ದಾಣ ಕಟ್ಟಿದ ಮೇಲೆ ಆ ನೆಲದ ಬೆಲೆ ಗಗನಕ್ಕೇರಿಸಿ ಲಾಭ ಹೆಚ್ಚಿಸಿಕೊಳ್ಳೋದನ್ನು ನೋಡಿದಾಗ ನೆಲ ಬಿಟ್ಟುಕೊಟ್ಟ ರೈತ, ನಾ ಕೊಟ್ಟ ಜಮೀನು ವಿಮಾನ ನಿಲ್ದಾಣಕ್ಕಲ್ಲ... ಅದನ್ನು ಕಟ್ಟಿದೋರ ಲಾಭ ಗಳಿಕೆಗೆ ಅಂತ ಅಸಮಾಧಾನ ಪಟ್ಕೊಳ್ಳೋ ಹಾಗೆ ನಮ್ಮ ನಿಯಮ ಇರಬಾರದು ಅಲ್ವಾ ಗುರು? ಅಂದ್ರೆ ನೆಲ ಕಳೆದುಕೊಳ್ಳುವವನು ಲಾಭದ ಭಾಗೀದಾರ ಆಗಬೇಕು ತಾನೆ? ಆಗ ಮಾತ್ರ ತಮ್ಮ ನೆಲ ಸರ್ಕಾರ ಕೊಂಡುಕೊಳ್ಳುತ್ತೆ ಅಂದ್ರೆ ಖುಷಿ ಪಟ್ಕೊಳ್ಳೋ ಪರಿಸ್ಥಿತಿ ಹುಟ್ಕೊಳ್ಳೋದು. ಒಳ್ಳೇ ಬೆಲೆ, ಸರಿಯಾದ ಪುನರ್ವಸತಿ, ದಬ್ಬಾಳಿಕೆ ಹಾಗೂ ಒತ್ತಾಯವಿಲ್ಲದ ಗೌರವದಿಂದ ನಡೆಸಿಕೊಳ್ಳೋದು ಇವೆಲ್ಲಾ ಸಾಧನಗಳನ್ನು ಬಳಸಿ ರೈತಣ್ಣನ ಮನವೊಲಿಸಬೇಕು.

ಏನೆಲ್ಲಾ ಕೊಡಬೇಕು?

ಅತ್ಯುತ್ತಮ ರಸ್ತೆ, ರೈಲು ಸಂಪರ್ಕಗಳ ಜೊತೆಯಲ್ಲಿ ಅಗತ್ಯವಾದ ನೀರು ಮತ್ತು ವಿದ್ಯುತ್ತುಗಳ ಪೂರೈಕೆ ಮಾಡಬೇಕಾಗಿದೆ. ಅದಕ್ಕೆ ಅಗತ್ಯವಾದಂತೆ ನದಿ ನೀರಿನ ಸದ್ಬಳಕೆಗೆ ಯೋಜನೆಗಳು, ವಿದ್ಯುತ್ ಉತ್ಪಾದನೆಗೆ ಬೇರೆ ಬೇರೆ ಶಕ್ತಿಮೂಲಗಳ ಬಳಕೆ, ಸೋರಿಕೆ ತಡೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಇದಕ್ಕೆ ಪೂರಕವಾಗಿ ನಮ್ಮ ಸರ್ಕಾರದ ನಾಯಕತ್ವ ಗಟ್ಟಿ ದೃಷ್ಟಿಕೋನದ, ದೂರಗಾಮಿ ಯೋಜನೆಯುಳ್ಳ, ನಾಡಿನ ಏಳಿಗೆಯ ಬಗ್ಗೆ ಸದಾ ತುಡಿಯುತ್ತಿರುವುದಾಗಿರಬೇಕು. ಕನ್ನಡನಾಡಿನ ಏಳಿಗೆಯೊಂದೇ ಪರಮಗುರಿಯಾಗಿರಬೇಕು. ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳುವಿಕೆ, ಸುತ್ತು ಬಳಸು ಮೀನ ಮೇಷವಿಲ್ಲದ ಪಾರದರ್ಶಕವಾದ ಚುರುಕಾದ ಆಡಳಿತ ಯಂತ್ರದ ಅಗತ್ಯವಿದೆ. ಉದ್ದಿಮೆ ಆರಂಭಿಸಲು ಬೇಕಾದ ಪರವಾನಿಗೆಗಳನ್ನು ಹಲವಾರು ಇಲಾಖೆಗಳಿಂದ ಪಡೆಯಬೇಕಾದ ಅಗತ್ಯವನ್ನು ಇಲ್ಲವಾಗಿಸಿ ಒಂದೇ ಸಂಸ್ಥೆಯಲ್ಲಿ ಸರಳವಾಗಿ ಲೈಸೆನ್ಸ್ ನೀಡಬೇಕಾದ ವ್ಯವಸ್ಥೆಯನ್ನು ಜಾರಿಗೊಳಿಸಬೇಕಾಗಿದೆ. ದೀರ್ಘಕಾಲಕ್ಕಾಗಿ ರೂಪಿಸಲಾದ, ಯಾವುದೆ ಸರ್ಕಾರವಿದ್ದರೂ ಬದಲಾಗದ ರೀತಿನೀತಿ ನಿಯಮಾವಳಿಗಳ ಅಗತ್ಯವಿದೆ.

ನಾಡಿನ ಏಳಿಗೆಗೆ ಉದ್ದಿಮೆಗಾರಿಕೆಯೇ ರಹದಾರಿ

ನಾಡು ಆರ್ಥಿಕವಾಗಿ ಬೆಳೆಯಲು, ನಾಡಿನ ಜನತೆಗೆ ಉದ್ಯೋಗಾವಕಾಶಗಳನ್ನು ತಂದುಕೊಡುವ ಉದ್ದಿಮೆಗಳೇ ಇಂದಿನ ಅಗತ್ಯವಾಗಿವೆ. ಸಿಂಗೂರಿಂದ ಟಾಟಾ ಎತ್ತಂಗಡಿ ಆಗುತ್ತೇ ಅಂದಾಗ ಸಂತೆಗೆ ಮೂರು ಮೊಳ ನೆಯ್ದಂಗೆ ತಕಾಪಕಾ ಕುಣಿದು ಟಾಟಾ ಮುಂದೆ ಲಾಗಾ ಹಾಕೊ ಬದಲಾಗಿ ನಾಡಿನ ಆಳುವ ಸರ್ಕಾರಗಳು ಈ ಬಗ್ಗೆ ಸರಿಯಾದ ನಿಯಮಗಳನ್ನು ಎಲ್ಲ ಕ್ಷೇತ್ರಗಳ ತಜ್ಞರ ಸಹಕಾರದಿಂದ ರೂಪಿಸಿ ಜಾರಿಗೆ ತರಬೇಕಾಗಿದೆ. ಇಗೋ! ಕರ್ನಾಟಕ ರಾಜ್ಯದ ಉದ್ದಿಮೆ ನೀತಿ ಇದು. ನಮ್ಮ ನಾಡಲ್ಲಿ ನೀವು ಉದ್ದಿಮೆ ಆರಂಭಿಸಲು ಇಂತಿಂತಹ ಪೂರಕ ವಾತಾವರಣವಿದೆ. ಈ ನಾಡಲ್ಲಿ ನಿಮಗೆ ಇಂತಿಂತಹ ಸವಲತ್ತುಗಳನ್ನು ಸರ್ಕಾರ ನಿಮಗೆ ನೀಡುತ್ತದೆ. ಬದಲಾಗಿ ನೀವು ಇಂತಿಷ್ಟು ಕನ್ನಡಿಗರಿಗೆ ಕೆಲಸ ಕೊಡಬೇಕು. ಉದ್ದಿಮೆ ಆರಂಭಕ್ಕಾಗಿ ಅಗತ್ಯವಿರುವ ನೆಲವನ್ನು ಸರ್ಕಾರ ರೈತರಿಂದ ಕೊಳ್ಳಲು ಇಂತಹ ನೀತಿಯನ್ನು ಅನುಸರಿಸುತ್ತದೆ, ಈ ಮಾನದಂಡದ ಆಧಾರದ ಮೇಲೆ ಇಂತಿಷ್ಟು ಪರಿಹಾರ ನೀಡಲಾಗುತ್ತದೆ... ಎಂಬೆಲ್ಲಾ ವಿಷಯಗಳು ಪಾರದರ್ಶಕವಾಗಿಯೂ, ಸ್ಫುಟವಾಗಿಯೂ ಇದ್ದಲ್ಲಿ ನಮ್ಮ ನಾಡಿಗೆ ಉದ್ದಿಮೆಗಳು ಹರಿದು ಬರುವುದು ಅಷ್ಟೊಂದು ಕಠಿಣವಾಗಲಾರದು ಗುರು!
ಕೊನೆಹನಿ : ಗುಜರಾತಿಗೆ ಟಾಟಾ ಹೋದ ನಂತರ ಮೋದಿ "ಉಳಿದವರಿಗಿಂತ ಭಿನ್ನವಾಗಿ ಮಾಡಿದ ಕೆಲಸ ಒಂದೇ, ಸಿಂಗೂರಿನಿಂದ ನ್ಯಾನೋ ಎತ್ತಂಗಡಿಯಾಗೋದು ಗೊತ್ತಾದ ಎರಡು ನಿಮಿಷದಲ್ಲಿ ರತನ್ ಟಾಟಾರ ಮೊಬೈಲ್ ಗೆ ’ಗುಜರಾತಿಗೆ ಸ್ವಾಗತ’ ಅನ್ನೋ ಒಂದು ಸಣ್ಣ ಎಸ್ಸೆಮ್ಮೆಸ್ ಕಳಿಸ್ದೆ" ಅಂದ್ರು ಅನ್ನೋ ಗಾಳಿಸುದ್ದಿ ಎಲ್ಲಾ ಕಡೆ ಓಡಾಡ್ತಿದೆ ಗುರು.

6 ಅನಿಸಿಕೆಗಳು:

Anonymous ಅಂತಾರೆ...

ನಿಮ್ಮ ಕೊನೆಹನಿಯನ್ನು ಓದಿದಮೇಲೆ.. ನನಗನಿಸುವುದು ಪ್ರಗತಿಯ ಬಗ್ಗೆ ಕಾಳಜಿ ಇರುವ ಹತ್ತು ಹಲವು ನಾಯಕರು ನಮಗೆ ಬೇಕಾಗಿದ್ದಾರೆ. ಅದೆಷ್ಟು ನಾಯಕರು ಕನ್ನಡಕ್ಕೆ, ಕನ್ನಡದಿ೦ದ ಹಾಗೂ ಕನ್ನಡಿಗರಿಗಾಗಿ ನಾವಿರುವುದು ಅ೦ತ ವರ್ತಿಸುತ್ತಾರೆ. ನಿಜವಾದ ರಾಷ್ಟ್ರೀಯತೆಯನ್ನು ಪ್ರದರ್ಶಿಸಬೇಕೆ೦ದರೆ, ಕನ್ನಡಿಗರಿಗಾಗೆ ಇಲ್ಲಿನ ನಾಯಕರು ದುಡಿಯಬೇಕಾಗಿದೆ.

Anonymous ಅಂತಾರೆ...

ಟಾಟಾ ಗುಜರಾತಿಗೆ ಹೋಗಲು ಮುಖ್ಯ ಕಾರಣವೆಂದರೆ ಅಲ್ಲಿನ ಸ್ಥಿರ ಸರ್ಕಾರ ಮತ್ತು ರಾಜಕೀಯ ಸ್ಥಿರತೆ. ಕರ್ನಾಟಕಕ್ಕೆ ಬಂದಿದ್ದರೆ ರೈತರ ಹೆಸರಿನಲ್ಲಿ ಇನ್ನೇನು ರಾಜಕೀಯ ನಾಟಕಗಳು ಆಗುತ್ತಿದ್ದವೋ..

Anonymous ಅಂತಾರೆ...

ಕರ್ನಾಟಕಕ್ಕೆ ಬ೦ದಿದ್ದರೆ, ರೈತರ ಹೆಸರಿನಲ್ಲಿ ಅದೇನೇ ರಾಜಕೀಯ ಬೇಕಾದರೂ ಆಗಲಿ, ಕನ್ನಡಿಗರಿಗೆ ಉದ್ಯೋಗ ಸಿಗುತ್ತಿತ್ತು..

ಸರಿ ನಮಗೆ ಟಾಟಾ ದಕ್ಕಲಿಲ್ಲ. ಒಳ್ಳೆಯದಾಯಿತು ಬಿಡಿ. ನಾವು ಯಾರಪ್ಪನ ಹ೦ಗಲ್ಲೂ ಇರುವುದು ಬೇಡ. ಕನ್ನಡಿಗನೇ ಕೆಲಸ ಕೊಡುವ ಹಾಗೆ ಆಗುವುದಕ್ಕ ಒಳ್ಳೆಯ ಅವಕಾಶ ದೊರೆತಿದಿ. ನಾವೇ, ಕಾರಿನ ಕ೦ಪನಿ ತೆರೆಯೋಣ. ನಮ್ಮ ಕಾರನ್ನು ದೇಶ, ವಿದೇಶಗಳಲ್ಲಿ ಮಾರಾಟ ಮಾಡೋಣ. ಹತ್ತು ಇ೦ಜಿನಿಯರ್ ಗಳು ಸೇರಿದರೆ ಇದು ೧೦ ವರ್ಷಗಳಲ್ಲಿ ಸಾಧ್ಯಮಾಡಿ ತೋರಿಸುತ್ತಾರೆ. ನಮ್ಮ ಶಕ್ತಿಯಮೇಲೆ ನಮಗೆ ಭರವಸೆ ಇರಲಿ. ಏನು ಬೇಕಾದರೂ ಸಾಧಿಸಬಹುದು. ಇನ್ನೊಬ್ಬ ಟಾಟಾ ಇಲ್ಲೇ ಕಲಾಸಿಪಾಳ್ಯದಲ್ಲೋ, ಬಸವನಗುಡಿಯಲ್ಲೋ, ಬೊಮ್ಮಸ೦ದ್ರದಲ್ಲೋ ಅಥವಾ ಧಾರವಾಡ, ಹುಬ್ಬಳ್ಳಿ, ಬೆಳಗಾ೦, ಮ೦ಗಳೂರು, ಬಿಜಾಪುರದಲ್ಲೋ... ತನ್ನ ಶಕ್ತಿಯ ಪರಿವೆಯೇ ಇಲ್ಲದೆ ಸುಮ್ಮನೆ ಅಡಗಿ ಕುಳಿತಿದ್ದಾನೆ.

Anonymous ಅಂತಾರೆ...

Guru, ivru taka paka antha kunidru sari, atleast ivru kunidralla saar ! Had it been COngress , they wouldn't even bother about inviting industry. We've made a big analysis - but look back ... we 've selected repeatedly the party/leaders who are fit to manage brothels ! All last 50 yrs, no development of any kind...no fighting for our share in center with so called Congress govt! Why tamilians fight and get everything they need ? Atleast Yeddi is spirited, let us support him, imagine if he is same even half of the time given to all dharam singhs, devve gowdas and kantri bangarappas, what would happen ?

Anonymous ಅಂತಾರೆ...

gansthana iro leaders beku guru adakke

ಅರವಿ೦ದ ಅಂತಾರೆ...

ನನ್ನ ಪ್ರಕಾರ ಅಲ್ಲಿರುವ ಸ್ಥಿರ ಸರ್ಕಾರ... ನಮ್ಮಲ್ಲಿ ಇನ್ನೂ ಆ ನಂಬಿಕೆ ಬಂದಿಲ್ಲ..

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails