ಪಕ್ಷಗಳು ಮರೆತ ರಾಜ್ಯಸಭೆಯ ಉದ್ದೇಶ!


ಕರ್ನಾಟಕದಿಂದ ರಾಜ್ಯಸಭೆಗೆ ನಾಲ್ವರು ಸಂಸದರನ್ನು ಆರಿಸಿ ಕಳ್ಸೋ ಸಮಯ ಹತ್ತಿರ ಆಗ್ತಾಯಿದೆ. ಈ ಚುನಾವಣೇಲಿ ಪ್ರತಿಯೊಂದು ಪಕ್ಷಾನೂ ತನ್ನ ಶಾಸಕರ ಸಂಖ್ಯೆಗೆ ಅನುಗುಣವಾಗಿ ಅಭ್ಯರ್ಥೀನ ಕಣಕ್ಕಿಳುಸ್ತಿದೆ. ಇಲ್ಲೊಂದು ತಮಾಶೆ ಪರಿಸ್ಥಿತಿ ಹುಟ್ಕೊಂಡಿದೆ. ಬಿಜೆಪಿ ಇಬ್ಬುರನ್ನು ಖಂಡಿತ ಗೆಲ್ಲುಸ್ಕೊಳುತ್ತೆ. ಕಾಂಗ್ರೆಸ್ ಒಂದು ಸೀಟುನ್ನ ಗೆಲ್ಲುಸ್ಕೊಳುತ್ತೆ. ಆದ್ರೆ ಇನ್ನೊಂದು ಸ್ಥಾನ ಗೆಲ್ಲುಸ್ಕೊಳ್ಳಕ್ಕೆ ಯಾವ ಒಂದು ಪಕ್ಷಕ್ಕೂ ಬೇಕಾಗೊ ಶಾಸಕರ ಸಂಖ್ಯೆ ಇಲ್ಲ. ಹಂಗಾಗಿ ಈ ನಾಲ್ಕನೇ ಸ್ಥಾನಾ ಮಾರಾಟಕ್ಕಿದೆಯೇನೋ ಅಂತಾ ಇವತ್ತಿನ (06.06.2010ರ) ವಿಜಯ ಕರ್ನಾಟಕದ ಸುದ್ದಿ ಓದಿದಾಗ ಮನವರಿಕೆ ಆಗುತ್ತೆ. ಮೌಲ್ಯಾಧಾರಿತ ರಾಜಕಾರಣ, ಸಿದ್ಧಾಂತದ ರಾಜಕಾರಣ ಇವುಕ್ಕೆಲ್ಲಾ ನಮ್ಮ ರಾಜಕೀಯ ಪಕ್ಷಗಳು ಎಳ್ಳೂನೀರು ಬಿಟ್ಟು ಪ್ರಹಸನ ನಡುಸ್ತಿವೆ ಅಂತಾ ಗೊತ್ತಾಗುತ್ತೆ ಗುರೂ!

ರಾಜ್ಯಸಭೆ ಮತ್ತದರ ಉದ್ದೇಶ!

ಜನರೇ ನೇರವಾಗಿ ಪ್ರತಿನಿಧಿಗಳನ್ನು ಆರಿಸಿ ಕಳಿಸೋ ಸಂಸತ್ತಿನ ಮನೆ ಲೋಕಸಭೆ. ಆದರೆ ಭಾರತವನ್ನು ಒಪ್ಪುಕೂಟವನ್ನಾಗಿಸಲು ರಾಜ್ಯಸಭೆಯಂಥಾ ಇನ್ನೊಂದು ಮೇಲ್ಮನೆಯ ಅಗತ್ಯವನ್ನು ಮನಗಾಣಲಾಯಿತು. ಈಗಾಗಲೇ ಇರೋ ಲೋಕಸಭೆಯ ಜೊತೆ ಇನ್ನೊಂದು ಯಾಕೆ ಬೇಕು? ಅಂತಾ ಸಂಸತ್ತಿನಲ್ಲಿ ದೊಡ್ಡ ಚರ್ಚೆಯೇ ಆಯಿತು. ಕೊನೆಗೆ ದೇಶದ ವ್ಯವಸ್ಥೆ ಕಟ್ಟುವಾಗ ರಾಜ್ಯಗಳಿಗೆ ನೇರವಾಗಿ ಪಾಲ್ಗೊಳ್ಳಲು ಅನುಕೂಲ ಆಗಬೇಕು, ಇದು ಫೆಡರಲ್ ವ್ಯವಸ್ಥೆಯನ್ನು ಬಲಪಡ್ಸುತ್ತೆ ಅಂದು ನೇರವಾಗಿ ರಾಜ್ಯಗಳನ್ನು ಪ್ರತಿನಿಧಿಸೋ, ಆಯಾ ರಾಜ್ಯಗಳ ಶಾಸಕರಿಂದಲೇ ಆಯ್ಕೆ ಮಾಡಲ್ಪಟ್ಟ ಸಂಸದರನ್ನು ಒಳಗೊಂಡ ರಾಜ್ಯಸಭೆಯನ್ನು ರೂಪಿಸಿ ರಚಿಸಲಾಯ್ತು. ಇದು ಹೇಗೆ ಫೆಡರಲ್? ಅನ್ನೋದಾದ್ರೆ... ಒಂದು ಸಣ್ಣ ಉದಾಹರಣೆ ನೋಡಿ. ಕರ್ನಾಟಕದ ವಿಧಾನಸಭೆಗೆ ಬಿಜೆಪಿ, ಕಾಂಗ್ರೆಸ್ ಜೊತೆ ಮತ್ತೊಂದು ಪ್ರಾದೇಶಿಕ ಪಕ್ಷವೂ ಒಂದಿಪ್ಪತ್ತು ಸೀಟು ಗೆಲ್ತು ಅಂದ್ಕೊಳ್ಳೋಣ. ಆದ್ರೆ ಲೋಕಸಭಾ ಚುನಾವಣೇಲಿ ಅದುಕ್ಕೆ ಒಂದೂ ಸ್ಥಾನವೂ ಬರಲಿಲ್ಲಾ ಅಂದ್ರೆ ಕೇಂದ್ರದಲ್ಲಿ ಆ ಪಕ್ಷದ ಅಸ್ತಿತ್ವವೇ ಇರಲ್ಲ. ಅಂದ್ರೆ ಯಾವುದೇ ಬಿಲ್ಲು ಜಾರಿಗೆ ತರೋದ್ರಲ್ಲಿ, ನಿಯಮಾ ರೂಪಿಸೋದ್ರಲ್ಲಿ ಅದರ ಪಾತ್ರವೇ ಇರದಂಗೆ ಆಗ್ಬುಡುತ್ತೆ. ಅದುಕ್ಕೆ ರಾಜ್ಯದಲ್ಲಿ ಇಂತಿಷ್ಟು ಶಾಸಕರ ಸಂಖ್ಯಾಬಲ ಇದ್ರೆ ರಾಜ್ಯಸಭೆಗೆ ಸಂಸದರನ್ನು ಆರಿಸಿ ಕಳುಸ್ಬೋದು. ಹೀಗೆ ಆಯ್ಕೆ ಆಗೋರ ಮಹತ್ವ ಏನಪ್ಪಾ ಅಂದ್ರೆ ಯಾವುದೇ ಕಾಯ್ದೆ ಜಾರಿಯಾಗಬೇಕಾದ್ರೆ, ನಿಯಮ ರೂಪಿತವಾಗಬೇಕಾದ್ರೆ ರಾಜ್ಯಸಭೆಯಲ್ಲೂ ಅದು ಪಾಸ್ ಆಗ್ಬೇಕು. ಇಂತೆಲ್ಲಾ ಮಹತ್ವವಿರೋ ರಾಜ್ಯಸಭೆಗೆ ಕರ್ನಾಟಕದಿಂದ ನಮ್ಮ ರಾಜಕೀಯ ಪಕ್ಷಗಳು ಎಂಥವರನ್ನು, ಎಂಥೆಂಥವರನ್ನು ಆರಿಸಿ ಕಳಿಸಿವೆ, ಕಳುಸ್ತಿವೆ ಅಂತಾ ನೋಡುದ್ರೆ ಈ ಪಕ್ಷಗಳಿಗೆ ಒಕ್ಕೂಟ ವ್ಯವಸ್ಥೆಯ ಬಗ್ಗೆ, ಸಂವಿಧಾನದ ಆಶಯಗಳ ಬಗ್ಗೆ ಎಷ್ಟು ಗೌರವಾ ಇದೆ ತಿಳ್ಯುತ್ತೆ.

ನಮ್ಮ ರಾಜ್ಯಸಭಾ ಸಂಸದರು!

ರಾಜ್ಯಗಳ ಮಂಡಳಿ ಎಂಬ ಭಾರತದ ರಾಜ್ಯಸಭೆಗೆ ಕರ್ನಾಟಕದ ರಾಜಕೀಯ ಪಕ್ಷಗಳೋರು ಇದುವರೆಗೂ ಆರಿಸಿರೋದು... ಪದೇ ಪದೇ ಕರ್ನಾಟಕದಿಂದಲೇ ಆಯ್ಕೆಯಾಗುತ್ತಿದ್ದರೂ ಕನ್ನಡವನ್ನು ಮಾತಾಡಲು ಕಲಿಯಬೇಕು ಅನ್ನಿಸಿರದೇ ಇಂದಿಗೂ ಕನ್ನಡ ಕಲಿಯದೇ ಇರೋರು. ಸಂಸತ್ ಅಧಿವೇಶನಗಳಲ್ಲಿ ಶೇಕಡಾ 50ರಷ್ಟು ಮಾತ್ರವೇ ಭಾಗವಹಿಸಿರೋರು. ಸಂಸತ್ತಿನ ಅಧಿವೇಶನಗಳಲ್ಲಿ ಒಂದಾದರೂ ಕರ್ನಾಟಕಕ್ಕೆ ಸಂಬಂಧಿಸಿದ ಪ್ರಶ್ನೆ ಎತ್ತದವರು, ತಮ್ಮ ಉದ್ದಿಮೆಯ ಹಿತರಕ್ಷಣೆ ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ರಾಜಕೀಯದ ಗಂಧ ಗಾಳಿ ಇಲ್ಲದಿದ್ದರೂ ಹಣ ಚೆಲ್ಲಿ ಮತ ಖರೀದಿ ಮಾಡುವವರು, ನಾನು ರಾಷ್ಟ್ರೀಯ ನಾಯಕ- ಲೋಕಲ್ ವಿಷಯಕ್ಕೂ ನನಗೂ ಸಂಬಂಧವಿಲ್ಲಾ ಅನ್ನೋ ಧೋರಣೆಯೋರು. ಈಗಲೇ ನೋಡಿ ಯಾವ ಪಕ್ಷವೂ ಸ್ವತಂತ್ರವಾಗಿ ಗೆಲ್ಲಲಿಕ್ಕಾಗದ ನಾಲ್ಕನೇ ಸ್ಥಾನಾನ ಕೊಳ್ಳಲು ಉದ್ಯಮಿಗಳು ಮುಂದಾಗಿದ್ದಾರೆ ಅನ್ನೋ ಸುದ್ದಿ! ನಮ್ಮ ಪ್ರಜಾಪ್ರಭುತ್ವ, ಸಂವಿಧಾನ, ಅದರ ಆಶಯಗಳು, ಆ ಆಶಯಗಳನ್ನು ಪೂರೈಸಲೆಂದೇ ರೂಪಿತವಾಗಿರುವ ರಾಜ್ಯಸಭೆ... ಇದರ ಚುನಾವಣೆ. ಇವೆಲ್ಲಾ ಕಂಡಾಗ ಭಾರತದ ಒಕ್ಕೂಟದ ಸ್ವರೂಪಕ್ಕೊಂದು ಸರಿಯಾದ ಸರ್ಜರಿ ಬೇಕು ಅನ್ಸಲ್ವಾ ಗುರೂ!

4 ಅನಿಸಿಕೆಗಳು:

Anonymous ಅಂತಾರೆ...

ಗುರು, ನಮಗಿದೆಲ್ಲಾ ಪುರಾಣ ಬೇಡ. ಲೋಕಸಭೆ ಎಲೆಕ್ಸನ್ನು, ಕಾರ್ಪೊರೇಶನ್ ಎಲೆಕ್ಸನ್ನು ಇದ್ಯಾವ್ದಕೂ ನಾವು ಓಟ್ ಆಕೋದೇ ಇಲ್ಲ. ಇನ್ನು ರಾಜ್ಯಸಭೆಗೆ ಯಾವ ನನ್ಮಗ ಆಯ್ಕೆಯಾದ್ರೆ ನಮಗೇನು. ವರ್ಷಕ್ಕೆ ಒಂದು ಹನ್ನೆರೆಡು ಬಾಲಿವುಡ್ ಪಿಕ್ಚರ್ಗಳು, ಒಂದಷ್ಟು IPL ಕ್ರಿಕೆಟ್ ಮ್ಯಾಚು ಇದ್ರೆ ನಮ್ಗೆ ಅಸ್ಟೇ ಸಾಕು.

-ಕನ್ನಡಿಗ

ಪುಟ್ಟ PUTTA ಅಂತಾರೆ...

BJP ಯವರ ಕುತಂತ್ರದಿಂದಾಗಿ ವೆಂಕಯ್ಯ ನಾಯ್ಡು ಅವರಂಥ ಅಪ್ರಯೋಜಕರು ಆರಿಸಿ ಹೋಗುತ್ತಾರೆ. ಈ ಪುಣ್ಯಾತ್ಮ ಕರ್ನಾಟಕದಲ್ಲಿ ತೆಲುಗರ ಸಾಮ್ರಾಜ್ಯ ಕಟ್ಟುತ್ತಾನೆ. ಕಟ್ಟಾ ಸುಬ್ರಮಣ್ಯನಂಥ joker ಗಳು ನಮ್ಮನ್ನು ಆಳುತ್ತಾರೆ.

Kannada movies and videos ಅಂತಾರೆ...

ನಮ್ಮ ಕನ್ನಡ ನಾಯಕರಲ್ಲಿ kannaDa/ಕನ್ನಡಿಗರ ಪರ ಚಿಂತನೆ ನಡೆಸಿ, ಕರ್ನಾಟಕ ಏಳ್ಗೆಗೆ ಶ್ರಮಿಸುವ buddi/benne-elubu/ಚನಕ್ಷತೆ ಇಲ್ಲ .. Kannada/ಕನ್ನಡಿಗರ ಬಗ್ಗೆ ಕಾಳಜಿ ಇರುವವರು ನಾಯಕತ್ವ ತಗೋತಾ ಇಲ್ಲ ..

ಕನ್ನಡದ ಪಾಡು ಬೆನ್ನೆಲುಬಿಲ್ಲದ ನಾಯಕರ ಕೈಯಲ್ಲಿ ದಿಕ್ಕು ಕಾಣದೆ ದಿನೇ ದಿನೇ ಶೋಚನೀಯ ವಾಗುತ್ತ ಇದೆ ..

ನಾವುಗಳು ಎದ್ದು ನಾಯಕತ್ವ ವಹಿಸುವ ತನಕ , ಕನ್ನಡದ ಪ್ರಗತಿ ಸಾಧ್ಯ ಇಲ್ಲ .. ಅಲ್ಲವೇ? ಇನ್ನೊಬ್ಬರನ್ನು ಬೈಯ್ಯುವುದರ ಜೊತೆ , ನಾವು ಮುಂದಳುತ್ವವನ್ನ ತಗೋಬೇಕು ..

Kannada movies and videos ಅಂತಾರೆ...

ಇಂತಹ ಸ್ತಿತಿಯಲ್ಲಿ, ನಮ್ಮ ಮಿನಿಸ್ತ್ರುಗಳು ತಮಿಳು ನಾಡು ಮಿನಿಸ್ಟ್ರುಗಳ ತಂತ್ರಗಳನ್ನ ಕರ್ನಾಟಕದಲ್ಲೂ ಬಳಸಿದರೂ ಸಾಕು, ಕನ್ನಡಕ್ಕೆ ಬೆಲೆ ಸಿಗತ್ತೆ .. ಅದು ಬಿಟ್ಟು ನಮ್ಮ ಸೀ.ಎಂ ಬಿ.ಜಿ.ಪಿ ಕೇಂದ್ರ ನಾಯಕರ/ರೆಡ್ಡಿ ಗಳ "Kiss Ass" ಆಗಿದ್ದರೆ ...

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails