ಕನ್ನಡದ ಗಡಿ ಮತ್ತು ಮಹಾಜನ್ ವರದಿ

"ಕಾವೇರಿಯಿಂದಮಾ ಗೋದಾವರಿವರೆಮಿರ್ದ..." ಅಂತ ತಾತನ ಕಾಲದಲ್ಲಿ ಕನ್ನಡನಾಡು ಅಲ್ಲೀತಂಕಾ ಹರಡಿತ್ತು, ಇಲ್ಲೀತಂಕಾ ಹರಡಿತ್ತು ಅಂತ ಹೆಮ್ಮೆ ಪಟ್ಕೊಂಡೇ ನಾವು ವ್ಯರ್ಥವಾಗಿ ಕಾಲಕಳೀತಾ ಇದೀವಾ ಅಂತ ಕನ್ನಡನಾಡಿನ ಗಡಿಗಳಲ್ಲಿ ಇವತ್ತಿನ ದಿನ ನಡೀತಿರೋ ಘಟನೆಗಳನ್ನು ನೋಡುದ್ರೆ ಅನ್ಸುತ್ತೆ ಗುರು!

ಗಡಿವಿವಾದ ಹುಟ್ಟಿಕೊಂಡದ್ದು!

ಸ್ವಾತಂತ್ರಕ್ಕೂ ಮೊದಲೇ ಹರಿದು ಹಂಚಿಹೋಗಿದ್ದ ಕರ್ನಾಟಕ ಒಂದಾಗಿದ್ದು ಸ್ವಾತಂತ್ರ ಬಂದು ಒಂಬತ್ತು ವರ್ಷಗಳಾದ ಮೇಲೇನೆ. ಇದೊಂಥರ ಹೊಸದಾಗಿ ಹುಟ್ಟಿಕೊಂಡ ರಾಜ್ಯವಾದ್ದರಿಂದ ನೆರೆಹೊರೆಯ ರಾಜ್ಯಗಳ ಆಳ್ವಿಕೆಯಲ್ಲಿದ್ದ ಕನ್ನಡ ಮಾತಾಡುವ ಪ್ರದೇಶಗಳನ್ನೆಲ್ಲಾ ಆಯಾ ಪ್ರದೇಶಗಳಿಂದ ಬಿಡುಗಡೆ ಮಾಡ್ಕೋಬೇಕಾದ ಪರಿಸ್ಥಿತಿ ಇತ್ತು. ಆಗಲೇ ತಮ್ಮ ನಾಡಿನ ಭಾಗವಾಗಿದ್ದ ಪ್ರದೇಶಗಳನ್ನು ಕನ್ನಡನಾಡಿಗೆ ಬಿಟ್ಟುಕೊಟ್ಟು ತಾವು ಚಿಕ್ಕವಾಗಲು ಯಾವ ನೆರೆಯವರೂ ಸಿದ್ಧವಿರಲಿಲ್ಲ. ಆ ಕಾರಣದಿಂದಲೇ ನ್ಯಾಯವಾಗಿ ಕನ್ನಡನೆಲವಾಗಿದ್ದ ಹೊಸೂರು, ಕೃಷ್ಣಗಿರಿ ತಮಿಳುನಾಡಿನಲ್ಲುಳಿದವು. ಅನಂತಪುರ, ರಾಮದುರ್ಗ, ಅದೋಣಿ, ಮಂತ್ರಾಲಯಗಳಂತಹ ಊರುಗಳು ಆಂಧ್ರದ ವಶದಲ್ಲಿ ಉಳಿದವು. ಕಾಸರಗೋಡು ಕೇರಳದ ಪಾಲಾಯಿತು. ಅಕ್ಕಲಕೋಟೆ, ಜತ್ತ, ಸೊಲ್ಲಾಪುರಗಳು ಮಹಾರಾಷ್ಟ್ರದಲ್ಲಿ ಉಳಿದವು. ಇದೇ ಹೊತ್ತಿನಲ್ಲಿ ಅವುಗಳಲ್ಲಿ ಕೆಲವು ರಾಜ್ಯಗಳು ಕರ್ನಾಟಕದ ಭಾಗವಾಗಿದ್ದ ಮತ್ತಷ್ಟು ಪ್ರದೇಶಗಳ ಮೇಲೆ ಹಕ್ಕು ಮಂಡಿಸತೊಡಗಿದವು. ಬೆಳಗಾವಿ ಜಿಲ್ಲೆ, ಬೀದರ್, ಕಾರವಾರ ಜಿಲ್ಲೆಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಮಹಾರಾಷ್ಟ್ರ ಕೂಗೆಬ್ಬಿಸಿತು.

ಮಹಾಜನ್ ಸಮಿತಿ

ಇಂದಿರಾಗಾಂಧಿಯವರ ಮುಂದಾಳ್ತನದ ಅಂದಿನ ಕೇಂದ್ರಸರ್ಕಾರ ಸುಪ್ರಿಂಕೋರ್ಟಿನ ಮುಖ್ಯನ್ಯಾಯಮೂರ್ತಿಗಳಾಗಿ ನಿವೃತ್ತರಾಗಿದ್ದ ಶ್ರೀ. ಮೆಹರ್ ಚಂದ್ ಮಹಾಜನ್ ಅವರ ನೇತೃತ್ವದಲ್ಲಿ ಗಡಿ ವಿವಾದ ಕೊನೆಗೊಳಿಸಲು ಒಂದು ಸಮಿತಿಯನ್ನು ರಚಿಸಿತು. ಈ ಸಮಿತಿಯನ್ನು ರಚಿಸುವಂತೆ ಅಮರಣಾಂತ ಉಪವಾಸ ಸತ್ಯಾಗ್ರಹದ ಮೂಲಕ ಒತ್ತಾಯ ಹೇರಿದ್ದು ಮಹಾರಾಷ್ಟ್ರದ ನಾಯಕರಾದ ಸೇನಾಪತಿ ಬಾಪಟ್ ಅವರು. ಮಹಾಜನ್ ಸಮಿತಿಯಲ್ಲಿ ಇಬ್ಬರು ಕನ್ನಡಿಗರು, ಇಬ್ಬರು ಮರಾಠಿಗರು ಇದ್ದು ಸಮಿತಿ ಸಮತೋಲನದಿಂದ ಕೂಡಿತ್ತು. ಈ ಸಮಿತಿಯವರು ಗಡಿಭಾಗದ ಎಲ್ಲ ಊರುಗಳನ್ನು ಭೇಟಿ ಮಾಡಿ ಅಲ್ಲಿನ ಸಂಘ ಸಂಸ್ಥೆಗಳ, ಜನಸಾಮಾನ್ಯರ ಅಭಿಪ್ರಾಯವನ್ನು ಸಂಗ್ರಹಿಸಿದರು. ಒಟ್ಟು 2240 ಮನವಿಗಳನ್ನು ಸ್ವೀಕರಿಸಿಕೊಂಡ ಸಮಿತಿ ಮಹಾಜನ್ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು.

ಮಹಾಜನ್ ವರದಿ

ಹೀಗೆ ಸಲ್ಲಿಸಲಾದ ಮಹಾಜನ್ ವರದಿಯ ಸಾರ ಏನಪ್ಪಾ ಅಂದ್ರೆ, ಬೆಳಗಾವಿ ಕರ್ನಾಟಕದಲ್ಲಿ ಇರತಕ್ಕದ್ದು. ಜತ್ತ, ಅಕ್ಕಲಕೋಟೆ, ಸೊಲ್ಲಾಪುರವೂ ಸೇರಿದಂತೆ ಒಟ್ಟು 247 ಹಳ್ಳಿಗಳು ಕರ್ನಾಟಕಕ್ಕೆ ಸೇರತಕ್ಕದ್ದು. ಹಾಗೆಯೇ ಮಹಾರಾಷ್ಟ್ರಕ್ಕೆ ನಂದಗಡ, ನಿಪ್ಪಾಣಿ, ಖಾನಾಪುರ ಸೇರಿದಂತೆ 260 ಹಳ್ಳಿಗಳು ಸೇರತಕ್ಕದ್ದು. ಕಾಸರಗೋಡು ಕರ್ನಾಟಕಕ್ಕೆ ಬರತಕ್ಕದ್ದು.

ವರದಿಯನ್ನು ಒಪ್ಪಿದ್ದು! ಒಪ್ಪದ್ದು!!

ಕರ್ನಾಟಕಕ್ಕೆ ಮಹಾರಾಷ್ಟ್ರ ತಾನಾಗೆ ಒಪ್ಪಿ 260 ಹಳ್ಳಿಗಳನ್ನು ಕೊಡಕ್ಕೆ ಮುಂದಾಗಿತ್ತು ಆದ್ರೆ ಮಹಾಜನ್ ವರದಿ ಶಿಫಾರಸ್ಸು ಮಾಡಿದ್ದು 247 ಹಳ್ಳಿಗಳು ಮಾತ್ರಾ. ಇಂಥಾ ನಷ್ಟದ ಬಾಬತ್ತೇ ಇದ್ರೂ ಕರ್ನಾಟಕದೋರು ಮಹಾಜನ್ ವರದೀನ ಒಪ್ಪಿಕೊಂಡ್ರು. ಆದ್ರೆ ಕಾಸರಗೋಡು ಬಿಡಲಾರದೆ ಕೇರಳ ಈ ವರದಿಯನ್ನು ತಿರಸ್ಕರಿಸಿತು. ಮಹಾರಾಷ್ಟ್ರದಲ್ಲಿ ಈ ಸಮಿತಿ ನೇಮಕವಾದಾಗ ಇದ್ದ ಮುಖ್ಯಮಂತ್ರಿಗಳಾದ ಶ್ರೀ. ವಿ.ಪಿ.ನಾಯಕ್ ಅವ್ರು 1967ರ ನವೆಂಬರ್ 9 ರಂದು ಮಹಾಜನ್ ವರದಿ ಹೇಗೇ ಇದ್ದರೂ ಅದನ್ನು ಒಪ್ಪುವುದಾಗಿ ಸಾರ್ವಜನಿಕ ಹೇಳಿಕೆಯನ್ನೂ ಕೊಟ್ಟಿದ್ದರು. ಆದರೆ ವರದಿ ಸಲ್ಲಿಕೆಯಾದ ನಂತರ ಮಹಾರಾಷ್ಟ್ರ ಇದನ್ನು ತಿರಸ್ಕರಿಸಿತು. ನಲವತ್ತು ವರ್ಷಗಳ ನಂತರ ಇಂದಿಗೂ ಈ ವರದಿ ಜಾರಿಯಾಗಿಲ್ಲ. ಕರ್ನಾಟಕ ಸರ್ಕಾರ ಮಹಾಜನ್ ವರದಿ ಜಾರಿಯಾಗಬೇಕು ಅಥವಾ ಯಥಾಸ್ಥಿತಿ ಇರಬೇಕು ಅಂತಾ ಬಾಯಲ್ಲಿ ಹೇಳಿದರೂ ವರದಿ ಜಾರಿಗೆ ಒಮ್ಮನದಿಂದ ಪ್ರಯತ್ನ ಪಡ್ತಿರೋದು ಕಾಣ್ತಿಲ್ಲ ಗುರು!

ಮುಂದಾ!

ಆಕ್ರಮಣ ರಕ್ಷಣೆಯ ಉತ್ತಮ ತಂತ್ರ ಅನ್ನೋ ಹಾಗೇ ಕರ್ನಾಟಕ ಸರ್ಕಾರದೋರು ಮಹಾಜನ್ ವರದಿ ಜಾರಿಗೆ ಒತ್ತಾಯ ಮಾಡಬೇಕು. ಕಾಸರಗೋಡನ್ನು ಕರ್ನಾಟಕಕ್ಕೆ ಬಿಟ್ಟುಕೊಡುವಂತೆ ಕೇರಳವನ್ನು ಒತ್ತಾಯಿಸಬೇಕು. ಮಹಾರಾಷ್ಟ್ರದೋರು ಸುಪ್ರಿಂಕೋರ್ಟಿನಲ್ಲಿ 2006ರಲ್ಲಿ ಹಾಕಿರೋ ಮೊಕದ್ದಮೆಯನ್ನು ಸಮರ್ಥವಾಗಿ ಎದುರಿಸಬೇಕು. ಇದಕ್ಕೆ ಬೇಕಾಗಿರೋ ಸಿದ್ಧತೆಗಳನ್ನು, ವಕೀಲರ ತಂಡವನ್ನು, ಅವರು ಮಾಡೋ ವಾದಸರಣಿಯನ್ನೂ ಹತ್ತಿರದಿಂದ ಪರಾಮರ್ಶಿಸಲು ಸದನ ಸಮಿತಿ ಮಾಡಬೇಕು. ಸೊಲ್ಲಾಪುರ, ಅಕ್ಕಲಕೋಟೆ, ಜತ್ತ ಮೊದಲಾದ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಲು ಮುಂದಾಗಬೇಕು. ಇದೆಲ್ಲಕ್ಕಿಂತ ಮುಖ್ಯವಾಗಿ ಮಾಡಬೇಕಾದ ಕೆಲ್ಸ ಇನ್ನೊಂದಿದೆ...ಗುರು!

ಕನ್ನಡದ ಕೋಟೆ ಗಟ್ಟಿಯಾಗಬೇಕು!

ಇವತ್ತು ಯಾವ ಭಾಗಗಳು ಕರ್ನಾಟಕದ ಗಡಿಗಳಾಗಿವೆಯೋ ಆ ಊರು ಹಳ್ಳಿಗಳಲ್ಲಿ ಕನ್ನಡದ ಸಾರ್ವಭೌಮತ್ವ ಸ್ಥಾಪಿಸಬೇಕು. ಗಡಿನಾಡುಗಳಲ್ಲಿ ಕನ್ನಡ ಕಾರ್ಯಕ್ರಮಗಳನ್ನು ನಡೆಸುವುದು, ಶಾಲೆಗಳ ಗುಣಮಟ್ಟ ಹೆಚ್ಚಿಸುವುದು, ಕಾರ್ಖಾನೆಗಳನ್ನು ಸ್ಥಾಪಿಸುವುದು ಮತ್ತು ಅಲ್ಲಿ ನೇಮಕಮಾಡಿಕೊಳ್ಳುವಾಗ ಕನ್ನಡ ಪರೀಕ್ಷೆ ಪಾಸಾಗಬೇಕಾದ್ದು ಕಡ್ಡಾಯ ಮಾಡುವುದು, ಗಡಿ ಪ್ರದೇಶದ ಎಲ್ಲಾ ಕಛೇರಿಗಳಲ್ಲಿ ಕನ್ನಡದಲ್ಲಿ ಆಡಳಿತವನ್ನು ಖಾತ್ರಿ ಪಡಿಸಿಕೊಳ್ಳುವುದು... ಹೀಗೆ ಕನ್ನಡವನ್ನು ಗಟ್ಟಿಗೊಳಿಸುವ ಕೆಲಸಗಳನ್ನು ಮಾಡಬೇಕು ಗುರು! ಇಲ್ದಿದ್ರೆ ಕೋಲಾರದಲ್ಲಿ, ಬಳ್ಳಾರಿಯಲ್ಲಿ ತೆಲುಗೂ, ಚಾಮರಾಜನಗರದಲ್ಲಿ ತಮಿಳೂ, ಬೆಳಗಾವಿ, ಬೀದರ ಮುಂತಾದ ಕಡೆ ಮರಾಠಿಯೂ, ಕಾರವಾರದಲ್ಲಿ ಕೊಂಕಣಿಯೂ ಕೈಕಾಲು ಚಾಚುವುದನ್ನು ತಡೆಯಲು ಆಗುವುದಿಲ್ಲ! ನಾಳೆ ಅಲ್ಲಿ ಕನ್ನಡಿಗರು ಇಲ್ಲ, ನಾವೇ ಬಹುಸಂಖ್ಯಾತರು.. ಆದ್ರಿಂದ ಪಕ್ಕದ ರಾಜ್ಯಕ್ ಸೇರ್ಕೋತೀವಿ ಅನ್ನೋ ಒಡಕು ದನಿಗಳನ್ನು ತಡ್ಯೋದು ಅಸಾಧ್ಯವಾದೀತು!

6 ಅನಿಸಿಕೆಗಳು:

Anonymous ಅಂತಾರೆ...

ಇವತ್ತಿನ ದಿನ ಸರ್ಕಾರದಿ೦ದ ಸಾಕಷ್ಟು ಕೆಲಸ ಆಗತ್ತೆ. ಆದರೆ, ಕರ್ನಾಟಕ ಸರ್ಕಾರ ಹಿ೦ದುವಾದಿಗಳನ್ನು ಖುಷಿಪಡಿಸೋದ್ರಲ್ಲೆ ಸಮಯ ಕಳೀತಿದೆ ಅನ್ಸತ್ತೆ.

ಟೈಮ್ ಇಲ್ಲ ಗರು: ಟಿ.ವಿ ೯ ನಲ್ಲಿ ಬರೋ ರೋಚಕ ಸುದ್ದಿ, ಬೆಳಗಿನ ಜಾವದಲ್ಲಿ ಓದಿದ ನಾಲ್ಕು ಹೆಡ್ ಲೈನ್ಸ್ ಬಿಟ್ರೆ ಸಾಮಾನ್ಯ ಜೀವಿ ಮಹಾಜನ್ ವರದಿ ಬಗ್ಗೆ ತಿಳ್ಕೊಳೋದಿಲ್ಲ,

ಏನ್ ಗುರುದೇ ಒ೦ದು ಟಿ.ವಿ. ಚಾನಲ್ ಆಗಬೇಕನ್ಸತ್ತೆ.

sunaath ಅಂತಾರೆ...

ಮಹಾಜನ ಆಯೋಗವನ್ನು ಮಹಾರಾಷ್ಟ್ರದ ಒತ್ತಾಯದಿಂದಾಗಿ ರಚಿಸಲಾಯಿತು. ಮಹಾರಾಷ್ಟ್ರ ಹಾಗೂ ಕರ್ನಾಟಕ ಸರಕಾರಗಳು ಮಹಾಜನ ವರದಿಯನ್ನು ಒಪ್ಪಿಕೊಳ್ಳುವದಾಗಿ ಘೋಷಿಸಿದ್ದವು. ಆದರೆ ಕೇರಳ ಸರಕಾರವು ಆಯೋಗವನ್ನು ಒಪ್ಪ್ಪಿಕೊಳ್ಳಲಿಲ್ಲ. ಆಯೋಗವು ಕಾಸರಗೋಡಿಗೆ ಭೇಟಿ ನೀಡಿದಾಗ ಕೇರಳ ಸರಕಾರವು ಅವರನ್ನು ನೋಡಹೋಗಲೂ ಇಲ್ಲ.
ಆಯೋಗವು ನೀಡಿದ ವರದಿಯು ಮಹಾರಾಷ್ಟಕ್ಕೆ ಆಘಾತಕಾರಿಯಾಗಿತ್ತು. ಆದುದರಿಂದ ಅವರು ಮಹಾಜನರು ಬಳಸಿದ ಸೂತ್ರದ ಬಗೆಗೆ ಹೊಸದಾಗಿ ತಕರಾರು ತೆಗೆದರು.
ಮಹಾಜನರು ಅನೇಕ ವರ್ಷಗಳ ಬಳಿಕ ನೈಸರ್ಗಿಕವಾಗಿ ವಿಧಿವಶರಾದಾಗ, ಮರಾಠಿ ಪತ್ರಿಕೆಗಳು "ಅನ್ಯಾಯ ಕೇಲಾ, ಮಹಾಜನ ಮೇಲಾ" (ಅನ್ಯಾಯ ಮಾಡಿದ, ಮಹಾಜನ ಸತ್ತ) ಎನ್ನುವ ದುರಭಿರುಚಿಯ ಸುದ್ದಿಯನ್ನು ಪ್ರಕಟಿಸಿದವು.
-ಸುನಾಥ

Dreams Unlimited ಅಂತಾರೆ...

nodi naan abhiprayana heltini yaav vardhi bandru yene bandhru adhu sariyadha reethiyalli anustankke tarodikke yaara kaiyallu agthilla yaakendre illiro vyavasthe agidhe avru mele ivru ivru mele avru kesru yerchodralle kala haran maadtidare.. adralli samanya jana kasta anubabistaidare.. namma rajakarni galu ondugooodi ondu druda nirdarakka barbeku. amale yenadru keldikkagli vardigalana anustanakke tarodiek sugama agathe antha.. allivarghe yene horata maadru adhu vyartha ansatthe..
innodu tumba kasta kara vadha sangathi andre..
i kade Tamil navra kata(Cauvery vishyakke).. ahh kade kerala davra kata(Kasaragodu vishayakke).. amale Andhra davra kata(alamatti vishayakke),amale inna ondu Maharastra innodhu kade kanndigara nemmadhi haalmaadtive andre tappagalrdhu..

Anonymous ಅಂತಾರೆ...

ನನಗೆ ಈ ವರದಿ ಇಷ್ಟೊಂದು ಕರ್ನಾಟಕದ ಪರವಾಗಿದೆ ಅನ್ತ ಗೊತ್ತಿರ್ಲಿಲ್ಲ. ಮಹಾಜನ್ ವರದಿಯ ಸಾರವನ್ನ ತಿಳಿಸಿ ಕೊಟ್ಟಿದ್ದಕ್ಕೆ ದನ್ಯವಾದಗಳು. ಎಲ್ಲ ಟಿವಿ ವಾಹಿನಿಯವರಿಗು ಈ ವರದಿಯನ್ನು ಸಾರ್ವಜನಿಕರಿಗೆ ತಿಳಿಸುವ ಕೆಲಸ ಮಾಡುವಂತೆ ತಿಳಿಸಬೇಕು. ಆದರೆ ನಮ್ಮ ಕರ್ಮಕ್ಕೆ, ಜಾಸ್ತಿ ವಾಹಿನಿಗಳು ನೆರೆ ರಾಜ್ಯದಿಂದ ಬಂದ ವಾಹಿನಿಗಳು.
- ಬಾಲಚಂದ್ರ.ಪಾಟೀಲ.

Unknown ಅಂತಾರೆ...

ನಮಸ್ಕಾರ ಎಲ್ಲರಿಗೂ..

ಸುದೀಪ್ ರವರೇ ನಿಮ್ಮ ಮಾತು ಸರಿ.
ಏನ್ ಗುರುದೇ ಚಾನೆಲ್ ಬರಬೇಕೇನೋ?
ಆದ್ರೆ ಅ ಚಾನೆಲ್ನೂ ನಮ್ಮ ಜನ ಸಂಸ್ಕಾರ್ ಅಥವಾ ಇತರ ಚಾನೆಲ್ ತರ ಎಲ್ಲೋ ಒಂದಿಬ್ಬಿರ ಚಾನೆಲ್ ಅನ್ನೋ ಹಾಗೆ ಮಾಡ್ತಾರೆ ಅಂತ ನನ್ನ ಅನಿಸಿಕೆ.
ಅಂದ್ರೆ ಇತರೆ ಚಾನೆಲ್ ಗಳ ಅಬ್ಬರದಲ್ಲಿ ನಮ್ಮ ಏನ್ ಗುರು ಚಾನೆಲ್ ಮುಳುಗೇಹೋಗುತ್ತೇನೋ ಅಲ್ವೇ..
ಚಾನೆಲ್ ಬಂದ್ರು ಜನ ನೋಡ್ತಾರ?
ನಮ್ಮ ಜನಕ್ಕೆ ಈಗ ಅಂತ ಮನಸ್ಸು ಇದಿಯಾ?
ಅಂತ ತಾಳ್ಮೆ ಇದಿಯಾ?
ಅಂತ ಆಸಕ್ತಿ ಇನ್ನೂ ಉಳಿದಿದೆಯಾ?
ಅಥವಾ ಆಸಕ್ತಿ ನಮ್ಮ ಜನರಲ್ಲೇ ಹುಟ್ಟಿಸಲು ನಾವೇ ಕಷ್ಟ ಪಡಬೇಕೇನೋ?

ತಮ್ಮವ
ಸತ್ಯ ಚರಣ ಎಸ್. ಎಂ.

Anonymous ಅಂತಾರೆ...

ಬೆಳಗಾವಿ,ಸೋಲಾಪೂರ,ಜತ್ತ,ಅಕ್ಕಲಕೊಟ ಈ ಪ್ರದೇಶಗಳು ಎಂದಿಗು ಕರ್ನಾಟಕ್ಕದ್ದೆ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails