ಚಿತ್ರರಂಗಕ್ಕೆ ಬೇಕಿರೋದು ಊರುಗೋಲಲ್ಲ, ಸ್ವಂತಬಲ!


ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯ ಮುಖ್ಯಸ್ಥೆಯಾದ ಶ್ರೀಮತಿ ಡಾ.ಜಯಮಾಲಾ ಅವ್ರು ಸರ್ಕಾರದ ಬಜೆಟ್ ನಂತರ ತಮ್ಮ ಅಸಮಾಧಾನಾನ ತೋಡಿಕೊಂಡಿದ್ದಾರೆ ಅನ್ನೋ ಸುದ್ದಿ 21.02.2009ರ ಕನ್ನಡಪ್ರಭದಲ್ಲಿ ವರದಿಯಾಗಿದೆ. ಕನ್ನಡ ಸಿನಿಮಾ ಎಪ್ಪತ್ತೈದರ ಹೊಸ್ತಿಲಲ್ಲಿ ನಿಂತಿರೋವಾಗ, ಈ ಸುದ್ದಿ ಓದಿದವರ ಮನಸ್ಸಲ್ಲಿ ಕನ್ನಡ ಚಲನಚಿತ್ರರಂಗವಿನ್ನೂ ಸ್ವಾವಲಂಬಿ ಆಗಿಲ್ವಾ? ಅನ್ನೋ ಪ್ರಶ್ನೆ ಹುಟ್ಟೋದು ಸಹಜಾ ಗುರು!

ಕನ್ನಡ ಚಿತ್ರರಂಗದ ಬೇಡಿಕೆಗಳಾದ್ರೂ ಏನು?

ಇವತ್ತಿನ ದಿವಸ ಸರ್ಕಾರಾನಾ ಈ ಸಿನಿಮಾದೋರು ಏನೇನು ಬೇಡಿದಾರೆ ಅಂತಾ ನೋಡಿ. ಕನ್ನಡ ಚಿತ್ರರಂಗದಲ್ಲಿ ತೆಗೆಯೋ ಎಲ್ಲಾ ಚಿತ್ರಗಳಿಗೆ ಸಬ್ಸಿಡಿ ಹಣವನ್ನು ಸರ್ಕಾರ ಕೊಡಬೇಕಂತೆ. ಹಾಗೆ ಈ ಬಾರಿ ಬಜೆಟ್ಟಲ್ಲಿ ಕೊಟ್ಟಿಲ್ಲಾ ಅನ್ನೋದು ಕನ್ನಡ ಚಿತ್ರರಂಗಕ್ಕೆ ಹೊಡೆದ ಕೊನೆಯ ಮೊಳೆಯಂತೆ!

ಗುಣಮಟ್ಟದ ಸಿನಿಮಾಗಳಿಗೆ, ಪ್ರಶಸ್ತಿ ವಿಜೇತ ಚಿತ್ರಗಳಿಗೆ, ಸಾಮಾಜಿಕ ಸಂದೇಶವುಳ್ಳ ಸಿನಿಮಾಗಳಿಗೆ, ಮಕ್ಕಳ ಚಿತ್ರಗಳಿಗೆ ಅಂತಾ ಒಂದೊಂದಾಗಿ ಶುರುವಾಗಿದ್ದ ಈ ಸಬ್ಸಿಡಿ ಅನ್ನೋದನ್ನು ಒಳ್ಳೇ ಚಿತ್ರಗಳಿಗೆ ಅಂತ ಮಾಡುದ್ರು. ಆಮೇಲೆ ರಿಮೇಕ್ ಅಲ್ಲದ ಚಿತ್ರಗಳಿಗೆ ಅಂದ್ರು, ಈಗ ರಿಮೇಕೋ ಸ್ವಮೇಕೋ ಎಲ್ಲಾ ಕನ್ನಡ ಚಿತ್ರಗಳಿಗೆ ಇಪ್ಪತ್ತಿಪ್ಪತ್ತು ಲಕ್ಷ ಕೊಡಬೇಕು ಅಂತಾ ಕೇಳ್ತಾರಲ್ಲಾ... ವರ್ಷಕ್ಕೆ ಬರೋ ನೂರು ಚಿತ್ರಗಳಿಗೆ ತಲಾ ಇಪ್ಪತ್ತು ಲಕ್ಷದಂತಾದ್ರೆ ಸರ್ಕಾರಕ್ಕೆ 20 ಕೋಟಿ ಹೊರೆ ಬೀಳುತ್ತೆ. ಇರಲಿ, ನಮ್ಮ ಸಿನಿಮಾರಂಗ ಉಳೀಬೇಕು ಅಂದ್ರೆ ಏನೇನಾಗಬೇಕು ಎಲ್ಲಾ ಮಾಡಲೇಬೇಕು. ಆದ್ರೆ ಇವರ ಬೇಡಿಕೆಯ ಪಟ್ಟಿ ಎಲ್ಲಿಂದ ಎಲ್ಲಿಗೆ ಮುಟ್ಟಿದೆ ನೋಡಿ. ಕನ್ನಡ ಚಿತ್ರಗಳಿಗೆ ಸಹಾಯ ಧನ ಅಂತಾ ಇಪ್ಪತ್ತಿಪ್ಪತ್ತು ಲಕ್ಷಾನ ಪುಗಸಟ್ಟೇ ಕೊಡಬೇಕು, ಪ್ರದರ್ಶನ ತೆರಿಗೆಯನ್ನು ರದ್ದು ಮಾಡಬೇಕು, ಇವ್ರು ರಿಮೇಕ್ ಮಾಡುದ್ರೂ ಅದಕ್ಕೆ ಪ್ರಶಸ್ತಿ ಕೊಡಬೇಕು...ಅಂತಿದಾರೆ. ನಾಳೆ ಹೀಗೇ ಮುಂದುವರಿದು "ಇಡೀ ಸಿನಿಮಾಗೆ ಸರ್ಕಾರ ಪೂರ್ತಿ ದುಡ್ಡುಕೊಡಬೇಕು, ಜನರಿಗೆ ಮನೆಮನೆಗೆ ಟಿಕೆಟ್ ತಲುಪಿಸಬೇಕು, ನಮ್ ಸಿನಿಮಾ ನೋಡ್ದೇ ಇದ್ದೋರ್ಗೆ ಶಿಕ್ಷೆ ಕೊಡಬೇಕು... ಇವೆಲ್ಲಾ ಮಾಡುದ್ರೆ ಚಿತ್ರರಂಗ ಉಳ್ಯುತ್ತೆ" ಅನ್ನೋ ದಿನವೂ ಬಂದೀತಾ ಅಂತಿದಾರೆ ಜನಾ!

ನಿಜವಾಗ್ಲೂ ಕೊನೆಮೊಳೆ ಹೊಡೀತಾ ಇರೋರು ಯಾರು?

ಕನ್ನಡ ಚಿತ್ರರಂಗಾನ ಕಳಪೆ ಕಥೆಗಳಿಂದ, ಕಳಪೆ ಹಾಡುಗಳಿಂದ, ಕೆಟ್ಟದಾಗಿ ಉಚ್ಚರಿಸಿದ್ರೂ ಇವರೇ ಬೇಕು ಅಂತಾ ಪರಭಾಷಿಕ ಹಾಡುಗಾರರನ್ನು ಕರೆತರೋದ್ರಿಂದ, ಕನ್ನಡದ ಕಲಾವಿದರನ್ನು ಕಡೆಗಣಿಸಿ ಹೊರಗಿನಿಂದ ಆಮದು ಮಾಡಿಕೊಳ್ಳೋದ್ರಿಂದ, ಜುಜುಬಿ ಒಂದು ಹಾಸ್ಯದ ದೃಶ್ಯಾನೂ ಸ್ವಂತವಾಗಿ ಮಾಡಕ್ಕಾಗ್ದೆ ಪಕ್ಕದ ಭಾಷೆ ಸಿನಿಮಾಗಳಿಂದ ಕದಿಯೋದ್ರಿಂದ, ಆಗಿರೋ ಒಪ್ಪಂದಗಳನ್ನು ಒಳಗಿಂದೊಳಗೇ ಮುರಿದು ಪರಭಾಷಾ ಚಿತ್ರ ವಿತರಣೆ ಒಂದ್ಕಡೆ ಮಾಡ್ಕೊಂಡು, ಇನ್ನೊಂದ್ಕಡೆ ಕನ್ನಡ ಚಿತ್ರರಂಗ ಉಳ್ಸಿ ಉಳ್ಸಿ ಅಂತ ಬೂಟಾಟಿಕೆ ಮಾಡೋದ್ರಿಂದ... ಕೊನೆ ಮೊಳೆ ಹೊಡ್ಯಕ್ ಮುಂದಾಗಿರೋದು ಚಿತ್ರರಂಗದ ಒಳಗಿನ ಕೆಲಮಂದೀನೇ ಅಂತ ಜನಕ್ ಅನ್ಸಲ್ವಾ ಗುರು?
ಕನ್ನಡ ಚಿತ್ರರಂಗದೋರು ಉದ್ಧಾರ ಆಗೋಕೆ ತೊಡಕಾಗಿರೋ ಮೂಲಭೂತ ಸಮಸ್ಯೆ ಏನು? ಇದಕ್ ಪರಿಹಾರ ಏನು? ಅಂತಾ ಚಿಂತನೆ ಮಾಡಿ, ಇಲ್ಲಿನ ಪ್ರತಿಭೆಗಳನ್ನು ಬೆಳೆಸೋದು ಹ್ಯಾಗೆ? ಹೊಸ ಪ್ರತಿಭೆಗಳನ್ನು ಬೆಳಕಿಗೆ ತರೋದು ಹ್ಯಾಗೇ? ಕನ್ನಡ ಚಿತ್ರಗಳಿಗೆ ಬಂಡವಾಳ ತೊಡಗಿಸೋರ್ಗೆ ಅನುಕೂಲ ಮಾಡಿಕೊಡೋದು ಹ್ಯಾಗೇ? ಕಲಾವಿದರ ಜೀವನ ಭದ್ರತೆಗೆ ಏನು ಮಾಡಬೇಕು? ಮೀಟರ್ ಬಡ್ಡಿ ಸಾಲದ ಶೂಲವಿಲ್ಲದ, ಸರಳ ಬಡ್ದಿಯ ಸಾಲಕ್ಕೆ ಸಹಕಾರಿಯಾಗೋದು ಹ್ಯಾಗೇ? ಕನ್ನಡ ಚಿತ್ರರಂಗಾನಾ ಉದ್ಯಮವಾಗಿ ನೋಡಿ, ಪ್ರಪಂಚದ ತುಂಬೆಲ್ಲಾ ಮಾರುಕಟ್ಟೆ ಹುಟ್ಟುಹಾಕೋ ವೃತ್ತಿಪರತೆ ಹೇಗೆ ಗಳಿಸಿಕೊಳ್ಳೋದು? ಅಂತೆಲ್ಲಾ ಗಹನವಾದ ಚರ್ಚೆ ನಡ್ಸಕ್ ಮುಂದಾಗಬೇಕು ಗುರು! ಕನ್ನಡ ಚಿತ್ರರಂಗಕ್ಕೆ ತನ್ನಕಾಲಮೇಲೆ ನಿಲ್ಲೋ ತಾಕತ್ತಿಲ್ಲಾ ಅಂತಾ ಚಿತ್ರರಂಗದೋರು ಭಾವಿಸೋದಾದ್ರೆ ಸರ್ಕಾರದ ಸವಲತ್ತುಗಳ ಊರುಗೋಲಿನ ಆಶ್ರಯ ಬಯಸೋದು ಬಿಟ್ಟು ಮಾರುಕಟ್ಟೆ ಗೆಲ್ಲಬಲ್ಲ ಚಿತ್ರಗಳ ನಿರ್ಮಾಣವೆಂಬ ಸೋತಕಾಲಿಗೆ ಬಲತುಂಬೋ ದೀರ್ಘಾವಧಿ ಯೋಚನೆಗಳೂ, ಯೋಜನೆಗಳೂ ಬೇಕು ಗುರು!

7 ಅನಿಸಿಕೆಗಳು:

Anonymous ಅಂತಾರೆ...

ಹೌದು, ಇದು ಒಂದು ರೀತಿಯ ಮೈಗಳ್ಳತನ. ಮಗು ಅಂಬೆಗಾಲು ಇಡುವುದು ಸಾಮಾನ್ಯ, ನಡೆಯಲು ಹೋದರೆ ಎಡವಿ ಬೀಳುತ್ತದೆ ಎಂದು ಜೀವನ ಪೂರ್ತಿ ಅಂಬೆಗಾಲು ಇಡಿಸುವದಕ್ಕೆ ಆಗುತ್ತದೆಯಾ ?

ಅಷ್ಟಕ್ಕೂ ಇವರಿಗೆ ಬೇಕಾದ ಸಬ್ಸಿಡಿ ಇವರೇ ಹೊಂದಿಸಿಕೊಳ್ಳಬಹುದು...

೧) ಹೀರೋಗೆ ಕೊಡುವ ದುಡ್ಡಿನಲ್ಲಿ ೧೦% ಕಡಿತ
೨) ನಾಯಕಿಯ ಸಂಬಾವನೆಯಲ್ಲಿ ೧೦% ಕಡಿತ

ಅನವಶ್ಯ ಖರ್ಚುಗಳಿಗೆ ಬ್ರೇಕ್ ಹಾಕಿದರೆ, ಇವರಿಗೆ ದುಪ್ಪಟ್ಟು ಹಣ ಸಿಗುತ್ತದೆ.

ಈ ಚಿತ್ರರಂಗದಲ್ಲಿ ಇರುವರು ನೆಟ್ಟಗೆ ಟ್ಯಾಕ್ಸ ಕಟ್ಟಲಿ ಆಮೇಲೆ ಅಷ್ಟಕ್ಕೂ ಚಿತ್ರ ಸಂಪಾದನೆ ಮಾಡಿದರೆ ಸರಕಾರಕ್ಕೆ ಇವರು ಹೆಚ್ಚು ಹಣಕೊಡುತ್ತಾರ ??. ಇವರಿಗೆ ಒಂದು ರೀತಿ
ಸ್ಪರ್ಧೆ ಬೇಡವೇ ಬೇಡ, ಸರ್ಕಾರದ ಕೃಪಾಪೋಷಿತದಲ್ಲಿ ಇವರು ಬೆಳೆಯಬೇಕು

ಸರಕಾರ ಇಂತಹ ಬೇಡಿಕೆಗಳಿಗೆ ಮಣಿಯದೆ ಡಬ್ಬಿಂಗ್ ಬಿಡಬೇಕು...

Unknown ಅಂತಾರೆ...

olle chitra thegedare saku. ivarige subsidy yake beku. jan mechhi kollo tharah thegedare chitraranga uddara aguthe.
ivaru subsidy goskara chitra thegithare ansuthe

Anonymous ಅಂತಾರೆ...

ಹೌದು ನೀವು ಹೇಳೋದು ಸರಿಯಾಗಿದೆ,

ನಮ್ಮ ಚಿತ್ರರಂಗದಲ್ಲಿ ಕೆಲವು ಚಿತ್ರಗಳನ್ನು ಬಿಟ್ಟರೆ ಉಳಿದ್ದಿದ್ದೆಲ್ಲ ಗುಣ ಮಟ್ಟ ಬಗ್ಗೆ ಚಿಂತೆಯನ್ನೆ ಮಾಡಿತ್ತಿಲ್ಲ. ಸುಮ್ನೆ ಎನಾದ್ರು ಸುತ್ತಿ ಬಿಸ್ಸಕಿದ್ರೆ ಜನಾ ನೋಡ್ತಾರೆ ಅಂತ ತಿಳಿದು ಕೊಂಡಿದಾರೆ.

ಒಳ್ಳೆಯ ಚಿತ್ರಗಳನ್ನ ಮಾಡಿದರೆ ಕನ್ನಡ ಜನತೆ ಯಾವಾಗಲು ತುಂಬು ಹೃದಯದಿಂದ ಸ್ವಾಗತಿಸುತ್ತಾರೆ ಅನ್ನೋದಕ್ಕೆ ಅನೇಕ ಯಶಸ್ವಿ ಚಿತ್ರಗಳೆ ಸಾಕ್ಷಿ.

Anonymous ಅಂತಾರೆ...

Kalavidharanu prothsahisabeku, Kannada gayakarige avakasha kodabeku.... avaga ivarige ee ella soulabyagalanu keluva haku baruthe....

Idhanella anusarisi, nanthara nima bedikegalanu mundidi....

Jai Karnataka

Anonymous ಅಂತಾರೆ...

muttina hara, mysore mallige matte matte barali

Anonymous ಅಂತಾರೆ...

ಕನ್ನಡ ಚಿತ್ರಗಳ ಗುಣಮಟ್ಟ ಸುಧಾರಿಸಏಕು ಅನ್ನೋ ಮಾತಲ್ಲಿ ಸಂದೇಹ ಇಲ್ಲ.

ಡಬ್ಬಿಂಗ್ ಗೆ ಅನುಮತಿ ಕೊಡ್ತೀವಿ ಅಂತ ಇಟ್ಕೊಳಿ. ಆಗ ಕನ್ನಡಿಗರೆಲ್ಲರೂ ಕನ್ನಡಕ್ಕೆ ಡಬ್ ಆದ ಪರಭಾಷಾ ಚಿತ್ರಗಳನ್ನು ನೋಡ್ತಾರೆ. ಆದ್ರೆ ಪರಭಾಷಿಕರು ಕನ್ನಡದಲ್ಲಿ ಡಬ್ ಆದ ಚಿತ್ರ ಇದ್ದರೂ, ಅವರು ಅವರದ್ದೇ ಭಾಷೆಯಲ್ಲಿನ ಚಿತ್ರವನ್ನು ಮಾತ್ರ ನೋಡ್ತಾರೆ. ಡಬ್ಬಿಂಗ್ ಚಿತ್ರಗಳು ಪರಭಾಷಾ ಚಿತ್ರಗಳನ್ನು ರಿಪ್ಲೇಸ್ ಮಾಡಿದರೆ ಮಾತ್ರ ಡಬ್ಬಿಂಗ್ ಗೆ ಅನುಮತಿ ಕೊಡಬಹುದು. ಆದ್ರೆ ಹಾಗಾಗುತ್ತೆ ಅಂತ ಏನು ಗ್ಯಾರಂಟಿ? ದುರ್ಭಿಕ್ಷದಲ್ಲಿ ಅಧಿಕಮಾಸ ಬಂದಹಾಗೆ, ಪರಭಾಷಾ ಚಿತ್ರಗಳ ಜೊತೆಗೆ ಡಬ್ಬಿಂಗೂ ವಕ್ಕರಿಸಿದರೆ ಏನು ಮಾಡುವುದು?

-ಯಾವುದೋ ಒಂದು ಹೆಸರು

Mahesha Ktdy ಅಂತಾರೆ...

ISTONDU VAADA VIVADAKKINTHA KANOONU HORATA MADODU UTTAMA - DAYAVITTU YARADARU E PRAYATHNA MADI NAMAGE NYAYA DORAKISI KODI

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails