೫. ಭಾಷಾನೀತಿ -ರಾಜ್ಯದ ಶಾಲೆಗಳೆಲ್ಲಾ ಹಿಂದೀ ಮಾಧ್ಯಮವಾಗಬೇಕಂತೆ!

ಸಂಸತ್ ಸಮಿತಿಯು ಕೇಂದ್ರಸರ್ಕಾರದ ಎಲ್ಲಾ ೪೩ ಇಲಾಖೆಗಳನ್ನೂ ಸಮೀಕ್ಷೆಗೊಳಪಡಿಸಿ, ಅಲ್ಲೆಲ್ಲಾ ಹೇಗೆ ಹಿಂದೀ ಅನುಷ್ಠಾನ ನಡೆದಿದೆ ಎನ್ನುವುದನ್ನು ಅಧ್ಯಯನ ಮಾಡಿ, ಹಲವಾರು ಶಿಫಾರಸ್ಸುಗಳನ್ನು ಸದನಕ್ಕೆ ಸಲ್ಲಿಸಿದೆ. ಈ ಬಾರಿ ನಾವು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಸೂಚಿಸಿರುವ ಬದಲಾವಣೆಗಳ ಬಗ್ಗೆ ನೋಡೋಣ. ಸಂಸತ್ ಸಮಿತಿಯು ಹಲವಾರು ಶಿಕ್ಷಣ ಸಂಸ್ಥೆಗಳನ್ನು, ಸಂಶೋಧನಾ/ ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ಹಾಗೂ ನಾನಾ ಇಲಾಖೆಗಳ ತರಬೇತಿ ಕೇಂದ್ರಗಳನ್ನು ಸಮೀಕ್ಷೆಗೆ ಒಳಪಡಿಸಿತು. ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯ, ಪೂನಾದ ಭಾರತೀಯ ರೈಲ್ ಸಿವಿಲ್ ಇಂಜಿನಿಯರಿಂಗ್ ಸಂಸ್ಥೆ, ಕೊಲ್ಕತ್ತಾದ ಸತ್ಯಜಿತ್ ರೇ ಸಿನಿಮಾ ಮತ್ತು ದೂರದರ್ಶನ ಸಂಸ್ಥೆ, ಮೊಹಾಲಿಯಲ್ಲಿನ ರಾಷ್ಟ್ರೀಯ ಔಷಧೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ರಾಷ್ಟ್ರೀಯ ಶಕ್ತಿ ತರಬೇತಿ ಸಂಸ್ಥೆ, ಕೇಂದ್ರೀಯ ಶಾಲೆ ನಡೆಸುವ ಸಿ.ಬಿ.ಎಸ್.ಇ ದೆಹಲಿ, ಜೈಸೆಲ್ಮೇರ್ ಮತ್ತು ಜೋಧ್‍ಪುರಗಳ ನವೋದಯ ಶಾಲೆಗಳನ್ನು ಸಮೀಕ್ಷೆಗೆ ಒಳಪಡಿಸಿತು. ಇವಿಷ್ಟೇ ಅಲ್ಲದೆ ರಕ್ಷಣಾ ವಿಭಾಗದ ತರಬೇತಿ ಕೇಂದ್ರಗಳು, ಆಹಾರ ಇಲಾಖೆಯ, ಕೃಷಿ ಇಲಾಖೆಯ… ಉತ್ತರ, ಪಶ್ಚಿಮ, ದಕ್ಷಿಣ, ಪೂರ್ವ ಭಾರತದ ನಾನಾ ಸಂಸ್ಥೆಗಳನ್ನು ಸಮೀಕ್ಷೆ ಮಾಡಿ ವರದಿ ಸಲ್ಲಿಸಿದೆ. ಇದರಲ್ಲಿ ಮಾಡಿರುವ ಶಿಫಾರಸ್ಸುಗಳನ್ನು ನೋಡಿ.

ಸಂಸತ್ ಸಮಿತಿಯ ಸಲಹೆಗಳ ಸಾರ:

1) A ಮತ್ತು B ವಲಯಗಳಲ್ಲಿರುವ (A ವಲಯ – ಹಿಂದೀ ತಾಯ್ನುಡಿ ಪ್ರದೇಶಗಳಾದ ಉತ್ತರಪ್ರದೇಶ, ಮಧ್ಯಪ್ರದೇಶ ಮೊದಲಾದವು, B ವಲಯ – ಹಿಂದಿಗೆ ನಂಟಿರುವ ನುಡಿಗಳ ರಾಜ್ಯಗಳಾದ ಪಂಜಾಬ್ ಥರದ ರಾಜ್ಯಗಳು, C – ಹಿಂದಿಗೆ ಚೂರೂ ಸಂಬಂಧವಿರದ ಬಾಂಗ್ಲಾ, ಕರ್ನಾಟಕ, ತಮಿಳುನಾಡು ಮೊದಲಾದ ರಾಜ್ಯಗಳು) ನವೋದಯ ಸಂಸ್ಥೆಗಳು, ಸಿ ಬಿ ಎಸ್ ಇ ಶಾಲೆಗಳು, ರಾಜ್ಯ ಸರ್ಕಾರಗಳ ಹಿಡಿತದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಕೂಡಲೇ ಹಿಂದೀ ಮಾಧ್ಯಮದಲ್ಲಿ ಶಿಕ್ಷಣವನ್ನು ಜಾರಿಗೊಳಿಸಬೇಕು. ಆಯಾ ರಾಜ್ಯದ ರಾಜ್ಯಭಾಷೆ ಮತ್ತು ಇಂಗ್ಲೀಷನ್ನು ಬೇರೆಯೇ ವಿಷಯವಾಗಿ ಕಲಿಸಬಹುದು. ನಿಗದಿತ ಕಾಲಾವಧಿಯ ನಂತರ ಪರಿಸ್ಥಿತಿಯನ್ನು ಪರಿಶೀಲಿಸಿ ಇದೇ ವ್ಯವಸ್ಥೆಯನ್ನು C ವಲಯದ ರಾಜ್ಯಗಳಲ್ಲೂ ಜಾರಿಮಾಡುವುದು.

2) ಕಾಲೇಜುಗಳಲ್ಲಿ/ ವಿಶ್ವವಿದ್ಯಾಲಯಗಳಲ್ಲಿ/ ಸಂಶೋಧನಾ ಕೇಂದ್ರಗಳಲ್ಲಿ ಶಿಕ್ಷಕರನ್ನು ನೇಮಕ ಮಾಡುವಾಗ ಅಭ್ಯರ್ಥಿಗಳು ಮೆಟ್ರಿಕ್ ಹಂತದವರೆಗೆ ಹಿಂದಿಯನ್ನು ಕಲಿತಿರಬೇಕಾದ್ದು ಕಡ್ಡಾಯ ಎನ್ನುವ ನಿಬಂಧನೆಯನ್ನು ಜಾರಿಮಾಡಬಹುದು. ಇದರಿಂದಾಗಿ ಮುಂದೆ ಹಾಗೆ ನೇಮಕವಾದವರಿಗೆ ಹಿಂದಿ ಮಾಧ್ಯಮದಲ್ಲಿ ತಮ್ಮ ವಿಷಯವನ್ನು ಬೋಧಿಸಲು ಕಷ್ಟವಾಗುವುದಿಲ್ಲ.

3) ಎಲ್ಲಾ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಕಡ್ಡಾಯವಾಗಿ ಹಿಂದಿ ವಿಭಾಗವನ್ನು ಆರಂಭಿಸುವುದು ಮತ್ತು ಅಲ್ಲಿ ಸ್ನಾತಕೋತ್ತರ ಪದವಿ ಹಂತದ ಹಿಂದಿ ಕಲಿಕೆ ಸಿಗುವ ಏರ್ಪಾಟು ಮಾಡುವುದು.

4) ರಾಷ್ಟ್ರೀಯ ಶಿಕ್ಷಣ ಯೋಜನೆಗಳಾದ ಸರ್ವಶಿಕ್ಷಾ ಅಭಯಾನದಂತಹ ಕಾರ್ಯಕ್ರಮಗಳಲ್ಲಿ ಕಲಿಕೆಯ ಅವಕಾಶವನ್ನು ಕಡ್ಡಾಯವಾಗಿ ಕೇವಲ ಹಿಂದೀ ಮಾಧ್ಯಮದಲ್ಲಿ ಮಾತ್ರವೇ ಸಿಗುವಂತೆ ಮಾಡುವುದು.

5) ವಿಶ್ವವಿದ್ಯಾಲಯಗಳ/ ತಾಂತ್ರಿಕ ಕೋರ್ಸುಗಳ/ ಸಂಶೋಧನಾ ಕೋರ್ಸುಗಳ ಪ್ರವೇಶ ಪರೀಕ್ಷೆಗಳು ಕಡ್ಡಾಯವಾಗಿ ಹಿಂದಿಯಲ್ಲೂ ನಡೆಯತಕ್ಕದ್ದು.

6) ವಿದ್ಯುನ್ಮಾನ ಮಾಧ್ಯಮಗಳಾದ ದೂರದರ್ಶನ, ರೇಡಿಯೋಗಳ ಮೂಲಕ ಪ್ರಸಾರ ಮಾಡಲಾಗುವ ಎಲ್ಲಾ ಶೈಕ್ಷಣಿಕ ಕಾರ್ಯಕ್ರಮಗಳೂ ಹಿಂದಿಯಲ್ಲಿ ಮಾತ್ರವೇ ಇರತಕ್ಕದ್ದು.

7) ವಿಜ್ಞಾನ ಮತ್ತು ತಾಂತ್ರಿಕ ಪದಕೋಶ ಆಯೋಗಗಳಂತಹ ಸಂಸ್ಥೆಗಳು ಎಲ್ಲಾ ಸಬ್ಜೆಕ್ಟುಗಳಿಗೆ ಸಂಬಂಧಿಸಿದಂತೆ ತಾವು ಹೊರತಂದಿರುವ ಹಿಂದಿ/ ಹಿಂದಿ-ಇಂಗ್ಲೀಷ್ ಪುಸ್ತಕಗಳ ಪಟ್ಟಿಯನ್ನು ಸಿದ್ಧಮಾಡತಕ್ಕದ್ದು. ಎಲ್ಲಾ ಶಾಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳು, ಸಂಶೋಧನಾ ಕೇಂದ್ರಗಳಲ್ಲಿ ಈ ಪಟ್ಟಿಯನ್ನು ಇಡತಕ್ಕದ್ದು. ಇಂತಹ ಪುಸ್ತಕಗಳ ಇರುವಿಕೆ ಬಗ್ಗೆ ನಾನಾ ಕಾರ್ಯಕ್ರಮಗಳ ಮೂಲಕ ಪ್ರಚಾರ ಮಾಡತಕ್ಕದ್ದು.

8) ಕೇಂದ್ರಸರ್ಕಾರಿ, ಸಾರ್ವಜನಿಕ ಉದ್ದಿಮೆಗಳು, ಬ್ಯಾಂಕುಗಳು ಮತ್ತು ಸಂಸ್ಥೆಗಳಲ್ಲಿ ಅತಿ ಪ್ರಮುಖವಾದ ತಾಂತ್ರಿಕ ವಿಷಯಗಳನ್ನು ಹೊರತುಪಡಿಸಿ, ಉಳಿದೆಲ್ಲಾ ತರಬೇತಿ ಕಾರ್ಯಕ್ರಮಗಳನ್ನು ಹಿಂದಿ ಮಾಧ್ಯಮದಲ್ಲಿ ಮಾತ್ರವೇ ನಡೆಸತಕ್ಕದ್ದು.

9) ಪ್ರತಿಯೊಂದು ಸಂಸ್ಥೆಯ ಮುಖ್ಯಸ್ಥರು ಸಲ್ಲಿಸುವ ಗುಟ್ಟಿನ ವಾರ್ಷಿಕ ವರದಿಯಲ್ಲಿ ತಮ್ಮ ಸಂಸ್ಥೆ ಹಿಂದಿಯನ್ನು ಜಾರಿಗೊಳಿಸಲು ಕೈಗೊಂಡ ಕ್ರಮಗಳ ಬಗ್ಗೆ ಕಡ್ಡಾಯವಾಗಿ ನಮೂದಿಸತಕ್ಕದ್ದು.

ಸಂಸತ್ ಸಮಿತಿಯ ಮನಸ್ಥಿತಿ!

ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗಳನ್ನು ಸೂಚಿಸುವ ಮೂಲಕ ಭಾರತ ಸರ್ಕಾರಕ್ಕೆ ನಿಜಕ್ಕೂ ಇರುವುದು ತನ್ನ ಪ್ರಜೆಗಳಿಗೆ ಶಿಕ್ಷಣ ಕೊಡುವುದೋ ಅಥವಾ ಹಿಂದೀ ಕಲಿಸುವುದೋ ಎನ್ನುವ ಅನುಮಾನಕ್ಕೆ ಈ ಸಲಹೆಗಳು ಎಡೆ ಮಾಡಿಕೊಡುತ್ತಿದೆ. ಈ ಸಲಹೆಗಳನ್ನು ಸಮೀಕ್ಷೆಗೆ ಒಳಪಡಿಸುತ್ತಾ ಸದನ ಒಂದು ಮಾತು ಹೇಳುತ್ತದೆ..."ಈಗ ಶಿಕ್ಷಣ ಕ್ಷೇತ್ರವನ್ನು ಕಂಕರೆಂಟ್ ಪಟ್ಟಿಗೆ ತಂದಿರುವುದರಿಂದ ಮಾನವ ಸಂಪನ್ಮೂಲ ಇಲಾಖೆಯು ಶಾಲೆಗಳಲ್ಲಿ ಹತ್ತನೇ ತರಗತಿಯವರೆಗೆ ಹಿಂದೀ ಕಲಿಸುವುದನ್ನು ಕಡ್ಡಾಯ ಮಾಡಲು ಮುಂದಾಗಬೇಕು" ಎಂಬುದಾಗಿ.
ಒಟ್ಟಾರೆ ಈ ವರದಿ ಸಲ್ಲಿಸಿದ ಸಂಸತ್ ಸಮಿತಿಯ ಮನಸ್ಥಿತಿಯ ಬಗ್ಗೆ ಅರಿಯಲು ವರದಿಯಲ್ಲಿ ಅವರು ಹಲವೆಡೆ ಬಳಸಿರುವ ವಾಕ್ಯಗಳನ್ನು ನೋಡಬೇಕು. ಯಾವ ಸಂಸ್ಥೆಯಲ್ಲಿ ಹಿಂದಿಯಲ್ಲಿ ಕಾರ್ಯಕ್ರಮವೇ ಇಲ್ಲವೋ ಅವುಗಳ ಬಗ್ಗೆ ಅಚ್ಚರಿ, ಗಾಬರಿ ತೋರಿಸೋದು. ಎಲ್ಲೆಲ್ಲಿ ಹಿಂದೀ ಇಂಗ್ಲೀಷ್ ಎರಡು ಭಾಷೆಯ ತರಬೇತಿ ಕಾರ್ಯಕ್ರಮಗಳೂ ನಡೆದಿವೆಯೋ ಅವುಗಳ ಬಗ್ಗೆ ಆದಷ್ಟು ಇನ್ಮುಂದೆ ಹಿಂದಿಯಲ್ಲೇ ಮಾಡಿ ಅನ್ನೋದು. ಹಿಂದಿಯಲ್ಲಿ ಇಲ್ಲದಿದ್ದರೆ ದೇಶಾನೇ ಮುಳುಗೋದ ಹಾಗೆ ಅಲವತ್ತುಕೊಳ್ಳೋದು. ಒಟ್ಟಾರೆ ಸಮೀಕ್ಷೆಯ ಸಾರವನ್ನು ಹೀಗೆ ಹೇಳಿದ್ದಾರೆ ನೋಡಿ:

Conclusion:

14.9 After assessment of the position of Hindi medium in educational/training institutions, the Committee has reached the conclusion that although Government has made efforts on a large scale in the direction of imparting training in Hindi, but it is still quite far from the target. While some progress has been seen in the direction of teaching in Hindi medium in Schools/ Colleges/ Universities. no specific progress has been noticed in the professional training organizations and research institutions. Most of the professional educational institutions are still conducting their entrance examinations only in English. The Committee has arrived at the conclusion that as this is a very vast issue, it is important to discuss the matter with the Heads and Representatives of Universities, Professional Training Institutions as also with the Chief Ministers of the State through Oral Evidence Programmes etc. Therefore, the Committee is of the view that this matter be taken up for consideration in detail. For this purpose, Committee has drafted a special questionnaire for the educational institutions. Thereafter, the Committee will require to study in detail to assess the position of Hindi medium in various educational/ training/ research institutions located throughout the country.
ಇದರರ್ಥ ಬಿಡಿಸಿ ಹೇಳಬೇಕೇನು? ಭಾರತ ಸರ್ಕಾರದ ಪ್ರತಿಯೊಂದು ಇಲಾಖೆ, ಪ್ರತಿಯೊಂದು ಯೋಜನೆಯ ಹಿಂದಿರುವುದು ನಮ್ಮ ಜನರ ಉದ್ಧಾರ ಮಾಡಬೇಕೆನ್ನೋ ಉದ್ದೇಶವೋ? ನಮಗೆಲ್ಲಾ ಹಿಂದಿಯನ್ನು ಕಲಿಯುವ ಮತ್ತಷ್ಟು ಅನಿವಾರ್ಯತೆಯನ್ನು ಹುಟ್ಟುಹಾಕುವ ಉದ್ದೇಶವೋ? ಮುಂದಿನಬಾರಿ ಈ ಶಿಫಾರಸ್ಸುಗಳಲ್ಲ್ಲಿ ಒಪ್ಪಿತವಾಗದವು ಯಾವುವು ಎಂದು ನೋಡೋಣ.

(ಮುಂದುವರೆಯುವುದು...)

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails