ಇಗೋ... ಸ್ವಾತಂತ್ರ್ಯ ದಿನಕ್ಕೊಂದು ರಾಮ ಬಾಣ!!


ಕನ್ನಡಿಗರೇ,

ಇಗೋ ತೊಗೊಳ್ಳೀ, ಭವ್ಯ ಭಾರತದ ಅರವತ್ತೈದನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನಮ್ಮ ಬದುಕನ್ನು ಉದ್ಧಾರ ಮಾಡೋಕೆ, ಭವ್ಯ ಭಾರತದ ಒಗ್ಗಟ್ಟು ಹೆಚ್ಚಿಸೋಕೆ ಅಂತಾ ಒಂದು ಹೊಸ ಯೋಜನೇನಾ ಸಿದ್ಧ ಮಾಡ್ಕೊಂಡು ಒಂದು ಬಿಲ್ ಮೂಲಕ ಸಂಸತ್ತಿನಲ್ಲಿ ಚರ್ಚೆ ಮಾಡಲು ನಮ್ಮ ಕರ್ನಾಟಕದ, ಕನ್ನಡಿಗರಾದ ಶ್ರೀ ಶ್ರೀ ಶ್ರೀ ೧೦೦೮ ರಾಮಾಜೊಯ್ಸ್ ಮಹಾಸ್ವಾಮಿಗಳು ಮುಂದಾಗಿದ್ದಾರೆ. ಪಾಪಾ! ಮಹಾನ್ ದೇಶಪ್ರೇಮಿ ಪಕ್ಷದ ರಾಜ್ಯಸಭೆಯ ಸದಸ್ಯರಾಗಿರೋ ಶ್ರೀಯುತರು ಭಾರತದ ಒಗ್ಗಟ್ಟಿಗಾಗೇ ಹಗಲಿರುಳು ತಪಸ್ಸು ಮಾಡಿ ಕಂಡುಕೊಂಡಿರೋ ಈ ಯೋಜನೆ ಏನಪ್ಪಾ ಅಂತಾ ಗೊತ್ತಾದ್ರೆ ನಾವೂ ಕೈಜೋಡಿಸೋಣ ಅಂತಾ ಅಂದ್ಕೊತಿದೀರಾ? ಬನ್ನಿ! ನೋಡಿ ಈ ಬಿಲ್ಲಿನಿಂದ ಮಂಡಗದ್ದೆಯ ರಾಮಾಜೊಯ್ಸರು ಬಿಡ್ತಾ ಇರೋ ರಾಮಬಾಣಾನಾ!!

ಈ ರಾಮನು ಬಿಡುವಾ ಬಾಣದ ಗುರಿಯೂ...

ಈ ನಮ್ಮ ಕನ್ನಡಿಗರ ಹೆಮ್ಮೆಯಾದ ಶ್ರೀ ಶ್ರೀ ಶ್ರೀ ರಾಮಾಜೋಯ್ಸ್ ಅವರು ಈ ಪಾಟಿ ಹೊಗುಳುಸ್ಕೊಳ್ಳೋ ಅಂಥಾ ಅದ್ಯಾವ ಬಾಣಾನಾ ಬತ್ತಳಿಕೆಯಿಂದಾ ತೆಗೀತಾ ಇದಾರೆ ಅಂತೀರಾ! ಅದು "ದೇವನಾಗರೀ ಲಿಪಿಯ ಕಲಿಯುವಿಕೆಯ (ಭಾರತದ ಒಗ್ಗಟ್ಟಿಗಾಗಿ) ಬಿಲ್, ೨೦೧೧" ಅನ್ನೋ ಹೆಸರಿನದ್ದು! ಆ ರಾಮನು ಇಟ್ಟಾ ಬಾಣದ ಗುರಿ ತಪ್ಪಲಿಲ್ವಂತೆ... ಆದರೆ ಈ ರಾಮಾಜೋಯ್ಸರ ಬಾಣದ ಗುರಿ ತಪ್ಪಲೇ ಬೇಕಾಗಿದೆ. ಯಾಕಂದ್ರೆ ಅವರ ಬಿಲ್ಲಿನಿಂದ ಹೊರಡೋ ಬಾಣದ ಗುರಿ ಮಾತ್ರಾ ನಮ್ಮ ನಿಮ್ಮಂಥಾ ಬಡಪಾಯಿ ಕನ್ನಡಿಗರೂ ಸೇರಿದಂತೆ ಭಾರತದ ಎಲ್ಲಾ ಹಿಂದೀಯೇತರರು ಆಗಿದ್ದಾರೆ. ರಾಜ್ಯಸಭಾ ಸದಸ್ಯರ ಅಧಿಕೃತ ಅಂತರ್ಜಾಲ ತಾಣದಲ್ಲಿ ಶ್ರೀ ರಾಮಾಜೋಯ್ಸರ ಈ ವಿಧೇಯಕದ ಬಗ್ಗೆ ಬರೆಯಲಾಗಿದೆ. ಖಾಸಗಿಯಾಗಿ ಇವರು ಮೊನ್ನೆ ಮೊನ್ನೆ ಅಂದ್ರೆ ಇದೇ ಆಗಸ್ಟ್ ೦೫ನೇ ತಾರೀಕಿನಂದು ಮಂಡಿಸಿರುವ ಈ ವಿಧೇಯಕ ಇನ್ನೂ ಚರ್ಚೆಗೆ ಬಂದು ಕಾನೂನಾಗಿ ಜಾರಿಯಾಗೋಕೆ ಸಮಯ ತಗಲುತ್ತೆ ಅನ್ನೋದು ನಿಜಾನೇ ಆದರೂ ಇದರಲ್ಲಿರೋದನ್ನು ನೋಡಿದರೆ ಈ ವಿಧೇಯಕ ಸಲ್ಲಿಸೋ ಮನಸ್ಸು, ಅದರ ಹಿಂದಿರೋ ತತ್ವ ಸಿದ್ಧಾಂತ, ಆ ಸಿದ್ಧಾಂತದ ಮಹಾಮನೆ... ಎಲ್ಲದರ ನಿಜ ಸ್ವರೂಪ ಗೊತ್ತಾಗುತ್ತೆ. ಅಂಥಾದ್ದೇನಿದೆ ನೋಡೋಣ!

ದೇಶದ ಜನರಿಗೆಲ್ಲಾ ದೇವನಾಗರಿ ಕಡ್ಡಾಯ!

ಸಂವಿಧಾನದ ೩೪೩ನೇ ವಿಧಿಯನ್ವಯ ಹಿಂದೀ ಭಾರತದ ಆಡಳಿತ ಭಾಷೆ. ಹಾಗಾಗಿ ಭಾರತದ ನಾಗರೀಕರೆಲ್ಲಾ ಹಿಂದೀಯನ್ನು ಕಲಿಯಬೇಕು. ಅಂದರೆ ಹಿಂದೀ ಕಲಿಕೆಗೆ ಬೇಕಿರೋ ಲಿಪಿ ದೇವನಾಗರಿಯದ್ದು. ಎಂಟನೇ ಶೆಡ್ಯೂಲ್‍ನಲ್ಲಿರುವ ೨೨ ಭಾಷೆಗಳಲ್ಲಿ ಸಂಸ್ಕೃತ, ಮರಾಠಿ ಮತ್ತು ಹಿಂದೀಗಳನ್ನು ಇದೇ ಲಿಪಿಯಲ್ಲಿ ಬರೆಯುವುದು. ಈಗ ಭಾರತದಲ್ಲಿ ಎಲ್ಲಾರೂ ದೇವನಾಗರಿ ಲಿಪಿಯನ್ನು ಬಹಳ ತಡವಾಗಿ ಕಲಿಯುತ್ತಾ ಇದ್ದಾರೆ... ಆದ್ದರಿಂದ ದೇವನಾಗರಿ ಲಿಪಿ ಕಲಿಕೆಯನ್ನು ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೂ ಹೇಳಿಕೊಡಬೇಕು. ಇನ್ಮುಂದೆ ಎಲ್ಲಾ ರಾಜ್ಯಗಳ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ದೇವನಾಗರೀ ಲಿಪಿಯಲ್ಲೇ ಬೋರ್ಡುಗಳನ್ನು ಬರೆಯಬೇಕು. ವಿಶೇಷವಾಗಿ ಮೈಲಿಗಲ್ಲುಗಳನ್ನು ಈ ಲಿಪಿಯಲ್ಲಿ ಬರೆದರೆ ತಮ್ಮ ರಾಜ್ಯಗಳನ್ನು ಬಿಟ್ಟು ಹೊರಗೆ ಹೋಗುವವರಿಗೂ ಏನೂ ತೊಂದರೆಯಾಗುವುದಿಲ್ಲ. ಇದರಿಂದ ದೇಶದಲ್ಲಿ ಒಗ್ಗಟ್ಟು ಹೆಚ್ಚುತ್ತದೆ. ಹಾಗಾಗಿ ಈ ವಿಧೇಯಕ ಒಪ್ಪಿಗೆಯಾಗಿ ಕಾನೂನು ಆಗುವ ದಿನದಿಂದಲೇ ದೇಶದ ಎಲ್ಲೆಡೆ ದೇವನಾಗರಿಯನ್ನು ಪ್ರಾಥಮಿಕ ಶಾಲಾ ಹಂತದಲ್ಲೇ ಕಲಿಸುವುದನ್ನು ಕಡ್ಡಾಯ ಮಾಡತಕ್ಕದ್ದು...

ವೈವಿಧ್ಯತೆಯನ್ನು ಶಾಪವೆನ್ನುವ ಮನಸ್ಥಿತಿ!

ಇಡೀ ವಿಧೇಯಕದ ಹಿಂದಿರುವ ಮನಸ್ಥಿತಿ ನಾಡಿನ ವೈವಿಧ್ಯತೆಯನ್ನು ಶಾಪವೆಂದು ಪರಿಗಣಿಸಿ, ಅದನ್ನೆಲ್ಲಾ ಮಣ್ಣಾಗಿಸಿದರೆ ಏಕತೆ ಮೂಡುತ್ತದೆ ಎನ್ನುವ ಭ್ರಮೆ. ಶ್ರೀಯುತರಾದ ರಾಮಾಜೋಯಿಸ್ ಅವರೇ ಹಿಂದೊಮ್ಮೆ ನ್ಯಾಯಸ್ಥಾನದಿಂದ ತಾಯ್ನುಡಿಯಲ್ಲಿ ಪ್ರಾಥಮಿಕ ಶಿಕ್ಷಣ ಇರಬೇಕು ಎನ್ನುವ ತೀರ್ಪನ್ನು ನೀಡಿದ್ದರಂತೆ! ಇದೀಗ ಇಂಥಾ ವಿಧೇಯಕವೇನಾದರೂ ಜಾರಿಯಾದರೆ ಏನಾದೀತು ಎಂದು ಯೋಚಿಸಿರುವರೇ ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಇದರಿಂದ ಕರ್ನಾಟಕದ ಎಲ್ಲಾ ನಾಮಫಲಕಗಳೂ ಹಿಂದೀಯಲ್ಲಿರುತ್ತದೆ. (ದೇವನಾಗರೀ ದೇವನಾಗರೀ ಅನ್ನೋ ಸುತ್ತುಬಳಸಿನ ಮಾತು ಬಿಟ್ಟು ಇನ್ಮುಂದೆ ಹಿಂದೀ ಲಿಪಿ ಅಂತೀವಿ. ಎರಡೂ ಒಂದೇನೆ ಬಿಡೀ!) ನಮ್ಮ ಮುಂದಿನ ಪೀಳಿಗೆಯ ಮಕ್ಕಳು ಮರಿಗಳು ಒಂದನೇ ತರಗತಿಯಿಂದ ಹಿಂದೀಲೇ ಬರೆಯೋದನ್ನು ಕಲಿಯಬೇಕಾಗುತ್ತದೆ. ಕಾನೂನು ಹಾಗೆ ಕಡ್ಡಾಯ ಮಾಡುತ್ತದೆ. ಇನ್ನು ಕನ್ನಡವನ್ನು ಯಾಕಾದ್ರೂ ಕಲೀಬೇಕು? ಕನ್ನಡ ಲಿಪಿ ಬಳಕೆಯಲ್ಲಿದ್ದರೆ ತಾನೇ ಕಲಿಯೋ ಅಗತ್ಯವಿರುವುದು... ನಮ್ಮೂರಿನ ಎಲ್ಲಾ ಅಂಗಡಿ, ಮುಂಗಟ್ಟು, ಬಸ್ಸು, ರೈಲು, ಆಸ್ಪತ್ರೆ ಎಲ್ಲೆಡೆ ಹಿಂದೀ ತಾನೇ ಇರುತ್ತೆ. ಬರೀ ಕಥೆ ಕವನ ಸಾಹಿತ್ಯವನ್ನು ಓದೋಕಷ್ಟೇ ಕನ್ನಡ ಬೇಕಾಗೋ ಹಾಗಿದ್ರೆ... ಯಾಕೆ ಯಾರಾದ್ರೂ ಕಲೀಬೇಕು? ಇನ್ನು ಕನ್ನಡದ ಹೆಸರುಗಳೆಲ್ಲಾ ಹಿಂದೀಲಿ ಇರೋ ಅಕ್ಷರಗಳಿಗೆ ಹೊಂದುವಂತೆ ಇರಬೇಕಾಗುತ್ತೆ. ಬೆಂಗಳೂರು ಇನ್ಮೇಲೆ ಬೆಂಗಲೂರು ಆಗುತ್ತೆ... ಕೆ, ಕೇ ಎಲ್ಲಾ ಒಂದೇ... ದೀರ್ಘ ಇಲ್ಲಾ ಹಿಂದೀಲಿ ಅಂತಾ!!! ಹಿಂದೀಲಿ ಎಲ್ಲಾ ಸೂಚನೆ ಬರೀತಾ ಹೋದರೆ ಹಿಂದೀಯವರಿಗೆ ಕನ್ನಡವನ್ನು ಕೆಟ್ಟದಾಗಿಯಾದರೂ ಓದಕ್ಕಂತೂ ಅದೀತು... ಅರ್ಥವಾದೀತಾ? ಅವೆಲ್ಲಾ ಬಿಡಿ, ಹಿಂದೀ ಲಿಪಿಯನ್ನು ಕಲಿತು ಬೇರೆ ನಾಡಿಗೆ ಹೋದಾಗ ತೊಂದರೆ ಆಗಲ್ಲಾ ಅನ್ನೋ ಮಾತಾಡೋ ಸಂಸದರು, ಇದರಿಂದಾಗಿ ನಮ್ಮೂರಿನ ವ್ಯವಸ್ಥೆಯೆಲ್ಲಾ ಹಿಂದೀಲೇ ಆಗಬೇಕಾಗುತ್ತದೆ ಅಂತಾ ತಿಳಿದುಕೊಳ್ಳದೇ ಹೋದರಾ ಗುರೂ! ಅಥ್ವಾ ಭಾರತದಲ್ಲಿ ಹಿಂದೀ ಮತ್ತು ಹಿಂದೀಯೋರು ಮಾತ್ರವೇ ಇರಬೇಕು ಅನ್ನೋದು ಅವರ ಆಶಯಾನಾ? "ಒಂದು ಭಾಷೆ: ಒಂದು ದೇಶ" ಆಗಬೇಕು ಅಂತಾ ಅವರು ಆಸೆ ಪಟ್ಟು ಈ ವಿಧೇಯಕ ಮಂಡಿಸಿರಬಹುದು! ಹಿಂದೀ ದೇಶಾನ ಒಗ್ಗೂಡಿಸಲ್ಲಾ ಒಡೆಯುತ್ತೆ ಅನ್ನೋದು ಇವರಿಗೆ ಹೇಳಿಕೊಡೋ ಮಹಾಮನೆ ಇನ್ನೆಲ್ಲೆದೆಯೋ? ಒಟ್ನಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಇವರನ್ನು ಕಳಿಸಿದ್ದಕ್ಕೂ ಸಾರ್ಥಕ!!

13 ಅನಿಸಿಕೆಗಳು:

karunadu ಅಂತಾರೆ...

ಆ pdf ಒದುದ್ರೆ ವಾಕರಿಕೆ ಬರುತ್ತೆ...ನಮ್ ಕನ್ನಡಿಗರಿಗೆ ಅದೇನ್ ಬಂದಿದ್ಯೊ

Anonymous ಅಂತಾರೆ...

jai BJP

ಪ್ರಶಾಂತ ಸೊರಟೂರ ಅಂತಾರೆ...

ತಳ-ಬುಡಯಿಲ್ಲದ ವಿಧೇಯಕ !!!!
ಭಾರತ ಅಂದರೆ ಏನು ಅಂತಾ ಅರಿಯದವರು ಗೀಚಿದ ಸಾಲುಗಳು!
ಏಕತೆ, ಹಿಂದಿ, ದೇವನಾಗರಿ ಲಿಪಿ ಒಂದಕ್ಕೊಂದು ಸಂಬಂಧವಿಲ್ಲದ ವಿಷಯಗಳು !!
ಹಾಗೆ ನೋಡಿದರೆ ಕನ್ನಡ ಲಿಪಿ ಎಲ್ಲ ಲಿಪಿಗಳಲ್ಲಿ ಹೆಚ್ಚು ಸಶಕ್ತವಾದದ್ದು. ಬೇಕಿದ್ದರೆ ಅದನ್ನೇ ಎಲ್ಲೆಡೆಯೂ ಬಳಸುವಂತಾಗಲಿ,ರಾಷ್ಟ್ರೀಯ ಏಕತೆಗಾಗಿ (ಒಂದೇ ಲಿಪಿ ಬೇಕೆ-ಬೇಕು ಎಂತಿದ್ದರೆ)
ಈ ವಿದೇಯಕ ಒಪ್ಪಿಗೆಯಾದರೇ ಎಂಥಾ ಅನಾಹುತವಾಗುತ್ತೆ, ವಿವರಿಸುವುದೇ ಅಸಾಧ್ಯ !!!!

ವಸಂತ ಕುಮಾರ್ ಅಂತಾರೆ...

ಇನ್ನು ಮುಂದೆ ಎಲ್ಲರ ಮನೆಯಲ್ಲೂ ರೋಟಿಯನ್ನೇ ಮಾಡಬೇಕು., ಶಾಲೆಗಳಲ್ಲಿ ಗಂಜಿ ಊಟದ ಬದಲಾಗಿ ರೋಟಿ ಸಬ್ಜಿ ಮಾಡುವುದು ಕಡ್ದಾಯ... ಗಂಜಿ ಊಟ ಮಾಡಿದರೆ ದೇಶದ ಐಕ್ಯತೆ ಕೆಡುತ್ತದೆ... : )

ಪ್ರವೀಣ್ ಮಾರವಳ್ಳಿ ಅಂತಾರೆ...

ನಮ್ಮ ಭಾಷೆಯನ್ನು ಕಿತ್ತುಕೊಳ್ಳುವ ಹುನ್ನಾರಕ್ಕೆ ನನ್ನ ದಿಕ್ಕಾರ...
-ಪ್ರವೀಣ್ ಶಂ ಮಾರವಳ್ಳಿ

Manjunatha Kollegala ಅಂತಾರೆ...

ಆಯಾ ರಾಜ್ಯದಲ್ಲಿ ಆಯಾ ಭಾಷೆ ಮತ್ತೊಂದು ಸಂಪರ್ಕಭಾಷೆ ಬಿಟ್ಟು ಬೇರೆ ಯಾವ ಭಾಷೆಯನ್ನೂ ಯಾರಿಗೂ ಕಲಿಯುವಂತೆ ಕಡ್ಡಾಯ ಮಾಡುವುದು ಅವಿವೇಕ. ಹಾಗೇ ಆಯಾ ರಾಜ್ಯದ ಭಾಷೆ ಬಿಟ್ಟು ಬೇರೆ ಯಾವುದನ್ನೂ ಕಲಿಯೋಕ್ಕೆ ಅವಕಾಶವೇ ಇರಬಾರದೆನ್ನುವುದೂ ಅವಿವೇಕ.

Anonymous ಅಂತಾರೆ...

ಇಲ್ಯಾರು ಕನ್ನಡ ಬಿಟ್ಟು ಬೇರೆ ಕಲಿಯೋಕೆ ಅವಕಾಶ ಇರಬಾರದು ಅಂತಿಲ್ಲಾ ಮಂಜುನಾಥ್ ಸಾರ್...

hamsanandi ಅಂತಾರೆ...

Yes, I will agree to this when states from Punjab to Maharashtra and Gujarat to Arunachal Pradesh are made to learn the Kannada script compulsory in their curricula :)

ಹರ್ಷ ಅಂತಾರೆ...

ಹಿಂದೆ ಬ್ರಿಟಿಷರು ಮಾಡಿದ್ದೆ ಶಾಸನವಾದರೆ ಅದನ್ನು ಪಾಲಿಸಿ ಹಲವರ ಮನಸ್ಥಿತಿ ಇಂದು ಕೊಡ ನಾವು ಬರಿ ಆಳುಗಳು ಅನ್ನೊದೆ ಎತ್ತಿ ತೊರಿಸತ್ತೆ, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಪ್ರಭುಗಳಾಗೊದು ಯಾವಾಗ...ಇಂತ ವ್ಯಕ್ತಿಗಳು ಒಂದೆ ಭಾಷೆಯಿಂದ ಭಾರತದ ಏಕತೆಯೆಂದು ಹೇಳ್ತಾಯಿದಾರೆ..ಇಂದಿನ ಯುವಕರಿಗೆ ಹೊಸ ಕನಸು ಕಾಣುವುದಿಕ್ಕಿಂತ ಮುಂಚೆ ಇಂತ ಗೊಡ್ಡು ಹಳೆ ಮನಸ್ಥಿತಿಯನ್ನು ದಾಟಬೇಕಾಗಿದೆ, ಅವರ ವಿಧ್ಯೆ ಅವರ ಅನುಭವ ಅವರು ಹುಟ್ಟಿದ ನಾಡಿಗೆ ಉಪಯೊಗವಾಗಬೇಕು ಬದಲಿಗೆ ಸಮಸ್ಯೆಯಾಗಬಾರದು, ನಮಗೆ ಹಿಂದಿಯಿಂದ ಏಕತೆ ಬೆಕಾಗಿಲ್ಲ, ನಾನು ಕನ್ನಡಿಗ ನನಗೆ ನನ್ನ ಭಾಷೆಯಲ್ಲೆ ಏಲ್ಲ ಸೇವೆ ದೊರಯುವಂತೆ ಆಗಬೇಕು,
ಭಾಷಾಭಿಮಾನವನ್ನು ಬೇಳೆಸಿಕೊಳ್ಳಿ, ನಮ್ಮ ವಿಧ್ಯೆ, ಸಾಧನೆ, ಅನುಭವ ಬೇರೆ ರಾಜ್ಯಕ್ಕೊ, ಭಾಷೆಗೊ, ದೇಶಕ್ಕೊ ಅಲ್ಲ..
ಮೊದಲು ಇಂತ ಮನಸ್ಥಿತಿಯವರಿಗೆ ಉಪೇಂದ್ರರವರ "ಸೊಪರ್" ಚಿತ್ರವನ್ನು ನೊಡಲು ಹೇಳಬೇಕು..

Gireesh BT ಅಂತಾರೆ...

ದೇವನಾಗರಿ ಲಿಪಿಗೂ ಹಿಂದಿಗೂ ಯಾವುದೇ ಸಂಬಂಧವಿಲ್ಲ. ಹಿಂದಿ ಭಾಷೆಗೆ ತನ್ನದೇ ಆದ ಲಿಪಿ ಇಲ್ಲ. ಕನ್ನಡದ ಲಿಪಿ ಕೂಡ ದೇವನಾಗರಿಗೂ ಮೊದಲು ಇದ್ದ ಲಿಪಿಯಿಂದ ಬಂದದ್ದು. ನೀವೆಲ್ಲಾ ಒಪ್ಪುತ್ತೀರೋ ಬಿಡುತ್ತೀರೋ ನನಗೆ ಗೊತ್ತಿಲ್ಲ. ಆದರೆ ಇದು ನಿಜವಾದದ್ದು. ತಮಿಳು ಲಿಪಿಯನ್ನು ಒಂದೊಮ್ಮೆ ನೋಡಿ, ದೇವನಾಗರಿ ಬರುತ್ತಿದ್ದರೆ ತಮಿಳು ಬಾಷೆಯನ್ನು ಕೆಲವೇ ದಿನಗಳಲ್ಲಿ ಓದಲು ಕಲಿತು ಬಿಡಬಹುದು. ಇದೇ ನಾನು ಹೇಳುತ್ತಿರುವ ಮಾತಿಗೆ ಆಧಾರ. ಇನ್ನು ರಾಮಾಜೋಯಿಸರು ಹೇಳಿರುವ ಮಾತನ್ನು ನಾನು ಒಪ್ಪುತ್ತಿಲ್ಲ. ದೇವನಾಗರಿ ಲಿಪಿಯನ್ನು ಕಲಿಯುವುದರಿಂದ ನಾವು ಏನು ಸಾಧಿಸುತ್ತೇವೆ ಎಂಬುದು ನನಗೆ ತಿಳಿಯುತ್ತಿಲ್ಲ.

Manjunatha Kollegala ಅಂತಾರೆ...

"ಇಲ್ಯಾರು ಕನ್ನಡ ಬಿಟ್ಟು ಬೇರೆ ಕಲಿಯೋಕೆ ಅವಕಾಶ ಇರಬಾರದು ಅಂತಿಲ್ಲಾ ಮಂಜುನಾಥ್ ಸಾರ್..." - ಹೆಸರಿಲ್ಲದವರೇ "ಆಯಾ ರಾಜ್ಯದಲ್ಲಿ ಆಯಾ ಭಾಷೆ ಮತ್ತೊಂದು ಸಂಪರ್ಕಭಾಷೆ ಬಿಟ್ಟು ಬೇರೆ ಯಾವ ಭಾಷೆಯನ್ನೂ ಯಾರಿಗೂ ಕಲಿಯುವಂತೆ ಕಡ್ಡಾಯ ಮಾಡುವುದು ಅವಿವೇಕ." ಅನ್ನೋ ನನ್ನ ಮೊದಲ ವಾಕ್ಯಕ್ಕಿಂತಾ "ಹಾಗೇ ಆಯಾ ರಾಜ್ಯದ ಭಾಷೆ ಬಿಟ್ಟು ಬೇರೆ ಯಾವುದನ್ನೂ ಕಲಿಯೋಕ್ಕೆ ಅವಕಾಶವೇ ಇರಬಾರದೆನ್ನುವುದೂ ಅವಿವೇಕ." ಅನ್ನೋ ಎರಡನೇ ವಾಕ್ಯವೇ ನಿಮ್ಮನ್ನು ಹೆಚ್ಚು ಬಾಧಿಸಿದಂತಿದೆ :) ನಾನು ಹೇಳಿದ್ದರಲ್ಲಿ ಮೊದಲ ವಾಕ್ಯ ಮುಖ್ಯ (ಅದನ್ನು ನೀವು ಒಪ್ಪುವಿರೆಂದು ಭಾವಿಸುತ್ತೇನೆ). ಎರಡನೆಯ ವಾಕ್ಯ ಬರೀ ಎಚ್ಚರಿಕೆ ಅಷ್ಟೇ, ಏಕೆ ಅಂದ್ರೆ ಅಂಥ ಅತಿರೇಕವನ್ನೂ ನೋಡಿದ್ದೇನೆ.

Sarja Satyodaya ಅಂತಾರೆ...

ಯಾವುದೇ ಭಾಷೆಯನ್ನು ಒತ್ತಾಯಪೂರ್ವಕವಾಗಿ ಹೇರುವುದಕ್ಕೆ ನನ್ನ ಸ್ಪಷ್ಟ ವಿರೋಧವಿದೆ, ಆದರೆ ಪ್ರತಿಯೊಬ್ಬರೂ ಅವರಿಗೆ ಬೇಕಾದ ಭಾಷೆಯನ್ನು ಇಷ್ಟಪಟ್ಟು ಕಲಿಯುವುದಿದ್ದರೆ ಕಲಿಯಬಹುದು. ಮಾತೃಭಾಷೆಯನ್ನು ಬದಲಾಯಿಸುವುದೆಂದರೆ ತಾಯಿಯನ್ನು ಬದಲಾಯಿಸಿದಂತೆ ....!!!
ಸರ್ಜಾ ಸತ್ಯೋದಯ,
ದೋಹ-ಕತಾರ್

The Assimilated Borg! ಅಂತಾರೆ...

"ಯಾವುದೇ ಭಾಷೆಯನ್ನು ಒತ್ತಾಯಪೂರ್ವಕವಾಗಿ ಹೇರುವುದಕ್ಕೆ"

ಸರಿಸುಮಾರು ಎಲ್ಲಾ ದೇಶದಲ್ಲೂ, ಒಂದು ಹಿರಿಯ ಬುಡಕಟ್ಟಿನ ಆಯಕಟ್ಟಿನ ಆಳ್ವಿಕೆಯಲ್ಲಿ ಆ ಬುಡಕಟ್ಟಿನ/ಮೂಲನಿವಾಸಿಗಳ ನುಡಿಯನ್ನು ಕಡ್ಡಾಯಕಲಿಯಬೇಕು ಎಂದು ಒತ್ತಾಯ ಹೇರುವುದು ಸರಿಯೇ! ಹಾಗೆ ಒತ್ತಾಯ ಹಟ ಹಿಡಿಯದ ಬುಡಕಟ್ಟುಗಳೆಲ್ಲ ಇಂದು ಹೆಸರಿಲ್ಲದೇ ಹೋಗಿವೆ.

ಕರ‍್ನಾಟಕ ಎಂಬು ಕನ್ನಡವನ್ನಾಡುವ ಬುಡಕಟ್ಟಿನ ಮಂದಿಯ ಆಯಕಟ್ಟು/ಆಳ್ವಿಕೆ/ನೆಲೆನಾಡು. ಕರ‍್ನಾಟಕವೆಂಬು ಭೂಗೋಳ, ಕನ್ನಡವೆಂಬ ಇತಿಹಾಸವಿಲ್ಲದೇ ಇರುವುದಕ್ಕೆ ಆಗುವುದಿಲ್ಲ, ನಾವು ಬಿಡುವುದೂ ಇಲ್ಲ.

ಅವರ ಅವರ ’ಮಾತೃಭಾಷೆ’ ಕಲಿಯಲು, ಮಾತಾಡಲು, ಬೆಳಸಲು ಅವರವರ ಮಾತೃನೆಲ/ತಾಯ್ನೆಲ/ಮೂಲನಾಡಿಗೆ ಹೋಗಲಿ. ಸಂಸ್ಕ್ರುತ ಕಲಿಯಲು ಅದರ ಮೂಲ ಭೂಮಿ ಪೇಶಾವರಕ್ಕೆ, ಹಿಂದಿ ಕಲಿಯಲು ಬಿಹಾರಕ್ಕೆ ಹೀಗೇ.

ಕನ್ನಡದಲ್ಲೇ ಕನ್ನಡವಿರಲೇ ಬೇಕು .. ಮಿಕ್ಕವು ಇರುವುದಕ್ಕೆ ಬಿಡುವುದು ಬಿಡದಿರುವುದು ನಾವು ಕನ್ನಡಿಗರ ಇಷ್ಟ. ನಮ್ಮ ಬೇರು-ನುಡಿ-ನಡೆಗಳೇ ದೊಡ್ಡ ಕುತ್ತಿನಲ್ಲಿ ಸಿಲುಕಿರುವಾಗ, ಬೇರೆಯವು ನಮ್ಮ ನೆಲದಲ್ಲಿ ಇದ್ದರೆಷ್ಟು ಬಿಟ್ಟರೆಷ್ಟು.

" ಮಾತೃಭಾಷೆಯನ್ನು ಬದಲಾಯಿಸುವುದೆಂದರೆ ತಾಯಿಯನ್ನು ಬದಲಾಯಿಸಿದಂತೆ ....!!!"
ಹಾಗಾದರೆ ಕನ್ನಡವಲ್ಲದ ತಾಯಿನುಡಿಗರು ಅವರವರ ತಾಯಿನಾಡುಗಳಲ್ಲಿ ಹೋಗಿ ಅವರವರ ತಾಯಿನುಡಿಗಳನ್ನು ಕಾಪಾಡಲಿ. ಹಿಂದಿ, ಸಂಸ್ಕೃತ, ತಮಿಳು, ತೆಲುಗು ಉಳಿಸಲು ಕರ‍್ನಾಟಕ ಸರಕಾರ, ಕನ್ನಡಿಗರು ಯಾಕೆ ಹೊಣೆ?

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails