ಭಾರತದ ಭಾಷಾನೀತಿ ತಂದಿರೋ ಕೇಡುಗಾಲ: ನಿನ್ನೆ ರೈಲ್ವೇ, ಇವತ್ತು ಯುಜಿಸಿ, ನಾಳೆ ಆಧಾರ್!

ಭಾರತ ಸರ್ಕಾರ ನಡೆಸ್ತಾಯಿರೋ, `ಇಡೀ ಭಾರತದ ವಿಶ್ವವಿದ್ಯಾಲಯಗಳ ಗುಣಮಟ್ಟ ಕಾಪಾಡಿಕೊಳ್ಳುವ/ಹೆಚ್ಚಿಸುವ' ಘೋಷಿತ ಉದ್ದೇಶವಿರೋ ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (UGC) ಅನ್ನೋ ಸಂಸ್ಥೆಯು, ನಾಡಿನ ಕಾಲೇಜುಗಳ ಶಿಕ್ಷಕರ ನೇಮಕಾತಿ ನಡುಸ್ತಾಯಿದೆ.
ಈ ಪರೀಕ್ಷೆಯನ್ನು ಕನ್ನಡದಲ್ಲೂ ನಡೆಸಿ ಅಂತಾ ಒಂದು ಮನವೀನಾ ರಾಜ್ಯಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಮದನಗೋಪಾಲ್ ಅವರು ಒಂದು ಮನವಿ ಸಲ್ಲಿಸಿದ್ದಾರೆ ಅನ್ನೋ ಸುದ್ದಿ ನಿನ್ನೆಯ(23.11.2010ರ) ಡಿಎನ್ಎ ಪತ್ರಿಕೇಲಿ ಪ್ರಕಟವಾಗಿದೆ. ಇದರ ಬಗ್ಗೆ ಕೇಂದ್ರಸರ್ಕಾರವೆನ್ನೋ ದೇವರು ಯಾವ ನಿಲುವು ತೊಗೊಂಡು ಎಂಥಾ ಪ್ರಸಾದ ಕೊಡುತ್ತೋ ಅಂತಾ ಕಾಯ್ಕೊಂಡು ಕೂಡೋ ಪರಿಸ್ಥಿತಿ ಇವತ್ತು ಕರ್ನಾಟಕ ರಾಜ್ಯಸರ್ಕಾರದ ಉನ್ನತ ಶಿಕ್ಷಣ ಇಲಾಖೆಗಿದೆ.

ಆಧಾರ್ ಗುರುತು ಚೀಟಿಯ ಅರ್ಜಿ
ಇತ್ತ ಇವತ್ತಿನ (24.11.2010ರ) ವಿಜಯಕರ್ನಾಟಕದ ಒಂಬತ್ತನೇ ಪುಟದಲ್ಲಿ "ಆಧಾರ್ - ರಾಷ್ಟ್ರೀಯ ಗುರುತು ಯೋಜನೆ"ಯ ಕುರಿತಾದ ಬರಹ ಇಂತಹುದೇ ಇನ್ನೊಂದು ಮಾಹಿತಿಯನ್ನು ಹೊರಗೆಡುವುತ್ತಿದೆ. ಈ ಯೋಜನೆಯಲ್ಲಿ ಇಡೀ ಭಾರತದ ಎಲ್ಲಾ ಪ್ರಜೆಗಳಿಗೆ ಗುರುತು ಚೀಟಿ ಕೊಡ್ತಾರಂತೆ, ಅದುಕ್ಕೆ ಬೇಕಾದ ಮಾಹಿತಿಯನ್ನು ಕಲೆಹಾಕೋ ಅರ್ಜಿ ಹಿಂದಿ/ ಇಂಗ್ಲೀಷ್ ಭಾಷೆಗಳಲ್ಲಿ ಮಾತ್ರಾ ಇರುತ್ತಂತೆ. "ಇದಕ್ಕೆ ಏನು ಕಾರಣ? ನಮ್ಮ ಕನ್ನಡನಾಡಿನ ಹಳ್ಳಿಗಾಡಿನ ಜನಕ್ಕೆ ಕನ್ನಡದಲ್ಲಿ ಮಾಹಿತಿ ತುಂಬಿಸಲು ಸುಲಭ ಅಲ್ವಾ? ಕನ್ನಡದಲ್ಲಿ ಇಡಕ್ಕೆ ಸರ್ಕಾರ ಮರೆತಿರಬೋದು" ಅಂತ ನೀವು ಅಂದ್ಕೊತೀರೇನೋ? ಊಹೂಂ... ಆದ್ರೆ ಇದುಕ್ಕೆಲ್ಲಾ ಕಾರಣ ಭಾರತ ದೇಶ ಅನುಸರಿಸುತ್ತಿರೋ ಭಾಷಾನೀತಿ. ಆ ಭಾಷಾನೀತಿಯಲ್ಲಿ ಕೇಂದ್ರಸರ್ಕಾರದ ಅಧಿಕೃತ ಭಾಷೆಯಾಗಿ ಹಿಂದಿ/ ಇಂಗ್ಲೀಷುಗಳನ್ನು ಮಾತ್ರಾ ಹೊಂದಿರೋದು. ಯಾಕಂದ್ರೆ ಈ ದೇಶದಲ್ಲಿ ಕೇಂದ್ರಸರ್ಕಾರ ಏನಾದ್ರೂ ಕೆಲಸ ಅಂತಾ ಮಾಡೋದಿದ್ರೆ ಅದು ಹಿಂದಿ/ ಇಂಗ್ಲೀಷಲ್ಲಿ ಮಾತ್ರಾನೆ.

ಭಾರತದ ಮಾನಗೇಡಿ ಭಾಷಾನೀತಿ!

ಹೌದು. ಜನರಿಂದ, ಜನಗಳಿಗಾಗಿ ಅಂತಾ ಕಟ್ಟಿರೋ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ(?) ಅಂತ ಕೊಚ್ಕೊಳ್ಳೋ ಭಾರತ ತನ್ನ ನಾಡೊಳಗೆ ಕಟ್ಕೊಂಡಿರೋ ಈ ಹುಳುಕಿನ ಭಾಷಾ ವ್ಯವಸ್ಥೆಯ ಕಾರಣದಿಂದಲೇ ಇವೆಲ್ಲಾ ಆಗ್ತಿರೋದು. ಹಿಂದೆ ರೈಲ್ವೇ ಪರೀಕ್ಷೆಗಳು ಹಿಂದಿ/ ಇಂಗ್ಲೀಷಲ್ಲಿ ನಡೀತಾ ಇದ್ದಿದ್ದು, ಇವತ್ತು ಯು.ಜಿ.ಸಿ ಪರೀಕ್ಷೆಗಳು ಹಿಂದಿ/ ಇಂಗ್ಲೀಷಲ್ಲಿ ಮಾತ್ರಾ ಇರಬೇಕು ಅನ್ನೋದೂ, ಆಧಾರ್ ಗುರುತು ಚೀಟಿ ಮಾಹಿತಿ ಕಲೆ ಹಾಕೋ ಕೆಲಸ ಹಿಂದೀ/ ಇಂಗ್ಲೀಷಲ್ಲಿ ಮಾತ್ರಾ ಇರಬೇಕೂ ಅನ್ನೋದೂ, ರಾಜ್ಯ ಕಾರ್ಮಿಕರ ವಿಮಾ ಸಂಸ್ಥೆಯ ಪೆಹೆಚಾನ್ ಕಾರ್ಡ್ (ಗುರುತು ಚೀಟಿ) ಹಿಂದೀ ಹೆಸರು ಹೊಂದಿರೋದೂ... ಇವೆಲ್ಲಾ ಕರ್ಮಕಾಂಡಕ್ಕೂ ಕಾರಣ ಇದೇ ಭಾಷಾನೀತಿ. ಈಗಿನ ಯು.ಜಿ.ಸಿ ಉದಾಹರಣೆಯನ್ನೇ ನೋಡಿ. ಹಿಂದಿ/ ಇಂಗ್ಲೀಷುಗಳಲ್ಲಿ ಮಾತ್ರಾ ಬರೆಯಬೇಕೆನ್ನೋ ನಿಯಮಾ ಇರೋ ಪರೀಕ್ಷೆಯಲ್ಲಿ ಪಾಸಾಗೋ ಕನ್ನಡದವರ ಸಂಖ್ಯೆ 9216ಕ್ಕೆ ಬರೀ 55 ಜನ ಮಾತ್ರವಂತೆ.
ರೈಲು ಪರೀಕ್ಷೆಯಲ್ಲಿ ಅರ್ಜಿಯನ್ನು ಹಿಂದಿ/ ಇಂಗ್ಲೀಷಲ್ಲಿ ಮಾತ್ರಾ ಬರೀಬೇಕು ಅನ್ನೋವಾಗ, ಬ್ಯಾಂಕು ಕೆಲಸಗಳಲ್ಲಿ ಅರ್ಜಿ ಹಾಕಕ್ಕೆ ಹತ್ತನೇ ತರಗತಿ ಅಂಕಪಟ್ಟೀಲಿ ಹಿಂದೀ ಇರಲೇ ಬೇಕು ಅನ್ನೋ ನಿಯಮ ಇರೋವಾಗ, ಯು.ಜಿ.ಸಿ ಪರೀಕ್ಷೆಗಳಲ್ಲಿ ಹಿಂದಿ ಗೊತ್ತಿರಲೇ ಬೇಕು ಅನ್ನೋ ನಿಯಮ ಇರುವಾಗ ಹಿಂದೀ/ ಇಂಗ್ಲೀಷಿನಲ್ಲಿ ಪ್ರಾವೀಣ್ಯತೆ ಇಲ್ಲದ ಕನ್ನಡಿಗ ಅಂತಹ ಕೆಲಸಗಳಿಂದ ವಂಚಿತನಾಗ್ತಾನೆ. ಆದರೆ ತಮ್ಮ ತಾಯ್ನುಡಿಯಾದ ಹಿಂದಿ ರಾಷ್ಟ್ರದ ಅಧಿಕೃತ ಭಾಷೆಯಾಗಿರೋ ಕಾರಣದಿಂದ ಎಲ್ಲಾ ಪರೀಕ್ಷೆ/ ಸಂದರ್ಶನಗಳನ್ನು ಹಿಂದಿಯಲ್ಲೇ ಎದುರಿಸಲು ಅವಕಾಶ ಇರುವ ನಿಯಮ ಕೆಲಸದ ಎಲ್ಲಾ ಅವಕಾಶಗಳನ್ನು ಹಿಂದಿ ತಾಯ್ನುಡಿಯವರಿಗೆ ಒದಗಿಸಿ ಕೊಡುತ್ತೆ. ಈ ಕಾರಣದಿಂದಲೇ ನಮ್ಮ ಜನ ಎಷ್ಟೊ ಅವಕಾಶಗಳನ್ನು ಕಳ್ಕೊತಾ ಇದಾರೆ. ಅಂದ್ರೆ ಭಾರತ ಸರ್ಕಾರಕ್ಕೆ ಇವೆಲ್ಲಾ ಗೊತ್ತಾಗಲ್ಲಾ ಅಂತೀರೇನು? "ಅಯ್ಯೋ ನನ್ ಮಕ್ಳಾ, ಭಾರತ ದೇಶದಲ್ಲಿದ್ದ ಮೇಲೆ ಹಿಂದೀ ಕಲೀದಿದ್ರೆ ಸರೀನಾ? ಭಾರತೀಯ ಅನ್ನುಸ್ಕೊಳಕ್ಕೆ ಇರಬೇಕಾದ ಅತಿ ಮುಖ್ಯವಾದ ಅರ್ಹತೆ ಅದೇ ಕಣ್ರುಲಾ..." ಅಂತಿದೆಯೇನೋ ಭಾರತ ಸರ್ಕಾರ ಅಲ್ವಾ? ಮೇರಾ ಭಾರತ್ ಮಹಾನ್...

ತ್ರಿಭಾಷಾ ಸೂತ್ರಕ್ಕೆ ಕೊನೆ ಹಾಡಲಿ.

ಅಲ್ಲಾ ಗುರೂ, ಯಾಕೆ ರಕ್ಷಣಾ ವೇದಿಕೆಯೋರು ಹೊಡದಾಡಿ, ಜೈಲು ಸೇರಿ, ಪೋಲೀಸರಿಮ್ದ ಒದೆ ತಿಂದು ರೈಲ್ವೇ ನೇಮಕಾತಿ ಚಳವಳಿ ಮಾಡಬೇಕು? ಯಾಕೆ ವಿಜಯಕರ್ನಾಟಕದಲ್ಲಿ ತುರುವೇಕೆರೆ ಪ್ರಸಾದ್ ಆಧಾರ್ ಬಗ್ಗೆ ಬರೀಬೇಕು? ಯಾಕೆ ಮದನ್ ಗೋಪಾಲ್ ಅವರಂಥಾ ಸರ್ಕಾರಿ ಅಧಿಕಾರಿ ಯುಜಿಸೀನಾ ಗೋಗರೀಬೇಕು? ಇವೆಲ್ಲಕ್ಕೂ ಕೊನೆ ಹಾಡೋಕೆ ಆಗಲ್ವಾ? ಭಾರತ ಸರ್ಕಾರ ಪಾಪ, ಹಿಂದಿಯವರು ಜಾಸ್ತಿ ಜನಾ ಇದಾರೆ ಅಂತ ಅವರ ಹಿತ ಕಾಪಾಡ್ಲಿ. ಆದರೆ ಕನ್ನಡಿಗರ ಏಳಿಗೆಗಾಗೇ ಇರೋ ಕರ್ನಾಟಕ ಸರ್ಕಾರ ಏನಾದ್ರೂ ಮಾಡಬೇಕಲ್ವಾ? ನೀವು "ಕರ್ನಾಟಕ ರಾಜ್ಯ ಸರ್ಕಾರವು ಭಾರತದ ಭಾಷಾನೀತಿಯನ್ನು ಬದಲಾಯಿಸಲು, ದೇಶದ ಎಲ್ಲಾ ಪ್ರದೇಶದ ಭಾಷೆಗಳಿಗೂ ಭಾರತದ ಆಡಳಿತ ಭಾಷೆಯ ಸ್ಥಾನಮಾನ ಕೊಡಿಸುವ ಪಣತೊಟ್ಟು ತಾನೇ ಮುಂದಾಳ್ತನ ವಹಿಸಿಕೊಳ್ಳಲಿ" ಅಂತಾ ಆಸೆಪಟ್ರೆ ಅದು ಅತಿಯಾಸೆ ಆದೀತು. ಆದರೆ ಕೊನೇಪಕ್ಷ, ಕೇಂದ್ರದ ತ್ರಿಭಾಷಾ ನೀತಿ ಅನ್ನೋ ಹೆಸರಿನ, ಆದರೆ ನಿಜಕ್ಕೂ ನಮ್ಮ ರಾಜ್ಯಭಾಷೆಯ ಸೀಟಲ್ಲಿ ತಾವು ಜಾಗ ಮಾಡ್ಕೊಂಡು ಹಿಂದೀ/ ಇಂಗ್ಲೀಷನ್ನು ಕೂಡಿಸೋ ಅಂಥಾ, ಸೂತ್ರಕ್ಕೆ ಕೊನೆ ಹೇಳಲಿ. ಆಡಳಿತ ಭಾಷಾ ಕಾಯ್ದೆಯಿಂದ ತಮಿಳುನಾಡು ವಿನಾಯ್ತಿ ಪಡೆದುಕೊಂಡಂತೆ ತಾನೂ ವಿನಾಯ್ತಿ ಪಡೆದುಕೊಳ್ಳಲಿ. ಏನಂತೀರಾ ಗುರೂ?

6 ಅನಿಸಿಕೆಗಳು:

Unknown ಅಂತಾರೆ...

ನಾನು ಹೆಚ್ಚು ಕಡಿಮೆ, ಒಂದುವರೆ ತಿಂಗಳು (ವಿಪ್ರೋ ಕಡೆಯಿಂದ "Master Trainer" ಆಗಿ) ಆಧಾರ‍್ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡಿದ್ದೇನೆ.. ಕನ್ನಡದ ಬಗ್ಗೆ, ಕನ್ನಡ "Enrolment Form" ಬಗ್ಗೆ, ಕೇಳಿದ್ದೇನೆ ಕೂಡ. ಬಹಳ ದಿನಗಳ ನಂತರ, ಕನ್ನಡ "Enrolment Form" ಬಂದರೂ.. ಅದು ಸಂಪೂರ್ಣ ಅಪೂರ್ಣವಾದದ್ದಾದ್ದರಿಂದ ನಾವುಗಳು ಅದನ್ನ ಉಪಯೋಗಿಸಿಲ್ಲ.. ಆದರೆ, "Enrolment Process" ಪೂರ, ಕನ್ನಡದಲ್ಲೇ ನಡೆಯುತ್ತದೆ. ಹಾಗೇ, ಅದಕ್ಕೆ ಉಪಯೋಗಿಸುವ, "Operators" - ಕೆಲಸಗಾರರು, ಕನ್ನಡ ಗೊತ್ತಿರಲೇಬೇಕೆಂಬುದು, ನಮ್ಮ ಖಡ್ಡಾಯ ನಿಯಮವಾಗಿತ್ತು.. ಈಗಲೂ ಇದೆ. ಆಧಾರನ ಬಗ್ಗೆ ಹೆಚ್ಚಿನ (ನನಗೆ ತಿಳಿದಂತೆ) ಮಾಹಿತಿ ನೀಡಬಲ್ಲೆ.. ಅನೇಕ ಸಂದೇಹಗಳಿಗೆ ಉತ್ತರಿಸಬಲ್ಲೆ..ಆದರೆ ನನ್ನ ವ್ಯಾಪ್ತಿಯೊಳಗೆ, ಮಾತ್ರ.. ಆಧಾರ್‌ನ ಬಗ್ಗೆ.. ಒಂದು ಲೇಖನವನ್ನ ಕೂಡ ತಯಾರಿಸುತ್ತಿದ್ದೇನೆ..ಕನ್ನಡದಲ್ಲಿ.. ಆದರೆ, ಸಮಯದ ಅಭಾವ.. ಪೂರ್ಣಗೊಳಿಸಲಾಗಿಲ್ಲ...

ಹಾಗೇ, ನಾನು ಇಲ್ಲಿ ಯಾರ ಪರವಾಗಿಯೂ, ವಿರೋಧವಾಗಿಯೂ ಮಾತುಗಳನ್ನ ವ್ಯಕ್ತಪಡಿಸಿಲ್ಲ.. ಕೆಲವೊಂದು ವಿಚಾರಗಳನ್ನ, ತಿಳಿದಿದ್ದನ್ನ ನಿಮ್ಮ ಮುಂದೆ ಇಟ್ಟಿದ್ದೇನೆ.. ನನ್ನಿಂದ ಯಾವುದಾದರೂ ನೆರವು ಬೇಕಿದ್ದಲ್ಲಿ, ನೀಡುವ ಅನ್ನೋ ಉದ್ದೇಶವಷ್ಟೆ..

ನಿಮ್ಮೊಲವಿನ,
ಸತ್ಯ.. :)

ಬನವಾಸಿ ಬಳಗ ಅಂತಾರೆ...

ಪ್ರಿಯ ಸತ್ಯಾ,

ಧನ್ಯವಾದಗಳು.ನಿಮ್ಮ ಹತ್ತಿರದ ಮಾಹಿತಿಗಳನ್ನು ಪಡೆದುಕೊಳ್ಳಲು ಉತ್ಸುಕರಾಗಿದ್ದೇವೆ. ಖಂಡಿತಾ ನಮ್ಮೊಡನೆ ಹಂಚಿಕೊಳ್ಳಿ. ನೀವು ತಿಳಿಸಿದಂತೆ ಆಧಾರ್ ಮಾಹಿತಿ ಸಂಗ್ರಹಣೆ ಕನ್ನಡದಲ್ಲೇ ನಡೀತಾ ಇದ್ರೆ ಬಹಳ ಸಂತೋಷವೇ. ಮೇಲಿನ ನಮ್ಮ ಬರಹದಲ್ಲಿ ಆಧಾರದ ಬಗ್ಗೆ ಇರೋ ಮಾಹಿತಿಗೆ ಆಧಾರ ವಿಜಯಕರ್ನಾಟಕದಲ್ಲಿ ಬಂದಿರೋ ವರದಿ. ಭಾರತ ಸರ್ಕಾರದ ಭಾಷಾನೀತಿಯೂ ನಾವು ಬರೆದ ಹಾಗೇ ಇದೆ ಅನ್ನೋದು ಸಂಬಂಧಪಟ್ಟ ಸರ್ಕಾರಿ ಮಿಂಬಲೆಗಳನ್ನು ನೋಡಿದರೆ ತಿಳಿಯುತ್ತದೆ. ಆದರೂ ನೀವಂದಂತೆ ‘ಭಾರತದ ಭಾಷಾನೀತಿಯಾದ ಈ ಹಿಂದಿ/ಇಂಗ್ಲೀಷ್ ಮಾತ್ರಾ ಬಳಸಬೇಕೆನ್ನೋದು’ ವಾಸ್ತವದಲ್ಲಿ ಹಾಗೆ ನಡೀತಿಲ್ಲ ಅಂದ ಹಾಗಾಯ್ತು. ಇದುಕ್ ತಕ್ಕಂಗೆ ಭಾರತ ತನ್ನ ಭಾಷಾನೀತಿ ಬದಲಾಯುಸ್ಕೊಬೇಕು. ಅದೇ ಸರಿಯಾದ ದಾರಿಯಲ್ವಾ?

ಸಂಪಾದಕ
ಏನ್ ಗುರು

ತಾಳೆಗರಿ ಅಂತಾರೆ...

ಎಚ್ಚೆತ್ಕೊಳ್ಳೋ ಸಮಯ ಬಂದಿದೆ ಅನ್ನಿಸತ್ತೆ. ಈಗ್ಲಿಂದ ಅದ್ರೂ ಸರ್ಕಾರ ಇತ್ಲಾ ಕಡೆ ಗಮ್ನ ಹರಿಸ್ಬೇಕು. ಹಿಂದಿ ಭಾಷೆಯ ದಬ್ಬಾಳಿಕೆ ನಡೀತಾನೇ ಇದೆ, ತಮಿಳಾಡ್ನಲ್ಲಾದಂಥ cultural conciousness ನಮ್ಮಲ್ಲಿ ಬರತ್ತೆ ಅಂಥ ಆಶಿಸ್ತೀನಿ.

Unknown ಅಂತಾರೆ...

ಪ್ರಿಯ ಸಂಪಾದಕರೇ..
ನಿಜ ನಿಮ್ಮ ಮಾತು.. ನಮಗೆ ಸಿಕ್ಕ ನಿರ್ದೇಶನಗಳಂತೆ, ನಾವು ಸ್ಥಳೀಯ ಭಾಷೆಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕೆಂಬುದೇ ಆಗಿತ್ತು.

ನಮಗೆ ನಡೆದ, ಮೊದಲ ತರಬೇತಿಯ (ನೇರವಾಗಿ ಯುಐಡಿಎಐ ಚುನಾಯಿಸಿದ, ತರಬೇತಿ ಕೊಟ್ಟ, Master Trainersನಿಂದ ನಡೆದ ತರಬೇತಿ)ಆದ್ಯತೆ ಕೂಡ ಸ್ಥಳೀಯ ಭಾಷೆ ಆಗಿತ್ತು.. ನಾವು ಅಲ್ಲಿ ನಡೆದ ಚರ್ಚೆಗಳಲ್ಲಿ.. ಇದರ, ಸ್ಥಳೀಯ ಭಾಷೆಯ ಒತ್ತಿನ ಬಗ್ಗೆ ಬಹಳಾನೇ ಮಾತಾಡಿದ್ದೆವು.. ನಮಗೆ, ತರಬೇತಿ ನೀಡಿದ, ಶ್ರೀಮತಿ ವೀಣಾ(UIDAI Master Trainer - Manipal K12) ಕೂಡ, ತರಬೇತಿಯನ್ನ ಪೂರ್ಣ ಕನ್ನಡಮಯವಾಗೇ ಮಾಡಿ; ಕನ್ನಡದಲ್ಲೇ, ತರಬೇತಿಯ ಪಠ್ಯವನ್ನು ಕೂಡ ತಯಾರಿಸಿ ನೀಡಿದ್ದರು.. ಕೇವಲ ಆಂಗ್ಲಮಯವಾಗಿದ್ದ.. ಮೂಲ ತರಬೇತಿಯನ್ನ ಬಹಳ ಜತನದಿಂದ ಕನ್ನಡೀಕರಿಸಲು ಮಾಡಿದ ಅವರ ಪ್ರಯತ್ನ ನಿಜವಾಗಿಯೂ ಸಂತೋಷ ತಂದಿತ್ತು.. ಮೂಲ ಪಠ್ಯ ಆಂಗ್ಲದಲ್ಲೇ ಇದ್ದರೂ, ಪ್ರತೀ ಪದವನ್ನ ಕನ್ನಡಕ್ಕೆ ಅನುವಾದಿಸಿ, ಮರತೇ ಹೋಗಿದ್ದ ಅವರ ಕನ್ನಡವನ್ನೂ ಅವರು ನೆನೆಪಿಸಿ, ನೆನಪಿಸಿಕೊಂಡು, ತರಬೇತಿ ನೀಡಿದ್ದರು.. ಗೊತ್ತಾಗದ ಪದಗಳಿಗೆ, ಕನ್ನಡ ಪದ ಹುಡುಕಲು, ನಾನು ಇತರರೊಂದಿಗೆ ಸಹಾಯ ಮಾಡಿದ್ದೆ; ಬರಹ ಅಂತರ್ಜಾಲ ನಿಘಂಟಿನ ಸಹಾಯವನ್ನೂ ಕೂಡ ಪಡೆದು ತರಬೇತಿಯಲ್ಲಿ ಕನ್ನಡ ತುಂಬುವಂತಾ ಪ್ರಯತ್ನ ನಡೆದಿತ್ತು..

ಹಾಗೇ..ಇನ್ನು ಈಗ ನಡೆಯುತ್ತಿರುವ ನೋಂದಣೆ ಕಾರ್ಯದಲ್ಲಿ, ಅರ್ಜಿ ಮಾತ್ರ ಸದ್ಯ ಕನ್ನಡದಲ್ಲಿ ದೊರೆಯುತ್ತಿಲ್ಲ.. ಆದರೆ, "ನೋಂದಣಿ ಕಾರ್ಯ" (Enrollment Process) ಪೂರ್ಣ ಕನ್ನಡದಲ್ಲೇ ನಡೆಯುತ್ತಿದೆ.. ಆಂಗ್ಲ ಭಾಷೆ ಕೂಡ ಜೊತೆಯಲ್ಲಿದೆ. ಹಾ ಇದು ದ್ವಿಭಾಷಾ ಪದ್ದತಿ ಅನ್ನಬಹುದು.. ಅಂದರೆ, ನೋಂದಣಿಗೆ ಬಳಸುವ ಸಾಫ್ಟ್‌ವೇರ್‌ನಲ್ಲಿ ಕನ್ನಡ ಖಡ್ಡಾಯ. ಅದಕ್ಕಾಗಿ ನಾವು "ಗೂಗಲ್‌ ಲಿಪ್ಯಂತರ"ವನ್ನ ಉಪಯೋಗಿಸುತ್ತಿದ್ದೇವೆ. ಕನ್ನಡ ಇಲ್ಲದೇ ಯಾವುದೇ ನೋಂದಣಿ ಆಗುವುದಿಲ್ಲ..
ಹಾಗೇ ಇನ್ನೊಂದು ವಿಚಾರ, ಆಧಾರ‍್ ನೋಂದಣಿ ಯಾವುದೇ ಪ್ರದೇಶದ ವ್ಯಕ್ತಿ ಎಲ್ಲಿ ಬೇಕಾದರೂ ಮಾಡಿಕೊಳ್ಳಬಹುದು.. ಹಾಗಾದಾಗ, ಆ ವ್ಯಕ್ತಿ, ತಮಿಳುನಾಡಿನವನಾದ್ದರೂ, ಕರ್ನಾಟಕದಲ್ಲಿ ಮಾಡಿಸಿದಲ್ಲಿ.. ಅವನಿಗೆ ತಲುಪುವ, ಆಧಾರ‍್ ಸಂಖ್ಯೆ ಹೊಂದಿರುವ ಪತ್ರ.. ಕನ್ನಡ ಹಾಗು ಆಂಗ್ಲದಲ್ಲಿ ಇರುತ್ತದೆ. ಹಾಗೇ "ನೊಂದಣಿ ಕೇಂದ್ರ"ದಲ್ಲಿ ಕೊಡುವ "Acknowledgment Slip" ಕೂಡ, ಕನ್ನಡ ಹಾಗು ಆಂಗ್ಲದಲ್ಲಿ ಇರುತ್ತದೆ..

ನಿಮ್ಮೊಲವಿನ,
ಸತ್ಯ.. :)

duffy ಅಂತಾರೆ...

ಏನಪ್ಪಾ !! ಹಿಂದಿ ಇಂಗ್ಲೀಷ ಕಲಿತರೆ ಜೀವನ ಅನೋ ಪರಿಸ್ಥಿತಿ ತರೋ ಹಾಗೆ ಇದೆ..
ಕೇಂದ್ರ ಸರಕಾರ ಹಿಂದಿ ಹೇರಿಕೆ ನಿಲಿಸಿದ್ರೆ , ಈ ದೇಶದಲ್ಲಿ ಎಸ್ಟೋ ಹೊಸ ಕೆಲಸ ಗಳು ಶುರು ಅಗತೆ..

rajesh ಅಂತಾರೆ...

E upayukta mahitigaagi, Satya charaNa mattu Banavasi Balagakke dhanyavadagaLu.

Ella karyakramagaLalli Kannada BaLake atyagatya.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails