ಬಂಡವಾಳದ ಹೊಳೆ ಹರಿಯಲಿ ಉದ್ಯೋಗದ ಮಳೆ ಸುರಿಯಲಿ !

ನಾಳೆ (03.06.2010) ನಮ್ಮ ರಾಜ್ಯಸರ್ಕಾರ ಒಂದು ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ ನೀಡ್ತಾಯಿದೆ. ಬೆಂಗಳೂರು ಅರಮನೆ ಮೈದಾನದಲ್ಲಿ ನಾಳೆ ಮತ್ತು ನಾಡಿದ್ದು ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ - 2010 ನಡೆಯಲಿದೆ. ಕರ್ನಾಟಕಕ್ಕೆ ಹೊಸ ಉದ್ದಿಮೆಗಳನ್ನು ಸೆಳೆಯಲು ಸರ್ಕಾರ ಮಾಡುತ್ತಿರುವ ಈ ಕಾರ್ಯಕ್ರಮ ಶ್ಲಾಘನೆಗೆ ಅರ್ಹವಾಗಿದೆ. ರಾಜ್ಯ ಸರ್ಕಾರಕ್ಕೆ, ಅದರ ನಾಯಕರಾದ ಮುಖ್ಯಮಂತ್ರಿಗಳಾದ ಶ್ರೀ ಯಡ್ಯೂರಪ್ಪನವರಿಗೆ ನಮ್ಮ ಅಭಿನಂದನೆಗಳು. ಈ ಉದ್ದಿಮೆಗಳು ಶುರುವಾಗುವಾಗ ಡಾ.ಸರೋಜಿನಿ ಮಹಿಷಿ ವರದಿಯ ಆಧಾರದ ಮೇರೆಗೆ ಕನ್ನಡಿಗರಿಗೆ ಅಲ್ಲಿನ ಕೆಲಸಗಳನ್ನು ಕೊಡಬೇಕೆಂಬ ಅಂಶವನ್ನು ಸರ್ಕಾರ ಹೂಡಿಕೆದಾರರಿಗೆ ಮನವರಿಕೆ ಮಾಡಿಕೊಟ್ಟು ಕಟ್ಟಳೆಯನ್ನಾಗಿಸಲಿ. ನಮ್ಮ ನೆಲ ಜಲಗಳ ಸದ್ಬಳಕೆಯಾಗಲಿ, ಯಾವೊಬ್ಬ ರೈತನೂ ಕಣ್ಣೀರುಗರೆಯದಂತಾಗಲಿ ಎಂಬೆಲ್ಲಾ ಆಶಯಗಳೊಂದಿಗೆ ಈ ಹಿಂದೆ ಇಂತಹುದೇ ಸನ್ನಿವೇಶದಲ್ಲಿ ಬರೆಯಲಾಗಿದ್ದ ಎರಡು ಬರಹಗಳನ್ನು ಕೆಳಗೆ ನೀಡಿದ್ದೇವೆ.

1. ಬಂಡವಾಳ ಹೂಡಿಕೆ: ನಮ್ಮ ಜನರಿಗೆ ಕೆಲಸಾನೂ ಕೊಡಬೇಕು!
ಕರ್ನಾಟಕದಲ್ಲಿ ಟಾಟಾ ಸಂಸ್ಥೆಯೋರು ನ್ಯಾನೋ ಮಾದರಿ ಕಾರುಗಳನ್ನು ತಯಾರಿಸೋ ಘಟಕಾನ ಕಡೆಗೂ ಆರಂಭಿಸುವುದಿಲ್ಲ ಎನ್ನುವ ತೀರ್ಮಾನ ತೆಗೆದುಕೊಂಡರು. ಈ ಘಟನೆಯನ್ನು ನೆಪವಾಗಿಟ್ಟುಕೊಂಡು ಮುಂದೇನಾಗಬೇಕು ಅಂತ ಚೂರು ನೋಡೋಣ ಬಾ ಗುರು!

ಉದ್ದಿಮೆಗಾರಿಕೆ ಮತ್ತು ಉದ್ಯೋಗಾವಕಾಶ!ನಮ್ಮ ನಾಡಲ್ಲಿ ಉದ್ದಿಮೆಗಳ ಆರಂಭಕ್ಕಿರೋ ಮುಖ್ಯವಾದ ಆಯಾಮ ಸರ್ಕಾರಕ್ಕೆ ತೆರಿಗೆ ಮೂಲಕ ದೊರೆಯುವ ಆದಾಯ, ನಾಡಿನ ಜನರಿಗೆ ನೇರವಾಗಿ ಸಿಗಬಹುದಾದ ಉದ್ಯೋಗಗಳು ಮತ್ತು ಈ ಉದ್ದಿಮೆಗಳಿಗೆ ಪೂರಕವಾಗಿ ಆರಂಭವಾಗೋ ಇತರೆ ಉದ್ದಿಮೆಗಳು. ಈ ಉದ್ದೇಶಗಳ ಈಡೇರಿಕೆಗಾಗಿಯೇ ಸರ್ಕಾರಗಳು ಉದ್ದಿಮೆ ಆರಂಭಿಸಲು ಉತ್ತೇಜನ ಕೊಡ್ತಾ, ಕಡಿಮೆ ದರದಲ್ಲಿ ನೆಲ, ನೀರು, ವಿದ್ಯುತ್ ಇವುಗಳನ್ನು ಉದ್ದಿಮೆದಾರರಿಗೆ ನೀಡುತ್ತದೆ. ಇಂತಿಷ್ಟು ತೆರಿಗೆ ವಿನಾಯ್ತಿ, ಇಷ್ಟು ವರ್ಷದ ತೆರಿಗೆ ರಜಾಗಳನ್ನು ನೀಡುತ್ತದೆ. ಇಷ್ಟೆಲ್ಲಾ ಇದ್ದಾಗ್ಲೂ ನಮ್ಮ ಸರ್ಕಾರ ಈ ಬಾರಿ ಟಾಟಾ ಸಂಸ್ಥೆಯನ್ನು ಸೆಳೆಯಲು ಯಾಕೆ ವಿಫಲವಾಯ್ತು ಅಂತ ನೋಡುದ್ರೆ ಕರ್ನಾಟಕದ ರಾಜಕೀಯ ಸ್ಥಿತಿಗತಿ, ಇಲ್ಲಿನ ರೈತ ಸಮುದಾಯದ ಪ್ರತಿಕ್ರಿಯೆಗಳು, ಉದ್ದಿಮೆ ಎದುರಿಸಲು ಉಂಟಾಗಬಹುದಾದ ತೊಡಕುಗಳು, ವಿದ್ಯುತ್ ಪೂರೈಕೆಯಲ್ಲಿನ ಸಮಸ್ಯೆಗಳು, ಸರ್ಕಾರದ ನಿಯಮಾವಳಿಗಳ ಅಸ್ಥಿರತೆ/ ಅಸ್ಪಷ್ಟತೆ ಇವೆಲ್ಲಾ ಪ್ರಮುಖ ಪಾತ್ರ ವಹಿಸಿದ ಹಾಗೆ ಕಾಣ್ತಿದೆ ಗುರು!

ರೈತರ ಮನವೊಲಿಕೆಯ ಮಹತ್ವ!ಉದ್ದಿಮೆ ಆರಂಭಕ್ಕಾಗಿ ನೆಲ ವಶಪಡಿಸಿಕೊಳ್ಳಲು ಸರ್ಕಾರ ಅನುಸರಿಸೋ ನೀತಿ ಮತ್ತಷ್ಟು ಸುಧಾರಿಸಬೇಕಾಗಿದೆ. ಕೈಗಾರಿಕಾ ಪ್ರದೇಶಗಳನ್ನು ಗುರುತಿಸಬೇಕಾದಾಗ ಅಲ್ಲಿ ಏನೇನಿರಬೇಕು ಅನ್ನೋದು ಸ್ಪಷ್ಟವಾಗಿರಬೇಕು. ಅಂತಹ ಭೂಮಿಯನ್ನು ನೀಡುವ ರೈತನಿಗೆ ಏನೆಲ್ಲಾ ಪರಿಹಾರ ಕೊಡಬೇಕು ಅನ್ನೋದು ರೈತನನ್ನು ಪ್ರೋತ್ಸಾಹಿಸೋ ಹಾಗಿರಬೇಕು. ದೇವನಹಳ್ಳಿ ಸುತ್ತಲ ಭೂಮಿನ ಸರ್ಕಾರ ವಶ ಪಡಿಸಿಕೊಂಡಾಗ ಯಾವ ಬೆಲೆಗೆ ಕೊಂಡುಕೊಳ್ತು? ಇವತ್ತು ಅದರಲ್ಲಿ ಎಷ್ಟು ಭಾಗ ಮಾತ್ರಾ ವಿಮಾನ ನಿಲ್ದಾಣಕ್ಕೆ ಅಗತ್ಯವಿದೆ? ಉಳಿದದ್ದನ್ನು ಯೋಜನೆಯಲ್ಲೇ ವಾಣಿಜ್ಯ ಉದ್ದೇಶಕ್ಕೆ ಅಂತ ತೋರಿಸಿ... ವಿಮಾನ ನಿಲ್ದಾಣ ಕಟ್ಟಿದ ಮೇಲೆ ಆ ನೆಲದ ಬೆಲೆ ಗಗನಕ್ಕೇರಿಸಿ ಲಾಭ ಹೆಚ್ಚಿಸಿಕೊಳ್ಳೋದನ್ನು ನೋಡಿದಾಗ ನೆಲ ಬಿಟ್ಟುಕೊಟ್ಟ ರೈತ, ನಾ ಕೊಟ್ಟ ಜಮೀನು ವಿಮಾನ ನಿಲ್ದಾಣಕ್ಕಲ್ಲ... ಅದನ್ನು ಕಟ್ಟಿದೋರ ಲಾಭ ಗಳಿಕೆಗೆ ಅಂತ ಅಸಮಾಧಾನ ಪಟ್ಕೊಳ್ಳೋ ಹಾಗೆ ನಮ್ಮ ನಿಯಮ ಇರಬಾರದು ಅಲ್ವಾ ಗುರು? ಅಂದ್ರೆ ನೆಲ ಕಳೆದುಕೊಳ್ಳುವವನು ಲಾಭದ ಭಾಗೀದಾರ ಆಗಬೇಕು ತಾನೆ? ಆಗ ಮಾತ್ರ ತಮ್ಮ ನೆಲ ಸರ್ಕಾರ ಕೊಂಡುಕೊಳ್ಳುತ್ತೆ ಅಂದ್ರೆ ಖುಷಿ ಪಟ್ಕೊಳ್ಳೋ ಪರಿಸ್ಥಿತಿ ಹುಟ್ಕೊಳ್ಳೋದು. ಒಳ್ಳೇ ಬೆಲೆ, ಸರಿಯಾದ ಪುನರ್ವಸತಿ, ದಬ್ಬಾಳಿಕೆ ಹಾಗೂ ಒತ್ತಾಯವಿಲ್ಲದ ಗೌರವದಿಂದ ನಡೆಸಿಕೊಳ್ಳೋದು ಇವೆಲ್ಲಾ ಸಾಧನಗಳನ್ನು ಬಳಸಿ ರೈತಣ್ಣನ ಮನವೊಲಿಸಬೇಕು.

ಏನೆಲ್ಲಾ ಕೊಡಬೇಕು?
ಅತ್ಯುತ್ತಮ ರಸ್ತೆ, ರೈಲು ಸಂಪರ್ಕಗಳ ಜೊತೆಯಲ್ಲಿ ಅಗತ್ಯವಾದ ನೀರು ಮತ್ತು ವಿದ್ಯುತ್ತುಗಳ ಪೂರೈಕೆ ಮಾಡಬೇಕಾಗಿದೆ. ಅದಕ್ಕೆ ಅಗತ್ಯವಾದಂತೆ ನದಿ ನೀರಿನ ಸದ್ಬಳಕೆಗೆ ಯೋಜನೆಗಳು, ವಿದ್ಯುತ್ ಉತ್ಪಾದನೆಗೆ ಬೇರೆ ಬೇರೆ ಶಕ್ತಿಮೂಲಗಳ ಬಳಕೆ, ಸೋರಿಕೆ ತಡೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಇದಕ್ಕೆ ಪೂರಕವಾಗಿ ನಮ್ಮ ಸರ್ಕಾರದ ನಾಯಕತ್ವ ಗಟ್ಟಿ ದೃಷ್ಟಿಕೋನದ, ದೂರಗಾಮಿ ಯೋಜನೆಯುಳ್ಳ, ನಾಡಿನ ಏಳಿಗೆಯ ಬಗ್ಗೆ ಸದಾ ತುಡಿಯುತ್ತಿರುವುದಾಗಿರಬೇಕು. ಕನ್ನಡನಾಡಿನ ಏಳಿಗೆಯೊಂದೇ ಪರಮಗುರಿಯಾಗಿರಬೇಕು. ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳುವಿಕೆ, ಸುತ್ತು ಬಳಸು ಮೀನ ಮೇಷವಿಲ್ಲದ ಪಾರದರ್ಶಕವಾದ ಚುರುಕಾದ ಆಡಳಿತ ಯಂತ್ರದ ಅಗತ್ಯವಿದೆ. ಉದ್ದಿಮೆ ಆರಂಭಿಸಲು ಬೇಕಾದ ಪರವಾನಿಗೆಗಳನ್ನು ಹಲವಾರು ಇಲಾಖೆಗಳಿಂದ ಪಡೆಯಬೇಕಾದ ಅಗತ್ಯವನ್ನು ಇಲ್ಲವಾಗಿಸಿ ಒಂದೇ ಸಂಸ್ಥೆಯಲ್ಲಿ ಸರಳವಾಗಿ ಲೈಸೆನ್ಸ್ ನೀಡಬೇಕಾದ ವ್ಯವಸ್ಥೆಯನ್ನು ಜಾರಿಗೊಳಿಸಬೇಕಾಗಿದೆ. ದೀರ್ಘಕಾಲಕ್ಕಾಗಿ ರೂಪಿಸಲಾದ, ಯಾವುದೆ ಸರ್ಕಾರವಿದ್ದರೂ ಬದಲಾಗದ ರೀತಿನೀತಿ ನಿಯಮಾವಳಿಗಳ ಅಗತ್ಯವಿದೆ.

ನಾಡಿನ ಏಳಿಗೆಗೆ ಉದ್ದಿಮೆಗಾರಿಕೆಯೇ ರಹದಾರಿ
ನಾಡು ಆರ್ಥಿಕವಾಗಿ ಬೆಳೆಯಲು, ನಾಡಿನ ಜನತೆಗೆ ಉದ್ಯೋಗಾವಕಾಶಗಳನ್ನು ತಂದುಕೊಡುವ ಉದ್ದಿಮೆಗಳೇ ಇಂದಿನ ಅಗತ್ಯವಾಗಿವೆ. ಸಿಂಗೂರಿಂದ ಟಾಟಾ ಎತ್ತಂಗಡಿ ಆಗುತ್ತೇ ಅಂದಾಗ ಸಂತೆಗೆ ಮೂರು ಮೊಳ ನೆಯ್ದಂಗೆ ತಕಾಪಕಾ ಕುಣಿದು ಟಾಟಾ ಮುಂದೆ ಲಾಗಾ ಹಾಕೊ ಬದಲಾಗಿ ನಾಡಿನ ಆಳುವ ಸರ್ಕಾರಗಳು ಈ ಬಗ್ಗೆ ಸರಿಯಾದ ನಿಯಮಗಳನ್ನು ಎಲ್ಲ ಕ್ಷೇತ್ರಗಳ ತಜ್ಞರ ಸಹಕಾರದಿಂದ ರೂಪಿಸಿ ಜಾರಿಗೆ ತರಬೇಕಾಗಿದೆ. ಇಗೋ! ಕರ್ನಾಟಕ ರಾಜ್ಯದ ಉದ್ದಿಮೆ ನೀತಿ ಇದು. ನಮ್ಮ ನಾಡಲ್ಲಿ ನೀವು ಉದ್ದಿಮೆ ಆರಂಭಿಸಲು ಇಂತಿಂತಹ ಪೂರಕ ವಾತಾವರಣವಿದೆ. ಈ ನಾಡಲ್ಲಿ ನಿಮಗೆ ಇಂತಿಂತಹ ಸವಲತ್ತುಗಳನ್ನು ಸರ್ಕಾರ ನಿಮಗೆ ನೀಡುತ್ತದೆ. ಬದಲಾಗಿ ನೀವು ಇಂತಿಷ್ಟು ಕನ್ನಡಿಗರಿಗೆ ಕೆಲಸ ಕೊಡಬೇಕು. ಉದ್ದಿಮೆ ಆರಂಭಕ್ಕಾಗಿ ಅಗತ್ಯವಿರುವ ನೆಲವನ್ನು ಸರ್ಕಾರ ರೈತರಿಂದ ಕೊಳ್ಳಲು ಇಂತಹ ನೀತಿಯನ್ನು ಅನುಸರಿಸುತ್ತದೆ, ಈ ಮಾನದಂಡದ ಆಧಾರದ ಮೇಲೆ ಇಂತಿಷ್ಟು ಪರಿಹಾರ ನೀಡಲಾಗುತ್ತದೆ... ಎಂಬೆಲ್ಲಾ ವಿಷಯಗಳು ಪಾರದರ್ಶಕವಾಗಿಯೂ, ಸ್ಫುಟವಾಗಿಯೂ ಇದ್ದಲ್ಲಿ ನಮ್ಮ ನಾಡಿಗೆ ಉದ್ದಿಮೆಗಳು ಹರಿದು ಬರುವುದು ಅಷ್ಟೊಂದು ಕಠಿಣವಾಗಲಾರದು ಗುರು!

2. ಬಂಡವಾಳ ಹರಿದು ಬರಲು ಗಟ್ಟಿನೀತಿ ಬೇಕು!ಆರ್ಸೆಲರ್ , ಪೋಸ್ಕೋ, ಲಫಾರ್ಜ್ ಸೇರಿದಂತೆ ಹಲವು ದೊಡ್ಡ ದೊಡ್ಡ ಸಂಸ್ಥೆಗಳು ಕರ್ನಾಟಕದಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರಿಸಿದ್ದು, ಸುಮಾರು ರೂ.1,38,000 ಕೋಟಿಯಷ್ಟು ಬಂಡವಾಳ ಹೂಡಲು ಮುಂದಾಗಿದ್ದಾರೆ ಮತ್ತು ಇದು 92,000ಕ್ಕೂ ಹೆಚ್ಚು ಕೆಲಸ ಹುಟ್ಟು ಹಾಕಲಿದೆ ಅನ್ನೋ ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ! ಇದು ರಾಜ್ಯದ ಆರ್ಥಿಕ ಪ್ರಗತಿಯ ದೃಷ್ಟಿಯಿಂದ ನೋಡಿದರೆ ಒಂದೊಳ್ಳೆ ಬೆಳವಣಿಗೆಯಾಗಿ ಕಾಣ್ತಿದೆ. ಈ ಸದವಕಾಶದ ಲಾಭ ನಮ್ಮ ನಾಡಿಗೆ ಸಂಪೂರ್ಣವಾಗಿ ಸಿಗಬೇಕಾದರೆ ಸರ್ಕಾರ ಈಗಿಂದಲೇ ಎಚ್ಚರಿಕೆಯಿಂದ ಕೆಲ್ಸ ಮಾಡ್ಬೇಕು. ಸರ್ಕಾರ ಎಚ್ಚರ ತಪ್ಪದ ಹಾಗೆ ಜನ ಎಚ್ಚರ ವಹಿಸಬೇಕು ಗುರೂ! ಇದು ಈ ಯೋಜನೆಯ ಸಂಪೂರ್ಣ ಲಾಭ ನಮ್ಮ ನಾಡಿಗೇ ಸಿಗೋಕ್ಕೆ ಭಾಳಾ ಅಗತ್ಯವಾಗಿದೆ.

ಏನೇನ್ ಆಗ್ತಿದೆ ?
ಈ ಯೋಜನೆಗಳಿಂದ ಸಿಮೆಂಟ್, ಕಬ್ಬಿಣ ಮತ್ತು ಅದಿರು ಮುಂತಾದ ವಿವಿಧ ದೊಡ್ಡ ಕೈಗಾರಿಕಾ ವಲಯಗಳಲ್ಲಿ ಉದ್ಯೋಗದ ಅವಕಾಶಗಳು ಸೃಷ್ಟಿ ಆಗುವುದರ ಜೊತೆಗೆ, ಪೂರಕ ವಲಯಗಳಾದ ಬಿಡಿ ಭಾಗಗಳ ತಯಾರಿಕೆ, ಮೂಲ ಉತ್ಪನ್ನಗಳ ಪೂರೈಕೆ, ಹೊಸ ಸಂಶೋಧನಾ ಘಟಕಗಳು, ಹೀಗೆಯೇ ಹತ್ತಾರು ಕ್ಷೇತ್ರಗಳಲ್ಲಿ ಹೊಸ ಹೊಸ ಕೆಲಸಗಳು ಹುಟ್ಟಿಕೊಳ್ಳಲಿವೆ.

ಇತ್ತ ಗಮನವಿರಲಿ !
ಸರ್ಕಾರ ಈ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಳ್ಳೊ ಸಂದರ್ಭದಲ್ಲೇ ಕೆಳಗಿನ ಕೆಲವು ಮುಖ್ಯ ವಿಷಯಗಳ ಬಗ್ಗೆ ಗಮನ ಹರಿಸಬೇಕು ಗುರು. ಯೋಜನೆಗಳಿಂದ ಹುಟ್ಟುತ್ತಿರುವ ಕೆಲಸಗಳಲ್ಲಿ ಕನ್ನಡಿಗರಿಗೆ ಆದ್ಯತೆ ಹೇಗೆ ಕೊಡಿಸುವುದು ?
ಈ ಹೂಡಿಕೆಯಿಂದ ಯಾವ ಯಾವ ತರಹದ ಕೆಲಸಗಳು ಸೃಷ್ಟಿ ಆಗುತ್ತೆ? ಆ ಕೆಲಸಗಳಿಗೆಲ್ಲ ಬೇಕಾದ ನೈಪುಣ್ಯತೆ ಈ ಭಾಗದ ಕನ್ನಡಿಗರಲ್ಲಿದೆಯಾ? ಇಲ್ಲದೇ ಹೋದಲ್ಲಿ, ಅದನ್ನು ಹುಟ್ಟು ಹಾಕುವತ್ತ ಸರ್ಕಾರ ಯಾವ ಕ್ರಮ ತೆಗೆದುಕೊಳ್ಳಬೇಕು?
ನಮ್ಮ ನೆಲ, ಜಲ ಸೇರಿದಂತೆ ಎಷ್ಟು ಸಂಪನ್ಮೂಲದ ಬಳಕೆಯಾಗುತ್ತೆ? ಆ ಬಳಕೆಗೆ ತಕ್ಕ ಲಾಭ ನಾಡಿಗೆ ಆಗಲಿದೆಯೇ?
ಯೋಜನೆಗಳಿಗೆ ರೈತರಿಂದ ಪಡೆಯುತ್ತಿರುವ ಭೂಮಿ ಎಂತಹದ್ದು? ರೈತರಿಂದ ಫಲವತ್ತಾದ ಕೃಷಿ ಭೂಮಿ ಪಡೆಯುವುದು ಅನಿವಾರ್ಯ ಅನ್ನುವಂತಹ ಸಂದರ್ಭದಲ್ಲಿ, ರೈತರಿಗೆ ಸರಿಯಾದ ಪುನರ್ವಸತಿ ಸೌಲಭ್ಯ ಸಿಗುವಂತೆ ಮಾಡುವುದಕ್ಕೆ ಏನು ಮಾಡಬೇಕು? ಅದಕ್ಕೂ ಮೀರಿ, ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಯೋಜನೆಗಳಲ್ಲಿ ಒಬ್ಬ ಭಾಗಿದಾರ ಅನ್ನುವಂತೆ ತೊಡಗಿಸಿಕೊಳ್ಳುವುದು ಹೇಗೆ? ಬಂಡವಾಳ ಹೂಡುತ್ತಿರುವ ಕಂಪನಿಗಳು ಶಾಲೆ, ಆಸ್ಪತ್ರೆ ನಿರ್ಮಾಣದಂತಹ ಕೆಲಸದ ಮೂಲಕ ತಮ್ಮ ಸಾಮಾಜಿಕ ಜವಾಬ್ದಾರಿ ತೋರಿಸುವಂತೆ ಅವರ ಮನ ಒಲಿಸುವುದು ಹೇಗೆ? ಬಂಡವಾಳ ತರೋದಷ್ಟೇ ತನ್ನ ಕೆಲಸ ಎಂದು ವರ್ತಿಸದೇ, ಸರ್ಕಾರ ಮೇಲಿನ ಎಲ್ಲ ಅಂಶಗಳ ಬಗ್ಗೆ ಸರಿಯಾದ ಗಮನ ಕೊಡಬೇಕು ಗುರು.

2 ಅನಿಸಿಕೆಗಳು:

Ramesh Joshi ಅಂತಾರೆ...

ಈ ಯೋಜನೆ ನಮ್ಮ ಉತ್ತರ ಕರ್ನಾಟಕದ ಬಾಂದವರಿಗೆ ಸ್ವಲ್ಪ ಸಹಾಯ ಆಗುತ್ತೆ
ಈ ಯೋಜನೆಯ ಉದ್ದೇಶ ಕರ್ನಾಟಕದ ರಾಜ್ಯದ ಸಮತೋಲನ abivruddige
post scrap preview add photo scrap tips

Unknown ಅಂತಾರೆ...

ಶ್ರೀಯುತರೇ,
ಸರ್ಕಾರದ ಈ ಪ್ರಯತ್ನದಿಂದ ಬಂಡವಾಳ ಹರಿದು ಬರುತ್ತಿರುವುದು ತುಂಬಾ ಸಂತೋಷದ ವಿಷಯ....
ಹಿಂದಿನ ಎಲ್ಲಾ ಸರ್ಕಾರಗಳು ಬಂಡವಾಳ ಹೂಡಿಕೆಗೆಂದು ಬಂದವರಿಗೆ ಸಹಾಯಮಾಡುವ ನೆಪದಲ್ಲಿ ಮಾಡಿರುವ
ಎಡವಟ್ಟುಗಳು ಬಹಳಷ್ಟಿದೆ... ಈ ಸರ್ಕಾರ ಕೂಡ ಅದೇ ರೀತಿಯ ತಪ್ಪುಗಳನ್ನು ಮಾಡದೆ ನ್ಯಾಯಯುತವಾಗಿ
ನಡೆದುಕೊಂಡರೆ ಅಷ್ಟೇ ಸಾಕು....ನಮ್ಮ ರಾಜ್ಯವು ಪಶ್ಚಿಮ ಘಟ್ಟಗಳ ಶೇಖಡಾ ೬೦% ಕಾಡನ್ನು ಹೊಂದಿದ್ದು, ಇದನ್ನು
ಸಂರಕ್ಷಿಸುವ ಜವಬ್ದಾರಿ ಸರ್ಕಾರ ಮೇಲಿದೆ.ಈ ಕಾಡಿನಿಂದಲೆ ನಮ್ಮ ನಾಡಿನ ಬಹುತೇಕ ಹವಾನಿಯಂತ್ರಿತ ವಾತಾವರಣ ಹೊಂದಿದೆ.
ಬಂಡವಾಳದ ಬಹುತೇಕ ಭಾಗವು ಗಣಿಗಾರಿಕೆಗೆಂದೇ ಹರಿದು
ಬಂದಿರುವುದು ಇಲ್ಲಿಗಮನಿಸಬೇಕಾದ ಅಂಶವಾಗಿದೆ. ಸರ್ಕಾರವು ಈಗಾಗಲೆ ಕೆಲವು ರಕ್ಷಿತಾರಣ್ಯ ಪ್ರದೇಶಗಳನ್ನು
ಡಿ ರಿಸರ್ವ್ ಮಾಡಿರುವುದು ಎಲ್ಲರಿಗು ತಿಳಿದ ವಿಷಯ... ಹೀಗೆ ಮುಂದುವರಿದರೆ ಕಾಡುಗಳ ಸರ್ವನಾಶ ಖಚಿತ...
ಹಾಗಾಗಿ ಬಂಡವಾಳ ಹೂಡಿಕೆಯಿಂದಾಗುವ ಲಾಭವಷ್ಟೇ ನಮಗೆ ಮುಖ್ಯವಲ್ಲ, ನಮ್ಮ ಸಂಪತ್ತು ಕೂಡ ಅನ್ಯರ ದಾಳಿಗೆ ತುತ್ತಾಗದಂತೆ
ನೋಡಿಕೊಳ್ಳಬೇಕಿದೆ.

ಇಂತಿ
ಶೇಷಾಚಲ ಏ ವಿ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails