ನಿಜವಾಗಿಯೂ ಕಾನೂನು ಮುರಿಯುತ್ತಿರುವವರು ಯಾರು?


ನವೆಂಬರ ಒಂದರ ನಂತರ ಬೆಂಗಳೂರಿನಲ್ಲಿ ಕನ್ನಡದಲ್ಲಿರದ ನಾಮ ಫಲಕಗಳಿಗೆ ಮಸಿ ಬಳಿತೀವಿ ಅಂದಿರೋ ಕನ್ನಡ ಪರ ಸಂಘಟನೆಗಳ ಮಾತಿಗೆ ಪ್ರತಿಕ್ರಿಯಿಸಿರುವ ನಗರ ಪೋಲಿಸ್ ಮುಖ್ಯ ಆಯುಕ್ತರಾದ ಶ್ರೀ ಶಂಕರ ಬಿದರಿಯವರು, ಅಂತಹ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿರೋ ಸುದ್ದಿ ಮೊನ್ನೆ ಮೊನ್ನೆ ಎಲ್ಲ ಪತ್ರಿಕೆಯಲ್ಲಿ ಬಂದಿತ್ತು ಗುರು. ಕಾನೂನು ಕೈಗೆತ್ತಿಕೊಳ್ಳೋರ ವಿರುದ್ಧ ಕ್ರಮ ತೆಗೆದುಕೊಳ್ಳೋದೇನೋ ಸರಿಯಾದದ್ದೇ, ಆದ್ರೆ ಇದೇ ಉತ್ಸಾಹವನ್ನು ಕನ್ನಡದ ಅನುಷ್ಠಾನಕ್ಕೆ ತಾನೇ ಮಾಡಿರೋ ಕಾನೂನುಗಳ ಜಾರಿಗೂ ತೋರಿಸಬೇಕು ತಾನೆ? ಆಗಲೇ ತಾನೆ ಸರಕಾರ ಪೂರ್ತಿ ಕಾನೂನು ಕಾಪಾಡಿದಂಗಾಗೋದು? ಒಂದ್ ಕಾನೂನ್ನ ಕಾಪಾಡ್ತೀನಿ, ಇನ್ನೊಂದ್ನ ಕಡೆಗಣಿಸ್ತೀನಿ ಅಂದ್ರೆಂಗೆ ಗುರು?

ನಾಮಫಲಕ - ಸರ್ಕಾರಿ ಆಜ್ಞೆ

ಕರ್ನಾಟಕ ಅಂಗಡಿ ಮತ್ತು ವಾಣಿಜೋದ್ಯಮ ಸಂಸ್ಥೆಗಳ ಕಾನೂನಿನ ನಿಯಮ ೨೪ರ ಅನ್ವಯ ಕರ್ನಾಟಕದಲ್ಲಿರುವ ಎಲ್ಲಾ ವಾಣಿಜ್ಯ ಮತ್ತು ವ್ಯವಹಾರ ಸಂಸ್ಥೆಗಳ ನಾಮಫಲಕಗಳು ಮೊದಲು ಕನ್ನಡದಲ್ಲಿಯೇ ಇರತಕ್ಕದ್ದು. ಎಲ್ಲೆಲ್ಲಿ ಇತರ ಭಾಷೆಗಳನ್ನು ಬಳಸಬೇಕಾಗುತ್ತದೆಯೋ ಅಲ್ಲೆಲ್ಲಾ ಮೊದಲು ಕನ್ನಡದಲ್ಲಿ ದೊಡ್ಡದಾಗಿ ಬರೆದು ನಂತರ ಇತರ ಭಾಷೆಗಳಲ್ಲಿ ಅದರಡಿಯಲ್ಲಿ ಬರೆಯತಕ್ಕದ್ದು. ನಿಯಮ ಉಲ್ಲಂಘಿಸಿ ತಪ್ಪಿತಸ್ಥರೆಂದು ತೀರ್ಮಾನವಾದಾಗ ಅಂತಹವರಿಗೆ 10,000 ರೂಪಾಯಿಗಳವರೆಗೂ ದಂಡ ಹಾಕುವುದು. ಸರ್ಕಾರವೇ ಇಂತದೊಂದು ನಿಯಮ ಮಾಡಿರುವಾಗ ಅದನ್ನು ಪಾಲಿಸದೇ ಕಾನೂನು ಮುರಿಯುತ್ತಿರುವವರು, ಕನ್ನಡದಲ್ಲಿ ನಾಮಫಲಕಗಳನ್ನು ಹಾಕದಿರುವ ಅಂಗಡಿ ಮುಂಗಟ್ಟುಗಳ ಮಾಲೀಕರು ತಾನೇ ಗುರು? ಅವರ ವಿರುದ್ಧ ಸರಕಾರವೇ ಕ್ರಮ ತೆಗೆದುಕೊಂಡಿದ್ದರೆ ಜನ ಯಾಕೆ ಕನ್ನಡ ನಾಮ ಫಲಕಗಳಿಗಾಗಿ ಹೋರಾಡುತ್ತಿದ್ದರು ? ಯಾಕೆ ಮಸಿ ಬಳಿತೀವಿ ಅಂತಿದ್ರು? ಇದು ಯೋಚಿಸಬೇಕಾದ ವಿಚಾರ ಅಲ್ವಾ ಗುರು ?

ಇಂದು ನಿನ್ನೆಯದಲ್ಲ ಈ ನಿಯಮ

ಕನ್ನಡದಲ್ಲಿ ನಾಮಫಲಕ ಹಾಕಬೇಕು ಅನ್ನೊ ನಿಯಮ ಇವತ್ತು-ನಿನ್ನೆಯದಲ್ಲ. 1985ರಲ್ಲೇ ಈ ಕಾನೂನು ಬಂದಿದೆ. ಕಾನೂನು ಬಂದಾಗ ಇದ್ದದ್ದು 50 ರೂಪಾಯಿ ದಂಡ. ಇವತ್ತು 23 ವರ್ಷದ ನಂತರ ಆ ದಂಡದ ಮೊತ್ತ 10,000 ವರೆಗೂ ಹೋಗಿದೆ. ಈಗ ನೀನೇ ಹೇಳು ಗುರು, ಒಂದು ಸರಳವಾದ ಕಾನೂನು ಅನುಷ್ಟಾನಕ್ಕೆ 23 ವರ್ಷ ಸಾಕಾಗಲ್ವ? ಹಾಗಾದ್ರೆ ಇನ್ನೂ ಯಾಕೆ ಅದು ಆಗಿಲ್ಲ? ಇಷ್ಟು ವರ್ಷಗಳ ಸರ್ಕಾರದ ನಿಷ್ಕ್ರಿಯತೆಯಿಂದಾಗಿ ತಾನೇ ಇವತ್ತು ಜನಸಾಮಾನ್ಯರೇ ಈ ಕಾನೂನು ಉಳಿಸಲು ಹೋರಟಿರೋದು? ಇನ್ನಾದ್ರೂ ಸರ್ಕಾರ, ಕನ್ನಡಕ್ಕಾಗಿ ಧ್ವನಿ ಎತ್ತಿರುವವರ ವಿರುದ್ಧ ಗುಡುಗಿದಷ್ಟೇ ಉತ್ಸಾಹವನ್ನು ತಾನೇ ಮಾಡಿರುವ ಕಾನೂನ್ನ ಉಲ್ಲಂಘಿಸೋ ಅಂಗಡಿ ಮಾಲಿಕರ ಮೇಲೂ ತೋರಿಸಿದರೆ ಬೆಂಗಳೂರಿನಲ್ಲಿ ಕನ್ನಡದ ನಾಮ ಫಲಕಗಳ ಅನುಷ್ಠಾನ ನಿಜಕ್ಕೂ ಅಷ್ಟು ದೊಡ್ಡ ಸವಾಲಾಗದು. ಅದು ಬಿಟ್ಟು ಒಂದ್ ಕಾನೂನ್ನ ಕಾಪಾಡಿ ಇನ್ನೊಂದ್ನ ಕಡೆಗಣಿಸಬೋದು ಅನ್ನೋ "ಪಾಠ"ವನ್ನ ಸರಕಾರವೇ ಜನಕ್ಕೆ ಕಲಿಸಿದರೆ ಹೆಂಗೆ ಗುರು?

6 ಅನಿಸಿಕೆಗಳು:

Anonymous ಅಂತಾರೆ...

ನಗರದ ಪೋಲಿಸ್ ಮುಖ್ಯಾಯುಕ್ತರಾದ ಶ್ರೀ ಶಂಕರ ಬಿದರಿಯವರನ್ನು ಸರ್ಕಾರ ಮಾಡಿರುವ ಕಾನೂನನ್ನು ಅನುಷ್ಟಾನಕ್ಕೆ ತರುವ೦ತೆ ಒತ್ತಾಯಿಸಬೇಕು.

Anonymous ಅಂತಾರೆ...

ಗುರುಗಳೇ, ಬೆಂಗಳೂರು ನಗರ ಸಾರಿಗೆ ಸಂಸ್ಥೆ ಮಾರ್ಕೋಪೋಲೋ ಅನ್ನೋ ೨೦೦೦ ಬಸ್ಸುಗಳನ್ನು ರಸ್ತೆಗೆ ಬಿಡಲಿವೆಯಂತೆ. ಈ ಮಾರ್ಕೋಪೋಲೋ ಅನ್ನೋರಿಗೂ ಬೆಂಗಳೂರಿಗರಿಗೂ ಇರೋ ಬಾದರಾಯಣ ಸಂಬಂಧದ ಬಗ್ಗೆ ಸ್ವಲ್ಪ ಬೆಳಕು ಚೆಲ್ತೀರಾ?

-ಗುರುಪ್ರಸಾದ

Anonymous ಅಂತಾರೆ...

ಹಾಗೇನೇ... ಕರ್ನಾಟಕ ಹೈಕೋರ್ಟಿನ ಏಕಸದಸ್ಯ ಪೀಠ ಕನ್ನಡಮಾಧ್ಯಮವನ್ನು ಮಕ್ಕಳ ಮೇಲೆ “ಹೇರುವುದು” ತಪ್ಪು ಎಂದು ತೀರ್ಪುಕೊಟ್ಟಿದೆಯಂತೆ. ಈ “ಹೇರಿಕೆ” ಎನ್ನುವ ಪದದ ಮೇಲೂ ಸ್ವಲ್ಪ ಬೆಳಕು ಚೆಲ್ಲಿ.

-ಗುರುಪ್ರಸಾದ

Anonymous ಅಂತಾರೆ...

sanmanya shankar bidari saahebaru eeka pakshiyavaagi kattina kaanoonu tegedukolloo modalu swalpa yoochisabeeku.

clangorous ಅಂತಾರೆ...

Maanya Mukhyamantri Yediyurappa, Kannada Pradhikarada adhyaksha Mu Ma Chandru haagu police aayukta shankara bidari avarigella nanna bahiranga savalenendare... ee kannada naama phalakagaLa niyamavannu modalu karnatakadalle iro BIAL ( antarasthriya vimaana nildaNa )nalli kannada da anushtaNA madalu takkattidya ? haage vimana nildaNakke hoguva raasthriya heddari yalli maarga soochaka ondu raja roshavaagi english haagu hindiyallide.. idanna badalaisalu takkattidyaa ?.. hange nodtha hodare bengaLurinalli iro yesto jaahirathugalalli kannada anushTaNa madalu takkttidya ?. ivaru madolla madthivi annorige bidolla... kanoonu annodu bari pusthakada badne kai agirade...anushTanakke taruva takkattu irbekalvaa ?

Anonymous ಅಂತಾರೆ...

ಗುರುಪ್ರಸಾದ್ ಅವರೇ,
ಮಾರ್ಕೋಪೋಲೋ ಅನ್ನೋದು ಟಾಟಾ ಮೋಟಾರ್ಸ್‌ನವರು ತರುತ್ತಿರುವ ಹೊಸ ’ರೆಡಿ’ಮೇಡ್ ಬಸುಗಳ ಹೆಸರು. ಈ ಹೆಸರು ಅವರು ಬಸ್ ನಿರ್ಮಿಸಲು ಒಪ್ಪಂದ ಮಾಡಿಕೊಂಡಿರೋ ವಿದೇಶೀ ಸಂಸ್ಥೆಯದ್ದು. ಇವುಗಳ ತಯಾರಿಕೆ ಆಗುತ್ತಿರುವುದು ಧಾರವಾಡದಲ್ಲಿ. ಚಿಕ್ಕ ಮ್ಯಾಕ್ಸಿ ಕ್ಯಾಬ್‌ಗಳಿಂದ ಹಿಡಿದು ವೋಲ್ವೋ ಮಾದರಿಯ ಪ್ರಯಾಣಿಕ ವಾಹನಗಳೂ ಇಲ್ಲಿ ತಯಾರಾಗಲಿದೆ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails