ಮೆಟ್ರೋಲಿ ಹಿಂದೀ: ಜನರ ದೂರು ಮತ್ತು ಅಧಿಕಾರಿಗಳ ಜೋರು!!

( ಫೋಟೋ ಕೃಪೆ: http://www.skyscrapercity.com/showthread.php?p=83403565)

ನಮ್ಮ ಮೆಟ್ರೋದಲ್ಲಿ ಹಿಂದೀಗೆ ಸ್ಥಾನ ಕೊಟ್ಟಿರೋದ್ರು ಬಗ್ಗೆ ಕಳವಳ ವ್ಯಕ್ತಪಡಿಸಿ ಸಂಬಂಧಿಸಿದ "ನಮ್ಮ ಮೆಟ್ರೋ" ಅಧಿಕಾರಿಗಳಿಗೆ ದೂರುಗಳನ್ನು ನೀಡಿದ್ದ ಕೆಲ ಓದುಗರು ಮೆಟ್ರೋದಿಂದ ಬಂದಿರೋ ಉತ್ತರಗಳನ್ನು ನೋಡಿ ದಂಗಾಗಿದ್ದಾರೆ ಗುರೂ! ಬಳಗದ ಜೊತೆ ನಮ್ಮ ಮೆಟ್ರೋ ಮೇಲಧಿಕಾರಿಗಳ ಮಿಂಚೆಯನ್ನು ಹಂಚಿಕೊಂಡಿರುವ ಈ ಗೆಳೆಯರ ಅನುಭವ ನಿಜಕ್ಕೂ ಸಾರ್ವಜನಿಕ ಸೇವೆಯಲ್ಲಿರುವವರ ಮನಸ್ಥಿತಿ ಹೀಗೂ ಇರಬಹುದಾ? ಎನ್ನುವ ಅನುಮಾನ ಹುಟ್ಟಿಸುವಂತಿದೆ.

ಉದ್ಧಟತನದ ಉತ್ತರಗಳು!

"ಕನ್ನಡದಲ್ಲಿ ನಿಮಗೆ ಸೇವೆ ಸಿಗುತ್ತಿರುವ ತನಕ ನಿಮಗೆ ಅತೃಪ್ತಿ ಇರಬಾರದು!
ಇನ್ಮುಂದೆ ನನಗೆ ನೀವು ಪತ್ರ ಬರೆಯೋ ಅಗತ್ಯವಿಲ್ಲ!
ಬೇಕಾದ್ರೆ ನ್ಯಾಯಾಲಯಕ್ಕೆ ಹೋಗಿ!
ಸಂವಿಧಾನದಲ್ಲಿ ಬರೆದಿರೋದ್ರು ಬಗ್ಗೆ ನಿಮ್ಮ ಕಾನೂನು ಸಲಹೆಗಾರರಿಂದ ಸಲಹೆ ಪಡ್ಕೊಂಡು ಸರಿಯಾಗಿ ತಿಳ್ಕೊಳ್ಳಿ !
ನಿಮ್ಮ ಹಿಂದೀ ದ್ವೇಷವನ್ನು ಬಿಡಿ!
ಹಿಂದೀ ದ್ವೇಷದ ಚಳವಳಿಯನ್ನು ಬಿಡಿ! 
ಸ್ವಲ್ಪ ಸಹನಶೀಲತೆಯನ್ನು ಮೈಗೂಡಿಸಿಕೊಳ್ಳಿ!
ನಾವು ರಾಷ್ಟ್ರೀಯ ಏಕತೆಗಾಗಿ ರೂಪಿಸಿರುವ ಸಾಧನಗಳಲ್ಲಿ ಒಂದಾದ ತ್ರಿಭಾಷಾಸೂತ್ರದ ನೀತಿಯನ್ನು ಅಳವಡಿಸಿಕೊಂಡಿದ್ದೇವೆ.
ಇಲ್ಲಿನ ಸೆಕ್ಯೂರಿಟಿ ಗಾರ್ಡ್ ಕನ್ನಡದಲ್ಲಿ ತರಬೇತಿ ಪಡೆದಿಲ್ಲ. ಅವನನ್ನು ಮಾತಾಡಿಸಿ ಅವನ ಕರ್ತವ್ಯಕ್ಕೆ ತೊಂದರೆ ಮಾಡಿದ್ದೀರಿ, ನಿಮ್ಮ ದೂರೇನಿದ್ದರೂ ಸಂಬಂಧಿಸಿದ ಸಾರ್ವಜನಿಕ ಸಂಪರ್ಕ ಅಧಿಕಾರಿಯ ಹತ್ತಿರ ಮಾತಾಡಿಕೊಳ್ಳಿ"
ದೇಶದ ಏಕತೆಗಾಗಿ ಹಿಂದೀನಾ ಹಾಕಿದೀವಿ... ತೆಪ್ಪಗಿರಿ ಎನ್ನುವ ಧ್ವನಿಯಲ್ಲಿ ಹೀಗೆಲ್ಲಾ ಉತ್ತರ ಬರೆದಿರೋದು ಮೆಟ್ರೋ ಸಂಸ್ಥೆಯ ಯಾವುದೋ ಸಣ್ಣ ಸ್ತರದ ಅಧಿಕಾರಿಯಲ್ಲ... ಅದು ಮೆಟ್ರೋದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶ್ರೀ ಸಿವಸೈಲಂ ಅವರದ್ದು! ಅಬ್ಬಾ ಎಂತಹ ಸೌಜನ್ಯಾ ಅಲ್ವಾ? ಸಾಹೇಬರ ಉತ್ತರದ ಧಾಟಿಯನ್ನು ಬದಿಗಿಟ್ಟು ಅವರು ನೀಡಿರುವ ಕಾರಣಗಳತ್ತ ಕಣ್ಣು ಹಾಯಿಸಿದರೆ ಮುಖ್ಯವಾಗಿ ಹಿಂದೀ ಬಳಸಲು ಅವರು ನೀಡಿರುವ ಸಮರ್ಥನೆ ಕೇಂದ್ರ ಸರ್ಕಾರದ ತ್ರಿಭಾಷಾ ಸೂತ್ರದ ಬಗ್ಗೆ, ನಮ್ಮ ಮೆಟ್ರೋದಲ್ಲಿ ಕೇಂದ್ರಸರ್ಕಾರ ಹಣ ಹೂಡಿರುವ ಕಾರಣದಿಂದಾಗಿಯೂ, ದೇಶದ ಒಗ್ಗಟ್ಟಿಗಾಗಿಯೂ ಹಿಂದೀಯನ್ನು ಬಳಸಿದ್ದೇವೆ ಎಂದಿದ್ದಾರೆ. ನಮ್ಮ ನಾಡಿನಲ್ಲಿ ನಮ್ಮದಲ್ಲದ ಭಾಷೆ ಯಾಕೆ ಬಳಸಿದ್ದೀರಿ ಎಂದರೆ ಅದಕ್ಕೆ ಹಿಂದೀ ದ್ವೇಷ ಚಳವಳಿ ಎನ್ನುವ ಹೆಸರಿಡುವ ಅಧಿಕಾರವನ್ನು ಇವರಿಗ್ಯಾರು ಕೊಟ್ಟರೋ ಕಾಣೆವು! ಸುರಕ್ಷತಾ ಸಿಬ್ಬಂದಿಗೆ ಕನ್ನಡ ಬಾರದಿರುವುದನ್ನು ಸಮರ್ಥಿಸುತ್ತಾ ಅವರನ್ನು ಮಾತಾಡಿಸಿ ಕರ್ತವ್ಯಕ್ಕೆ ತೊಂದರೆ ಕೊಟ್ಟಿದ್ದೀರಿ ಎಂದು ಪ್ರತಿ ದೂರುವುದರ ಹಿಂದೆ ಹೇಗಾದರೂ ಸರಿ, ಬಾಯಿ ಮುಚ್ಚಿಸುವ ಮನಸ್ಥಿತಿಯಲ್ಲದೆ ಬೇರೇನೂ ಇದ್ದಂತಿಲ್ಲ... ನಾಳೆ ಯಾವುದಾದರೂ ಅಪಾಯಕಾರಿ ಸನ್ನಿವೇಶವುಂಟಾದರೆ ನಾವು ಸೆಕ್ಯುರಿಟಿಗೆ ತಿಳಿಸಬೇಕೋ ಬೇಡವೋ? ಕನ್ನಡ ಬಾರದವರಿಗೆ ಹೇಗೆ ತಿಳಿಸಬೇಕು? ಎನ್ನುವ ಬಗ್ಗೆ ಕಾಳಜಿಯಾಗಲೀ ಆಲೋಚನೆಯಾಗಲೀ ಇವರುಗಳಿಗೆ ಇದ್ದಂತಿಲ್ಲ!

ತ್ರಿಭಾಷಾ ಸೂತ್ರ ರಾಷ್ಟ್ರೀಯ ನೀತಿಯೇ? ಮೆಟ್ರೋಗೆ ಅನ್ವಯಿಸುವುದೇ?

ಭಾರತದ ಸಂವಿಧಾನದ ಭಾಗ XVIIರಲ್ಲಿ ಭಾಷಾನೀತಿಯ ಬಗ್ಗೆ ಹೇಳಲಾಗಿದೆ. ಇದರಂತೆ ಹಿಂದೀ ಮತ್ತು ಇಂಗ್ಲೀಷುಗಳನ್ನು ಭಾರತದ ಕೇಂದ್ರಸರ್ಕಾರದ ಆಡಳಿತ ಭಾಷೆಗಳನ್ನಾಗಿ ಘೋಷಿಸಲಾಗಿದೆ. (ಇಂಗ್ಲೀಷು ಸೇರಿಕೊಂಡ/ ಇಂದಿಗೂ ಉಳಿದುಕೊಂಡ ಕಥನ ಬೇರೆಯದೇ ಇದೆ). ಇದರ ಅಂಗವಾಗೇ ೧೯೬೭ರಲ್ಲಿ ರೂಪುಗೊಂಡು ೧೯೬೮ರಲ್ಲಿ ಸಂಸತ್ತಿನ ಎರಡೂ ಸದನಗಳಲ್ಲಿ ಮಂಡನೆಯಾಗಿ ಅಂಗೀಕಾರವಾದದ್ದೇ "ಆಡಳಿತ ಭಾಷಾ ನಿರ್ಣಯ, ೧೯೬೮". ಇದರ ಅಂಗವಾಗಿಯೇ "ತ್ರಿಭಾಷಾ ಸೂತ್ರ" ರೂಪುಗೊಂಡಿತು. ಮೂಲತಃ ಕೇಂದ್ರಸರ್ಕಾರಿ ನೌಕರಿಯ ಪ್ರವೇಶ ಪರೀಕ್ಷೆಗಳನ್ನು ಹಿಂದೀ/ ಇಂಗ್ಲೀಷುಗಳಲ್ಲಿ ಮಾತ್ರಾ ನಡೆಸುವುದಕ್ಕೆ ಅನೇಕ ಹಿಂದೀಯೇತರ ರಾಜ್ಯಗಳು ವಿರೋಧ ಸೂಚಿಸಿ, ಹೋರಾಟ ನಡೆಸಿದ್ದರಿಂದ ಹುಟ್ಟಿಕೊಂಡ ರಾಜೀಸೂತ್ರ "ತ್ರಿಭಾಷಾ ಸೂತ್ರ" ಎಂದರೆ ತಪ್ಪಾಗಲಾರದು. ಕೇಂದ್ರಸರ್ಕಾರಿ ನೌಕರಿಗಳ ಪರೀಕ್ಷೆಗಳನ್ನು ಎಂಟನೇ ಪರಿಚ್ಛೇಧದಲ್ಲಿ ಪಟ್ಟಿ ಮಾಡಿರುವ ಭಾಷೆಗಳಲ್ಲೂ ನಡೆಸಲು ಅವಕಾಶ ನೀಡುವ ಈ ನಿರ್ಣಯವು "ರಾಜ್ಯಸರ್ಕಾರಗಳ ಜೊತೆ ಸಮಾಲೋಚಿಸಿ" ರಾಷ್ಟ್ರೀಯ ಏಕತೆಯನ್ನು ಮೂಡಿಸಲು ತ್ರಿಭಾಷಾ ಸೂತ್ರವನ್ನು ಜಾರಿಮಾಡಬೇಕು ಎಂದು ಹೇಳಿದೆ. ತ್ರಿಭಾಷಾ ಸೂತ್ರದ ಅನ್ವಯವಾಗಿ ಹಿಂದೀ ಭಾಷಿಕ ಪ್ರದೇಶಗಳ ಮಕ್ಕಳು ಹಿಂದೀ - ಇಂಗ್ಲೀಷ್ ಜೊತೆಯಲ್ಲಿ ಇನ್ನೊಂದು ಭಾರತೀಯ ಭಾಷೆಯನ್ನು (ವಿಶೇಷವಾಗಿ ದಕ್ಷಿಣ ಭಾರತೀಯ ಭಾಷೆಯನ್ನು) ಕಲಿಯತಕ್ಕದ್ದು ಮತ್ತು ಅಂತೆಯೇ ಹಿಂದೀಯೇತರ ರಾಜ್ಯಗಳ ಮಕ್ಕಳು ರಾಜ್ಯಭಾಷೆ - ಇಂಗ್ಲೀಷ್ - ಹಿಂದೀಯನ್ನು ಕಲಿಯತಕ್ಕದ್ದು ಎನ್ನಲಾಗಿದೆ. ಈ ನಿರ್ಣಯದಲ್ಲಿ ಕೇಂದ್ರಸರ್ಕಾರ ಹಣ ಹೂಡುವ ಸಾರ್ವಜನಿಕ ಯೋಜನೆಗಳಲ್ಲಿ ತ್ರಿಭಾಷಾ ಸೂತ್ರ ಇರಬೇಕು ಎಂದು ಎಲ್ಲಿದೆಯೋ ಹುಡುಕಿದರೂ ಸಿಗುತ್ತಿಲ್ಲಾ ಗುರೂ!

ಕೇಂದ್ರದ ಒಂದು ೨,೦೦೦ ಕೋಟಿಗೆ ಹಿಂದೀ, ರಾಜ್ಯದ ವಾರ್ಷಿಕ ೮೦,೦೦೦ ಕೋಟಿಗೆ?

ಕೇಂದ್ರಸರ್ಕಾರ ಇಂಥದ್ದೊಂದು ಸೂಚನೆಯನ್ನು ಮೆಟ್ರೋಗೆ ನೀಡಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮೆಟ್ರೋದ ಶ್ರೀ ಸಿವಸೈಲಂ ಅವರು ಮಾತ್ರಾ, ತಾವು ಭಾರತದ ಏಕತೆಯ ಹರಿಕಾರರೆನ್ನುವಂತೆ ಮಾತಾಡುತ್ತಾ ಕನ್ನಡಿಗರಿಗೆ ಸಹಿಷ್ಣುತೆಯನ್ನು ಬೋಧಿಸುತ್ತಿರುವುದನ್ನು ಕಂಡಾಗ ವಿಪರ್ಯಾಸವೆನ್ನಿಸುತ್ತದೆ. ಆದರೂ ಮೆಟ್ರೋ ಯೋಜನೆಯಲ್ಲಿ ಸುಮಾರು ೩೦% ಹೂಡಿಕೆ ಹೊಂದಿರುವ ಕಾರಣದಿಂದಲೇ ಇಲ್ಲಿ ಹಿಂದೀ ಇರಬೇಕು ಎನ್ನುವುದಾದರೆ ಪ್ರತಿವರ್ಷ ಸುಮಾರು ೮೦,೦೦೦ ಕೋಟಿ ತೆರಿಗೆಯನ್ನು ಕರ್ನಾಟಕದಿಂದ ಸಂಗ್ರಹಿಸುವ ಕೇಂದ್ರಕ್ಕೆ ಕೇಂದ್ರದ ಆಡಳಿತದಲ್ಲಿ ಕನ್ನಡ ಇರಬೇಕೆಂಬುದು ಅರಿವಾಗದೇ? ಮೆಟ್ರೋ ರೈಲು ಯೋಜನೆಗೆ ಜಪಾನ್ ದೇಶವೂ ಹಣಕಾಸು ನೀಡಿದೆ (ಸಾಲವಾಗಿ). ಹಾಗಾಗಿ ಜಪಾನಿ ಭಾಷೆಯೂ ಇರಬೇಕಲ್ಲವೇ? ಕೇಂದ್ರಸರ್ಕಾರ ರಾಜ್ಯದ/ ನಗರಗಳ/ ಪಟ್ಟಣಗಳ/ ಹಳ್ಳಿಗಳ ಹತ್ತಾರು ಯೋಜನೆಗಳಿಗೆ ಅನುದಾನ ನೀಡುತ್ತದೆ. ಸರ್ವಶಿಕ್ಷಾ ಅಭಿಯಾನ/ ನರ್ಮ್/ ಪ್ರಧಾನಮಂತ್ರಿ ಗ್ರಾಮ ಸಡಕ್/ ಜವಾಹರ್ ರೋಜಗಾರ್ ಯೋಜನೆಗಳೇ ಮೊದಲಾದ ಯೋಜನೆಗಳಲ್ಲೆಲ್ಲಾ ಹಿಂದೀ ಇರಬೇಕೆಂದು ಕೇಂದ್ರ ನಿಬಂಧನೆ ಮಾಡಲಾದೀತೇ? ಹಾಗೆ ಮಾಡುವುದಾದರೆ ವಿಶ್ವಸಂಸ್ಥೆಯಿಂದ ಸಾಕಷ್ಟು ಹಣ ಪಡೆಯುವ ಭಾರತ ಸರ್ಕಾರಕ್ಕೆ "ವಿಶ್ವಸಂಸ್ಥೆಯ ಭಾಷಾನೀತಿ"ಯನ್ನು ಪಾಲಿಸಬೇಕೆಂಬ ನಿಬಂಧನೆಯಿಲ್ಲವೇ? ಇಷ್ಟಕ್ಕೂ ಕೇಂದ್ರಸರ್ಕಾರಿ ಕಛೇರಿಗಳಾದ ಪಾಸ್‍ಪೋರ್ಟ್ ಕಛೇರಿಯೇ ಮೊದಲಾದೆಡೆ ತ್ರಿಭಾಷಾ ಸೂತ್ರ ಎಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗಿದೆ? ಪಾಸ್‍ಪೋರ್ಟ್ ಅರ್ಜಿ, ಜೀವವಿಮೆ, ಬ್ಯಾಂಕ್ ಚೆಕ್ಕುಗಳಲ್ಲಿ ತ್ರಿಭಾಷೆ ಯಾಕಿಲ್ಲಾ? ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುವವರಾದರೂ ಯಾರು ಗುರೂ?!

ಕೊನೆಹನಿ: ಇರುವ ಗ್ರಾಹಕ ಒಬ್ಬನಾದರೂ ಕೂಡಾ, ಆ ದೂರಿನ ದನಿ ಒಂಟಿಯಾಗಿದ್ದರೂ ಕೂಡಾ ಸೌಜನ್ಯದಿಂದ ಉತ್ತರಿಸುವುದನ್ನು, ದೂರು ಕೊಟ್ಟವರನ್ನೇ ದೂರುವುದನ್ನು ಬಿಡುವುದನ್ನೂ ಮೆಟ್ರೋ ಅಧಿಕಾರಿಗಳಿಗೆ ಸರ್ಕಾರ ಕಲಿಸಿಕೊಟ್ಟೀತೆ? ಕರ್ನಾಟಕ ರಾಜ್ಯಸರ್ಕಾರದ ಕಚ್ಚದ, ಭುಸುಗುಟ್ಟದ "ಕನ್ನಡ ಅಭಿವೃದ್ಧಿ ಪ್ರಾಧಿಕಾರ"ವೆಂಬ ಕನ್ನಡ ಕಾವಲು ಸರ್ಪ ಈಗಾದರೂ ಭುಸುಗುಟ್ಟೀತೇ?

19 ಅನಿಸಿಕೆಗಳು:

VK ಅಂತಾರೆ...

’ಮೆಟ್ರೋ’ ಅಂದರೆ ಕನ್ನಡಿಗರನ್ನು ಮೆಟ್ಟಲು ಹೊರಟಿದ್ದಾರೆ ಅನಿಸುತ್ತಿದೆ. ... !!!

Jayateerth Nadagouda ಅಂತಾರೆ...

ಮೆಟ್ರೋ ನಲ್ಲಿ ಎಗ್ಗಿಲ್ಲದೆ ಹಿಂದಿ ಹೇರಿಕೆ
ಇದು ತಪ್ಪು, ಹೀಗೆತಕೆ?
ದಿಲ್ಲಿ ಮೆಟ್ರೋ ನಲ್ಲಿ ದ್ವಿಭಾಷೆ,ನಮ್ಮ ಮೆಟ್ರೊನಲ್ಲಿ ತ್ರಿ-ಭಾಷೆ ಸಲ್ಲದ ಹೋಲಿಕೆ!
ಪ್ರಶ್ನಿಸಿದರೆ ಮೆಟ್ರೋ ಅಧಿಕಾರಿಗಳ ಧೂರ್ತತನದ ಹೇಳಿಕೆ
ಮಾಡುವರು ಪ್ರಜೆಗಳಿಗೆ ಮೇಲೆ ದಬ್ಬಾಳಿಕೆ
ಇದು ಕನ್ನಡಿಗರ ತೆರಿಗೆ ಹಣದ ದುರ್ಬಳಕೆ
ಆಯ.ಏ.ಎಸ್ ಅಧಿಕಾರಿಗಳೇ ಹಿಂಗಾದ್ರೆ ಹೆಂಗಯ್ಯ ಮಾಡೋದು ನಾವು ಬಾಳ್ವಿಕೆ

Anonymous ಅಂತಾರೆ...

೧೦೦ಕ್ಕೆ ನೂರು ದಿಟ, ಮನವಿಗೆ ಮಾನವೀಯತೆ ತೋರಲ್ಲ ಗುರು
ಈ ಅಧಿಕಾರಿಗಳು, ಕೆಲವರಿಗೆ ಉತ್ತರಿಸಿದರೆ ಇನ್ನು ಕೆಲವರಿಗೆ ಅದದೇ ಉತ್ತರಿಸಿ
ನಾವ್ ಬರ್ದದ್ದೇ ತಪ್ಪು, ಕಾನೂನು ಬಾಹೀರ ಅಂತೆಲ್ಲಾ ಕತೆ ಕಟ್ಟ್ತರೆ ಗುರು?
ಇವ್ರಿಗೆಲ್ಲ ಬೋರ್ಡ್ ಬರ್ಸಕ್ಕೆ ಹೇಳ್ಬಾರ್ದು, ನಮ್ಮೂರಲ್ಲ ತುಂಬಾ ಜನ
ಕೆಲ್ಸ ಇಲ್ದೆ ಖಾಲಿ ಇದಾರೆ ಅವ್ರನ್ನೆ ಕಳಿಸಿಬಿಡೋಣ ಅಂತ ಇದ್ದೀನಿ.

ಪ್ರಶಾಂತ ಸೊರಟೂರ ಅಂತಾರೆ...

ಮೆಟ್ರೋದವರೇ,
ಎಚ್ಚೆತ್ತುಕೊಂಡು ಸರಿಪಡಿಸಿಕೊಳ್ಳಿ.
ಸಿಟ್ಟಾಗಬೇಕಾದವರು ಕನ್ನಡಿಗರು ಹೊರತು ಸಾರ್ವಜನಿಕ ಸೇವೆಯಲ್ಲಿರುವ ನೀವಲ್ಲ !
ಸೌಜನ್ಯದಿಂದ ಬರೆದ ಕನ್ನಡಿಗರ ಪತ್ರಗಳಿಗೆ ಎಂತಹ ಉದ್ಧಟತನದ ಉತ್ತರಗಳು !!

ನವೀನ್ ಅಂತಾರೆ...

ನಮ್ಮ ಮೆಟ್ರೋದಲ್ಲಿ ಕೆಲಸ ಚಾಲಕರು ಹಾಗು ತಂತ್ರಜ್ಞರು ಎಲ್ಲಾರು ಕನ್ನಡಿಗರೇ ಅಂತ ಕೇಳಿ ಖುಷಿಯಾಗಿತ್ತು. ಈಗ ಬೇರೆ ಭಾಷೆಯ ಸೆಕ್ಯೂರಿಟಿಯವರನ್ನ ತಂದಿಟ್ಟಿದ್ದಾರೆ ನಾಳೆ ಎಲ್ಲರೂ ಕನ್ನಡಿಗರನ್ನು replace ಮಾಡಿ. ನಾವು ಪ್ರಯಾಣ ಮಾಡೋಕೆ ಅವ್ರ ಭಾಷೆ ಕಲಿಯೋ ಸ್ಥಿತಿ ತರ್ತಾರೆ. ಬೇರಿನಲ್ಲೇ ಕಿತ್ತೊಗಿಬೇಕು ಇವರನ್ನ..

Anonymous ಅಂತಾರೆ...

ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಕಿರಿಯ ಪೀಳಿಗೆಯವರಿಗೆ ಕನ್ನಡದ ಬಗ್ಗೆ ದುರಭಿಮಾನ (ಹೌದು ಸ್ವಾಮಿ , ನಮ್ಮ ಕನ್ನಡದ ಉಳಿವಿಗೆ ಇದು ಅಗತ್ಯ ,ಬೇರೆ ವಿಧಿ ಇಲ್ಲ.ತಮಿಳರನ್ನು ನೋಡಿ ಹೇಗೆ ತಮ್ಮ ಭಾಷೆಯನ್ನು ಮೆರೆಸುತ್ತಾರೆ ಅಂತ.ಅವರಿಗೆ ಎಲ್ಲ ರಂಗಗಳಲ್ಲೂ ಯಶಸ್ಸು ಸಿದ್ಧಿಸುವುದರಲ್ಲಿ ಭಾಷಾಭಿಮಾನವೂ ಒಂದು ಮುಖ್ಯ ಕಾರಣ )ಬೆಳೆಸೋಣ.ನೆಹರೂ ಮುಂತಾದ national leaders ಗಳು ನಮಗೆ ಸ್ವಾತಂತ್ರ್ಯ ತಂದುಕೊಟ್ರು ಮುಂತಾದ ಹಸಿ ಸುಳ್ಳುಗಳಿಂದ ನಮ್ಮ ಮಕ್ಕಳ ಮನಸ್ಸು ಚಿಕ್ಕ ವಯಸ್ಸಿನಿಂದಲೇ ನಾವು local ಅನ್ನೋ ಭಾವನೆ ಬೆಳೆಸಿಕೊಳ್ಳುವುದನ್ನ ತಪ್ಪಿಸಿ , ನಾವೂ ಕೂಡಾ "national" ಹಾಗೂ "international " ಅಂತ ತಿಳಿದುಕೊಳ್ಳುವ ಹಾಗೆ ಮಾಡೋಣ.

Anonymous ಅಂತಾರೆ...

High court /lokayoukta court gae hoogi antiddaralla, naavu yaake hogabaradu? yella oggataagi court gae yelino BMRCL gae

vijayashankar metikurke ಅಂತಾರೆ...

ವಿಜಯಶಂಕರ್ ಮೇಟಿಕುರ್ಕೆ

ಈ ನಿಮ್ಮ ಲೇಖನವನ್ನು ಎಲ್ಲ ಕರ್ನಾಟಕದ ಮಂತ್ರಿಗಳಿಗು,ಲೋಕಸಭಾ ಸದಸ್ಯರಿಗು.ವಿಧಾನಸಭ ಸದಸ್ಯರಿಗೂ, ಎಲ್ಲ ಕನ್ನಡ ಸಂಘ ಸಂಸ್ಥೆಗಳಿಗೂ ತಕ್ಷಣ ಮಿಂಚಂಚೆ ಮೂಲಕ ಕಳಿಸಿ ಅಲ್ಲದೆ ಇಂಥ ಅಂಚೆ ಗಳನ್ನು ಪ್ರತಿದಿನ ಒಂದು ತಿಂಗಳ ಕಾಲ ಇಂಗ್ಲೀಶ್ ನ ಬ್ಲಿಟ್ಜ಼್ ಕ್ರೀಗ್ ಮಾಡ ಬೇಕಾಗಿದೆ.

Gowda ಅಂತಾರೆ...

ನಾನು ಕೂಡ ಮಾನ್ಯ ಸಿವಸೈಲಂ ಅವರಿಗೆ ಮಿಂಚಿಸಿ ಇದೆ ಪ್ರಶ್ನೆ ಕೇಳಿದ್ದಕ್ಕೆ "ನ್ಯಾಯಾಲಯದಲ್ಲಿ ದಾವೆ ಹೂಡಿ. ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ನಮಗಿಲ್ಲ. ಆದರೆ ನ್ಯಾಯಾಲಯದಿಂದ ಸೂಚನೆ ಬಂದರೆ ಅದನ್ನು ಅಳವಡಿಸಲೇ ಬೇಕಾಗುತ್ತೆ" ಅಂತ ಹೇಳಿದ್ರು. ನಾನು ಉಚ್ಚ ನ್ಯಾಯಾಲಯದಲ್ಲಿ PIL ದಾಖಲಿಸಿಯೇ ಬಿಡೋಣ ಅಂತ ತೀರ್ಮಾನ ಮಾಡಿದ್ದೇನೆ. ಆದರೆ ನಾನು ಅಲೆಮಾರಿ. ಹೊಟ್ಟೆ ಪಾಡಿಗಾಗಿ ಈಗ ಅಮೇರಿಕ ದೇಶದಲ್ಲಿ ಇದ್ದೇನೆ. ಯಾರಾದ್ರೂ ನಿಮ್ಮಲ್ಲಿ ಉತ್ತಮ ವಕೀಲರಿದ್ದರೆ ನಾನು ಈ ಕೇಸ್ ನಡೆಸಲು ನನ್ನ ಕೊಡುಗೆ ಅಂತ ರೂ ೧೦೦೦೦ ನೀಡೋದಕ್ಕೆ ತಯಾರಿದ್ದೇನೆ. (Immediately after a notice is issued to BMRC). ನನ್ನ ಹಾಗೆ ಖಂಡಿತವಾಗಿ ಬಹಳ ಜನ ಇದ್ದಾರೆ. ೧೦೦೦ ಜನ ತಲಾ ರೂ ೧೦೦ ಚಂದಾ ಕೊಟ್ಟರೂ ಅದು ಸಾಕಷ್ಟು ಆಗುತ್ತೆ. ಇದರ ಬಗ್ಗೆ ಯಾರದ್ರೂ ಮುಂದಾಳುತ್ವ ವಹಿಸೋರಿದ್ರೆ ನನ್ನನ್ನು ಸಂಪರ್ಕಿಸ ಬಹುದಾದ ವಿಳಾಸ gowda4u@gmail.com

PS: ಸರಕಾರ ಅಥವಾ ಯಾವುದೇ ಸರಕಾರೀ ವಿಭಾಗದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ೨ ತಿಂಗಳ ಮುಂಚೆನೇ 'notice' ಕೊಡಬೇಕು.

Girish ಅಂತಾರೆ...

"ಕನ್ನಡ ಅಭಿವೃದ್ಧಿ ಪ್ರಾಧಿಕಾರ"ವೆಂಬ ಕನ್ನಡ ಕಾವಲು ಸರ್ಪ ಸತ್ತೊಗಿ ಯಾವುದೊ ಕಾಲವಾಹಿತು ಅದರಬಗ್ಗೆ ಮಾತಡಿಯು ಪ್ರಯೊಜನವಿಲ್ಲ ಇನ್ನು ನಮ್ಮನು ಹಾಳುತಿರುವವರು ರಾಷ್ತ್ರಿಯ ಪಕ್ಷಗಳು ಈ ಪಕ್ಷಗಳಿಗೆ ನಮ್ಮ ರಾಜಕಾರಣಿಗಳು ಸೆರಬೆಕಾದರೆ ಹಿಂದಿಯನ್ನು ಅಬಿವೃದ್ದಿ ಪಡಿಸುತ್ತೆವೆ ಎಂದು ಶಪತ ಮಾಡಿ ಪಕ್ಷಕ್ಕೆ ಸೆರಿರುತ್ತಾರೆ ಇಗಿರುವಾಗ ಕನ್ನಡದ ಅಬಿವೃದ್ದಿ ಎಲ್ಲಿಂದ ಬಂತು ಈ ರಾಷ್ಟ್ರೀಯ ಪಕ್ಷಗಳನ್ನು ಹಿಮ್ಮೆಟಿಸುವಂತ ಸ್ವಂತ ರಾಜಕೀಯ ಪಕ್ಷ ನಮ್ಮ ರಾಜ್ಯದಲ್ಲಿ ಅದಿಕಾರಕ್ಕೆ ಬರುವವರೆಗೆ ಕನ್ನಡದ ಅಬಿವೃದ್ದಿ ಅಸಾದ್ಯ.......................

Anonymous ಅಂತಾರೆ...

ಎಲ್ಲಾ ರಾಜ್ಯಗಳಿಗೂ ಸಂಪೂರ್ಣ ಸ್ವಾಯುತ್ತತೆ ಇರಬೇಕು. ಆಗ ಮಾತ್ರ ಪ್ರಜಾಪ್ರಭುತ್ವಕ್ಕೆ ಮತ್ತು ಒಕ್ಕೂಟ ವ್ಯವಸ್ಥೆಗೆ ಒಂದು ಅರ್ಥ ಇರುತ್ತದೆ. ಇಲ್ಲದಿದ್ದಲ್ಲಿ ಇಂಗ್ಲೀಷ್ ನವರ ಬದಲು ನಮ್ಮನ್ನು ಹಿಂದಿಯವರು ಆಳ್ತಾ ಇದ್ದಾರೆ ಅಷ್ಟೇ ವ್ಯತ್ಯಾಸ. ದೇಶಕ್ಕೆ ಸ್ವಾತಂತ್ರ್ಯ ಬಂದದ್ದು ಕನ್ನಡಿಗರಿಗೇನು ಆದ ಲಾಭ?
- ಹರಿಹರ

manju ಅಂತಾರೆ...

Gowda avara salahege nanna sahamathavide.. naavu ee vishayavannu nyayalayakke oyyuvudu utthamavaada maarga.

karunadu ಅಂತಾರೆ...

ಕನ್ನಡ ಇದ್ಯಲ್ಲ ಹಿಂದಿ ಯಾಕ್ ಬೇಡ
=======
ಈ ಪರಿಯ ಪ್ರಶ್ನೆಗಳ್ನ ಕನ್ನಡೆತರರಿಗಿಂತ ಕನ್ನಡಿಗರೇ ಹೆಚ್ಚಾಗಿ ಕೇಳೋದು.....ನೀವು ಯಾವುದೇ ಯುವ ಕನ್ನಡಿಗರಿಗೆ ಹಿಂದಿ ಬಳಕೆ ಅನವಶ್ಯಕ ಅಂತ ಅಂದ್ರೆ ನಮ್ ಹತ್ರಾನೆ ವಾದ ಮಾಡ್ತಾರೆ.......ಸೋಜಿಗ ಅಂದ್ರೆ ಇದು ಹಿಂದಿ ಹೇರಿಕೆಯ ಹುನ್ನಾರ ಅಂತ ನಮ್ಮ ಕನ್ನಡಿಗರಿಗೆ ಹೇಳಿದರೆ ಅರ್ಥನೇ ಆಗೋದಿಲ್ಲ.....ಒಂದು ನಮ್ಮ ಮೇಲೆ 'ನೀನು ಕನ್ನಡ ಹೋರಾಟಗಾರನ' ಅಂತ ಹರಿಹಾಯ್ತರೆ ಇಲ್ಲಾಂದ್ರೆ 'ರಾಷ್ಟ್ರಭಾಷೆ' ಅನ್ನೋ ಹುಸಿ ನಾಡಪ್ರೇಮವನ್ನು ತೋರಿಸ್ತಾರೆ...ಹಿಂದಿವಾದಿಗಳು ನಮ್ ಮಂದಿಯ ತಲೆನ ಸಕ್ಕತಾಗೆ ಕೆಡ್ಸಿಯಾರೆ...........

Anonymous ಅಂತಾರೆ...

ee vishayavanneke patrikegaLalli prakatisi ella kannadigarigoo tiliyuvante maadabaaradu? eshtu jana kannadigaru antarjaali intaha suddiyannu odalu saadhya? avaru ee reetiyaagi barediruvudu nijave aadalli, Ka. Ra. Ve yaake yaavude kramavannu tegedukondilla?

panindra nadig ಅಂತಾರೆ...

I completely agree with article... last week a family came with kids around age 3 n 5 .. the security guard told them them to climb the train even there was siren of closing the door that too in half boiled hindi( bojpuri!!). the 2 kids went inside n door closed n train stated, when they asked the guard he statred telling rubbish in hindi n scolding that parents(who dont knew hindi) luckily other passanger told his fnd is in next station n will take care. Same happened in MG road station a lady purse fell down n doors got closed whilre there arrival n when they asked security no one in above floor knew kannada , even english to respond to her.. papa she crossed the track( which had high voltage n written on it) to get her bag again. If theis continues we will see some disasters happening soon in Namma metro...

shashimysooru ಅಂತಾರೆ...

ಈ ಒಂದು ತಿಂಗಳಲ್ಲಿ ಏನಾದರೂ ಬದಲಾವಣೆಯಾಗಿದೆಯೇ?

ಶ್ರೀ ಹರ್ಷವರ್ಧನ ಅಂತಾರೆ...

ಇಲ್ಲಿ ಇನ್ನೊಂದು ಪ್ರಶ್ನೆ ಮೂಡೋದು ಏನ್ನು ಅಂದರೆ, ಇದೇ ಸಿವಸೈಲಂ ಅವರ ರಾಜ್ಯವಾದ ತಮಿಳುನಾಡಿನಲ್ಲಿ ತ್ರಿಭಾಷಾ ಸೂತ್ರ ಅನುಸರಿಸೋದನ್ನ ಒಪ್ಪಿಕೊಳ್ಳುತ್ತಾರಾ? ಇದಕ್ಕೆ ಸರಿಯಾದ ಪರಿಹಾರ ಕಂಡುಕೊಳ್ಳದೇ ಹೋದರೆ, ಇಷ್ಟರಲ್ಲೇ ಮೆಟ್ರೋದಿಂದ ಕನ್ನಡವನ್ನೇ ತೆಗೆಬಿಟ್ಟಾನು ಈ ನಾಚಿಕೆಬಿಟ್ಟ ಮನುಷ್ಯ... ನಾವೇಕ ಎಲ್ಲಾ ಒಟ್ಟಾಗಿ ಕನ್ನಡ ಅಭಿವೃದ್ಧಿ ಪ್ರಾದಿಕಾರಕ್ಕೆ ಇದರ ಬಗ್ಗೆ ಮನದಟ್ಟು ಮಾಡಿ ಕೊಟ್ಟು, ಆಲ್ಲಿರುವ ಕನ್ನಡ ತಿಳಿಯದ ಕೆಲಸಗಾರರನ್ನು ಮನೆಗೆ ಕಳಿಸಬಾರದು? ನಮ್ಮ ಕನ್ನಡ ಸಂಘಗಳು ಇದರ ಬಗ್ಗೆ ಏನು ಹೇಳುತ್ತಾರೆ?

LOKESH ಅಂತಾರೆ...

Hindi herikege dikkaara !!

Anonymous ಅಂತಾರೆ...

Hindi herikege dikkaara !!

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails