ಚುನಾವಣೆ ಫಲಿತಾಂಶ : ಗೆದ್ದ ಸ್ಥಳೀಯತೆ!

ತಿಂಗಳುಗಟ್ಟಲೆ ನಡೆದ ಲೋಕಸಭಾ ಚುನಾವಣಾ ಪ್ರಕ್ರಿಯೆ ಅಂತೂ ಮುಗಿದಿದೆ. ಬಲು ಕುತೂಹಲದಿಂದ ಜನರು ಕಾಯ್ತಿದ್ದ ಫಲಿತಾಂಶಗಳು ಪ್ರಕಟವಾಗಿದೆ. ಜೊತೇಲೆ ಕೇಂದ್ರಸರ್ಕಾರದಲ್ಲಿ ಆಳೋರು ಯಾರು ಅನ್ನೋದು ತೀರ್ಮಾನವಾಗಿದೆ. ಈ ಚುನಾವಣೆಯಲ್ಲಿ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಬಂದಿರೋ ಫಲಿತಾಂಶಗಳು ಒಳ್ಳೆ ಸೂಚನೆ ಕೊಡ್ತಿದೆ ಗುರು!

ನೈಜ ಪ್ರಾದೇಶಿಕ ಪಕ್ಷಗಳಿಗೆ ಬೆಂಬಲ!

ಈ ಚುನಾವಣೇಲಿ ಯಾವ ಪ್ರಾದೇಶಿಕ ಪಕ್ಷ ಆ ಪ್ರದೇಶದ ಏಳಿಗೆಯ ಬಗ್ಗೆ ಮಾತಾಡಿ ಕಾಳಜಿ ತೋರಿಸಿದೆಯೋ ಅಂಥಾ ಪಕ್ಷ ಚೆನ್ನಾಗಿ ಸಾಧನೆ ಮಾಡಿರೋದು ಒಳ್ಳೇ ಬೆಳವಣಿಗೆಯಾಗಿದೆ. ಒರಿಸ್ಸಾದ ಬೆಳವಣಿಗೇನ ಚುನಾವಣೆ ವಿಷಯ ಮಾಡ್ಕೊಂಡಿದ್ದ ಬಿಜು ಜನತಾದಳ 21ಕ್ಕೆ 14 ಗೆದ್ದು ಜಯಭೇರಿ ಹೊಡ್ದಿರೋದನ್ನು ನೋಡುದ್ರೆ ಇದು ಮನವರಿಕೆ ಆಗುತ್ತೆ. ಅದೇ ಥರ ಬಿಹಾರದ ನಿತೀಶ್ ಕುಮಾರ್ ಅವರ ಜನತಾದಳವೂ 40ರಲ್ಲಿ 20 ಗೆದ್ದು ಉತ್ತಮ ಸಾಧನೆ ಮಾಡ್ತು. ಈ ಎರಡು ಪಕ್ಷಗಳು ಮಾತಾಡಿದ್ದೇ ತಮ್ಮ ರಾಜ್ಯಗಳಿಗೆ ಕೇಂದ್ರಸರ್ಕಾರದಿಂದ ಸಿಗಬೇಕಾದ್ದನ್ನು ಸಿಗೋ ಹಾಗೆ ಮಾಡ್ತೀವಿ ಅಂತ. ಇದರ ಜೊತೆಗೆ ತಮ್ಮ ಪಕ್ಷ, ವ್ಯಾಪ್ತಿಯ ದೃಷ್ಟಿಯಲ್ಲಿ ಪ್ರಾದೇಶಿಕ(?) ಅನ್ನುಸ್ಕೊಂಡಿದ್ದು ವೈಯುಕ್ತಿಕ ಲಾಭವನ್ನಷ್ಟೆ ಗುರಿಯಾಗಿಟ್ಟುಕೊಂಡವೇನೋ ಅನ್ನುವಂತಿರೋ ಲಾಲೂ ಅವರ ರಾಷ್ಟ್ರೀಯ ದಳ (4/40) , ದೇವೇಗೌಡರ ಜಾತ್ಯಾತೀತ ಜನತಾದಳ (3/28), ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕಶಕ್ತಿ ಪಕ್ಷಗಳು (0/40) ಹೇಳ ಹೆಸರಿಲ್ಲವಾದದ್ದನ್ನೂ ಗಮನಿಸಬೇಕಾಗಿದೆ. ರಾಷ್ಟ್ರೀಯ ಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಬಿಜೆಪಿಗಳು ಗೆದ್ದಿರೋದು ಸರಿಯಾದ ಪ್ರಾದೇಶಿಕ ಪಕ್ಷಗಳು ಇಲ್ಲದೇ ಇರೋದ್ರಿಂದಲೇ ಅನ್ನುವ ಹಾಗೆ ತೋರುತ್ತಿದೆ. ಇದಷ್ಟೇ ಅಲ್ಲದೆ ಗುಜರಾತಿನಲ್ಲಿ ಬಿಜೆಪಿ ಜಯ ಸಾಧಿಸಲು ಕಾರಣ ನರೇಂದ್ರ ಮೋದಿಯವರ ’ಗುಜರಾತಿ ಅಸ್ಮಿತಾ, ಗುಜರಾತಿ ಏಳಿಗೆ’ಯ ಸ್ವಾಭಿಮಾನದ ಮಂತ್ರಗಳಿಂದಲೇ ಅನ್ನೋದೆ ಆಗಿದೆ. ಇದರ ಹಾಗೇ ಆಂಧ್ರಪ್ರದೇಶದಲ್ಲಿ ರಾಜಶೇಖರ ರೆಡ್ಡಿಯವರಾಗಲೀ, ರಾಜಸ್ಥಾನದ ಅಶೋಕ್ ಗೆಹ್ಲೋಟ್ ಅವರಾಗಲೀ ರಾಷ್ಟ್ರೀಯ ಪಕ್ಷದಲ್ಲಿದ್ದರೂ ತಮ್ಮ ರಾಜ್ಯ ಕೇಂದ್ರಿತ ರಾಜಕಾರಣದಿಂದಲೇ ಯಶಸ್ಸು ಗಳಿಸಿದ್ದಾರೆ ಅನ್ನೋದ್ರಲ್ಲೂ ದಿಟವಿದೆ ಅನ್ಸಲ್ವಾ ಗುರು!

12 ಅನಿಸಿಕೆಗಳು:

Harsha ಅಂತಾರೆ...

ಲೋಕಸಭೆ ಚುನಾವಣೆಯ ಫಲಿತಾಂಶದಲ್ಲಿ ಸ್ಥಳೀಯತೆ ಹೆಂಗೆ ಗೆಲ್ತು ಅಂತ ಖಂಡಿತ ಅರ್ಥ ಆಗ್ಲಿಲ್ಲ ಗುರು. ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಪೂರ್ಣ ಬಹುಮತ ಬಂದಿದೆ. ಕಾಂಗ್ರೆಸ್ ಯಾವುದೇ ಸ್ಥಳೀಯ ಪಾರ್ಟಿ ಆಗದೆ ಒಂದು ನ್ಯಾಷನಲ್ ಪಾರ್ಟಿ ಆಗಿದೆ. ಗುರು ನೀನು ಹೇಳಿದ ಹಾಗೆ ಜನರು, ಲೋಭಿಗಳಾದ ಲಾಲು, ಪಾಸ್ವಾನ್ ಹಾಗು ದೇವೇಗೌಡರಿಗೆ ತಕ್ಕ ಪಾಠವನ್ನೇ ಕಲಿಸಿದ್ದಾರೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಫಲಿತಾಂಶ ರಾಷ್ಟ್ರೀಯತೆಯನ್ನು ಬಿಂಬಿಸಬೇಕೆ ಹೊರತು ಸ್ಥಳಿಯತೆಯನ್ನಲ್ಲ. ಅದೇ ತರ ನಮ್ಮ ಜನರು ಕಾಂಗ್ರೆಸ್ ನೇತ್ರತ್ವದ ಸರಕಾರಕ್ಕೆ ಪೂರ್ಣ ಬಹುಮತ ತಂದುಕೊಟ್ಟು, ದೇವೇಗೌಡ, ಲಾಲು, ಪಾಸ್ವಾನ್ರವರಂತಹ ಕುದುರೆ ವ್ಯಾಪಾರಕ್ಕೆ ಇಳಿಯುವರನ್ನು ದೂರವಿಟ್ಟಿದ್ದಾರೆ. ಒಟ್ಟಿನಲ್ಲಿ ಹೇಳೋದಾದರೆ, ಅತಂತ್ರ ಲೋಕಸಭೆಯನ್ನು ಪೂರ್ತಿಯಾಗಿ ತಿರಸ್ಕರಿಸಿದ್ದಾರೆ.

ಜನರು ಎಷ್ಟು ಒಳ್ಳೆಯ ಫಲಿತಾಂಶ ಕೊಟ್ಟಿದಾರೆ ಅಂತ ಇಂದಿನ ಷೇರು ಮಾರುಕಟ್ಟೆಯನ್ನು ನೋಡಿದರೆ ತಿಳಿಯುತ್ತೆ ಗುರು. ಸ್ಥಳೀಯತೆ ಒಳ್ಳೆಯದು ನಿಜ, ಆದರೆ ಲೋಕಸಭೆ ಚುನಾವಣೆಯ ಫಲಿತಾಂಶಕ್ಕೂ, ಸ್ಥಳೀಯತೆಗು ಯಾವುದೇ ಸಂಬಂಧ ಕಾಣಿಸ್ತ ಇಲ್ಲ ಗುರು.

ವಿಜಯ್ ಅಂತಾರೆ...

ತಮ್ಮ ರಾಜ್ಯಗಳ ಬಗ್ಗೆ ಕಾಳಜಿ ಇರುವ ಪ್ರಾದೇಶಿಕ ಪಕ್ಷಗಳು ಗೆದ್ದಿವೆ. ತಮ್ಮ ವಯಕ್ತಿಕ ಲಾಭಕ್ಕೆ ರಾಜಕೀಯ ಮಾಡುವ "ಪ್ರಾದೇಶಿಕ" ಪಕ್ಷಗಳು ಸೋತಿವೆ. ಹಾಗೆಯೆ ಎಲ್ಲಿ ರಾಜ್ಯಮಟ್ಟದ ನಾಯಕರಿಗೆ ತಮ್ಮ ರಾಜ್ಯಗಳನ್ನ ಆಡಳಿತ ಮಾಡಲು ಬಿಟ್ಟ "ರಾಷ್ಟ್ರೀಯ" ಪಕ್ಷಗಳು ಆ ರಾಜ್ಯಗಳಲ್ಲಿ ಗೆದ್ದಿವೆ. (ಆಂಧ್ರ, ರಾಜಸ್ಥಾನ, ಗುಜರಾತ್, ಕರ್ನಾಟಕ).

ಕಾಂಗ್ರೆಸ್ ಗೆ ಪೂರ್ಣ ಬಹುಮತ ಬಂದಿಲ್ಲ. ಸಾಕಸ್ಟು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಜೊತೆ ಸೀಟು ಹೊಂದಾಣಿಕೆಯಿಂದ ಕಾಂಗ್ರೆಸ್ ಗೆ ಇವತ್ತಿನ ಗೆಲುವು ಸಾಧ್ಯವಾಗಿದೆ.

ಈ ದೇಶವು ಒಂದು ಒಕ್ಕೂಟ. ಎಲ್ಲ ರಾಜ್ಯಗಳು ತಮ್ಮ ಏಳ್ಗೆಗೆ ಶ್ರಮಿಸಿದರೆ ದೇಶದ ಏಳ್ಗೆ ಆಗುತ್ತದೆ. ರಾಷ್ಟ್ರೀಯತೆಯ ಸರಿಯಾದ ಪರಿಕಲ್ಪನೆ ಇಲ್ಲದೆಯೆ ಇವತ್ತು ಭ.ಜ.ಪ. ಮುಗ್ಗರಿಸಿರುವುದು. ಕಾಂಗ್ರೆಸ್ ಒಕ್ಕೂಟವನ್ನ / ರಾಷ್ಟ್ರೀಯತೆಯನ್ನ ಅರ್ಥ ಮಾಡಿಕೊಳ್ಳೋದರಲ್ಲಿ ಭ.ಜ.ಪ ಗಿಂತ ಸ್ವಲ್ಪ ವಾಸಿ. ಇದು ಕೂಡ ಅವರ ಗೆಲುವಿಗೆ ಒಂದು ಮುಖ್ಯ ಕಾರಣ.

ಶೇರು ಮಾರುಕಟ್ಟೆಯ ಸೂಚ್ಯಾಂಕ ಹೆಚ್ಚಿರುವುದು ಎಡ ಪಕ್ಷಗಳ ಸೋಲಿನಿಂದ. "ರಾಷ್ಟ್ರೀಯ" ಪಕ್ಷಗಳ ಗೆಲುವಿನಿಂದಲ್ಲ.

ಕೊಟ್ರೆಶ್ ಕೋರಿ ಅಂತಾರೆ...

ಹರ್ಷಾ ಅವರೇ,
ನಿಮ್ಮ ಮಾತು ನಿಜವಲ್ಲ. ಈ ಬಾರಿಯ ಚುನಾವಣೆಯನ್ನೇ ನೋಡಿ,, ಯಾವ ಪಕ್ಷ ರಾಷ್ಟೀಯ ವಿಷಯಗಳನ್ನು ಹೇಳಿ ಮತ ಕೇಳಿದೆ?

ಕಾಂಗ್ರೆಸ್ ಗೆದ್ದಿರುವ ರಾಜ್ಯಗಳನ್ನೇ ಒಂದೊಂದಾಗಿ ನೋಡಿ.
ಆಂಧ್ರ - ಮುಖ್ಯಮಂತ್ರಿ YSR ಅವರ ವರ್ಚಸ್ಸು, ಚಿರಂಜೀವಿ ಪಕ್ಷ ತಗೆದುಕೊಂಡ ೧೬% ಮತ ಕಾಂಗ್ರೆಸ್ಸನ್ನು ದಡ ಮುಟ್ಟಿಸಿರುವುದು.
ರಾಜಸ್ಥಾನ - ಅಶೋಕ್ ಗೆಹ್ಲೋಟ್ ಅವರ ನಾಯಕತ್ವಕ್ಕೆ ಮತ ಬಿದ್ದಿರುವುದೇ ಹೊರತು ಯಾವುದೇ ರಾಷ್ಟ್ರೀಯ ವಿಷಯಕ್ಕಲ್ಲ.
ಬೆಂಗಾಳ - ಅಲ್ಲಿನ ಪ್ರಾದೇಶಿಕ ಪಕ್ಷ ತೃಣಮೂಲ ಪಕ್ಷದ ಮಮತಾ ಬ್ಯಾನರ್ಜಿ ಜೊತೆಯ ಮೈತ್ರಿಯಿಂದ ಕಾಂಗ್ರೆಸ್ ಗೆದ್ದಿರುವುದು.
ಕೇರಳ- ಎಡಪಕ್ಷಗಳ ವಿರುದ್ಧದ ಮತ

ಇನ್ನೂ ಗುಜರಾತಿ ಅಸ್ಮಿತೆಯ ಮಾತನಾಡುವ ಮೋದಿ, ಚತ್ತಿಸಗಡ್ ದ ಅಭಿವೃದ್ಧಿ ಬಗ್ಗೆ ಮಾತನಾಡಿದ ರಮಣ ಸಿಂಗ್, ಬಿಹಾರದ ಅಭಿವೃದ್ಧಿ ಬಗ್ಗೆ ಧ್ವನಿ ಎತ್ತಿದ ನಿತೀಶ್, ಒರಿಸ್ಸಾಕ್ಕೆ ಕೇಂದ್ರದಿಂದ ಅನ್ಯಾಯ ಆಗ್ತಿದೆ ಅಂದ ನವೀನ್ ಪಟ್ನಾಯಕ್, ತಮಿಳುನಾಡಿನ ಡಿ.ಎಮ್.ಕೆ ಎಲ್ಲರೂ ಪ್ರಾದೇಶಿಕವಾದಿಗಳೇ, ಮತ್ತು ಇವರೆಲ್ಲರೂ ಗೆದ್ದಿದ್ದಾರೆ.

ಕರ್ನಾಟಕದಲ್ಲೂ ಲಿಂಗಾಯತ ಕೋಮಿನ ಪೂರ್ಣ ಬೆಂಬಲ ಬಿ.ಜೆ.ಪಿಗೆ ದೊರಕಿರುವುದು ಬಿ.ಜೆ.ಪಿ ಗೆಲುವಿಗೆ ಕಾರಣವೇ ಹೊರತು, ಯಾವುದೇ ರಾಷ್ಟ್ರ ಮಟ್ಟದ ವಿಷ್ಯದಿಂದಲ್ಲ.

ಸರಿಯಾದ federalism ಬರಲು ಇದು ಸಕಾಲ.

Rohith B R ಅಂತಾರೆ...

ಹರ್ಷ ನೀವು ಕೇಳುತ್ತಿರುವ ಪ್ರಸ್ನೆ ಸಹಜವಾದದ್ದೇ..
ಆದರೆ ಗುರು ಇಲ್ಲಿ ಹೇಳಿರೋದೂ ಅದನ್ನೇ, ಮತ್ತು ಕೈ ಮಾಡಿರೋದೂ ಅದರ ಕಡೆಯೇ. ಅದೇನು ಅಂದ್ರೆ ಈ ಬಾರಿಯ ಚುನಾವಣೆ ಫಲಿತಾಂಶದಲ್ಲಿ ಯಾವ ರಾಜ್ಯದಲ್ಲಿ ಸ್ಥಳೀಯ ಪಕ್ಷದ ಪ್ರಾಬಲ್ಯವಿತ್ತೋ, ಮತ್ತು ಆ ಪಕ್ಷವು ಸ್ಥಳೀಯರ ಹಿತಾಸಕ್ತಿ ಕಾಪಾಡುವಲ್ಲಿ ಆಸಕ್ತಿ ತೋರಿವೆಯೋ, ಅಥವಾ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಲು ಈಗಾಗಲೇ ಜೋಡಣೆಯಾಗಿದೆಯೋ ಅಂತಹ ಪಕ್ಷವು ಜಯಭೇರಿ ಸಾಧಿಸಿದೆ ಅಂತ. ಉದಾಹರಣೆಗೆ ಪಕ್ಕದ ರಾಜ ತಮಿಳುನಾಡಿನಲ್ಲಿ ಇಲ್ಲ ಕಾಂಗ್ರೆಸ್ ತಪ್ಪಿದರೆ ಕರುಣಾನಿಧಿಯ ಪಕ್ಷ - ಎರಡೇ ಹೆಚ್ಚಿನ ಸೀಟು ಗೆದ್ದಿರೋದು, ಏಕೆಂದರೆ ಇವೆರಡು ಪಕ್ಷಗಳು ತಮಿಳುನಾಡಿನೋರಿಗೆ ಈ ಬಾರಿ ಅಧಿಕಾರ ಕೊಡಿಸಬಲ್ಲವು. ಅದರಲ್ಲೂ ಅನ್ನಾ ಪಾರ್ಟಿಯೇ ಹೆಚ್ಚಿನ ಸೀಟು ಗೆದ್ದಿರೋದು.

ಇನ್ನೊಂದು ಉದಾಹರಣೆಯೆಂದರೆ ಆಂಧ್ರ. ಇಲ್ಲಿ ಪ್ರಾದೇಶಿಕ ಪಕ್ಷದ ಪ್ರಾಬಲ್ಯವೇ ಇದ್ದ ಹಾಗಿರಲಿಲ್ಲ.. ಆದ್ದರಿಂದ ಇಲ್ಲಿ ಕಾಂಗ್ರೆಸ್ ಪಕ್ಷ ನೇರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದೆ. ಒಟ್ಟಿನಲ್ಲಿ ಇಲ್ಲೂ ಕೇಂದ್ರದಲ್ಲಿ ಆಳುವ ಪಕ್ಷಕ್ಕೇ ಬೆಂಬಲ ಸಿಕ್ಕಿರುವುದರಿಂದ ಇಲ್ಲಿಯ ಜನರಿಗೂ ಅಧಿಕಾರದಲ್ಲಿ ಪಾಲು ಸಿಗಲಿದೆ. ಆದರೆ ಈ ರೀತಿಯ ಅಧಿಕಾರದ ಪಾಲು ಇವರಿಗೆ ಸಿಗದೇ ಹೋಗುವ ಸಾಧ್ಯತೆ ಕಾಡಲಿದೆ, ಏಕೆಂದರೆ ಇವರಿಗೆ ಲಾಬಿ ಮಾಡುವ ಶಕ್ತಿ ಉಳಿದಿಲ್ಲ. ಹಾಗಾಗಿ ಆಂಧ್ರದವರು ಬರುವ ಐದು ವರ್ಷಗಳಲ್ಲಿ ಒಂದು ಗಟ್ಟಿಯಾದ ಪ್ರಾದೇಶಿಕ ಪಕ್ಷ ಕಟ್ಟುವ ಕೆಲಸ ಮಾಡಬೇಕು..

ಕರ್ನಾಟಕದಲ್ಲೂ ಈ ಕೆಲಸ ನಡೀಬೇಕು. ನಮ್ಮಲ್ಲಿಯೂ ಪ್ರಾದೇಶಿಕ ಪಕ್ಷ ಇಲ್ಲದ ಕಾರಣ ಕಾಂಗ್ರೆಸ್ ಮತ್ತು ಭಾ.ಜ.ಪ ದ ಮಧ್ಯೆ ಮತ ಹಂಚಿಹೋಗುತ್ತಿದೆ, ಪೋಲಾಗುತ್ತಿದೆ ಅನ್ನಬಹುದು..

ಏನ್-ಗುರು ಹೇಳುತ್ತಿರುವುದರಲ್ಲಿ ಪ್ರಾದೇಶಿಕತೆಯ ಗೆಲುವು ಹೇಗೆ ಅಂದರೆ ದೇಶದ ಪ್ರತಿಯೊಂದು ರಾಜ್ಯಕ್ಕೂ ಅದರ ಅವಶ್ಯಕತೆ ಕಂಡು ಬಂದಿರುವುದು ಈ ಬಾರಿಯ ಚುನಾವಣೆಯಿಂದಲೇ!

guru4vedi ಅಂತಾರೆ...

vijay hELida I maatu noorakke nooru nija.
ಹಾಗೆಯೆ ಎಲ್ಲಿ ರಾಜ್ಯಮಟ್ಟದ ನಾಯಕರಿಗೆ ತಮ್ಮ ರಾಜ್ಯಗಳನ್ನ ಆಡಳಿತ ಮಾಡಲು ಬಿಟ್ಟ "ರಾಷ್ಟ್ರೀಯ" ಪಕ್ಷಗಳು ಆ ರಾಜ್ಯಗಳಲ್ಲಿ ಗೆದ್ದಿವೆ.

Adre, BSY En mADtaaro nODbEku.
oMdu vaarada maLege benglooru kochche aagide. kOlAradalli nIrilla, elleDe kaalara. uttara karnatakadalli bari bislu, gaNi dooLu. mADbEkaaddu saakaShTide!

Anonymous ಅಂತಾರೆ...

ಹರ್ಷ ಅವರೇ,

ಲೋಕಸಭೆಯ ಚುನಾವಣೆಯಲ್ಲಿ ರಾಷ್ಟ್ರೀಯತೆ ಬಿಂಬಿಸಬೇಕೆ ಹೊರತು ಪ್ರಾದೇಶಿಕತೆಯಲ್ಲ ಅನ್ನೋದನ್ನು ಸ್ವಲ್ಪ ಬಿದಿಸಿ ಹೇಳ್ತೀರಾ? ಹಾಗಾದ್ರೆ ಕರ್ನಾಟಕದ ಎಂ.ಪಿಗಳ ಪಾತ್ರವೇನು? ಇನ್ನೂ ವಿವರವಾಗಿ ಕೇಳ್ತೀನಿ ಹೇಳಿ. ಮಾನ್ಯ ಸಂಸದ ಅನಂತಕುಮಾರ್ ಅವರು ಈ ಬಾರಿ ಲೋಕಸಭೆಯಲ್ಲಿ ಏನು ಮಾಡಬೇಕು ಅನ್ನುವುದು ನಿಮ್ಮ ನಿರೀಕ್ಷೆ. ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ, ಕನ್ನಡನಾಡೊಳಗಣ ಗಣಿಗಾರಿಕೆ ವಿಷಯದಲ್ಲಿ, ಹೊಗೇನಕಲ್ ವಿಷಯದಲ್ಲಿ, ಬೆಳಗಾವಿ ಗಡಿ ವಿಷಯದಲ್ಲಿ, ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನದ ವಿಷಯದಲ್ಲಿ ನಮ್ಮ ಸಂಸದರಾದ ಇವರಿಗೆ ಯಾವ ಹೊಣೆಗಾರಿಕೆಯೂ ಇಲ್ಲವೇ? ಹೋಗಲೀ ನೀವಂದಂತೆ ರಾಷ್ಟ್ರೀಯತೆಯನ್ನು ಬಿಂಬಿಸೋದು ಅಂದರೆ ಏನು? ಸ್ವಲ್ಪ ತಿಳಿಸಿ. ಮುಂಬೈ ಭಯೋತ್ಪಾದನೇನಾ? ಪಾಕಿಸ್ತಾನದ ಜೊತೆ ಕಿತ್ತಾಟಾನಾ? ರಾಮಮಂದಿರ ಕಟ್ಟಾಟಾನಾ? ಅಮೇರಿಕಾದ ಜೊತೆಗಿನ ಅಣು ಒಪ್ಪಂದಾನಾ? ಅವಷ್ಟೇ ವಿಷಯಗಳ ಬಗ್ಗೆ ನಿಲುವು ತೋರಿಸಿದರೆ ಸಾಕಾ? ನಮ್ಮ ರಾಜ್ಯದ, ನಮ್ಮ ಜಿಲ್ಲೆಗಳ, ನಮ್ಮ ಊರಿನ ಬಗ್ಗೆ ಕೇಂದ್ರದಲ್ಲಿ ಈ ಸಂಸದರು ಮಾಡಬೇಕಾದ ಕೆಲಸಗಳಿಲ್ವಾ? ಅಥವಾ ಈ ಕೆಲಸಗಳ ಬಗ್ಗೆ ಲೋಕಸಭಾ ಚುನಾವಣೆಯಲ್ಲಿ ಸೊಲ್ಲೆತ್ತಬಾರದಾ?

ಪ್ರೀತಿಯಿಂದ

ಅಜಯ್

ವಿಶ್ವನಾಥ ಹೆಗಡೆ ಅಂತಾರೆ...

ಕಳೆದ ಬಾರಿ ಕಾಂಗ್ರೆಸ್/ಬಿಜೆಪಿ ಒಟ್ಟಾಗಿ ಪಡೆದ ಮತ ಪ್ರಮಾಣ 48%,, ಈ ಬಾರಿ ಅದು ಇನ್ನೂ ಒಂದು % ಕಡಿಮೆ ಆಗಿದೆ !!
ಕಾಂಗ್ರೆಸ್ ಗೆ ಬಂದಿರುವ 50 ಹೆಚ್ಚಿನ ಸ್ಥಾನಗಳು ಅವರ ವಿರೋಧಿ ಮತಗಳ ಒಡೆಯುವಿಕೆಯಿಂದಲೇ ಬಂದಿವೆ ಅನ್ನೋದ್ರಲ್ಲಿ ಯಾವ ಅನುಮಾನಾನೂ ಇಲ್ಲ.

ಮಹಾರಾಷ್ಟ್ರದಲ್ಲಿ MNS ನಿಂತಿದ್ದು 12 ಕ್ಷೇತ್ರ,, ಪಡೆದ ಅಂದಾಜು ಮತ 1.75 ಲಕ್ಷ ಪ್ರತಿ ಕ್ಷೇತ್ರಕ್ಕೆ.. ಮತ್ತು ಈ 12 ಕ್ಷೇತ್ರದಲ್ಲಿ 10 ಕಾಂಗ್ರೆಸ್ ತೆಕ್ಕೆಗೆ ಹೋಗಿದೆ !
ತಮಿಳುನಾಡಿನಲ್ಲಿ ನಟ ವಿಜಯಕಾಂತ್ ಪಕ್ಷ ಸುಮಾರು 14 ಕ್ಷೇತ್ರದಲ್ಲಿ AIADMK ಮತ ಒಡೆದು ಕಾಂಗ್ರೆಸ್/ಡಿ.ಎಮ್.ಕೆ ಗೆಲ್ಲಲು ಸಹಾಯ ಆಯ್ತು.
ಆಂಧ್ರದಲ್ಲಿ ಚಿರಂಜೀವಿ ಪಡೆದ 16% ಮತ, ಕಾಂಗ್ರೆಸ್ ಗೆ 10ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ತಂದು ಕೊಟ್ಟಿದೆ. ಆಂಧ್ರದಲ್ಲಿ ಕಾಂಗ್ರೆಸ್ ಕಳೆದ ಬಾರಿಗಿಂತ 3% ಕಮ್ಮಿ ಮತ ಪಡೆದಿದೆ ಆದ್ರೂ ಹೆಚ್ಚಿನ ಸ್ಥಾನ ಸಿಕ್ಕಿದ್ದು ಚಿರಂಜೀವಿ ದೆಸೆಯಿಂದ !

ಹೀಗೆ ಕಾಂಗ್ರೆಸ್ ಗೆದ್ದಿರುವುದು ಸೋನಿಯಾ/ರಾಹುಲ್ ಫ್ಯಾಕ್ಟರನಿಂದಲ್ಲ, ಇಲ್ಲವೇ ಯಾವುದೋ ರಾಷ್ಟ್ರೀಯ ವಿಷಯಗಳಿಂದಲೂ ಅಲ್ಲ. ಪ್ರಾದೇಶಿಕ ಶಕ್ತಿಗಳಿಂದ, ಪ್ರಾದೇಶಿಕ ಶಕ್ತಿಗಳ ಮತ ವಿಭಜನೆಯಿಂದಲೂ ಕೂಡ.

ಕರ್ನಾಟಕದಲ್ಲಂತೂ ಕ್ಲಿಯರ್ ಆಗೇ ಕಾಣುತ್ತೆ. ಲಿಂಗಾಯತರ ಪ್ರಾಬಲ್ಯ ಇರುವ ಉತ್ತರ ಕರ್ನಾಟಕ ಭಾಗದ ಹೆಚ್ಚು ಕಮ್ಮಿ ಎಲ್ಲ ಸ್ಥಾನ ಲಿಂಗಾಯತರ ಪಕ್ಷ ಬಿ.ಜೆ.ಪಿ ಪಾಲಾಗಿದೆ.
ಒಕ್ಕಲಿಗರ ಪ್ರಾಬಲ್ಯ ಇರುವಲ್ಲಿ ಜೆ.ಡಿ.ಎಸ್ ಗೆದ್ದಿದೆ. ಕಾಂಗ್ರೆಸ್ ಗೆದ್ದಿರುವ ಕೆಲವೇ ಕೆಲವು ಸ್ಥಾನಗಳು ಅಲ್ಪ ಅಂತರದಿಂದ ಗೆದ್ದಿರುವುದು. ಇದೆಲ್ಲ ನೋಡಿದ ಮೇಲೂ ರಾಷ್ಟ್ರೀಯತೆ, ರಾಷ್ಟ್ರ ಮಟ್ಟದ ವಿಷಯಗಳಿಗೆ ಮತ ಬಿದ್ದಿದೆ ಅಂದಕೊಳ್ಳೊದು ಮೂರ್ಖತನ ಅನ್ನೋದು ನನ್ನ ಅನಿಸಿಕೆ

ravikumar mattikere ಅಂತಾರೆ...

This says it all
Regional parties reap good harvest in LS polls
http://www.business-standard.com/india/news/regional-parties-reap-good-harvest-in-ls-polls/62179/on

Harsha ಅಂತಾರೆ...

ರಾಷ್ಟ್ರೀಯತೆ ಅಂದ್ರೆ ಪ್ರಾದೇಶಿಕತೆಯನ್ನು ಮರೆಯುವದಲ್ಲ. ನೀವು ಹೇಳುತ್ತಿರುವಂತೆ ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆ ವಿರುದ್ಧ ಪದಗಳನ್ತು ಅಲ್ಲವೆ ಅಲ್ಲ. ಒಂದು ದೇಶದ ಅಭಿವೃದ್ಧಿಗೆ ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆ ಎರಡು ಬೇಕು.

ಈ ಚುನಾವಣೆಯಲ್ಲಿ, ಜನರು ಒಳ್ಳೆಯ ರಾಜಕಾರಣಿಗಳನ್ನು ಆರಿಸಿ ಕಳುಹಿಸಿದ್ದಾರೆಯೇ ಹೊರತು, ಇದನ್ನು ಸ್ಥಳೀಯತೆಗೆ ಉದಾಹರಿಸಿವುದು ಸರಿಯಲ್ಲ ಅನ್ನಿಸುತ್ತೆ ಗುರು.
ನಾನು ರಾಷ್ಟ್ರೀಯತೆಯನ್ನು ಯಾಕೆ ಪ್ರಸ್ತಾಪಿಸಿದೆ ಅಂದರೆ, ಕೆಲವು ಕುಖ್ಯಾತ 'ಪ್ರಾದೇಶಿಕ' ಪಕ್ಷಗಳ ಕೈಯ್ಯಲ್ಲಿ, ನಮ್ಮ ಲೋಕಸಭೆ ಅತಂತ್ರ ಆಗೋದನ್ನ ನೋಡೋದಕ್ಕೆ ಖಂಡಿತವಾಗಲು ಇಷ್ಟವಿರಲಿಲ್ಲ.

Anonymous ಅಂತಾರೆ...

ಎಲ್ಲಾರೂ ರಾಷ್ಟ್ರೀಯತೆ ಅಂತ ಬೊಬ್ಬೆ ಹೋಡಿತಾರಲ್ಲ ಏನಂಗಂದ್ರೆ.
ಇವರ ಮನೆ ಪುಟಕೋಸಿ ೩೦ x ೪೦ ಸೈಟ್ ಗೆ ಆರಡಿ ಗೋಡೆ ಹಾಕ್ಕಂಡು ಮೇಲ್ಗಡೆ ಗಾಜು ಚುಚ್ಕೊಂಡು ಯಾರನ್ನೂ ಮನೆಗೆ ಸೇರಸ್ದಲೆ ಮೂರೊತ್ತು ಕದ ಹಾಕ್ಕೊಂಡು ಇರ್ತಾರೆ.
ತಿಳ ಕಳ್ರಿ ನಮ್ಮ ಭಾಷೆನ ಪ್ರೀತಿ ಮಾಡೋದು ಮತ್ತು ನಮ್ಮ ಕರ್ನಾಟಕ ನ ಪ್ರೀತಿ ಮಾಡೋದೆ ನಿಜವಾದ ರಾಷ್ಟ್ರೀಯತೆ ಅಷ್ಟೆ. ಬೇರೆ ಎಲ್ಲ ಸೋಗಲಾಡಿತನ. ಇದನ್ನ ಮಾಡಿ ತಂತಾನಾಗೆ ಭಾರತ ಮುಂದೆ ಬರುತ್ತೆ. ನಿಮ್ಮ ರಾಜ್ಯ ನಿಮ್ಮ ಭಾಷೇನೆ ನಿಮಗೆ ಉಳಿಸಿ ಕೊಳ್ಳಕ್ಕೆ ಆಗ್ಲಿಲ್ಲ ಅಂದ್ರೆ ಇನ್ನ ದೇಶನ ಹೆಂಗೆ ಉಳಿಸಿ ಕೊಳ್ತೀರಾ?

- ಹಾಗಲವಾಡಿ ಜುಂಜಪ್ಪ

Anonymous ಅಂತಾರೆ...

ಲೇ ಜುಂಜ,

ಅದ್ಯಾಕಲೆ ರಾಷ್ಟ್ರೀಯತೆ, ಕರ್ನಾಟಕ, ಪ್ರೀತಿ ಅಂತೆಲ್ಲ ಬಡ್ಕೋತೀಯ, ಕುಮಾರಣ್ಣ ಒಂದೊಂದು ಕೈಗೂ ಒಂದೊಂದು ಬಾಟಲಿ ಮಡ್ಗವ್ನೆ ಅಂತ ನಾವಿಬ್ರು ಅವಂಗೆ ವೋಟು ಒತ್ತಿ ಬರ್ಲಿವೆನಲೇ ಮೊನ್ನೆ. ಈಗ ನೋಡಿದ್ರ ಸಂದಾಕಿ ಭಾಷಣ ಮಾಡ್ತಿಯ.

-ಹಾಗಲವಾಡಿ ಹನುಮಣ್ಣ

Anonymous ಅಂತಾರೆ...

ಲೋ ಕಪಿ ಹನುಮ,

ಹನುಮನಿಗೂ ಹಾಗಲವಾಡಿಗೂ ಏನ್ಲಾ ಕನೆಕ್ಸನ್? ಹಾಗಲವಾಡಿಲಿ ಬರೆ ಜುಂಜಪ್ಪ ಇರದು. ಚೇಳು ಪಾಳು ಕಚ್ಚಿದರೆ ಹೇಳು ಜುಂಜಪ್ಪ ಬಂದು ನಿನಗೆ ಇಲಾಜ್ ಮಾಡ್ತಾನೆ. ನಿನ್ನಂತ ಕುಡುಕ ನನ್ಮಕ್ಳು ಇರೊಂದ್ರಿದ್ಲೆ ನಮ್ಮ ದೇಶ (ಕರ್ನಾಟಕ) ಹಿಂಗಿರೋದು. ಜುಂಜಪ್ಪ ನೀನೆ ಕಾಪಾಡಪ್ಪ.

- ಹಾಗಲವಾಡಿ ಜುಂಜಪ್ಪ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails