ಕೆ.ಪಿ.ಎಲ್ ಅನ್ನೋ ಕ್ರಿಕೆಟ್ ಹಬ್ಬ!!!



ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯೋರು ಈ ವರ್ಷದಿಂದ ಶುರು ಮಾಡಿರೋ ಕೆ.ಪಿ.ಎಲ್ (ಕರ್ನಾಟಕ ಪ್ರೀಮಿಯರ್ ಲೀಗ್) ಸರಣಿ ಪಂದ್ಯಗಳು ನಿನ್ನೆ ಮುಗಿದವು. ಮೊದಲ ಬಾರಿಗೆ 20-20 ಮಾದರಿಯ ಈ ಸರಣಿಯಲ್ಲಿ ಬೆಂಗಳೂರು ಗ್ರಾಮಾಂತರ ತಂಡವಾದ ಬೆಂಗಳೂರು ಪ್ರಾವಿಡೆಂಟ್ ತಂಡದೋರು ಪ್ರಶಸ್ತಿ ಗೆದ್ದುಕೊಂಡರು. ಈ ಕೆ.ಪಿ.ಎಲ್‍ನ ಶುರುಮಾಡಿದ ಉದ್ದೇಶವೇ ಜಿಲ್ಲಾ ಪ್ರತಿಭೆಗಳ ಶೋಧ ಮತ್ತು ರಾಷ್ಟ್ರೀಯ ತಂಡಕ್ಕೆ ಪೂರೈಕೆ ಅನ್ನೋದು ಒಳ್ಳೇ ನಿಲುವಾಗಿದೆ ಮತ್ತು ಒಳ್ಳೆಯ ನಡೆಯಾಗಿದೆ. ಒಟ್ಟು 31 ಪಂದ್ಯಗಳು ಮತ್ತು ಅದರಲ್ಲೂ ತುಂಬಾ ರೋಮಾಂಚಕಾರಿಯಾಗಿ ಕೊನೆ ಎಸೆತದವರೆಗೂ ಕುತೂಹಲ ಕಾಯ್ದುಕೊಂಡ ಕೆಲಪಂದ್ಯಗಳೂ ನಡೆದವು. ನಮ್ಮವರೂ ಐ.ಪಿ.ಎಲ್‍ಗೆ ನಾವೇನು ಕಮ್ಮಿ ಇಲ್ಲ ಎಂದು ಸಡ್ಡು ಹೊಡೆದವರಂತೆ ಚಿಯರ್‍ಗರ್ಲ್‌ಗಳನ್ನು ಕರೆಸಿದ್ರು ಗುರು! ಹ ಹ್ಹಾ ಹ್ಹಾ... ಅಷ್ಟು ಬಣ್ಣತುಂಬುವ ಪ್ರಯತ್ನಗಳು ಇಲ್ಲಿ ನಡೆದವು!

ಮೆಚ್ಚಿಗೆಯಾದ ಅನೇಕ ಅಂಶಗಳು!

ಇಡೀ ಪಂದ್ಯಾವಳಿಯಲ್ಲಿ ಕನ್ನಡಕ್ಕೆ ಸುಮಾರಾಗಿ ಪ್ರಾಮುಖ್ಯತೆ ಸಿಕ್ಕಿದ್ದಂಗಿತ್ತು. ಕೆಪಿಎಲ್ ಹಾಡುಗಳು, ಎಲ್ಲ ತಂಡಗಳೋರು ಮಾಡಿಸಿಕೊಂಡಿದ್ದ ಹಾಡುಗಳು ಕನ್ನಡದಲ್ಲಿದ್ವು. ಆಟದ ಮೈದಾನದಲ್ಲೂ ವಿಜಯ ಕರ್ನಾಟಕ, ಅದೂ ಇದೂ ಅಂತ ಕನ್ನಡದ ಜಾಹೀರಾತುಗಳಿದ್ದವು. ಕನ್ನಡದ ಬಾವುಟಗಳು ಹಾರಾಡ್ತಿದ್ವು ಆಟದ ವೀಕ್ಷಕ ವಿವರಣೆಯಲ್ಲಿ ಕನ್ನಡವಿತ್ತು. ಈ ಪಂದ್ಯಾವಳಿಯಿಂದ ಹಳ್ಳಿಗಾಡಿನ ಅನೇಕ ಪ್ರತಿಭೆಗಳಿಗೆ ಒಳ್ಳೆಯ ಅವಕಾಶ ಸಿಕ್ಕಿದೆ, ಸಿಕ್ಕಲಿದೆ ಅನ್ನೋದೆಲ್ಲಾ ಖುಷಿ ವಿಷಯಾನೆ ಗುರು! ಇದು ಹೀಗೇ ಮುಂದುವರೀಲಿ... ಇದರ ಮೂಲಕ ನಮ್ಮ ನಾಡಿಂದ ಭಾರತೀಯ ಕ್ರಿಕೆಟ್ಟಿಗೆ ಒಳ್ಳೊಳ್ಳೆ ಆಟಗಾರರು ಸಿಗಲಿ!! ಯಾಕಂದ್ರೆ ಎರಡು ಕೋಟಿ ಜನರಿರೋ ಶ್ರೀಲಂಕಾ, ಆಸ್ಟ್ರೇಲಿಯಾ, 30 ಲಕ್ಷ ಜನರಿರೋ ವೆಸ್ಟ್‍ಇಂಡೀಸ್, 40 ಲಕ್ಷ ಜನರಿರೋ ನ್ಯೂಜಿಲ್ಯಾಂಡ್ ಮೊದಲಾದವು ಪ್ರಪಂಚದ ಬಲಿಷ್ಟ ತಂಡಗಳಾಗಿರೋವಾಗ 5 ಕೋಟಿ ಕನ್ನಡಿಗರ ಕರ್ನಾಟಕಕ್ಕೆ, ಭಾರತ ತಂಡದಲ್ಲಾಡೋ ಯೋಗ್ಯತೆಯಿರೋ ನಾಲ್ಕಾರು ಜನ ಆಟಗಾರರನ್ನು ಕೊಡಕ್ಕಾಗಲ್ವಾ ಗುರು?

ಸರಿಯಾಗಬೇಕಾದ ಕೆಲ ಅಂಶಗಳು

ಈ ಪಂದ್ಯಾವಳಿಗಳ ಪ್ರಾಯೋಜಕರಾದ ಮಂತ್ರಿ ಡೆವೆಲಪರ್ಸ್ ಅವರ ಜಾಹೀರಾತುಗಳು ಪಂದ್ಯದ ನಡುವೆ ಆಟದ ಮೈದಾನದಲ್ಲಿ ಹಾಕ್ತಾ ಇದ್ರು, ಅದಂತೂ ಪೂರ್ತಿ ಹಿಂದೀಲಿತ್ತು ಗುರು! ಅದ್ಯಾರಿಗೆ ಅರ್ಥ ಆಗ್ಲೀ ಅಂದ್ಕೊಂಡ್ರೋ ಏನೋ!! ಪುಣ್ಯಾತ್ಮರು. ಇನ್ನು ಆಟದ ನಡುನಡುವೆ ಹಾಡುಗಳನ್ನು ಹಾಕೋರು... ಕನ್ನಡದ ಹಾಡು ಹಾಕಿದಾಗೆಲ್ಲಾ ಜನಾ ಹೋ ಅಂತಾ ಖುಷಿ ಪಡ್ತಿದ್ರು. ಜಿಂಕೆ ಮರೀನಾ ಜಿಂಕೆ ಮರೀನಾ ಹಾಕಿದಾಗಂತೂ ಇಡೀ ಸ್ಟೇಡಿಯಂ ಎದ್ ಕುಣೀತಿತ್ತು. ಆದ್ರೆ ಅದ್ಯಾಕೋ ಅಲ್ಲಿನ ಕೆಲ ಪ್ರಭೃತಿಗಳು ಆಗಾಗ ಹಿಂದಿ ಹಾಡು ಹಾಕಿ ಜನರ ಉತ್ಸಾಹ ಬತ್ತುಸ್ತಿದ್ರು! ಈ ಜನ ಹಿಂದೀಜ್ವರ ಹಿಡ್ಸೋ ಪ್ರಯತ್ನಾ ಮಾತ್ರಾ ಇಲ್ಲೂ ಬಿಡಲಿಲ್ಲಾ ಅನ್ನೋದು ಬೇಸರದ ಸಂಗತಿ! ಒಂದೊಂದ್ ಮ್ಯಾಚ್ ಆದಮೇಲೂ ಆಟಗಾರರನ್ನು ಮಾತಾಡ್ಸೋರೂ, ಬಹುಮಾನ ಕೊಡೋರೂ ಕೊನೆಗೆ ಆಟಗಾರರೂ ಕೂಡಾ ಇಂಗ್ಲೀಷಲ್ಲಿ ಮಾತಾಡಿದ್ ಯಾಕೋ ಅನಗತ್ಯವಾಗಿತ್ತು ಅನ್ನುಸ್ತಿತ್ತು ಗುರು! ನಮ್ಮೋರು ಅರ್ಥ ಮಾಡ್ಕೋಬೇಕಾಗಿರೋದು ಇನ್ನೂ ಒಂದಿದೆ. ಈ ಪಂದ್ಯಗಳನ್ನು ಬೆಂಗಳೂರಿನಿಂದ ಆಚೆ ನಡ್ಸುದ್ರೆ ಹೆಚ್ಚು ಜನರನ್ನು ಸೆಳೆಯೋಕ್ ಆಗೋದು. ಬೆಂಗಳೂರಲ್ಲಿರೋ ಜನ ಇಂಟರ‍್ನ್ಯಾಷನಲ್ ಪಂದ್ಯ ನೋಡಿರೋರು, ಅವರನ್ನು ಇದಕ್ ಸೆಳೆಯೋದುಕ್ಕೆ ಹಿಂದೀ ಪಂದೀ, ಟುಸ್ಸು ಪುಸ್ಸು ಅಂತನ್ನೋ ಬದಲು ಸುಮ್ನೆ ಜಿಲ್ಲಾ ಕೇಂದ್ರಗಳಿಗೆ ಕೆ.ಪಿ.ಎಲ್‍ನ ಒಯ್ಯೋದ್ರಿಂದ ಹೆಚ್ಚು ಜನರನ್ನು ಮುಟ್ಟಬಹುದು. ಅಲ್ಲೆಲ್ಲಾ ಕ್ರಿಕೆಟ್ ಬಗ್ಗೆ ಹೆಚ್ಚಿನ ಆಸಕ್ತಿ ಹುಟ್ ಹಾಕ್ಬೋದಲ್ವಾ! ಒಟ್ನಲ್ಲಿ ಅಂದ್ಕೊಂಡ ಗುರೀನ ಮತ್ತಷ್ಟು ಪರಿಣಾಮಕಾರಿಯಾಗಿ ಮುಟ್ಟಕ್ಕೆ ನಮ್ಮತನದ ಸೊಗಡನ್ನು ಕೆ.ಪಿ.ಎಲ್‍ಗೆ ಒಸಿ ಜಾಸ್ತೀನೆ ಅಂಟುಸ್ಬೇಕಾಗಿದೆ ಗುರು!

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails