ವಲಸಿಗ ಕನ್ನಡ ಕಲಿಯೋಲ್ಲಾ ಅನ್ನೋದು ಧರ್ಮಾನಾ?

ಇಂದು (೦೭.೦೬.೨೦೧೧) ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಮುಖ್ಯಮಂತ್ರಿ ಚಂದ್ರು ಅವರು ಸರ್ಕಾರಕ್ಕೆ ಸಲ್ಲಿಸಿರೋ ಒಂದು ವರದಿಯ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಿದೆ. ಈ ವರದಿಯಲ್ಲಿ ಸರ್ಕಾರಕ್ಕೆ ಹಲವಾರು ಶಿಫಾರಸ್ಸುಗಳನ್ನು ಚಂದ್ರು ಅವರು ನೀಡಿದ್ದಾರೆ. ಅವುಗಳಲ್ಲಿ ಪ್ರಮುಖವಾದ ಒಂದು ಸಲಹೆ "ಕರ್ನಾಟಕದಲ್ಲಿ ವಲಸೆ ಬಂದು ನೆಲೆಸುವ ಪರಭಾಷಿಕರು ವರ್ಷವೊಂದರಲ್ಲಿ ಕನ್ನಡ ಕಲಿಯಬೇಕು. ೭ನೇ ತರಗತಿ ಹಂತದ ಕನ್ನಡ ಪರೀಕ್ಷೆಯನ್ನು ಪಾಸು ಮಾಡಬೇಕು" ಎನ್ನುವುದು. ಇಲ್ಲಿ ಇಂತಹ ಪರೀಕ್ಷೆ ಬೇಕಾ? ಹೇಗೆ ಪರೀಕ್ಷೆ ಮಾಡಬೇಕು? ಹೇಗೆ ಒಂದು ವರ್ಷದ ಅವಧಿ ಕಂಡು ಹಿಡಿಯಬೇಕು? ಪರೀಕ್ಷೆಯಲ್ಲಿ ಪಾಸಾಗದಿದ್ದರೆ ಮುಂದೇನು? ಅಸಲಿಗೆ, ಪರೀಕ್ಷೆ ಬೇಕಾ? ಎನ್ನುವುದನ್ನೆಲ್ಲಾ ಬದಿಗಿಟ್ಟು ನೋಡಿದಲ್ಲಿ ಈ ನಡೆಯ ಹಿಂದೆ "ವಲಸಿಗರು ಕನ್ನಡ ಕಲಿಯಬೇಕು" ಎನ್ನುವ ಕಾಳಜಿಯನ್ನು ಗುರುತಿಸಬಹುದಾಗಿದೆ. ಅನೇಕತೆಯಲ್ಲಿ ಏಕತೆ ಎನ್ನುವುದನ್ನು ಅರ್ಥ ಮಾಡಿಕೊಂಡವರಿಗೆ ಚಂದ್ರು ಅವರ ಸಲಹೆ ಮೆಚ್ಚುಗೆಯಾಗುತ್ತದೆ.

ಪ್ರತಿಕ್ರಿಯೆ ಮತ್ತದರ ಹಿಂದಿನ ಮನಸ್ಥಿತಿ

ಹಾಗಾಗಿ ಇವತ್ತು ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ಅಂದ್ರೆ ಅದು ಎಂಥೆಂಥಾ ವರದಿಗೆ, ಪ್ರತಿಕ್ರಿಯೆಗೆ ಕಾರಣವಾಗುತ್ತೇ ಅನ್ನೋದನ್ನು ನೀವು ಬೆಂಗಳೂರು ಮಿರರ್ ಪತ್ರಿಕೆಯನ್ನು ನೋಡೇ ಅರಿಯಬೇಕು. ಬೆಂಗಳೂರ್ ಮಿರರ್ ಪತ್ರಿಕೆ ವರದಿ ಮಾಡಿರೋ ಶೈಲಿಯನ್ನು ನೋಡಿ. ಈ ಪತ್ರಿಕೆಯಲ್ಲಿ ಸುದ್ದಿಯನ್ನು ನೀಡಿರುವ ಶೈಲಿಯೇ ಕೆಣಕುವಂತಹ, ಆಕ್ಷೇಪದ ದನಿಯಲ್ಲಿದೆ ಎಂದು ಅನ್ನಿಸುವುದು ಸಹಜ. ಇದಕ್ಕೆ ಬಂದಿರುವ ಪ್ರತಿಕ್ರಿಯೆಗಳಲ್ಲಿ ಕೆಲವು ಹೀಗಿವೆ ನೋಡಿ:ನಮ್ಮ ನಾಡಲ್ಲಿ ಬಂದವರು ನಮ್ಮ ನುಡಿಯನ್ನು ಕಲೀರಿ ಅಂದರೆ ಹರಿದು ಬಂದ ಈ ಕಮೆಂಟುಗಳನ್ನು ತಲೆಕೆಟ್ಟವರು ಬರೆದಿದ್ದಾರೆ ಎಂದು ಸುಲಭವಾಗಿ ತಳ್ಲಿ ಹಾಕಿಬಿಡಬಹುದು. ಆದರೆ ಇಂಥಾ ಮನಸ್ಥಿತಿಗೆ ಯಾರು ಕಾರಣ ಎಂದು ನೋಡಿದರೆ ಕಾಣುವುದು ಭಾರತದ ಭಾಷಾನೀತಿ. ಹೆಚ್ಚಿನದಾಗಿ ಇಲ್ಲಿ ಚಂದ್ರು ಶಿಫಾರಸ್ಸನ್ನು ವಿರೋಧಿಸಿ ಬಂದಿರೋ ಕಮೆಂಟುಗಳೆಲ್ಲಾ ಹಿಂದಿಯ ಪರವಾಗಿರುವುದು ಅಚ್ಚರಿಯಾಗಿ ಕಂಡರೂ ಅದು ಹಾಗಿಲ್ಲದೇ ಅದಕ್ಕೊಂದು ಕಾರಣವಿದೆ.

ಹುಳುಕಿನ ಭಾಷಾನೀತಿ!

ಭಾರತ ಅಳವಡಿಸಿಕೊಂಡಿರೋ ಭಾಷಾನೀತಿಯಿಂದಾಗಿ ಇಂದು ಭಾರತದ ಯಾವಮೂಲೆಯಲ್ಲಿದ್ದರೂ ಕಡ್ಡಾಯವಾಗಿ ಹಿಂದಿಯನ್ನು ಕಲಿಸಲಾಗುತ್ತದೆ. ಆ ಪ್ರಜೆ ತನ್ನ ಜೀವಮಾನದಲ್ಲೆಂದೂ ತನ್ನೂರು ಬಿಟ್ಟು ಹೊರಹೋಗದಿದ್ದರೂ ಹಿಂದಿಯನ್ನು ಓದಿ, ಕಲಿತು ಪಾಸಾಗಬೇಕಾಗಿದೆ. ಆದರೆ ಕನ್ನಡನಾಡಿಗೆ ಬದುಕಲು ಬರುವವರು ಕನ್ನಡ ಕಲಿಯಬೇಕಾದ್ದು ಕಡ್ಡಾಯವಲ್ಲ. ಮನರಂಜನೆ, ಆಡಳಿತ, ಜಾಹೀರಾತು, ಗ್ರಾಹಕಸೇವೆ ಎಲ್ಲದರಲ್ಲಿ ಹಿಂದಿಯನ್ನು ತುರುಕುವ ಮೂಲಕ ಭಾರತ ಸಾಧಿಸಿರುವುದೇನೆಂದರೆ "ಈ ದೇಶದ ಯಾವ ಮೂಲೆಗೆ ಹೋದರೂ ಹಿಂದಿಯವನಿಗೆ ಅನಾನುಕೂಲವಾಗಬಾರದು" ಎಂಬುದನ್ನು! ರಾಜ್ಯಸರ್ಕಾರವೇ ತ್ರಿಭಾಷಾ ಸೂತ್ರಾ ಅಂತಾ ಒಪ್ಕೊಂಡು ಮೆಟ್ರೋದಲ್ಲಿ ಹಿಂದೀನಾ ಬಳಸಕ್ ಶುರು ಮಾಡುದ್ರೆ ಯಾಕೆ ಅವರಿಗಾದ್ರೂ ಕನ್ನಡ ಕಲೀಬೇಕಾಗುತ್ತೇ? ಆದರೆ ಈ ಸಹಜ ನ್ಯಾಯ ಭಾರತ ಸರ್ಕಾರದ ಭಾಷಾನೀತಿಯ ಕಾರಣದಿಂದ ಇಂದು ಭಾರತದಲ್ಲಿ ಇಲ್ಲವಾಗಿದೆ. ಆಯಾ ರಾಜ್ಯದಲ್ಲಿ ಆಯಾ ಭಾಷೆ ಕಲಿಯುವುದು ಕಡ್ಡಾಯ ಅಂತಾ ಕೇಂದ್ರಸರ್ಕಾರವಂತೂ ಎಂದಿಗೂ ಹೇಳಲಾರದು. ಆಡಳಿತ ಭಾಷೆಯಾಗಿ ಹಿಂದಿ/ ಇಂಗ್ಲೀಷ್ ಇರೋದ್ರಿಂದ ಕೇಂದ್ರಸರ್ಕಾರ ಕರ್ನಾಟಕದಲ್ಲಿರೋ ಕನ್ನಡಿಗರಿಗೆ ಹಿಂದಿಯನ್ನು ಕಡ್ಡಾಯ ಮಾಡೀತೇ ಹೊರತು ಪರಭಾಷಿಕರಿಗೆ ಕನ್ನಡವನ್ನಲ್ಲ. ಅರವತ್ತು ವರ್ಷಗಳಿಂದ ತಲೆಯಲ್ಲಿ ತುಂಬುತ್ತಾ ಬಂದಿರುವ ಹಿಂದಿ ಭಾರತದ ರಾಷ್ಟ್ರಭಾಷೆ, ಹಿಂದೀ ರಾಷ್ಟ್ರಪ್ರೇಮದ ಸಂಕೇತ, ಭಾರತದ ಒಗ್ಗಟ್ಟಿಗೆ ಸಾಧನ ಎಂಬೆಲ್ಲಾ ಸಿಹಿಲೇಪಿತ ವಿಷದ ಗುಳಿಗೆಗಳು ನಮ್ಮವರ ತಲೆಯಲ್ಲೇ ಹೊಕ್ಕಿರುವಾಗ ಪರಭಾಶಿಕರಿಂದ ಬಂದಿರೋ ಈ ಪ್ರತಿಕ್ರಿಯೆಗಳು ಹೀಗಿಲ್ಲದೇ ಇನ್ನು ಹೇಗೆ ಇರಲು ಸಾಧ್ಯಾ ಗುರೂ?

ವಲಸಿಗನ ಧರ್ಮ!

ಹೌದು, ವಲಸಿಗನಿಗೊಂದು ಧರ್ಮವಿದೆ. ತಾನು ವಲಸೆ ಹೋಗುವ ಪ್ರದೇಶದ ನುಡಿ, ಸಂಸ್ಕ್ರುತಿಗಳಿಗೆ ಧಕ್ಕೆ ತರದೆ ಪೂರಕವಾಗಿ ನಡೆದುಕೊಂಡು ಆಯಾ ನಾಡಿನ ಮುಖ್ಯವಾಹಿನಿಯಲ್ಲಿ ಬೆರೆಯಬೇಕು ಎನ್ನುವುದೇ ಅದು. ಯಾರಿಗೂ ಇನ್ನೊಂದು ನಾಡಿನ ಅನನ್ಯತೆಯನ್ನು ಅಳಿಸುವ ಹಕ್ಕಿಲ್ಲ. ಹಾಗಾಗಿ ಆಯಾ ಪ್ರದೇಶದ ನುಡಿಯನ್ನು ಕಲಿತು ಅದರಲ್ಲಿ ವ್ಯವಹರಿಸಲೇ ಬೇಕಾಗಿದೆ. ಇಂತಹ "ಬೇಕು"ವನ್ನು ವಲಸಿಗನಿಂದ ನಿರೀಕ್ಷಿಸುವುದು ಆಯಾ ನಾಡಿಗರ ಹಕ್ಕಾಗಿದೆ. ಇಷ್ಟಕ್ಕೂ ವಲಸಿಗರು ಕರ್ನಾಟಕದಲ್ಲಿದ್ದ ಮೇಲೆ ಕನ್ನಡ ಕಲೀರಿ ಅಂತಾ ಯಾರಾದ್ರೂ ಯಾಕೆ ಹೇಳಬೇಕು? "ಯಾವ ನಾಡಿನಲ್ಲಿ ನಾವು ಬದುಕುತ್ತೇವೋ ಆ ನಾಡಿನ ಭಾಷೆಯನ್ನು ಕಲಿತೇ ಕಲೀತೀವಿ" ಅನ್ನೋದು ಸಹಜ ಧರ್ಮವಲ್ಲವೇ? ನಾನ್ಯಾಕೆ ಕನ್ನಡ ಕಲೀಬೇಕು ಅನ್ನುವ ಉದ್ಧಟತನ ತೋರುವುದು ತಪ್ಪಲ್ಲವೇ? ಬೆಂಗಳೂರು ಭಾರತದ ಸ್ವತ್ತು ಅನ್ನೋದನ್ನು "ನಿಮ್ಮೂರಲ್ಲಾ ಇದು, ಇದು ಇಡೀ ಇಂಡಿಯಾಗೆ ಸೇರಿದ್ದು... ಇಲ್ಲಿ ನಾವು ನಿಮ್ಮ ಭಾಷೆ ಕಲಿಯಲ್ಲಾ, ಅದೇನು ಮಾಡ್ಕೋತೀರೋ ಮಾಡ್ಕೊಳ್ಳೀ" ಅನ್ನುವಂತಹ ಅನಿಸಿಕೆಯಿಂದಾಗಿ ಆಡಿದರೆ, ಆ ಮಾತುಗಳು ವಲಸಿಗ ಧರ್ಮಕ್ಕೆ ವಿರುದ್ಧವಾಗಿಲ್ಲವೇ? ಇಂಥಾ ಮನಸ್ಥಿತಿಗೆ ಕಾರಣವಾಗಿರೋ ಭಾರತದ ರೀತಿ ನೀತಿ, ಕಾಯ್ದೆ ಕಾನೂನುಗಳು ಬದಲಾಗಬೇಡವೇ?

6 ಅನಿಸಿಕೆಗಳು:

Jayateerth Nadagouda ಅಂತಾರೆ...

ವಲಸಿಗರಿಗೆ ಕನ್ನಡ ಕಳಿಸಲು ಚಂದ್ರು ಅವರ ತಂಡ ಮಾಡಿರುವ ಶಿಫಾರಸು ಒಳ್ಳೆಯದೇ. ಬೆಂಗಳೂರು ಮಿರರ್ ಅನ್ನೋ ಕೆಳಗುಣಮಟ್ಟದ ಅಂಗ್ಲ ಪತ್ರಿಕೆ ಯವರ ಕನ್ನಡಿಗರು ಬರೆಯೋ ಎಲ್ಲ ಕಾಮೆಂಟ್ ಗಳನ್ನೂ ಎಡಿಟ್ ಮಾಡಿ,ಅದೇ ಪರಭಾಷಿಕರು ಕನ್ನಡ ಬುಲ್ ಶಿಟ್, ಇನ್ನು ಏನೇನೋ ಕಚಡ ಶಬ್ದ ಬಳಸಿದರು ಅದನ್ನೇ ಎಡಿಟ್ ಮಾಡದೆ ಪ್ರಕಟಿಸಿದ್ದಾರೆ. ಇಂಥ ಕಳಪೆ ಪತ್ರಿಕೆಗಳನ್ನು ರದ್ದು ಪಡಿಸಬೇಕಾದ ಅಗತ್ಯವಿದೆ.ಈ ಇಂಗ್ಲಿಷ್ ಮೀಡಿಯಾ ದವರು ತಾವಷ್ಟೇ ದೇಶಕ್ಕೆ ಸಂಬಂಧ ಪಟ್ಟವರು, ಅಂತ ದೊಡ್ಡ ಹೇಳ್ಕೋ ಕೆಟ್ಟ ಚಾಳಿ ಬಿಡಬೇಕಾಗಿದೆ. ದುಡ್ಡು ಕೊಟ್ಟರೆ ಏನು ಬೇಕಾದ್ರೂ ಬರೆಯೋ ಈ ಮೀಡಿಯಾ ನಮಗೆ ಅಗತ್ಯವಿಲ್ಲ.

RAGHAVENDRA R ಅಂತಾರೆ...

ಪ್ರತಿಯೊಬ್ಬರು ಕನ್ನಡ ಕಲಿಯಬೇಕು. ವಲಸಿಗರು ಕನ್ನಡ ಕಲಿಯೊಲ್ಲ ಅನ್ನೋದು ಧರ್ಮವಲ್ಲ. ಅವರ ಭಾಷೆಯನ್ನೇ ಕನ್ನಡಿಗರು ಕೂಡ ಮಾತನಾಡುವಾಗ ಅವರಿಗೆ ಕನ್ನಡ ಕಲಿಯುವ ಪ್ರಮೇಯವೇ ಇಲ್ಲ. ಹಾಗಾಗಿ ಭಾಷೆ ಕಲಿಯುವ ಇಚ್ಚೆಯಿದ್ದರೂ, ಕಲಿಯುವ ಅವಕಾಶಗಳು ಕಡಿಮೆಯಾಗಿದೆ. ಕನ್ನಡಿಗರು ಅವಕಾಶ ಕಲ್ಪಿಸಬೇಕು.

ವಸಂತ ಕುಮಾರ್ ಅಂತಾರೆ...

ವಲಸಿಗರಿಗೆ ಒಂದು ಭಾಷೆ ಕನ್ನಡ ಕಲಿಯುವ ಅಗತ್ಯವಿಲ್ಲ... ಆದರೆ ನಮ್ಮ ಬೆಂಗಳೂರಿನ ಕನ್ನಡಿಗರು ಎಲ್ಲಾ ವಲಸಿಗರ ಭಾಷೆಗಳನ್ನು ಕಲಿತೂ ಕಲಿತೂ ಸರ್ವ ಭಾಷಾ ಪರಿಣತರಾಗುತ್ತಿದಾರೆ..... : )

ಮಂಜುನಿಬಂ ಅಂತಾರೆ...

ಕನ್ನಡ ಕಲಿಯಲು ಬೇರೆಯವರಿಗೆ ಹೇಳುವ ಮೊದಲು ನಮ್ಮ ಕನ್ನಡಿಗರು ಕನ್ನಡ ಪ್ರೀತಿಸಲು ಕಲಿಯಬೇಕು. ನಾವು ಬೇರೆ ಭಾಷೀಕರೊಡನೆ ವ್ಯವಹರಿಸುವಾಗ ಕನ್ನಡದಲ್ಲೆ ವ್ಯವಹರಿಸುವುದು ಒಳಿತು.. ಕನ್ನಡಿಗರು ಕನ್ನಡವನ್ನು ಪ್ರೀತಿಸಲು ಮೊದಲು ಕಲಿಯಬೇಕು...ನಮ್ಮಲಿ ಎಸ್ಟೊ ಜನ ತಾವು ಕನ್ನಡಿಗರು ಎಮ್ದು ಹೇಳಿಕೊಳ್ಳಲು ಹಿಂದು ಮುಂದು ನೊಡುವ ಪರಿಯನ್ನು ಬಿಡಬೇಕು.... ಆದರು ಮುಖ್ಯಮಂತ್ರಿ ಚಂದ್ರು ಅವರ ನೀತಿಗೆ ನಮ್ಮ ಸಂಪುರ್ಣ ಬೆಂಬಲವಿದೆ.....ಜೈ ಕರ್ನಾಟಕ ಮಾತೆ...

vasanth K ಅಂತಾರೆ...

ವಲಸಿಗರಿಗೆ ಕನ್ನಡದ ಮೇಲಿರುವ ದುರಭಿಮಾನದ ಪ್ರತೀಕ ಈ ಲಿಂಕ್
https://www.facebook.com/photo.php?fbid=10150199621820882&set=o.174158681682&type=1&theater

Padyana Ramachandra ಅಂತಾರೆ...

ಕನ್ನಡೇತರರು ಒಂದು ವರ್ಷದಲ್ಲಿ ಕನ್ನಡ ಕಲಿಯಬೇಕು ಎನ್ನುವ ಕನ್ನಡ ಅಭಿವೃದ್ದಿ ಪ್ರಾದಿಕಾರದ ಹೇಳಿಕೆಗೆ FUCKOFF ಎಂದು ಫೇಸ್-ಬುಕ್ ನಲ್ಲಿ ಕನ್ನಡದ ಮೇಲಿರುವ ಅಸಡ್ಡೆಯನ್ನು ತೋರಿಸುವ ಬೆಂಗಳೂರಿನ ಹಾಲಿಡೇ ಐಕ್ಯು ಸಂಸ್ಥೆಯ ಹಿರಿಯ ಸಾಫ್ಟ್ ವೇರ್ ಇಂಜಿನಿಯರ್ ವಲಸೆಗಾರ ರಾಬಿನ್ ಚುಗ್ಹ್ ನನ್ನು ಹೀಗೆ ಬಿಟ್ಟರೆ ಮುಂದೊಂದು ದಿನ ಬೆಂಗಳೂರಿನ ಕನ್ನಡಿಗರಿಗೆ FUCKOFF ಎಂದು ಹೇಳಿದರೆ ಆಶ್ಚರ್ಯವೇನಿಲ್ಲ.

-ಪ.ರಾಮಚಂದ್ರ,
ರಾಸ್ ಲಫ್ಫಾನ್, ಕತಾರ್.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails