ಕೃಷ್ಣಾ ಐತೀರ್ಪು, ರಾಷ್ಟ್ರೀಯ ನೀತಿ ಮತ್ತು ಒಕ್ಕೂಟದ ಒಗ್ಗಟ್ಟು



ಇತ್ತೀಚಿಗೆ ಕೃಷ್ಣಾ ನ್ಯಾಯಾಧಿಕರಣದ ಐತೀರ್ಪು ಹೊರಬಿತ್ತು. ಇದರಂತೆ 2050ರವರೆಗೆ ಈ ವಿವಾದದ ಬಗ್ಗೆ ತಕರಾರು ಎತ್ತುವಂತಿಲ್ಲ. ಈ ತೀರ್ಪನ್ನು ಕಂಡು ನಮ್ಮ ರಾಜ್ಯಸರ್ಕಾರ ಕುಣಿದಾಡುತ್ತಲೂ, ನಮ್ಮ ರಾಜಕೀಯ ಪಕ್ಷಗಳು ನಲಿದಾಡುತ್ತಲೂ, ನಮ್ಮ ಮಾಧ್ಯಮಗಳು ಕೊಂಡಾಡುತ್ತಲೂ ಇರುವುದನ್ನು ನೋಡಿದರೆ ನಗಬೇಕೋ ಅಳಬೇಕೋ ಗೊತ್ತಾಗ್ತಿಲ್ಲಾ ಗುರೂ!

ಕೃಷ್ಣಾ ತೀರ್ಪಿನ ಬಗ್ಗೆ...

ಕೃಷ್ಣಾ ತೀರ್ಪಿನಲ್ಲಿ ಕರ್ನಾಟಕಕ್ಕೆ ಒಳ್ಳೇದಾಗಿದೆ ಅಂತಾಯಿರೋರು ಸ್ವಲ್ಪ ಈ ವಿಷಯಗಳ ಬಗ್ಗೆ ಮಾತಾಡುದ್ರೆ ಒಳ್ಳೇದು. ನಮ್ಮ ರಾಜ್ಯಕ್ಕೆ ‘A ಸ್ಕೀಮಿನಲ್ಲಿ ಹಂಚಿಕೆಯಾಗಿದ್ದ ನೀರನ್ನು’ ಮತ್ತು ‘ಮುಂದೆ B ಸ್ಕೀಮಿನಲ್ಲಿ ಹಂಚಿಕೆಯಾಗಬಹುದಾದ ನೀರನ್ನು’ ಹಿಡಿದಿಟ್ಟುಕೊಳ್ಳಲು ಆಲಮಟ್ಟಿ ಜಲಾಶಯವನ್ನು ಒಂದು ಎತ್ತರಕ್ಕೆ ಕಟ್ಟೋಕೆ ಹೋದರೆ, ನೀರಾವರಿ ಯೋಜನೆಗಳನ್ನು ಮಾಡೋಕೆ ಹೋದ್ರೆ ಒಂದಲ್ಲಾ ಇನ್ನೊಂದು ಕಾರಣ ಬಳಸಿ, ಕೇಸು ಗೀಸು ಅಂತಾ ತಡೆ ಮಾಡಿ ಕೊನೆಗೆ "ಇಸ್ವಿ 2000 ಆಯ್ತು... ನಿಮಗೆ ಬಳಸಿಕೊಳ್ಳೋಕೆ ಆಗದ ನೀರುನ್ನ ಮರುಹಂಚಿಕೆ ಮಾಡಬೇಕು" ಅಂತಾ ಮಾಡಿದ ವಾದವನ್ನು ಐತೀರ್ಪಿನಲ್ಲಿ ತಳ್ಳಿಹಾಕುದ್ರೆ ಅದು ಗೆಲುವಾ? ನ್ಯಾಯಾಧಿಕರಣ ಅಣೆಕಟ್ಟೆಯ ಎತ್ತರ ಕಟ್ಕೊಳ್ಳೋದು ತಪ್ಪಲ್ಲಾ ಅಂದುಬುಟ್ರೆ ಅದು ಗೆಲುವಾ? ಜೂನ್ ಜುಲೈ ತಿಂಗಳಲ್ಲಿ ಪ್ರತಿವರ್ಷ 8-10 TMC ನೀರುನ್ನ ಬಿಡಕ್ಕೆ ಆಗ ನೀರೆಲ್ಲಿರುತ್ತೆ? ಅಂಥದೇ ಕಟ್ಟಳೆ ಮಹಾರಾಷ್ಟ್ರಕ್ಕೂ ಇದೆಯಾ? A ಸ್ಕೀಮಿನಂತೆ ಹೆಚ್ಚುವರಿ 448 TMCಯಲ್ಲಿ ಅರ್ಧದಷ್ಟು ಅಂದ್ರೆ 224 TMC ಸಿಗೋ ಬದ್ಲು 177 TMC ಮಾತ್ರಾ ಹಂಚಿಕೆ ಆದ್ರೆ ಅದು ಗೆಲುವಾ? ಎಲ್ಲೋ ಒಂದು ಲೀಟರ್ ಹಿಂದೆಮುಂದೆ ಆಗಿದೆ ಅನ್ನೋ ಹಾಗೆ 100 TMC ಮಾತ್ರಾ ಕಮ್ಮಿ ಆಗಿದೆ ಅಂತಾ ಸಮಾಧಾನ ಪಟ್ಕೊಳ್ಳೋದು ನ್ಯಾಯಾನಾ? 100 TMC ಅಂದ್ರೆ 6.5 ಕೋಟಿ ಜನರಿಗೆ ದಿನಬಳಕೆಗೆ ಬೇಕಾಗೋಷ್ಟು ನೀರು ಅಂತಾ ನಿಮಗೆ ಗೊತ್ತಿಲ್ವಾ? 100 TMCಯಷ್ಟು ನೀರಲ್ಲಿ 12,00,000 ಎಕರೆಗೆ ನೀರಾವರಿ ಒದಗಿಸಬಹುದು ಅಂತಾ ಗೊತ್ತಿಲ್ವಾ? ಹಾಗೇ ಕೃಷ್ಣೆಯಿಂದ ನೇರವಾಗಿ ಸವಲತ್ತು ಪಡೆಯೋ ಜಿಲ್ಲೆಗಳವರು ಚಿತ್ರದುರ್ಗ, ದಾವಣಗೆರೆ, ತುಮಕೂರು ಮುಂತಾದ ಜಿಲ್ಲೆಗಳ ಜನಗಳಿಗೆ ಸಿಗಬೇಕಾಗಿದ್ದ ನೀರು ಸಿಗದೇ ಹೋಗಿದ್ದಕ್ಕಾಗಿ ಮಿಡಿಯದೇ ವಿಜಯೋತ್ಸವ ಆಚರಿಸೋದನ್ನು ಪ್ರೋತ್ಸಾಹಿಸೋದು ಸರೀನಾ? ರಾಜ್ಯಸರ್ಕಾರ ಭ್ರಮೆಗಳಿಂದ ಹೊರಬಂದು ಸಂಪೂರ್ಣ ನ್ಯಾಯಕ್ಕಾಗಿ ಕಾನೂನು ಹೋರಾಟವನ್ನು ಮುಂದುವರೆಸಬೇಕಾಗಿದೆ ಅಲ್ವಾ ಗುರೂ?

ರಾಷ್ಟ್ರೀಯ ನೀತಿಗಳ ಅಗತ್ಯ

ಭಾರತದಲ್ಲಿ ಹೆಚ್ಚೂಕಮ್ಮಿ ಎಲ್ಲಾ ರಾಜ್ಯಗಳ ಪರಿಸ್ಥಿತಿ ಹೀಗೇ ಇರೋದು. ರಾಜ್ಯಗಳ ನಡುವೆ ಭಾಷೆಗಳು, ಜನಗಳು, ನದಿ ನೀರು, ಊರುಕೇರಿ... ಹೀಗೇ ಅನೇಕವು ಹಾಸುಹೊಕ್ಕು ಹಂಚಿಕೆಯಾಗಿರುತ್ತವೆ. ಇದು ಸಹಜವೂ ಹೌದು. ಇಂತಹ ಸನ್ನಿವೇಶದಲ್ಲಿ ಭಾರತದಂತಹ ನಾನಾ ಭಾಷೆಗಳ, ಜನಾಂಗಗಳ ನಾಡೊಂದು ತನ್ನಲ್ಲಿನ ಒಗ್ಗಟ್ಟನ್ನು ಕಾಪಾಡಿಕೊಳ್ಳಲು ತನ್ನೊಳಗಿನ ರಾಜ್ಯಗಳು ತಮ್ಮ ನಡುವೆ ಸೌಹಾರ್ದಯುತ ಸಂಬಂಧ ಹೊಂದಿರುವುದನ್ನು ಖಾತ್ರಿ ಪಡಿಸಿಕೊಳ್ಳುವಂತೆ ನೀತಿ ಹೊಂದಿರಬೇಕು. ಇದು ಯಾರಿಗೂ ಅನ್ಯಾಯವಾಗದಂತಹ, ವೈಜ್ಞಾನಿಕವಾಗಿ ರೂಪಿತವಾದ, ಎಲ್ಲ ರಾಜ್ಯಗಳೂ ಒಪ್ಪಿದ ನೀತಿಯಾಗಬೇಕು. ಅದು ನದಿನೀರು ಹಂಚಿಕೆಯಿರಲೀ, ಗಡಿ ಗುರುತಿಸುವುದಾಗಲೀ, ಅಂತರರಾಜ್ಯ ವಲಸೆಯಾಗಿರಲೀ... ಪ್ರತಿಯೊಂದು ವಿಷಯವನ್ನೂ ಸ್ಪಷ್ಟವಾಗಿ ತೀರ್ಮಾನಿಸುವ ನೀತಿ ಅತ್ಯಗತ್ಯವಾಗಿದೆ. ಇಂಥಾ ನೀತಿಯನ್ನು ರೂಪಿಸೋ ಹೊಣೆಗಾರಿಕೆ ಕೇಂದ್ರಸರ್ಕಾರದ್ದಾಗಿದೆ. ಅದು ಬಿಟ್ಟು ಯಾವ ರಾಜ್ಯ ಹೆಚ್ಚು ರಾಜಕೀಯವಾಗಿ ಬಲಶಾಲಿಯೋ, ಯಾವ ರಾಜ್ಯದ ಸಂಸದರಿಗೆ ಬಾಯಿ ಜೋರೋ, ಯಾರಿಗೆ ಲಾಬಿ ಮಾಡೋ ತಾಕತ್ತು ಹೆಚ್ಚೋ ಅವರ ಪರವಾಗಿ ತೀರ್ಪು ಬರುತ್ತಿವೆ ಅಂತಾ ಇನ್ನೊಂದು ರಾಜ್ಯದವರಿಗೆ ಅನ್ನಿಸೋಕೆ ಅವಕಾಶ ಮಾಡಿಕೊಡೋ ಹಾಗೆ ಅಸ್ಪಷ್ಟವಾಗಿರೋ ನೀತಿಗಳನ್ನು ಹೊಂದಿದ್ರೆ ಹೇಗೇ ಗುರೂ? ಇದು ರಾಜ್ಯರಾಜ್ಯಗಳ ನಡುವಿನ ವೈಮನಸ್ಸಿಗೆ, ಭಾರತದ ಒಗ್ಗಟ್ಟನ್ನು ಮುರಿಯೋಕೇ ಕಾರಣವಾಗಲ್ವಾ? ಸಮಾನ ಗೌರವದ ಸ್ಪಷ್ಟ ರೀತಿನೀತಿಯ ಒಕ್ಕೂಟ ವ್ಯವಸ್ಥೆಯೊಂದು ಭಾರತದ ಒಗ್ಗಟ್ಟಿಗೆ ಇಂದು ಅತ್ಯಗತ್ಯವಾಗಿದೆ.

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails