ಸಿ.ಬಿ.ಎಸ್.ಇ ಕಲಿಕೆ: ಬೇರು ಸಡಿಲಿಸೋ ಬಗೆ!

ಘನ ಕರ್ನಾಟಕ ರಾಜ್ಯಸರ್ಕಾರ, ಬೆಂಗಳೂರೂ ಸೇರಿದಂತೆ ರಾಜ್ಯದ ನಾನಾ ನಗರ ಪಾಲಿಕೆಗಳಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಸಿ.ಬಿ.ಎಸ್.ಇ ಶಿಕ್ಷಣ ಪದ್ದತಿಯ ಬೋಧನೆಯನ್ನು (ಪ್ರಾಯೋಗಿಕವಾಗಿ?) ಆರಂಭಿಸಲು ಮನಸ್ಸು ಮಾಡಿದೆ ಅನ್ನೋ ಸುದ್ದಿ ಇತ್ತೀಚಿಗೆ ಹೊರಬಿದ್ದಿತ್ತು. ಇದು ಕರ್ನಾಟಕ ರಾಜ್ಯಸರ್ಕಾರವು ನಾಡಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ತನ್ನ ಮೂಲಭೂತ ಹೊಣೆಗಾರಿಕೆಯಿಂದ ನುಣುಚಿಕೊಳ್ಳೋ ನಡೆಯಾಗಿದೆ ಎಂತಲೂ, ಈ ಕಲಿಕಾ ವ್ಯವಸ್ಥೆಯಿಂದಾಗಿ ನಮ್ಮ ನಾಡಿನ ಮಕ್ಕಳು ತಮ್ಮ ನುಡಿಯಿಂದಲೇ ದೂರಾಗಿ, ಅವರ ಸಂಸ್ಕೃತಿ, ಪರಂಪರೆ ಹಾಗೂ ಇತಿಹಾಸದ ಬೇರುಗಳು ಸಡಿಲವಾಗುತ್ತದೆಯೆಂಬುದಾಗಿಯೂ, ಆ ಕಾರಣದಿಂದಾಗಿಯೇ ಈ ನಿರ್ಧಾರವನ್ನು ಬದಲಿಸಬೇಕೆಂದೂ ಸಂಬಂಧಪಟ್ಟವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಮಾಡಲಾಗಿತ್ತು. ಸಿ.ಬಿ.ಎಸ್.ಇ ಪದ್ದತಿಯನ್ನು ಪ್ರಾಥಮಿಕ ಶಾಲೆಯ ಹಂತದಲ್ಲಿ ಜಾರಿಗೆ ತರೋ ಉದ್ದೇಶ ಸರ್ಕಾರಕ್ಕೆ ಇರುವುದರಿಂದಾಗಿ, ಪ್ರಾಥಮಿಕ ಹಂತದ ಅಂದರೆ ಒಂದರಿಂದ ಏಳನೇ ತರಗತಿಯ ಹಂತದವರೆಗಿನ ಸಿ.ಬಿ.ಎಸ್.ಇ ಪದ್ದತಿಯ ಕಲಿಕೆಯಲ್ಲಿ ಯಾವುದು ತೊಡಕಿನದ್ದು ಅನ್ನುವುದರತ್ತ ಕೊಂಚ ಗಮನ ಸೆಳೆಯುವ ಪ್ರಯತ್ನ ನಮ್ಮದು.

ಅಧಿಕೃತ ಪಠ್ಯಪುಸ್ತಕ ಮತ್ತು ಸಿ.ಬಿ.ಎಸ್.ಇ

ಮೊದಲನೇ ತರಗತಿಯಿಂದ ಏಳನೇ ತರಗತಿಯವರೆಗಿನ ಪಠ್ಯಪುಸ್ತಕಗಳಲ್ಲಿ ‘ಎನ್.ಸಿ.ಇ.ಆರ್.ಟಿಯ ಮಾರ್ಗಸೂಚಿ ನಿಯಮಗಳಂತೆ ಸಿದ್ಧಪಡಿಸಲಾಗಿದೆ’ ಎನ್ನುವ ಒಕ್ಕಣೆ ಪುಸ್ತಕದ ರಕ್ಷಾಪುಟದಲ್ಲೇ ಅಚ್ಚು ಹಾಕಿರುತ್ತಾರೆ. ಈ ಪಠ್ಯಪುಸ್ತಕಗಳ ಪ್ರಕಾಶಕರು ಖಾಸಗಿ ಮಂದಿ. ಇದನ್ನು ಅಧಿಕೃತ ಪಠ್ಯಪುಸ್ತಕವೆಂದು ಎಲ್ಲೂ ಹೇಳಿರುವುದಿಲ್ಲ. ಆಯಾ ಶಾಲೆಯವರು ಬೇಕಾದ ಪ್ರಕಾಶಕರ ಪುಸ್ತಕಗಳನ್ನು ಅಳವಡಿಸಿಕೊಳ್ಳಲು ಸ್ವತಂತ್ರರು. ಅಂದರೆ ಇಡೀ ದೇಶಾದ್ಯಂತ ಒಂದೇ ಪಠ್ಯಪುಸ್ತಕವಿರುವುದಿಲ್ಲ. ಸಾಮಾನ್ಯವಾಗಿ ಈ ಪಠ್ಯಕ್ರಮದ ಯಾವ ಪುಸ್ತಕವೂ 125 ರೂಪಾಯಿಗಿಂತ ಕಮ್ಮಿ ಬೆಲೆ ಹೊಂದಿಲ್ಲ. ಏಳನೆ ತರಗತಿಯ ಪುಸ್ತಕದ ಬೆಲೆ 225 ರೂ ಅಂದರೆ ಅಚ್ಚರಿಯಾಗುತ್ತದೆ. ಹಾಗಂತಾ ಪುಸ್ತಕವೇನು ಅಷ್ಟೊಂದು ದೊಡ್ಡದ್ದೂ ಅಲ್ಲ, ಬರೀ 260 ಪುಟದ್ದು. ಒಂದೊಂದು ತರಗತಿಯ ಎಲ್ಲಾ ಪುಸ್ತಕಗಳನ್ನು ಕೊಳ್ಳಬೇಕೆಂದರೆ ಕಮ್ಮಿ ಎಂದರೂ ಅಂದಾಜು 15೦೦ ರೂಪಾಯಿ ಆಗುತ್ತದೆ. ಸರ್ಕಾರ ಈ ಖರ್ಚನ್ನೂ ಭರಿಸುವ ಉದ್ದೇಶ ಇಟ್ಟುಕೊಂಡಿದೆಯೋ ಏನೋ ಕಾಣೆವು! ಒಂದೊಂದು ವಿಷಯಕ್ಕೆ ಒಂದೊಂದು ಪ್ರಕಾಶನ ಸಂಸ್ಥೆ ಖ್ಯಾತಿ ಹೊಂದಿದೆ. ಹಾಗೆ ಸಿ.ಬಿ.ಎಸ್.ಇ ಪ್ರಾಥಮಿಕ ಶಿಕ್ಷಣದ ಸಮಾಜ ವಿಜ್ಞಾನದ ಪಠ್ಯಪುಸ್ತಕದ ವಿಷಯಕ್ಕೆ ಬಂದಾಗ ಹೈದರಾಬಾದ್ ಮೂಲದ ಓರಿಯೆಂಟ್ ಬ್ಲಾಕ್ ಸ್ವಾನ್ ಪ್ರಕಾಶಕರದ್ದು ಮುಂಚೂಣಿಯಲ್ಲಿರೋ ಪುಸ್ತಕ. ಇಲ್ಲಿ ಎನ್.ಸಿ.ಇ.ಆರ್.ಟಿ ಮಾನದಂಡಕ್ಕೆ ಇದು ಒಳಪಡುತ್ತಿದ್ದು, ಬೆಂಗಳೂರಿನ (ಕರ್ನಾಟಕದ?) ಶಾಲೆಗಳು ವ್ಯಾಪಕವಾಗಿ ಇದನ್ನೇ ಕೊಳ್ಳಲು ಶಿಫಾರಸ್ಸು ಮಾಡುವುದರಿಂದಾಗಿ ಆ ಪುಸ್ತಕಗಳೊಳಗೇನಿದೆ ಎಂಬುದನ್ನು ಸ್ವಲ್ಪ ನೋಡೋಣ. ಇದಲ್ಲದೆ ರತ್ನಸಾಗರ , ಗೋಯಲ್ ಬ್ರದರ್ಸ್ ಅನ್ನೋ ಪ್ರಕಾಶನದ ಪುಸ್ತಕಗಳೂ ಇದ್ದು ಒಳಗೇನಿದೆ ನೋಡೋಣ, ಬನ್ನಿ.

ಸಮಾಜದ ಪರಿಕಲ್ಪನೆ ಮತ್ತು ಮಕ್ಕಳಿಗೆ ಕಲಿಸುವಿಕೆಯ ವಿಧಾನ!

ಸಮಾಜದ ಪರಿಕಲ್ಪನೆಯನ್ನು ಮಕ್ಕಳಿಗೆ ಕಲಿಸುವ ಪಾಠಗಳಲ್ಲಿ ನಮ್ಮ ಪರಿಸರದ ಕುಟುಂಬಗಳ ಬಗ್ಗೆ ಪರಿಚಯ ಮಾಡಿಕೊಡಬೇಕಾಗುತ್ತದೆ. ಯಾವುದೇ ಕಲಿಕೆಯನ್ನು ಮಗುವಿನ ಅನುಭವಕ್ಕೆ ದೊರೆಯುವ ವಸ್ತು, ಮಾತು, ಭಾವನೆಗಳ ಆಧಾರದಲ್ಲಿ ಕಲಿಸುವುದು ಸರಿಯಾದ ವಿಧಾನ. ಆದರೆ ನಮ್ಮ ಮಕ್ಕಳಿಗೆ ಇಲ್ಲಿ ಮಿಸ್ಟರ್ ಶರ್ಮಾ, ಮಿಸೆಸ್ ಶರ್ಮಾ ಅನ್ನುವ ಕಲಿಕೆಯಿದೆ. ಕರ್ನಾಟಕದ ಬಹುಪಾಲು ಮಕ್ಕಳು ಕಂಡೇ ಇರದ ಸಿಕ್ಖರ ಕುಟುಂಬದ ಚಿತ್ರಗಳನ್ನು ಬಳಸಲಾಗಿದೆ. ಮದುವೆ ಎನ್ನುವುದರ ಚಿತ್ರದಲ್ಲಿ ಗಂಡು ಹೆಣ್ಣು ಧರಿಸಿರೋ ವೇಷ ನಮ್ಮ ಸಮಾಜದಲ್ಲಿ ಇಲ್ಲದ್ದು. ದೇವಸ್ಥಾನದ ಚಿತ್ರ, ಶಾಲೆಯ ಚಿತ್ರ, ಮದುವೆಯ ಚಿತ್ರ, ಮಾರುಕಟ್ಟೆ ಚಿತ್ರ... ಊಹೂಂ, ಇದರಲ್ಲಿ ಯಾವುದರಲ್ಲೂ ನಮ್ಮೂರಿನ ದೃಶ್ಯಗಳ ಚಿತ್ರಣ ಇಲ್ಲ. ನಮ್ಮ ದೇಶದ ಹಬ್ಬಗಳು ಎನ್ನುವುದನ್ನು ಪರಿಚಯಿಸುವಾಗ ಹೋಲಿ, ದಿವಾಲಿ, ದಶ್ಶೇರಾ ಮೊದಲಾದ ಹೆಸರುಗಳಿವೆ. ಹಚ್ಚಿನ ಕನ್ನಡಿಗರು ಹೆಸರೇ ಕೇಳಿರದ ಬಿಹು, ಗುರುಪರ್ವ್ ಅನ್ನೋ ಹಬ್ಬಗಳ ಪರಿಚಯ ಇದೆ. ನಮ್ಮ ಮನೆಗಳಲ್ಲಿ ಆಚರಿಸುವ ಸಂಕ್ರಾಂತಿ, ಯುಗಾದಿ, ಗಣಪತಿ ಹಬ್ಬ, ದೀಪಾವಳಿಗಳ ಪ್ರಸ್ತಾಪವೇ ಇಲ್ಲ. ಇದು ಮಕ್ಕಳ ಮನಸ್ಸಲ್ಲಿ ಯಾವ ಪರಿಣಾಮ ಉಂಟುಮಾಡೀತು? ನಮ್ಮ ಆಚರಣೆಗಳು ಭಾರತದ ಹಬ್ಬಗಳ ಪಟ್ಟಿಯಲ್ಲಿ ಸೇರಲು ಯೋಗ್ಯವಲ್ಲದ್ದು ಎಂತಲೇ? ಇನ್ನು ನಮ್ಮ ವಾತಾವರಣದ ಬಗ್ಗೆ ಬರೆಯುವಾಗ ಛಳಿಗಾಲದಲ್ಲಿ ಮನೆಗಳಲ್ಲಿ ಬೆಂಕಿ ಕಾಯಿಸಿಕೊಳ್ಳುತ್ತೇವೆ ಎಂದಿದೆ. ಹೌದಾ? ಅಂತಾ ಮಕ್ಕಳು ಕೇಳಿದರೆ ಅಚ್ಚರಿಯಿಲ್ಲ.

ಭಾರತದ ವಿವಿಧ ನಗರಗಳ/ ರಾಜ್ಯಗಳ ಪರಿಚಯ ನೀಡುವ ಒಂದು ಪಾಠದಲ್ಲಿ ಬೆಂಗಳೂರಿನಲ್ಲಿ ಆಡುವ ಭಾಷೆ ಕನ್ನಡ ಮತ್ತು ಕೊಂಕಣಿ ಎಂದು ಬರೆಯಲಾಗಿದೆ. ಕರ್ನಾಟಕದ ಜನರ ಉಡುಗೆ ಎಂದರೆ ಸೀರೆ ಮತ್ತು ಪಂಚೆ ಎಂದು ಬರೆಯಲಾಗಿದೆ. ಇದ್ಯಾವ ಸೀಮೆಯ ಪರಿಚಯ? ನಮ್ಮ ಮಕ್ಕಳಿಗೆ ನಮ್ಮ ಕಣ್ಣೆದುರು ಇರುವುದನ್ನೇ ತಪ್ಪು ತಪ್ಪಾಗಿ ಪರಿಚಯಿಸುವ ಈ ಕ್ರಮದಿಂದ ಮಕ್ಕಳಿಗೆ, ತಾವು ಕಲಿಯುತ್ತಿರುವುದು ತಪ್ಪೆಂದು ತಿಳಿದರೂ ಹಾಗೇ ಓದಬೇಕಾದ, ಕಲಿಯಬೇಕಾದ, ಬರೆಯಬೇಕಾದ ಅನಿವಾರ್ಯತೆ ಹುಟ್ಟುವುದಿಲ್ಲವೇ?

ಭಾರತದ ಇತಿಹಾಸದಲ್ಲಿ ಕರ್ನಾಟಕ!

ನಂಬಿ, ಏಳನೇ ತರಗತಿಯವರೆಗೆ ಸಿ.ಬಿ.ಎಸ್.ಇ ಕಲಿಕೆಯಲ್ಲಿ ನಮ್ಮ ಮಕ್ಕಳು ಕನ್ನಡದ ಇತಿಹಾಸ ಎಂದು ಓದುವುದು ಅಬ್ಬಬ್ಬಾ ಎಂದರೆ ಎರಡು ಮೂರು ಪುಟಗಳಷ್ಟು ಮಾತ್ರಾ! ನಮ್ಮ ರಾಜ ಮನೆತನಗಳಲ್ಲಿ ಕೇಳುವ ಎರಡು ಹೆಸರುಗಳು ಚಾಲುಕ್ಯ ಮತ್ತು ವಿಜಯನಗರ ಮಾತ್ರಾ. ರಾಜರೆಂದರೆ ಪುಲಿಕೇಶಿನ್ (ಪುಲಿಕೇಶಿ ಅಲ್ಲಾ!) ಮತ್ತು ಕೃಷ್ಣದೇವರಾಯನೆಂಬ ಎರಡು ಹೆಸರು ಮಾತ್ರಾ! ವೀರ ಮಹಿಳೆ ಎಂದರೆ ಝಾನ್ಸಿರಾಣಿ ಲಕ್ಷ್ಮಿಬಾಯಿ. ಈ ವೀರಮಹಿಳೆಯರ ಸಾಲಿನಲ್ಲಿ ಚೆನ್ನಮ್ಮನ್ನೂ ಇಲ್ಲಾ, ಓಬವ್ವನೂ ಇಲ್ಲಾ, ಅಬ್ಬಕ್ಕನೂ ಇಲ್ಲಾ. ಉತ್ತರಾಪಥೇಶ್ವರ ಹರ್ಷವರ್ಧನನ ಬಗ್ಗೆ ಪುಟಗಟ್ಟಲೆ ಪಾಠವಿದೆ. ಅವನ ಆಡಳಿತದಲ್ಲಿ ಸಮಾಜಿಕ ವ್ಯವಸ್ಥೆ ಹೇಗಿತ್ತು? ಅದೂ ಇದೂ ಅಂತೆಲ್ಲಾ ಬರೆಯಲಾಗಿದೆ. ಆದರೆ ಅವನನ್ನು ಮಣ್ಣುಮುಕ್ಕಿಸಿ ದಕ್ಷಿಣಾಪಥೇಶ್ವರನಾಗಿದ್ದ ಇಮ್ಮಡಿ ಪುಲಿಕೇಶಿ ಪರಮೇಶ್ವರನಾದದ್ದು ಇಲ್ಲಿಲ್ಲ. ಗಂಗರ, ಕದಂಬರ, ರಾಷ್ಟ್ರಕೂಟರ ಪ್ರಸ್ತಾಪವೇ ಇಲ್ಲ. ಇಡೀ ಭಾರತದಲ್ಲಿ ಸಾವಿರ ವರ್ಷಕ್ಕಿಂತಲೂ ದೀರ್ಘಕಾಲ ಅವಿಚ್ಛಿನ್ನವಾಗಿ ಸಾಮ್ರಾಜ್ಯ ನಡೆಸಿದ ಕನ್ನಡಿಗರ ಬಗ್ಗೆ ಏನೂ ಇಲ್ಲಾ! ಇತಿಹಾಸವನ್ನು ತಿಳಿದವನು ಇತಿಹಾಸ ಬರೆಯಬಲ್ಲ ಎಂಬಾಶಯವನ್ನೇ ನಂಬುವುದಾದರೆ ನಮ್ಮ ಮಕ್ಕಳನ್ನು ಕನ್ನಡ ನಾಡಿನ ಇತಿಹಾಸದಿಂದಲೇ ದೂರಮಾಡುವ ಶಿಕ್ಷಣ ಪದ್ದತಿಗೆ ನಮ್ಮ ಸರ್ಕಾರವೇ ಮಣೆ ಹಾಕುವುದು ಸರಿಯೇ? ಈಗಾಗಲೇ ಕರ್ನಾಟಕದ ಏಕೀಕರಣ ಹೋರಾಟದ ತ್ಯಾಗ ಬಲಿದಾನಗಳ ಇತಿಹಾಸವನ್ನು ನಮ್ಮ ಮಕ್ಕಳಿಂದ ಮರೆ ಮಾಡಲಾಗಿದೆ. ಇನ್ನು ಸಿ.ಬಿ.ಎಸ್.ಇ ಕಲಿಕಾ ಪದ್ದತಿಗೆ ಮೊರೆ ಹೋದರೆ ನಾಳೆ ಎಂತಹ ಪೀಳಿಗೆಯನ್ನು ಸಿದ್ಧಪಡಿಸುತ್ತೇವೆಯೋ, ಆ ರಾಜರಾಜೇಶ್ವರಿಯೇ ಬಲ್ಲಳು. ಒಟ್ಟಾರೆ ನಮ್ಮತನವನ್ನೇ ಕಡೆಗಣಿಸುವ, ಕರ್ನಾಟಕದ ಇತಿಹಾಸಕ್ಕೆ ಎಳ್ಳುಮೊನೆಯಷ್ಟು ಮಾತ್ರವೇ ಮಾನ್ಯತೆಯಿರುವ ಸಿ.ಬಿ.ಎಸ್.ಇ ಕಲಿಕೆಗೆ ಸರ್ಕಾರ ಮುಂದಾಗದಿರಲಿ.

ಸಿ.ಬಿ.ಎಸ್.ಇ ಕಲಿಕಾ ಪದ್ದತಿ

ಇದರ ಮೂಲೋದ್ದೇಶದಲ್ಲಿ ಸ್ಪಷ್ಟವಾಗಿ ತಿಳಿಸಿರುವಂತೆ, ಇಡೀ ಕಲಿಕಾ ವ್ಯವಸ್ಥೆಯನ್ನು ವಲಸಿಗ/ ವರ್ಗಾವಣೆಗೆ ಈಡಾಗಬಲ್ಲ ಕೇಂದ್ರಸರ್ಕಾರಿ ನೌಕರರ ಮಕ್ಕಳಿಗಾಗಿ ರೂಪಿಸಲಾಗಿದೆ. ಈ ಪದ್ದತಿಯ ಕಲಿಕೆಯಲ್ಲಿ ಹಾಗಾಗಿಯೇ ಭೌಗೋಳಿಕ ಹರವು ಹೆಚ್ಚು, ನಮ್ಮತನದ ಅರಿವು ಕಮ್ಮಿ. ನಮ್ಮ ನಿನ್ನೆಗಳ ಜೊತೆ, ನಮ್ಮತನದ ಜೊತೆ ಆಳವಾದ ಜೋಡಣೆಯೇ ಇಲ್ಲಿ ಮಾಯ. ಭಾರತವೆನ್ನುವ ವಿಶಾಲ ಭೂ ಪ್ರದೇಶದ ಸಾವಿರಾರು ವರ್ಷಗಳ ಕಥನವನ್ನು ಸಮಗ್ರವಾಗಿ ಹೇಳಿಬಿಡಬೇಕೆನ್ನುವ ದುಡುಕುತನ ಸಮಾಜ ವಿಜ್ಞಾನದ ಪಠ್ಯಗಳಲ್ಲಿ ಎದ್ದು ಕಾಣುತ್ತದೆ. ಆದ್ರೆ ಕರ್ನಾಟಕದ ಮಕ್ಕಳನ್ನು ಕರ್ನಾಟಕದ ಸಂಸ್ಕೃತಿಯ ಪರಿಚಯದಿಂದಲೇ ವಂಚಿಸಲಾಗುತ್ತದೆ. ಕರ್ನಾಟಕ ರಾಜ್ಯ ಶಿಕ್ಷಣ ಮಂತ್ರಿಗಳಾದ ಮಾನ್ಯ ಶ್ರೀ ವಿಶ್ವೇಶ್ವರಹೆಗ್ಡೆ ಕಾಗೇರಿಯವರೂ, ನಗರಾಭಿವೃದ್ಧಿ ಸಚಿವರಾದ ಶ್ರೀ ಸುರೇಶ್ ಕುಮಾರ್ ಅವರೂ ಈ ವಿಷಯದಲ್ಲಿ ದುಡುಕದೆ ಘನ ಕರ್ನಾಟಕ ಸರ್ಕಾರದ “ಮಹಾನಗರ ಪಾಲಿಕೆ ಶಾಲೆಗಳಲ್ಲಿ ಸಿ.ಬಿ.ಎಸ್.ಇ ಕಲಿಕಾ ಪದ್ದತಿ” ಎನ್ನುವ ನಿಲುವನ್ನು ಕೈಬಿಡಲಿ! ಏನಂತೀರಾ ಗುರೂ!

4 ಅನಿಸಿಕೆಗಳು:

ಸವಿತೃ ಅಂತಾರೆ...

ತುಂಬಾ ದಿನದಿಂದ ಈ ವಿಷಯಕ್ಕೆ ಸಂಬಂಧಪಟ್ಟ ಚರ್ಚೆಗಾಗಿ ಕಾಯ್ತಾ ಇದ್ದೆ. ನಿಮ್ಮ ಬರಹಕ್ಕೆ ಧನ್ಯವಾದಗಳು.


"ಭಾಷೆ" ಮತ್ತು "ಸಮಾಜ" ಕ್ಕೆ ಸಂಬಂಧಪಟ್ಟಂತೆ "ರಾಜ್ಯದ syllabus" ಉತ್ತಮವಾಗಿರುತ್ತದೆ.

ಆದರೆ ಗಣಿತ ಮತ್ತು ವಿಜ್ಞಾನ ಕ್ಕೆ ಸಂಬಂಧ ಪಟ್ಟಂತೆ CBSE syllabus ಉತ್ತಮ.

ಎರಡಕ್ಕೂ ತನ್ನದೇ ಆದ ಇತಿ ಮಿತಿಗಳಿವೆ. ಕರ್ನಾಟಕ ಸ್ಟೇಟ್ ಸಿಲ್ಲಬಸ್ ನಲ್ಲಿ ವಿಜ್ಞಾನಕ್ಕೆ ಸಂಬಂಧ ಪಟ್ಟ ಪಾಠಗಳನ್ನು ಉತ್ತಮಗೊಳಿಸುವುದು ಸಧ್ಯದ ಅವಶ್ಯಕತೆಗಳಲ್ಲಿ "ಒಂದು".

ಚರ್ಚೆ ಮುಂದುವರೆಯಲಿ. ಇದು ನನ್ನಂತವರು ಒಂದು conclusionಗೆ ಬರಲು ಸಹಾಯವಾಗುತ್ತೆ.

http://sampada.net/blog/savithru/05/05/2010/25225

jaya ಅಂತಾರೆ...

nimma abhipraayagaLu samaajaShastrada bagge sariyide. karnaatakada itihaasavashTe alla, bougoLikavaagiyu antaha oLLEya parichayavannu CBSC hondilla.

Anush Infobase ಅಂತಾರೆ...

HI,,ಆನಂದ, ತುಂಬ ಚೆನ್ನಾಗಿ ಬರೆದಿದ್ದ್ದಿಯ ಗುರು. CBSE ಪಾಠಗಳನ್ನೇ ಬದಲಿಸಬೇಕು ಆಲ್ವಾ? ಮಹಾನ್ ತರಲೆ ಇದೆ ಹಾಗು ಒಳಸಂಚು ಇರಬಹದು.. ಇದಕ್ಕೆ ಏನು ಮಾಡಬೇಕು.. ನಿನ್ನ ಲೇಖನ ವನ್ನು ನಮ್ಮ ಶಿಕ್ಷಣ ಮಂತ್ರಿ ಗಳ ಮುಖದ ಮುಂದೆ ಹಿಡಿ ಬೇಕಾ.. ?( ಸಭ್ಯ ವಾಗಿ) .. ನಮ್ಮ ಸಾಹಿತಿ ಗಳು ವೇಸ್ಟು ಕಣ್ಲ. ಅವ್ರಿಗೆ ಚನ್ನಾಗಿ ಅವಕಾಶ ಇದೆ.. ಒಂದು ಆಂದೋಲನ ಶುರು ಮಾಡಬಹುದು..ಇರಲಿ.. ಡಬ್ಬಿಂಗ್ ಕಥೆ ಮುಗಿಲಿ.. ಅಂತೀಯ?

Jayanth S ಅಂತಾರೆ...

nimma abhipraya sariyaagiye ide anand..intha education system namge bekagilla..naan anthu neev helodakke hoon anthini guru.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails