ಕನ್ನಡ ಇಷ್ಟಕ್ಕೇ ಲಾಯಕ್ಕಾಗಬೇಕಾ?


ಎರಡನೇ ವಿಶ್ವಕನ್ನಡ ಸಮ್ಮೇಳನ ಸಮಾರೋಪದ ಹಂತಕ್ಕೆ ಬಂದಿದೆ. ಈ ಸಮ್ಮೇಳನದಲ್ಲಿ ಅನೇಕ ಕನ್ನಡಿಗ ಸಾಧಕರು ಭಾಗವಹಿಸಿ ನಾಡಿಗೆ ಸಂದೇಶ ನೀಡಿದರು. ಹೆಚ್ಚಾಗಿ ಮನರಂಜನೆ, ಸಾಹಿತ್ಯ ಕ್ಷೇತ್ರಗಳ ಸುತ್ತಲೇ ವಿಶ್ವಕನ್ನಡ ಸಮ್ಮೇಳನ ನಡೆದಂತಿತ್ತು. ಹಲವರ ಮಾತುಗಳು ಸ್ಪೂರ್ತಿ ನೀಡುವಂತಿದ್ದವು. ಆದರೆ ಮುಖ್ಯವಾಗಿ ನಾರಾಯಣ ಮೂರ್ತಿಗಳ ಸಂದೇಶಗಳನ್ನು ಗಮನಿಸಿದರೆ ಇವರ ಕಣ್ಣಿನಲ್ಲಿ ಕನ್ನಡವೆಂದರೆ ಏನು? ಇದಕ್ಕಿರಬೇಕಾದ ಸ್ಥಾನಮಾನವೇನು? ಅನ್ನುವುದರ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತದೆ.

ಕನ್ನಡವೆಂದರೆ... ಇಷ್ಟೇನಾ?

ನಾನು ಕನ್ನಡ ಮಾಧ್ಯಮದಲ್ಲೇ ಓದಿದ್ದು. ನನ್ನ ತಾಯಿಗೆ ಪತ್ರ ಬರೆಯೋದು ಕನ್ನಡದಲ್ಲೇ. ನನ್ನ ಮಕ್ಕಳು ಶಾಲೆಯಲ್ಲಿ ಎರಡನೇ ಭಾಷೆಯಾಗಿ ಕನ್ನಡವನ್ನೇ ಓದಿದ್ದು. ನನ್ನ ಭಾವನೆಯ ಭಾಷೆ ಕನ್ನಡ. ನನಗೆ ಸಿಟ್ಟು ಬಂದರೆ, ಸಂತೋಷವಾದರೆ ಅದನ್ನು ತೋರಿಸೋದು ಕನ್ನಡದಲ್ಲೇ. ನನ್ನ ಮನೆಯ ಮಾತು ಕನ್ನಡ. ನನಗೆ ನಮ್ಮ ಊರಿನ ಕಾಫಿ ಕುಡಿದಾಗ ಸಮಾಧಾನವಾಗುತ್ತದೆ. ನಾನು ಕನ್ನಡದ ಕಾದಂಬರಿಗಳನ್ನು ಓದಿದ್ದೇನೆ. ಅನಂತಮೂರ್ತಿ, ಎಸ್.ಎಲ್.ಭೈರಪ್ಪನವರ ಪುಸ್ತಕಗಳನ್ನು ಓದಿದ್ದೇನೆ. ಇತ್ಯಾದಿಯಾಗಿ ತಮ್ಮ ಬದುಕಿನಲ್ಲಿ ಕನ್ನಡದ ಪಾತ್ರವನ್ನು ವಿವರಿಸಿದ್ದಾರೆ.

ಆದರೆ ವ್ಯವಹಾರದ ಭಾಷೆಯಾಗಿ ಕನ್ನಡ ಬಳಸಲು ಆಗದು, ಅದಕ್ಕೆ ಇಂಗ್ಲೀಷೇ ಆಗಬೇಕು ಅನ್ನೋ ಮಿತಿಯ ಚಿಂತನೆಯನ್ನು ತೋರಿದ್ದಾರೆ. ಕನ್ನಡಿಗರು ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಬಳಸಿ, ಮನೆಯಲ್ಲಿ ಮಾತಾಡಿಕೊಂಡರೆ ಸಾಕು ಎನ್ನುವ ಅನಿಸಿಕೆ ಮೂಡುವಂತಹ ಮಾತುಗಳನ್ನು ಆಡಿದ್ದಾರೆ. ಒಟ್ಟಾರೆಯಾಗಿ ಇವರಂದಂತೆ ಆಗುವುದೆಂದರೆ... ಕನ್ನಡವನ್ನು ಕನ್ನಡಿಗರು ತಮ್ಮ ಮನೆಯ ಮಟ್ಟಿಗೆ ಸೀಮಿತ ಮಾಡಿಕೊಳ್ಳಬೇಕು. ಆ ಮೂಲಕ ತಮ್ಮ ಭಾವನೆಗಳ ಅಭಿವ್ಯಕ್ತಿಗೆ, ಸಾಹಿತ್ಯಕ್ಕೆ, ಮನೆಯಲ್ಲಿ , ಮಾತಾಡಲಿಕ್ಕೆ ಕನ್ನಡ ಬಳಸಿದರೆ ಸಾಕು ಅನ್ನುವ ಅನಿಸಿಕೆಯನ್ನು ವ್ಯಕ್ತಪಡಿಸುತ್ತಿರುವಂತಿದೆ. ಇಷ್ಟೇ ಅಲ್ಲದೆ ಇದು ಕರ್ನಾಟಕ ರಾಜ್ಯ ಸರ್ಕಾರದ ಕಲಿಕೆಯಲ್ಲಿನ ಭಾಷಾನೀತಿಯನ್ನು ತಪ್ಪೆನ್ನುವಂತಿತ್ತು.

ಕಲಿಕೆಗೆ ಯೋಗ್ಯವಲ್ಲವೇ ಕನ್ನಡ!

ಕಲಿಕೆಗೆ ಸಂಬಂಧಿಸಿದಂತೆ ಈ ಹಿಂದೆ ಇವರು ಇಂಗ್ಲೀಷ್ ಮಾಧ್ಯಮದ ಪರವಾಗಿ ದನಿ ಎತ್ತಿದ್ದರು. ಇವರ ಅನಿಸಿಕೆಗೆ ಇನ್ಫೋಸಿಸ್ ಸಂಸ್ಥೆಯ ಬಡ ಕೆಲಸಗಾರ ಪೋಷಕರು ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮದಲ್ಲಿ ಓದಿಸಲಾಗದೇ ಇವರ ಶಿಫಾರಸ್ಸಿಗೆ ಮಾಡಿದ ಮನವಿ ಕಾರಣವಂತೆ. ಆ ನಂತರ ತಾವು ಕಲಿಕೆಗೆ ಸಂಬಂಧಿಸಿದ ಸಭೆಯೊಂದರಲ್ಲಿ ಭಾಗವಹಿಸಿದ್ದಾಗ, ಆ ಸಭೆಯಲ್ಲಿದ್ದವರ ಮಕ್ಕಳೆಲ್ಲಾ ಇಂಗ್ಲೀಷ್ ಮಾಧ್ಯಮದಲ್ಲಿ ಓದುತ್ತಾರೆ ಎನ್ನುವುದನ್ನು ಕಂಡುಕೊಂಡು, ಬಡವರ ಮಕ್ಕಳಿಗೂ ಇಂಗ್ಲೀಷ್ ಮಾಧ್ಯಮದಲ್ಲಿ ಓದುವ ಅವಕಾಶ ಇರಬೇಕು ಅನ್ನೋದನ್ನು ಹೇಳಿದರಂತೆ. ಆ ಮೂಲಕ ಕನ್ನಡಿಗರಿಗೆಲ್ಲಾ ಇಂಗ್ಲೀಷ್ ಮಾಧ್ಯಮದಲ್ಲಿ ಓದಬೇಕೆಂದೂ, ಕನ್ನಡವನ್ನು ಒಂದು ಭಾಷೆಯಾಗಿ ಕಲಿಯಬೇಕೆಂದೂ ಹೇಳುತ್ತಾ ಇರುವರೇನೊ ಎನ್ನುವ ಅನಿಸಿಕೆ ಮೂಡಿಸಿದರು.

ಇದ್ದಲ್ಲೇ ಇರೋಣವೇ? ತಿದ್ಕೊಂಡು ಮುಂದೆ ಹೋಗೋಣವೇ?

ಕನ್ನಡನಾಡಲ್ಲಿ ಇಂದು ಇವರು ಹೇಳುತ್ತಿರುವ ಮಿತಿಗಳು ಇರುವುದೇ ದಿಟವಾದಲ್ಲಿ ನಾಳೆಗೆ ಇವರು ನೀಡುತ್ತಿರುವ ಪರಿಹಾರ ಕನ್ನಡಿಗರ ಏಳಿಗೆಗೆ ಮಾರಕವೋ ಪೂರಕವೋ ನಿಜಕ್ಕೂ ಚರ್ಚೆಯಾಗಬೇಕಾಗಿದೆ. ಇಷ್ಟಕ್ಕೂ ನಮ್ಮ ಮಕ್ಕಳಿಗೆ ಇಂಗ್ಲೀಷ್ ಭಾಷೇನಾ ಕಲಿಸಕ್ಕೆ ಯಾರು ಬೇಡಾ ಅಂದಿದಾರೆ? ಗಣಿತ, ವಿಜ್ಞಾನ, ಸಮಾಜಗಳನ್ನೂ ಇಂಗ್ಲೀಷಲ್ಲಿ ಕಲಿಸಬೇಕಾ? ಹಾಗೆ ಕಲಿತು ನಮ್ಮ ಮಕ್ಕಳು ನಿಜಕ್ಕೂ ಬುದ್ಧಿವಂತರಾಗ್ತಾರಾ? ಕನ್ನಡದ ಮಕ್ಕಳನ್ನು ಎಳೆವೆಯಿಂದಲೇ ಕನ್ನಡದಿಂದ ಬೇರೆ ಮಾಡಿದರೆ ಅವಕ್ಕೆಂಥಾ ಅಡಿಪಾಯ ಸಿಕ್ಕೀತು ಗುರೂ? ನಾಳಿನ ವಿಶ್ವವು, ಜ್ಞಾನಾಧಾರಿತ ಪೈಪೋಟಿಯ ವಿಶ್ವವಾಗುತ್ತದೆಯೆಂಬ ಸನ್ನಿವೇಶದಲ್ಲಿ ನಮ್ಮ ಮುಂದಿನ ಪೀಳಿಗೆ ಅದಕ್ಕೆ ಸಜ್ಜಾಗುವುದೆಂತು? ನಾಳಿನ ಜ್ಞಾನಾಧಾರಿತ ಉದ್ದಿಮೆಗಳ ಮೂಲಕ ಸಾಧಿಸುವ ಏಳಿಗೆಗೂ ಇಂಗ್ಲೀಷ್ ಮಾಧ್ಯಮವೇ ದಾರಿಯೆಂದು ನಾರಾಯಣ ಮೂರ್ತಿಗಳು ಹೇಳುವರೇನು? ಅಥವಾ ನಮಗೆ ಜ್ಞಾನಾಧಾರಿತ ಏಳಿಗೆ ಬೇಕಿಲ್ಲ ಅನ್ನುವುದಾದರೆ ಕನ್ನಡ ನಾಡಿನ ತಾತ್ಕಾಲಿಕ ಏಳಿಗೆಯತ್ತ ಮಾತ್ರವೇ ಇವರ ಚಿಂತನೆಗಳು ನಿಂತಂತಾಗುವುದಿಲ್ಲವೇ? ಇಂದು ಕನ್ನಡದಲ್ಲಿ ಜ್ಞಾನ ವಿಜ್ಞಾನಗಳು ಇನ್ನೂ ಎಳವೆಯಲ್ಲಿವೆ. ಹಾಗಾದರೆ ಈಗಿನ ಕಲಿಕೆಯ ಮಟ್ಟವನ್ನು ಮೇಲೆ ತರುವ ಯೋಚನೆ ಮಾಡುವುದು ಬಿಟ್ಟು ಈಗಿರುವುದನ್ನಷ್ಟೇ
ಬಳಸಿಕೊಳ್ಳುತ್ತಾ ಇಂಗ್ಲೀಷ್ ಮಾತಾಡಬಲ್ಲ, ಕಾಲ್ ಸೆಂಟರ್ ಮಟ್ಟದ ಪೀಳಿಗೆಯನ್ನೇ ನಾಳೆಗೂ ಹುಟ್ಟು ಹಾಕುವುದು ತರವೋ? ಸಮ್ಮೇಳನದಲ್ಲಿ ಡಾ. ಅನಂತಮೂರ್ತಿಯವರು ಆಡಿದ ಮುನ್ನಡೆಯ ಮಾತುಗಳು ನಮ್ಮವರ ಕಣ್ತೆರೆಸೀತೆ?

9 ಅನಿಸಿಕೆಗಳು:

Anonymous ಅಂತಾರೆ...

ಕನ್ನಡದಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಸೇರಿದಂತೆ ಉನ್ನತ ಶಿಕ್ಷಣದಲ್ಲೂ ಕನ್ನಡ ಮಾಧ್ಯಮ ಉಪಯೋಗಿಸಿದಾಗ ಮಾತ್ರ ಕನ್ನಡವನ್ನು ಪ್ರಾಥಮಿಕ ಹಂತದಲ್ಲಿ ಮಾಧ್ಯಮವಾಗಿ ಕಲಿಸುವುದು ಸಾರ್ಥಕವಾಗುತ್ತದೆ. ಅದು ಬಿಟ್ಟು ಬರೀ ಪ್ರಾಥಮಿಕ ಶಾಲೆಯಲ್ಲಿ ಮಾತ್ರ ಕನ್ನಡ ಮಾಧ್ಯಮಕ್ಕೆ ಒತ್ತಾಯಿಸುವುದು ಮೂರ್ಖತನ. ವಿಶ್ವ ಕನ್ನಡ ಸಮ್ಮೇಳನದಲ್ಲಿ ಈ ಬಗ್ಗೆ ವಿಚಾರ ಗೋಷ್ಠಿ ಇರುತ್ತೆ ಎಂದು ಕೊಂಡಿದ್ದೆ ಆದರೆ ಇದು ಬರೀ ಕನ್ನಡದ ಸಾಹಿತ್ಯ/ಸಾಂಸ್ಕ್ಟುತಿಕ ಜಾತ್ರೆಯಾಗಿತ್ತಷ್ಟೆ. ವಿಶ್ವ ತಮಿಳು ಸಮ್ಮೇಳನ ನೋಡಿಯಾದರೂ ನಾವೂ ವಿಶ್ವ ಕನ್ನಡ ಸಮ್ಮೇಳನ ಹೇಗೆ ಮಾಡಬೇಕೆಂದು ಕಲಿಯಬೇಕಿತ್ತು! ವಿದೇಶಗಳ ತಮಿಳುವಿದ್ವಾಂಸರನ್ನು ಕರೆಸಿ ತಮಿಳಿನ ಬಗ್ಗೆ ಉಪನ್ಯಾಸ ಮಾಡಿಸಿದ್ದರು. ವಿಶ್ವ ಕನ್ನಡ ಸಮ್ಮೇಳನದಲ್ಲಿ ಕನಿಷ್ಠ ಇದನ್ನಾದರೂ ನೋಡ ಬಯಸಿದ್ದೆ ಆದರೆ ಒಬ್ಬ ವಿದೇಶಿ ಕನ್ನಡ ವಿದ್ವಾಂಸರೂ ಇರಲಿಲ್ಲದಿದ್ದು ನೋಡಿ ಬೇಸರವಾಯಿತು.

Vivek ಅಂತಾರೆ...

'ಕನ್ನಡದ ಬಗ್ಗೆ ಪ್ರೀತಿ' ಮತ್ತು 'ವಾಸ್ತವದ ಅರಿವು' ಇವೆರಡನ್ನೂ ಸಮತೋಲನದಲ್ಲಿ ಇಟ್ಟು ಆಡಿರುವ ಶ್ರೀ ನಾರಾಯಣ ಮೂರ್ತಿ ಅವರ ಅಭಿಪ್ರಾಯವನ್ನ ನಾನು ಸಂಪೂರ್ಣವಾಗಿ ಒಪ್ಪುತ್ತೇನೆ.
ವಾಸ್ತವದ ಅರಿವಿಲ್ಲದ ಪ್ರೀತಿ ದಿಕ್ಕು ತೋಚದ ಧೋಣಿ ಸಾಗಿದಂತೆ. - ವಿವೇಕ್

ಪ್ರಶಾಂತ ಯಾಳವಾರಮಠ ಅಂತಾರೆ...

ನಾನು ೧೦ನೇ ತರಗತಿವರೆಗೆ ಕನ್ನಡ ಮಾದ್ಯಮದಲ್ಲಿ ಕಲಿತೆ ಮತ್ತು ೭೭% ಅಂಕಗಳನ್ನ ಪಡೆದು ಪಾಸಾಗಿದ್ದೆ. ಅವಾಗ ಕಲಿತಿರೋ ಎಲ್ಲ ವಿಷಯಗಳು ನನಗೆ ಇನ್ನು ನೆನಪಿನಲ್ಲಿವೆ !
ಆದರೆ ಮುಂದೆ ವಿಜ್ಞಾನ ವಿಷಯವನ್ನು ಇಂಗ್ಲಿಷ್ ಮಾದ್ಯಮದಲ್ಲಿ ತೆಗೆದುಕೊಳ್ಳಬೇಕಾಯಿತು, ಭಾಷೆ ಅರ್ಥವಾಗದೆ, ವಿಷಯ ಏನು ತಿಳಿಯದೆ ಕೇವಲ ಬಾಯಿಪಾಟ ಮಾಡಿ ೩೫% ಅಂಕಗಳನ್ನ ಗಳಿಸಿ ಪಾಸು ಆದೆ.
ಆಗಲೇ ನನಗನಿಸಿದ್ದು ನಾನು ಇಂಗ್ಲಿಷ್ ಮಾದ್ಯಮದಲ್ಲಿ ಓದಬೇಕಾಗಿತ್ತೆಂದು! ಯಾಕಂದರೆ ಇಂಗ್ಲಿಷ್ ಮಾದ್ಯಮದಲ್ಲಿ ಕಲಿತವರಿಗೆ ವಿಷಯ ಚೆನ್ನಾಗಿ ಅರ್ಥವಾಗ್ತಾ ಇತ್ತು ಮತ್ತು ಅವರು ಒಳ್ಳೆ ಅಂಕಗಳನ್ನ ಗಳಿಸಿ ಇಂಜಿನಿಯರಿಂಗ್ ಅಲ್ಲಿ ಸೀಟು ಗಿಟ್ಟಿಸಿದರು ಆದರೆ ನಾನು ?? :(
ಮುಂದೆ ನಾನು ನನ್ನ ವಿದ್ಯಾಬ್ಯಾಸವನ್ನ ಇಂಗ್ಲಿಷ್ ಮಾದ್ಯಮದಲ್ಲಿ ಮುಂದುವರಿಸಬೇಕದಾಗ್ ಪಟ್ಟ ಕಷ್ಟ ಅಸ್ಟಿಸ್ತಲ್ಲ...

ನಮಗೆ ಎಲ್ಲಿವರೆಗೆ ವೃತ್ತಿಪರ ಕೋರ್ಸುಗಳು ಕನ್ನಡದಲ್ಲಿ ಬರುವುದಿಲ್ಲವೋ ಅಲ್ಲಿವರೆಗೆ ನಮಗೆ ಕಷ್ಟ ತಪ್ಪಿದ್ದಲ್ಲ ಈಗಿನ ಜಾಗತೀಕರಣದ ಸಂಧರ್ಬದಲ್ಲಿ ನಾವು ಒಳ್ಳೆ ಅಂಕಗಳೊಂದಿಗೆ ವಿದ್ಯಾಬ್ಯಾಸವನ್ನ ಮುಗಿಸಬೇಕಾದ ಅನಿವಾರ್ಯತೆ ತುಂಬಾ ಇದೆ.

ಇದಕ್ಕೆ ನಿಮ್ಮ ಸಲಹೆ ಏನು ?

Vivek ಅಂತಾರೆ...

ಇಂದಿನ ನಮ್ಮ ಭಾರತದಲ್ಲಿ, ನಾವು ನಮ್ಮ ಸಂಪೂರ್ಣ ವಿಧ್ಯಾಭ್ಯಾಸ ನಮ್ಮ ಮಾತೃಭಾಷೆಯಲ್ಲಿ ಮಾಡಿದ್ದೆ ಆದರೆ, ನಾವು ಯಾವುದೇ ಸ್ಪರ್ಧಾತ್ಮಕ ಉದ್ದ್ಯೋಗಕ್ಕೆ ಅರ್ಹರಲ್ಲ. ಇದು ಕನ್ನಡ ಅಸ್ಟೆ ಅಲ್ಲ ಭಾರತದ ಯಾವುದೇ ಬಾಷೆಯ ಸ್ಥಿತಿ ಕೂಡ, ಹಿಂದಿಯೂ ಸೇರಿದಂತೆ. ಈ ವ್ಯವಸ್ತೆಯನ್ನ ಸರಿ ಪಡಿಸದೇ ನಾವು ಯಾವುದೇ ಪೋಷಕರ ಮೇಲೆ ಮಾತೃಭಾಷೆಯಲ್ಲೇ ಕಡ್ಡಾಯ ಶಿಕ್ಷಣ ಕೊಡಿಸಿರೆಂದು ಹೇಳಲಾಗುವುದಿಲ್ಲ. ನಾವು ಒಪ್ಪಿದರು ಅಥವಾ ಒಪ್ಪದಿದ್ದರೂ ಇಂಗ್ಲಿಷ್ ಭಾಷೆ ಇಂದಿನ ಭಾರತದ ಅನಿವಾರ್ಯ. ಈ ವಾಸ್ತವವನ್ನರಿತು ನಾರಾಯಣಮೂರ್ತಿ ಅವರು ಮಾಡಿದ ಉದ್ಘಾಟನ ಭಾಷಣ ಅತ್ಯಂತ ಸಮಂಜಸವೆನಿಸುತ್ತದೆ.

Mukund Gangur ಅಂತಾರೆ...

ಚಿ೦ತನೆ

ವಿಶ್ವ ಕನ್ನಡ ಸಮ್ಮೇಳನದಲ್ಲಿ ನಾರಾಯಣ ಮೂರ್ತಿಯವರ ಭಾಷಣ ಸರಳ ಸ್ಪಸ್ಟ ವಾಗಿತ್ತು. ತಮ್ಮ ಅನುಭವ, ಅನಿಸಿಕೆ, ಸ೦ದೇಶಗಳೊಡನೆ, ಸ೦ಕ್ಶಿಪ್ತವಾಗಿ ತಮ್ಮ (ಇನ್ನಫ಼ೋಸಿಸ್) ಕೊಡುಗೆ - ಕನ್ನಡಿಗರಿಗೆ / ಕರ್ನಾಟಕಕ್ಕೆ ಏನು ಎ೦ಬುದನ್ನು ಬಿ೦ಬಿಸಿದರು. ಈ ವಿಷಯ ಈಗಾಗಲೆ ಬಹಳಷ್ಟು ಜನರು ಚರ್ಚಿಸಿದ್ದಾರೆ.

ಅಭಿವೃದ್ಧಿಯನ್ನು ಎರಡು ಭಾಗದಲ್ಲಿ ನೋಡಬೇಕಾಗಿದೆ.

ಕ) ಕನ್ನಡಿಗರಿಗೆ - ಕರ್ನಾಟಕಕ್ಕೆ
ಖ) ಕನ್ನಡ ಭಾಷೆಗೆ - ಕರ್ನಾಟಕಕ್ಕೆ

ಇನ್ನಫ಼ೋಸಿಸ್ - ಬೆ೦ಗಳೂರಿಗೆ, ಭಾರತದ ಸಿಲಿಕಾನ್ ಸಿಟಿ ಎ೦ಬ ಪಟ್ಟ ತರುವಲ್ಲಿ ವಹಿಸಿದ ಪಾತ್ರ ನಿರ್ವಿವಾದ. ಇದರಿ೦ದಾಗಿ ಕನ್ನಡಿಗರಿಗೆ - ಕರ್ನಾಟಕದ ಜನಕ್ಕೆ ಆದ ವಿವಿಧ ಉಪಯೋಗಗಳು ನಿಜಕ್ಕೂ ಮೆಚ್ಚುವ೦ತಹುದು.
.ಸಾವಿರಾರು ಉದ್ಯೋಗಗಳು ಸೃಷ್ಟಿಯಾದವು.
.ಕನ್ನಡಿಗರು, ಮುಖ್ಯವಾಗಿ ತಾ೦ತ್ರಿಕ ವರ್ಗದವರು, ಕೆಲಸವನ್ನರಸುತ್ತ ಹೊರ ರಾಜ್ಯ / ದೇಶ ಗಳಿಗೆ ಅಲೆಯುವುದು ತಪ್ಪಿತು.
.ಹಲವಾರು ಕೆಳ-ಮಧ್ಯಮ, ಮಧ್ಯಮ ವರ್ಗದವರು ಸಿರಿವ೦ತರಾದರು.
.ಜಗತ್ತಿನಲ್ಲಿ ಬೆ೦ಗಳೂರು ತನ್ನ ಹೆಸರನ್ನು ಚಿರಾಯುವಾಗಿಸಿತು.
.ಸರಕಾರಕ್ಕೆ ಅಧಿಕ ತೆರಿಗೆ - ಅದರಿ೦ದಾಗಿ ರಾಜ್ಯದ ಅಭಿವೃದ್ಧಿ..
.ಇನ್ನಫ಼ೋಸಿಸ್ ಫ಼ೊ೦ಡೇಷನ್ನ ಅ೦ತಹ ಹಲವಾರು ಸ೦ಸ್ಥೆಗಳಿ೦ದ ಅಭಿವೃದ್ಧಿ ಕಾರ್ಯಗಳು..... ಇತ್ಯಾದಿ ಇತ್ಯಾದಿ.........

ಈಗ ಕನ್ನಡ ಭಾಷೆ - ಕರ್ನಾಟಕದ ಕಡೆಗೆ ಗಮನ ಹರಿಸೋಣ.

ಈ ಸಾಫ಼್ಟವೇರ್ ಪ್ರಗತಿ ನಡೆದದ್ದೆಲ್ಲಾ ಇ೦ಗ್ಲೀಷಿನಲ್ಲಿ. ಹೆಚ್ಚಿನದಾಗಿ ಅಭಿವೃದ್ಧಿ ಹೊ೦ದಿದ ದೇಶಗಳಿಗೆ ತಮ್ಮ ಪ್ರಗತಿಯ ಗರಿಮೆಗೆ ಕಡಿಮೆ ಬೆಲೆಗೆ ತಾ೦ತ್ರಿಕ ಕೆಲಸದವರು ಸಿಗುವ ತಾಣವಾಯಿತು. (ಲೋ ಕಾಸ್ಟ್ ಕ೦ಟ್ರಿ).

ವಿದ್ಯಾವ೦ತರು , ಬಡವರು, ತಮ್ಮ ಮಕ್ಕಳೂ ಸಾಫ಼್ಟವೇರ್ ಇ೦ಜಿನಿಯರ್ ಆಗಲಿ ಎ೦ದು ಕನಸು ಕ೦ಡರು. ತು೦ಬಾ ಜನರು ಅದನ್ನು ನನಸಾಗಿಸಿದರು , ಸಿರಿವ೦ತರಾದರು ಇದರಲ್ಲಿ ಅನುಮಾನವಿಲ್ಲ. ಆದರೆ ಕರ್ನಾಟಕದ ಪ್ರತಿಶತ (%) ಎಷ್ಟು ಜನ ? ಕರ್ನಾಟಕದ ಸರ್ವಾ೦ಗೀಣ ಅಭಿವೃದ್ಧಿ ಸಾದ್ಯವಾಇತೇ ? ಉತ್ತರ ಬಹುಷ "ಇಲ್ಲಾ ".... ಸಮಾಜದಲ್ಲಿ ಎರಡು ವರ್ಗ ಗಳಾದವು.. ಶ್ರೀಮ೦ತರು - ಬಡವರು (ಟೆಕ್ಕೀಸ್ - ಇತರರು).. ಇವರ ನಡುವೆ ಹಿ೦ದೆ೦ದು ಕ೦ಡಿರದ ಕ೦ದಕ. ತಲೆಯೆತ್ತಿದವು ನಾನಾ ಸಾಮಾಜಿಕ ಸಮಸ್ಯೆಗಳು.

ಹಾಗಾದರೆ ಆದದ್ದೇನು ?

ನಮ್ಮ ಕೆಲವು ಮೇಧಾವಿ ತಾ೦ತ್ರಿಕ ವರ್ಗದವರು ಶ್ರಮದಿ೦ದ ಉತ್ಪಾದಿಸುವ "ಮಾಹಿತಿ ತ೦ತ್ರಗ್ಯಾನ" ತಿರುಗಿ ಮತ್ತೇ ನಮಗೇ ದುಬಾರಿ ಬೆಲೆಯಲ್ಲಿ ಮಾರಾಟ ವಾಗುತ್ತಿದೆಯೇ ? ಹಿ೦ದೆ ಬ್ರಿಟೀಷರು ನಮ್ಮಲ್ಲಿ೦ದ ಹತ್ತಿ ಕೊ೦ಡೊಯ್ದು , ನಮಗೇ ದುಬಾರಿ ಬೆಲೆಯಲ್ಲಿ ಬಟ್ಟೆ ಮಾರಿದ೦ತೆ ? ಇ೦ತಹ ಬೆಳವಣಿಗೆಇ೦ದ ಬಡವರ / ದೇಶದ ಸರ್ವಾ೦ಗೀಣ ಅಭಿವೃದ್ಧಿ ಸಾದ್ಯವಿಲ್ಲಾ ಎ೦ದು ಗಾ೦ಧೀಜಿ ಸಿಡಿದೆದ್ದು ನಿ೦ತದ್ದು ಮರೆತೆವೇ ?

ಹಾಗದರೆ ಮು೦ದೆ ಎನು ಮಾಡಬಹುದು...?
ಬಹುಷ ಇದಕ್ಕೆ ಉತ್ತರ ...."ಕನ್ನಡ ಭಾಷೆ ಅಭಿವೃದ್ಧಿ - ಕರ್ನಾಟಕದ ಅಭಿವೃದ್ಧಿ". ಇದರೆಡೆ ನಮ್ಮ ಗಮನ ಹರಿಯಬೇಕಾಗಿದೆ.

"ಮಾಹಿತಿ ತ೦ತ್ರಗ್ಯಾನದ " ಉಪಯೋಗ ಸಮಾಜಕ್ಕೆ ಮುಟ್ಟಬೇಕಾದರೆ ಅದು ಕನ್ನಡದಲ್ಲಿರಬೇಕಲ್ಲವೇ ? ನಮ್ಮ ಗ್ರಾಮೀಣ ಕ್ರುಷಿಕ ಲಿ೦ಗಣ್ಣಗೆ ಉಪಯೋಗವಾಗುವುದು ಅದು ಕನ್ನಡ ದಲ್ಲಿ ಲಭ್ಯವಾದಾಗಲೇ....

ತ೦ತ್ರಗ್ಯಾನ ಕನ್ನಡದಲ್ಲಿ ಬೆಳೆದರೆ :
ಕ)ಜನ ಸಾಮಾನ್ಯರಿಗಿ ಮುಟ್ಟುತ್ತದೆ - ಅಭಿವೃದ್ಧಿಗೆ ನಾ೦ದಿಯಾಗುತ್ತದೆ.
ಖ)ಅಭಿವೃದ್ಧಿ ದೇಶಗಳು ನಮ್ಮ ಹೊಸ ತ೦ತ್ರಗ್ಯಾನ ಕೊಳ್ಳುವ೦ತಾಗುತ್ತದೆ

ಬಹುಷ ಇದೇ ಸೂತ್ರವನ್ನಲ್ಲವೇ ಅಭಿವೃದ್ಧಿ ದೇಶಗಳೆನಿಸಿದ ಜಪಾನ್, ಫ಼್ರಾನ್ಸ್, ಜರ್ಮನಿ , ಚೀನಾ ,ಕೋರಿಯಾ...ಪಾಲಿಸುತ್ತಿರುವುದು ? ಎಲ್ಲಾ ಮೊದಲು ತಮ್ಮ ಭಾಷೆಯಲ್ಲಿ ತ೦ತ್ರಗ್ಯಾನ ಬೆಳೆಸಿ ಉಪಯೋಗ ಪಡೆದು ನ೦ತರ ಅದನ್ನು ಇತರರಿಗೆ ಮಾರುವುದು.

ಕನ್ನಡ ಭಾಷೆ ಬೆಳೆದು - ಕನ್ನಡಿಗರು ಬೆಳೆದಾಗಲೆ ನಿಜವಾದ ಅಭಿವೃಧಿ ಕಾಣುವುದು.

ಸರಕಾರ / ಇನ್ನಫ಼ೋಸಿಸ್ ನ೦ತಹ ಸ೦ಸ್ಥೆಗಳು ಇ೦ತಹ ಶೋಧನೆಯಲ್ಲಿ (ಅರ್ ಽ ಡಿ) ಹಣ ಹೂಡಿವೆಯೇ ? ಹೂಡುವ ಮೂಲಕ ಕನ್ನಡ ಭಾಷೆಯನ್ನು ಬೆಳೆಸುವಲ್ಲಿ ಮು೦ದಾಗುತ್ತವೆಯೇ ?

.............................................................................................
ಮುಕು೦ದಾ ಗ೦ಗೂರ್.
೧೨-೦೩-೨೦೧೧

Anonymous ಅಂತಾರೆ...

@ vivek

ಇದ್ದಲ್ಲೇ ಇರೋಣವೇ? ತಿದ್ಕೊಂಡು ಮುಂದೆ ಹೋಗೋಣವೇ?

ಕನ್ನಡನಾಡಲ್ಲಿ ಇಂದು ಇವರು ಹೇಳುತ್ತಿರುವ ಮಿತಿಗಳು ಇರುವುದೇ ದಿಟವಾದಲ್ಲಿ ನಾಳೆಗೆ ಇವರು ನೀಡುತ್ತಿರುವ ಪರಿಹಾರ ಕನ್ನಡಿಗರ ಏಳಿಗೆಗೆ ಮಾರಕವೋ ಪೂರಕವೋ ನಿಜಕ್ಕೂ ಚರ್ಚೆಯಾಗಬೇಕಾಗಿದೆ. ಇಷ್ಟಕ್ಕೂ ನಮ್ಮ ಮಕ್ಕಳಿಗೆ ಇಂಗ್ಲೀಷ್ ಭಾಷೇನಾ ಕಲಿಸಕ್ಕೆ ಯಾರು ಬೇಡಾ ಅಂದಿದಾರೆ? ಗಣಿತ, ವಿಜ್ಞಾನ, ಸಮಾಜಗಳನ್ನೂ ಇಂಗ್ಲೀಷಲ್ಲಿ ಕಲಿಸಬೇಕಾ? ಹಾಗೆ ಕಲಿತು ನಮ್ಮ ಮಕ್ಕಳು ನಿಜಕ್ಕೂ ಬುದ್ಧಿವಂತರಾಗ್ತಾರಾ? ಕನ್ನಡದ ಮಕ್ಕಳನ್ನು ಎಳೆವೆಯಿಂದಲೇ ಕನ್ನಡದಿಂದ ಬೇರೆ ಮಾಡಿದರೆ ಅವಕ್ಕೆಂಥಾ ಅಡಿಪಾಯ ಸಿಕ್ಕೀತು ಗುರೂ? ನಾಳಿನ ವಿಶ್ವವು, ಜ್ಞಾನಾಧಾರಿತ ಪೈಪೋಟಿಯ ವಿಶ್ವವಾಗುತ್ತದೆಯೆಂಬ ಸನ್ನಿವೇಶದಲ್ಲಿ ನಮ್ಮ ಮುಂದಿನ ಪೀಳಿಗೆ ಅದಕ್ಕೆ ಸಜ್ಜಾಗುವುದೆಂತು? ನಾಳಿನ ಜ್ಞಾನಾಧಾರಿತ ಉದ್ದಿಮೆಗಳ ಮೂಲಕ ಸಾಧಿಸುವ ಏಳಿಗೆಗೂ ಇಂಗ್ಲೀಷ್ ಮಾಧ್ಯಮವೇ ದಾರಿಯೆಂದು ನಾರಾಯಣ ಮೂರ್ತಿಗಳು ಹೇಳುವರೇನು? ಅಥವಾ ನಮಗೆ ಜ್ಞಾನಾಧಾರಿತ ಏಳಿಗೆ ಬೇಕಿಲ್ಲ ಅನ್ನುವುದಾದರೆ ಕನ್ನಡ ನಾಡಿನ ತಾತ್ಕಾಲಿಕ ಏಳಿಗೆಯತ್ತ ಮಾತ್ರವೇ ಇವರ ಚಿಂತನೆಗಳು ನಿಂತಂತಾಗುವುದಿಲ್ಲವೇ? ಇಂದು ಕನ್ನಡದಲ್ಲಿ ಜ್ಞಾನ ವಿಜ್ಞಾನಗಳು ಇನ್ನೂ ಎಳವೆಯಲ್ಲಿವೆ. ಹಾಗಾದರೆ ಈಗಿನ ಕಲಿಕೆಯ ಮಟ್ಟವನ್ನು ಮೇಲೆ ತರುವ ಯೋಚನೆ ಮಾಡುವುದು ಬಿಟ್ಟು ಈಗಿರುವುದನ್ನಷ್ಟೇ
ಬಳಸಿಕೊಳ್ಳುತ್ತಾ ಇಂಗ್ಲೀಷ್ ಮಾತಾಡಬಲ್ಲ, ಕಾಲ್ ಸೆಂಟರ್ ಮಟ್ಟದ ಪೀಳಿಗೆಯನ್ನೇ ನಾಳೆಗೂ ಹುಟ್ಟು ಹಾಕುವುದು ತರವೋ? ಸಮ್ಮೇಳನದಲ್ಲಿ ಡಾ. ಅನಂತಮೂರ್ತಿಯವರು ಆಡಿದ ಮುನ್ನಡೆಯ ಮಾತುಗಳು ನಮ್ಮವರ ಕಣ್ತೆರೆಸೀತೆ?

ಸಿದ್ದರಾಜು ವಳಗೆರೆಹಳ್ಳಿ ಬೋರೇಗೌಡ ಅಂತಾರೆ...

ಇಂಗ್ಲೀಶ್ ಮಾದ್ಯಮದಲ್ ಓದೋದ್ರಿಂದ ಏರ್ಡ್ ತರದ್ ನಷ್ಟ.
೧. ಅರ್ದಮ್ಬರ್ದ ಅರಿವು.
೨. ಮೂರೇ ತಲೆಮಾರ್‌ನಲ್ಲಿ ಕನ್ನಡದ್ ಸಾವು.

ಕನ್ನಡ ಸಾಯುವ ಬಗೆ:
ಮೊದಲು: ಕೆರೆ ಮಾಲೀಕನಿಗೆ ದಂಡ ಕಟ್ಟಬೇಕು.
ನಂತರ: ಕೆರೆ ಓನರ್ಗೆ ದಂಡ ಕಟ್ಟಬೇಕು.
ಆನಂತರ: ಕೆರೆ ಓನರ್ಗೆ ಫೈನ್ ಕಟ್ಟಬೇಕು.
ತದನಂತರ: ಲೇಕ್ ಓನರ್ಗೆ ಫೈನ್ ಕಟ್ಟಬೇಕು.
ಈಗ: ಲೇಕ್ ಓನರ್ಗೆ..ಅದು.. ಐ ಹ್ಯಾವ್ ಟು ಪೇ ಫೈನ್..
ಕೊನೆಗೆ: ಐ ಹ್ಯಾವ್ ಟು ಪೇ ಫೈನ್ ಟು ದಿ ಲೇಕ್ ಓನರ್.
ಪ್ರಶ್ನೆ: ಮೊದಲಿನಿಂದ ಕೊನೆಗೆ ಎಸ್ಟು ಸಮಯ.
ಉತ್ರ: ಯುನೆಸ್ಕೋದ, ಇತ್ತೀಚೆಗೆ ಸತ್ತಿರುವ ಭಾಷೆಗಳ ಅದಾರದ ಮೇಲೆ, ಅಂದಾಜು ೧೦೦ ವರ್ಷ.

ಒಂದ್ ದಿನ ನಾವು ಇಂಗ್ಲೀಶ್ ಮಾದ್ಯಮ್ದಲ್ ಓದಿ ಸಮ್ಪೊರ್ಣವಾದ್ ಅರಿವು ಪಡೆದ್ಕೊಬೋದು. ಅದು ನಾವೆಲ್ಲ ಸಮ್ಪೂರ್ಣವಾಗಿ ಇಂಗ್ಲೀಶ್ರು ಆದ್ ಮೇಲೆ. ಮೂರು ನಾಲ್ಕು ತಲೆಮಾರ್ ಕಾಲ ಸೀಮಿತ್ವಾದ ಅರಿವು ಪಾಡ್‌ಕೊಳ್ಳೋ ಜನಾಂಗ ಸುದಾರಿಸಿಕೊಂಡು ಮುನ್ಚೂಣಿಗ್ ಬರೋದು ಅಸಾದ್ಯ. ಕನ್ನಡಿಗರ ಹಾಗೆ ಕಾಣೊ ಎಂಗ್ಲೀಷರಾಗಿ, ಎರಡನೆ ದರ್ಜೆ ಮನುಷ್ಯರಾಗಿ ಹುಳ್ಕೊತೀವಿ. ಇದಕ್ಕಾಗಿ ನಂ ಜೀವನದ್ ಪದ್ದತಿಯನ್ನೇ ಬಲಿ ಕೊಡೋದು ಮುಟ್ಟಾಳ್ತನ. ಸಂಪೂರ್ಣ ವಿದ್ಯಾಬ್ಯಾಸ ಕನ್ನಡದಲ್ಲಿ ಆದರಷ್ಟೇ ಕನ್ನಡಿಗನಿಗೆ ಮುಕ್ತಿ. ಅನ್ಯತಾ ಶರಣಮ್ ನಾಸ್ತಿ. ಅದೂ ತಕ್ಷಣದಲ್ಲಿ ಆಗ್ಬೇಕು. ಕಾಲ ಮೀರೋಗ್ತಾ ಇದೆ.

Anonymous ಅಂತಾರೆ...

ನಾರಾಯಣ ಮೂರ್ತಿ ಅಂತೋರು ಹೆಚ್ಚು ಹೆಚ್ಚು ನಮಗೆ ಬೇಕು.

ನಮ್ಮದು ಬಡದೇಶ. ಹೊಟ್ಟೆ ಬಟ್ಟೆಗೆ ಮಂದಿಯ ಬಳಿ ರೊಕ್ಕ ಇಲ್ಲ. ಇನ್ನು ಅವರಗೆ ನುಡಿ ಉಳಿಸಿ, ಕನ್ನಡ ಉಳಿಸಿ ಅಂತ ಹೋಗಿ ಟಮಟೆ ಹೊಡೆದರೆ ಅದು ತಕ್ಕದ್ದಲ್ಲ.. ಮೊದಲು ನಮ್ಮ ನಾಡಿನ ಹೆಚ್ಚು ಮಂದಿ ಹೊಟ್ಟೆ ಬಟ್ಟೆ ಮನೆ-ಮಟ ಚನ್ನಾಗಿ ಮಾಡಿಕೊಳ್ಳಬೇಕು. ಆಮೇಲೆ ಮಿಕ್ಕಿದ್ದು.

ಇಂಗ್ಲೀಶ್ ಕಲಿತು ಎಶ್ಟೋ ಕೆಳವರ್ಗದ ಮಂದಿ 'ಬಿಡುಗಡೆ' ಕಂಡುಕೊಂಡಿದ್ದಾರೆ. ಸಂಸ್ಕೃತಿ ಅದೂ ಇದೂ ಎಂದು ಉದ್ದುದ್ದ ಬಾಶಣ ಬಿಗೋರು ಇವರಿಗೆಲ್ಲ ಏನು ಮಾಡಿದ್ದಾರೆ? ಹಸಿವಿನಿಂದ ಮಂದಿ ಸಾಯೋದಕ್ಕಿಂತ, ಕನ್ನಡ ಸತ್ತರೇ ಸಾಯಲಿ! ಕನ್ನಡ ಮಾತಾಡದೇ ಹೋದರೇ ಮಂದಿ ಏನ್ ಸಾಯೋಲ್ಲ.. ಅದೇ ಹೊಟ್ಟೆಗೆ ಕೂಳು ಸಿಗದಿದ್ದರೆ ಸಾಯ್ತಾರೆ!

ಇನ್ನು ಕನ್ನಡ 'ಜ್ಞಾನ' ಅದು ಯಾರ ಕನ್ನಡದಲ್ಲಿ ಬರೆಯೋದೋ? ಸಂಸ್ಕೃತಮಯವಾಗಿ ಬರೆದು ಬರೀ ಮೇಲುವರ್ಗಕ್ಕೆ ಅನುಕೂಲ ಮಾಡಿಕೊಟ್ಟಿರುವ 'ವೈಜ್ನಾನಿಕ ಲೇಖನ'ಗಳು.

ಇನ್ನು ಕನ್ನಡಿಗರ ತೆರೆಗೆ ಹಣದಲ್ಲಿ 'ಸಂಸ್ಕೃತ ಸಮ್ಮೇಳನಕ್ಕೂ' ಕಪ್ಪ! ಅದೇ ಯಾಕೆ ಕನ್ನಡ ನಾಡಿನ ಲಕ್ಷಲಕ್ಷ ಮಂದಿ ಕೆಲಸ ಕೊಟ್ಟು ಹೊರನಾಡಿಗೂ ಹೋಗುವಂತೆ ಮಾಡಿರುವ ಇಂಗ್ಲೀಶ್ ಕುರಿತು 'ಇಂಗ್ಲೀಶ್ ಸಮ್ಮೇಳನ' ಮಾಡಬಾರದು? ಸರಕಾರ ಏನೇ ಹೇಳಿಕೊಳ್ಳಲಿ, ಚನ್ನಾಗಿ ಇಂಗ್ಲೀಶ್ ಕಲಿತು ಹೊಟ್ಟೆ ಪಾಡು ನೋಡಿಕೊಳ್ಳೋದೇ ಈ ದೇಶದಲ್ಲಿ ಜಾಣತನ.

-ಒಬ್ಬ ಕನ್ನಡದ ಹಳ್ಳಿಗ

ಸಿದ್ದರಾಜು ವಳಗೆರೆಹಳ್ಳಿ ಬೋರೇಗೌಡ ಅಂತಾರೆ...

ರೀ ಕನ್ನಡದ ಹಳ್ಲಿಗ್ರೆ, ನಮ್ಮದು ಬಡದೇಶ ನಿಜ, ಹಲವಾರು ಮಂದಿಗೆ ಊಟಕ್ಕೂ ಕಷ್ಟ ನಿಜ. ಆದ್ರೆ ಅವ್ರತ್ರ ಯಾರೂ ಹೋಗಿ ಕನ್ನಡ ಉಳ್ಸಿ ಅಂತ ತಮಟೆ ಹೊಡೀತಿಲ್ಲ. ಕನ್ನಡ ಉಳ್ಸಿ ಅಂತ ತಮಟೆ ಹೊಡೀತಿರೋದು ವಿದ್ಯಾವಂತರು, ಬುದ್ದಿವಂತರು ಅನ್ನಿಸ್ಕೊಂಡಿದ್ರೂ, ಇಂಗ್ಲೀಶ್ನಲ್ಲಿ ಕಲೀದೇ ಇಟ್ಟುಣ್ಣೊಕ್ ಆಗೋಲ್ಲ ಅಂದ್ಕೊಂಡವ್ರಲ್ಲ ಅವ್ರತ್ರ. ಕನ್ನಡ ಉಳ್ಸಿ ಅನ್ನೋದಕ್ಕೆ ಇಟ್ ಉಟ್ಟಿಸೋಕೆ ಕನ್ನಡದ ದಾರಿನೆ ಸುಲಭ ಅನ್ನೋದು ಕಾರಣನೆ ವರ್ತು ಒಂದ್ ಭಾಷೆ ಸಾಯ್ದೇ ಇರ್‍ಲಿ ಅನ್ನೋದಲ್ಲ. ನಮಗ್ ಸ್ವಾತತ್ರ ಬಂದ್ ಕಾಲದಲ್ಲಿ ಚೀನಾ ದೇಶದಲ್ಲೂ ನಮ್ಮಷ್ಟೇ ಅಬ್ಬೇಪಾರಿಗಳಿದ್ರು. ಬರೀ ಮೂವತ್ ವರ್ಷುಧ್ ಹಿಂದೆ ದಕ್ಶಿಣ ಕೊರಿಯಾ ದೇಶ ನಮ್ಮ ಈಗಿನ್ ಬಿಹಾರ ರಾಜ್ಯುದಂಗ್ ಇತ್ತು. ಅವ್ರೆಲ್ಲಾ ಅವ್ರವ್ರ್ ಆಡು ಮಾತಲ್ಲೇ ವಿದ್ಯ ಕಲುತ್ರು. ಇವತ್ತು ಅವ್ರೊಟ್ಟೆ ತುಂಬಿದ್ದದೋ ನಮ್ಮೊಟ್ಟೆ ತುಂಬಿದ್ದುದೋ?
ನಾನೂ ಒಬ್ಬ ಕನ್ನಡದ ಹಳ್ಳಿಗ. ಕನ್ನಡ ಮಾದ್ಯಮದಲ್ಲೇ ಓದಿದವನು. ವಿಜ್ಞಾನ ಓದೋಕೆ ಇಂಗ್ಲೀಶ್ ಮಾದ್ಯಮಕ್ಕೆ ಬರಬೇಕಾಯ್ತು. ಕನ್ನಡದಲ್ಲೇ ವಿಜ್ಞಾನ ವಿದ್ಯಾಬ್ಯಾಸಕ್ಕೆ ಅವ್ಕಾಸ ಇದ್ದಿದ್ದ್ರೆ ನಾನು ಬಹಳ ಸರಾಗವಾಗಿ ಕಲೀತಿದ್ದೆ. ಇಂಗ್ಲೀಶ್ ಮಾದ್ಯಮಕ್ಕೆ ಒಂದುಕೊಳ್ಳದೇ ಎಷ್ಟೋ ನಮ್ಮೂರಿನ ಬುದ್ದಿವಂತರು ವಿದ್ಯೆ ಕಲೀಕೆನೇ ನಿಲ್ಲಿಸ್‌ಬಿಟ್ಟರು. ಆವ್ರು ಹಾಗಾಗೋಕೆ ಕನ್ನಡ ಮಾದ್ಯಮದಲ್ಲಿ ಕಲ್ತಿದ್ದಲ್ಲ ಕಾರಣ. ಕನ್ನಡದ ಹಿರಿಯರು, ತಿಳಿದವ್ರು ಅನ್ನಿಸ್ಕೊಂಡಿದ್ದ ಮುಟ್ಟಾಳ್ರು ವಿಜ್ಞಾನನ ಕನ್ನಡದಲ್ಲಿ ತರದೇಹೋಗಿದ್ದು. ಕನ್ನಡನ ಸಂಸ್ಕೃತ ಆವರಿಸ್ಕೊಂಡಿದೆ, ಕನ್ನಡ ಕಷ್ಟದ ಬಾಷೆ ಆಗೋಗ್ತಾ ಇದೆ ನಿಜ. ಅದನ್ನ ಕನ್ನಡದ್ ಬುದ್ದಿವಂತರು ಸರಿಪಡಿಸ್‌ಬೇಕೇ ವರ್ತು ಸತ್ರೆ ಸಾಯ್ಲಿ ಅಂತ ಕೈ ಎತ್ತುದಲ್ಲ. ಹೆತ್ತ ತಾಯಿಗೆ ಸೋಂಕು ತಗುಲಿದ್ರೆ ಇನ್ಗೇ ಮಾಡವೆ?
ನೀವೆಳುವಂಗೆ ಇಂಗ್ಲೀಶ್ ಇಟ್ ಆಕ್ತುದೆ ಅನ್ನೊದಾಗಿದ್ರೆ, ಅದ್ನಾರುವರೆ ಸಾವ್ರ ಬ್ರಿಟಿಷರನ್ನ ಒಡ್ಸೊ ಅವಸ್ಯಕತೆ ಇರ್ಲಿಲ್ಲ. ಅವರಿದ್ದಿದ್ರೆ, ಈಗಿನ ಗೊದಿ ಬಣ್ಣುದ್ ಎಂಗ್ಲೀಷರಿಗಿಂತ ಚೆನ್ನಾಗೇ ಇಂಗ್ಲೀಶ್ ಕಲ್ಸೀರೋರು. ಆಗ ನಮ್ಮ ಮೂರ್ತಿಗಳು ಇಂಗ್ಲೀಶ್ ಕಲ್ತು, ಬ್ರಿಟಿಷ್ ಸರ್ಕಾದಲ್ಲಿ ಗುಮಾಸ್ತ ಆಗಿರೋರು. ಇಂಗ್ಲೀಶ್ ಕಲ್ತಿದ್ದರಿಂದ ಇಟ್ ಉಣ್ತಾ ಅವ್ನಿ ಅಂತ ಯಡ್ಯೂರಪ್ಪನ್ಗೆ ಹೆಳಿರೊರು.
ಗಾಂದಿ ಹೇಳಿದ್ರು, ಸ್ವರಾಜ್ಯ ಅನ್ನೋದು ನಮ್ಮನ್ನ ನಾವು ಆಳ್ವಿಕೆ ಮಾಡ್‌ಕೊಳ್ಳೋದು, ಸಮ್ಪೂರ್ಣ ಸ್ವರಾಜ್ಯ ಅಂದ್ರೆ ಆಳ್ವಿಕೆ ಜೊತೆಗೆ ನಮ್ಮ ನಡೆ-ನುಡಿನ ತಿದ್ಕೊನ್ಡು, ಉಳ್ಸಿ, ಬೆಳ್ಸೊದು ಅಂತ. ನಮಗಿನ್ನೂ ಸಮ್ಪೂರ್ಣ ಸ್ವರಾಜ್ಯ ಬಂದಿಲ್ಲ. ಬ್ರಿಟಿಷರು ನಮ್ಮ ತಲೆಗೆ ಕೊಟ್ಟಿರೋ ಗುಲಾಮಗಿರಿ ಪೆಟ್ಟು ಬೋ ಬಲವಾದುದ್ದು. ಯಾವಾಗ್ ಸುದಾರ್ಸಿಕೊಳ್ತೀವೊ?

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails