ಡಬ್ಬಿಂಗ್: ಇದು ಕನ್ನಡಪರ ಹೇಗೆ?



ಡಬ್ಬಿಂಗ್ ವಿಷಯಕ್ಕೆ ಬಂದಾಗ ಚಿತ್ರರಂಗದ ಕೆಲವರು ಡಬ್ಬಿಂಗ್ ಬೇಕೆನ್ನೋದು ಕನ್ನಡ ವಿರೋಧಿ ನಿಲುವು ಎಂಬ ಮಾತನ್ನಾಡುತ್ತಾರೆ. ಡಬ್ಬಿಂಗ್ ಒಂದು ಭೂತವೆಂದೂ, ಅದು ಕನ್ನಡದ್ರೋಹವೆಂದೂ, ಕನ್ನಡ ಚಿತ್ರರಂಗಕ್ಕೆ ಮಾರಕವಾಗೋ ಮೂಲಕ ಕನ್ನಡತನವನ್ನು ನಾಶಮಾಡುತ್ತದೆಂದೂ, ಸಾವಿರಾರು ಕನ್ನಡಿಗರು ಬೀದಿಪಾಲಾಗುತ್ತಾರೆಂದೂ ಹೇಳಲಾಗುತ್ತದೆ. ಈ ಮಾತನ್ನು ಸಾಣೆ ಹಿಡಿಯದೆ ಕೇಳಿದಾಗ ಹೌದಪ್ಪಾ! ಕನ್ನಡ ಉಳಿಬೇಕೆಂದರೆ ಕನ್ನಡ ಚಿತ್ರರಂಗಕ್ಕೆ ಯಾವ ತೊಂದರೇನೂ ಆಗಬಾರದು ಎಂದು ಜನರು ಅಂದುಕೊಳ್ಳೋದು ಕೂಡಾ ಸಹಜ. ವಾಸ್ತವವಾಗಿ ಡಬ್ಬಿಂಗ್ ಪರ ಮಾತಾಡುತ್ತಿರುವವರಿಗೆ ಚಿತ್ರರಂಗದ ಬಗ್ಗೆಯಾಗಲೀ, ಅಲ್ಲಿನ ಯಾವುದೇ ಕಲಾವಿದರ ಬಗ್ಗೆಯಾಗಲೀ ದ್ವೇಷವಿದೆ ಎನ್ನುವ ಅಪಪ್ರಚಾರವೂ ಇದೆ. ಆದರೆ ಇಲ್ಲಿರುವುದು ಕನ್ನಡ ಚಿತ್ರರಂಗವನ್ನೂ ಒಳಗೊಂಡಂತೆ ಕನ್ನಡದ ಮೇಲಿರುವ ಕಾಳಜಿಯೊಂದೇ. ಇರಲಿ... ಈಗ ಡಬ್ಬಿಂಗ್ ಕನ್ನಡಪರಾನೋ ಅಲ್ವೋ ಅನ್ನೋದನ್ನು ನೋಡೋಣ.

ಡಬ್ಬಿಂಗ್ ಕನ್ನಡಕ್ಕೆ ಮಾರಕವೇ?

ಈ ಪ್ರಶ್ನೆ ನಿಜಕ್ಕೂ ನಾವು ಕೇಳಿಕೊಳ್ಳಬೇಕಾಗಿದೆ. ಸಾಮಾನ್ಯ ಕನ್ನಡಿಗನನ್ನು ಕಾಡುವುದು "ಕನ್ನಡನಾಡಲ್ಲಿ ಪರಭಾಷೆಯ ಚಿತ್ರಗಳೆಲ್ಲಾ ಡಬ್ ಆಗಿ ಬಂದುಬಿಟ್ಟರೆ, ನಾವು ನಾಳೆ ಚಿರಂಜೀವಿ, ಸೂರ್ಯ, ವಿಕ್ರಂ, ಮೋಹನ್‍ಲಾಲ್, ಮುಮ್ಮುಟ್ಟಿ, ಮಹೇಶ್ ಬಾಬು, ಜೂ. ಎನ್‌ಟಿಆರ್... ಹೀಗೆ ಕನ್ನಡದವರಲ್ಲದವರ ಕಟೌಟ್‌ಗಳನ್ನು ನಮ್ಮೂರಲ್ಲಿ ನೋಡಬೇಕಾಗುತ್ತದೆ" ಎನ್ನುವ ಭೀತಿ. "ಡಬ್ಬಿಂಗ್‌ನಿಂದ ಕನ್ನಡ ಚಿತ್ರರಂಗ ಬಾಗಿಲು ಹಾಕಬೇಕಾಗುತ್ತೆ, ಆಮೇಲೆ ಚಲನಚಿತ್ರ ಎಂಬ ಕ್ಷೇತ್ರದಲ್ಲಿ ಕನ್ನಡ ಅಳಿಸಿಹೋಗುತ್ತದೆ" ಎನ್ನುವ ಆತಂಕ, ಡಬ್ಬಿಂಗನ್ನು ವಿರೋಧಿಸುವ ಸಾಮಾನ್ಯ ಜನರಲ್ಲಿರುವ ಕಾಳಜಿಯಾಗಿದೆ. ಪ್ರಪಂಚದ ಎಲ್ಲಾದರೂ ಈ ರೀತಿ ಆದದ್ದಿದೆಯೇ? ಡಬ್ಬಿಂಗ್ ಬಂದುಬಿಟ್ಟರೆ ಕನ್ನಡದಲ್ಲಿ ಚಿತ್ರಗಳನ್ನು ತೆಗೆಯುವವರೇ ಇರುವುದಿಲ್ಲವೇ?   ಎನ್ನುವುದನ್ನು ನೋಡಿದರೆ ಈ ಆತಂಕಕ್ಕೆ ಸಮಾಧಾನ ಸಿಗುತ್ತದೆ. ಯಾವುದೇ ನಾಡಲ್ಲಿ ಡಬ್ಬಿಂಗ್ ಆದ ಚಿತ್ರಗಳೆಲ್ಲಾ ಯಶಸ್ಸು ಗಳಿಸುತ್ತವೆ ಎನ್ನುವುದಕ್ಕೆ ಯಾವ ಆಧಾರವೂ ಇಲ್ಲಾ. ಅದರಂತೆಯೇ ಡಬ್ಬಿಂಗ್ ಒಪ್ಪಿದ ಕಾರಣಕ್ಕೇ... ಒಂದಿಡೀ ಚಿತ್ರರಂಗವೇ ಮುಳುಗಿಹೋಗಿರುವ ಉದಾಹರಣೆಯೂ ಇಲ್ಲ. ವಾದಕ್ಕೆ ಮರಾಠಿ ಚಿತ್ರೋದ್ಯಮ ಡಬ್ಬಿಂಗ್‌ನಿಂದಾಗಿ ಮುಳುಗುತ್ತಿದೆ ಎನ್ನುವವರಿದ್ದಾರೆ. ಆದರೆ ಮರಾಠಿ ಚಿತ್ರರಂಗದ ದುಸ್ಥಿತಿಗೆ ಕಾರಣ ಆ ಜನರು ಹಿಂದೀಯನ್ನು ಒಪ್ಪಿದ್ದೇ ಆಗಿದೆ. ಮೊದಲಿನಿಂದಲೇ ಆ ಚಿತ್ರೋದ್ಯಮ ಸಾಗಿಬಂದ ದಾರಿಯನ್ನು ನೋಡಿದರೆ, ಇಡೀ ಮಹಾರಾಷ್ಟ್ರದ ಹೃದಯಭಾಗವಾದ ಮುಂಬೈಯಲ್ಲೇ ಮರಾಠಿಗೆ ಇರುವ ಪರಿಸ್ಥಿತಿ ನೋಡಿದರೆ, ಮುಂಬೈಯಲ್ಲಿನ ಅನಿಯಂತ್ರಿತ ವಲಸೆ ನೋಡಿದರೆ, ಮರಾಠಿ ನೆಲೆದಲ್ಲಿ ನೆಲೆ ನಿಂತು ಸೊಂಪಾಗಿ ಬೆಳೆದಿರುವ ಬಾಲಿವುಡ್ ಚಿತ್ರೋದ್ಯಮವನ್ನು ನೋಡಿದರೆ... ಮರಾಠಿ ಚಿತ್ರರಂಗ ಸೊರಗಲು ಇವು ಕಾರಣಗಳೇ ಹೊರತು ಡಬ್ಬಿಂಗ್ ಅಲ್ಲಾ ಎನ್ನುವುದು ಅರಿವಾಗುತ್ತದೆ! ಇಷ್ಟಕ್ಕೂ ಡಬ್ಬಿಂಗ್ ಇರುವ ಆಂಧ್ರ, ತಮಿಳುನಾಡುಗಳಿಗೆ ಏನಾಗಿವೆ? ನಮಗಿಂತಲೂ ಚಿಕ್ಕರಾಜ್ಯ ಕೇರಳಕ್ಕೆ ಏನಾಗಿದೆ? ಇದನ್ನೆಲ್ಲಾ ಯೋಚಿಸಿದರೆ ಡಬ್ಬಿಂಗ್ ಕನ್ನಡ ಚಿತ್ರೋದ್ಯಮವನ್ನು ನಿರ್ನಾಮ ಮಾಡುತ್ತದೆ ಎನ್ನುವುದನ್ನು ನಂಬಲಾಗುವುದೇ?

ಚಿತ್ರರಂಗದವರ ಪೊಳ್ಳು ವಾದ!

ಎಗ್ಗುಸಿಗ್ಗಿಲ್ಲದೆ ರಿಮೇಕ್ ಮಾಡೋ ಚಿತ್ರರಂಗದವರಿಗೆ ಡಬ್ಬಿಂಗ್ ಕನ್ನಡದ ಮೇಲೆ ಸಾಂಸ್ಕೃತಿಕ ದಾಳಿಯನ್ನು ಮಾಡುತ್ತೆ ಎನ್ನುವ ನೈತಿಕತೆ ಇದೆಯೇ? ರಿಮೇಕ್ ಮಾಡೋದ್ರಿಂದ ಕಾರ್ಮಿಕರಿಗೆ ಕೆಲಸ ಸಿಗುತ್ತೆ ಅನ್ನುವವರು ರಿಮೇಕಿನಿಂದಾಗಿ ಕನ್ನಡದ ಕಥೆಗಾರರು ಕೆಲಸ ಕಳೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ಏನೆನ್ನುತ್ತಾರೆ? ಏಕೆ ಕನ್ನಡದ ಕಲಾವಿದರನ್ನು ಬಿಟ್ಟು ಹೊರನಾಡಿನಿಂದ ಕಲಾವಿದರನ್ನು ಆಮದು ಮಾಡಿಕೊಳ್ಳಲಾಗುತ್ತದೆ? ನಮ್ಮಲ್ಲಿ ನಾಯಕಿಯರಿಲ್ಲಾ, ಈ ಪಾತ್ರಕ್ಕೆ ಅವರೇ ಸೂಕ್ತ, ಈ ಹಾಡಿಗೆ ಅವರದೇ ದನಿ ಸರಿ... ಹೀಗೆ ಸಮರ್ಥನೆಗಳ ಸುರಿಮಳೆ ಸುರಿಸುವಾಗ ಕನ್ನಡದ ಕಲಾವಿದರ ಕೆಲಸದ ಕಾಳಜಿ ಎಲ್ಲಿ ಮರೆಯಾಗುತ್ತದೆ? ಕನ್ನಡ ಚಿತ್ರವೊಂದಕ್ಕೆ ಪರಭಾಷೆಯ ನಟನಟಿಯರನ್ನು, ತಂತ್ರಜ್ಞರನ್ನು, ಹಾಡುಗಾರರನ್ನು, ಕಥೆಗಾರರನ್ನು ಕೈ ಹಿಡಿದು ತರುವಾಗ ಕನ್ನಡನೆಲದ ಕಲಾವಿದರ ಬಗ್ಗೆ ಕಾಳಜಿ ಎಲ್ಲಿ ಹೋಗಿರುತ್ತದೆ? ಚಿತ್ರರಂಗದ ಕೆಲವರ ಇಂಥಾ ನಿಲುವಿನ ಹಿಂದಿರೋದು ಯಾವ ರೀತಿಯಲ್ಲಿ ಕನ್ನಡಪರ ಮನಸ್ಸು ಎಂಬುದನ್ನು ಜನರು ಅರ್ಥಮಾಡ್ಕೊಳ್ಳಬಲ್ಲರು. ಇಷ್ಟಕ್ಕೂ ಸ್ವಂತಿಕೆಯ ಗುಣಮಟ್ಟದ ನಿರ್ದೇಶಕರೊಬ್ಬರು ಕನ್ನಡದಲ್ಲಿ ಸಿನಿಮಾ ತೆಗೆಯೋದನ್ನು ನಿಲ್ಲಿಸಿಬಿಡುತ್ತಾರೆ ಎನ್ನುವುದನ್ನು ಹೇಗೆ ನಂಬುವುದು? ನಮ್ಮ ಚಿತ್ರರಂಗದಲ್ಲಿ ಹುಳುಕಿದೆ, ಆದರೆ ಅದಕ್ಕಾಗಿ ನೆರೆಮನೆಯ ಮಾರಿಯನ್ನು ತರುವುದು ಸರಿಯಲ್ಲಾ ಎನ್ನುವ ಮಾತನ್ನು ಡಬ್ಬಿಂಗ್ ಬೇಡವೆನ್ನುವವರು ಹೇಳುತ್ತಾರೆ. ವಾಸ್ತವವಾಗಿ ಡಬ್ಬಿಂಗ್ ಕಾರ್ಯಕ್ರಮಗಳು ಬಂದಲ್ಲಿ ಕನ್ನಡದಲ್ಲಿ ಮನರಂಜನೆಯನ್ನು ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಿ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಹೆಚ್ಚುವುದೇ ಹೊರತು ಕುಗ್ಗುವುದಿಲ್ಲಾ!

ಡಬ್ಬಿಂಗ್ ಕನ್ನಡದ ಪ್ರೇಕ್ಷಕರನ್ನು ಹುಟ್ಟುಹಾಕುತ್ತದೆ!

ಇಷ್ಟಕ್ಕೂ ಕನ್ನಡವೆಂದರೆ ಚಿತ್ರರಂಗ ಮಾತ್ರಾನಾ? ಕನ್ನಡಿಗರ ಮನರಂಜನೆ ಎಂದರೆ ಅದು ಚಲನಚಿತ್ರಗಳು ಮಾತ್ರಾನಾ? ಅನಿವಾರ್ಯವಾಗಿ ಕಾರ್ಟೂನ್ ನೆಟ್‌ವರ್ಕ್, ಪೋಗೋ, ಡಿಸ್ಕವರಿ, ಅನಿಮಲ್ ಪ್ಲಾನೆಟ್, ಹಿಸ್ಟರಿ ಮೊದಲಾದ ವಾಹಿನಿಗಳನ್ನು ಕನ್ನಡದ ಮಕ್ಕಳು ಕನ್ನಡದಲ್ಲಿ ನೋಡಲು ಸಾಧ್ಯವಾಗುತ್ತಿಲ್ಲ. ಚಿಕ್ಕಂದಿನಿಂದಲೇ ಮನರಂಜನೆ ಕನ್ನಡದಲ್ಲಿ ಪಡೆದುಕೊಳ್ಳುವುದನ್ನು ಅರಿಯದ ಮಕ್ಕಳು, ನಾಳೆ ಕನ್ನಡ ಚಿತ್ರಗಳನ್ನು ಯಾಕಾದರೂ ನೋಡುತ್ತಾರೆ? ಕನ್ನಡದಿಂದ ಮುಂದಿನ ಪೀಳಿಗೆ ದೂರವಾದರೆ ನಾಳೆ ಅದ್ಭುತವಾದ ಕನ್ನಡ ಚಿತ್ರವನ್ನು ತೆಗೆದರೂ ನೋಡುವವರಾರೂ ಇರುವುದಿಲ್ಲಾ ಎನ್ನುವ ಅಪಾಯವನ್ನು ಗುರುತಿಸಬೇಕಾಗಿದೆ. ಇಂದು ಡಬ್ಬಿಂಗ್ ಬಂದರೆ ಕನ್ನಡದ ಮಕ್ಕಳು ಕನ್ನಡಕ್ಕೆ ಅಂಟಿಕೊಳ್ಳುತ್ತಾರೆ. ನಾಳೆ ಕನ್ನಡ ಚಿತ್ರಗಳಿಗೆ ಪ್ರೇಕ್ಷಕರೂ ಇರುತ್ತಾರೆ.

ಡಬ್ಬಿಂಗ್ ವಿರೋಧದಿಂದ ಕುಗ್ಗುತ್ತಿರುವ ಕನ್ನಡದ ಮನರಂಜನೆ

ಚಿತ್ರರಂಗ ಈಗಿರೋ ಡಬ್ಬಿಂಗ್ ವಿರೋಧಿ ನಿಲುವಿನಿಂದಾಗೇ ಮುಳುಗಿಹೋಗುತ್ತಿರುವುದು ಕಾಣುತ್ತಿದೆ. ಕರ್ನಾಟಕದ ಗಡಿ ಊರುಗಳಲ್ಲಿ ಮಾತ್ರಾ ತೆರೆಕಾಣುತ್ತಿದ್ದ ಪರಭಾಷಾ ಚಿತ್ರಗಳು ಇಂದು ಒಳ ನಾಡುಗಳ ಹಳ್ಳಿ ಹಳ್ಳಿಗಳಲ್ಲಿ ತೆರೆಕಾಣುತ್ತಿದೆ. ಇಂತಿಷ್ಟೇ ಕೇಂದ್ರದಲ್ಲಿ, ಇಂತಿಷ್ಟೇ ಚಿತ್ರಮಂದಿರದಲ್ಲಿ ಬಿಡುಗಡೆಯಾಗಬೇಕು ಎನ್ನೋ ನಿಯಮ ಇಂದು ಅಳಿದುಹೋಗಿ ಪರಭಾಷಾಚಿತ್ರಗಳು ಇನ್ನೂರು ಮುನ್ನೂರು ಕೇಂದ್ರಗಳಲ್ಲಿ ತೆರೆಕಾಣುತ್ತಿದೆ. ಇದನ್ನು ತಪ್ಪಿಸದೇ ಹೋದರೆ... ನಮ್ಮದು ಚಿಕ್ಕ ಮಾರುಕಟ್ಟೆ ಅವರೊಡನೆ ಸ್ಪರ್ಧೆ ಅಸಾಧ್ಯ ಎಂದುಕೊಳ್ಳುತ್ತಾ ಹೋದರೆ... ನಾಳೆ ಕನ್ನಡನಾಡಿನ ಚಿತ್ರಮಂದಿರಗಳಲ್ಲಿ ಬರೀ ಪರಭಾಷೆಯ ಚಿತ್ರಗಳೇ ರಾರಾಜಿಸುತ್ತವೆ.

ಈ ಹಿನ್ನೆಲೆಯಲ್ಲಿ ನಾವು ನೋಡಿದರೆ ಕರ್ನಾಟಕದ ತುಂಬೆಲ್ಲಾ ಪರಭಾಷಾ ಚಿತ್ರಗಳು ತೆರೆಕಾಣುತ್ತಾ ಕನ್ನಡಿಗರು ಮನರಂಜನೆಗಾಗಿ ಪರಭಾಷಾ ಚಿತ್ರಗಳನ್ನೇ ಅವಲಂಬಿಸುವುದು ಒಳಿತೋ? ಅಥವಾ ಡಬ್ಬಿಂಗ್ ಆದ ಚಿತ್ರಗಳು ಇರುವ ಕಾರಣದಿಂದಾಗಿ ಎನ್‌ಟಿಆರೋ, ಮಹೇಶ್ ಬಾಬೂನೋ ಯಾರಾದರೇನು.. ಕನ್ನಡದಲ್ಲಿ ಮನರಂಜನೆ ಸಿಗುತ್ತದೆಯೆನ್ನುವುದು ಒಳಿತೋ? ಇದರರ್ಥ ಪರಭಾಷಾ ನಟರು ಇಲ್ಲಿ ಗೆಲ್ಲುತ್ತಾರೆ ಎನ್ನುವುದಕ್ಕಾಗುವುದಿಲ್ಲ, ಏನೆಂದರೂ ಕನ್ನಡಿಗರಿಗೆ ಕನ್ನಡದ ನಟರೇ ಪ್ರಿಯರು! ಇದಕ್ಕೂ ನಾವು ನೆರೆಯ ನಾಡುಗಳನ್ನು ನೋಡಿದರೆ ಸಾಕು. ಎಂದಿಗೂ ಆಂಧ್ರಕ್ಕೆ ಸೂಪರ್‌ಸ್ಟಾರ್ ಚಿರಂಜೀವಿಯೇ, ತಮಿಳುನಾಡಿಗೆ ರಜನಿಕಾಂತೇ... ಡಬ್ಬಿಂಗ್ ಇದ್ದರೂ ಅವರು ಇಲ್ಲಿ, ಇವರು ಅಲ್ಲಿ ಸೂಪರ್‌ಸ್ಟಾರ್ ಆಗಲು ಸಾಧ್ಯವಾಗಿಲ್ಲ! ಇವೆಲ್ಲಾ ಮಾತಾಡಿದರೆ ಆ ಮಾರುಕಟ್ಟೆ ದೊಡ್ಡದು, ಆ ಜನರು ಸ್ವಾಭಿಮಾನಿಗಳು, ಕನ್ನಡದವರು ನಿರಭಿಮಾನಿಗಳು, ಹಾಗಾಗಿ ಇಲ್ಲಿ ಡಬ್ಬಿಂಗ್ ಬಂದರೆ ಎಲ್ಲಾ ಮುಳುಗುತ್ತದೆ ಎನ್ನುವ ಮಾತಾಡಿದರೆ ಅದನ್ನು ಒಪ್ಪಲಾಗುವುದೇ?

ಒಳ್ಳೆಯದನ್ನು ಜನರಿಂದ ತಪ್ಪಿಸಲು ಯಾರಿಗೂ ಆಗಲ್ಲಾ!

ಕೆಲವು ಬುದ್ಧಿವಂತರು "ಒಳ್ಳೇದು ಅಂದ್ರೆ ಯಾವುದು?" ಅನ್ನೋದನ್ನೇ ಜಿಜ್ಞಾಸೆ ಮಾಡ್ತಾರಲ್ಲಾ... ಹಾಗಲ್ಲದೆ ಜನರಲ್ಲಿ ಕುತೂಹಲ ಹುಟ್ಟುಹಾಕಲು ಯಶಸ್ವಿಯಾಗಿರುವ, ನೋಡಿದವರೆಲ್ಲಾ ಮೆಚ್ಚುತ್ತಿರುವ ಸಿನಿಮಾಗಳನ್ನು ಇಲ್ಲಿ ಒಳ್ಳೇದು ಎಂದು ಕರೆದು... ಇದನ್ನು ಜನರು ನೋಡೋದನ್ನು ತಪ್ಪಿಸಲು ಯಾವ ದೊಣೇನಾಯ್ಕನಿಂದಲೂ ಸಾಧ್ಯವಿಲ್ಲಾ ಅನ್ನೋ ಮೊದಲನೇ ಮಾತನ್ನು ಹೇಳಬೇಕಾಗಿದೆ. ಬಹುಶಃ ಇದನ್ನು ನಮ್ಮ ಚಿತ್ರರಂಗದೋರೂ ಒಪ್ತಾರೆ. ಕನ್ನಡದ ಕಲಾವಿದರು ಪರಭಾಷಾ ಸಿನಿಮಾದಲ್ಲಿ ಮಾಡೋದನ್ನೇ ತಪ್ಪೆಂದೆಣಿಸಿ, ಪರಭಾಷೆಯಲ್ಲಿ ಮಾಡದಿರುವುದೇ ಹೆಚ್ಚುಗಾರಿಕೆ ಎನ್ನುವುದು ಸರಿಯಲ್ಲಾ! ಕನ್ನಡದ ಕಲಾವಿದರು ಕನ್ನಡೇತರ ಚಿತ್ರರಂಗಕ್ಕೂ ಹೋಗಬೇಕು, ಅಲ್ಲೂ ಮೆರೆಯಬೇಕು, ಕನ್ನಡದ ಚಿತ್ರಗಳು ಪರಭಾಷೆಗೂ ಡಬ್ ಆಗಿ ಅಲ್ಲೂ ನಮ್ಮವರು ಮಿಂಚಬೇಕು... ಇದ್ಯಾವುದೂ ಕನ್ನಡವಿರೋಧಿಯಲ್ಲ! ವಾಸ್ತವವಾಗಿ ಕನ್ನಡ ಪ್ರೇಮದಿಂದ ನಾನು ಕನ್ನಡದಲ್ಲೇ ಇರ್ತೀನಿ, ಕನ್ನಡದೋರು ಪರಭಾಷೇಲಿ ಎಷ್ಟೇ ಉತ್ತಮವಾದ್ದು ಬಂದರೂ ನೋಡಬೇಡಿ ಅಥವಾ ಅದೇ ಭಾಷೇಲಿ ನೋಡಿ ಎನ್ನೋ ಮನಸ್ಥಿತಿಯೇ ಕನ್ನಡಕ್ಕೆ ಹಾನಿ ಮಾಡುವಂಥದ್ದು! ಅಭಿಮಾನಕ್ಕಾಗಿ ಕನ್ನಡ ಸಿನಿಮಾ ನೋಡಿ ಎನ್ನೋ ಮಾತಿನ ಮೋಡಿಗೆ, ಜನರನ್ನು ಪರಭಾಷೆಯಲ್ಲಿರುವ ಒಳ್ಳೆಯದನ್ನು ಪಡೆಯುವುದರಿಂದ ದೂರ ಮಾಡಲು ಆಗುವುದಿಲ್ಲಾ ಅನ್ನೋದನ್ನು ಇವರೂ ಅರಿತರೆ ಒಳ್ಳೇದು!

ಡಬ್ಬಿಂಗ್ ನಿಶೇಧ ಕನ್ನಡ ಉಳಿಸುತ್ತೆ ಅನ್ನೋದು ಹುಸಿಯಾಗ್ತಿದೆ!

ವಾಸ್ತವವಾಗಿ ಡಬ್ಬಿಂಗ್ ಸಿನಿಮಾ ಬಂದರೆ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಇರಲ್ಲಾ ಎನ್ನೋದಕ್ಕೆ ಮೂಲಕಾರಣ ಕನ್ನಡದೋರು ಪರಭಾಷೆಯ ಚಿತ್ರಗಳನ್ನು ನೋಡದೆ ಬರೀ ಕನ್ನಡದಲ್ಲೇ ಚಿತ್ರಗಳನ್ನು ನೋಡ್ತಾರೆ ಎನ್ನೋ ನಂಬಿಕೆ. ಇದು ಹೀಗೇ ಇದ್ದ ಕಾಲವೂ ಇತ್ತು! ಹೆಚ್ಚಿನ ಸಾಮಾನ್ಯ ಕನ್ನಡಿಗರಾರೂ ಪರಭಾಷೆಯ ಚಿತ್ರಗಳನ್ನು ನೋಡಲ್ಲಾ ಎನ್ನೋ ಕಾಲವಿತ್ತು. ಆಗ ಪರಭಾಷೆಯವು ಕನ್ನಡಕ್ಕೆ ಡಬ್ ಆಗಿ ಬರಲು ಶುರುವಾಗಿದ್ದನ್ನು "ಇವೆಲ್ಲಾ ಕನ್ನಡದಲ್ಲೇ ಬಂದರೆ ಕನ್ನಡ ಸಿನಿಮಾ ನೋಡೋರಿರಲ್ಲಾ" ಎಂದುಕೊಂಡು ನಿಶೇಧ ನಿಶೇಧ ಎಂದು ಅನ್ನಿಸುತ್ತೆ. ಆರಂಭದಲ್ಲಿ ಭಾಷೆ ಬರಲ್ಲಾ ಅನ್ನೋ ಕಾರಣದಿಂದಾಗೇ ಜನರು ಪರಭಾಷೆ ಚಿತ್ರಗಳನ್ನು ನೋಡ್ತಿರಲಿಲ್ಲವಾದರೂ ಈಗಿನ ಪರಿಸ್ಥಿತಿ ಏನಾಗಿದೆ? ಕನ್ನಡದೋರು ಬೇರೆ ಭಾಷೆ ಚಿತ್ರಗಳನ್ನು ಅವವೇ ಭಾಷೇಲೇ ನೋಡಲು ಶುರು ಮಾಡಿದಾರೆ. ಇದರ ಅಪಾಯ ಚಿತ್ರರಂಗದೋರಿಗೆ ಕಾಣ್ತಾ ಇಲ್ಲಾ ಅನ್ನೋದು ದುರಂತ!! ಇತ್ತೀಚಿಗೆ ಇಂತಿಷ್ಟೇ ಪರಭಾಷಾ ಚಿತ್ರಗಳು ನಮ್ಮ ನಾಡಲ್ಲಿ ಬಿಡುಗಡೆಯಾಗಬೇಕು ಎನ್ನೋ ನಿಯಮಾ ಬಿದ್ದು ಹೋಗಿ ಪರಭಾಷಾ ಚಿತ್ರಗಳು ಇಲ್ಲಿ ನೂರಿನ್ನೂರು ತೆರೆಗಳ ಲೆಕ್ಕದಲ್ಲಿ ಬಿಡುಗಡೆಯಾಗ್ತಿದೆ. ಪರಿಸ್ಥಿತಿ ಹೀಗೇ ಮುಂದುವರೆದರೆ ನಾಳೆ ಕನ್ನಡ ಸಿನಿಮಾನ ಕನ್ನಡದೋರು ಕೂಡಾ ನೋಡುವ ಸಾಧ್ಯತೆಯಿರುವುದಿಲ್ಲ! ಬೇಕೋ ಬೇಡವೋ ಜನರು ಇವತ್ತೇ ಕನ್ನಡ ಚಿತ್ರಗಳನ್ನು ಬೇರೆ ಭಾಷೆ ಚಿತ್ರಗಳ ಜೊತೆ ಹೋಲಿಕೆ ಮಾಡ್ತಿದಾರೆ. ನಮ್ಮದು ಸಣ್ಣ ಮಾರುಕಟ್ಟೆ, ಕಮ್ಮಿ ಬಜೆಟ್ ಅಂತೆಲ್ಲಾ ಅತ್ಕೊಂಡರೆ ಜನರೇನು ಕ್ಯಾರೇ ಅನ್ನಲ್ಲಾ... ಕನ್ನಡನಾಡಲ್ಲೇ ತೆಲುಗು ಚಿತ್ರವೊಂದು ವಾರವೊಂದರಲ್ಲಿ ೪ ಕೋಟಿ ಸಂಪಾದನೆ ಮಾಡುತ್ತಿರುವ ಇಂಥಾ ಪರಿಸ್ಥಿತಿಯಲ್ಲಿ ಡಬ್ಬಿಂಗ್ ಕನ್ನಡ ಪರವಾದ ಹೆಜ್ಜೆಯಾಗೋದರಲ್ಲಿ ಸಂದೇಹವಿಲ್ಲ.

ಡಬ್ಬಿಂಗ್ ಬೇಕು ಅನ್ನೋದೇ ಕನ್ನಡ ಪರ!

ಇಡೀ ನಾಡಿನ ಜನರಿಗೆ ತಮ್ಮ ತಾಯ್ನುಡಿಯಲ್ಲಿ ಮನರಂಜನೆ ಪಡೆದುಕೊಳ್ಳುವುದನ್ನು ತಪ್ಪಿಸುತ್ತಿರುವುದು ಕನ್ನಡಪರ ಹೇಗಾಗುತ್ತದೆ? ಕನ್ನಡದ ಜನರು ಚಲನಚಿತ್ರ, ಟಿವಿ ಮೊದಲಾದ ಎಲ್ಲವನ್ನೂ ಕನ್ನಡದಲ್ಲೇ ನೋಡುವ ಅವಕಾಶ ಪಡೆದಾಗ ಸಹಜವಾಗಿಯೇ ಮೂಲ ಕನ್ನಡ ಚಿತ್ರಗಳ ಮಾರುಕಟ್ಟೆಯೂ ಹಬ್ಬುತ್ತದೆ. ರಿಮೇಕಿನ ಹಾವಳಿ ಕಡಿಮೆಯಾಗುತ್ತದೆ. ಡಬ್ ಆದ ಚಿತ್ರಗಳ ಗೆಲುವಿನ ಪ್ರಮಾಣ ಶುರುವಿನಲ್ಲಿ ಹೆಚ್ಚೇ ಇದ್ದರೂ ಕೆಲವೇ ಸಮಯದಲ್ಲಿ ಕಡಿಮೆಯಾಗುತ್ತದೆ. ಇಂದು ಡಬ್ಬಿಂಗ್‌ ಕನ್ನಡದ ಗುಣಮಟ್ಟ ಕೆಡಿಸುತ್ತದೆ ಎನ್ನುವುದು ನಾಳೆ ಅದರಲ್ಲಿಯೇ ಸ್ಪರ್ಧೆಯ ಕಾರಣದಿಂದ ಉತ್ತಮವಾಗಿ ಡಬ್ ಆಗಿ ಬರುವ ಸಾಧ್ಯತೆಯಿರುತ್ತದೆ. ಕನ್ನಡ ಚಿತ್ರರಂಗವು ಡಬ್ಬಿಂಗ್ ವಿರೋಧಿ ನೀತಿಯಿಂದ ನಿಧಾನವಾಗಿ ಪರಭಾಷಾ ಚಿತ್ರಗಳಿಗೆ ಜಾಗ ಖಾಲಿಮಾಡಿಕೊಟ್ಟು ಹೋಗುತ್ತಿರುವುದರ ಅಪಾಯ ಬರೀ ಕನ್ನಡ ಚಿತ್ರರಂಗಕ್ಕೆ ಮಾತ್ರಾ ತಟ್ಟುವುದಿಲ್ಲ. ಅದು ಇಡೀ ಕನ್ನಡವನ್ನೇ ನುಂಗುತ್ತದೆ. ನಾಡಿನ ಕನ್ನಡಿಗರು ಪರಭಾಷೆಗಳಲ್ಲೇ ಮನರಂಜನೆ ಪಡೆದುಕೊಳ್ಳಲು ಶುರು ಮಾಡಿದರೆ ವಲಸಿಗರಿಗೆ ಈ ನಾಡು ಸ್ವರ್ಗವಾಗಿ ಬಿಡುತ್ತದೆ! ಕನ್ನಡವೆನ್ನುವುದು ಕನ್ನಡ ಚಿತ್ರರಂಗ ಎನ್ನುವುದಕ್ಕಿಂತಾ ಹಿರಿದು ಎನ್ನುವ ನೆಲೆಯಲ್ಲಿ ಯೋಚಿಸಿದರೂ ಡಬ್ಬಿಂಗ್ ನಮ್ಮ ನಾಡಿಗೆ ಅಗತ್ಯವೆನ್ನಿಸುತ್ತದೆ. ಇವೆಲ್ಲಾ ಬರೀ ಊಹೆ ಎನ್ನುವುದಾದರೆ ಕಣ್ಣ ಮುಂದೆ ಪ್ರಪಂಚದಲ್ಲಿ ಡಬ್ಬಿಂಗ್ ಇಟ್ಟುಕೊಂಡೂ ತಮ್ಮತನ ಉಳಿಸಿಕೊಂಡಿರುವ ನೂರಾರು ನಾಡುಗಳು ಕಾಣುತ್ತವೆ. ಬೇಡಪ್ಪಾ ನಮ್ಮ ಕನ್ನಡಿಗರು ನಿರಭಿಮಾನಿಗಳು, ಅವರಂತಲ್ಲಾ, ಇವರಂತಲ್ಲಾ ಎನ್ನುವುದಾದರೆ... ಕಡೇ ಪಕ್ಷ ಕನ್ನಡಿಗರಿಗೆ ಕನ್ನಡದಲ್ಲೇ ಮನರಂಜನೆ ದೊರೆಯಲು ಡಬ್ಬಿಂಗ್ ದೊಡ್ಡ ಸಾಧನವಾಗುತ್ತದೆ ಎಂಬುದನ್ನಂತೂ ಒಪ್ಪದೆ ಇರಲಾಗುತ್ತದೆಯೇ? ಈ ಎಲ್ಲವನ್ನೂ ನೋಡಿದಾಗ ಡಬ್ಬಿಂಗ್ ಕನ್ನಡಪರ ಎನ್ನುವುದು ಮನದಟ್ಟಾಗುತ್ತದೆ.

16 ಅನಿಸಿಕೆಗಳು:

Unknown ಅಂತಾರೆ...

ಡಬ್ಬಿಂಗ್ ಬಂದರೆ .. ಶಿವರಾಜ್ ಕುಮಾರ್ & ಪುನಿತ್ ರಾಜ್ ಕುಮಾರ್ ಇವರುಗಳ ಚಿತ್ರಗಳಿಗೆ ಹೆಚ್ಚಿನ ಬೆಲೆ ಸಿಕ್ಕುವುದಿಲ್ಲಾ ಎನ್ನುವ ಭಯ ಅವರಲ್ಲಿದೆ.. ಹಾಗಾಗಿ ಅದಕ್ಕೆ ಒಪ್ಪಿಗೆ ಸಿಕ್ಕಿಲ್ಲಾ.. ಶಿವರಾಜ್ ಕುಮಾರ್ & ಪುನಿತ್ ರಾಜ್ ಕುಮಾರ್ ಒಪ್ಪಿದರೆ ಸಾಕು ಎಲ್ಲರೂ ಒಪ್ಪುತ್ತಾರೆ.. ಹಾಗೂ ಮಚ್ಚು ಲಾಂಗು ಅಂತಾ ಚಿತ್ರಾ ಮಾಡುವ ನಿರ್ದೇಶಕರಿಗೂ ಭಯವಿದೆ.. ಅವರ ಚಿತ್ರಗಳು ಓಡೊದಿಲ್ಲಾ ಅಂತಾ .. ಆದರೆ ನಮ್ಮೂರಿನ ಜನಗಳ ಅನಿಸಿಕೆಯ ಪ್ರಕಾರ ಡಬ್ಬಿಂಗ್ ತುಂಬಾ ಒಳ್ಳೆಯದು ಕನ್ನಡ ಜನಗಳಿಗೆ ಅದರಿಂದ ಅತ್ಯಧಿಕ ಹೊಸ ಬಗೆಯ ವಿಷಯಗಳು ತಿಳಿಯುತ್ತವೆ.. :)

Unknown ಅಂತಾರೆ...

ಅನಿಸಿಕೆ ಬರೆದರೆ ಕಾಣಿಸಿದೆ ಇರಲು ಕಾರಣ ಏನು ?
ನಾ ಬರೆದದ್ದು ಎಲ್ಲಾ ವ್ಯರ್ಥವೋ . ಎಂತ ಮಾರಾಯ ಇದು . ಹೀಗಿದ್ದರೆ ಚೆಂದ ಇರಕ್ಕಿಲ್ಲ .. ಯಾವಾಗ ಸರಿ ಆಗಿತ್ತೋ ಅಂತ ನಾನು ಕಾಯಲಿಕ್ಕೆ ಉಂಟು . ಅದು ನಿಮಗೆ ಗೊತ್ತುಂಟೋ . ?

Priyank ಅಂತಾರೆ...

"ನಾವು ನಾಳೆ ಚಿರಂಜೀವಿ, ಸೂರ್ಯ, ವಿಕ್ರಂ, ಮೋಹನ್‍ಲಾಲ್, ಮುಮ್ಮುಟ್ಟಿ, ಮಹೇಶ್ ಬಾಬು, ಜೂ. ಎನ್‌ಟಿಆರ್... ಹೀಗೆ ಕನ್ನಡದವರಲ್ಲದವರ ಕಟೌಟ್‌ಗಳನ್ನು ನಮ್ಮೂರಲ್ಲಿ ನೋಡಬೇಕಾಗುತ್ತದೆ"
ಈ ಅನಿಸಿಕೆ ಇಟ್ಟುಕೊಂಡು ಡಬ್ಬಿಂಗ್ ಬೇಡ ಅನ್ನುತ್ತಿರುವವರು ಕೆಲ ವಿಚಾರಗಳನ್ನ ಗಮನಿಸಿಯೇ ಇಲ್ಲ ಅನ್ನಿಸುತ್ತೆ ಗುರು.
ನಮ್ಮಲ್ಲಿ ಈಗಾಗಲೇ ಕನ್ನಡೇತರರ ಕಟೌಟುಗಳು ಕಾಣ ಸಿಗುತ್ತವೆ. ಮತ್ತು ಆಯಾ ಪರಭಾಷಾ ಸಿನೆಮಾಗಳನ್ನು ಕನ್ನಡಿಗರು ನೋಡೋದರಿಂದಲೇ, ಅವು 50-100 ದಿನ ಓಡುವುದು ಬೆಂಗಳೂರಲ್ಲಿ.
ನಿಜಸ್ಥಿತಿ ಹೀಗಿರುವಾಗ, ಡಬ್ಬಿಂಗ್ ನಿಷೇಧದ ಮೂಲಕ ಪರಭಾಷಾ ನಾಯಕರ ಕಟೌಟು ನಿಲ್ಲದಂತೆ ಮಾಡುತ್ತೀವಿ ಎಂದುಕೊಳ್ಳುವುದು, ನಮಗೆ ನಾವೇ ಹೇಳಿಕೊಳ್ಳುವ ಸುಳ್ಳಾಗುತ್ತದೆ.
ಇನ್ನು, ಬೈಕ್ ಅಂಗಡಿ ಮುಂದೆ ಸಲ್ಮಾನ್ ಖಾನ್ ಅವರ ಕಟೌಟು ನಿಂತಿರುತ್ತೆ.
ಡೊಕೊಮೊ ಅಂಗಡಿ ಮುಂದೆ ರಣಬೀರ್ ಕಪೂರ್ ಅವರ ಕಟೌಟು ನಿಂತಿರುತ್ತೆ.
ಲೋರಿಯಲ್ ಜಾಹೀರಾತಿನ ಕಟೌಟುಗಳಲ್ಲಿ ಸೋನಮ್ ಕಪೂರ್ ಅವರ ಫೋಟೋ ಇರುತ್ತೆ.
ಇವರ ಕಟೌಟುಗಳೂ, ದೊಡ್ಡ ದೊಡ್ಡ ಫೋಟೋಗಳೂ ಬೆಂಗಳೂರಲ್ಲಿ ಬರದಂತೆ ತಡೆಯುವಲ್ಲಿ ಡಬ್ಬಿಂಗ್ ನಿಷೇಧ ಸೋತಿದೆ.
"ಡಬ್ಬಿಂಗ್ ನಿಷೇಧದ ಮೂಲಕ ಬೇರೆ ಭಾಷೆ ಚಿತ್ರಗಳ ನಾಯಕರ ಕಟೌಟುಗಳು ನಿಲ್ಲೋದನ್ನು ತಡೆಯುತ್ತೀವಿ" ಎನ್ನುವುದು, "ಡಬ್ಬಿಂಗ್ ನಿಷೇಧದ ಮೂಲಕ ಕರ್ನಾಟಕದೆಲ್ಲೆಡೆ ಒಳ್ಳೆ ಮಳೆಯಾಗುವಂತೆ ನೋಡಿಕೊಳ್ಳುತ್ತೀವಿ" ಎನ್ನುವಷ್ಟೇ ಮೂರ್ಖತನದ ಹೇಳಿಕೆ ಗುರು.

Anonymous ಅಂತಾರೆ...

I too have seen the Telugu Movie which collected 4 cr in a week. But I felt very sad for my state of affairs that I had to read the complete story of the movie in internet beforehand and then watch the movie as I dont understand Telugu !!

Frankly speaking allowing dubbing doesn't affect Kannada Movies, instead it can create more intereste in people like me who dont' understand any other regional language other than Kannada.
Keep seeing the trailers of the new English movie (dark knight?) in Tamil channels that it is being released in Tamil. Ayyo enu avyavasthe swami idu, naavyaake kannadadalli spiderman, batman, superman, james bond nodabaradu.
Yes, I do keep seeing Tamil music channel for the reason that I get to listen good melodies of Ilayaraja. If dubbing were there those songs would have been available in Kannada too making number of available collection of good songs let us say..instead of 1000 it would have been 5000 songs collection and it would have been much more interesting to watch kannada music channels.

The last kannada movie I saw was Shyloo.

ಶ್ರೀನಾಥ ಅಂತಾರೆ...

ಡಬ್ಬಿಂಗ್ ಬೇಡ ಎನ್ನುವವರದೇ ಒಂದು ಲಾಬಿ ಇದೆ ಅನಿಸುತ್ತೆ. ಏಕೆಂದರೆ ಅವರು ಎಲ್ಲರೂ ಒಪ್ಪುವ ಕಾರಣ ನೀಡುವುದೇ ಇಲ್ಲ. ಸ್ವಮೇಕ್ ಬೇಕು ರಿಮೇಕ್ ಬೇಡ ಎನ್ನುವವರ ಮಾತಿನಂತೆ ಇವರದು ಒಂದೆ ಮಂತ್ರ 'ಡಬ್ಬಿಂಗ್ ಬೇಡ '. ಕನ್ನಡದಲ್ಲಿ ಒಳ್ಳೆಯ ಕಥೆಗಳಿಲ್ಲ ಎಂದು ಪರಭಾಷೆಯ ಚಿತ್ರಗಳ ರಿಮೇಕ್, ಪಾತ್ರಕ್ಕೆ ಸರಿಹೊಂದುವ ನಟಿಯರು ಕನ್ನಡದಲ್ಲಿ ಇಲ್ಲ ಎಂದು ಪರಭಾಷಾ ನಟಿಯರನ್ನು ಆಮದು ಮಾಡಿಕೊಳ್ಳುವ ಗಾಂಧಿನಗರದ ಮಂದಿಗೆ ಏನೆನ್ನೋಣ. ಎಲ್ಲರೂ ಅನುಕೂಲ ಸಿಂಧುಗಳೆ. ತಮ್ಮ ಮೂಗಿನ ನೇರಕ್ಕೆ ಮಾತಾಡುವವರೆ. ಒಳ್ಳೆ ಕನ್ನಡ ಸಿನಿಮಾಗಳನ್ನು ನೀಡಲಿ. ಕನ್ನಡಿಗರಲ್ಲದೆ ಬೇರೆ ಭಾಷೆಯವರೂ ಮುಗಿಬಿದ್ದು ನೋಡುತ್ತಾರೆ. ಒಳ್ಳೆ ಕನ್ನಡ ಚಿತ್ರವನ್ನು ಅವರ ಭಾಷೆಯಲ್ಲಿ ರಿಮೇಕೊ/ಡಬ್ಬೊ ಮಾಡಿ ನೋಡುತ್ತಾರೆ. ನಮಗೆ ನಮ್ಮ ಸ್ವಂತಿಕೆ ಇಲ್ಲ. ಪರ ಭಾಷಿಕರ ವೈಭವವನ್ನೆ ನಮ್ಮಲ್ಲಿ ತರುವ ಹುಂಬತನ. ಸಾಕು ಸಾಕು, ಪರಭಾಷಾ ಮೋಹ. ವರ್ಷೆ ವರ್ಷೆ100ಕ್ಕೂ ಹೆಚ್ಚು ಕನ್ನಡ ಸಿನಿಮಾಗಳು ಬಿಡುಗಡೆ ಆಗುತ್ತವೆ. ಆದರೆ ಯಾವುದರಲ್ಲೂ ಕನ್ನಡತನ ಇರುವುದಿಲ್ಲ. ಎಲ್ಲ ಚೂರು ಚೂರಾಗಿ ಅಲ್ಲಿಂದ ಇಲ್ಲಿಂದ ಬಂದ ಸರಕುಗಳೇ ಆಗಿರುತ್ತವೆ. ಬಾಯಿ ಬಿಟ್ಟು ಹೇಳದಿದ್ದರೂ ನೋಡಿದ ತಕ್ಷಣ ಗೊತ್ತಾಗಿ ಬಿಡುತ್ತದೆ. ಈ ದೃಶ್ಯ ಇಂಥಲ್ಲಿಂದ ಬಂದದ್ದು ಎಂದು. ಡಬ್ಬಿಂಗ್ ಇರಲಿ. ಅದಕ್ಕೂ ಮೊದಲು ಗಟ್ಟಿಯಾದ, ಕನ್ನಡ ಕಥೆಗಳಿರುವ ಸದಭಿರುಚಿಯ ಚಿತ್ರಗಳು ಬರಲಿ. ಆ ರೀತಿ ಬಂದಾಗ ಬೇರೆ ಭಾಷೆಯದನ್ನು ಯಾರೂ ಮೂಸುವುದಿಲ್ಲ. ಹಿಂದಿನ ಚಿತ್ರಗಳ ಇತಿಹಾಸವನ್ನು ತಿರುವಿ ಹಾಕಿದರೆ, ಗೊತ್ತಾಗುತ್ತದೆ, ನಮ್ಮಲ್ಲಿ ಸತ್ವ ಇದ್ದರೆ ಯಾರೂ, ಯಾವುದೂ ನಮ್ಮನ್ನು ಅಳಿಸಿಹಾಕಲು ಆಗುವುದಿಲ್ಲ. ನಾವೆ ಜೊಳ್ಳಾದರೆ ಯಾರೂ ನಮ್ಮನ್ನು ಉಳಿಸಲು ಸಾಧ್ಯವಿಲ್ಲ. ಆ ದೇವರಿದ್ದರೆ, ಅವನಿಗೂ ಕೂಡ.

vasumandas ಅಂತಾರೆ...

namage kannada bhaaShe maatra mukya, ee kannda da dhongi nataralla, olleyadellavoo kannadadalli sigabeku ashte.

ಅನಾದಿ ಅಂತಾರೆ...

ಮರಾಟಿಯಲ್ಲಿ ಡಬ್ಬಿಂಗ್ ಇದೆ ಎಂದವರು ಯಾರು? ಡಬ್ಬಿಂಗ್ ಬೇಕು ಎಂದು ವಾದಿಸಲು ತಪ್ಪು ಮಾಹಿತಿ ನೀಡಬೇಡಿ. ಕಳೆದ ವರ್ಷ ಎಷ್ಟು ಚಿತ್ರಗಳು ಸೆನ್ಸಾರ್ ಆಗಿವೆ, ಯಾವ್ಯಾವ ಭಾಷೆಗೆ ಎಷ್ಟು ಚಿತ್ರಗಳು ಎಲ್ಲಿಂದ ಡಬ್ ಆಗಿವೆ ಎನ್ನುವ ಎಲ್ಲ ವಿವರ http://cbfcindia.gov.in/html/uniquepage.aspx?unique_page_id=30 ಇಲ್ಲಿದೆ. ವಾಹಿನಿಗಳಲ್ಲಿ ಪ್ರಸಾರವಾಗುವ ಸರಣಿಗಳು ಸೆನ್ಸಾರ್ ಆಗಬೇಕಿಲ್ಲ. ಹಾಗಾಗಿ ಆ ವಿವರ ಅಲ್ಲಿಲ್ಲ. ಕಾರ್ಟೂನ್ ಚಿತ್ರಗಳು ಸೇರಿದಂತೆ ಸಾಕಷ್ಟು ಡಬ್ ಆಗಿವೆ. ಡಬ್ಬಿಂಗ್ ಬೇಕು ಎಂದು ವಾದಿಸುವುದು ಸರಿ, ಆದರೆ ಅದಕ್ಕೆ ಪೂರಕವಾಗಿ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಬೇಡಿ.

Anonymous ಅಂತಾರೆ...

ಅನಾದಿ ಸಾರ್,

ಮರಾಠಿಯಲ್ಲಿ ಡಬ್ಬಿಂಗ್ ಇಲ್ಲಾ ಎನ್ನುವವರು ಯಾರು? http://en.wikipedia.org/wiki/Satyamev_Jayate_(TV_show)
ಸತ್ಯಮೇವ ಜಯತೇ ಅಲ್ಲಿ ಡಬ್ ಆಗಿ ಪ್ರಸಾರವಾಗುತ್ತಿದೆ.

ನವೀನ

Unknown ಅಂತಾರೆ...

Film channagi bandare ellaru noduttare. Kannadavannu karnatakadalli ulisabekendre dubbing beke beku. nodi karnatakadalli ella filmgalu kannadadalle release adre ellaru kannadane nodthare. monne tane namma appa,amma EEGA film nodabeku andru nanu karkondi hogi avarige full bidisi helabekada paristhithi nirmana aythu and namma akkana maga he learned telugu by seeming the movies. if would have released those movies in kannada means no body will learn other languages. that's why andra and tamilnadu and kerala are strong in their languages. films yare channagi madidre adanna node nodthara, Dubbing ninda kannada film industry muchhutte annodanna nanu oppalla.

Satya ಅಂತಾರೆ...

ನಮ್ಮ ಮನಿ ಹೊಲಸು ಇಟಗೊಂಡು ಮಗ್ಗಲ ಮನಿ ಸುವಾಸನಿ ಬ್ಯಾಡ ಅಂದ್ರ ಹ್ಯಾಂಗ? ನಮ್ಮ ಮನಿ ಸ್ವಚ್ಚ ಸುಂದರ ಇದ್ದರ ಮಂದಿ ಮನಿ ಹ್ಯಾಂಗ ಇದ್ದರ ಏನು?
ಮೊದಲ ನಮ್ಮ ಮನಿ ಸ್ವಚ್ಚ ಮಾಡ್ರಿ ಆಮ್ಯಾಲ ಡಬ್ಬಿಂಗ್ ಬೇಕೋ ಬ್ಯಾಡೋ ಮಾತಾಡ್ರಿ ... ಇವು ಎಲ್ಲಾ ನಾಟಕ ... ಕನ್ನಡ ಮಂದಿ ಇಂಗ್ಲಿಷ್ ಸಿನಿಮಾ ನೋಡಿದರೂ ತಲ್ಯಾಗ ಕನ್ನಡದಾಗ ದುಬ್ಬಿಂಗ್ ಮಾಡಕೊತಾರ ...
ಕರ್ನಾಟಕದಾಗ ಇಂಗ್ಲಿಷ್ ಕಲಾತ ಮಂದಿ ಕನ್ನಡ ಸಿನಿಮಾ ನೋಡಿದರೂ ಇಂಗ್ಲಿಷ್ ದಾಗ ಡಬ್ ಮಾಡಿಕೊಂಡು ನೋಡತಾರ ... ಮೊದಲ ಕೂರ್ಮವತಾರದಂಥ ಚೊಲೋ ಚೊಲೋ ಕನ್ನಡ ಮೂವಿ ತಗೀರಿ ...
ಆಮ್ಯಾಲ ಈ ಚಿಂತಿ ಮಾಡ್ರಿ ...

Shivanna Gundanavar ಅಂತಾರೆ...

Naanu ee modalu dabbing virodiyagidde, ee puta odida nantara dabbing para manassu valatayideno anta anasta ide!!!!????

Unknown ಅಂತಾರೆ...

dubbing beda annoru kannada davaru alla....parabashigaru.....kannadadalli bandare elli navu nam basheli nododakke agalla antha e tara beda antare ,,,, dubbing madi ellaru kannada kaliyuthare,,,,namage bashe makya ...bashe idre kfi yavattu uddara agutte .....e tara beda annoru kannada da mele swalpanu kalagine illa....

ವೀರೇಶ ಅಂತಾರೆ...

We need Dubbing in kannada why should we miss good Films in our own language. when Dubbing was banned in karnataka in 60's Situations were bad to film industry so it was opt for those days Now Kannada film industry is Wellknown in the world We have banned here so only Other language films are running Proudly So accept Dubbing and start Showing quality movies

Unknown ಅಂತಾರೆ...

Barlibedi nam kannadigarige swabimana kammi

Unknown ಅಂತಾರೆ...

Satya avare, Hubliyalli namma atte maneyalli kannada channel on maadolla. Yake kelidare, kannadalli baruva almost ella daravahiyannu nannu already hindiyalli nodiddene. matte yaake nodabeku antaare. haage rayachorinalli iruva ondu kannada familyige hindi brodilla, aadare telugu barutte. avaru teluginannli dubb aada hindi sreial noduttare. heege aadare ondu dina tumba jana kannada chanelle on maadodilla. aaga kannaa serial maadidaru yaaru nododilla. adakinta dubbing bandare kannada market uliyutte. nammavaru yaavaga bekadaru a marketalli olle serial maadi torisabahudu. illa andare kannada market iralla aaga bayi badkobeku.

Unknown ಅಂತಾರೆ...

ಡಬ್ಬಿಂಗ್ ಬಂದರೆ .. ಶಿವರಾಜ್ ಕುಮಾರ್ & ಪುನಿತ್ ರಾಜ್ ಕುಮಾರ್ ಇವರುಗಳ ಚಿತ್ರಗಳಿಗೆ ಹೆಚ್ಚಿನ ಬೆಲೆ ಸಿಕ್ಕುವುದಿಲ್ಲಾ ಎನ್ನುವ ಭಯ ಅವರಲ್ಲಿದೆ.. ಹಾಗಾಗಿ ಅದಕ್ಕೆ ಒಪ್ಪಿಗೆ ಸಿಕ್ಕಿಲ್ಲಾ.. ಶಿವರಾಜ್ ಕುಮಾರ್ & ಪುನಿತ್ ರಾಜ್ ಕುಮಾರ್ ಒಪ್ಪಿದರೆ ಸಾಕು ಎಲ್ಲರೂ ಒಪ್ಪುತ್ತಾರೆ.. ಹಾಗೂ ಮಚ್ಚು ಲಾಂಗು ಅಂತಾ ಚಿತ್ರಾ ಮಾಡುವ ನಿರ್ದೇಶಕರಿಗೂ ಭಯವಿದೆ.. ಅವರ ಚಿತ್ರಗಳು ಓಡೊದಿಲ್ಲಾ ಅಂತಾ .. ಆದರೆ ನಮ್ಮೂರಿನ ಜನಗಳ ಅನಿಸಿಕೆಯ ಪ್ರಕಾರ ಡಬ್ಬಿಂಗ್ ತುಂಬಾ ಒಳ್ಳೆಯದು ಕನ್ನಡ ಜನಗಳಿಗೆ ಅದರಿಂದ ಅತ್ಯಧಿಕ ಹೊಸ ಬಗೆಯ ವಿಷಯಗಳು ತಿಳಿಯುತ್ತವೆ..

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails