ಭಾಷಾವಾರು ಪ್ರಾಂತ್ಯ ಮತ್ತು ಭಾರತ!


ಮನುಷ್ಯ ಬದುಕೋಕೆ ತನ್ನ ಸುತ್ತ ಒಂದು ಸಮಾಜ ಕಟ್ಕೊಂಡಿರ್ತಾನೆ ಮತ್ತು ಸಹಕಾರದ ಆಧಾರದ ಮೇಲೇ ಬದುಕು ಸಾಗುಸ್ತಾನೆ. ಆ ಕಾರಣದಿಂದಲೇ ತಾನಿರುವ ಸಮಾಜದಲ್ಲಿ ಕೊಂಡಿಯಂತೆ ಒಗ್ಗಟ್ಟನ್ನು ಇಟ್ಕೊಂಡಿರ್ತಾನೆ. ಈ ಒಗ್ಗಟ್ಟು ಎರಡು ತೆರನಾಗಿದ್ದು ಮೊದಲನೇದು ‘ದೇಶದಲ್ಲಿನ ಒಗ್ಗಟ್ಟು’. ಅಂದರೆ ಆ ಸಮಾಜ ಹರಡಿರೋ ಪ್ರದೇಶದ ಒಟ್ಟೂ ಜನರಲ್ಲಿರುವ ಒಗ್ಗಟ್ಟು ಮತ್ತು ಎರಡನೇದು ‘ಕಾಲದಲ್ಲಿನ ಒಗ್ಗಟ್ಟು’. ಅಂದ್ರೆ ತಲತಲಾಂತರವಾಗಿ ಹರಿದು ಬಂದ/ ಹರಿದು ಸಾಗುವ ಒಗ್ಗಟ್ಟುಗಳಾಗಿರುತ್ತವೆ. ನಾಡೆಂಬುದರಲ್ಲಿ ಒಂದು ಪ್ರದೇಶದ ಸಮಾಜ, ಅದರ ನಂಬಿಕೆಗಳು, ಮನಸ್ಥಿತಿ, ಆಚರಣೆ, ವಿಚಾರ ಮಾಡೋ ವಿಧಾನಗಳು, ಅದರಲ್ಲಿನ ಸಹಕಾರಗಳೆಲ್ಲಾ ಅಡಕವಾಗಿರುತ್ತವೆ. ಇದೇ ಒಂದು ನಾಡಿನ ಒಳಗಿರೋ ಸಹಜವಾದ ನಿಜ ಸ್ವರೂಪ. ಒಂದು ಸಮಾಜ ತನ್ನೊಳಗೆ ಮಾಡಿಕೊಂಡಿರುವ ಕಟ್ಟುಪಾಡುಗಳು, ಕಲಿಕೆಗೆ ದುಡಿಮೆಗೆ ರೂಪಿಸಿಕೊಳ್ಳುವ ವ್ಯವಸ್ಥೆಗಳೆಲ್ಲಾ ಆ ಪ್ರದೇಶದ ಹಣೆಬರಹಾನ ಬರೆದಿಡುತ್ತೆ. ನಾಗರೀಕತೆ ಬೆಳೆದಂತೆಲ್ಲಾ ಇಂಥಾ ವ್ಯವಸ್ಥೆಗಳೂ ಆಧುನಿಕವಾಗುತ್ತಾ ಬಂದಿವೆ ಮತ್ತು ಇವುಗಳಲ್ಲಿ ಎಲ್ಲಾ ದೇಶಗಳಿಗೂ, ಸಮಾಜಗಳಿಗೂ ಅನ್ವಯವಾಗೋ ಅನೇಕ ಸಮಾನ ಅಂಶಗಳು ರೂಪುಗೊಂಡಿವೆ.

ಭಾಷೆ ಮತ್ತು ಸಮಾಜ

ಒಂದು ಸಮಾಜದ ಅಡಿಗಲ್ಲೇ ಸಹಕಾರವಾಗಿರುವಾಗ, ಅಂತಹ ಸಹಕಾರಕ್ಕೆ ಪ್ರಮುಖ ಸಾಧನವಾಗೋದು ಜನರ ನಡುವಿನ ಸಂವಹನ ಮತ್ತು ಹೆಚ್ಚಿನೆಡೆಗಳಲ್ಲಿ ಸಂವಹನದ ಸಾಧನವಾದ ಆ ಜನರಾಡುವ ನುಡಿ. ಹೌದೂ... ಭಾಷೆ ಸಮಾಜದ ಸಂಪರ್ಕ ಮಾಧ್ಯಮ ಮಾತ್ರಾ ಅಲ್ಲ, ಅದು ಸಹಕಾರದ ಮಾಧ್ಯಮ. ಇದೇ ಒಂದು ಭಾಷೆಗಿರುವ ಪ್ರಾಮುಖ್ಯ. ಒಂದು ಪ್ರದೇಶದ ಏಳಿಗೆಗೆ ಅಥವಾ ಹಿಂಬೀಳುವಿಕೆಗೆ ಆ ಪ್ರದೇಶದ ಜನರು ತಮ್ಮ ನುಡಿಗೆ ತಮ್ಮ ಸಮಾಜದಲ್ಲಿ ಯಾವ ಸ್ಥಾನ ಕೊಟ್ಟುಕೊಂಡಿದ್ದಾರೆಂಬುದು ಮಹತ್ವದ ಕಾರಣವಾಗಿರುತ್ತದೆ. ಒಂದು ಪ್ರದೇಶದಲ್ಲಿನ ಜನತೆ ಸಹಜವಾಗಿಯೇ ತಮ್ಮ ನುಡಿಗಳಲ್ಲಿ ಕಲಿಕೆ, ಆಡಳಿತ, ದುಡಿಮೆಯೇ ಮೊದಲಾದ ಪ್ರತಿಯೊಂದು ಕೆಲಸವನ್ನು ಮಾಡಿಕೊಳ್ಳುವುದು ಸರಿಯಾದ ಮತ್ತು ಸಹಜವಾದ ವಿಧಾನ. ಇದೇ ಭಾಷಾವಾರು ಪ್ರಾಂತ್ಯ ರಚನೆಯ ಹಿಂದಿರುವ ತತ್ವ. ಇನ್ನೊಂದು ಮಹತ್ವದ ವಿಷಯವೂ ಇದೆ. ಅದೆಂದರೆ ಭೌಗೋಳಿಕವಾಗಿ ಒಂದು ಪ್ರದೇಶ ದೊಡ್ಡದಾಗಿದ್ದು... ಆ ಪ್ರದೇಶದ ಜನಸಂಖ್ಯೆಯು ಹೆಚ್ಚಾಗಿರುವುದು ಬಲದ ದೃಷ್ಟಿಯಿಂದ ಹೆಚ್ಚು ಪರಿಣಾಮಕಾರಿಯಾಗಿರುವುದೇನೋ ಸರಿಯೇ. ಆದರೆ ಇಂತಹ ದೊಡ್ಡ ಪ್ರದೇಶದ ಅಸ್ತಿತ್ವ ಸಹಜವೋ, ರೂಪಿತವೋ ಅನ್ನುವುದು ಗಮನಿಸಬೇಕಾದ ಅಂಶ. ಒಂದು ದೇಶದ ಭೌಗೋಳಿಕ ವ್ಯಾಪ್ತಿಯ ವಿಸ್ತರಣೆಯು, ಆ ಪ್ರದೇಶದಲ್ಲಿ ವಾಸಿಸುವ ವಿಭಿನ್ನ ಜನಾಂಗಗಳ ಕಲಸು ಮೇಲೋಗರವಾದರೆ ಏನಾಗುವುದು? ಹೀಗೆ ಭಿನ್ನ ಜನಾಂಗಗಳ ನಡುವೆ ಒಗ್ಗಟ್ಟು ಮೂಡಿಸಬೇಕಾದಾಗ ಸಹಜವಾಗಿರುವ ಸಾಮಾನ್ಯ ವಿಷಯವನ್ನು ಆಧಾರವಾಗಿಸಿಕೊಳ್ಳದೇ, ಇಲ್ಲದ ಸಮಾನತೆಯನ್ನು ಹೇರುವುದನ್ನು ಮಾಡುವುದು ಆ ಪ್ರದೇಶದ ಒಗ್ಗಟ್ಟಿಗೆ ದೀರ್ಘಾವಧಿಯಲ್ಲಿ ಮಾರಕವೇ ಆಗಿದೆ. ಬಲ ತೋರಿಕೆಗಾಗಿ ಅಸಹಜವಾದ ಒಗ್ಗಟ್ಟು ರೂಪಿಸಲು ಮಾಡುವ ಪ್ರಯೋಗಗಳು ಅಂತಹ ನಾಡುಗಳ ಒಳಗಣ ಒಗ್ಗಟ್ಟು ಮುರಿಯುವ ಸಾಧ್ಯತೆಯೇ ಹೆಚ್ಚು.

ಭಾರತ ಮತ್ತು ಏಕತೆ
ಭಾರತಕ್ಕೆ 1947ರಲ್ಲಿ ಸ್ವಾತಂತ್ರ ಬಂದ ಮೇಲೆ ‘ನಾಡು ಅಷ್ಟು ಶತಮಾನಗಳ ಗುಲಾಮಗಿರಿಗೆ ಒಳಗಾಗಿದ್ದೇ ಒಗ್ಗಟ್ಟಿನ ಕೊರತೆಯಿಂದಾಗಿ’ ಎನ್ನುವ ನಂಬಿಕೆಯ ಆಧಾರದ ಮೇಲೆ ದೇಶದಲ್ಲಿ ಒಗ್ಗಟ್ಟು ಸಾಧಿಸಲು ಅನುಸರಿಸಿದ ಕ್ರಮಗಳು ದುರಾದೃಷ್ಟವಶಾತ್ ಎರಡನೇ ಮಾದರಿಯದಾಗಿದ್ದವು. ಈ ಮಾತನ್ನು ಕೊಂಚ ಬದಿಗಿಟ್ಟು ನೋಡಿದರೆ 1947ರ ನಂತರ ಭಾರತದಲ್ಲಿ ಪ್ರಜಾಪ್ರಭುತ್ವದ ಕಾರಣವಾಗಿ ಅಧಿಕಾರವನ್ನು ಜನರೆಡೆಗೇ ಒಯ್ಯುವ ವ್ಯವಸ್ಥೆ ರೂಪಿಸಲು ಮುಂದಾಗಲಾಯಿತು. ಹಾಗಾಗಿ ಅನೇಕ ಪ್ರಾಂತ್ಯಗಳನ್ನು ರಚಿಸಬೇಕಾಯ್ತು. ಇಂಥಾ ಪ್ರಾಂತ್ಯಗಳನ್ನು ಯಾವ ಆಧಾರದ ಮೇರೆಗೆ ರೂಪಿಸಬೇಕು? ಎನ್ನುವ ಪ್ರಶ್ನೆಗೆ ಉತ್ತರವಾಗಿ ಕೆಲ ನಾಯಕರು ಭೂಪಟಾನಾ ಮುಂದಿಟ್ಟುಕೊಂಡು ಉದ್ದುದ್ದ ಅಡ್ಡಡ್ಡ ಗೆರೆ ಎಳೆದು ಪ್ರಾಂತ್ಯಗಳನ್ನು ಮಾಡೋದೇ ಸರಿ ಎಂದರು. ಅನೇಕರು ಯಾವುದೇ ಒಂದು ಸಮಾಜದ ಆಡಳಿತ, ಕಲಿಕೆ, ದುಡಿಮೆ, ಒಗ್ಗಟ್ಟು ಮತ್ತು ಏಳಿಗೆಗಳ ಸಹಜ ಸೂತ್ರವಾದ ಭಾಷೆಯ ಆಧಾರದ ಮೇಲೆ ಇಂತಹ ಪ್ರಾಂತ್ಯಗಳನ್ನು ರೂಪಿಸುವುದು ಸರಿಯೆಂದರು. ಅಂದಿನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕೂಡಾ ಈ ನಿಲುವನ್ನೇ ಹೊಂದಿತ್ತು. ಆದರೆ ಇದನ್ನು ಜಾರಿ ಮಾಡಲು ಸರ್ಕಾರ ಮೀನ ಮೇಷಾ ಎಣಿಸುತ್ತಿದ್ದಾಗ, 1952ರಲ್ಲಿ ಅಖಂಡ ಆಂಧ್ರಪ್ರದೇಶ ರಾಜ್ಯ ರಚನೆಗೆ ಒತ್ತಾಯಿಸಲಾಯಿತು. ಮಹಾತ್ಮ ಗಾಂಧಿಯ ಅನುಯಾಯಿಯಾಗಿದ್ದ ಚೆನ್ನೈನ ಪೊಟ್ಟಿ ಶ್ರೀರಾಮುಲು (ಅಮರಜೀವಿ ಶ್ರೀರಾಮುಲು) 58 ದಿನಗಳ ಕಾಲ ಅನ್ನಾಹಾರ ತ್ಯಜಿಸಿದರು. ಕೊನೆಗೆ ಡಿಸೆಂಬರ್ 15ರ ನಡುರಾತ್ರಿಯಲ್ಲಿ ಮರಣಹೊಂದಿದರು. ಇದಾದ ನಂತರ ಭಾರತದ ಮೊಟ್ಟ ಮೊದಲ ಭಾಷಾವಾರು ಪ್ರಾಂತ್ಯವಾಗಿ ಆಂಧ್ರಪ್ರದೇಶ ಹುಟ್ಟಿಕೊಂಡಿತು. ಮೂರು ವರ್ಷಗಳಾದ ಮೇಲೆ ರಾಜ್ಯಗಳ ಪುನರ್ವಿಂಗಡನಾ ಸಮಿತಿಯ ವರದಿಯ ಆಧಾರದ ಮೇಲೆ ತೆಲಂಗಣಾ ಪ್ರದೇಶ ಆಂಧ್ರವನ್ನು ಸೇರಿಕೊಂಡಿತು. ಆಗಲೇ ನಮ್ಮ ನಾಡಿನಲ್ಲೂ ಐವತ್ತು ವರ್ಷಕ್ಕೂ ಹಿಂದಿನಿಂದ ನಡೆಯುತ್ತಿದ್ದ ಕರ್ನಾಟಕ ಏಕೀಕರಣ ಚಳವಳಿ ಫಲ ನೀಡಿ ಕರ್ನಾಟಕ ರಾಜ್ಯ ನಿರ್ಮಾಣವಾಯ್ತು. ಭಾಷಾವಾರು ಪ್ರಾಂತ್ಯಗಳನ್ನು ರೂಪಿಸುವುದರ ಹಿಂದಿರುವ ಉದ್ದೇಶವೇ ಭಾಷಾವಾರು ರಾಜ್ಯಗಳ ಸರ್ವತೋಮುಖ ಏಳಿಗೆಯಾಗಲಿ, ಆ ಮೂಲಕ ಭಾರತದ ಏಳಿಗೆಯಾಗಲೀ ಎಂಬುದೇ ಆಗಿದೆ. ಇದನ್ನು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹೀಗೆ ಹೇಳಿದ್ದಾರೆ - "ಬಹುಭಾಷಿಕ ರಾಜ್ಯಗಳಾದರೆ, ಅಂದ್ರೆ ಭಾಷಾವಾರು ರಾಜ್ಯಗಳಾಗದೇ ಹೋದರೆ ಭಾರತ ಒಡೆದು ಹೋದೀತು". ಸರಿಯಾದ ಮಾತಲ್ವಾ ಗುರೂ!!

5 ಅನಿಸಿಕೆಗಳು:

ದ್ಯಾಕೂಶಿ ಅಂತಾರೆ...

ಒ೦ದು ಪ್ರಶ್ನೆ, ಈಗ ಒ೦ದೇ ನಾಡಿನಲ್ಲಿ ಬೇರೆ ಬೇರೆ ಭಾಷೆಗಳನ್ನಾಡುವ ಜನರಿದ್ದಾಗ ಅವರ ಗುರುತಿನ ಬಗ್ಗೆ ಅವರಿಗೆ ಪ್ರಶ್ನೆ ಮೂಡದೆ ಇರದು. ಹಾಗಾಗಿ ನಮ್ಮ ನಾಡಿನವರೇ ಆದ ಈ ಎಲ್ಲರೂ ಕನ್ನಡಿಗರೇ ಎ೦ಬ ಒ೦ದೇ ತಕ್ಕಡಿಯಲ್ಲಿ ತೂಗಿಸುವುದು ಸರಿಯೇ? ಈ ನಮ್ಮ ನಾಡಿನ ಒಗ್ಗಟ್ಟು ಕೇವಲ ನಮ್ಮ ಪರಿಕಲ್ಪನೆಯೇ ಅಥವಾ ಬೀದರ್ ಬೆಳಗಾವಿ ಗಳಿ೦ದ ಬ೦ಡೀಪುರದ ವರೆಗೂ ಇರುವ ಎಲ್ಲರೂ ಕನ್ನಡಿಗರೆ೦ದೇ ಎಣಿಸಬೇಕೇ?

umesh desai ಅಂತಾರೆ...

ಗುರು ನಿಮ್ಮ ಅನಿಸಿಕೆನಿಜ ಒಂದೇ ಭಾಷೆ ಮಾತಾಡಾವ್ರು ಒಂದೇ ಕಡೇ ಸೇರಿ ಬಾಳೆ ಮಾಡಲಿಇದುಉದ್ದೇಶ ವಾಗಿತ್ತು.
ಆದರೆ ಇದು ಸಫಲವಾಗಿದೆಯೇ ಎಂಬುದು ದೊಡ್ಡ ಪ್ರಶ್ನೆ.ಉದಾ: ಈ ಬೆಂಗಳೂರಿಗರನ್ನೇ ತಗೊಳ್ಳಿ ನಮ್ಮ ಹುಬ್ಬಳ್ಳಿ ಕಡಿ
ಮಂದಿ ಕಂಡ್ರೆ ಇವರಿಗಾಗೊಲ್ಲ ತಮ್ಮಮನಸ್ಸಿನ್ಯಾಗ ನಮ್ಮ ವಿರುದ್ಧ ಗೋಡೆ ಕಟ್ಟಿಕೊಂಡಾರ

shivu desai ಅಂತಾರೆ...

umesh,
nimma abhipraya naanu oppangilri..

naanu engg inda hidadu illitanka 11 varshadinda bengaluranaag adenri.. illi tanka ommenu bengalurina kannadigarige nan kandre aagalla anta nanage annisilla..

ella kade ekdum chalo nodkondaar..

nimma personal opinion anna iDi uttara karnatakada ella kannadigarige apply maadabyadri..

veena arasikere ಅಂತಾರೆ...

dyaakushi avare, nimma prashne tulu-kodava bhashikara bagge na?
haagidre,, adara bagge enguru vina niluvu tiLiyuvudu olleyadu..

Subrahmanya ಅಂತಾರೆ...

ಭಾಷಾವಾರು ಪ್ರದೇಶ ವಿಂಗಡಣೆಯಿಂದ ಮುಖ್ಯಮಂತ್ರಿ, ಮಂತ್ರಿಗಳಾಗುವ ವ್ಯಾಮೋಹ ದವರಿಗಷ್ಟೆ ಲಾಭವೇ ಹೊರತು ಅದರಿಂದ ಶ್ರೀಸಾಮಾನ್ಯನ ಬವಣೆಯಂತೂ ತೀರುವುದಿಲ್ಲ. ಬಾಳಾ, ಭಾಗ್ವತ್, ಯಾರೇ ಇರಬಹುದು ....ಇಲ್ಲದಿರಬಹುದು..ಸಾಮಾನ್ಯ ಜನ ನಿರೀಕ್ಷೆ ಮಾಡುವುದು ಮತ್ತು ಬದುಕುವುದು ಪರಸ್ಪರ ನಂಬಿಕೆ ವಿಶ್ವಾಸಗಳಿಂದಲೇ ಹೊರತು ಪ್ರದೇಶಗಳ ಹೆಸರಿನಿಂದಲ್ಲ....

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails