ಗಡಿ ಮತ್ತು ಅಂಗಡಿ...

ಮೊನ್ನೆ ಮೊನ್ನೆ ವಿಜಯಕರ್ನಾಟಕದಲ್ಲಿ ಮರಾಠಿ ಸಮ್ಮೇಳನದಲ್ಲಿ ಕನ್ನಡದ ಅಂಗಡಿ ಅನ್ನೋ ಒಂದು ಲೇಖನ ಪ್ರಕಟವಾಗಿತ್ತು. ಬೆಳಗಾವಿ ಜಿಲ್ಲೆಯಲ್ಲಿ ಮಹಾರಾಷ್ಟ್ರದ ಗಡಿಗೆ ಹತ್ತಿಕೊಂಡಿರುವ ಯಳ್ಳೂರು ಎಂಬಲ್ಲಿ ಒಂದು ಮರಾಠಿ ಸಾಹಿತ್ಯ ಸಮ್ಮೇಳನ ನಡೀತಂತೆ, ಇದರಲ್ಲಿ ಬೆಳಗಾವಿ ಸಂಸದ ಸುರೇಶ್ ಅಂಗಡಿಯವ್ರು ಭಾಗವಹಿಸಿದ್ರಂತೆ ಅನ್ನೋದೆ ಆ ಸುದ್ದಿ. ಕನ್ನಡನಾಡಿನ ಸಂಸದ ಬೇರೆ ಬೇರೆ ಭಾಷೆಯೋರು ನಡ್ಸೋ ಸಮ್ಮೇಳನದಲ್ಲಿ ಭಾಗವಹಿಸುದ್ರೆ ಏನು ತಪ್ಪು? ಅನ್ನೋ ಅನುಮಾನ ಜನ್ರುನ್ ಕಾಡೀತು... ಕೆಲವರಂತೂ ಈ ಥರ ಯೋಚ್ಸೋದು ಪ್ರಾದೇಶಿಕ ಸಂಕುಚಿತತೆ ಅಂತಾನೂ ಅಂದುಕೊಂಡಾರು... ನಿಜವಾಗ್ಲೂ ಇದು ತಪ್ಪಾ? ಸರೀನಾ?

ಇದು ಬರೀ ಪರಭಾಷಿಕ ಸಮ್ಮೇಳನವಲ್ಲ!

ನಮ್ಮ ನಾಡಲ್ಲಿ ಬರೀ ಕನ್ನಡಿಗರೇ ಇಲ್ಲ ಅನ್ನೋದೂ ಸತ್ಯಾನೆ, ಜೊತೆಗೆ ಬೇರೆ ಭಾಷೆಯೋರು ಸಮ್ಮೇಳನಗಳನ್ನು ಮಾಡಿಕೊಳ್ಳೋದೂ ಸರೀನೆ. ಅದ್ರಲ್ಲೂ ಗಡಿಗಳನ್ನು ಭಾಷಿಕರ ಆಧಾರದ ಮೇಲೆ ಬೇರೆ ಮಾಡಕ್ಕೆ ಆಗಲ್ಲ. ಗಡಿಯ ಎರಡೂ ಕಡೆ ಎರಡೂ ಭಾಷೆ ಜನ ಇದ್ದೇ ಇರ್ತಾರೆ. ಹಾಗಾದ್ರೆ ಇಲ್ಲಿ ಇರಬೇಕಾದ್ದ ಮುಖ್ಯವಾದ ಅಂಶ ಯಾವ್ದಪ್ಪಾ ಅಂದ್ರೆ ತಾವು ವಾಸ ಮಾಡೋ ಜಾಗ ಯಾವ ಪ್ರದೇಶದ್ದೋ ಅಲ್ಲಿನ ಹಿತಾಸಕ್ತಿಗಳಿಗೆ ಪೂರಕವಾಗಿ ಬದುಕೋದು. ಯಳ್ಳೂರಿನ ಮರಾಠಿಗರೂ ಇದನ್ನು ಅರ್ಥ ಮಾಡ್ಕೊತಿದ್ರೇನೋ? ಆದ್ರೆ ಎಂ.ಇ.ಎಸ್ ಎಂಬ ಕಿರಾತಕ ಪಡೆ ಇದಕ್ಕೆ ಅವಕಾಶ ಕೊಡದೆ ಅಲ್ಲಿರೋ ಮರಾಠಿಗರನ್ನು ಕನ್ನಡಿಗರ, ಕನ್ನಡನಾಡಿನ ವಿರುದ್ಧ ಎತ್ತಿಕಟ್ಟೋ ಮನೆಮುರುಕ ಕೆಲಸಕ್ಕೆ ಮುಂದಾಗಿದಾರೆ. ಹಾಗಾಗಿ ಅಲ್ಲಿ ನಡೆಯೋ ಮರಾಠಿ ಸಾಹಿತ್ಯ ಸಮ್ಮೇಳನ ಅನ್ನೋ ಸೌಹಾರ್ದ ಬೆಸೆಯಬೇಕಾದ ಸಂಭ್ರಮದ ಹಬ್ಬ ನಾಡವಿರೋಧಿ ಕಾರ್ಯಕ್ರಮವಾಗಿರೋದು. ಹತ್ತಾರು ವರ್ಷಗಳಿಂದಲೂ ಆ ಕಾರ್ಯಕ್ರಮದಲ್ಲಿ ಸಾಹಿತ್ಯದ ಬಗ್ಗೆ ಚರ್ಚೆ ನೆಪದಲ್ಲಿ ಬೆಳಗಾವಿ, ಬೀದರ, ಕಾರವಾರ ಎಲ್ಲವೂ ಮಹಾರಾಷ್ಟ್ರಕ್ಕೆ ಸೇರಿಸಬೇಕು ಅನ್ನೋ ಠರಾವು ಕೈಗೊಳ್ತಾನೇ ಬಂದಿದಾರೆ. ಇದರ ವಿರುದ್ಧ ಕ್ರಮ ತೊಗೊಳ್ಳಕ್ಕೆ ಸರ್ಕಾರ ಮುಂದಾದ್ರೆ ಮರಾಠಿಗರ ಮೇಲೆ ದೌರ್ಜನ್ಯ ಮಾಡ್ತಿದಾರೆ ಅಂತ ಹೊಯ್ಕೊತಾರೆ, ಆದ್ರೆ ಮಾಡೋದು ಮಾತ್ರಾ ಮನೆಹಾಳು ನಿರ್ಣಯಗಳೇ. ಇದರಿಂದ ಗಡಿ ಭಾಗದ ಕನ್ನಡಿಗ-ಮರಾಠಿ ಸೌಹಾರ್ದತೆಗೆ ಮಂಗಳ ಹಾಡಿದಂತಾಗುತ್ತೆ ಅನ್ನೋ ಪರಿಜ್ಞಾನವೇ ಇಲ್ಲದಂತೆ ಆಡ್ತಿದಾರೆ. ಹಾಗಾಗಿ ಯಳ್ಳೂರಿನ ಆ ಸಾಹಿತ್ಯ ನಿಜವಾದ ಸಾಹಿತ್ಯ ಸಮ್ಮೇಳನಾ ಆಗ್ದೆ ಎಂ.ಇ.ಎಸ್ ನ ತುತ್ತೂರಿ ಆಗಿರೋದು!

ತುಷ್ಟೀಕರಣಮಾಡ್ತಿರೋ ಸಂಸದರಿಗೆ ಪಾಟ ಕಲುಸ್ತಾರೆ!

ಇಂಥಾ ಸಮ್ಮೇಳನದಲ್ಲಿ ಕರ್ನಾಟಕದ ಸಂಸದರೊಬ್ರು ಭಾಗವಹಿಸೋದು, ಆಮೇಲೆ ’ನಾನು ಬರೀ ಹೋಗಿದ್ದೆ, ಭಾಷಣ ಮಾಡ್ಲಿಲ್ಲ’ ಅನ್ನೋದು ಇವೆಲ್ಲಾ ಕೀಳುಮಟ್ಟದ ನಾಟಕ ಅನ್ನೋದು ಜನಕ್ಕೆ ಗೊತಾಗಲ್ವಾ ಗುರು! ಇನ್ನೇನು ಲೋಕಸಭಾ ಚುನಾವಣೆ ಬಂದುಬಿಡುತ್ತೆ, ಆ ಭಾಗದ ಎಂ.ಇ.ಎಸ್ ಬೆಂಬಲಿಗರ ಮತಾನೂ ಬಿದ್ರೆ ಗೆದ್ದುಬುಡ್ಬೋದು ಅಂತನ್ನೋ ಭ್ರಮೇಲಿ ನಮ್ಮ ಸಂಸದರೇನಾದ್ರೂ ಇದಾರಾ ಅಂತ ಅನುಮಾನ ಬರುತ್ತೆ ಗುರು! ಹಾಗೇನಾರೂ ಆಗಿದ್ರೆ ಬಹುಸಂಖ್ಯಾತ ಕನ್ನಡಿಗರು ಅವ್ರ ಕೈ ಬಿಟ್ಟು, ತಾಯ್ನಾಡಿಗೇ ಕೈಕೊಡಕ್ ಮುಂದಾಗೋ ರಾಜಕಾರಣಿಗಳ ಸಮಯಸಾಧಕತನಕ್ಕೆ ಸರಿಯಾದ ಉತ್ರ ಕೊಟ್ಟೇಕೊಡ್ತಾರೆ ಗುರು!

5 ಅನಿಸಿಕೆಗಳು:

Unknown ಅಂತಾರೆ...

-- @ ಗಡಿಯ ಎರಡೂ ಕಡೆ ಎರಡೂ ಭಾಷೆ ಜನ ಇದ್ದೇ ಇರ್ತಾರೆ. ಹಾಗಾದ್ರೆ ಇಲ್ಲಿ ಇರಬೇಕಾದ್ದ ಮುಖ್ಯವಾದ ಅಂಶ ಯಾವ್ದಪ್ಪಾ ಅಂದ್ರೆ ತಾವು ವಾಸ ಮಾಡೋ ಜಾಗ ಯಾವ ಪ್ರದೇಶದ್ದೋ ಅಲ್ಲಿನ ಹಿತಾಸಕ್ತಿಗಳಿಗೆ ಪೂರಕವಾಗಿ ಬದುಕೋದು.

ಗುರುಗಳೇ, ನಮಸ್ಕಾರ...
ನಾನು ಮೂಲತಃ ಶಿವಮೊಗ್ಗದವನಾದ್ರೂ.. ಕೆಲಸದ ನಿಮಿತ್ತ ಊರೂರು ಸುತ್ತುತ್ತಾ ಈಗ ಸದ್ಯಕ್ಕೆ ಪೂನಾದಲ್ಲಿ ಹತ್ರತ್ರ ಒಂದು ವರ್ಷದಿಂದ ಇದೀನಿ..
ಆದರೆ ಇದೂವರೆವಿಗೂ ಮರಾಠಿ ಕಲಿಲೇಬೇಕು ಅಂತ ಅನಿಸದೆ ಇದ್ದಿದ್ರಿಂದ ಮರಾಠಿ ಕಲಿತಿಲ್ಲ.. ಹಾಗು ಇಲ್ಲಿನ ಎಲ್ಲ ಕೆಲಸಕ್ಕೆ ನಾನು ಮರಾಠಿಯ ಜಾಗದಲ್ಲಿ ಹಿಂದಿ ಉಪಯೋಗಿಸಿಕೊಂಡು ಕೆಲಸ ಮಾಡ್ತಾ ಇದ್ದೀನಿ...
ಆದ್ರೆ ಕನ್ನಡದ ವಿಷಯ ಬಂದರೆ, ಭಾಷೆ ವಿಷಯ ಬಂದಾಗಲೆಲ್ಲಾ ನನ್ನ ಮೊದಲ ಆಯ್ಕೆ ಕನ್ನಡ, ನಂತರ ಇತರೇ ಭಾಷೆ.
ಹಾಗಾದ್ರೆ..ನನ್ನನ್ನ ಅವರು ಇಲ್ಲಿಂದ ಅಂದ್ರೆ ಪೂನಾದಿಂದ ಕರ್ನಾಟಕದವನಾದ ನನ್ನನ್ನು ಓಡಿಸಿಬಿಡಬೇಕೇ?
ನಾವು ನಮ್ಮಲ್ಲಿರೋ ಬೇರೆ ರಾಜ್ಯದ ಜನರನ್ನು ಓಡಿಸಬೇಕು ಅಂತ ಯಾವಾಗ್ಲೂ ಯೋಚನೆ ಮಾಡ್ತಾ ಇರ್ತಿವಾ? ಇಲ್ವಲ್ಲಾ..!!!
ಅಂದ್ರೆ..ನಮಗೆ ಬೇಕಾಗಿರೋದು ಏನು ಅಂತ ಈ ರಾಜಕಾರಣಿಗಳು ಅದ್ಹೇಗೆ ತೀರ್ಮಾನ ಮಾಡ್ತಾ ಇದಾರೆ?
ಅದ್ಹೇಗೆ ಯಾವುದೋ ರಾಜಕೀಯವನ್ನೊಂದನ್ನೇ ಗುರಿಯಾಗಿ ಇಟ್ಟುಕೊಂಡಿರೋ ಸಂಘಗಳು, ಸಂಸ್ಥೆಗಳು, ಪಕ್ಷಗಳು..ನಮ್ಮ ಜೀವನವನ್ನು
ಅರೇ... ನಮ್ಮ ಖಾಸಗಿ ಜೀವನವನ್ನು ನಿರ್ಧರಿಸೋ ತೀರ್ಮಾನವನ್ನು ಅವರ ಕೈಗೆ ತೊಗಳ್ತಾರ್ರಿ?
ಇದು ಭಾರತ.. ಅಖಂಡ ಭಾರತದಲ್ಲಿ ಯಾವನು ಎಲ್ಲಿ ಜೀವಿಸಬೇಕು ಅನ್ನೋದು ಅವನಿಗೆ ಬಿಟ್ಟ ಸ್ವಾತಂತ್ಯ್ರ..
ಅಂದ ಮೇಲೆ.... ಇಷ್ಟೆಲ್ಲಾ ಜಗಳ ಮಾಡಿಕೊಂಡು ಸುಮ್ಮನೆ ಇರೋ ಜನರನ್ನು ರೊಚ್ಚಿಗೆಬ್ಬಿಸಿ..ಅವರನ್ನು, ಅವರು ವಾಸ ಮಾಡ್ತಾ ಇರೋ ರಾಜ್ಯದವರ ಮೇಲೆ ಎತ್ತಿ ಕಟ್ಟಿ..

ಗುರುಗಳೇ.. ಇದು ಸಾಧ್ಯವಾ?

ಎಲ್ಲ ಜನರೂ, ಅದರಲ್ಲೂ ನಮ್ಮ ಗಡಿನಾಡಲ್ಲಿ ಇರೋ ಜನಗಳೆಲ್ಲ ಅಷ್ಟೊಂದು ಮೂರ್ಖರು ಅಂತ ಇವರು ಭಾವಿಸ್ತಾ ಇದಾರೋ? ಅಥವಾ.. ನಿಜವಾಗ್ಲೂ ಅ ಪರಿಸ್ಥಿತಿ ಏನಾದ್ರು ಬಂದಿದೆಯಾ ಗುರುಗಳೇ?
ಹೀಗೆ ನಡಿತಾ ಹೋಗುತ್ತೆ ಅನ್ನೋದಾದ್ರೆ..ಕರ್ನಾಟಕದವ ಕರ್ನಾಟಕದಲ್ಲೇ, ಮಹಾರಾಷ್ಟ್ರದವ ಮಹಾರಾಷ್ಟ್ರದಲ್ಲೇ ಅಂತನೋ?
ಇದಕ್ಕಿಂತ ದೊಡ್ಡ ಹಾಸ್ಯಾಸ್ಪದವಾದ ಮಾತು ಇನ್ನೂ ಬೇಕೆ?
ಇವರೆಲ್ಲಾ ಯಾವತ್ತು ಬುದ್ದಿ ಕಲಿತಾರೆ?

ಸತ್ಯ ಚರಣ ಎಸ್. ಎಂ.

Anonymous ಅಂತಾರೆ...

ಈ ತಡಕಲು-ಅಂಗಡಿ ಒಬ್ಬ ಕನ್ನಡ ದ್ರೋಹಿ ಅನ್ನೋದನ್ನ ಮರೀಬಾರದು. ಬೆಳಗಾವಿಯಲ್ಲಿ ಗಲಾಟೆಯಾದ ಪ್ರತಿ ಸಾರಿಯೂ ಇವನು ಮರಾಠಿಗರ ಪರ ಮಾತಾಡ್ತಾನೆ. ಇವನಿಗೂ ಒಂದು ಸಾರಿ ಮಸಿ ಬಳಿಬೇಕು.

ಅಲ್ಲ ಸ್ವಾಮೀ, ಮಹಾರಾಷ್ಟ್ರದಲ್ಲಿ ವಾಸವಾಗಿರೋ ಕನ್ನಡಿಗರು ಕನ್ನಡ ಮರೆತು ಬದುಕುತ್ತಾ ಇದ್ದಾರೆ. ಇಲ್ಲಿ ನೋಡಿದರೆ ಒಬ್ಬ ಕನ್ನಡಿಗನೇ ನಮ್ಮ ವೈರಿಗಳ ಜೊತೆ ಸೇರಿ ಕನ್ನಡಾಂಬೆಯ ಬೆನ್ನಿಗೆ ಚೂರಿ ಹಾಕ್ತಾ ಇದಾನೆ. ಮಹಾರಾಷ್ಟ್ರದಲ್ಲಿ ಅದರಲ್ಲೂ ಸೊಲ್ಲಾಪುರದಲ್ಲಿ ಇರುವ ಕನ್ನಡಿಗರು ಸಹ ದಬ್ಬಾಳಿಕೆ ಆಗ್ತ ಇದೆ ಅಂತ ಸತ್ಯಾಗ್ರಹ ಕೂರಲಿ. ಕನ್ನಡಿಗರು ಹಾಗೆ ಮಾಡೋಲ್ಲ ಅಂತ ಚೆನ್ನಾಗಿ ಗೊತ್ತು. ಉಣ್ಣುಸ್ಕೊಳೋದೆ ನಮ್ಮ ಜಾಯಮಾನ.

Anonymous ಅಂತಾರೆ...

ಸತ್ಯಚರಣ ಅವರೇ,

ಪುಣೆಯಲ್ಲಿದ್ದೂ ಮರಾಠಿ ಕಲಿಯಲ್ಲ ಅನ್ನೋದು ನಿಮ್ಮ ನಿಲುವಾದ್ರೆ ಖಂಡಿತಾ ನಿಮ್ಮುನ್ನ ಅಲ್ಲಿಂದ ಒದ್ದೋಡಿಸೋದ್ರಲ್ಲಿ ಯಾವತಪ್ಪೂ ಇಲ್ಲ. ಬೆಂಗಳೂರಲ್ಲಿ ಬರೋ ಮರಾಠಿಗ ಹಿಂದಿಲಿ ವ್ಯವಹರುಸ್ತೀನು, ಕನ್ನಡ ಕಲೀಬೇಕು ಅನ್ನುಸ್ತಿಲ್ಲಾ ನಂಗೆ ಅಂದ್ರೂ ಅದ್ನೇ ಮಾಡಬೇಕು. ಕರ್ನಾಟಕದವ್ರು ಕರ್ನಾಟಕದಲ್ಲೇ ಇರಬೇಕು ಅಲ್ಲ. ಕರ್ನಾಟಕಕ್ಕೆ ತಡೆಯಿಲ್ಲದ ವಲಸೆ ಆಗಬಾರ್ದು. ನಿಯಂತ್ರಿತ ವಲಸೆ ಆಗುವುದೂ, ಹಾಗೆ ವಲಸೆ ಬಂದವರು ನಮ್ಮ ನುಡಿಯಲ್ಲಿ ವ್ಯವಹರಿಸೋದೂ ಸರಿಯಾದ್ದು.
ಮೊದಲು ಮಹಾರಾಷ್ಟ್ರದಲ್ಲಿ ಬದುಕು ನಡ್ಸೋದಿದ್ರೆ ಮರಾಠಿ ಕಲೀರಿ. ಪ್ರವಾಸಿಗನಿಗೆ, ಅಲ್ಪಾವಧಿ ತಂಗುವವರಿಗೆ ಇದು ಅನ್ವಯ ಆಗಲ್ಲ. ಅವರು ಅಲ್ಲಿನ ಭಾಷೇ ಕಷ್ಟ ಅನ್ನೋದಾದ್ರೆ ತರ್ಜುಮೆದಾರರನ್ನು ಬಳಸಿಕೊಂಡು ವ್ಯವಹರಿಸಲಿ. ಆಗ ಅದೂ ಒಂದು ಉದ್ಯಮವಾಗಿ ಬೆಳೆದೀತು!!

ನಮಸ್ಕಾರ

ತಿಮ್ಮಯ್ಯ

Anonymous ಅಂತಾರೆ...

ಸತ್ಯ ಚರಣ ರವರೇ,

"ಇಲ್ಲಿನ ಎಲ್ಲ ಕೆಲಸಕ್ಕೆ ನಾನು ಮರಾಠಿಯ ಜಾಗದಲ್ಲಿ ಹಿಂದಿ ಉಪಯೋಗಿಸಿಕೊಂಡು ಕೆಲಸ ಮಾಡ್ತಾ ಇದ್ದೀನಿ..."

ಇದು ಸರೀನಾ ನೀವೇ ಹೇಳಿ? ಹಾಗಿದ್ದರೆ, ಇಲ್ಲಿ ಬ೦ದು ನೆಲೆಸೋ ಗರ್ವಿ ಹಿ೦ದಿಯವರಿಗೂ, ಮರಾಠಿಯರಿಗೂ ನಿಮಗೂ ಏನು ವ್ಯತ್ಯಾಸ?

Unknown ಅಂತಾರೆ...

ಗುರುಗಳೇ ನಮಸ್ಕಾರ..
ನಿಮ್ಮೆಲ್ಲರ ಮಾತು ಒಪ್ಪಲೆಬೇಕಾದ್ದು..
ನಾನು ಮರಾಠಿ ಕಲಿಬೇಕಿತ್ತು..
ಆದರೆ ನನಗೆ ಒಂದೆಡೆ ಇನ್ನೂ ಮನಸಾಗಿರಲಿಲ್ಲ ಅನ್ನೋದು ಎಷ್ಟು ನಿಜಾನೂ ಅಷ್ಟೆ ನಿಜವಾದ್ದು..ನಾನು ಆದಷ್ಟು ಬೇಗ ಕರ್ನಾಟಕ ಹಿಂತಿರುಗಿ ಬರಬೇಕು ಅಂತ ನನ್ನ ಮನಸಿನಲ್ಲಿದ್ದದ್ದು.
ನನ್ನ ಕೆಲಸದ ರೀತಿ ಯಾವ ತರದಲ್ಲಿ ಇದೆ ಅಂದರೆ..
ಇವತ್ತೇ ನನಗೆ ಪೂನಾದಿಂದ ಹೊರಡಲು ಹೇಳಬಹುದು...
ಅಥವಾ ಇನ್ನೂ ಒಂದು ವರ್ಷದ ನಂತರ..
ಇಲ್ಲೇ ಶಾಶ್ವತವಾಗಿ ನಾನು ಇರಬೇಕು ಅಂತ ಬಯಸಿಲ್ಲ, ಅದರ ಸಾದ್ಯತೆ ಕೂಡ ಇಲ್ಲ..
ಹಾ.. ಹಾಗಂತ ನಾನು ಯಾವುದೇ ಬೇರೆ ಭಾಷೆಗಳ ದ್ವೇಷಿ ಕೂಡ ಅಲ್ಲ..
ಮರಾಠಿ ಕಲಿಬೇಕಿತ್ತು, ಕಲಿಬೇಕು ಅಂತ ಈಗಲೂ ನನ್ನ ಮನಸಿನಲ್ಲಿದೆ..
ಆದರೆ ನನ್ನ ಕೆಲಸದಲ್ಲಿ ಅದರ ಬಳಕೆ ಎಷ್ಟು ಕಡಿಮೆ ಇದೆ ಅಂದರೆ, ನಾನಾಗಿ ಅದನ್ನು ಸಮಯ ಮಾಡಿಕೊಂಡು ಕಲಿಬೇಕಾದ ಪರಿಸ್ಥಿತಿ ಇದೆ.. ಹಾಗೆ ಸಮಯದ ಅಭಾವ ಇದೆ..
ಎಲ್ಲಕ್ಕಿಂತ ಮುಖ್ಯವಾಗಿ.. ನಾನು ಇಲ್ಲಿರೋದು ಕೆಲವು ದಿವಸಗಳ ಕಾರ್ಯ ನಿಮಿತ್ತ.. ಶಾಶ್ವತವಾಗಿ ನಾನು ಇಲ್ಲಿರೋ ಮನಸ್ಸು ಮಾಡೋ ಸಾದ್ಯತೆ ಇಲ್ಲ..
ಹಾಗಿದ್ದಲ್ಲಿ ಖಂಡಿತ ನಿಮ್ಮ ಮಾತು ಒಪ್ಪುತ್ತೇನೆ. ಮರಾಠಿ ನಾನು ಕಲಿಯಲೇ ಬೇಕು ಅಂತ..
ಬಹುಷಃ ತಿಮ್ಮಯ್ಯ ಅವರಿಗೆ ನನ್ನ ಉತ್ತರ ಸರಿ ಇದೆ ಅನ್ನಿಸಿರಬಹುದು..ಈಗ

ಸಂದೀಪ್ ಅವರೇ..
ನಿಮ್ಮ ಮಾತು ಸರಿ..
ನನ್ನ ತಪ್ಪು ತಿಳಕೊಂಡೆ..
ಹಾಗೆ ಈಗಾಗಲೇ ತಿಳಿಸಿದಂತೆ.. ನನ್ನ ಕೆಲಸ ಸ್ವಲ್ಪ ದಿನಕ್ಕಾಗಿ..
ಅಲ್ಲೇ ನೆಲಸಲು ನನ್ನ ತೀರ್ಮಾನ, ಅಥವಾ ನನ್ನ ಕಂಪನಿಯ ತೀರ್ಮಾನ ಇಲ್ಲ..
ಹಾಗಾಗಿ.. ನಾನು ಮರಾಠಿಯ ಬಗ್ಗೆ ನನ್ನ ಪ್ರಾಮುಖ್ಯತೆ ಕೊಟ್ಟಿಲ್ಲ..


ಹಾಗೆ ಸ್ನೇಹಿತರೇ.. ನನ್ನ ಚರ್ಚೆ ವಿಷಯ ಬೇರೆಯದೇ ಆಗಿತ್ತು..
ಅಂದರೆ ನಾನು ಈ ವಿಷಯ ಪ್ರಾರಂಭಿಸಿದ್ದು ಗಡಿನಾಡ, ಗಡಿಗಳಲ್ಲಿ ಇರೋ ಊರುಗಳ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು..
ಈ ಬಗ್ಗೆ ಯಾರದಾದ್ರೂ ಅನಿಸಿಕೆ ಇದ್ರೆ.. ಹೆಚ್ಚಿನ ಸಂತೋಷ ಸಿಗ್ತಾ ಇತ್ತು..
ಹಾಗೇ ನಿಮ್ಮೆಲ್ಲ ಸಲಹೆಗಳಿಗೆ ಧನ್ಯವಾದಗಳು.. ನನ್ನ ಪ್ರಾಮುಖ್ಯತೆ ಅದಕ್ಕೆ ಇದೆ..

ತಮ್ಮವ,
ಸತ್ಯ ಚರಣ ಎಸ್. ಎಂ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails