ಸಾಹಿತ್ಯ ಸಮ್ಮೇಳನವೂ! ನಿರ್ಣಯಗಳೂ!!


75ನೇ ಕನ್ನಡ ಸಾಹಿತ್ಯ ಸಮ್ಮೇಳನ ಚಿತ್ರದುರ್ಗದಲ್ಲಿ ಇದೀಗ ಮುಗಿದಿದೆ. (ಫೋಟೋಕೃಪೆ : ಒನ್ ಇಂಡಿಯಾ) ಆ ಸಮ್ಮೇಳನದಲ್ಲಿ ಮೂರು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಒಂದು ವಿಶೇಷಾ ಅಂದ್ರೆ ಇದರಲ್ಲಿನ ಯಾವೊಂದು ನಿರ್ಣಯಾನು ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದ್ದಲ್ಲವೇ ಅಲ್ಲ. ಏನಪ್ಪಾ ಇದರ ಅರ್ಥ? ಕನ್ನಡ ಸಾಹಿತ್ಯ ವಲಯದೋರು ಕೂಡಾ ಕನ್ನಡವನ್ನು ಬರೀ ಸಾಹಿತ್ಯವೆಂಬ ಜುಟ್ಟಿನ ಮಲ್ಲಿಗೆಗಿಂತಾ ಭಿನ್ನವಾದ ಹೊಟ್ಟೆಗೆ ಹಿಟ್ಟು ಕೊಡುವ ಭಾಷೆಯಾಗಿ ಪರಿಗಣಿಸಿದಾರೆ ಅನ್ನೋದೇ ಆಗಿದೆ.
ನಿರ್ಣಯ 1 : ಕನ್ನಡಿಗರ ಗಡಿ ಕಿರಿಕ್ಕು, ಉದ್ಯೋಗದ ಹಕ್ಕು ಮತ್ತು ಏಳಿಗೆಯ ದಿಕ್ಕು!

ಕನ್ನಡನಾಡಿನ ಎಲ್ಲಾ ಉದ್ದಿಮೆಗಳು ಮತ್ತು ವ್ಯವಸ್ಥೆಗಳಿಗೆ ಇರುವ ಮೂಲ ಉದ್ದೇಶವೇ ನಮ್ಮ ಬದುಕನ್ನು ಕಟ್ಟಿಕೊಡುವುದು. ಈ ಮಣ್ಣಿನ ಪ್ರತಿಯೊಂದು ಉದ್ಯೋಗದ ಮೇಲೂ ಕನ್ನಡಿಗನಿಗೇ ಮೊದಲ ಹಕ್ಕು. ಎಲ್ಲದರಲ್ಲೂ ಕನ್ನಡಿಗರಿಗೇ ಆದ್ಯತೆ ಸಿಗಬೇಕು ಅನ್ನೋ ಉದ್ದೇಶದಿಂದ ಡಾ. ಸರೋಜಿನಿ ಮಹಿಷಿಯವರು ಹತ್ತಾರು ವರ್ಷಗಳ ಹಿಂದೆ ಸಲ್ಲಿಸಿದ್ದ ವರದಿಯನ್ನು ಜಾರಿಗೆ ತರುವ ಮೂಲಕ ಸರ್ಕಾರ ಈಡೇರಿಸಬೇಕು ಎನ್ನುವುದು ಈ ನಿರ್ಣಯ. ಇದರ ಜೊತೆಜೊತೆಯಲ್ಲೇ ಕರ್ನಾಟಕದಲ್ಲಿ ಹಿಂದುಳಿದ ಪ್ರದೇಶಗಳೆಂದೂ, ಈ ಪ್ರದೇಶಗಳಲ್ಲಿ ಬೆಳವಣಿಗೆ ಚಟುವಟಿಕೆಗಳು ನಡೆಯಬೇಕೆಂದೂ ತಾಲೂಕುವಾರು ಗುರುತಿಸಿ ಡಾ. ನಂಜುಂಡಪ್ಪ ಅವರು ಸಲ್ಲಿಸಿರೋ ವರದಿಯೂ ಜಾರಿಯಾಗಬೇಕೆಂಬುದು ಈ ನಿರ್ಣಯದ ಮತ್ತೊಂದು ಅಂಶ. ಕನ್ನಡನಾಡಿನ ಗಡಿ ತಕರಾರಿಗೆ ಕೊನೆ ಹಾಡಲು ಮಹಾಜನ ವರದಿ ಜಾರಿಗೆ ಬರಲಿ ಎನ್ನೋದು ಇನ್ನೊಂದು. ಒಟ್ಟಾರೆ ಸಾಹಿತ್ಯ ಸಮ್ಮೇಳನದ ಆಶಯವೂ ಕನ್ನಡಿಗರ ಬದುಕು ಮತ್ತು ಏಳಿಗೆಗಳ ಕುರಿತಾಗಿದೆ ಅನ್ನೋದು ಸಂತಸದ ವಿಷಯ!!

ನಿರ್ಣಯ 2 : ಚಳವಳಿಗಾರರು ಶ್ಲಾಘನೆಗೆ ಅರ್ಹರು! ಶಿಕ್ಷೆಗಲ್ಲ!!

ಕನ್ನಡನಾಡು ಹುಟ್ಟಿದಂದಿನಿಂದ ನಮ್ಮ ರಾಜಕೀಯ ಪಕ್ಷಗಳು ನಮ್ಮ ಹಕ್ಕುಗಳನ್ನು ನಮಗೆ ದಕ್ಕಿಸಿಕೊಡುವಲ್ಲಿ ಸೋತಿದ್ದು, ಇವುಗಳ ಕಾರಣದಿಂದಲೇ ಇಂದು ಕನ್ನಡಿಗರು ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ. ತಮ್ಮ ಬದುಕು, ಭವಿಷ್ಯಗಳನ್ನು ಪಣಕ್ಕಿಟ್ಟು ಹೋರಾಟಮಾಡುವವರನ್ನು ನಮ್ಮ ಸರ್ಕಾರಗಳು ನಡೆಸಿಕೊಳ್ಳುವ ಬಗೆ ಬಲ್ಲವರೇ ಬಲ್ಲರು. ನಮ್ಮ ರಾಜಕಾರಣಿಗಳು ಕಾವೇರಿ ನದಿನೀರು ಹಂಚಿಕೆಯಲ್ಲಿ ನ್ಯಾಯ ದೊರಕಿಸಿಕೊಡಲು ಸಂಸತ್ತಿನಲ್ಲಿ ದನಿ ಎತ್ತಿದ್ದರೆ, ರಾಷ್ಟ್ರೀಯ ಜಲನೀತಿಗೆ ಒತ್ತಾಯಿಸಿದ್ದರೆ ಇವತ್ತು ಬೀದಿಗಿಳಿದು ಹೋರಾಟ ಮಾಡುವ ಸ್ಥಿತಿ ಬರುತ್ತಿತ್ತೇನು? ಗಡಿ ವಿವಾದ ಬಗೆ ಹರಿಯಲು ಅಂದಿನಿಂದಲೇ ಪಟ್ಟು ಹಿಡಿದು ಮಹಾಜನ ವರದಿ ಜಾರಿಗೊಳಿಸುವಂತೆ ಕೇಂದ್ರದ ಮೇಲೆ ಒತ್ತಡ ತಂದಿದ್ದರೆ ಇವತ್ತು ಬೆಳಗಾವಿ ಹೋರಾಟಗಳ ಅಗತ್ಯವಿರುತ್ತಿತ್ತೇ? ಕನ್ನಡ ಹೋರಾಟವನ್ನು ಸ್ವಾರ್ಥಕ್ಕಾಗಿ ಬಳಸಿ, ಕನ್ನಡ ಹೋರಾಟವೆಂದರೆ ಪ್ರಹಸನ ಎನ್ನುವ ಮಟ್ಟಕ್ಕೆ ತಂದಿರುವ ನಾಯಕರೂ ಇಲ್ಲವೆಂದಲ್ಲ, ನಾಡಿನ ಹಿತಕ್ಕಾಗಿ ಬೂಟಿನೇಟಿಗೆ ಮೈಯೊಡ್ಡಿ, ಪೊಲೀಸರ ಲಾಠಿ ಏಟಿಗೆ ಕೈಕಾಲು ಮುರಿಸಿಕೊಂಡು, ಡಕಾಯಿತಿಯಂತಹ ಅತಿರೇಕದ ಕೇಸುಗಳಿಗೆ ಈಡಾಗಿ ಜಾಮೀನು ಸಿಗದೆ ಜೈಲುವಾಸ ಅನುಭವಿಸಿ ಇಂದಿಗೂ ದಿನಬೆಳಗಾದ್ರೆ ಠಾಣೆಗಳ ಮೆಟ್ಟಲು ಹತ್ತುವ, ಕಟಕಟೆಯಿಂದ ಕಟಕಟೆಗೆ ಅಲೆಯುವ ಹೋರಾಟಗಾರರ ಬಗ್ಗೆ ಸಮ್ಮೇಳನ ತೋರಿರುವ ಕಾಳಜಿ ಶ್ಲಾಘನೀಯವಾಗಿದೆ. ಹೋರಾಟಗಾರರ ಮೇಲಿನ ಕೇಸುಗಳನ್ನು ಕೈಬಿಡಬೇಕೆನ್ನುವ ನಿರ್ಣಯ ಕನ್ನಡ ಸಾಹಿತ್ಯ ಕ್ಷೇತ್ರ ಹೋರಾಟಗಳನ್ನು ಸಮರ್ಥಿಸುತ್ತಿರುವ ಶುಭಸೂಚನೆಯಾಗಿದೆ.

ನಿರ್ಣಯ 3 : ಕನ್ನಡಿಗರಿಗೆ ಕಲಿಕೆ ಕೈಗೆಟುಕಬೇಕು!

ನಾಡಿನ ಎಲ್ಲ ಜನತೆಗೆ ಸಮಾನವಾದ ಕಲಿಕಾ ವ್ಯವಸ್ಥೆ ಜಾರಿಯಾಗುವುದಕ್ಕೆ ದಾರಿಯಾಗಿ ಎಲ್ಲಾ ಕಲಿಕಾ ಸಂಸ್ಥೆಗಳನ್ನು ರಾಷ್ಟ್ರೀಕರಿಸುವ ನಿರ್ಣಯವನ್ನು ಈ ಸಮ್ಮೇಳನ ತೆಗೆದುಕೊಂಡಿದೆ. ಇಲ್ಲಿ ರಾಷ್ಟ್ರೀಕರಣ ಅನ್ನೋದ್ರ ಅರ್ಥ ಕರ್ನಾಟಕ ರಾಜ್ಯ ಸರ್ಕಾರ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲಿ ಅನ್ನುವುದೇ ಆಗಿದೆ ಅನ್ನುವುದು ನಮ್ಮ ಭಾವನೆ. ಶಿಕ್ಷಣ ಸಂಸ್ಥೆಗಳು, ಅವುಗಳಲ್ಲಿನ ಕಲಿಕಾ ಪದ್ದತಿ, ಶುಲ್ಕಗಳು, ಪಠ್ಯಗಳ ಮೇಲೆ ಸರ್ಕಾರ ನಿಯಂತ್ರಣವಿಟ್ಟುಕೊಳ್ಳುವುದರಿಂದ ಕಲಿಕೆ ಎಲ್ಲರಿಗೂ ದಕ್ಕುವುದರ ಜೊತೆಗೆ ಸರ್ಕಾರದ ಕಲಿಕಾನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲೂ ಸಾಧ್ಯವಾಗುವೆಡೆಗೆ ಇದು ಮೊದಲ ಹೆಜ್ಜೆಯಾಗಲಿದೆ ಅನ್ನುವುದು ಸಮ್ಮೇಳನದ ಆಶಯದಂತೆ ಕಾಣುತ್ತದೆ.

ಸಾಹಿತ್ಯ ಸಮ್ಮೇಳನದ ಹಿಟ್ಟಿನ ಮಾತು!

ಕನ್ನಡದ ಸಾಹಿತ್ಯ ಸಮ್ಮೇಳನಗಳು ಕನ್ನಡಿಗರ ಬದುಕು, ಉದ್ಯೋಗ, ಏಳಿಗೆಗಳ ಬಗ್ಗೆ ಮಾತಾಡುವ ಮೂಲಕ - ಕನ್ನಡನುಡಿಯು ಸಾಹಿತ್ಯವೆಂಬ ಜುಟ್ಟಿನ ಮಲ್ಲಿಗೆಯ (ಕೆಲವೇ ಜನರ ಹಿಟ್ಟಿನನುಡಿ) ಸ್ಥಾನದಿಂದ ಜನತೆಯ ಏಳಿಗೆ, ಒಗ್ಗಟ್ಟುಗಳ ಹೊಟ್ಟೆಯ ಹಿಟ್ಟನ್ನು ಸಂಪಾದಿಸಿಕೊಳ್ಳುವ ದಾರಿಯಾಗಲಿ ಎಂಬ ತುಡಿತವನ್ನು ತೋರಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಒಟ್ಟಿನಲ್ಲಿ ಕನ್ನಡಿಗರ ಹಕ್ಕೊತ್ತಾಯದ ಕೂಗಿಗೆ ಸಾಹಿತ್ಯ ವಲಯದಿಂದಲೂ ದನಿಬಲ ಸಿಕ್ಕುತ್ತಿರುವುದು ಸಂತಸದ ಸುದ್ದಿಯಾಗಿದೆ ಗುರು!

1 ಅನಿಸಿಕೆ:

Anonymous ಅಂತಾರೆ...

The request done by Kannada sahitya sammelana is really a great thing. All the three requests are new; but looks like these things should have been done by the Govt. long ago. Karnataka is the last state to get its own benifits.

Jayaswamy
Chicago.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails