ಪಿವಿಆರ‍್ನಲ್ಲಿ ಕನ್ನಡ ಚಿತ್ರಗಳ ಬಗ್ಗೆ ತಾತ್ಸಾರ?

ಮೊನ್ನೆ ಮೊನ್ನೆ ಚೆನ್ನಾಗಿ ಓಡ್ತಾ ಇರೋ ಅಂತರಾತ್ಮ ಅನ್ನೋ ಕನ್ನಡ ಚಿತ್ರದ ಬಗ್ಗೆ ಅಪಪ್ರಚಾರ ಮಾಡಿ, ಅದನ್ನು ಚಿತ್ರ ಮಂದಿರದಿಂದ ಕಿತ್ತು ಹಾಕುವ ಕೀಳು ಕೆಲಸಕ್ಕೆ ಬೆಂಗಳೂರಿನ ಪ್ರಸಿದ್ಧ ಮಲ್ಟಿಪ್ಲೆಕ್ಸ್ ಪಿವಿಆರ್ ಇಳಿಯಿತಂತೆ ಮತ್ತು ಈ ಕಾರಣಕ್ಕೆ ಚಿತ್ರತಂಡದ ಪ್ರತಿಭಟನೆಗೆ ಗುರಿಯಾಯಿತಂತೆ ಅನ್ನೋ ಸುದ್ದಿ ಬಂದಿದೆ. ಚೆನ್ನಾಗಿ ಓಡ್ತಾ ಇರೋ ಸಿನೆಮಾವನ್ನು ಕಿತ್ತು ಹಾಕಲು ಪಿವಿಆರ್ ಸಿಬ್ಬಂದಿಯೇ ಮುಂದಾದ್ರು ಅನ್ನೋ ಸುದ್ದಿ ಹಲವು ಅನುಮಾನಕ್ಕೆ ಕಾರಣವಾಗಿದೆ ಗುರು!

ಚಿತ್ರವನ್ನು ಎತ್ತಂಗಡಿ ಮಾಡುವುದು ನಿಜವಾದ ಉದ್ದೇಶ!

ಅಲ್ಲ ಗುರು, ಈ ಸುದ್ದಿ ನಿಜವಾಗಿದ್ದಲ್ಲಿ ಪಿವಿಆರ‍್ನವರು ಚೆನ್ನಾಗಿ ಓಡುವ ಚಿತ್ರದ ಬಗ್ಗೆ ಅಪಪ್ರಚಾರ ಮಾಡುವ ಕೆಲಸಕ್ಕೆ ಯಾಕೆ ಇಳಿದ್ರು ? ಈ ರೀತಿ ಮಾಡಿ, ಕಲೆಕ್ಷನ್ ಇಲ್ಲದ ಕಾರಣವೊಡ್ಡಿ ಈ ಚಿತ್ರವನ್ನು ಎತ್ತಂಗಡಿ ಮಾಡುವುದು ಇದರ ಹಿಂದಿನ ಉದ್ದೇಶವಾಗಿತ್ತೇ? ಈ ರೀತಿ ಎತ್ತಂಗಡಿ ಮಾಡಿ, ಅದೇ ಜಾಗದಲ್ಲಿ ಇನ್ನಷ್ಟು ಲಾಭ ತರುವ ತೆಲುಗು,ತಮಿಳು, ಹಿಂದಿ ಚಿತ್ರಕ್ಕೆ ಅವಕಾಶ ಮಾಡಿಕೊಡುವುದು ಇದರ ಹಿಂದಿನ ಮರ್ಮವಾಗಿತ್ತೇ? ಅನ್ನೋ ಅನುಮಾನ ಹುಟ್ಟುಕೊಳ್ತವೆ.
ವಾಸ್ತವವಾಗಿ ಇವತ್ತಿನವರೆಗಿನ ಪಿವಿಆರ್‍ನ ಇತಿಹಾಸದಲ್ಲಿ ಅತಿ ಹೆಚ್ಚು ದಿನ ಓಡಿರುವ ಹೆಚ್ಚಿನ ಚಿತ್ರಗಳು ಕನ್ನಡದವು. ಜೋಗಿ, ಅಮೃತಧಾರೆ, ಮುಂಗಾರು ಮಳೆ, ಮಿಲನ, ಆ ದಿನಗಳು, ಮಳೆಯಲಿ ಜೊತೆಯಲಿ, ಆಪ್ತರಕ್ಷಕ ಹೀಗೆ ಸಾಲು ಸಾಲು ಕನ್ನಡ ಸಿನೆಮಾಗಳು ಇವರಿಗೆ ಅತಿ ಹೆಚ್ಚು ಕಲೆಕ್ಷನ್, ಅತಿ ಹೆಚ್ಚು ಲಾಭ ತಂದು ಕೊಟ್ಟರೂ ಕನ್ನಡ ಚಿತ್ರಗಳ ಬಗ್ಗೆ ಈ ರೀತಿಯ ಧೋರಣೆಯ ಹಿಂದೆ ವ್ಯವಹಾರಿಕ ಉದ್ದೇಶವಿರದೇ ಇನ್ನೇನೊ ಇದೆಯೆಂಬ ಅನುಮಾನ ಮೂಡುತ್ತಿಲ್ಲವೇ? ಪಿವಿಆರ್ ಪಿಕ್ಚರ್ಸ್ ಅನ್ನುವ ಅಂಗ ಸಂಸ್ಥೆಯ ಮೂಲಕ ಹಿಂದಿ ಚಿತ್ರಗಳ ವಿತರಣೆಯನ್ನು ಪಿವಿಆರ್ ಮಾಡುತ್ತೆ. ತಾವು ವಿತರಣೆ ಮಾಡ್ತಿರೋ ಯಾವುದೋ ಹಿಂದಿ ಸಿನೆಮಾಗೆ ಜಾಗ ಮಾಡಿಕೊಡಲು ಈ ರೀತಿ ಕನ್ನಡ ಚಿತ್ರವನ್ನು ಓಡಿಸುವ ಪ್ರಯತ್ನಕ್ಕೆ ಪಿವಿಆರ್ ಇಳಿದಿರುವ ಸಾಧ್ಯತೆಯಿದೆ ಅನ್ನುವುದು ಕೆಲ ಚಿತ್ರರಂಗದ ಗಣ್ಯರ ಅಭಿಪ್ರಾಯ.
ಈ ರೀತಿ ನಡೆದುಕೊಳ್ಳೋದು ತಪ್ಪು, ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ತೊಡಕು ಮಾಡೋದು ಸರಿಯಲ್ಲ ಅಂತಾ ಈ ಮಲ್ಟಿಪ್ಲೆಕ್ಸಿನವರಿಗೆ ತಿಳಿ ಹೇಳಬೇಕಾದವರು ನಾವೂ ನೀವೇ ಅಲ್ವಾ ಗುರೂ! ಮತ್ತೇಕೆ ತಡ. ಈಗಲೇ ಅವರಿಗೊಂದು ಮಿಂಚೆ - ಫೋನು - ಭೇಟಿ ಕೊಡೋಣ. ಏನಂತೀರಾ?

2 ಅನಿಸಿಕೆಗಳು:

maaysa ಅಂತಾರೆ...

halva guru?

ರಾಕೇಶ್ ಶೆಟ್ಟಿ ಅಂತಾರೆ...

ಹೌದು,ನಾವೇನೋ ಮಿಂಚೆ ಬರೆದು,ಭೇಟಿ ಕೊಡೋದು ಎಲ್ಲ ಮಾಡೋಣ ಗುರು.
ಆದ್ರೆ ನಮ್ಮ ಕನ್ನಡ ಚಿತ್ರ ರಂಗದ ಮಂದಿ ಈ ಅನ್ಯಾಯ ನೋಡ್ಕೊಂಡ್ ಏನ್ ಮಣ್ಣ ತಿಂತಾ ಕೂತಿದ್ದಾರ? ವಾಣಿಜ್ಯ ಮಂಡಳಿ ಬೇರೆ ಚಿತ್ರಗಳ ವಿತರಣೆಗೆ ತೋರಿಸಿದ ಆಸಕ್ತಿಯನ್ನ ಈ ವಿಷಯದಲ್ಯಾಕೆ ತೋರಿಸೊಲ್ಲ?, ಅದೆಷ್ಟೋ ಪರ ಭಾಷೆಗಳು ಇಲ್ಲಿ ನೀತಿ ನಿಯಮ ಮೀರಿ ಅತಿ ಹೆಚ್ಚು ಸಿನೆಮ ಮಂದಿರಗಳಲ್ಲಿ ಬಿಡುಗಡೆಯಾಗುವುದು ವಾಣಿಜ್ಯ ಮಂಡಳಿಯ ಮೂಗಿನಡಿಯಲ್ಲೇ ಅಲ್ವಾ? ಒಂದಂತು ನಿಜ.ನಮ್ಮ ಚಿತ್ರ ರಂಗದವ್ರೆ ಎದ್ದು ಇಂತ ವಿಷಯದಲ್ಲಿ ಬಡಿದಾಡದೆ ಇದ್ರೆ ನಾವ್ ತಾನೇ ಏನ್ ಮಾಡೋಕ್ ಆಗುತ್ತೆ ಬಿಡು ಗುರು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails