ಹಣಕಾಸು ಒಳಗೊಳ್ಳುವಿಕೆ: ಇನ್ಮುಂದೆ ಕಂಪನಿ ಮಾಹಿತಿ ಕನ್ನಡದಲ್ಲೂ!

ಭಾರತ ಸರ್ಕಾರದ ಭಾಷಾನೀತಿಯ ಹುಳುಕು ಏನೇ ಇರಲಿ. ಕೇಂದ್ರಸರ್ಕಾರದ ಸಚಿವಾಲಯಗಳು ಮಾತ್ರಾ ತಮ್ಮ ಇಲಾಖೆಗಳು ರೂಪಿಸಿರುವ ಯೋಜನೆಗಳು ಜನರನ್ನು ತಲುಪಬೇಕಿದ್ದರೆ ಸರಿಯಾಗಿರೋ ನೀತಿಯನ್ನು ಅನುಸರಿಸಲೇ ಬೇಕು ಅನ್ನೋದನ್ನು ಮನವರಿಕೆ ಮಾಡಿಕೊಂಡಿರುವ ಹಾಗಿದೆ ಗುರೂ! ಭಾರತ ಸರ್ಕಾರದ ಕಂಪನಿ ವ್ಯವಹಾರಗಳ ಸಚಿವಾಲಯವನ್ನು ಕುರಿತು ಇತ್ತೀಚಿಗೆ ಎಕನಾಮಿಕ್ಸ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ಈ ಸುದ್ದಿಯನ್ನು ನೋಡಿ.

ಹಣಕಾಸು ಒಳಗೊಳ್ಳುವಿಕೆಯ ಪರಿಣಾಮಕಾರಿ ದಾರಿ!

"ಹಣಕಾಸು ಒಳಗೊಳ್ಳುವಿಕೆ" ಎನ್ನುವ ಮಹತ್ವಾಕಾಂಕ್ಷಿ ಯೋಜನೆಯನ್ನು ಯಶಸ್ವಿಗೊಳಿಸಲು ಪಣ ತೊಟ್ಟಿರುವ ಕಂಪನಿ ವ್ಯವಹಾರಗಳ ಸಚಿವಾಲಯವು ಇನ್ನು ಮುಂದೆ ಕಂಪನಿಗಳ ಆಯವ್ಯಯ ಮಾಹಿತಿಯನ್ನು ಸಚಿವಾಲಯದ ಅಧಿಕೃತ ಅಂತರ್ಜಾಲ ತಾಣದಲ್ಲಿ ನಮ್ಮ ನಮ್ಮ ಭಾಷೆಗಳಲ್ಲೇ ಸಿಗುವಂತೆ ಕ್ರಮತೆಗೆದುಕೊಳ್ಳುತ್ತದೆಯಂತೆ. ಇದಕ್ಕೆ ಸಚಿವಾಲಯದ ಒಪ್ಪಿಗೆಯೂ ಇದೆಯಂತೆ. ಆಹಾ! ಎಂಥಾ ಸೊಗಸಾದ ಸುದ್ದಿ ಇದು. ಕನ್ನಡ ಭಾಷೆಯ ಹೂಡಿಕೆದಾರರು ಕನ್ನಡದಲ್ಲೇ ತಮಗೆ ಬೇಕಾದ ಕಂಪನಿಯ ಲೆಕ್ಕಪತ್ರಗಳನ್ನು ನೋಡಿಕೊಳ್ಳುವಂತಾಗುತ್ತದೆ ಎನ್ನುವ ಸುದ್ದಿಯೇ ಸೂಪರ್ರು ಗುರೂ! ಇಂಥಾ ಕ್ರಮಗಳಿಂದ ಮಾತ್ರವೇ "ಹಣಕಾಸು ಒಳಗೊಳ್ಳುವಿಕೆ"ಯಂತಹ ಜನರಿಗೆ ಉಪಯೋಗವಾಗೋ ಯೋಜನೆಗಳು ಎಲ್ಲರನ್ನೂ ಮುಟ್ಟಲು ಸಾಧ್ಯ! ಅಂದ ಹಾಗೆ ಈ ಸಚಿವಾಲಯದ ಮಂತ್ರಿಗಳು ನಮ್ಮ ಕರ್ನಾಟಕದ ಶ್ರೀ ವೀರಪ್ಪ ಮೊಯ್ಲಿಯವರು ಅನ್ನೋದು ಕೂಡಾ ಸಂತಸದ ವಿಷಯವೇ ಆಗಿದೆ. ಇರಲಿ, ಇದು ಯಾವುದೋ ಒಂದು ಯೋಜನೆಗೆ, ಒಂದು ಇಲಾಖೆಗೆ ಸೀಮಿತವಾಗಿಬಿಡಬಾರದು. ಕೇಂದ್ರಸರ್ಕಾರದ ಎಲ್ಲಾ ಸಚಿವಾಲಯಗಳು, ಇಲಾಖೆಗಳು, ಭಾರತದ ಸಂವಿಧಾನದ ಎಂಟನೇ ಪರಿಚ್ಛೇಧದಲ್ಲಿರುವ ಎಲ್ಲಾ ೨೨ ಭಾಷೆಗಳಲ್ಲಿ ಸೇವೆ ಕೊಡುವಂತಾಗಲಿ...! ಹೌದಲ್ವಾ ಗುರೂ?

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails