ಈಗ ಕಪಿಲ್ ಸಿಬಲ್ ಅವರು ಏನು ಮಾಡಬೇಕು?

ಕಳೆದ ವಾರ ಭಾರತದ ಮಾನವ ಸಂಪನ್ಮೂಲ ಮಂತ್ರಿ ಕಪಿಲ್ ಸಿಬಲ್ ಅವರು ಶಾಲಾ ಮತ್ತು ಉನ್ನತ ಕಲಿಕಾ ವ್ಯವಸ್ಥೆಗಳಲ್ಲಿ ಕ್ರಾಂತಿ ತರಲು ಹೊರಟು ವಿವಾದ ಎಬ್ಬಿಸುವ ಬದಲಾವಣೆಗಳನ್ನು ಪ್ರಸ್ತಾಪಿಸಿದ್ದಾರೆ. ಕಪಿಲ್ ಅವರ ಈ ಪ್ರಸ್ತಾಪಗಳು ಒಬ್ಬ ಪ್ರೊ || ಯಶ್ಪಾಲ್ ಎಂಬುವರ ಮುಂದಾಳ್ತನದ ಉನ್ನತ ಶಿಕ್ಷಣದ ನವೀಕರಣ ಮತ್ತು ಪುನರುಜ್ಜೀವನಕ್ಕೆ ಸಂಬಂಧಿಸಿದ ಸಲಹಾ ಸಮಿತಿಯ ತೀರ್ಮಾನಗಳ ಮೇಲೆ ಆಧರಿತವಾಗಿವೆ ಎನ್ನಲಾಗಿದೆ. ದಿ ಹಿಂದು ದಿನ-ಪತ್ರಿಕೆಯ ಈ ತಾಣದಲ್ಲಿ ಮಾತ್ರ ಕಾಣಿಸಿಕೊಂಡಿರುವ ಈ ವರದಿಯನ್ನು ಸರ್ಕಾರದ ಅಂತರ್ಜಾಲದ ತಾಣದಲ್ಲಿ ಹಾಕಬೇಕು ಎಂದು ನಮ್ಮ ಸರ್ಕಾರಕ್ಕೆ ಅನಿಸಿದಂತಿಲ್ಲವಲ್ಲ, ಯಾಕೆ? ಇರಲಿ.

ಯಶ್ಪಾಲ್ ಸಮಿತಿಯ ಈ ವರದಿಯನ್ನು ಬನವಾಸಿ ಬಳಗದಲ್ಲಿ ನಾವು ಆಳವಾಗಿ ಅಧ್ಯಯನ ಮಾಡಿದ್ದೇವೆ. ಈ ವರದಿಯು ತಿಳಿಸಿಕೊಡುವ ಬದಲಾವಣೆಗಳನ್ನು ಭಾರತದಲ್ಲಿ ಅನುಷ್ಠಾನಕ್ಕೆ ತಂದರೆ, ಉನ್ನತ ಶಿಕ್ಷಣದಲ್ಲಿ ತಾತ್ಕಾಲಿಕವಾಗಿ ಸುಧಾರಣೆ ಕಂಡು ಬರಬಹುದು, ಆದರೆ ಕಾಲಕಳೆದಂತೆ ಸುಧಾರಣೆಯ ಫಲವು ಇಲ್ಲವಾಗುವುದು, ಇಲ್ಲವೇ ಪರಿಸ್ಥಿತಿಯು ಇನ್ನಷ್ಟು ಹಾಳಾಗಬಲ್ಲುದೆಂಬ ತೀರ್ಮಾನಕ್ಕೆ ಬಂದಿದ್ದೇವೆ. ಇಂತಹ ಬದಲಾವಣೆಗಳ ಅನುಷ್ಠಾನದಿಂದ ಸಮಾಜದಲ್ಲಿ ಉನ್ನತ ಶಿಕ್ಷಣದ ಹರವು ಹೆಚ್ಚಲಾರದು. ಅಲ್ಲದೆ, ಜನರಲ್ಲಿ ಜಾತಿ ಮತ್ತು ವರ್ಗ ಆಧಾರಿತ ಮೇಲು-ಕೀಳು ಭಾವನೆಗಳು ಹೋಗಬೇಕೆಂಬ ಈ ಸಮಿತಿಯ ಆಸೆಯೂ ಪೂರೈಸಲಾರದು. ಭಾರತದ ಮೇಲೆ ದಬ್ಬಾಳಿಕೆಯ ಆಡಳಿತವನ್ನು ಮಾಡಿದ ವಸಾಹತುಶಾಹಿ ಬ್ರಿಟಿಷರ ಆಂಗ್ಲ ಭಾಷೆಯಲ್ಲಿ ಬಿಟ್ಟು ಬೇರೆ ಯಾವ ಭಾಷೆಯಲ್ಲೂ ಉನ್ನತ ಶಿಕ್ಷಣವು ಸಾಧ್ಯವೇ ಇಲ್ಲವೆಂದುಕೊಂಡಿರುವ ಹೆಚ್ಚಿನ ಭಾರತೀಯರ ಕೊರತೆಯು ಈ ಸಮಿತಿಯಲ್ಲೂ ಇರುವುದೇ ಈ ವಿಫಲತೆಗೆ ಕಾರಣವಾಗಿದೆ. ಈ ಸಮಿತಿಯ ಬದಲು ಭಾರತೀಯ ಭಾಷೆಗಳಲ್ಲೇ ಉನ್ನತ ಶಿಕ್ಷಣವನ್ನು ಒದಗಿಸಲು ಪರಿಹಾರ ಸೂಚಿಸುವ ಹೊಸ ಸಮಿತಿಯನ್ನು ಕಪಿಲ್ ಸಿಬಲ್ ಅವರು ರಚಿಸಬೇಕಾಗಿದೆ. ಅಂತಹ ಸಮಿತಿಯು ಒಂದು ಶಾಶ್ವತ, ಹೆಚ್ಚಿನ ಹರವಿನ, ಸಮರ್ಪಕ ಹಾಗೂ ಏಳಿಗೆಮಾಡಿಸುವಂತಹ
ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವ ನಿಟ್ಟಿನಲ್ಲಿ ಉಪಯುಕ್ತವಾಗಬಲ್ಲದು. ಅಂತಹ ಸಮಿತಿಯು ಕೂಡ ವಿಕೇಂದ್ರೀಕರಣದ ಪ್ರಾಶಸ್ತ್ಯವನ್ನು ಅರಿತುಕೊಳ್ಳಬೇಕಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಕೇಂದ್ರೀಕರಣವನ್ನು ಮಾಡಹೊರಟಲ್ಲಿ ಇಡೀ ಭಾರತದ ಭವಿಷ್ಯಕ್ಕೇ ಮಾರಕವಾಗಲಿದ್ದು, ವಿಕೇಂದ್ರೀಕರಣದಿಂದ ಈಗಾಗಿರುವ ತುಸು ಏಳಿಗೆಯೂ ನೀರಿನಲ್ಲಿ ಹೋಮವಾಗುವುದು ಖಂಡಿತ!

ಇನ್ನು ಶಾಲಾ ಶಿಕ್ಷಣ ವ್ಯವಸ್ಥೆಯ ಬಗ್ಗೆ ಯಶ್ಪಾಲ್ ಸಮಿತಿಯ ಚಿಂತನೆ ಮತ್ತು ತೀರ್ಮಾನಗಳು ಬೇಜಾರಾಗುವಂತಿದ್ದು, ಯಾವುದೇ ಆಳವಾದ ಚಿಂತನೆ ಇದರಲ್ಲಿ ನಮಗೆ ಕಾಣಿಸುತ್ತಿಲ್ಲ. ಅಲ್ಲದೆ, ಇದರಲ್ಲೂ ವಿಕೇಂದ್ರೀಕರಣದ ಬದಲು ಕೇಂದ್ರೀಕರಣವೇ ಕಣ್ಣಿಗೆ ರಾಚುತ್ತಿದೆ. ಭಾರತದ ಶೇಕಡ 90ರಷ್ಟು ಮಕ್ಕಳು ಸರಿಸುಮಾರು 20 ಭಾರತೀಯ ಭಾಷೆಗಳಲ್ಲಿಯೇ ಪಾಠ ಹೇಳುವಂತಹ ರಾಜ್ಯ ಸರ್ಕಾರಗಳು ನಡೆಸುತ್ತಿರುವ ಶಾಳೆಗಳಲ್ಲಿ ಓದುತ್ತಿದ್ದಾರೆ ಎಂಬುದನ್ನೇ ಈ ಸಮಿತಿ ಕಡೆಗಣಿಸಿದೆ. ಈ ಎಲ್ಲಾ ಶಾಲೆಗಳ ಆಡಳಿತ ಒಂದು ಕೇಂದ್ರ ಸಂಸ್ಥೆಯ ಕೈಗೆ ಕೊಡಲಾಗದು; ಅಂತಹ ಕೇಂದ್ರ ಸಂಸ್ಥೆಗೆ ಇವೆಲ್ಲಾ ಭಾಷೆಗಳ ಶಿಕ್ಷಣ ವ್ಯವಸ್ಥೆಯನ್ನು ನಡೆಸುವ ಯೋಗ್ಯತೆಯಂತೂ ಎಂದಿಗೂ ಬರಲಾರದು. ಇಲ್ಲವೇ ಭಾರತದ ಶಾಲೆಗಳನ್ನೆಲ್ಲ ಆಂಗ್ಲ ಅಥವಾ ಹಿಂದಿ ಮಾಧ್ಯಮಕ್ಕೆ ಬದಲಾಯಿಸಿದರಂತೂ ಇಡೀ ಭಾರತವನ್ನು ನರಕಕ್ಕೆ ತಳ್ಳಿದಂತಾದೀತು. ಇಂತಹ ತಪ್ಪು ಆಧಾರಗಳ ಮೇಲೆ ನಿಂತಿರುವ ಯಶ್ಪಾಲ್ ಸಮಿತಿಯ ವರದಿಯನ್ನು ಮಂತ್ರಿ ಕಪಿಲ್ ಸಿಬಲ್ ಅವರು ತಿರಸ್ಕರಿಸುವುದು ಭಾರತೀಯರ ಹಿತಾಸಕ್ತಿಯ ದೃಷ್ಟಿಯಿಂದ ಮುಖ್ಯವಾಗಿದೆ.


ಅಲ್ಲದೆ, ಈ ವಿಚಾರದಲ್ಲಿ ಕಪಿಲ್ ಸಿಬಲ್ ಅವರ ನಡತೆ ಸ್ವತಂತ್ರ ದೇಶವೊಂದರ ಒಕ್ಕೂಟ ವ್ಯವಸ್ಥೆಯ ಸರ್ಕಾರದ ಒಬ್ಬ ಸೇವಕನ ನಡತೆಯಂತಿಲ್ಲದೆ ಹುಕುಂ ನೀಡುವ ವಸಾಹತುಶಾಹಿ ಸರದಾರನ ನಡತೆಯನ್ನೇ ಹೆಚ್ಚು ಹೋಲುತ್ತದೆ. ಸಿಬಲ್ ಅವರ ಈ ನಡವಳಿಕೆಯನ್ನು ಈಗಾಗಲೆ ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ, ಒರಿಸ್ಸಾ, ರಾಜಾಸ್ಥಾನದಂತಹ ರಾಜ್ಯಗಳು ವಿರೋಧಿಸಿವೆ. ಕಪಿಲ್ ಅವರು ತಾವಿರುವುದು ಒಂದು ಒಕ್ಕೂಟ ವ್ಯವಸ್ಥೆಯಲ್ಲಿ ಎಂದು ಮರೆಯದೆ, ಇನ್ನು ಮುಂದೆ ಈ ರೀತಿಯ ತೀರ್ಮಾನಗಳನ್ನು ಸುದ್ದಿ-ಮಾಧ್ಯಮಗಳಲ್ಲಿ ನೇರವಾಗಿ ತೇಲಿಬಿಡುವ ಮುನ್ನ ರಾಜ್ಯಸರ್ಕಾರಗಳೊಡನೆ ಚರ್ಚಿಸಿ, ಒಪ್ಪಿಗೆ ಪಡೆದು, ನಂತರವೇ ತೀರ್ಮಾನಕ್ಕೆ ಬರುವುದು ಉತ್ತಮ. ಅಲ್ಲದೆ,
ಸಂಬಂಧಿಸಿದ ದಾಖಲೆಗಳನ್ನು ಸಕಾಲದಲ್ಲಿ ಸರ್ಕಾರದ ಅಂತರ್ಜಾಲ ಪುಟಗಳಲ್ಲಿ ಹಾಕುವುದೂ ಮುಖ್ಯ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ಅಪ್ಪಣೆ ಕೊಡುವುದು ನಿಮ್ಮ ಕೆಲಸವಲ್ಲ ಸಿಬಲ್ ಅವರೆ, ರಾಜ್ಯಗಳ ಅಭಿಪ್ರಾಯವನ್ನು ಸಂಗ್ರಹಿಸಿ ಎಲ್ಲರಿಗೂ ಒಪ್ಪಿಗೆಯಾಗುವಂತಹ ತೀರ್ಮಾನಗಳಿಗೆ ಬರುವುದು ಮಾತ್ರ. ನೆನಪಿರಲಿ!

ಭಾರತದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಬೇಕಿದೆ, ಹೌದು. ಆದರೆ ಅರ್ಥವಿಲ್ಲದ, ಇರುವುದನ್ನೂ ಹಾಳುಮಾಡುವಂತಿರುವ ಯಶ್ಪಾಲ್ ಸಮಿತಿಯು ಸೂಚಿಸುವ ಬದಲಾವಣೆಯಲ್ಲ. ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲೂ ಬದಲಾವಣೆ ಬೇಕಿದೆ, ಹೌದು, ಆದರೆ ಸಮಸ್ಯೆಯನ್ನೇ ಬಗೆಹರಿಸದ ಹಳೆಯ ವ್ಯವಸ್ಥೆಗೆ ಒಂದು ಹೊಸ ರೂಪವನ್ನು ಕೊಡಲು ಹೊರಟಿರುವ ಯಶ್ಪಾಲ್ ಸಮಿತಿಯು ಸೂಚಿಸಿರುವ ಬದಲಾವಣೆಯಿಂದ ಉಪಯೋಗವಿಲ್ಲ.


ಭಾರತದ ಜನರಿಗೆ ಸರಿಯಾದ ಶಿಕ್ಷಣ ದೊರಕುತ್ತಿಲ್ಲದೆ ಇರುವುದಕ್ಕೆ ಶಿಕ್ಷಣವೆಂಬ ವಿಷಯವನ್ನು ಇನ್ನೂ ಸಂವಿಧಾನದ ಜಂಟಿ-ಪಟ್ಟಿಯಲ್ಲಿ ಇರಿಸಿರುವುದೇ ಮುಖ್ಯವಾದ ಕಾರಣವೆಂದು ಓದುಗರು ಮನಗಾಣಬೇಕು. ಇದರ ಬದಲು ಶಿಕ್ಷಣವನ್ನು ಸಂಪೂರ್ಣವಾಗಿ ರಾಜ್ಯ-ಪಟ್ಟಿಗೆ ಸೇರಿಸಿ ಕೇಂದ್ರ-ಪಟ್ಟಿಯಲ್ಲಿ ಗಡಿ ರಕ್ಷಣೆಯಂತಹ ಕೆಲಸಗಳಿಗೆ ಮೀಸಲಿಡುವುದೇ ಸರಿ.

ಈ ಬರಹವನ್ನು ಬನವಾಸಿ ಬಳಗದ KARNATIQUE (English) ಮತ್ತು ಕಲಿಕೆಯು (ಕನ್ನಡ) ಬ್ಲಾಗುಗಳಲ್ಲಿ ಕೂಡ ಹಾಕಲಾಗಿದೆ.

5 ಅನಿಸಿಕೆಗಳು:

ಸಾಗರದಾಚೆಯ ಇಂಚರ ಅಂತಾರೆ...

ನಿಜ, ಬದಲಾವಣೆ ಬೇಕು ಆದರೆ ಅದು ಅಪಾಯಕಾರೀ ಆಗದಿದ್ದರೆ ಸಾಕು,
ನಮ್ಮ ಶಿಕ್ಷಣ ಪದ್ಧತಿ ಬಹಳಷ್ಟು ಸುಧಾರಿಸಬೇಕಿದೆ

Unknown ಅಂತಾರೆ...

kamale kannininda varadiyannu nodabedi. Indigoo deshada 20 bhashegalalli kalita makkale Engineering, medical, IIT, IIM, Deemed University galalli vidyabhyasa maaduthiruvudu.

sariyaagi artha maadikolliri. IIT, IIM, Engg, Medical, Business School elloo kannda madhyamadallilla emba satyave nimage kaanuthillave.

Prof. yashpal Committee salahegalannu neediruvudu Unnata shikshana avyavastheya bagge maathra. idu prathamika shikshana athava bhasha madhyamada melalla.

Unknown ಅಂತಾರೆ...

kamale kannininda varadiyannu nodabedi. Prof Yashpal samithi varadi neediruvudu, Unnatha shikshanada sudharanegaagi. ivathina shikshana vyavastheyallina lopa doshagalannu todedu haakuvudu, Deemed University galemba yaavude resources/infrastructure galillada business park galannu tholagisuvudu idara mukya uddesha. Indina dinagalalli AICTC, NAAC, UGC galu yaaru avarige chennaagi duddu koduvaro avarigella maanyate, sthana maana needuvantaha mahatkaryadalli thodagive. idarinda indina shikshanada gunamatta kusiyuthide. hosa raagavembanthe bekada kadeyallella IIT, IIM galannu thereyalu sarkara chinthisuthide. idarinda arhatha adhaarada mele intaha shikshana samthegalige serabekada avashyakatheyanne thegedu haakalaaguthide.

Engg, Medical, IIT, IIM, Business Schools elliyoo Kannada bhashe madhyamavagilla. aaddarinda ee varadiyannu bhasha madhyama virodhi endu pariganisabedi.

ಚಿಕ್ಕೋಡಿ ಚಿನ್ನಸ್ವಾಮಿ ಅಂತಾರೆ...

'ಐಡಿಯಲ್ ಸೆಟಪ್' - ಏನ್ಗುರು ?

ಬನವಾಸಿ ಬಳಗ ಅಂತಾರೆ...

ವಿಶ್ವನಾಥ್ ಅವರೆ,
ದೇಶದ ಶಿಕ್ಷಣ ವ್ಯವಸ್ಥೆಯ ಸುಧಾರಣೆ ಮಾಡಲು ಹೊರಟಿರುವ ಒಂದು ಕೇಂದ್ರ ಸಮಿತಿ ಸಮಸ್ಯೆಯ ಮೂಲ ಕಾರಣದ ಚಿಂತನೆ ಮಾಡಿಯೇ ಇಲ್ಲವೆನ್ನುವುದು ನಾವು ಇಲ್ಲಿ ಮಾಡಿರುವ ಆರೋಪ. ಏಕೆಂದರೆ ಇವರು ಕಲಿಕೆಯಲ್ಲಿ ಮಾಧ್ಯಮದ ಬಗ್ಗೆ ಹೆಚ್ಚು ನಿಗ ವಹಿಸಿಲ್ಲ, (ಇದನ್ನು ನೀವೂ ಒಪ್ಪುತ್ತಿದ್ದೀರ.) ಮತ್ತು ಕಲಿಕೆ ನಮ್ಮ ದೇಶದ ಸಂದರ್ಭಕ್ಕೆ ಹೇಗೆ ಅನ್ವಯಿಸುತ್ತದೆ, ನಮ್ಮ ದೇಶದಲ್ಲಿ ಆಂಗ್ಲದ ಪಾತ್ರ ಏನಾಗಿರಬೇಕು, ಬೇರೆ ಬೇರೆ ರಾಜ್ಯಗಳಿಗೆ ಕಲಿಕೆ ಹೇಗೆ ವ್ಯತ್ಯಾಸ ಹೊಂದಬಹುದು - ಇಂತಹ ಪ್ರಶ್ನೆಗಳನ್ನೆಲ್ಲಾ ಈ ಸಮಿತಿ ಕೇಳಿಕೊಂಡಿರುವ ಹಾಗೆ ಅವರ ವರದಿಯಿಂದ ಕಂಡು ಬರುತ್ತಿಲ್ಲ.

ಉನ್ನತ ಶಿಕ್ಷಣ ನಡೆಸುತ್ತಿರುವ ಇಂದಿನ ಸಂಸ್ಥೆಗಳಲ್ಲಿ ಸಮಸ್ಯೆ ಎಲ್ಲಿದೆಯೆಂಬುದನ್ನೇ ಕಾಣದೆ ಅವುಗಳನ್ನು ಬುಡ ಸಮೇತ ಕಿತ್ತುಹಾಕುವುದಾಗಲಿ, ಅಥವಾ ಉನ್ನತ ಶಿಕ್ಷಣ ಹೆಚ್ಚಿನ ಜನರಿಗೆ ಕಡಿಮೆ ಕರ್ಚಿನಲ್ಲಿ ತಲುಪುವ ಹಾಗೆ ಇಂದಿನ ಸಂಸ್ಥೆಗಳಿಗೆ ಏಕೆ ಸಾಧ್ಯವಾಗುತ್ತಿಲ್ಲ - ಇವೆಲ್ಲವನ್ನೂ ಪ್ರಶ್ನಿಸಿಕೊಳ್ಳದೇ ಇರುವ ಸಮಿತಿಯ ವರದಿಯನ್ನು ಒಕ್ಕೂಟ ವ್ಯವಸ್ಥೆಯಲ್ಲಿರುವ ನಮ್ಮಂತಹ ಪ್ರತಿಯೊಂದು ರಾಜ್ಯವಾದರೂ ಏಕೆ ಒಪ್ಪಬೇಕು ಎಂಬ ಪ್ರಶ್ನೆಯನ್ನೇ ನಾವೂ ಕೇಳುತ್ತಿರುವುದು. ಇದರಲ್ಲಿ ಕಾಮಾಲೆಯ ಕಣ್ಣಿನ ನೋಟ ಎಲ್ಲಿ ಕಂಡಿತು ನೀವೇ ಈಗ ಯೋಚನೆ ಮಾಡಿ..

ನಿಜ. ಇಂದಿಗೂ ಆ ೨೦ ಭಾಷೆಗಳಲ್ಲಿ ಕಲಿತ ಮಕ್ಕಳೇ ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಾಣುತ್ತಿರಬಹುದು. ಆದರೆ ಯಾವ ನಷ್ಟ ಹೊಂದುತ್ತಾ ನಮ್ಮ ಈ ಮಕ್ಕಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ, ಮತ್ತು ಅಂತಹ ಮಕ್ಕಳಲ್ಲಿ ಶೇಕಡ ಎಷ್ಟು ಮಕ್ಕಳು ಉನ್ನತ ಶಿಕ್ಷಣದಿಂದ ಲಾಭ ಪಡೆಯುತ್ತಿದ್ದಾರೆ ಅನ್ನುವುದು ಇಲ್ಲಿ ಮುಖ್ಯವಾದ ಪ್ರಶ್ನೆಯಾಗುತ್ತದೆ. ಇದರಲ್ಲಿ ಅತಿ ಕಡಿಮೆಯೆನ್ನುವ ಉತ್ತರಕ್ಕೆ ಕಾರಣವೇ ನಾವು ಮಾಡುತ್ತಿರುವ ಆರೋಪದ ಬುನಾದಿ. ಅದೇ ಈ ಸಮಿತಿ ಮಾಡಬೇಕಿದ್ದ ಚಿಂತನೆ, ಮತ್ತು ಅದನ್ನಾಧರಿಸಿ ಮಾನವ ಸಂಪನ್ಮೂಲ ಮಂತ್ರಾಲಯ ರಾಜ್ಯಗಳೊಡನೆ ಮಾಡಬೇಕಿದ್ದ ಚರ್ಚೆಯ ವಿಷಯ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails