ದೇವುಡು ಅವರ "ಮಯೂರ" ಕಾದಂಬರಿಯನ್ನು ನೀವಿನ್ನೂ ಓದಿಲ್ವಾ?


ಕನ್ನಡಿಗರ ಮೊಟ್ಟ ಮೊದಲ ಸಾಮ್ರಾಜ್ಯ ಕದಂಬರದ್ದು ಮತ್ತು ಇದನ್ನು ಕಟ್ಟಿದವನು ಮಯೂರ ವರ್ಮ. ಪಲ್ಲವರ ಕೈಯ್ಯಿಂದ ನಮ್ಮ ನಾಡನ್ನು ಮುಕ್ತಿಗೊಳಿಸಿ ಕನ್ನಡಿಗರ ಮಹಾನ್ ಸಾಮ್ರಾಜ್ಯದ ಮೊಳಕೆಯನ್ನು ಬನವಾಸಿಯಲ್ಲಿ ಕಟ್ಟಿದ ಶೂರ ಮಯೂರವರ್ಮ. ಹೀಗೆ ಮಯೂರನ ಕಥೆ ಹೇಳಿದರೆ, ಕದಂಬ ಸಾಮ್ರಾಜ್ಯ ಸ್ಥಾಪಕ ಮಯೂರನೆಂದರೆ ಕಣ್ಮುಂದೆ ಬರುವುದು ಡಾ.ರಾಜ್‍ಕುಮಾರ್ ಅಭಿನಯದ ಮಯೂರ ಚಲನಚಿತ್ರ.
"ಹೊಂಚು ಹಾಕಿ ಸಂಚು ಮಾಡಿ ವಂಚನೆಯಿಂದ ನಮ್ಮ ನೆಲವನ್ನು ಕಬಳಿಸಿ ಮೆರೆಯುತ್ತಿರುವ ಶಿವಸ್ಕಂದ ವರ್ಮಾ...." ಎಂದು ಪೌರುಷದಿಂದ ಅಬ್ಬರಿಸುವ ರಾಜ್ ನಮ್ಮೆಲ್ಲರ ಮುಂದೆ ಅಂದಿನ ಕದಂಬ ಮಯೂರ ಹೀಗೇ ಇದ್ದನೇನೋ ಎನ್ನಿಸುವಂತೆ ನಟಿಸಿದ್ದಾರೆ. ಸುಮಾರು 1975ರಲ್ಲಿ ತೆರೆಕಂಡ ಈ ಚಿತ್ರ, ಅಂದು ಇಡೀ ನಾಡಿನಲ್ಲಿ ಅತ್ಯಂತ ಯಶಸ್ವಿಯಾದ ಚಿತ್ರ. ಇಂಥಾ ಅದ್ಭುತವಾದ ಯಶಸ್ವಿ ಚಿತ್ರದ ಹಿಂದೆ ಇಡೀ ಒಂದು ತಂಡವೇ ಶ್ರಮವಹಿಸಿದೆ. ಇಂತಹ ಐತಿಹಾಸಿಕ ಮಹತ್ವದ ಈ ಚಿತ್ರದ ಕಥೆ ಬರೆದೋರು ಯಾರು?

ದೇವುಡು ಎಂಬ ಸಾಹಿತ್ಯ ಮಾಂತ್ರಿಕ!

ಸುಮಾರು ಎಂಬತ್ತು ವರ್ಷಗಳ ಹಿಂದೆ ಮಯೂರ ಕಾದಂಬರಿಯನ್ನು ರೋಚಕವಾದ ಶೈಲಿಯಲ್ಲಿ ಬರೆದವರು ದೇವುಡು ನರಸಿಂಹ ಶಾಸ್ತ್ರಿಗಳು. ಮಹಾಕ್ಷತ್ರಿಯ, ಮಹಾಬ್ರಾಹ್ಮಣ ಎನ್ನುವ ಕಾದಂಬರಿಗಳಿಂದ ಖ್ಯಾತರಾದ ದೇವಡು ಅವರು ಈ ಕಾದಂಬರಿಯನ್ನು ಲೋಕಕ್ಕೆ ಅರ್ಪಿಸುವಾಗ ಹೇಳುವ ಮಾತುಗಳು ಇಂತಿವೆ :

ಮಯೂರನನ್ನು ಓದಿದ ಕನ್ನಡಿಗನಿಗೆ ಕರ್ಣಾಟಕದ ಅಭಿಮಾನವು ಒಂದಿಷ್ಟು ಹೆಚ್ಚಿದರೆ ಸಾಕು, ನಾನು ಈ ಗ್ರಂಥಕ್ಕಾಗಿ ಪಟ್ಟ ಶ್ರಮವು ಸಾರ್ಥಕವಾಗುವುದು. ಮಯೂರನು ತನ್ನ ಸಿಂಹಾಸನವನ್ನು ಗೆದ್ದುಕೊಂಡಂತೆ ಈಗ ಕರ್ಣಾಟಕರು ತಮ್ಮ ಕರ್ಣಾಟಕತ್ವವನ್ನು ಗೆದ್ದುಕೊಳ್ಳಬೇಕಾಗಿದೆ. ಜೀವನದ ಆಶೋತ್ತರ ರೀತಿನೀತಿಗಳಲ್ಲಿ ಭಿನ್ನವಾಗಿ ಸರ್ವಗ್ರಾಹಿಯಾದ ಪರಸಂಸ್ಕೃತಿಯ ಧಾಳಿಯಲ್ಲಿ ನಮ್ಮ ಅಸ್ತಿತ್ವ ವ್ಯಕ್ತಿತ್ವಗಳು ಕೊಚ್ಚಿಹೋಗುತ್ತಿವೆ. ಅದಕ್ಕಾಗಿ ಹಿರಿಯರೂ ಕಿರಿಯರೂ ಸರ್ವರೂ ಹೆಣಗಬೇಕಾಗಿದೆ. ಕುಗ್ಗಿ ಬರುತ್ತಿರುವ ನಮ್ಮ ಈ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳುವ ಹಿರಿಯಾಸೆಯಿರುವವರಲ್ಲಿ ಒಬ್ಬರಾದ ಶ್ರೀಮಾನ್ ಎನ್.ಎಸ್.ಸುಬ್ಬರಾಯರವರಿಗೆ ಈ ಗ್ರಂಥವನ್ನು ಒಪ್ಪಿಸಿದ್ದೇನೆ.

ಮಯೂರದ ಮೊದಲನೆಯ ಮುದ್ರಣದ ಮುನ್ನುಡಿಯಲ್ಲಿ "ಮಯೂರವು ಕಥೆ, ಚರಿತ್ರೆಯಲ್ಲ. ಇದರಲ್ಲಿ ದಿಟಕ್ಕಿಂತಲೂ ದಿಟದಂತೆ ತೋರುವ ಸಟೆಯೇ ಹೆಚ್ಚು" ಎಂದು ಹೇಳಿಕೊಂಡಿದ್ದೇನೆ. ಅದನ್ನು ಈಗಲೂ ಬದಲಿಸಬೇಕಾಗಿಲ್ಲ. ಆದರೂ, ಈ ಕಥೆಯಲ್ಲಿ ಬರುವ ಒಂದೊಂದು ಅಂಶಕ್ಕೂ ಆಧಾರವಿದೆ.

ಅಂಕಿತ ಪುಸ್ತಕ ಪ್ರಕಾಶನ ಸಂಸ್ಥೆಯೋರು ಹೊರತಂದಿರುವ ಈ ಕಾದಂಬರಿ 35 ವರ್ಷಗಳ ನಂತರ ಮರುಮುದ್ರಣಗೊಂಡಿದೆ. ಇದು ಐದನೆಯ ಮುದ್ರಣ. ಈ ಪುಸ್ತಕಾನ ಇಂದೇ ಕೊಳ್ಳಿ. ಓದಿರಿ.

2 ಅನಿಸಿಕೆಗಳು:

amulya ಅಂತಾರೆ...

Pallava dynasty is a Kannada rulers....?

sandeep ಅಂತಾರೆ...

hello amulya, pallavas are not kannagigas. basically they are from tamil speaking region.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails