ಐಪಿಎಲ್ ಕ್ರಿಕೆಟ್ ಕಾಮೆಂಟರಿ : "ಹಳದಿಕೆಂಪು-ಕನ್ನಡದ ಕಂಪು"

ಭಾರತೀಯ ಕ್ರಿಕೆಟ್ಟಿಗೆ ಹೊಸ ಬಣ್ಣ ತಂದುಕೊಟ್ಟಿರೋ ಐಪಿಎಲ್ ಸರಣಿ ಈ ಬಾರಿ ಪಂದ್ಯಾವಳಿಯಲ್ಲಿ ಕನ್ನಡದಲ್ಲೂ ಕಾಮೆಂಟರಿ ಕೊಡೋ ಯೋಜನೆ ಮಾಡಿದೆ ಅನ್ನೋ ಸೂಪರ್ ಸುದ್ದಿ 2009ರ ಮಾರ್ಚ್ 11ರ ಕನ್ನಡಪ್ರಭದ 12ನೇ ಪುಟದಲ್ಲಿ ಬಂದಿದೆ ಗುರು!! ಒಟ್ನಲ್ಲಿ ಗೊತ್ತಿದ್ದೋ ಗೊತ್ತಿಲ್ಲದೇನೋ ನಿಜವಾದ ಒಕ್ಕೂಟ ವ್ಯವಸ್ಥೆ ಹೇಗಿರಬೇಕು ಅನ್ನೋದಕ್ಕೆ ಬಿ.ಸಿ.ಸಿ.ಐ ಒಂದು ಮಾದರೀನ ಹಾಕ್ಕೊಡ್ತಿದೆ!

ಕ್ರಿಕೆಟ್ : ಹಿಂದೀ ಹೇರಿಕೆಯ ಪ್ರಮುಖ ಸಾಧನ!

"ಭಾರತದೋರಿಗೆ ಕ್ರಿಕೆಟ್ಟು ಅನ್ನೋದು ಕ್ರೀಡೆ ಮಾತ್ರಾ ಆಗಿಲ್ಲಾ, ಅದು ಅವರ ರಾಷ್ಟ್ರೀಯತೆಯಾಗಿದೆ" ಅಂತ ಅದ್ಯಾರೋ ಪುಣ್ಯಾತ್ಮ ಅಂದಿದ್ರಂತೆ. ಹಾಗೆ ಕ್ರಿಕೆಟ್ ಪಂದ್ಯಗಳು ಕಳೆದ ಮೂವತ್ತು ನಲವತ್ತು ವರ್ಷಗಳಲ್ಲಿ ಬೆಳೆದು ಆವರಿಸಿಕೊಂಡ ಪರಿ ಅದ್ಭುತವಾಗಿದೆ ಗುರು! ಇದೇ ಹೊತ್ತಲ್ಲಿ ತಂತ್ರಜ್ಞಾನದಲ್ಲಾದ ಬೆಳವಣಿಗೆ ನಮ್ಮ ಮನೆಗಳ ಒಳಗೆ ಟಿವಿ ಬರಲು ಕಾರಣವಾಯ್ತು. ಇದರ ಜೊತೆಯಲ್ಲೇ ದೂರದರ್ಶನವೆಂಬುದು ಭಾರತ ಸರ್ಕಾರ ತನ್ನ ಪ್ರಜೆಗಳ ಮೇಲೆ ಹಿಂದಿಯನ್ನು ಹೇರುವ ಹೆದ್ದಾರಿಯಾಯ್ತು. ತಕ್ಕಳಪ್ಪಾ, ಹೇಗಿದ್ರೂ ಜನಕ್ಕೆ ಕ್ರಿಕೆಟ್ ನೋಡೋ ಹುಚ್ಚು ಹಿಡ್ದಿದೆ, ಇದೇ ಸಮಯಾ ಅಂತ ನಮ್ಮ ಸರ್ಕಾರಗಳು ಹಿಂದೀ ಕಾಮೆಂಟರಿಗೆ ಇನ್ನಿಲ್ಲದ ಪ್ರಾಮುಖ್ಯತೆ ಕೊಡಲು ಶುರು ಹಚ್ಕಂಡ್ವು.
ಪ್ರಪಂಚದ ಯಾವ್ದೇ ಮೂಲೇಲೆ ಕ್ರಿಕೆಟ್ ನಡುದ್ರೂ ನಡುರಾತ್ರಿ, ಮುಂಜಾನೆ ಅನ್ನೋ ಪರಿವೆ ಇಲ್ಲದೆ ಜನ ಟಿವಿ ಮುಂದೆ ಕೂಡ್ಲಿಕ್ಕೆ ಶುರು ಮಾಡ್ತಿದ್ದಂಗೇ ತಮಗೆ ಗೊತ್ತಿಲ್ದಂಗೇನೆ ಹಿಂದೀ ಕಲ್ಯಕ್ ಶುರು ಹಚ್ಕೊಂಡ್ರು. "ಅಣ್ಣಾ... ಏಕ್ ಸೌ ಉಂತೀಸ್ ಅಂದ್ರೆ ಎಷ್ಟಣ್ಣಾ?" "ಛೇ ವಿಕೆಟ್ ಖೋಕರ್, ನಿನ್ನಿಯಾನ್ಬೇ ರನ್ ಅಂದ್ರೆ ಎಷ್ಟು ಸಾರ್?" "ಓ ಇಕ್ಯಾವನ್ ಅಂದ್ರೆ ಐವತ್ತೊಂದಾ?" ಅನ್ನೋ ಡೈಲಾಗುಗಳು ಕನ್ನಡದ ಮನೆಮನೆಯಲ್ಲಿ ಕಾಮನ್ನಾಗೋಯ್ತು ಗುರು! ಹಾಗೇ, ಅಲ್ಲೀ ತಂಕಾ ನೀಲಕಂಠರಾವ್ ಥರದ ವೀಕ್ಷಕ ವಿವರಣೆಕಾರರಿಂದ ರೇಡಿಯೋಗಳಲ್ಲಿ ಕನ್ನಡದಲ್ಲಿ ಕೇಳಿಬರುತ್ತಿದ್ದ ಕಾಮೆಂಟರಿಗಳೂ ಕೊನೆಯಾಗಿಹೋದವು. ಇಷ್ಟೆಲ್ಲಾ ಬೆಳವಣಿಗೆ ಕಂಡ ಮೇಲೂ ನಮಗೆ ಕ್ರಿಕೆಟ್ ಕಾಮೆಂಟರಿ ಅನ್ನೋದು ಭಾರತ ಸರ್ಕಾರ ನಮಗೆಲ್ಲಾ ನುಂಗುಸಕ್ ಮುಂದಾಗಿರೋ ಹಿಂದಿ ಹೇರಿಕೆಯೆಂಬ ವಿಷಕ್ಕೆ ಮೆತ್ತಿದ ಸಿಹಿ ಲೇಪನ ಅನ್ನೋದು ಗೊತ್ತಾಗ್ಲಿಲ್ವಲ್ಲಾ?

ಕನ್ನಡದ ಕಾಮೆಂಟರಿ : ಒಕ್ಕೂಟ ವ್ಯವಸ್ಥೆಗೆ ಗೌರವ!

ನಿಜಾ ಗುರು, ನಮ್ಮ ಮನರಂಜನೆ ನಮ್ಮ ನುಡಿಯಲ್ಲಿರಬೇಕು ಅನ್ನೋದು ನಮ್ಮ ಮೂಲಭೂತ ಹಕ್ಕಾಗಿದೆ. ಇವತ್ತು ಐಪಿಎಲ್ ಸರಣಿಯಲ್ಲಿ ಕನ್ನಡದ ಕಾಮೆಂಟರಿ ಕೊಡಕ್ಕೆ ಅವರು ಮುಂದಾಗಿರೋದು ಒಕ್ಕೂಟದ ಘನತೆ ಕಾಪಾಡಕ್ಕೇ ಅಂತೇನೂ ಅಲ್ಲ. ಇದರಿಂದ ಕನ್ನಡದ ಮಾರುಕಟ್ಟೇನಾ ಗೆಲ್ಲಕ್ ಸಾಧ್ಯಾ ಆಗಬಹುದು ಅನ್ನೋದೇ ಅವರ ಈ ನಿಲುವಿಗೆ ಕಾರಣ. ಏನೇ ಆಗಲಿ, ಇದರಿಂದಾಗಿ ಕನ್ನಡಿಗರು ತಮ್ಮ ನುಡಿಗೆ ಇರೋ ಮಾರುಕಟ್ಟೆ ಶಕ್ತೀನಾ ಮತ್ತೊಮ್ಮೆ ಅರಿತುಕೋಬೇಕು. ಬರೀ ಕಾಮೆಂಟರಿ ಅಲ್ಲ, ಟಿ.ವಿಯ ಜಾಹೀರಾತುಗಳು ಕೂಡಾ ಕನ್ನಡದಲ್ಲಿರೋದು ಆಯಾ ಉತ್ಪನ್ನಗಳ ಮಾರಾಟ ನಮ್ಮ ನಾಡಲ್ಲಿ ಹೆಚ್ಚೋದಕ್ಕೆ ಸಹಾಯಕ ಅಂತ ತೋರಿಸಿಕೊಡಬೇಕು. ಆಗ ಹಿಂದಿ ಹೇರಿಕೆಯೂ ಕೊನೆಯಾಗುತ್ತೆ, ಒಕ್ಕೂಟ ವ್ಯವಸ್ಥೆಗೂ ಗೌರವ ಬರುತ್ತೆ! ಹೌದಲ್ವಾ ಗುರು?

4 ಅನಿಸಿಕೆಗಳು:

Anonymous ಅಂತಾರೆ...

ಒಳ್ಳೆ ಸುದ್ದಿ
ಕರ್ನಾಟಕದಲ್ಲಿ ಪ್ರಾಸಾರ ಆಗೋ ಯಾವುದೇ ಕ್ರಿಕೆಟ್ ಕಾಮೆ೦ಟರಿ ಅದರಲ್ಲೂ ಐಪಿಎಲ್ ಅ೦ತೂ ಕನ್ನಡದಲ್ಲಿ ಕಾಮೆ೦ಟರಿ ಕೊಡಲೇಬೇಕು. ಟಿವಿಗಳಲ್ಲಿ ಕನ್ನಡದಲ್ಲಿ ಕಾಮೆ೦ಟರಿ ಮತ್ತೆ ಶುರು ಆಗಬೇಕು. ಹಿ೦ದಿಯಲ್ಲಿ ಕಾಮೆ೦ಟರಿ ಬ೦ದರೆ ಎಲ್ಲಾ ಓದ್ಕೊ೦ಡಿರುವ ಯುವಕರು ಹಡ್ಸನ್ ಸರ್ಕಲ್ ನಲ್ಲಿ ಸೇರಿ ಪ್ರತಿಭಟನೆ ಮಾಡಿ ಹಿ೦ದಿ ಭೂತಗಳನ್ನು ಸುಟ್ಟುಹಾಕಬೇಕು. ಸಾ೦ಕೇತಿಕ ಮೆರವಣಿಗೆ ಮಾಡಿ ಜನರಲ್ಲಿ ಹಿ೦ದಿ ಹೇರಿಕೆಯ ವಿರುದ್ಧ ಮತ್ತು ತ್ರಿಭಾಷಾ ಸೂತ್ರದ ವಿರುದ್ಧ ರ್ಜಾಗೃತಿ ಮೂಡಿಸಬೇಕು. ಬಿಬಿಸಿ ಸಿಎನ್ಎನ್ ನ್ಯೂಸ್ ಗಳಲ್ಲಿ ಸುದ್ದಿ ಬರಬೇಕು.

ಬಲ್ಲೇಬಾಜ್ ಅನ್ನೋದು ಏನೋ ಬಿರುದು ಅನ್ಕೊ೦ಡಿದ್ದೆ ಅದೆಷ್ಟೋ ದಿನ. ಭಲೇ ಭಲೇ

Anonymous ಅಂತಾರೆ...

"ಅನುಮೋದನೆಯ ನಂತರ ನಿಮ್ಮ ಕಾಮೆಂಟ್ ಕಂಡುಬರುತ್ತದೆ."
ಇದರ ಬದಲು "ಅನುಮೋದನೆಯ ನಂತರ ನಿಮ್ಮ ಅನಿಸಿಕೆ ಕಂಡುಬರುತ್ತದೆ." ಅ೦ತ ಬರಕ್ಕೆ ಏನು ಮಾಡಬೇಕು. ಯಾರಲ್ಲಿ ಆಗ್ರಹ ಮಾಡಬೇಕು.

Phantom ಅಂತಾರೆ...

ಕ್ರಿಕೆಟ್ ಕಾಮೆಂಟರಿ ಕನ್ನಡದಲ್ಲಿ ಬರೋದು ಸರಿನೇ ಗುರು. ಆದ್ರೆ ಕೇಬಲ್ ನೋರು ಕನ್ನಡದಲ್ಲಿ ಕೊಡ್ಬೇಕಲ್ಲ, ಅವರು ಬರಿ ಇಂಗ್ಲೀಷ್ ನಲ್ಲಿ ಮಾತ್ರ ಕೊಡೊದು ಅಂತಾರೆ. ಅದಕ್ಕೆ ಏನ್ ಮಾಡೊದು ಗುರು?

ಅರವಿ೦ದ ಅಂತಾರೆ...

ಯಾರ್ರೀ ಅವ್ರು? ಹಲವು ಕೇಬಲ್ ಆಪರೇಟರ್, ಕರವೇ ಕಾರ್ಯಕರ್ತರಾಗಿದಾರೆ. ಹಂಗೆ ಹೇಳಕ್ಕೆ ಹೆಂಗಾದ್ರೂ ಬಾಯೀ ಬರತ್ತೆ ಸರ್.....

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails