ರಾಜ್ಯಸಭೆಗೆ ಹೋಗೋರು ಭಾರತೀಯರಾದ್ರೆ ಸಾಲ್ದು! ಕರ್ನಾಟಕದೋರೂ ಆಗಿರಬೇಕು!!

ಕರ್ನಾಟಕದಿಂದ ಬಿಜೆಪಿಯೋರು ರಾಜ್ಯಸಭೆಗೆ ಶ್ರೀಮತಿ ಹೇಮಾಮಾಲಿನಿಯವರನ್ನು ಕಣಕ್ಕಿಳಿಸ್ತಿರೋದ್ರು ಬಗ್ಗೆ ಹಲವರು ಆಕ್ಷೇಪ ಎತ್ತಿರೋದನ್ನು ರಾಜ್ಯಾಧ್ಯಕ್ಷರಾದ ಶ್ರೀಮಾನ್ ಕೆ.ಎಸ್.ಈಶ್ವರಪ್ಪನವರು ಟೀಕಿಸಿ, ಖಂಡಿಸಿ ನೀಡಿರೋ ಹೇಳಿಕೆ ಇವತ್ತಿನ (21.02.2011ರ) ದಿನಪತ್ರಿಕೆಗಳಲ್ಲಿ ವರದಿಯಾಗಿದೆ.


ಸಮರ್ಥನೆಯ ಬೆನ್ನು ಹತ್ತಿ


ಎಂದಿನಂತೆಯೇ ಶ್ರೀಯುತರು... ಉಳಿದ ಪಕ್ಷಗಳು, ಈ ಹಿಂದೆ ರಾಜ್ಯಸಭೆಗೆ ಕಳಿಸಿರೋ ಪರಭಾಷಿಗರ ಬಗ್ಗೆ ಮಾತಾಡಿ, ಅವರ ಉದಾಹರಣೆ ಕೊಡ್ತಾರೆ ಅನ್ನೋ ನಿರೀಕ್ಷೇನಾ ಹುಸಿ ಮಾಡಿ, ಭಿನ್ನವಾದ ರಾಗ ಹಾಡಿದ್ದಾರೆ. ಬೊಮ್ಮಾಯಿ, ಜಾರ್ಜ್ ಫರ್ನಾಂಡಿಸ್ ಥರದ ಕನ್ನಡದೋರು ಹೊರರಾಜ್ಯಗಳಿಂದ ಆಯ್ಕೆಯಾಗಿಲ್ವಾ? ಹಾಗೇ ಹೇಮಮಾಲಿನಿಯವರು ಇಲ್ಲಿಂದ ಆಯ್ಕೆಯಾದ್ರೆ ತಪ್ಪೇನಿಲ್ಲಾಅಂದಿದಾರೆ. ಬೊಮ್ಮಾಯಿ, ಜಾರ್ಜ್, ಜೈರಾಮ್ ರಮೇಶ್ ಮೊದಲಾದವರೆಲ್ಲಾ ಹೊರರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿದಾರೆ ಅನ್ನೋ ಕಾರಣಕ್ಕೇ ಅದು ಸರಿ ಅಂತಾ ಅರ್ಥ ಅಲ್ಲವಲ್ಲಾ? ಅದೂ ತಪ್ಪೇಇದೂ ತಪ್ಪೇಆದರೆ ಬಿಹಾರಕ್ಕೆ ಎಪ್ಪತ್ತರ ದಶಕದಲ್ಲಿ ವಲಸೆ ಹೋಗಿ ಅಲ್ಲಿನವರೇ ಆಗಿರುವ ಜಾರ್ಜ್ ಫರ್ನಾಂಡಿಸ್ ಅವರನ್ನು ಬಿಹಾರದ ಜನರೇ ತಮ್ಮ ಮುಖ್ಯಮಂತ್ರಿ ಮಾಡಿಕೊಂಡರೆ, ಅದು ಬೇರೆಯದೇ ವಿಷಯ. ಬಿಡಿ.


ಭಾರತೀಯರೆಂಬ ಒಂದೇ ಯೋಗ್ಯತೆ ಸಾಕಾ?


ಹೇಮಮಾಲಿನಿಯವರು ಭಾರತೀಯರು, ಅಷ್ಟು ಸಾಕು. ಇಲ್ಲಿ ಪ್ರದೇಶ, ಭಾಷೆ ಇವುಗಳನ್ನು ನಡುವೆ ತರೋದು ಅವಿವೇಕಅಂದಿದಾರೆ ಈಶ್ವರಪ್ಪನೋರು. ಕರ್ನಾಟಕದಿಂದ ರಾಜ್ಯಸಭೆಗೆ ಆರಿಸಿ ಹೋಗೋಕೆ ಬರೀ ಭಾರತೀಯರಾದರೆ ಸಾಕು ಅಂತಾದರೆ ಕೇಂದ್ರದಲ್ಲಿ ರಾಜ್ಯಗಳ ಪಾಲ್ಗೊಳ್ಳುವಿಕೆ ಪರಿಣಾಮಕಾರಿ ಹೇಗಾಗುತ್ತೆ? ಭಾರತೀಯ ಜನತಾ ಪಕ್ಷದ ಸಂಸದರಾಗಲು ಬರೀ ಭಾರತೀಯರಾಗಿದ್ರೆ ಸಾಕು ಅನ್ನೋದೇನೋ ಸರಿ, ಹಾಗೇ ಕರ್ನಾಟಕದಿಂದ ಸಂಸದರಾಗೋಕೆ ಕರ್ನಾಟಕ ರಾಜ್ಯದವರಾಗಿರಬೇಕು ಅನ್ನೋದೂ ಸರೀನೇ ಅಲ್ವಾ, ಗುರೂ? ಯಾಕಂದ್ರೆ ಸಂಸತ್ತಿನಲ್ಲಿ ಬಿಜೆಪಿಯನ್ನು ಪ್ರತಿನಿಧಿಸೋಕ್ಕಿಂತಾ ಪ್ರಮುಖವಾಗಿ ಅವರುಗಳು ಕರ್ನಾಟಕವನ್ನು ಪ್ರತಿನಿಧಿಸುತ್ತಾರೆ. ಹಾಗೆ ಕರ್ನಾಟಕವನ್ನು ಪ್ರತಿನಿಧಿಸೋರು ನಾಡಿನ ಹಿತಕ್ಕೆ ಅಗತ್ಯವಿರುವ ನಿಲುವುಗಳನ್ನು ಸಂಸತ್ತಿನಲ್ಲಿ ತೋರಬೇಕಾಗುತ್ತದೆ. ಕರ್ನಾಟಕದ ಹಿತಕ್ಕೆ ಧಕ್ಕೆ ತರುವ ಎಲ್ಲದರ ವಿರುದ್ಧ ದನಿಯೆತ್ತಬೇಕಾಗುತ್ತದೆ. ಹಾಗಾಗಲು ಕರ್ನಾಟಕಕ್ಕೆ ಯಾವುದು ಒಳ್ಳೇದು? ಯಾವುದು ಮಾರಕ? ಅಂತಾ ತಿಳ್ಕೊಂಡಿರಬೇಕಾಗುತ್ತದೆ. ಇಂಥಾ ತಿಳುವಳಿಕೆಯ ಜೊತೆಗೆ ಕರ್ನಾಟಕದೆಡೆಗೊಂದು ಪ್ರಶ್ನಾತೀತ ಬದ್ಧತೆ ಇರಬೇಕಾಗುತ್ತದೆ. ಇದಿಷ್ಟು ಇದ್ದವರು ಮಾತ್ರವೇ ಕರ್ನಾಟಕವನ್ನು ಕೇಂದ್ರದಲ್ಲಿ ಸಮರ್ಥವಾಗಿ ಪ್ರತಿನಿಧಿಸಬಲ್ಲರೆಂಬುದನ್ನು ಈಶ್ವರಪ್ಪನವರಿಗೆ ಯಾರಾದ್ರೂ ಹೇಳಿಕೊಡಬೇಕಾಗಿಲ್ಲಾಅಲ್ಲವೇ? ಇಂಥಾ ಒಂದು ಬದ್ಧತೆ ಹಾಗೂ ತಿಳುವಳಿಕೆ ಶ್ರೀಮತಿ ಹೇಮಮಾಲಿನಿಯವರಿಗೆ ಇದೆ ಎಂಬು ಈಶ್ವರಪ್ಪನವರು ಹೇಳಬಲ್ಲರೇನು? ಅಥವಾ ರಾಜ್ಯಸಭಾ ಸಂಸದರಾಗಲು ಇಂಥಾ ಯಾವ ಗುಣಲಕ್ಷಣಗಳ ಅಗತ್ಯವೂ ಇಲ್ಲಾ ಎನ್ನುತ್ತಾರೋ?

ಈಶ್ವರಪ್ಪನವರು ಗುಜರಾತಿನ ನರೇಂದ್ರಮೋದಿಯವರನ್ನೋ, ರಾಜಾಸ್ಥಾನದ ವಸುಂಧರಾರನ್ನೋ ತಂದು ಕರ್ನಾಟಕಕ್ಕೆ ಮುಖ್ಯಮಂತ್ರಿ ಮಾಡಲು ತಯಾರಿದ್ದಾರಾ? ಹೇಳಕ್ಕಾಗಲ್ಲಾ ಬಿಡಿ. ಭಾರತೀಯತೆಯ ಬಗ್ಗೆ ತಪ್ಪು ತಿಳುವಳಿಕೆಯವರು ಹಾಗೆ ಮಾಡಲು ತಯಾರಾದರೂ ಆಗಬಹುದು. ಆದರೆ ಅಂಥವರಿಗೆ ಕರ್ನಾಟಕದ ಹಿತವನ್ನು ಪರಿಣಾಮಕಾರಿಯಾಗಿ ಕಾಪಾಡಲು ಸಾಧ್ಯವೆಂದು ನಮ್ಮ ಜನರಂತೂ ನಂಬಲಾರರು.


ರಾಜ್ಯಸಭೆಗೆ ಯಾಕೆ ಕನ್ನಡಿಗರನ್ನೇ ಆರಿಸಬೇಕೆಂದರೆ


"ರಾಜ್ಯಸಭೆ ಎನ್ನೋ ಸಂಸತ್ತಿನ ಮೇಲ್ಮನೆಗೆ ಸಂಸದರನ್ನು ರಾಜ್ಯಗಳ ವಿಧಾನ ಸಭೆಗಳು ಆರಿಸಿ ಕಳಿಸುವುದರಿಂದಾಗಿ ಒಕ್ಕೂಟ ವ್ಯವಸ್ಥೆಗೆ ಬಲ ಬರುತ್ತೆ. ಕೇಂದ್ರದಲ್ಲಿ ರಾಜ್ಯಗಳ ಪಾಲ್ಗೊಳ್ಳುವಿಕೆ ಹೆಚ್ಚುತ್ತೆ" ಅನ್ನೋ ಉದ್ದೇಶ ಇಟ್ಕೊಂಡು ಭಾರತದಲ್ಲಿ ರಾಜ್ಯಸಭೆಯನ್ನು ಹುಟ್ಟುಹಾಕಲಾಗಿದೆ. ಇಂಥಾ ರಾಜ್ಯಸಭೆಗೂ ಸಾಕಷ್ಟು ಅಧಿಕಾರವಿದೆ. ಸಂಸತ್ತಿನ ಎರಡೂ ಸದನಗಳಲ್ಲಿ ಒಪ್ಪಿಗೆ ಸಿಕ್ಕಮೇಲೆ ಎಲ್ಲಾ ಕಾನೂನು, ಕಾಯ್ದೆ, ರೀತಿ ನೀತಿಗಳು ಜಾರಿಯಾಗೋದು. ಇಡೀ ನಾಡಿನ ಜನತೆ ಯಾವುದೇ ವಿಷಯಕ್ಕೆ ಹೇಗೆ ಸ್ಪಂದಿಸುತ್ತಿದ್ದಾರೆ ಎಂಬುದನ್ನು ಕೇಂದ್ರಕ್ಕೆ ಸಮರ್ಥವಾಗಿ ಮನದಟ್ಟು ಮಾಡಿಸಲು ಈ ಸದನಗಳೇ ಪರಿಣಾಮಕಾರಿ ಸಾಧನಗಳು. ಇಲ್ಲಿನ ನಮ್ಮ ಸಂಸದರನ್ನು ಕರ್ನಾಟಕದ ಜನಪ್ರತಿನಿಧಿಗಳು ಎಂದೇ ಪರಿಗಣಿಸೋದು. ಇಂಥಾದ್ರಲ್ಲಿ ಕರ್ನಾಟಕಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಅರಿವೂ, ನಾಡ ಜನರ ಪರವಾಗಿ ಬದ್ಧತೆಯೂ ಪ್ರಶ್ನಾತೀತವಾಗಿ ಹೊಂದಿರುವಂತಹ ಜನರಷ್ಟೇ ನಮ್ಮನ್ನು ಕೇಂದ್ರದಲ್ಲಿ ಪ್ರತಿನಿಧಿಸಲು ಸಾಧ್ಯ. ಈ ಕಾರಣಕ್ಕಾಗಿಯೇ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಬೇಕಾದವರು ನಮ್ಮವರೇ ಆಗಬೇಕಾಗಿರುತ್ತದೆ. ಈಶ್ವರಪ್ಪನವರಂತೂ ಇದನ್ನು ಅರಿಯುವಷ್ಟು ವಿವೇಕಿಗಳೇ ಆಗಿದ್ದಾರೆ ಎನ್ನುವ ನಂಬಿಕೆ ಜನರದ್ದು! ಏನಂತೀರಾ ಗುರುಗಳೇ?

3 ಅನಿಸಿಕೆಗಳು:

Jnaneshwara ಅಂತಾರೆ...

ಒಳ್ಳೆ ಬರಹ,ಆನಂದ್.ರಾಜಕೀಯ ಪಕ್ಷಗಳಿಗೆ ಎಚ್ಚರಿಕೆಯ ಘಂಟೆ......

Harsha S ಅಂತಾರೆ...

ರಾಜ್ಯಸಭೆಗೆ ಹೋಗೋರು ಕರ್ನಾಟಕದೊರು ಆದ್ರು ಸಾಲ್ದು! ಕನ್ನಡ ಪರ ಚಿಂತಕರು ಆಗಿರಬೇಕು!!

ಸಿದ್ದರಾಜು ವಳಗೆರೆಹಳ್ಳಿ ಬೋರೇಗೌಡ ಅಂತಾರೆ...

“ಹೇಮಮಾಲಿನಿಯವರು ಭಾರತೀಯರು, ಅಷ್ಟು ಸಾಕು. ಇಲ್ಲಿ ಪ್ರದೇಶ, ಭಾಷೆ ಇವುಗಳನ್ನು ನಡುವೆ ತರೋದು ಅವಿವೇಕ” ಅಂತಾರಲ್ಲ ತರ್ವೇ? ಈಶ್ವುರಪ್ಪ ಇಂಥ ಅವಿವೇಕಿ ಅಂತ ಸತ್ವಲೂ ಗೊತ್ತಿರ್ಲಿಲ್ಲ ಗುರು. ಆಗಿನ್ ಕಾಂಗ್ರೆಸ್ ಗುಲಾಮ್ರು ವೆಂಕಟ್ರಾಯರ್‍ನ ದೇಶ್ ದ್ರೋಹಿ ಅಂದ್ರಲ್ಲ ಅತ್ಕೂ, ಇವಯ್ಯ ಆಡ್ತಿರುತ್ಕೂ ಅಂತ ಯಾತ್ವಾಸ ಏನೂ ಇಲ್ಲ. ಕರ್ನಾಟಕನ ಪ್ರದೇಶ, ಕನ್ನಡನ ಪ್ರಾದೇಶಿಕ ಬಾಷೆ ಅನ್ನುದ್ ಕಂಡ್ರೆ ನಂಗ್ ಅಂತೂ ಅತ್ಕೊಂಡ್ ಹುರಿತುದೆ. ಕನ್ನಡ ಭಾಷೆ ಹುಟ್ದಾಗ ಪ್ರಾದೇಶಿಕ ಭಾಷೆ ಅಂತ ಹಣೆಪಟ್ಟಿ ಏನರಾ ಇಟ್ಕೊಂಡೆ ಬಂದಿತ್ತು? ಮುಟ್ಟಾಳ್ ಶಿಕ್ಷಣ ವ್ಯವಸ್ಥೆಲಿರೋ ೫ನೇ ತರಗತಿ ಪುಸ್ತುಕ್ಧಲ್ಲಿತ್ತು ಅಂತ ಅದ್ನೆ ಬ್ರಹ್ಮಸತ್ಯ ಅನ್ದ್ಕೊನ್ದ್ಬುಟ್ಟಾವೆ ಇವು. ನಾನಾಡೋ ಭಾಷೇನ, ಪ್ರಾದೇಶಿಕ, ಇನ್ಯಾವ್ನೋ ಆಡೋ ಭಾಷೇನ ಸಾರ್ವರ್ಥ್ರಿಕ ಅಂತ್ಯವ್ನಾರಾ ಅಂದ್ರೆ ಅಸ್ಟೆ. ಸರ್ಯಾಗ್ ಇಕ್ ಕಳಿಸ್ತೀನಿ. ಕರ್ನಾಟಕ ಒಂದ್ ಪ್ರದೇಶ ಅಂತೆ. ದಿಲ್ಲಿಯವ್ರು ಹೆಳ್ಕೊಟ್ರೆ ಪ್ರದೇಶ ಯಾಕೆ ಮೈದಾನ ಅಂತ್ ಬೇಕಾದ್ರೂ ಅಂದ್ಬುಡ್ತಾವೆ ಇವು. ನಮ್ಮದೇ ಅಂತ ಹೊಸ್ ಪಕ್ಷ ಬೇಕು ಗುರು. ದಿಲ್ಲಿ ಗುಲಾಮ್ರು ಸಾವಾಸ ಸಾಕು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails