ಬಿಜೇಪಿಯೋರಿಗೆ "ಸಾರೇ ಜಹಾಸೆ ಅಚ್ಛಾ..." ಕನ್ನಡ ಜಾನಪದವಂತೆ!


ಶ್ರೀ ಶ್ರೀ ಶ್ರೀ ಡಾ. ಯಡ್ಯೂರಪ್ಪನೋರ ಮುಂದಾಳ್ತನದ ಭಾರತೀಯ ಜನತಾ ಪಕ್ಷದ ಘನ ರಾಜ್ಯ ಸರ್ಕಾರ ಮಾಡ್ತಿರೋ ಈ ಘನಕಾರ್ಯ ನೋಡ್ರಪ್ಪೋ... ಮೊನ್ನೆ ಜನವರಿ 10 ಮತ್ತು 11ನೇ ತಾರೀಕು ಬೆಂಗಳೂರಿನ ಪದ್ಮನಾಭನಗರದಲ್ಲಿ ಜಾನಪದ ಜಾತ್ರೆನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಕಡೆಯಿಂದ ನಡ್ಸುದ್ರು. ಈ ಕಾರ್ಯಕ್ರಮಾನ ರೂಪಿಸಿದೋರು ಮಾನ್ಯ ರಾಜ್ಯ ಸಾರಿಗೆ ಸಚಿವ ಅಶೋಕ್ ಅವ್ರು ಅಂತ ಅಲ್ಲಿ ಆಗಾಗ ಮೈಕಲ್ಲಿ ಅನೌನ್ಸ್ ಮಾಡ್ತಿದ್ರು... " ಇದೇನ್ರಣ್ಣಾ... ಜಾನಪದ ಜಾತ್ರೆ ಮೊದಲು ಮಾಡಿದ್ದು ಕುಮಾರಸ್ವಾಮಿಗಳಲ್ವಾ? ಅದ್ನ ಲಾಲ್ ಬಾಗಿನಲ್ಲಿ ಮಾಡ್ತಿದ್ರಲ್ವಾ?" ಅಂತಾ ಕೇಳ್ಬೇಡಿ. "ಆ...... ಜಾನಪದ ಜಾತ್ರೇನೆ ಬೇರೆ. ಈ..... ಜಾನಪದ ಜಾತ್ರೇನೆ ಬೇರೆ. ಅದು ದೇಶ ಕಡೇದು ಅಂತಾ ಸಾರ್ತಿತ್ತು...ಇದು ದೇಶ ಮೊದಲು ಅಂತಾ ಸಾರ್ತಿದೆ" ಅನ್ತಾ ಇದಾರೆ ಈ ಬಿಜೆಪಿಗಳು.
ಜಾನಪದ ಅಂದ್ರೇ....
ಜಾನಪದ ಅಂದ್ರೆ ಡೊಳ್ಳು, ಕಂಸಾಳೆ, ಕರಡಿ ಕುಣಿತಗಳು ಅಂತ ನೀವಂದ್ಕಂಡಿದ್ರೆ ಆವತ್ತಿನ ಕಾರ್ಯಕ್ರಮ ನೋಡಿ ದೇವ್ರಾಣೆಗೂ ಎಚ್ಚರ ತಪ್ಪಿ ಬೀಳ್ತಿದ್ರಿ. ಮೊದಲಿಗೆ "ವಂದೇ ಮಾತರಂ" ಹಾಡಿಗೆ ಗೀತ ನೃತ್ಯ. ಇನ್ಮೇಲೆ ಎಲ್ಲಾ ಸರ್ಕಾರಿ ಕಾರ್ಯಕ್ರಮದಲ್ಲೂ ವಂದೇಮಾತರಂ ಹಾಡಲೇ ಬೇಕು ಅನ್ನೋದು ಮುಖ್ಯಮಂತ್ರಿಗಳ ಆಜ್ಞೇನೋ ಏನೋ ಅಂದ್ಕೊಂಡ್ರಾ? ಇಲ್ಲಿಗೆ ಹತ್ತು ನಿಮಿಷ ಢಮಾರು. ಆಮೇಲಿಂದು "ಮಾ ತುಝೇ ಸಲಾಂ..." ಹಾಡಿನ ನೃತ್ಯ ಕಾರ್ಯಕ್ರಮ... ಇಲ್ಲಿಗೆ ಇನ್ನೊಂದ್ ಹತ್ ನಿಮಿಷ. ಆಮೇಲೆ "ಸಾರೇ ಜಹಾಸೆ ಅಚ್ಛಾ... ಹಿಂದೂಸ್ತಾನ್ ಹಮಾರಾ..." ಅನ್ನೋ ಹಾಡು, ಮತ್ತದಕ್ಕೆ ನೃತ್ಯ. ಈ ಹಾಡಿನ ಕಡೆಗೇ "ಹಿಂದೀ ಹೈ ಹಮ್, ಹಿಂದೀ ಹೈ ಹಮ್..." ಅಂತ ಹಾಡ್ತಿದ್ದಾಗಂತೂ ಅಲ್ಲಿ ಸೇರಿದ್ದ ಜನಗಳ ಕಣ್ಣಿಂದ ಧಾರಾಕಾರವಾಗಿ ನೀರು ಉಕ್ಕುಕ್ಕಿ ಕಾವೇರಿಯಾಗಿ, ಥೂ ಶಾಂತಂ ಪಾಪಂ! ಗಂಗೆಯಾಗಿ ಹರೀತಾ ಇತ್ತು. ಇದೇನು ದೇಶಪ್ರೇಮಕ್ಕೋ ಜಾನಪದ ಅನ್ನೋದರ ಹೊಸ ಅರ್ಥಕ್ಕೋ ಗೊತ್ತಾಗ್ಲಿಲ್ಲ ಗುರು!
"ಬುದ್ಧಿಜೀವಿ" ಯುವಸಂಸದರ ನಲ್ನುಡಿ!
ಸಮಾರೋಪ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಒಬ್ಬ ಮಹನೀಯರು ಅಂದಂತೆ "ಬುದ್ಧಿಜೀವಿ ಯುವಸಂಸದ" ಶ್ರೀ ಅನಂತಕುಮಾರ್ ಅವರು ಮಾತಾಡುದ್ರು. "ನನ್ನ ಪ್ರೀತಿಯ ಪ್ರಜೆಗಳೇ, ಮೊದಲಿಗೆ ನಡೆದ ದೇಶಭಕ್ತಿ ಗೀತೆಗಳ (ಅದು ಹಿಂದೀಲಿ/ ಸಂಸ್ಕೃತದಲ್ಲಿದ್ದರೆ ಮಾತ್ರಾ!) ಕಾರ್ಯಕ್ರಮ ನೋಡ್ತಾ ನೋಡ್ತಾ ನನ್ನ ಎದೆ ತುಂಬ್ಕೊಂಡು ಬಂತು. ನೀವೆಲ್ಲಾ ಏನಪ್ಪಾ ಅರ್ಥ ಮಾಡ್ಕೊಂಬೇಕೂ ಅಂದ್ರೆ... ’ದೇಶ ಮೊದಲು, ಜಾನಪದ ಆಮೇಲೆ’ " ಅಂತಾ ಕರೆ ಕೊಟ್ರು.
ಅಲ್ಲಾ ಗುರು! ಜನ, ಜನಪದ ಇದೆಲ್ಲದರಿಂದಲೇ ದೇಶ ಅನ್ನೋ ಪರಿವೆಯೇ ಬೇಡ್ವಾ ಇವರಿಗೇ ಅಂತ. ಇಲ್ಲಿ ಒಂದುಕ್ಕಿಂತ ಇನ್ನೊಂದು ಮೊದಲು ಅನ್ನೋ ಲಾಜಿಕ್ಕೇ ಓಳಲ್ವಾ? ದೇಶ ಮೊದಲು ಅನ್ನೋದ್ರ ಅರ್ಥ "ಇಲ್ಲೀಗಂಟಾ ನೀವೆಲ್ಲಾ ಇನ್ಯಾವ್ದನ್ನೋ ದೇಶಕ್ಕಿಂತ ಮೊದಲು ಅಂತಿದೀರೀ, ಆ ಇನ್ಯಾವ್ದೋ ಇನ್ಮೇಲೆ ’ಆಮೇಲೆ’ ಅಂತಾ ತಾನೆ? ಈ ಇನ್ಯಾವ್ದೋ ಯಾವ್ದಪ್ಪಾ ಅಂದ್ರೆ ಅನಂತಕುಮಾರ್ ಅವ್ರು ಕನ್ನಡ-ಕರ್ನಾಟಕ-ಕನ್ನಡಿಗ ಅಂತಾ ಅಂದಾರೇನೋ... ಆದ್ರೆ ಈ ಇನ್ಯಾವ್ದೋ ಅನ್ನೋದ್ರ ಪಟ್ಟಿಗೆ ಈಗ ನಮ್ಮ ನಾಡಿನ ಜಾನಪದ ಕಲೆಗೋಳೂ ಸೇರ್ಕಂಬುಡ್ತಲ್ಲಾ ಗುರು... ಒಂದು ಮಜಾ ಅಂದ್ರೆ ಈ ಬಿಜೇಪಿಯೋರು ಕಾಪಾಡ್ತೀವಿ ಕಾಪಾಡ್ತೀವಿ ಅಂತಿರೋ ಹಿಂದುತ್ವ ಅನ್ನೋದ್ರ ಬೇರು ನಮ್ಮ ಜಾನಪದದಲ್ಲೇ ಅಲ್ವಾ ಇರೋದು? ಪಾಪ, ಪೊಳ್ಳು ರಾಷ್ಟ್ರೀಯತೆಯ ಕನ್ನಡಕ ಹಾಕ್ಕೊಂಡಿರೋ ಬಿಜೆಪಿಯೋರ ಕಣ್ಣಿಗೆ ಇವೆಲ್ಲಾ ಕಾಣೋದಾದ್ರೂ ಹೇಗೆ? ಅಲ್ವಾ ಗುರು!

14 ಅನಿಸಿಕೆಗಳು:

Anonymous ಅಂತಾರೆ...

ಹಂಪಿ ಉತ್ಸವದಲ್ಲಿಉ ಇವರೆಲ್ಲ ಮಾಡಿದ ಅಧ್ವಾನೋತ್ಸವ ನೋಡಿದ ಮೇಲೆ ಇದ್ರಲ್ಲಿ ಯಾವ ಆಶ್ಚರ್ಯನೂ ಬಿಡಿ. ನಂಗೆ ಬಿಜೆಪಿ ಮೇಲೆ ಯಾವ ನಂಬಿಕೆನೂ ಇಲ್ಲ. ಯೆಡ್ಯೂರಪ್ಪ ಬೆಂಗಳೂರಲ್ಲಿರೋ ಮರಗಳನೆಲ್ಲ ಕಡಿಯೋದೆ ಅಭಿವೃಧ್ಧಿ ಅಂಥ ಅನ್ಕೊಂಡಿರ್ಬೇಕು. ಅನಂತ್ ಕುಮಾರ್ಗೆ ಕನ್ನಡ ಕರ್ನಾಟಕ ಅಂಥ ಹೇಳಕ್ಕಿಂಥ ಡೆಲ್ಲಿ ಹಿಂದಿ ಅಂಥ ಹೇಳೋದೇ ಜಾಸ್ತಿ ಆಗಿದೆ..

Anonymous ಅಂತಾರೆ...

ಬರೀ ಪೀಠಿಕೆಯಲ್ಲೆ ಕಥೆ ಮುಗುಸ್ ಬುಟ್ಯಲ್ಲಾ ಗುರು? ಇವೆಲ್ಲ ಆದ್ಮೇಲೆ ಏನ್ ಆಯ್ತು ಅದ್ ಹೇಳು ಗುರು! ಕಾರ್ಯಕ್ರಮದಲ್ಲಿ ಬೇರೆ ಏನ್ ಇತ್ತು ಅದ್ರ್ ಬಗ್ಗೆನೂ ವೊಸಿ ಏಳು ಗುರು? ಇಲ್ಲ ಅಂದ್ರೆ ಲಾಜಿಕ್ ಇಲ್ಲದ ಮುಕ್ತಾಯ (conclusion) ಆಯ್ತದೆ ಗುರು ನಿಂದು! context ಕಿತ್ ಹಾಕಿ ಯಾವದನ್ನ ಬೇಕಾದ್ರೂ ಗಬ್ ಯೆಬ್ಬುಸ್ ಬಹುದು ಗುರು. ನಿಮ್ಗೂ media ಅವ್ರ್ಗೂ ವ್ಯತ್ಯಾಸನೇ ಇಲ್ವಾ ಗುರು, ಬರೀ ತಪ್ ಕಂಡ್ ಹಿಡ್ಯೋದೆ ಕೆಲ್ಸಾನಾ? ತಪ್ ಕಂಡ್ ಹಿಡ್ಯೋಕ್ಕೆ ಬುರ್ಡೆ ಬೇಕಿಲ್ಲ, ಕಣ್ ಇದ್ರೆ ಸಾಕು ... ದಿನಾ ಏನಾದ್ರೂ Sensational ವಿಷ್ಯ ಹುಡುಕ್ತಾ, ಯಾವ್ದೋ ಸಿಕ್ಕಿದ್ ಟಾಪಿಕ್ ನಾ ಮಸಾಲಾ ಮೂವಿ ಮಾಡೋ ಪ್ರಯತ್ನದಲ್ಲೆ ಇರೋದು ಸರಿ ಅಲ್ಲ ಗುರು ... ಜೊತೆಗೆ, ಯಕ್ಕಾ ಮಕ್ಕ political agenda ಇಟ್ಕೊಂಡ್ ಇರೋ ಹಾಗ್ ಇದೆ ತಮ್ದು, ಏನ್ ಗುರು?

ಅವ್ರು "ಹಾಗ್ ಹೇಳ್ತಾರೆ" ಅಂತ ನಿಮ್ conclusion, ಹಂಗಾದ್ರೆ ನೀನ್ ಹೇಳೋದು ರಾಜ್ಯ/ಭಾಷೆ ನೋಡ್ಕೊಳೀ ದೇಶಕ್ಕೆ ಗೋಲಿ ಮಾರ್ (ಓಹ್ ಇವು ಹಿಂದಿ ಪದಗಳಲ್ವೆ?) ಅಂತಾನಾ? ದೇಶ ಇಲ್ಲದ ರಾಜ್ಯ ಎಲ್ಲಿ ಗುರು? ಬರೀ ಹಿಂದಿ, ಸಂಸ್ಕ್ರುತ ಅಂತ ನೋಡ್ ಬ್ಯಾಡ ಗುರು, ಅದ್ರಲ್ ಇರೋ ಭಾವ ನೋಡು .. ಬಾಷೆ ಇರ್ಲೀ ಆದ್ರೆ ಭಾವಕ್ಕೆ ಬೆಂಕಿ ಹಾಕಿ ಸುಡೋಣ ಅಂತೀಯಾ ಗುರು? ಈಗ ನಮ್ ದೇಶಕ್ಕೆ ಬೇಕಿರೋದು integrative/constructive outlook, ಈ ತರಹದ microlevel, short-sighted, disintegrating perspectives ಅಲ್ಲ ಗುರು ... ನಿಂದೂ ನಿಮ್ ಲಾಜಿಚ್ ಪ್ರಕಾರ ಒಂದ್ ತರ integrative/constructive outlook ಅನ್ ಬಹುದು, ಅದು ಕೂಪ ಮಡೂಕ ನ್ಯಾಯ (ತಪ್ಪಾಯ್ತು ಗುರು, ಭಾವಿ-ಕಪ್ಪೆ ನೀತಿ) ಅಲ್ವಾ ಗುರು?

ಇರ್ಲೀ, ಹೀಗೆ ಬರ್ತಾ ಇರ್ಲೀ, ಸ್ವಲ್ಪ crticismಗೂ ದಾರಿ ಮಾಡ್ಕೊಳೀ ;)

Anonymous ಅಂತಾರೆ...

ಗುರು,
ನಿನ್ನೆ ನಮ್ಮ ಮನೆ ಹತ್ರದ ಪಾರ್ಕ ಅಲ್ಲಿ ಜನಪದ ಉತ್ಸವ ಅದು ಇದು ಅಂತೆಲ್ಲ ಸರ್ಕಾರದ ದುಡ್ಡಲ್ಲೇ ಕಾರ್ಯಕ್ರಮ ಇತ್ತು. ಏನಪ್ಪ ಅಂತಾ ನೋಡೊಕೆ ಹೋದ್ರೆ ಜನಪದಾನೂ ಇಲ್ಲ, ಮಣ್ಣು ಇಲ್ಲ. ಬರೀ ಎ.ಅರ್.ರಹಮಾನ್ ನ ವಂದೇ ಮಾತರಂ ಹಾಡಿಗೆ, ಕೆಲ ಹಿಂದಿ ರಾಷ್ಟ್ರ ಭಕ್ತಿ ಗೀತೆಗೆ ಮಕ್ಕಳನ್ನು ಕುಣಿಸ್ತಾ ಇದ್ರು. ಏನ್ ವಿಚಿತ್ರಾನೋ, ಬಿ.ಜೆ.ಪಿಯವರು ನಿಧಾನಕ್ಕೆ ಕರ್ನಾಟಕದ ಕಲೆ, ಸಂಗೀತ, ಸಂಸ್ಕೃತಿ ಎಲ್ಲವನ್ನೂ ಹಿಂದಿಮಯ ಮಾಡಿ ಬಿಡ್ತಾರೆ ಅನ್ನೋ ಅತಂಕ ಆಯ್ತು ಗುರು. ನನ್ನ ಮಗಳು ಮನೆಗೆ ಬರ್ತಾ, ವಂದೇ ಮಾತರಂ ಅಂತಾ ಆ ರೆಹಮಾನ್ ತರಹಾನೇ ಕಿರುಚತಾ ಇದ್ಲು. ನೋಡಿ ತಲೆ ಕೆಟ್ಟೊಯ್ತು.

Anonymous ಅಂತಾರೆ...

ಹಿ೦ದಿ ಜಾತ್ರೆ ನಡೆಸಿದೋರ್ ಬಾಯ್ಗೆ ಒಸಿ.... ಥೂ!
ಕನ್ನಡಿಗರು ಒಗ್ಗಟ್ಟಿನಿ೦ದ ಕೂಡದಿದ್ದಲ್ಲಿ, ಖ೦ಡಿತ ಕನ್ನಡಿಗರಿಗೆ ಉಳಿಗಾಲವಿಲ್ಲ. ಅಲ್ಲಾ ಕರ್ನಾಟಕದ ಕನ್ನಡಿಗರ? ಸರ್ಕಾರದಿ೦ದಲೇ ಹಿ೦ದಿ ಹೇರಿಕೆ ನಡೆಯುತ್ತಿದೆಯಲ್ಲಾ?

ಇವೆಲ್ಲದಕ್ಕೂ ಪರಿಹಾರ ಒ೦ದೆ, ಅದು ಒಗ್ಗಟ್ಟು ಮಾತ್ರ.

Anonymous ಅಂತಾರೆ...

ಪ್ರಿಯ ಅನಾನಿಮಸ್ಸು,

ಅದ್ಯಾಕ್ ಸ್ವಾಮಿ ಹಂಗೆ ಮೈಯೆಲ್ಲಾ ಪರಚ್ಕೊತಿದೀರಾ? ಮುಂದೇನಿತ್ತು ಅನ್ನೋದು ಅದೆಂಗೆ ಪ್ರಸ್ತುತ ಇಲ್ಲಿ? ಕಾರ್ಯಕ್ರಮಾನ ಜಾನಪದ ಜಾತ್ರೆ ಅಂದಾಗ ಅದ್ರಲ್ಲಿ ಏನೇನು ಇರಬಾರದ್ದು ಇತ್ತು ಅನ್ನೋದ್ರ ಬಗ್ಗೆ ನಮ್ ಗುರು ಬರ್ದಿರೋದು. ಈ ಹಿಂದೇನೂ ಜಾನಪದ ಜಾತ್ರೆ ನಡುದ್ವು, ಆದ್ರೆ ಅವು ಬರೀ ಜಾನಪದ ಜಾತ್ರೆಗಳೇ ಆಗಿದ್ದವು. ಹೀಗೆ ತಮ್ಮ ರಾಜಕೀಯ ಅಜೆಂಡಾನ ತುರುಕೋ ಕೀಳುತನಾ ಅದರಲ್ಲಿ ಇರಲಿಲ್ಲ. ಕಾರ್ಯಕ್ರಮದ ಆಯೋಜನೆ ಮಾಡಿದವರಿಗೂ ಇದರ ಬಗ್ಗೆ ಅಸಮಾಧಾನ ಇತ್ತು, ಆದ್ರೇನು ಮಾಡೋದೂ ಮಂತ್ರಿಗಳು ಹೇಳಿದ ಹಾಗೆ ಮಾಡ್ತೀವಿ ಅಂತಿದ್ರು (ನಾಗರಾಜ ಮೂರ್ತಿಗಳು).
ಈ ಬರವಣಿಗೆಗೆ ಲಾಜಿಕ್ ಇರೋ ಮುಕ್ತಾಯಾನೆ ಇದ್ಯಲ್ಲಾ ಗುರು! ಇದರಲ್ಲಿರೋ ಲಾಜಿಕ್ಕು ಜಾನಪದ ಅಂದ್ರೆ ಸಾರೆ ಜಹಾಸೆ ಅಚ್ಚಾ ಅಲ್ಲಾ ಅನ್ನೋದು. ಸುಮ್ನೆ ಬೇಡದ ಕಡೆಯೆಲ್ಲಾ ತಮ್ ಅಜೆಂಡಾ ಪೋಣ್ಸೋದು ತಪ್ಪು ಅನ್ನೋದೇ ಇದರ ಕಂಕ್ಲೂಜನ್ನು. ಅಂದ ಹಾಗೆ ಏನ್ ಗುರು ಗೆ ಪೊಲಿಟಿಕಲ್ ಅಜೆಂಡಾ ಇದೆ ಅಂತಿದೀರಾ.. ವೆರಿ ಗುಡ್. ’ಏನ್ ಗುರು’ ಪ್ಲೀಸ್ ಪ್ರೊಸೀಡ್. ಇವತ್ತಿನ ರಾಜಕಾರನದಲ್ಲಿರೋ ಕೊರತೇನಾ ನಿಮ್ಮ ಚಿಂತನೆಗಳು ತುಂಬಲಿ. ಅವರು ಹಾಗೆ ಹೇಳ್ತಾರೆ ಅಂದ ಕೂಡ್ಲೇ ಇವರು ಹೀಗೆ ಹೇಳ್ತಾರೆ ಅಂತಾ ಯಾಕಂದ್ರೀ ಸಾರ್. ಇವರು ಏನು ಹೇಳ್ತಿದಾರೆ ಅಂತಾ ಮೊದಲು ಸರಿಯಾಗಿ ಓದಿದೀರಾ? ಸುಮ್ನೆ ನೀನು ತಾನು ಅಂತಾ ಮಾತಾಡಿಬಿಟ್ರೆ ವಾದಾ ಮಾಡಿದ ಹಾಗಾಗಲ್ಲ.
ತನ್ನತನ ಅನ್ನೋದು ಕೂಪ-ಮಂಡೂಕ(ಮಡೂಕ ಅಲ್ಲ) ಅಂತಾ ಯಾಕಂತೀರಾ ಸಾರ್.
ಬಿಜೆಪಿಯವರ ಬೂಟಾಟಿಕೆ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ ನೋಡಿ :

ನಿಮ್ಮ ನಾಡು, ನುಡಿಗಳನ್ನು ಉಳಿಸಿಕೊಳ್ಳೋದರ ಬಗ್ಗೆಯೇ ನಿಮಗೆ ಕಾಳಜಿ ಇಲ್ಲದಿದ್ರೆ ಇಡೀ ಭಾರತದ ಬಗ್ಗೆ ಎಂಥಾ ಕಾಳಜಿ ಇದ್ದೀತು. ಅಂದಿನ ಕಾರ್ಯಕ್ರಮದಲ್ಲಿ ನಾನೂ ಇದ್ದೆ. ಅನಂತ ಕುಮಾರ್ ಅವರು ತಮ್ಮ ಭಾಷಣದಲ್ಲಿ ’ಇವತ್ತಿನ ದಿನ ನಮ್ಮ ದೇಶದ ಒಗ್ಗಟ್ಟು ಪಾಕಿಸ್ತಾನ ಅನ್ನೋ ಶತ್ರುವನ್ನು ಎದುರಿಸಲು ಅಗತ್ಯ’ ಅಂತ ಮಾತಾಡುದ್ರು. ಅಲ್ಲಾ ಸಾರ್, ಭಾರತಾನ ಒಂದಾಗಿಡೋಕೆ ಬೇಕಿರೋದು ಸಮಾನ ಶತ್ರು ಅಲ್ಲ.... ಸಮಾನ ಗೌರವ,ಸಮಾನ ಗೌರವ ಮತ್ತು ಸಮಾನ ಗೌರವ ಅಷ್ಟೆ. ಕಾರ್ಗಿಲ್ಲು, ಯುದ್ಧ, ಭಯೋತ್ಪಾದನೆ ಆದಾಗೆಲ್ಲಾ ಇವರುಗಳು ಮಾತಾಡೋ ಒಗ್ಗಟ್ಟು ಅಂದ್ರೆ ಏನು ಅಂತ ನೀವು ಬಿಡಿಸಿ ಹೇಳ್ತೀರಾ? ಇದ್ಯಾವ್ದೂ ಇಲ್ಲದೇನೂ ಭಾರತಾನ ಒಗ್ಗಟ್ಟಾಗಿ ಇಡೋದು ಬೇಡವೇನು?
ಇನ್ನು ಭಯೋತ್ಪಾದನೆ ಎದುರಿಸೋ ಬಗ್ಗೆ. ನೀವೇ ಹೇಳಿ.. ಪ್ರಜೆಗಳೆಲ್ಲಾ ಒಂದಾಗಿ ಇಂಥಾ ಕಾರ್ಯಕ್ರಮ ನಡೆಸಿಬಿಟ್ರೆ, ಕಾರ್ಯಕ್ರಮಗಳ ಮೂಲಕ ಒಗ್ಗಟ್ಟು ತೋರಿಸಿಬಿಟ್ರೆ ಆಗಿ ಹೋಯ್ತಾ? ಅದು ಭಯೋತ್ಪಾದನೆಗೆ ಪರಿಹಾರಾನಾ? ನೀವು ಬಾಂಬ್ ಸಿಡಿಸಿ, ನಾವು ಜೀವಕ್ಕೆ ಹೆದರದೆ ಮತ್ತೆ ಮಾಮೂಲಿನಂತೆ ನಾಳೆಯಿಂದ ಓಡಾಡ್ಕೊಂಡೇ ಇರ್ತೀವಿ ಅನ್ನೋದು ಯಾವರೀತಿಯಲ್ಲಿ ಭಯೋತ್ಪಾದಕತೆ ವಿರುದ್ಧದ ಸಂದೇಶ? ನೂರಹತ್ತು ಕೋಟಿ ಜನಾ ಸೇರ್ಕೊಂಡು ಮೊಂಬತ್ತಿ ಹಚ್ಚಿ ಇದು ಭಯೋತ್ಪಾದನೆ ವಿರುದ್ಧದ ಸಮರ ಅಂದ್ರೆ ತಾನೇ ಏನಾಯ್ತು? ನಿಜವಾಗ್ಲೂ ಭಯೋತ್ಪಾದನೆ ತಡೆಯೋ ತಾಕತ್ತು ಇದ್ದಿದ್ರೆ ಆವತ್ತು ಅಜರ್ ಮಸೂದನ್ನು ಕರ್ಕೊಂಡು ಹೋಗಿ ಕಂದಹಾರಲ್ಲಿ ಬಿಟ್ಟು ಯಾಕೆ ಬರ್ತಾ ಇದ್ರು ಇವರು? ಇವತ್ತಿನ ತಲೆ ನೋವಿಗೆ ಅವನ ಜೈಷ್ - ಎ - ಮೊಹಮದ್ ಸಂಘಟನೆಯೇ ಕಾರಣ ಅಲ್ವಾ? ಇವರಿಗೆ ಈಗ ಭಯೋತ್ಪಾದನೆ ವಿರುದ್ಧ ಮಾತಾಡೋ ನೈತಿಕತೆ ಎಲ್ಲಿದೆ?
ದೇಶಪ್ರೇಮ, ಹಿಂದುತ್ವ, ರಾಮಮಂದಿರ ಅನ್ನೋದೆಲ್ಲಾ ಪ್ರತಿಯೊಬ್ಬ ಹಿಂದೂವಿಗೆ ಸಹಜವಾಗಿ ಕಾಳಜಿಯ ವಿಷಯ. ಆ ಭಾವನೆಗಳನ್ನು ಕೆರಳಿಸಿ ರಾಜಕೀಯ ಆಡ್ತಿರೋದು ಬಿಜೆಪಿಯ ಕೀಳುತನ. ರಾಮಮಂದಿರ ಕಟ್ತೀವಿ ಅಂದ್ಕೊಂಡೇ ಮತ ಗೆದ್ದು ಅಧಿಕಾರಕ್ಕೆ ಬಂದೋರಿಗೆ ಕಟ್ಟಕ್ ಆಯ್ತಾ? ಹೋಗಲೀ ಆ ಪ್ರಯತ್ನಾನಾದ್ರೂ ಮಾಡುದ್ರಾ? ಮುಂದಿನ ಚುನಾವಣೆಯಲ್ಲಿ ಆ ವಿಷಯವೇ ಇರಲಿಲ್ಲ ಇವರ ಪ್ರಣಾಳಿಕೇಲಿ. ಇನ್ನು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬೆನ್ನಿ ಹಿಲ್ ಬರ್ತಾನೆ ಅಂದ ಕೂಡಲೇ ಬಾಯಿಬಾಯಿ ಬಡ್ಕೊಂಡು ದೊಡ್ಡ ಪ್ರತಿಭತನೆಗೆ ಮುಂದಾದ ಇವರು ತಮ್ಮದೇ ಸರ್ಕಾರ ಇದೆಯಲ್ಲಾ ಈಗಾ, ಅದು ಹೇಗೆ ಇಂಥದೇ ಸಭೆಗೆ ಅರಮನೆ ಮೈದಾನದಲ್ಲಿ ಅವಕಾಶ ಕೊಟ್ಟಿದಾರೆ? ವಾರಗಟ್ಲೆ ಮತಾಂತರದ ಬಗ್ಗೆ ಬರೆದ ವಿಜಯಕರ್ನಾಟಕದ ಮುಖಪುಟದಲ್ಲೇ ಈ ಕಾರ್ಯಕ್ರಮದ ಜಾಹೀರಾತು ಪ್ರಕಟವಾಗಿದೆ. ಏನು ಸ್ವಾಮಿ. ಇವರಿಗೆಲ್ಲಾ ಸಿದ್ಧಾಂತದ ಬದ್ಧತೆ ಇದೆಯೇ? ಇವರ ಬೂಟಾಟಿಕೆ ನಿಮಗೆ ಅರ್ಥವಾಗುತ್ತಾ ಇಲ್ಲವೇ?

ನಮಸ್ಕಾರ

ಸುಂದರ್

Anonymous ಅಂತಾರೆ...

ayyO gurugaLe isHTu dina ee blognalli pOsTgaLannu Odi matte kaDDi haako hesarilde iro 'anonymous' antavrige yaake uttarisOke hOgteeri...raatri ellaa raamayaNa kELi Eno antaaralla haMgaaitu aa anonymous na kathe..

janapada aMdre Enu aMtaane gottilla anonumous ge...ade gottilla aMdre innEnu hELOdu aMtavrige...summane koMku maataaDode aMtavra kelsa.. neevu tale keDiskobEDi iMtavkellaa..

ee raashTreeya pakshagaLa haNebaranE ishTu...raajyagaLiMda dEsha annalla avru...

Anonymous ಅಂತಾರೆ...

ಸ್ನೇಹಿತರೆ,

ದಯವಿಟ್ಟು ಕನ್ನಡದಲ್ಲೇ ಬರೆಯಲು ಪ್ರಯತ್ನಿಸಿ. ಎಲ್ಲರೂ ಬರಹ ತ೦ತ್ರಾ೦ಶವನ್ನು ಬಳಸಿ ಕನ್ನಡದಲ್ಲಿ ಬರೆಯಲು ಪ್ರಾರ೦ಭಿಸಿದರೆ, ಕನ್ನಡದ ಬಳಕೆ ಹೆಚ್ಚುತ್ತದೆ.

ನನ್ನಿಯೊ೦ದಿಗೆ,
ಕಿಶೋರ್!

Anonymous ಅಂತಾರೆ...

ಇವು ಬರೀ ಹಿಂದಿ ಹಾಡ್ಗಳಾ ಸ್ವಾಮಿ? ಜಾನಪದ ಜಾತ್ರೆಲಿ ಬರೀ ಈ ತರಹದ ಹಾಡ್ಗಳನ್ನ ಹೇಳೋದು ತಪ್ಪು, ಪ್ರತಿಭಟಿಸೋಣ, ಆದ್ರೆ ರಾಷ್ಟ್ರ ಗೀತೆಗಳನ್ನ ಹಾಡೋದೇ ತಪ್ಪು ಅನ್ನೋದೂ ತಪ್ಪು ಅಲ್ವಾ ಸ್ವಾಮಿ? ರಾಜಕೀಯ ಭೂಟಾಟಿಕೆ ಬಗ್ಗೆ ಸುಂದರ್ ಅವ್ರು ಚೆನ್ನಾಗಿ ಬರ್ದಿದ್ದೀರಾ, ಆದ್ರೆ ಅದು ಬರೀ ಬಿಜೇಪಿ ಆಗ್ಲಿ ಅತ್ವಾ ಯಾವ್ದೇ ಒಂದು ಪಕ್ಷಕ್ಕೆ ಸಿಮಿತವಾದ ವಾದವಲ್ಲ, ಇದು ಎಲ್ಲಾ ಪಕ್ಷಗಳು ಮಾಡೋ "ರಾಜಕೀಯ", ಆದ್ರಿಂದ ಇಲ್ಲಿ ಸುಮ್ನೇ ಬಿಜೇಪಿ ಸರಿ ಅಲ್ಲ. ಚೆನ್ನಗಿ ಮೂಡಿ ಬರ್ತಾ ಇದೆ ವಾದ, ಕೆಲವೊಮ್ಮೆ ವಿತ್ತಂಡವಾದ್ರೂ ಪರ್ವಾಗಿಲ್ಲ.

Unknown ಅಂತಾರೆ...

ಇದನ್ನ ಹೀಗೆ ಮುಂದುವರೆದರೆ ಉತ್ತರ ಭಾರತದ ಜಾನಪದ ಸಂಸ್ಕೃತಿಯನ್ನು ನಮ್ಮ ಜಾನಪದ ಸಂಸ್ಕೃತಿ ಅಂತ ಬಿಂಬಿಸೋದ್ರಲ್ಲಿ ಅನುಮಾನವೇ ಇಲ್ಲ.


ಗುರು

Anonymous ಅಂತಾರೆ...

ಎರಡನೇ ಅನಾನಿಮಸ್ಸಿಗೆ,

೧.ಏನ್ ಗುರುವಿನ ಈ ಬರಹ ಜಾನಪದ ಜಾತ್ರೇಲಿ ಜಾನಪದವಲ್ಲದ ಹಾಡುಗಳನ್ನು ಹಾಡಿರೋದ್ರು ಬಗ್ಗೆ...
೨.ರಾಷ್ಟ್ರಗೀತೆನ ಯಾವ ಸಂದರ್ಭದಲ್ಲಿ ಹಾದಬೇಕೋ ಆ ಸಂದರ್ಭದಲ್ಲಿ ಹಾಡಬೇಕು. ಅಷ್ಟಕ್ಕೂ ಇಲ್ಲಿ ರಾಷ್ಟ್ರಗೀತೆ ಹಾಡಿದರೆ ತಪ್ಪು ಅಂತ ಎಲ್ಲಿ ಹೇಳೀದಾರೆ?
೩.ಈ ಬರವಣಿಗೆ ಬಿಜೆಪಿ ಮಾಡಿದ ಕಿತಾಪತಿ ಬಗ್ಗೆ ಇರೋದ್ರಿಂದ ಇಲ್ಲಿ ಬಿಜೆಪಿ ಬಗ್ಗೆ ಬರೆದೆ. ಅಲ್ರೀ... ನೀನು ಕಳ್ಳ ಅಂದ್ರೆ, ಅವನೂ ಕಳ್ಳ, ಇವನೂ ಕಳ್ಳ... ಅಂತಾ ವಾದ ಮಾಡ್ತಾರೇನ್ರಿ? ನೀವು ಹೇಳ್ತಿರೋದ್ನ ನೋಡೂದ್ರೆ ಏನ್ ಗುರು ಬರೀ ಬಿಜೆಪಿ ವಿರುದ್ಧ ಬರೀತಿದೆ ಅನ್ನೋ ಥರಾ ಇದೆಯಲ್ಲಾ?

ಸುಂದರ್

Anonymous ಅಂತಾರೆ...

ಇನ್ನು ೨೦೦೯ ಇವರಿಗೆ ಕನ್ನಡ ಅನುಷ್ಟಾನದ ವರ್ಷವಂತೆ ಇವರ ಬಾಯಿಗೆ ಮಣ್ಣಾಕ... ಜಾನಪದ ಜಾತ್ರೆ ಅನ್ಕೊಂಡು ಮಾಡೋ ಕೆಲಸ ಹಿಂದಿ ಹೇರಿಕೆ...

ಮಾನ್ಯ ಅನಾಮಧೇಯರೇ,
ಯಾಕೆ ಕನ್ನಡದಲ್ಲಿ ದೇಶ ಭಕ್ತಿ ಗೀತೆಗಳೇ ಇಲ್ಲ ಅಂತೇನು ?... ಕನ್ನಡದ ದೇಶ ಭಕ್ತಿ ಗೀತೆ ಹಾಡುದ್ರೆ ದೇಶ ಪ್ರೇಮ ಕಮ್ಮಿ ಆದನ್ಗೇನು ? ... ನಾನು ಕುಮಾರಸ್ವಾಮಿ ಇದ್ದಾಗ ಮೊದಲನೆ ಜಾನಪದ ಜಾತ್ರೆ ವಿಧಾನಸೌಧದಲ್ಲಿ ನಡೆದಾಗ ಹೋಗಿದ್ದೆ... ಎಷ್ಟು ಚೆನ್ನಾಗಿತ್ತು ಅಂತಿರ... (ವಿಪರ್ಯಾಸ ಅಂದ್ರೆ ನಮ್ಮ ಮುಂದೆ ಕುಳಿತ್ತಿದ್ದ ಅನಿವಾಸಿ ಕನ್ನಡಿಗರನ್ಸುತ್ತೆ.. ಅವರ ಮಗು ಈ ಕಾರ್ಯಕ್ರಮ ಚೆನ್ನಾಗಿಲ್ಲ ಹಿಂದಿ/ಇಂಗ್ಲಿಷ್ ಬೇಕು ಅಂಥಾ ಇತ್ತು... ಇವತ್ತಿನ ಪೀಳಿಗೆ ಸಂಪೂರ್ಣವಾಗಿ ಬ್ರೈನ್ವಾಶ್ ಆಗೋಗಿದೆ... ಇದಕ್ಕೆ ಕನ್ನಡಿಗರೇ ಕಾರಣ ಅನ್ನೋದು ಕಟು ಸತ್ಯ)

ಈಗಿನ ಇವರ ರಾಜಕೀಯ ಕುತಂತ್ರಕ್ಕೆ ಧಿಕ್ಕಾರ....

ಕ್ಲಾನ್ಗೊರೌಸ್

Prashanth ಅಂತಾರೆ...

ಗುರು ,ನಮ್ಮ http://www.bangaloreone.gov.in/ ನಲ್ಲಿ ಕನ್ನಡನೆ ಕಾಣುತ ಇಲ್ಲ.
ಇದಕ್ಕೆ ಏನಾದ್ರೂ ಮಾಡೋಕೆ ಸಾಧ್ಯನ ?

Anonymous ಅಂತಾರೆ...

ಪ್ರಶಾಂತ್ ಅವರೇ,
ವೆಬ್ಸೈಟ್ ಇರಲಿ.. ನೀವು ಯಾವುದಾದರು ಬ್ಯಾಂಗಲೋರ್ ಒನ್ ಗೆ ಭೇಟಿ ಕೊಟ್ಟಿದ್ದಿರಾ... ?, ಅಲ್ಲೂ ಕನ್ನಡಿಗರು ಕೆಲ್ಸಕ್ಕೆ ಇರೋದು ಕಮ್ಮಿ, ರಾಜಾ ರೋಷವಾಗಿ ತಮಿಳು ತೆಲುಗು ಮಾತಾಡ್ತಾರೆ ಅಲ್ಲಿನ ಸಿಬ್ಬಂದಿ.... ಟಿ ವಿ ನಲ್ಲೂ ತಮಿಳು ತೆಲುಗು ಕಾರ್ಯಕ್ರಮ ಹಾಕಿರ್ತಾರೆ... ಇದನೆಲ್ಲ ನೋಡುದ್ರೆ ಹೊಟ್ಟೆ ಉರಿಯುತ್ತೆ... ಮಲ್ಲೇಶ್ವರದಂತಹ ಕನ್ನಡಿಗರು ಹೆಚ್ಚು ಇರುವ ಜಾಗದಲ್ಲೇ ಹೀಗೆ...ಇನ್ನು ಕೋರಮಂಗಲ, ಇಂದಿರಾನಗರ ಇಲ್ಲೆಲ್ಲ ಹೇಗೋ... ?

ಕ್ಲಾನ್ಗೊರೌಸ್

Rudresha ಅಂತಾರೆ...

ಪುಟ್ಟ ಅವರೆ,
ಯಾವುದೇ ಕಾರಣಕ್ಕೂ "criticism" ಮಾಡುವವರನ್ನು ನಿರ್ಲಕ್ಷಿಸುವುದು ಸರಿಯಲ್ಲ. ಇಂಥ ಟೀಕಾಕಾರರ ಅಭಿಪ್ರಾಯ ಮತ್ತು ಆ ಟೀಕೆಗಳಿಗೆ ದೊರೆಯುವ ಪ್ರತಿಕ್ರಿಯೆಗಳಿಂದಾನೆ ವಿಷಯಗಳ ಗಹನತೆ ಅರ್ಥ ಆಗುತ್ತೆ.

ದೇಶ ಪ್ರೇಮ ತೋರಿಸುವುದು ತಪ್ಪು ಅಂಥ ಲೇಖನದಲ್ಲಿ ಎಲ್ಲಿಯು ಹೇಳಿಲ್ಲ ಆದರೆ, ಇನ್ನು ಕ್ಲಾನ್ಗೊರೌಸ್ ಹೇಳಿದಂತೆ, ದೇಶ ಪ್ರೇಮ ತೋರಿಸೊಕೆ ಕನ್ನಡದ ಯಾವ ಗೀತೆಗಳು ಇರಲಿಲ್ಲವೇ ಅನ್ನುವುದೇ ಇಲ್ಲಿನ ಬಹು ಮುಖ್ಯ ಪ್ರಶ್ನೆ.

ಇನ್ನು ಈ ತಪ್ಪಿಗೆ ರಾಜಕೀಯ ಪಕ್ಷಗಳನ್ನ ದೂರುವುದು ಸರಿಯಲ್ಲ. ಆ ರೀತಿ ಮಾಡುವುದರಿಂದ ನಾವು ನಮ್ಮಲ್ಲೇ ಕಿತ್ತಾಡಿದಂತೆ ಆಗುತ್ತೆ. ಯಾಕೆಂದರೆ ಇಲ್ಲಿ ಬಹಳಷ್ಟು ಜನ ಕನ್ನಡಾಭಿಮಾನಿಗಳು, ವಿವಿಧ ಪಕ್ಷಾಭಿಮಾನಿಗಳು ಆಗಿರುತ್ತಾರೆ.

ಅದರ ಬದಲು ನಾವು ಈ ಕಾರ್ಯಕ್ರಮದ ಆಯೋಜಕರಿಗೆ ಮತ್ತು ಮಂತ್ರಿಗಳಾದ ಅಶೋಕ್ ರವರಿಗೆ ಮಿಂಚೆ ಮುಖಾಂತರ ಪ್ರತಿಭಟಿಸಬಹುದಲ್ಲವೇ? ದಯವಿಟ್ಟು ಯಾರಾದರು ಅಶೋಕ್ ರವರ ಈಮೇಲ್ ಗಉರುತನ್ನ ತಿಳಿಸಿದರೆ ನಾವೆಲ್ಲರೂ ಅವರಿಗೆ ನಮ್ಮ ಪ್ರತಿಭಟನೆಯನ್ನ ತಿಳಿಸಬಹುದು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails