೩. ಭಾರತದ ಭಾಷಾನೀತಿಯ ಬೆನ್ನೆಲುಬು: ಖೇರ್ ಆಯೋಗದ ವರದಿ!

೨೦೦೪ರ ಸಮಿತಿಯ ವರದಿಯ ಮೊದಲ ಭಾಗದಲ್ಲೇ ಹಿಂದಿಯನ್ನು ರಾಷ್ಟ್ರಭಾಷೆಯಾಗಿಸಲು ಮಾಡಿದ ಪ್ರಯತ್ನಗಳ ಬಗ್ಗೆ ಮಾತನ್ನಾಡಲಾಗಿದೆ. ಭಾರತೀಯರು ತಮ್ಮ ರಾಷ್ಟ್ರನಾಯಕರೆಂದು ಗೌರವಿಸುವ ಹಲವಾರು ಹಿರಿಯರು ಹಿಂದೀ ಪರವಾಗಿ ನೀಡಿರುವ ಹೇಳಿಕೆಗಳನ್ನು ನೀಡಲಾಗಿದೆ. ವಿಶೇಷವಾಗಿ ದಕ್ಷಿಣ ಭಾರತದ ಕೆಲವು ರಾಜಾಜಿಯವರಂತಹ ನಾಯಕರುಗಳ ಮಾತನ್ನು ಇಲ್ಲಿ ಎತ್ತಿ ತೋರಿಸಲಾಗಿದೆ. ಹಿಂದೀ ಬೇಡವೆಂದವರೊಬ್ಬರ ಬಗ್ಗೆಯೂ, ಹಿಂದೀ ಹೇರಿಕೆ ವಿರೋಧಿಗಳ ನಿಲುವಿನ ಬಗ್ಗೆಯೂ ತುಟಿಪಿಟಕ್ ಇಲ್ಲ. ಈ ವರದಿಯಲ್ಲಿ ಮುಂದುವರೆಯುತ್ತಾ ಹಿಂದೀ ಭಾಷೆಯು ಭಾರತದ ಏಕೈಕ ಆಡಳಿತ ಭಾಷೆಯಾಗಬೇಕೆನ್ನುವ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಈ ವರದಿಯ ಕೆಲ ಮುಖ್ಯವಾದ ಅಂಶಗಳತ್ತ ಕಣ್ಣು ಹಾಯಿಸಿದರೆ ಮೊದಲಿಗೆ ಕಾಣುವುದು ಹಿಂದಿಗೇಕೆ ಪ್ರಾಮುಖ್ಯ ಎಂದು ಸಮರ್ಥನೆಗಳು. ಸಂವಿಧಾನದ ೩೪೪ನೇ ಕಲಮಿನ ಆಶಯ. ರಾಷ್ಟ್ರಪತಿಗಳು ಆ ಆಶಯದ ಈಡೇರಿಕೆಗೆ ಕೈಗೊಂಡ ಕ್ರಮಗಳು. ಇವುಗಳ ಹಿನ್ನೆಲೆಯಲ್ಲಿ ನೇಮಕವಾದ "ಅಫಿಶಿಯಲ್ ಲಾಂಗ್ವೇಜ್ ಇಲಾಖೆ". ಅದರ ಹಿನ್ನೆಲೆಯಲ್ಲಿ ರಚಿಸಲಾದ ಆಕ್ಟ್. ಆಮೇಲಿನ ಸಂಸತ್ ಸಮಿತಿಗಳು. ಅವುಗಳ ಕಾರ್ಯವ್ಯಾಪ್ತಿ.. ನೀಡಿದ ಶಿಫಾರಸ್ಸುಗಳು, ಪ್ರೆಸಿಡೆನ್ಶಿಯಲ್ ಆರ್ಡರ್‌ಗಳು... ಕೊನೆಗೆ ಮತ್ತಷ್ಟು ಶಿಫಾರಸ್ಸುಗಳು...

ಬಾಲಗಂಗಾಧರ ಖೇರ್ ವರದಿ

೧೯೫೫ರಲ್ಲಿ ರಾಷ್ಟ್ರಪತಿಗಳು ಸಂವಿಧಾನದ ೩೪೪ನೇ ವಿಧಿಯ ಅನ್ವಯವಾಗಿ ಬಾಲಗಂಗಾಧರ ಖೇರ್ ಎಂಬುವವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚನೆ ಮಾಡಿದರು. ಈ ಸಮಿತಿಯು ಹಿಂದಿಯನ್ನು ಭಾರತದ ಆಡಳಿತಭಾಷೆಯಾಗಿ ಹೇಗೆ ಜಾರಿ ಮಾಡಬೇಕೆನ್ನುವ ಬಗ್ಗೆ ಶಿಫಾರಸ್ಸು ಮಾಡುವ ಉದ್ದೇಶದಿಂದ ನೇಮಕವಾಯ್ತು. ಮುಂದೆ ಸಂಸತ್ತಿನಲ್ಲಿ ವಿಸ್ತೃತವಾಗಿ ಚರ್ಚೆಯಾದ ಈ ವರದಿಯೇ ಭಾರತದ ಭಾಷಾನೀತಿಗೆ, ಆಡಳಿತ ಭಾಷಾ ಕಾಯ್ದೆಗಳಿಗೆ ಪ್ರೇರಕವಾಯಿತು. ಕೇಂದ್ರಸರ್ಕಾರ ನೇಮಿಸಿ ಮಾನ್ಯ ಮಾಡಿದ್ದ ಖೇರ್ ಆಯೋಗದ ಶಿಫಾರಸ್ಸುಗಳು ಕುತೂಹಲಕಾರಿಯಾಗಿವೆ. ಇದು ಹಿಂದೀವಾದಿಗಳ ಮನಸ್ಥಿತಿಯನ್ನು ಸ್ಪಷ್ಟವಾಗಿ ತಿಳಿಸುತ್ತಲಿದೆ.

ಖೇರ್ ವರದಿಯಲ್ಲಿನ ಕುತೂಹಲದ ವಿಷಯಗಳು :

೧. ಭಾರತದ ಪ್ರಜಾಪ್ರಭುತ್ವದ ಮಾದರಿಯನ್ನು ಪರಿಗಣಿಸಿದರೆ ಇಂಗ್ಲೀಶನ್ನು ಅಖಿಲ ಭಾರತ ಮಟ್ಟದ ಸಂಪರ್ಕ ಭಾಷೆಯೆಂದು ಒಪ್ಪಲಾಗುವುದಿಲ್ಲ. ಭಾರತೀಯ ಭಾಷೆಗಳಲ್ಲಿ ಬೇರುಮಟ್ಟದ ಕಲಿಕೆಯನ್ನು ಏರ್ಪಡಿಸಬೇಕು. ಒಂದು ವಿದೇಶಿ ಭಾಷೆಯನ್ನು ದೇಶದ ಸಾರ್ವಜನಿಕ ಕಾರ್ಯಗಳಲ್ಲಿಯೂ, ದೈನಂದಿನ ಆಡಳಿತದಲ್ಲಿಯೂ ಬಳಸಲಾಗುವುದಿಲ್ಲ.
೨. ಹೆಚ್ಚು ಜನರು ಮಾತಾಡುತ್ತಿರುವ ಹಿಂದಿಯು ಸ್ಪಷ್ಟವಾಗಿ ಭಾರತದ ಭಾಷಾ ಮಾಧ್ಯಮವಾಗಬೇಕು.
೩. ಭಾರತದ ಪ್ರತಿಯೊಬ್ಬ ಪ್ರಜೆಗೂ ೧೪ ವರ್ಷದವರೆಗೆ ಕಡ್ಡಾಯವಾಗಿ ಹಿಂದಿಯನ್ನು ಕಲಿಸಬೇಕು.
೪. ಹಿಂದಿಯನ್ನು ಮಾಧ್ಯಮಿಕ ಹಂತದವರೆಗೆ ಭಾರತದ ಎಲ್ಲೆಡೆ ಕಲಿಸುವುದು ಕಡ್ಡಾಯ ಮತ್ತು ಹಿಂದೀ ಭಾಷೆಯ ಮಕ್ಕಳಿಗೆ ದಕ್ಷಿಣ ಭಾರತದ ಯಾವುದಾದರೊಂದು ಭಾಷೆಯನ್ನು ಕಡ್ಡಾಯವಾಗಿ ಕಲಿಯುವ ಅಗತ್ಯವಿಲ್ಲ.
೫. ದೇಶದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಹಿಂದೀ ಮಾಧ್ಯಮದಲ್ಲಿ ಪರೀಕ್ಷೆ ಬರೆಯಲು ಅವಕಾಶ/ ಅನುಕೂಲ ಮಾಡಿಕೊಡಲೇಬೇಕು.
೬. ವಿಜ್ಞಾನ ಮತ್ತು ತಂತ್ರಜ್ಞಾನ ಕಲಿಸುವಾಗ ಇರುವ ವಿದ್ಯಾರ್ಥಿಗಳೆಲ್ಲರೂ ಒಂದೇ ಭಾಷೆಯವರಾಗಿದ್ದರೆ ಮಾತ್ರಾ ಅವರ ನುಡಿಯಲ್ಲಿ ಕಲಿಸಬಹುದು. ಇನ್ನೊಂದು ಭಾಷೆಯ ವಿದ್ಯಾರ್ಥಿ ಅವರೊಟ್ಟಿಗೆ ಕಲಿಯುತ್ತಿದ್ದಲ್ಲಿ ಕಡ್ಡಾಯವಾಗಿ ಹಿಂದಿ ಮಾಧ್ಯಮದಲ್ಲೇ ಬೋಧಿಸತಕ್ಕದ್ದು.
೭. ಕೇಂದ್ರಸರ್ಕಾರದ ಕೆಲಸಗಾರರು ಇಂತಿಷ್ಟೇ ಸಮಯದಲ್ಲಿ ಹಿಂದಿಯನ್ನು ಕಲಿಯತಕ್ಕದ್ದು, ತಪ್ಪಿದರೆ ದಂಡ ತೆರಬೇಕೆಂಬ ಕಟ್ಟುನಿಟ್ಟಿನ ಕಾಯ್ದೆಯನ್ನು ಜಾರಿಮಾಡತಕ್ಕದ್ದು
೮. ಸಾರ್ವಜನಿಕರೊಡನೆ ವ್ಯವಹರಿಸುವಾಗ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಬಹುದಾದರೂ ಕಚೇರಿಯ ಒಳಗಿನ ಎಲ್ಲಾ ವ್ಯವಹಾರಗಳೂ ಹಿಂದೀ ಭಾಷೆಯಲ್ಲೇ ನಡೆಯತಕ್ಕದ್ದು.
೯. ರಾಜ್ಯ ಮತ್ತು ಕೇಂದ್ರಸರ್ಕಾರಗಳ ನೌಕರರಿಗೆ ಒಂದು ಹಂತದ ಹಿಂದೀ ಜ್ಞಾನವು ಕಡ್ಡಾಯ ಮಾಡತಕ್ಕದ್ದು. ಮತ್ತು ಇದನ್ನು ಉತ್ತೇಜಿಸಲು ಹೆಚ್ಚು ಹೆಚ್ಚು ಬಹುಮಾನ ಕೊಡುವುದು.
೧೦. ಎಲ್ಲಾ ಸರ್ಕಾರಿ ಆದೇಶಗಳೂ ಹಿಂದಿಯಲ್ಲಿರತಕ್ಕದ್ದು ಮತ್ತು ಸೌಕರ್ಯಕ್ಕಾಗಿ ಸ್ಥಳೀಯಭಾಷೆಗೆ ತರ್ಜುಮೆ ಮಾಡಬಹುದು.
೧೧. ಈ ದೇಶದಲ್ಲಿ ನ್ಯಾಯಾಲಯದ ಆದೇಶಗಳು ಹಿಂದಿಯಲ್ಲೇ ಇರತಕ್ಕದ್ದು. ಆದೇಶಗಳನ್ನು ಸ್ಥಳೀಯ ಭಾಷೆಗೆ, ಅಗತ್ಯವಿದ್ದಲ್ಲಿ ಸುಪ್ರಿಂಕೋರ್ಟ್ ಮತ್ತು ಹೈಕೋರ್ಟಿನ ನಡಾವಳಿಗಳು, ದಾಖಲೆಗಳೆಲ್ಲದರ ಸಮೇತವಾಗಿ ತರ್ಜುಮೆ ಮಾಡಿ ಲಗತ್ತಿಸಬೇಕಾಗಿರುತ್ತದೆ.
೧೨. ಭಾರತ ಸರ್ಕಾರದ ಸೇವೆಯಲ್ಲಿನ ಯಾವುದೇ ನೌಕರಿಗಾದರೂ ಹಿಂದೀ ಭಾಷೆಯಲ್ಲಿನ ಪರಿಣಿತಿಯು ಕಡ್ಡಾಯವಾಗಿ ಇರತಕ್ಕದ್ದು. ಇದಕ್ಕಾಗಿ ಕಡ್ಡಾಯವಾಗಿ ಒಂದು ಪ್ರಶ್ನೆಪತ್ರಿಕೆಯನ್ನು ಹಿಂದೀ ಭಾಷೆಯಲ್ಲಿಡಬೇಕು. ಇದು ಹಿಂದಿಯೇತರರಿಗೆ ತೊಡಕಾಗದಂತೆ ಸರಳವಾಗಿರಬೇಕು.
ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಇದ್ದ ಸಾಕ್ಷರತೆಯ ಪ್ರಮಾಣ ಕೇವಲ ೧೨% ಅಂತೆ. ಆ ಕಾಲದಲ್ಲಿ ಉಳಿದ ೮೮% ಜನಕ್ಕೆ ತಮ್ಮ ನುಡಿಯೇ ಓದಲು ಬರೆಯಲು ಬರುತ್ತಿರಲಿಲ್ಲ. ಸಾಕ್ಷರತೆಯ ಪ್ರಮಾಣವೇ ಅತ್ಯಲ್ಪವಿದ್ದ ಕಾಲದಲ್ಲಿ “ತನ್ನ ತಾಯ್ನುಡಿಯನ್ನೇ ಬರೆಯಲು ಓದಲು ಆಗದವರೇ ಹೆಚ್ಚಿರುವ ನಾಡಿನಲ್ಲಿ ಒಬ್ಬನು ತನ್ನದಲ್ಲದ ಹಿಂದಿಯನ್ನು ಹೇಗೆ ಕಲಿತಾನು?” ಎನ್ನುವ ಸಹಾನುಭೂತಿಯೇ ಭಾರತ ಸರ್ಕಾರಕ್ಕಿರಲಿಲ್ಲ ಎಂದು ಗಮನಿಸಿರಿ. ಇಡೀ ವರದಿಯಲ್ಲಿ ಕಾಣುವ ವಸಾಹತುಶಾಹಿ ಮನಸ್ಥಿತಿಯನ್ನು ಗಮನಿಸಬೇಕು. ಭಾರತ ಅಂದ್ರೆ ಹಿಂದಿ. ಇಲ್ಲಿ ಹಿಂದೀ ತಿಳಿಯದೇ ಇರೋರು ಇರೋದು ದೇಶದ ಒಗ್ಗಟ್ಟಿಗೆ ಮಾರಕ ಮತ್ತು ಅದೊಂದು ದೊಡ್ಡ ಕಿರಿಕಿರಿ. ಎಲ್ಲ ಹಿಂದಿಯೇತರರೂ ಚಕಚಕಾ ಅಂತಾ ಹಿಂದೀನಾ ಕಲೀಲೇಬೇಕು. ಇಲ್ಲಾ ಅಂದ್ರೆ ನಿಮಗೆ ಕೆಲಸ ಕೊಡಲ್ಲ. ನಿಮ್ಮ ವಿಶ್ವವಿದ್ಯಾಲಯಗಳಲ್ಲಿ ಹಿಂದೀಲಿ ಕಲಿಯೋಕೆ ಅವಕಾಶ ಇರಲೇಬೇಕು. ಹೀಗೆಲ್ಲಾ ಶಿಫಾರಸ್ಸುಗಳೂ, ಕಾಯ್ದೆಗಳೂ ಆಗುತ್ತಿರುವುದು ಜನರಿಂದ, ಜನರಿಗಾಗಿ ಆಡಳಿತವೆನ್ನುವ ಒಳ್ಳೆಯ ಉದ್ದೇಶದಿಂದಲೇ ಎಂದರೆ ನಂಬಲಾದೀತೆ? ನಮ್ಮದಲ್ಲದ ಇಂಗ್ಲೀಶಿನಲ್ಲಿ ಆಡಳಿತ ನಡೆಸುವುದು ಅಪಮಾನಕರವೆಂದು ಒಕ್ಕೊರಳಿನಿಂದ ತೀರ್ಮಾನಿಸುವ ಭಾರತ ಸರ್ಕಾರ ತನ್ನದಲ್ಲದ ಹಿಂದಿಯಲ್ಲಿ, ಹಿಂದಿಯೇತರರು ಆಡಳಿತ ನಡೆಸಬೇಕೆಂದು ನಿಬಂಧನೆ ಹೇರುವುದು ವಸಾಹತುಶಾಹಿ ಮನಸ್ಥಿತಿಯಲ್ಲವೇ?

ಭಾರತದ ಏಕತೆ ಬಯಸುವವರು, ವೈವಿಧ್ಯತೆಯನ್ನು ಶಾಪವೆಂದು ಬಗೆದು ಅಂತಹ ವೈವಿಧ್ಯತೆಯನ್ನು ಹೆಜ್ಜೆಹೆಜ್ಜೆಗೂ ಅಳಿಸಬೇಕೆಂಬ ಮನಸ್ಥಿತಿಯ ಪ್ರತಿಬಿಂಬವಾದ ಈ ಕಥೆಯ ಮುಂದಿನ ಭಾಗಗಳು ಮತ್ತಷ್ಟು ಕುತೂಹಲಕಾರಿಯಾಗಿವೆ.

(ಮುಂದುವರೆಯುವುದು…)

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails