ಸ್ವಾತಂತ್ರ್ಯ ದಿನವೆಂದರೆ ತೋರಿಕೆಯ ಮೇಲ್ಪದರದ ಆಚರಣೆ ಮಾತ್ರಾನೇ?


ಮತ್ತೊಂದು ಸ್ವಾತಂತ್ರ್ಯ ದಿನಾಚರಣೆ ಬಂದಿದೆ. ಶಾಲೆಗಳಲ್ಲಿ ಮಕ್ಕಳಿಂದ ಸಂಭ್ರಮದ ಕಾರ್ಯಕ್ರಮ, ಊರೂರುಗಳಲ್ಲಿ ಶಿಸ್ತಿನ ಸರ್ಕಾರಿ ಕಾರ್ಯಕ್ರಮ. ಇಂಥಾ ಕಾರ್ಯಕ್ರಮಗಳಲ್ಲಿ ಸ್ವಾತಂತ್ರ್ಯವೆಂದರೆ ಆಂಗ್ಲರಿಂದ ಬಿಡುಗಡೆ ಪಡೆದು ಇಂತಿಷ್ಟು ವರ್ಷಗಳಾದವು ಎಂದು ನೆನಪಿಸಿಕೊಳ್ಳುತ್ತಾ... ಹೀಗೆ ಆಂಗ್ಲರನ್ನು ಓಡಿಸಿ ನಮ್ಮನ್ನು ನಾವು ಆಳಿಕೊಳ್ಳುತ್ತಿರುವುದೇ ಪರಮ ಭಾಗ್ಯವೆಂದೂ, ಈ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಜೀವವನ್ನಾದರೂ ತೆತ್ತೇವು ಎಂಬಂತಹ ಭಾಷಣಗಳು ಕೇಳಿಸುವುದು ಕೂಡಾ ಸಹಜ.

ಸ್ವಾತಂತ್ರ್ಯ ದಿನಾಚರಣೆಯೆಂದರೆ...

ನಮ್ಮ ನಾಡಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಎಂದರೆ ಕಾರು, ಸ್ಕೂಟರ್, ಬೈಕು, ಆಟೋಗಳ ಮೇಲೆ ದೊಡ್ಡ ದೊಡ್ಡ ಬಾವುಟಗಳನ್ನು ಕಟ್ಟಿಕೊಂಡು ಊರೆಲ್ಲಾ ಸುತ್ತೋದು, ಮೈಕೈ ಮುಖದ ಮೇಲೆಲ್ಲಾ ಮೂರು ಬಣ್ಣಗಳನ್ನು ಬಳಸಿಕೊಳ್ಳೋದು, ಶಾಲೆಗಳಲ್ಲಿ ದೇಶಭಕ್ತಿ ಗೀತೆಗಳನ್ನು ಹಾಡೋದು, ಸಂಗೀತ ಮನರಂಜನೆಯ ಕಾರ್ಯಕ್ರಮಗಳನ್ನು ಏರ್ಪಡಿಸೋದು... ಹೀಗೆ ಜನಸಾಮಾನ್ಯರ ಆಚರಣೆ. ಅದೇ ಸರ್ಕಾರದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಗಳಿಂದ ಕೆಂಪುಕೋಟೆ ಮೇಲಿನ ಭಾಷಣ. ಆ ಭಾಷಣಗಳಲ್ಲಿ ಭ್ರಷ್ಟಾಚಾರ ಅಳಿಯಬೇಕು, ಭ್ರಾತೃತ್ವ ಉಳಿಯಬೇಕು, ಸವಾಲುಗಳನ್ನು ಗೆಲ್ಲಬೇಕೆನ್ನುವ ಮಾತುಗಳು ಮಾಮೂಲಿಯಾಗಿವೆ. ಹಾಗಾದರೆ ಇವೆಲ್ಲಾ ಬೇಡ ಅನ್ನೋ ಅನಿಸಿಕೆ ನಮದಲ್ಲ. ಈ ಸಂಭ್ರಮವೆಲ್ಲಾ ಇಷ್ಟಕ್ಕೇ ಮುಗಿದುಹೋಗುವುದನ್ನು ನೋಡ್ತಿದ್ರೆ ಇವೆಲ್ಲಾ ಶಿವನಿಲ್ಲದ ಸೌಂದರ್ಯದ ಹಾಗೆ ಅಂತಾ ಅನ್ನಿಸೋದಿಲ್ವಾ ಗುರೂ!

ಸ್ವಾತಂತ್ರ್ಯಕ್ಕೂ ಬೇಕಿದೆ ಸಾರ್ಥಕತೆ!

ಆಂಗ್ಲರು ಭಾರತ ಬಿಟ್ಟು ಹೋದರು ಅನ್ನೋ ಮಾತನ್ನು "ಆಂಗ್ಲರು ಇದುವರೆಗೂ ನಮ್ಮನ್ನು ಆಳುತ್ತಿದ್ದರು, ಇನ್ಮುಂದೆ ಅವರು ವಾಪಸ್ಸು ಇಂಗ್ಲೇಂಡಿಗೆ ಹೋಗ್ತಾರೆ" ಎನ್ನುವಷ್ಟಕ್ಕೇ ಸೀಮಿತಗೊಂಡಂತೆ ಇಂದಿನ ಸ್ವಾತಂತ್ರ್ಯ ದಿನಾಚರಣೆ! ಜನರಿಗೆ ಸಂಬಂಧಪಟ್ಟ ನಿರ್ಣಯಗಳು ಆದಷ್ಟೂ  ಕೆಳಹಂತದಲ್ಲೇ ಆಗಬೇಕೆನ್ನುವ ವಿಕೇಂದ್ರೀಕರಣ ಜಾರಿಯಾಗದೆ, ಎಲ್ಲದರ ಮೇಲೂ ಕೇಂದ್ರದ ಹಿಡಿತವಿರುವುದು ಸ್ವಾತಂತ್ರ್ಯವೇ? ಅಧಿಕಾರವೆನ್ನುವುದು ಕೆಳಹಂತದಿಂದ ಮೇಲಕ್ಕೆ ಬಿಟ್ಟುಕೊಟ್ಟದ್ದಾಗಿರದೆ, ಕೆಳಗಿನ ಹಂತಕ್ಕೆ ಮೇಲಿನಿಂದ ದಾನ ಕೊಡಲ್ಪಟ್ಟಿದ್ದಾಗುವುದಾದರೆ ಸ್ವಾತಂತ್ರ್ಯವೇ? ಒಂದು ಕಡೆ ಸರ್ಕಾರವೇ ಹೆಚ್ಚಿನ ಜನರು ಬಳಸುವ ಭಾಷೆ ಎನ್ನುವ ಕಾರಣದಿಂದ ಉಳಿದವುಗಳ ಬಗ್ಗೆ ಅಸಹನೆ, ಅಗೌರವ, ದಬ್ಬಾಳಿಕೆಗಳನ್ನು ಜಾರಿಯಲ್ಲಿಡುತ್ತಿರುವುದು ಕಾಣುತ್ತಿದ್ದರೆ ಇನ್ನೊಂದೆಡೆ ಇಂಥದ್ದೇ ಹೆಚ್ಚಿನ ಜನರು ಆಚರಿಸುವ ಧರ್ಮ ಎನ್ನುವ ಹೆಚ್ಚುಗಾರಿಕೆಯ ಕಾರಣದಿಂದ ಉಳಿದವರ ಬಗ್ಗೆ ಅಸಹನೆ, ಅಪನಂಬಿಕೆ, ಅಪಪ್ರಚಾರಗಳನ್ನು ಇದೇ ಮೂರುಬಣ್ಣ ಬಳಿದುಕೊಂಡು ದೇಶಭಕ್ತಿಯ ಗುತ್ತಿಗೆ ತೆಗೆದುಕೊಂಡಂತೆ ಆಡುತ್ತಿರುವವರು ಮಾಡುತ್ತಿರುವುದು ಕಾಣುತ್ತಿದೆ.

ಭಾರತದಲ್ಲಿ ನಿಜವಾದ ಒಪ್ಪುಕೂಟ ವ್ಯವಸ್ಥೆ ಜಾರಿಯಾಗಬೇಕಾಗಿದೆ. ಸಮಾಜದಲ್ಲಿ ತನ್ನದಲ್ಲದ ನಂಬಿಕೆ ಹೊಂದಿರುವವರನ್ನು ಅವಹೇಳನ ಮಾಡುವ, ಅಸಹನೆ ತೋರುವ ಪ್ರವೃತ್ತಿಗಳು ನಿಲ್ಲಬೇಕಾಗಿದೆ. ಭ್ರಷ್ಟಾಚಾರದಂತಹ ಪಿಡುಗುಗಳಿಗೆ ಲೋಕ್‌ಪಾಲ್, ಜನಲೋಕ್‌ಪಾಲ್‌ನಂತಹ ಮೇಲುಮೇಲಿನ ಪರಿಹಾರಗಳಾಚೆ ವಿಕೇಂದ್ರೀಕರಣದ, ಪಾರದರ್ಶಕತೆಯ, ಹೊಣೆ ತಪ್ಪಿಸಿಕೊಳ್ಳಲಾರದಂತಹ ವ್ಯವಸ್ಥೆಗಳನ್ನು ರೂಪಿಸಿಕೊಳ್ಳಬೇಕಾಗಿದೆ. ಇವೆಲ್ಲಾ ಆಗುವ ನಿಟ್ಟಿನಲ್ಲಿ ಬೇಕಾಗಿರುವ ಜನಜಾಗೃತಿ ಮೂಡಿಸುವ ಕೆಲಸಗಳು ಹೆಚ್ಚೆಚ್ಚು ಆಗದೆ ಬರೀ ತೋರಿಕೆಯ ಆಚರಣೆಗಳು ನಡೆಯುತ್ತಿದ್ದಲ್ಲಿ ಸ್ವಾತಂತ್ರ್ಯಕ್ಕೇನು ಸಾರ್ಥಕತೆ ಸಿಕ್ಕೀತು? ಕಪ್ಪುಬಿಳುಪಿನ ಫೋಟೋ ಬಣ್ಣದ್ದಾಗಿದ್ದು ಬಿಟ್ಟರೆ ಬೇರೇನೂ ಬದಲಾಗಲಿಲ್ಲಾ ಅನ್ನಿಸೋಲ್ವಾ ಗುರೂ?!

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails