‘ಹಿಂದೀ ರಾಷ್ಟ್ರಭಾಷೆ ಅಲ್ಲಾ’ ಅಂದ ಕೋರ್ಟು!


ಅಂತೂ ಇಂತೂ ಅರವತ್ತು ಗಣರಾಜ್ಯೋತ್ಸವಗಳು ಮುಗುದು, 61ನೇದು ಕಾಲಿಟ್ಟಿರೋ ಸಂದರ್ಭದಲ್ಲಿ, ಗುಜರಾತಿನ ಉಚ್ಛ ನ್ಯಾಯಾಲಯವು ಭಾರತೀಯರಿಗೆಲ್ಲಾ ಉಡುಗೊರೆ ಕೊಟ್ಟಂಗೆ, ಹಿಂದೀ ಭಾರತದ ರಾಷ್ಟ್ರಭಾಷೆ ಅಲ್ಲಾ ಅನ್ನೋ ತೀರ್ಪು ನೀಡಿ ನಿಜಾನ ಎತ್ತಿ ಹಿಡಿದಿದೆ.

ಮುಂಬಾಗಿಲಲ್ಲಿ ಆಗ್ಸಕ್ಕೆ ಹಿಂಬಾಗ್ಲು ಎಂಟ್ರಿ!

ಭಾರತಕ್ಕೆ ಸ್ವತಂತ್ರ ಬಂದಾಗಿಂದ ಹಿಂದೀನಾ ರಾಷ್ಟ್ರಭಾಷೆ ಮಾಡೊ ಪ್ರಯತ್ನಗಳು ಮುಂಬಾಗಿಲಿನಿಂದ ನಡೆದಿದೆ. ಆದರೆ ಹಿಂದಿಯೇತರ ಪ್ರದೇಶಗಳ ವಿರೋಧ, ಹೋರಾಟ, ಬಲಿದಾನಗಳ ಫಲವಾಗಿ ಇವತ್ತಿನ ತನಕ ಇದಾಗಿಲ್ಲ. ಆದರೇನು? ಮುಂಬಾಗ್ಲಿಂದ ಆಗ್ದಿದ್ರೆ ಹಿಂಬಾಗ್ಲಿದೆಯೆಲ್ಲಾ? ಹಿಂದೀ ಒಂದಕ್ಕೇ ಭಾರತದ ರಾಷ್ಟ್ರಭಾಷೆಯ ಅಧಿಕೃತ ಪಟ್ಟ ಕೊಡಕ್ ಆಗ್ದಿದ್ರೂ ಮುಂದೊಂದು ದಿನಾ ಕೊಡ್ಸೋ ಹುನ್ನಾರದಿಂದ ಬೇಕಾದಷ್ಟು ವ್ಯವಸಾಯ ಅಂದಿನಿಂದ್ಲೇ ಶುರುವಾಯ್ತು. ಭಾರತದ ಕೇಂದ್ರಸರ್ಕಾರದ ಅಧಿಕೃತ ಸಂಪರ್ಕ ಭಾಷೆ ಅನ್ನೋ ಪಟ್ಟ ಕೊಡಲಾಯಿತು. ಇದುಕ್ ವಿರೋಧ ಬಂದಾಗ ಜೊತೇಲಿ ಇಂಗ್ಲೀಷಿಗೂ ಆ ಪಟ್ಟ 15 ವರ್ಷಕ್ಕೆ ಅಂತಾ ಕೊಡಲಾಯ್ತು. ಮುಂದೊಮ್ಮೆ ಹಿಂದೀ ಒಂದೇ ಭಾರತದ ಅಧಿಕೃತ ಆಡಳಿತ ಭಾಷೆ ಅನ್ನಕ್ ಹೋದಾಗ ತಮಿಳುನಾಡು ಹೊತ್ತುರಿದು ಕಡೆಗೂ ಇಂಗ್ಲಿಷನ್ನೂ ಉಳಿಸಿಕೊಳ್ಳಲಾಯಿತು. ಆದರೆ ಹಿಂದೀಗೆ ಪಟ್ಟಾಭಿಷೇಕ ಮಾಡೊದಕ್ಕೆ ಸಿದ್ಧತೆ ಮಾತ್ರಾ ಜೋರಾಗೆ ಮುಂದುವರೀತು. ಇವತ್ತಿಗೂ ನಡ್ದಿದೆ.

ಶಾಲೆಗಳಲ್ಲಿ ಇವತ್ತಿಗೂ ಹಿಂದೀ ಭಾರತದ ರಾಷ್ಟ್ರಭಾಷೆ ಅನ್ನೋ ಸುಳ್ಳುನ್ನ ಮಕ್ಕಳ ತಲೇಲಿ ತುಂಬ್ತಾ ಇರೋದನ್ನು ನೋಡಬಹುದು. ಅಧಿಕೃತವಾಗಿ ಎಲ್ಲೂ ಹಾಗೆ ಅಂದಿಲ್ಲಾ ಅಂದ್ರೂ ಇದು ನಿಂತಿರಲಿಲ್ಲ. ಶೆಡ್ಯೂಲಡ್ ಪಟ್ಟಿಯಲ್ಲಿರೋ 23 ಭಾಷೆಗಳೆಲ್ಲವೂ ಭಾರತದ ರಾಷ್ಟ್ರಭಾಷೆಗಳೇ ಅಂತ ತಿಳಿದೋರು ಅಂದಾಗ, ಹೌದು ಆ ಪಟ್ಟೀಲಿ ಹಿಂದೀನೂ ಇರೋದ್ರಿಂದ ಅದು ನಮ್ಮ ರಾಷ್ಟ್ರಭಾಷೆ ಅನ್ನಲಾಯ್ತು. ಒಟ್ನಲ್ಲಿ ಭಾರತದ ಎಲ್ಲಾ ಜನಗಳು ಹಿಂದೀ ಸಾಮ್ರಾಜ್ಯಶಾಹಿಯನ್ನು ಒಪ್ಪಿಕೊಳ್ಳೋ ಹಾಗೆ ಮಾಡೋ ಕೆಲಸ ಪರಿಣಾಮಕಾರಿಯಾಗೇ ನಡೀತು. ಭಾರತದ ಬೇರೆಬೇರೆ ಚಿತ್ರರಂಗಗಳನ್ನು ನುಂಗಿಹಾಕೋ ಹಾಗೆ ಹಿಂದೀ ಚಿತ್ರರಂಗಕ್ಕೆ ಇನ್ನಿಲ್ಲದ ಪ್ರೋತ್ಸಾಹ ನೀಡಿ ಮನರಂಜನೆಯ ಮೂಲಕ ಹಿಂದೀ ಪ್ರಚಾರ, ದೇಶಕ್ಕೊಂದು ಭಾಷೆ ಬೇಕು, ಸಂಪರ್ಕಕ್ಕೆ ಒಂದು ಭಾಷೆ ಬೇಕು, ಹೊರದೇಶದ ಇಂಗ್ಲಿಷ್ ಒಪ್ಪೋದಕ್ಕಿಂತ ಸ್ವದೇಶದ ಹಿಂದೀ ಒಪ್ಪಬೇಕು, ಹಿಂದೀ ರಾಷ್ಟ್ರಭಕ್ತಿಯ ಸಂಕೇತ, ಹಿಂದೀ ವಿರೋಧ ರಾಷ್ಟ್ರದ್ರೋಹ... ಬ್ಲಾ.. ಬ್ಲಾ.. ಬ್ಲಾ... ಅನ್ನೋ ನಾನಾ ಶಸ್ತ್ರಾಸ್ತ್ರಗಳನ್ನು ಬಳಸಲಾಯ್ತು. ಈ ಶಸ್ತ್ರಾಸ್ತ್ರಗಳಲ್ಲಿ ಬಲು ಮುಖ್ಯವಾದದ್ದು ಭಾರತದ ರಾಷ್ಟ್ರಭಾಷೆ ಹಿಂದೀ ಅನ್ನೋ ಸುಳ್ಳನ್ನು ಆರು ವರ್ಷದ ಆಡೋ ಮಕ್ಕಳಿಂದ ಅರವತ್ತಾರು ವರ್ಷದ ಅಲ್ಲಾಡೋ ಮುದುಕರ ತನಕ ಎಲ್ಲಾರಾ ತಲೇಲಿ ತುಂಬೋದು. ಆದ್ರೆ ಯಾರೊಬ್ರೂ ಭಾರತದ ಸಂವಿಧಾನದಲ್ಲಿ ಏನು ಬರೆದಿದೆ ಅನ್ನೋದನ್ನು ನೋಡೋ ಪ್ರಯತ್ನಾನೆ ಮಾಡಿಲ್ಲವೇನೋ ಅನ್ನೋ ಹಾಗೆ ಸುಮ್ಮನಿದ್ದುದ್ನ ನೋಡ್ತಿದೀವಿ. ಇಂಥಾ ಸನ್ನಿವೇಶದಲ್ಲಿ ಗುಜರಾತಿನ ಉಚ್ಛನ್ಯಾಯಾಲಯ ಇಂಥಾ ಹಸಿಸುಳ್ಳರ ಬಾಯಿಗೆ ಬೀಗ ಜಡಿಯೋ ಅಂಥಾ ತೀರ್ಪು ನೀಡಿ ಹಿಂದೀ ಭಾರತದ ರಾಷ್ಟ್ರಭಾಷೆ ಅಲ್ಲಾ, ಅದುಕ್ಕೆ ಯಾವ ಕೋಡು ಇಲ್ಲಾ ಅಂತಾ ಅಂದಿದೆ.

ಹಸಿಸುಳ್ಳರ ಬಾಯಿಗೆ ಬೀಗ?

ತಮಾಷೆ ನೋಡಿ. ಗುಜರಾತೆಂಬ ಗುಜರಾತಿ ಮಾತಾಡೋ ಪ್ರದೇಶದ ಹೈಕೋರ್ಟಿನಲ್ಲಿ, ಯಾರೋ ಒಬ್ಬ ವ್ಯಕ್ತಿ ಹಿಂದೀನಾ ಭಾರತದಲ್ಲಿ ತಯಾರಾಗೋ ಎಲ್ಲಾ ಉತ್ಪನ್ನಗಳ ಮೇಲೆ ಅಚ್ಚು ಮಾಡೋಕೆ ಆದೇಶಾ ಹೊರಡುಸ್ಬೇಕು ಅಂತಾ ಕೇಸು ಹಾಕಿ, ತನ್ನ ಕೇಸಿನ ಸಮರ್ಥನೆಗಾಗಿ "ಹಿಂದೀ ಭಾರತದ ರಾಷ್ಟ್ರಭಾಷೆ, ಭಾರತದ ಹೆಚ್ಚು ಜನಕ್ಕೆ ಹಿಂದಿ ತಿಳಿಯುತ್ತೆ" ಅಂತಾ ವಾದಾ ಮಾಡೋ ಅಷ್ಟರ ಮಟ್ಟಿಗೆ ಹಿಂದೀ ಭಾರತದ ರಾಷ್ಟ್ರಭಾಷೆ ಅನ್ನೋ ಹಸಿಸುಳ್ಳನ್ನು ಜನಗಳ ತಲೇಲಿ ತುಂಬಿದೆ ಈ ವ್ಯವಸ್ಥೆ... ಅಂದ್ರೆ ಏನನ್ನಬೇಕು? ನಮ್ಮ ನಾಡಲ್ಲೂ ಹಿಂದೀವಾದಿಗಳು ಈ ಸುಳ್ಳನ್ನು ನಂಬೇ, ಹಿಂದೀ ಅನ್ನೋ ಮಾರಮ್ಮನ್ನ ತಲೆಮೇಲೆ ಹೊತ್ಕೊಂಡು - ಆ ಮಾರಮ್ಮನ ಮಕ್ಕಳ ಹಿತಾನ ಕಾಪಾಡಕ್ಕೆ ಕನ್ನಡಿಗರ ಬದುಕನ್ನು ಬಲಿ ಕೊಡಕ್ ಮುಂದಾಗಿರೋದು. ಇದುನ್ ನೋಡ್ದಾಗ ಹಿಂದೀನ ಕಲುತ್ರೆ ಭಾರತದಲ್ಲಿ ಹೆಚ್ಚೋದು ಸಾಮರಸ್ಯ ಅಲ್ಲಾ, ’ಹೇಗೂ ನಿಮಗೆಲ್ಲ ಹಿಂದೀ ಬರುತ್ತಲ್ಲಾ... ಇನ್ಮುಂದೆ ಅದುನ್ನೇ ಬಳಸಿ, ಅದುನ್ನಾ ರಾಷ್ಟ್ರಭಾಷೆ ಅಂತಾ ಒಪ್ಕೊಳ್ಳಿ" ಅನ್ನೋ ಬಲವಂತ ಮಾಘಸ್ನಾನ... ಅಪ್ಪಿತಪ್ಪಿ ಹಾಗೇನಾದ್ರೂ ಹಿಂದೀ ರಾಷ್ಟ್ರಭಾಷೆ ಆಗೇಬುಟ್ರೆ, ಇಡೀ ಭಾರತ ಹಿಂದೀ ಭಾಷಿಕರ ವಸಾಹತು, ವಲಸೆಗೆ ಸ್ವರ್ಗ ಆಗೋಗುತ್ತೆ. ಮುಂದೆ ಹಿಂದೀಲಿ ಮಾತಾಡ್ದೆ ಇರೋದು, ಸೇವೆ ಕೊಡ್ದೆ ಇರೋದು ಶಿಕ್ಷಾರ್ಹ ಅಪರಾಧ ಅನ್ನೋ ದಿನ ಬಂದ್ರೂ ಬರಬೋದು. ಒಟ್ನಲ್ಲಿ ಇದರಿಂದ ಹಿಂದೀ ಭಾಷೆಯೋನು ಭಾರತದ ಮೊದಲ ದರ್ಜೆ ಪ್ರಜೆಯಾಗೋದೂ, ಹಿಂದಿಯೇತರನು ಎರಡನೇ ದರ್ಜೆಯ ಪ್ರಜೆಯಾಗೋದೂ ಖಂಡಿತ. ಇನ್ನಾದ್ರೂ ಹಿಂದೀ ಭಾರತದ ರಾಷ್ಟ್ರಭಾಷೆ ಅನ್ನೋ ಸುಳ್ಳು ಪ್ರಚಾರ ನಿಲ್ಲಲಿ...

ಕೊನೆಹನಿ: ಇತ್ತೀಚಿಗೆ ಜನರಲ್ಲಿ ಹಿಂದೀ ಭಾರತದ ರಾಷ್ಟ್ರಭಾಷೆ ಅಲ್ಲಾ ಅನ್ನೋ ಜಾಗೃತಿ ಆಗ್ತಿರೋದನ್ನು ಗಮನಿಸಿ ಹಿಂದೀವಾದಿ ಕನ್ನಡಿಗ ಮಹನೀಯರೊಬ್ಬರು, ‘ಹಿಂದೀ ಭಾರತದ ರಾಷ್ಟ್ರೀಯ ಭಾಷೆ’ ಅಂತಾ ಪಟ್ಟ ಕೊಡಕ್ ಮುಂದಾಗಿದ್ರು. ಹಿಂದೀ ರಾಷ್ಟ್ರಭಾಷೆ ಅಲ್ಲದಿದ್ದರೇನಂತೆ? ಈಗ ಅದುನ್ನ ರಾಷ್ಟ್ರಭಾಷೆ ಮಾಡಿ ಅನ್ನೋ ಪ್ರಭೃತಿಗಳು ಹಾಗೆ ಮಾಡೋದ್ರಿಂದ ಕನ್ನಡ ಕನ್ನಡಿಗರು ನಾಮಾವಶೇಷ ಆಗ್ತಾರೆ ಅನ್ನೋದ್ನ ಒಸಿ ಅರಿಯಬೇಕು. ಏನಂತೀ ಗುರು?

5 ಅನಿಸಿಕೆಗಳು:

ತಿಳಿಗಣ್ಣ ಅಂತಾರೆ...

ಸಕ್ಕತ್...

ಇದನ್ನು ನಮ್ಮ ಕನ್ನಡ ಪೇಪರ‍್ಗಳು ಯಾವಾಗ ಸಾರುವುವೋ?

ಕನ್ನಡ, ಕನ್ನಡಿಗರು ಮೂಲಗುಂಪಾಗ್ತಾ ಇದ್ದೀವಲ್ಲ..!

ಕ್ಲಾನ್ಗೊರೌಸ್ ಅಂತಾರೆ...

ಅಲ್ಲ ಗುರು,
ಇವತ್ತಿನ ಗಣ ರಾಜ್ಯೋತ್ಸವದಲ್ಲಿ ಕರ್ನಾಟಕವನ್ನು ಪ್ರತಿನಿಧಿಸೋ ಟಾಬ್ಲೋ ಮೇಲು ಹಿಂದಿ ಹೇರಿಕೆ ಬಿಟ್ಟಿಲ್ಲ ... ಕರ್ನಾಟಕ ಅನ್ನೋ ಹೆಸರು ಬರಿ ಹಿಂದಿಯಲ್ಲಿ ಇತ್ತು ....ಅದರ ಜೊತೆ ಕನ್ನಡದಲ್ಲೂ ಇದ್ದಿದ್ರೆ ದೇಶ ದ್ರೋಹ ಆಗೋಗ್ತಿತ್ತ ?... ವಿವಿದತೆಯಲ್ಲಿ ಏಕತೆ ಅನ್ನೋದು ಬರಿ ಪುಸ್ತಕದ ಬದನೆ ಕಾಯಿ ಅಷ್ಟೇ ಈ ದೇಶದ್ರೋಹಿಗಳಿಗೆ

Anonymous ಅಂತಾರೆ...

ಇನ್ಮುಂದೆ ಯಾರಾದ್ರೂ ಹಿಂದೀ ರಾಷ್ಟ್ರಭಾಷೆ ಅಂತಂದ್ರೆ Contempt of court ಅಂತ ಹೇಳಿ ಅವ್ರನ್ನ ಒಳಗೆ ಹಾಕ್ಬೇಕು.

-ಗುರು

Priyank ಅಂತಾರೆ...

ಹಿಂದಿ ರಾಷ್ಟ್ರಭಾಷೆ ಅಲ್ದಿದ್ರೆ ಏನಂತೆ, ಈಗ ಮಾಡಿ ಅಂತ ಹೇಳಿದ ಮಹನೀಯ ಯಾರು ಗುರು?

Anonymous ಅಂತಾರೆ...

ಗುರು ತುಂಬಾ ಖುಷಿ ಆಯಿತು ಈ ಸುದ್ದಿ ಕೇಳಿ. ಈ ನ್ಯೂಸ್ ಓದಿದಮೇಲೆ ನಾನು ಮೊದಲು ಮಾಡಿದ ಕೆಲಸ ಅಂದ್ರೆ, ನನ್ನ ಅಡ್ರೆಸ್ ಬುಕ್ ನಲ್ಲಿ ಇರುವ ಫ್ರೆಂಡ್ಸ್ ಗೆ ಇದನ್ನ ಫಾರ್ವರ್ಡ್ ಮಾಡ್ದೆ.

-ಸಿದ್ದ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails