ಪರಭಾಷಿಕರಿಗೆ ಕನ್ನಡ ಕಲಿಸೋಕೆ ಶುರುವಾಗಿದೆ ಹೊಸ ಸಂಸ್ಥೆ!


ಕನ್ನಡನಾಡಿನ ಮುಖ್ಯವಾಹಿನಿಗೆ ಇಲ್ಲಿಗೆ ವಲಸೆ ಬಂದಿರೋ ಪರಭಾಷಿಕರು ಸೇರಬೇಕು ಅನ್ನೋ ಆಶಯದಿಂದ ನಮ್ಮಲ್ಲಿ ಅದೆಷ್ಟೋ ಸಂಘ ಸಂಸ್ಥೆಗಳು ವಲಸಿಗರಿಗೆ ಕನ್ನಡ ಕಲಿಸಲು ಮುಂದಾಗಿವೆ. ಇವುಗಳಲ್ಲಿ ಹೆಚ್ಚಿನವು ಉಚಿತವಾಗಿ ಕನ್ನಡ ಕಲಿಸೋ ಅಂಥವು. ಅಂತರ್ಜಾಲದಲ್ಲಿ ಉಚಿತವಾಗಿ ಸಿಗೋ ಪಾಠಗಳು, ಸಂಸ್ಥೆಗಳಲ್ಲಿ ಕನ್ನಡ ಕಲಿಸಲು ಆಯಾಸಂಸ್ಥೆಗಳ ಆಡಳಿತ ಮಂಡಳಿಯೋರುನ್ನಾ, ಅಲ್ಲಿನ ಮಾನವ ಸಂಪನ್ಮೂಲ ವಿಭಾಗದೋರುನ್ನಾ ಒಪ್ಪಿಸೋ ಕಷ್ಟ ಇಂಥಾ ತರಗತಿಗಳನ್ನು ಶುರು ಮಾಡಿದವರಿಗೇ ಗೊತ್ತು! ಹೆಚ್ಚಿನ ಸಲಾ ನಾವು ಕನ್ನಡ ಕಲಿಸೋಕೆ ಮುಂದಾಗೋದು ಕನ್ನಡ ಉಳಿಸೋಕೆ ಎನ್ನೋ ಮನಸ್ಸು ಹಲವರಲ್ಲಿರುತ್ತೆ. ಆದರೆ ವಲಸಿಗನೊಬ್ಬ ಸ್ಥಳೀಯ ಭಾಷೆ ಕಲಿಯೋದು ಅವನಿಗೇ ಅನುಕೂಲಕರ ಅನ್ನೋ ಕಡೆಯಿಂದ ಯೋಚನೆ ಮಾಡಿರೋರು ಕಮ್ಮಿ. ಅಂಥಾ ಕಮ್ಮಿ ಮಂದಿಯ ನಡುವೆ ಎದ್ದು ಕಾಣ್ತಿರೋ ಹೆಸರು "ಕನ್ನಡ ಲರ್ನಿಂಗ್ ಸ್ಕೂಲ್".

ಕನ್ನಡ ಕಲಿಸುವ ವೃತ್ತಿಪರ ಶಾಲೆ

ನಮ್ಮ ಕನ್ನಡನಾಡಲ್ಲಿ ಇದೀಗ ವಲಸಿಗರಿಗೆ ಕನ್ನಡ ಕಲಿಸೋಕೆ ಪಕ್ಕಾ ವೃತ್ತಿಪರತೆಯಿಂದ ಒಂದು ಸಂಸ್ಥೆಯನ್ನೇ ತೆರೆದು, ಹೊಸ ಸಾಹಸಕ್ಕೆ ಕೈಹಾಕಿದೆ "ಕನ್ನಡ ಲರ್ನಿಂಗ್ ಸ್ಕೂಲ್". ಇವರ ಮಿಂಬಲೆ ತಾಣವನ್ನೂ ಅಚ್ಚುಕಟ್ಟಾಗಿ ಮಾಡಿದ್ದಾರೆ. ಇದರಲ್ಲಿ ಹೀಗೆ ಬರೆದಿದ್ದಾರೆ

ಒಂದು ಕಾಲದಲ್ಲಿ "ಉದ್ಯಾನ ನಗರಿ" ಎಂದೇ ಪ್ರಸಿದ್ದಿ ಪಡೆದಿದ್ದ "ಬೆಂದಕಾಳೂರು", ಇಂದು ಸಾಫ್ಟ್ವೇರ್ ಲೋಕದ ದಿಗ್ಗಜ ನಗರಗಳಲ್ಲಿ ಒಂದಾಗಿ ತಲೆಯೆತ್ತಿ ನಿಂತಿದೆ. ಜಾಗತೀಕರಣದ ಪ್ರಭಾವದಿಂದಾಗಿ ಇಂದು ಹಲವಾರು ಸಂಸ್ಥೆ ಗಳಿಗೆ ಹಾಗೂ ಸಹಸ್ರಾರು ಜನರಿಗೆ ಆಶ್ರಯ ತಾಣವಾಗಿದೆ. ದೇಶ ವಿದೇಶದ  ನಾನಾ ಭಾಗದಿಂದ ತಮ್ಮ ತಮ್ಮ ಕನಸುಗಳನ್ನು ಕಟ್ಟಿಕೊಂಡು ಇಲ್ಲಿಗೆ ಬರುತ್ತಿರುವ ಜನರು, ಬೆಂಗಳೂರನ್ನು ತಮ್ಮ ನೆಲೆಯನ್ನಾಗಿಸಿಕೊಂಡಿದ್ದಾರೆ. ಹಾಗೆ ಬಂದ ಬಹಳಷ್ಟು ಜನರಿಗೆ ಕನ್ನಡ ಭಾಷೆಯ ಬಗ್ಗೆ ಒಂದಿಷ್ಟು ಕುತೂಹಲವಂತೂ ಇದ್ದೆ ಇರುತ್ತದೆ. ಈ ನಿಟ್ಟಿನಲ್ಲಿ ಕನ್ನಡ ಭಾಷೆಯನ್ನು ಕನ್ನಡೇತರರಿಗೆ ತಲುಪಿಸುವ ಮತ್ತು ಪರಿಚಯಿಸುವ "ನಿರಂತರ ಪ್ರಯತ್ನ" ದ ಅಗತ್ಯವಿದೆ.
ಕಳೆದ ಎರಡು ವರ್ಷದಿಂದ "ಕನ್ನಡ ಕಲಿ" ಕಾರ್ಯಕ್ರಮವನ್ನು ಬೆಂಗಳೂರಿನ ಸೀಮಿತ ಪ್ರದೇಶದಲ್ಲಿ ಮಾತ್ರ ನಡೆಸಿಕೊಡುತ್ತಿದ್ದ ನಾವು, ಇಲ್ಲಿಯವರೆಗೆ ಐದು ನೂರಕ್ಕೂ ಹೆಚ್ಚು ಕನ್ನಡೇತರರಿಗೆ ಕನ್ನಡವನ್ನು ಹೇಳಿಕೊಟ್ಟಿದ್ದೇವೆ.  ಈಗ ಇದರ ಮುಂದಿನ ಭಾಗವಾಗಿ, "ಕನ್ನಡ ಕಲಿಕೆಯ ಶಾಲೆ ( Kannada Learning School)" ಯನ್ನು ಪ್ರಾರಂಭಿಸಿದ್ದೇವೆ.
ಈ ಮೂಲಕ ಮೊದಲನೇ ಹಂತದಲ್ಲಿ : "ಬೆಂಗಳೂರಿನ ಎಲ್ಲ ಭಾಗಗಳಲ್ಲಿ ನೆಲೆಸಿರುವ ಮತ್ತು ಕನ್ನಡ ಕಲಿಯಲು ಆಸಕ್ತಿ ಇರುವ ಕನ್ನಡೇತರರಿಗೆ, ಕನ್ನಡವನ್ನು ಪರಿಚಯಿಸುವುದು (ಕಲಿಸುವುದು)" ಹಾಗೂ ಎರಡನೇ ಹಂತದಲ್ಲಿ :"ಜಾಗತೀಕರಣದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಳುಗಿಹೋಗಿರುವ ನಮ್ಮ ಮುಂದಿನ ಪೀಳಿಗೆಯ ಕನ್ನಡಿಗರಿಗೆ ಕನ್ನಡ ಭಾಷೆ ಮತ್ತು ಕರ್ನಾಟಕದ ಸಂಸ್ಕೃತಿಯ ಬಗ್ಗೆ ಅರಿವನ್ನು ಅಥವಾ ತಿಳುವಳಿಕೆಯನ್ನು ಮೂಡಿಸುವುದು" ನಮ್ಮ ಉದ್ದೇಶಗಳಾಗಿವೆ.

ತಮ್ಮಲ್ಲಿ ಒಂದು ಕೋರಿಕೆ:

ಕನ್ನಡ ಕಲಿಯಲು ಆಸಕ್ತಿಯುಳ್ಳವರಿಗೆ "Kannada Learning School" ಬಗ್ಗೆ ತಿಳಿಸಿ ಕೊಟ್ಟರೆ ನೀವು ನಮ್ಮನ್ನು ಪ್ರೋತ್ಸಾಹಿಸಿ ದಂತಾಗುತ್ತದೆ. 
 ನಮ್ಮ ನಮ್ಮ ಸಂಪರ್ಕಕ್ಕೆ ಬರುವ ಪರಭಾಷಿಕರನ್ನು ಕನ್ನಡ ಕಲಿಯಲು ಆಸಕ್ತರನ್ನಾಗಿ ಮಾಡಿ ಈ ಸಂಸ್ಥೆಗೆ ಕಳಿಸೋಣ. ಏನಂತೀರಾ ಗುರೂ?

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails