ಬೆಂಗಳೂರು ಕನ್ನಡಿಗರದ್ದಲ್ಲ ಅಂತಾ ಸಾರಕ್ಕೆ ಮುಂದಾಗಿರೋ ಹಬ್ಬ!



"ಬೆಂಗಳೂರು ಕನ್ನಡಿಗರದ್ದಲ್ಲ. ಇದು ಕಾಸ್ಮೋಪಾಲಿಟಿನ್ ಸಿಟಿ. ಇಲ್ಲಿ ಬೇರೆ ಬೇರೆ ಭಾಷೆಯೋರೇ ಇರೋದು... ಇದಕ್ಕೆ ತನ್ನದೇ ಆದ ಸಂಸ್ಕೃತಿ ಅನ್ನೋದೇನೂ ಇದ್ದಂಗಿಲ್ಲ... ಬೆಂಗಳೂರಿನ ಸಂಸ್ಕೃತಿ ಅನ್ನೋದು ಚೌ ಚೌ ಸಂಸ್ಕೃತಿ... ಇಲ್ಲಿ ಬಹುಭಾಷೆಗಳಿದ್ದು ಕನ್ನಡ ಸತ್ತು ಹೋಗಿದೆ... ಇಲ್ಲಿ ಕನ್ನಡಿಗರು ಅಲ್ಪಸಂಖ್ಯಾತರು... ಬೆಂಗಳೂರು ಕನ್ನಡಿಗರಿಗೆ ಸೇರಿದ್ದಲ್ಲಾ... ಇಡೀ ಭಾರತದ್ದು... ಆದ್ದರಿಂದ ಇದ್ನ ಕೇಂದ್ರಾಡಳಿತ ಪ್ರದೇಶ ಮಾಡಿ" ಅಂತ ಬೊಗೊಳೋ ಮನೆಹಾಳು ಮುಖಕ್ಕೆ ಮೇಕಪ್ ಹಚ್ಚಿ, ರಂಗಪ್ರವೇಶ ಮಾಡ್ಸುದ್ರೆ ಆ ಪ್ರಹಸನದ ಹೆಸರನ್ನ ಬೆಂಗಳೂರು ಹಬ್ಬ ಅನ್ನಬಹುದು ಜನಾ ಬೀದಿಬೀದಿಲಿ ಮಾತಾಡ್ತಾ ಇದಾರೆ ಗುರು!
ಬೆಂಗಳೂರು ಹಬ್ಬ ಅನ್ನೋ ವಿಶ್ವಭ್ರಾತ್ವತ್ವ!
ಬೆಂಗಳೂರು ಹಬ್ಬ ಅಂದ್ರೆ ಬೆಂಗಳೂರಿನ ಸಂಸ್ಕೃತಿ, ಕನ್ನಡಿಗರ ಕಲೆಗಳನ್ನು ಪ್ರದರ್ಶಿಸಿ, ಇಲ್ಲಿನ ಕಲಾವಿದರಿಗೆ ವೇದಿಕೆ ಒದಗಿಸಿ ಕೊಡೋ, ಅಂತಹ ಕಾರ್ಯಕ್ರಮಗಳ ಮೂಲಕ ಜಗತ್ತಿನ ಜನರನ್ನು ಸೆಳೆಯೋ ಪ್ರವಾಸೋದ್ಯಮಕ್ಕೆ ಪೂರಕವಾಗಿರೋ ಹಬ್ಬ ಅಂತ ಯಾರಾದ್ರೂ ಅಂದ್ಕೊಂಡ್ರೆ ಅದು ದೊಡ್ಡ ಮುಠ್ಠಾಳತನ ಆಗುತ್ತೆ. ಇದು ಬೆಂಗಳೂರಿನ ಜನರಿಗೆ ಪ್ರಪಂಚದ ಬೇರೆ ಬೇರೆ ಪ್ರದೇಶದ ಕಲೆಗಳನ್ನು ತೋರಿಸೋ ಉಲ್ಟಾ ಹಬ್ಬ. ಇವರು ನಡೆಸೋ ಕಾರ್ಯಕ್ರಮಗಳ ಬಗ್ಗೆ ನಾಡಿನ ಕಲಾವಿದರುಗಳು ಅಸಹನೆ ತೋರುಸ್ತಾನೆ ಇದಾರೆ... ಕಳೆದ ವರ್ಷ ಪ್ರವೀಣ್ ಗೋಡ್ಖಿಂಡಿಯವರು ದನಿ ಎತ್ತುದ್ರು... ಈ ಬಾರಿ ಅಶ್ವತ್ ಅವರ ಮುಂದಾಳ್ತನದಲ್ಲಿ ಹಲವಾರು ಕಲಾವಿದರು ಪ್ರತಿಭಟಿಸಿದ್ದಾರೆ. ಒಟ್ನಲ್ಲಿ ಈ ಕಾರ್ಯಕ್ರಮ ಕನ್ನಡತನಾನ ಸದಾ ಕಡೆಗಣುಸ್ತಾನೆ ಬಂದಿರೋದಂತು ಎಷ್ಟು ಸತ್ಯಾ ಅನ್ನಕ್ಕೆ ಬೆಂಗಳೂರು ಹಬ್ಬದ ಕಾರ್ಯಕ್ರಮಗಳ ಪಟ್ಟಿ ನೋಡುದ್ರೆ ಸಾಕು. ಇದರಲ್ಲಿ ಕನ್ನಡದ ಸಂಸ್ಕೃತಿ ಸಾರೋ, ಕನ್ನಡಿಗ ಕಲಾವಿದರು ನಡೆಸಿಕೊಡೊ ಕಾರ್ಯಕ್ರಮಗಳು, ಕನ್ನಡದ ಕಾರ್ಯಕ್ರಮಗಳು ಭಾಳಾ ಕಮ್ಮಿ ಅನ್ನೋದ್ನ ಕಂಡು ಇದ್ಯಾಕ್ರಿ ಹೀಗೆ ಅಂತೇನಾದ್ರೂ ಕೇಳುದ್ರೆ ನೀವು ಸಂಕುಚಿತ ಬುದ್ದಿಯೋರು, ಬೆಂಗಳೂರು ಉದ್ಧಾರ ಆಗಬೇಕೂ ಅಂದ್ರೆ ಇಂತಾ ಕಾರ್ಯಕ್ರಮಗಳೇ ಇರಬೇಕು... ಕನ್ನಡ ಕನ್ನಡಿಗ ಅನ್ನೋ ಸಂಕುಚಿತಯಿಂದ ಬೆಂಗಳೂರಿನ ಹೆಸರು ಕೆಡುತ್ತೆ, ಕನ್ನಡಿಗರ ಇಮೇಜ್ ಕೆಡುತ್ತೆ...ಈ ಹಬ್ಬ ವಿಶ್ವ ಭ್ರಾತ್ವತ್ವ ಸಾರೋದಕ್ಕೆ ಬೇಕಿರೋದು ಅಂತಾ ಬಾಯಿ ಮುಚ್ಚಿಸಕ್ಕೆ ಮುಂದಾಗ್ತಾರೆ.
ಸ್ವತಂತ್ರಕ್ಕೂ ಮಿತಿ ಇಲ್ವಾ?
ಇವ್ರು ಖಾಸಗಿಯವರು, ಯಾವ ಕಾರ್ಯಕ್ರಮಾ ಬೇಕಾದ್ರೂ ಮಾಡ್ಕೊಬಹುದು, ಇದು ಅವರ ಸಾಂವಿಧಾನಿಕ ಹಕ್ಕು ಅನ್ನೋರಿಗೇನೂ ಕೊರತೆ ಇಲ್ಲ. ಸ್ವತಂತ್ರ ಇದೆ ಅಂತಾ ನಾಡಿನ ಬಗ್ಗೆ ಇಡೀ ಪ್ರಪಂಚಕ್ಕೆ ತಪ್ಪು ತಪ್ಪು ಸಂದೇಶ ರವಾನಿಸೋ ಮನೆಹಾಳು ಕೆಲಸ ಮಾಡೋ ಅಷ್ಟು ಸ್ವಾತಂತ್ರ ಇರಬಹುದಾ ಗುರು? ಇವರ ಈ ಘನಂದಾರಿ ಕೆಲಸಕ್ಕೆ ಬೆಂಗಳೂರು ಹಬ್ಬಾ ಅನ್ನೋ ಹೆಸರನ್ನು ಇಡಬೇಡಿ ಅಂತ ಹೇಳಬೇಕಾಗಿದ್ದ ಸರ್ಕಾರಾನೆ ಜನರ ತೆರಿಗೆ ದುಡ್ಡನ್ನು ಬೊಕ್ಕಸದಿಂದ ಮೊಗೆಮೊಗೆದು ಕೊಡ್ತಿರೋದನ್ನು ಊರ ತಾಯಿ ಅಣ್ಣಮ್ಮ ಮೆಚ್ಚತಾಳಾ... ಗುರು?

4 ಅನಿಸಿಕೆಗಳು:

Anonymous ಅಂತಾರೆ...

ಕನ್ನಡಿಗರು ಕಷ್ಟ ಪಟ್ಟು ದುಡಿಯೋ ಹಣವನ್ನು ಇ೦ತಹ ಮನೆಹಾಳು ಕೆಲಸಕ್ಕೆ ಬಳಸಬಾರದು. ಈ ಹಬ್ಬವನ್ನು ಇನ್ನುಮು೦ದೆ ನಡೆಯಲು ಬಿಡಬಾರದು. ನಡೆದರೂ ಬರೀ ನಮ್ಮ ಸ೦ಸ್ಕೃತಿಯನ್ನು ಮಾತ್ರ ಪ್ರದರ್ಶಿಸಬೇಕು.

Anonymous ಅಂತಾರೆ...

ನೀವು ಹೇಳುವುದು ಸರಿ. ಆದರೆ ಕಾರ್ಯಕ್ರಮಗಳನ್ನು ನಡೆಸುವವರು ಕಿವುಡರಿರಬೇಕು. ಸರ್ಕಾರಕ್ಕೂ ಕಿವಿ ಇಲ್ಲಾ. ಹಂಪಿ ಉತ್ಸವಕ್ಕೆ ಆಶಾ ಭೋಸ್ಲೆಯವರನ್ನು ಕರೆಸಿ ಅವರಿಂದ ಹಿಂದಿ ಹಾಡುಗಳನ್ನು ಹಾಡಿಸಿದರು. ಸ್ವಲ್ಪ ವರುಷ ಹೋಗಲಿ ಕರ್ನಾಟಕದಲ್ಲಿ ಕನ್ನಡಿಗರಿಲ್ಲಾ.

ಪುಟ್ಟ PUTTA ಅಂತಾರೆ...

ನಮ್ಮ ಮೂರ್ಖ ಮಂತ್ರಿ ಯದ್ಯೂರಪ್ಪ ಇನ್ನೂ ೫ ವರ್ಷಗಳಲ್ಲಿ ಕರ್ನಾಟಕವನ್ನುಏನು ಮಾಡಲಿದ್ದಾನೆಂಬ ಭಯ ನನ್ನನ್ನು ಕಾಡುತಿದೆ. ವ್ಯರ್ಥವಾಗಿ ನಮ್ಮ ಕಾಜಾನೆಯನ್ನು ಖಾಲಿ ಮಾಡುತಿದ್ದಾನೆ. ಬಿಹಾರಕ್ಕೆ ೧೦ ಕೋಟಿ, ಬೆಂಗಳೂರು ಹಬ್ಬಕ್ಕೆ ೨ ಕೋಟಿ. ಇವನ ಮಂತ್ರಿ ಮಂಡಲದಲ್ಲಿ ತೆಲುಗರದೇ ದರ್ಬಾರು. ಸರಿಯಾಗಿ ಕನ್ನಡ ಮಾತನಾಡಲು ಬಾರದ ಶ್ರೀ ರಾಮುಳು ಭಾವಿ ಮುಖ್ಯಮಂತ್ರಿಯಂತೆ. ಟೋಪಿ ಸುಬ್ರಮನ್ಯ ಬೆಂಗಳೂರನ್ನೇ ಲೂಟಿ ಮಾಡುತಿದ್ದಾನೆ. ದೇವರೇ ಕಾಪಾಡಬೇಕು ಕರ್ನಾಟಕವನ್ನು!!

Anonymous ಅಂತಾರೆ...

Guru... ee page nalli kannadadalle type maaDalaaguvante ennadru maaDakkagalve? aadre dayvittu maadi..

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails