ಐ.ಪಿ.ಎಲ್ ಕಂಡುಕೊಂಡ ಕನ್ನಡದ ಮಾರುಕಟ್ಟೆ


ಈ ಬಾರಿಯ ಐ.ಪಿ.ಎಲ್ ಪಂದ್ಯಗಳು ದಕ್ಷಿಣ ಆಫ್ರಿಕಾದಲ್ಲಿ ನಡೀತಾ ಇರೋದು ಸರಿಯಷ್ಟೆ. ನಮ್ಮ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡದೋರೂ ನಿನ್ನೆ ಒಂದು ಮ್ಯಾಚನ್ನು ಮುಂಬೈ ಇಂಡಿಯನ್ಸ್ ತಂಡದ ಜೊತೆ ಆಡಿದ್ರು. ಈ ಆಟಾನಾ ಆಸಕ್ತಿಯಿಂದ ನೋಡ್ತಾ ಇದ್ದಾಗ, ಅಲ್ಲಿ ವೀಕ್ಷಕರ ನಡುವೆ ಇದ್ದ ಕನ್ನಡದಲ್ಲಿ ಬರೆದ ಒಂದು ಬರವಣಿಗೆ, ಮ್ಯಾಚಿಗಿಂತ ಹೆಚ್ಚಿನ ಆಸಕ್ತಿ ಹುಟ್ಟುಹಾಕ್ತು. ಇದು ರಾಯಲ್ ಚಾಲೆಂಜರ್ಸ್ ತಂಡದ ಆಟ ನೋಡ್ತಿದ್ದ ಕನ್ನಡದೋರ್ ಮೈಯಲ್ಲಿ ರೋಮಾಂಚನ ಹುಟ್ಟುಹಾಕ್ತು ಗುರು! ಆ ಕ್ಯಾಮೆರಾದವ್ರು ಕೂಡಾ ಆಗಾಗ ಇದನ್ನು ತೋರಿಸುತ್ತಾ, ಅಭಿಮಾನಿಯೊಬ್ಬರ ಕೈಯ್ಯಲ್ಲಿದ್ದು ಆಫ್ರಿಕಾದ ಗಾಳೀಲಿ ಹಾರಾಡ್ತಿದ್ದ ಕನ್ನಡದ ಬಾವುಟಾನೂ ತೋರುಸ್ತಿದ್ರು. ಇಷ್ಟೂ ಸಾಲದೂ ಅಂತಾ ಕಡೆಗೆ ತಂಡದ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿದ್ದ ರಾಬಿನ್ ಉತ್ತಪ್ಪನ ಹತ್ರ ಪಂದ್ಯದ ವೀಕ್ಷಕ ವಿವರಣೆಕಾರರು ಕನ್ನಡದಲ್ಲಿ ಮಾತೂ ಆಡುಸ್ಬುಟ್ರು ಗುರು!!

ಐ.ಪಿ.ಎಲ್ ಅರಿತ ಮನಗೆಲ್ಲೋ ತಂತ್ರ!

ಇದೆಲ್ಲಾ ಏನೋ ಆಕಸ್ಮಿಕ ಅಂತ ಆಗ ಅನ್ನುಸ್ತಿದ್ರೂ ನಿಜವಾಗ್ಲೂ ಐ.ಪಿ.ಎಲ್ ನವರು ಉದ್ದೇಶಪೂರ್ವಕವಾಗಿ ಹಿಂಗ್ ಮಾಡಿರಬೋದಾ ಅನ್ಸಿದ್ದು ಸುಳ್ಳಲ್ಲಾ ಗುರು! ನೀವೇ ನೋಡಿ, ಬೆಂಗಳೂರು ತಂಡ ಆಡೋ ಮ್ಯಾಚುಗಳು ಅಂತ ಕರ್ನಾಟಕದೋರೂ, ಕನ್ನಡದೋರೂ ಈ ಪಂದ್ಯಾವಳಿಗಳನ್ನು ನೋಡೋದ್ರಿಂದಲೇ ಐಪಿಎಲ್ ನ ಜನಪ್ರಿಯತೆ, ಅದರಿಂದಾಗಿ ಸಿಗೋ ಆದಾಯ ಎಲ್ಲ ಹೆಚ್ಚದು. ನಿಜವಾಗ್ಲೂ ವ್ಯಾಪಾರಿ ಆದವನು ಯಾವೆಲ್ಲಾ ತಂತ್ರಗಳು ತನ್ನ ವ್ಯಾಪಾರಾ ಹೆಚ್ಸುತ್ತೋ ಅದ್ಯಾವ್ದುನ್ನೂ ಬಿಡಲ್ಲ. ಹಾಗೇ ಕನ್ನಡದಲ್ಲಿ ಮಾತಾಡ್ಸೋದ್ರಿಂದ, ಬೆಂಗಳೂರು ತಂಡದ ಬಗ್ಗೆ ಇಡೀ ಕನ್ನಡನಾಡಿನ, ಕನ್ನಡದೋರ ಮನ್ಸಲ್ಲಿ ಇದು ನಮ್ ತಂಡ ಅನ್ನೋ ಭಾವನೇನಾ ಹುಟ್ಟುಹಾಕಿದ್ರೆ ತಾನೆ ಕರ್ನಾಟಕದ ಜನ ಇದನ್ನು ನೋಡೋದು? ಹಾಗನ್ನಿಸೋಕೆ ಏನೇನು ಬೇಕೋ ಅದೆಲ್ಲಾನೂ ಮಾಡ್ತಿದಾರೆ ಇವ್ರು ಅನ್ಸಲ್ವಾ ಗುರು? ಚೆನ್ನೈ ಆಡೋ ಪಂದ್ಯಗಳಲ್ಲಿ ತಮಿಳಲ್ಲಿ ಮಾತಾಡ್ಸೋದೂ, ಮುಂಬೈ ತಂಡದೋರ ಹತ್ರಾ ಮರಾಠೀಲಿ ಮಾತಾಡ್ಸೋದೂ ಆಯಾ ರಾಜ್ಯಗಳಲ್ಲಿ ಈ ಪಂದ್ಯಾವಳಿಗಳ ನೋಡುಗರ ಸಂಖ್ಯೇನಾ ನಿಜವಾಗ್ಲೂ ಹೆಚ್ಚುಸುತ್ತೆ. ಒಟ್ಟಾರೆ ಇಂತಹ ಕ್ರಮಗಳಿಂದಾಗಿ ಐ.ಪಿ.ಎಲ್ ಪಂದ್ಯಗಳ ನೋಡುಗರ ಸಂಖ್ಯೆ ಹೆಚ್ಚೋದೂ, ಇಡೀ ಪಂದ್ಯಾವಳಿ ಯಶಸ್ಸು ಗಳಿಸಲು ಇದು ನೆರವಾಗೋದೂ ಖಂಡಿತ. ಏನಂತೀ ಗುರು?

5 ಅನಿಸಿಕೆಗಳು:

ಹರಿಜೋಗಿ ಅಂತಾರೆ...

ಹೌದು ಗುರೂ,
ನಾನೂ ಕನ್ನಡದ ಬ್ಯಾನರ್ ಗಳನ್ನ ನೋಡ್ದೆ. ಉತ್ತಪ್ಪ ಕನ್ನಡದಲ್ಲಿ ಮಾತಾಡಿದ್ದನ್ನ ಕೇಳೋಕೆ ಆಗ್ಲಿಲ್ಲ.. ನಾನು ಟಿವಿ ಆಫ್ ಮಾಡಿಯಾಗಿತ್ತು. ಮತ್ತೊಂದು ವಿಷ್ಯ ಕುಂಬ್ಳೆ ಬೌಲಿಂಗ್ ಮಾಡೋವಾಗ ಉತ್ತಪ್ಪ ಕನ್ನಡದಲ್ಲಿ ಅವರನ್ನ ಹುರಿದುಂಬಿಸೋದು ಕೂಡಾ ಸ್ಟಂಪ್ ಮೈಕ್ ನಿಂದ ಆಗಾಗ ಕೇಳ್ತಿತ್ತು.. ಒಂಥರಾ ಖುಷಿಯಾಯ್ತು.. ಡ್ರಮ್ಮರ್ ಶಿವಮಣಿನೂ ತಮಿಳಲ್ಲಿ ಮಾತಾಡಿ ಚೆನ್ನೈ ಕ್ರಿಕೆಟ್ ಅಭಿಮಾನಿಗಳನ್ನು ಹುರಿದುಂಬಿಸುವುದನ್ನು ತೋರಿಸುತ್ತಿದ್ದರು. ಒಂದು ಭಾಷೆ ಬೆಳೀಬೇಕಾದ್ರೆ ಇಂತಹ ಭಾಷಾಪ್ರೇಮ ತುಂಬಾ ಅಗತ್ಯ ಅಲ್ವಾ ಗುರು?

ತೇಜಸ್ವಿ ಅಂತಾರೆ...

ಕನ್ನಡಿಗನಾಗಿ ನಮಗೆ ಅದೆಲ್ಲ ನೋಡಿ ತುಂಬ ಸಂತೋಷವಾದದ್ದಂತು ನಿಜ . ಆದರೆ ಒಂದು ನಾವು ತಿಳಿಯಬೇಕಾದದ್ದು ಸ್ವಾಭಿಮಾನಿ ಕನ್ನಡಿಗನಾಗಿ ಏನಂದರೆ ನಾವು ಒಂದೊಂದು ಚಿಕ್ಕ ಕನ್ನಡದ ತುಂಡು ಎಳ್ಳು ಕಂಡರೂ ಅದನ್ನ ಮರುಭೂಮಿಯಲ್ಲಿ ನೀರು ಕಂಡಂತೆ ಬಾಸವಗುವಂತೆ ಯಾಕೆ ಆಚರಿಸುತ್ತೇವೆ . ಇದರಿಂದ ನಾವು ಒಂದು ತಪ್ಪು ಸಿಗ್ನಲ್ ಕೊಡುತ್ತೇವೆ ಅನಿಸುತ್ತಿಲ್ಲವೆ? . ಕನ್ನಡ ಪ್ರೋತ್ಸಾಹಿಸಿ , ಎಲ್ಲರು ಸೇರಿ ಬೆಳೆಸೋಣ ಆದರೆ ಸಣ್ಣ ಸಣ್ಣ ವಿಷಯವನ್ನು ದೊಡ್ಡದೆಂದು ತೋರ್ಪಡಿಸಿದರೆ ಅದರಲ್ಲಿ ಎಂಥಹ ಗತ್ತು ಇದೆ . ಅಲ್ವಾ ಮಾರಾಯ್ರೆ ?

Anonymous ಅಂತಾರೆ...

ತೇಜಸ್ವಿಯವರೇ,
ನೀವನ್ನೋದು ಒಂದುಥರಾ ನಿಜಾನೆ. ಇವತ್ತು ಇಂಥ ಚಿಕ್ಕಚಿಕ್ಕ ಸಂತೋಷಗಳಿಗೂ ಅವಕಾಶ ಇಲ್ಲದಂಥಾ ವ್ಯವಸ್ಥೆಯಲ್ಲಿದ್ದೀವಿ. ಇನ್ನು ಸಿಗ್ನಲ್ ಬಗ್ಗೆ : ಏನ್ ಗುರು ಬರಹಗಳನ್ನು ಸುಮಾರು ಒಂದು ವರ್ಶದಿಂದ ಓದುತ್ತಾ ಇದ್ದೀನಿ. ಹೆಚ್ಚಿನ ಬರಹಗಳಲ್ಲಿ ನಮ್ಮ ಕಣ್ಣೋಟದಿಂದ ನುಸುಳಿಹೋಗೋ ಚಿಕ್ಕ ಚಿಕ್ಕ ವಿಷಯಗಳ ಮೂಲಕವೇ ದೊಡ್ಡ ಸಂದೇಶ ಕೊಡೋ ಶೈಲಿ ಇದರದ್ದು. we enjoy this.

ನಮಸ್ಕಾರ

ಸುಂದರ್

Anonymous ಅಂತಾರೆ...

nanagu kannaDadha banner noDi tumba ne kushi aithu. Nammavara (RCB) geluviginta, aa banner ee manassige mudha neeDithu. :)

Unknown ಅಂತಾರೆ...

ಡೆಕ್ಕನ್ ಚಾರ್ಜರ್ಸ್ ಮೇಲಿನ ಇಂದಿನ ಗೆಲುವಿನ ನಂತರ ರಾಹುಲ್ ಡ್ರಾವಿಡ್ ಮಾತನಾಡುತ್ತಾ ಮನೀಶ್ ಪಾಂಡೆಯ ಆಟವನ್ನು ಹೊಗಳಿ, ಕರ್ನಾಟಕದ ಆಟಗಾರ ಚೆನ್ನಾಗಿ ಆಡಿರುವುದು ಕರ್ನಾಟಕ ಕ್ರಿಕೆಟ್ಟಿಗೆ ಒಳ್ಳೆಯದು ಎಂದು ಹೇಳಿ ಕರ್ನಾಟಕದ ಬಗೆಗಿನ ತಮ್ಮ ಕಾಳಜಿಯನ್ನು ಪ್ರದರ್ಶಿಸಿದರು. ಪ್ರಾದೇಶಿಕತೆ ನಮ್ಮ ಡ್ರಾವಿಡ್ ರ ಮನಸಲ್ಲೂ ನೆಲೆಯೂರಿ ಅವರ ಮಾತುಗಳಲ್ಲಿ ವ್ಯಕ್ತವಾಗಿದ್ದು ಈಗ ಎಲ್ಲೆಡೆ ಹೆಚ್ಚುತ್ತಿರುವ ಕನ್ನಡ ಪರ ಜಾಗೃತಿಗೆ ಸಾಕ್ಷಿ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails