೧. ಕಾವೇರಮ್ಮಾ ಕಾಪಾಡಮ್ಮಾ! ಈ ದೋಣಿಯಾ ತೇಲಿಸು...


ಕಾವೇರಿ ನದಿನೀರು ಹಂಚಿಕೆಯ ವಿವಾದ ಮತ್ತೊಮ್ಮೆ ಭುಗಿಲೆದ್ದಿದೆ. ಪ್ರತಿ ಮೂರುನಾಲ್ಕು ವರ್ಷಕ್ಕೊಮ್ಮೆ ಸಣ್ಣ ಕಿರಿಕ್ಕು, ದಶಕದಲ್ಲೊಮ್ಮೆ ದೊಡ್ಡ ಕಿರಿಕ್ಕು ಮಾಮೂಲಿಯಾಗಿರುವ ಈ ವಿವಾದದ ಬಗ್ಗೆ ಒಂದಷ್ಟು ವಿಚಾರಗಳನ್ನು ಸರಣಿ ಬರಹದ ಮೂಲಕ ಹಂಚಿಕೊಳ್ಳುತ್ತೇವೆ.

ಕಾವೇರಿ, ಕರ್ನಾಟಕ ಮತ್ತು ತಮಿಳುನಾಡಿನ ಜೀವನದಿ!

ಹರಿಯುವ ನದಿಯ ನೀರು ಸಹಜವಾಗಿ ದಡದ ಜನರ ಹಕ್ಕು ಎನ್ನುವುದು ಒಪ್ಪಿತವಾಗಿದೆ. ಹಾಗಾದರೆ ಹರಿವ ನೀರಿಗೆ ಅಣೆಕಟ್ಟೆ ಕಟ್ಟುವುದು ಸರಿಯೇ? ಇದು ನೀರಿನ ಸಹಜವಾದ ಹರಿವಿಗೆ ಅಡ್ಡಿ ಮಾಡುವ ಯತ್ನವಲ್ಲವೇ? ಎಂಬೆಲ್ಲಾ ಮೂಲಭೂತವಾದಗಳ ಬೆನ್ನತ್ತಿ ತಮಿಳುನಾಡು ನದಿ ಪಾತ್ರದ ಮೇಲಿನ ಭಾಗದ ಪ್ರದೇಶಗಳಿಗೆ ನೀರನ್ನು ಹಿಡಿದು ನಿಲ್ಲಿಸುವ ಹಕ್ಕೇ ಇಲ್ಲವೆನ್ನುವಂತೆ ವರ್ತಿಸುತ್ತಾ ವಾದಿಸುತ್ತಾ ಬಂದಿದೆ. ಅತ್ಯಂತ ಸಮರ್ಥವಾದ ವಾದದಂತೆ ಕಾಣುವ ಈ ವಾದದ ಬೆನ್ನು ಹಿಡಿದು ಹೋದರೆ ಯಾವ ನದಿಗೂ ಅಣೇಕಟ್ಟು ಕಟ್ಟುವಂತಿಲ್ಲ! ಇದು ಕೆಳಗಿನ ರಾಜ್ಯಗಳಿಗೂ ಅನ್ವಯವಾಗಬೇಕಾದ್ದು ನ್ಯಾಯ. ಹಾಗಾಗಿ ಬಿಟ್ಟರೆ ನದಿನೀರಲ್ಲಿ ಬಹುಪಾಲು ವ್ಯರ್ಥವಾಗಿ ಕಡಲು ಸೇರುತ್ತದೆ. ಮಾನವನ ಬದುಕು ಪ್ರಗತಿ ಹೊಂದುವಲ್ಲಿ ನದಿ ನೀರನ್ನು ಹಿಡಿದಿಟ್ಟುಕೊಳ್ಳುವುದೂ ಕೂಡಾ ಮಹತ್ವದ್ದಾದ್ದರಿಂದ ನದಿಯ ಮೇಲಿನ ನಾಡುಗಳು, ಕೆಳಭಾಗದ ನಾಡುಗಳೂ ಎಲ್ಲವಕ್ಕೂ ನೀರು ಹಿಡಿದಿಟ್ಟುಕೊಳ್ಳುವ ಹಕ್ಕೂ ಸಹಜವಾಗಿ ಸಿಗಬೇಕಾಗುತ್ತದೆ. ಹೀಗಾದಾಗ ಯಾವ ನಾಡು ಎಷ್ಟು ನೀರನ್ನು ಹಿಡಿದಿಟ್ಟುಕೊಳ್ಳಬೇಕು? ಎಷ್ಟು ನೀರನ್ನು ಕೆಳ ನಾಡುಗಳಿಗಾಗಿ ಬಿಟ್ಟುಕೊಡಬೇಕು ಎನ್ನುವುದು ತೀರ್ಮಾನವಾಗಬೇಕಾಗುತ್ತದೆ. ಈ ಹಂತದಲ್ಲಿ ನ್ಯಾಯಯುತವಾದ ಮಾನದಂಡಗಳು ಇದ್ದಲ್ಲಿ... ಬಹುಷಃ ಯಾವ ಸಮಸ್ಯೆಯೂ ಉಂಟಾಗುವುದಿಲ್ಲ! ಆದರೆ ನಾಡುಗಳ ರಾಜಕೀಯ ಬಲಾಬಲಗಳು, ಐತಿಹಾಸಿಕ ಮೇಲುಗೈಗಳು ಇದನ್ನು ನಿಶ್ಚಯಿಸುವುದಾದಲ್ಲಿ ತಾರತಮ್ಯ ಕಟ್ಟಿಟ್ಟ ಬುತ್ತಿ! ಕರ್ನಾಟಕವು ಇಂತಹುದೇ ತಾರತಮ್ಯದ ಕಾರಣದಿಂದಾಗಿ ಸದಾಕಾಲ ಅನ್ಯಾಯಕ್ಕೆ ಒಳಗಾಗುತ್ತಿದೆ ಎನ್ನುವ ಕೂಗನ್ನು ನಾವು ಕೇಳುತ್ತಲೇ ಇದ್ದೇವೆ. ಹೇಗೆ ಈ ಸಿಕ್ಕನ್ನು ಬಿಡಿಸಬಹುದು? ನಿಜಕ್ಕೂ ಏನಿದರ ಒಳಸುಳಿ?

ಎರಡೂ ರಾಜ್ಯಗಳ ಲಕ್ಷಾಂತರ ಎಕರೆ ನೆಲದಲ್ಲಿ ಲಕ್ಷಾಂತರ ರೈತರು ಉಳುಮೆ ಮಾಡುತ್ತಿದ್ದಾರೆ. ಹತ್ತಾರು ಜಿಲ್ಲೆಗಳಲ್ಲಿ ಹಾದು ಹೋಗುವ ಕಾವೇರಿ ನದಿ ನೀರಿನ ಕುರಿತಾದ ಹಕ್ಕು ಸ್ಥಾಪನೆಯ ವಿವಾದ ಸಾವಿರಾರು ವರ್ಷ ಹಳೆಯದ್ದು! ಕರಿಕಾಲ ಚೋಳರಾಜ ೧೬೦೦ ವರ್ಷಗಳ ಹಿಂದೆಯೇ ಅಣೆಕಟ್ಟೆ ಕಟ್ಟಿದ್ದ ಇತಿಹಾಸವಿದೆ. ಈ ಎರಡೂ ರಾಜ್ಯಗಳಲ್ಲಿರುವ ಕಾವೇರಿ ನದೀಪಾತ್ರದ ಜನತೆ ಬೇರೆ ಬೇರೆ ಕಾಲಾವಧಿಯಲ್ಲಿ ಬೇರೆ ಬೇರೆ ಆಡಳಿತಗಳಡಿ ಬದುಕಿವೆ. ಹೀಗಾಗಿ ನೀರು ಬಳಕೆಯ ಮೇಲಿನ ಹಕ್ಕುಗಳು ಬದಲಾಗುತ್ತಲೇ ಸಾಗಿವೆ.

ಎರಡು ಪ್ರಮುಖವಾದ ಬೆಳವಣಿಗೆಗಳನ್ನು ನಾವು ಇಲ್ಲಿ ಗಮನಿಸಬಹುದಾಗಿದೆ. ಮೊದಲನೆಯದು ಆಂಗ್ಲರ ಕಡುವೈರತ್ವ ಸಾಧಿಸಿದ ಹೈದರಾಲಿ ಹಾಗೂ ಟಿಪ್ಪೂಸುಲ್ತಾನರ ರಾಜತ್ವದ ಮೈಸೂರು ಪ್ರಾಂತ್ಯವು ೧೮೭೦ರ ನಂತರ ಮೈಸೂರು ಅರಸರ ಕೈಗೆ ಬಂದರೂ, ಬ್ರಿಟೀಷರ ನೇರ ಆಳ್ವಿಕೆಯಲ್ಲಿದ್ದ ಮದ್ರಾಸ್ ಪ್ರಾಂತ್ಯ.. ಆ ಕಾರಣದಿಂದಲೇ ಹೊಂದಿದ್ದ ರಾಜಕೀಯ ಮೇಲುಗೈ. ಎರಡನೆಯದು ಮನುಕುಲ ಸಾಧಿಸಿದ ವೈಜ್ಞಾನಿಕ/ ತಾಂತ್ರಿಕ ಕ್ರಾಂತಿಯಿಂದಾಗಿ ಅಣೆಕಟ್ಟು ನಿರ್ಮಿಸಿ ಕಾಲುವೆಗಳನ್ನು ಮಾಡಿಕೊಂಡು ನೀರಾವರಿ ಪ್ರದೇಶವನ್ನು ಹೆಚ್ಚಿಸಿಕೊಂಡು ಬೆಳೆ ಬೆಳೆಯುವ ಕ್ರಿಯೆ ಹೆಚ್ಚು ವ್ಯವಸ್ಥಿತವಾಗಿ ಹರವು ಕಂಡುಕೊಂಡದ್ದು! ಮೈಸೂರಿನ ಮೇಲೆ ಹೇರಲಾದ ೧೮೯೨ ಮತ್ತು ೧೯೨೪ರ ಒಪ್ಪಂದಗಳು ರಾಜರ ಕಾಲದ/ ಆಂಗ್ಲರ ಕಾಲದ ಒಪ್ಪಂದಗಳಾದರೆ ಭಾರತದ ಸ್ವಾತಂತ್ರ್ಯದ ನಂತರ ಆದ ಬೆಳವಣಿಗೆಗಳು (ಇಲ್ಲಿ ಆದ ಬೆಳವಣಿಗೆಗಳು ಅನ್ನುವುದಕ್ಕಿಂತ ಆಗದ ಬೆಳವಣಿಗೆಗಳು ಎನ್ನುವುದು ಹೆಚ್ಚು ಸೂಕ್ತ) ಬಿಕ್ಕಟ್ಟಿನ ತೀವ್ರತೆಗೆ ಕಾರಣವಾದವು. ೧೯೪೭ರ ಸ್ವಾತಂತ್ರ್ಯದ ನಂತರ ಮೈಸೂರು ಹಾಗೂ ಮದ್ರಾಸುಗಳು ಕರ್ನಾಟಕ ತಮಿಳುನಾಡುಗಳಾದ ನಂತರ, ರಾಜರ/ ಆಂಗ್ಲರ ಆಳ್ವಿಕೆ ಅಳಿದು ಪ್ರಜಾಪ್ರಭುತ್ವ ಜಾರಿಯಾದಾಗ, ಸಮಾನತೆಯೇ ಜೀವಾಳವಾದ ಒಕ್ಕೂಟವೊಂದರ ಭಾಗವಾಗಿ ಈ ಪ್ರದೇಶಗಳು ಬಂದನಂತರ ಹಳೆಯದ್ದನ್ನೆಲ್ಲಾ ಅಳಿಸಿ ಹೊಸತನ್ನು ಬರೆದಿಡುವ ಸಮಯವಾಗಿತ್ತು! ಆದರೆ ಕರ್ನಾಟಕಕ್ಕೆ ಅನ್ಯಾಯಗಳ ಅಪಚಾರ ಎಸಗುವ ಪರಂಪರೆ ಮಾತ್ರಾ ಮುಂದುವರೆದು ೧೯೯೦ರಿಂದೀಚೆಗೆ ಕಾವೇರಿ ನ್ಯಾಯಾಧಿಕರಣ, ಸುಪ್ರಿಂಕೋರ್ಟ್ ಆದೇಶಗಳು, ಪ್ರಧಾನಮಂತ್ರಿಗಳ ಮಧ್ಯಸ್ಥಿಕೆ, ಕಾವೇರಿ ನದಿ ಪ್ರಾಧಿಕಾರದ ನ್ಯಾಯನಿರ್ಣಯಗಳು ಇತ್ಯಾದಿಗಳೆಲ್ಲಾ ನಡೆದು ನ್ಯಾಯದ ಹೆಸರಿನಲ್ಲೇ ಕರ್ನಾಟಕಕ್ಕೆ ತೀವ್ರವಾದ ಮೋಸ ಆಗಿರುವುದು ಕಾಣಬರುತ್ತಿದೆ.

ಈ ಸಮಸ್ಯೆಗೆ ಪರಿಹಾರವನ್ನು ದೇಶದ ಯಾವುದೇ ನ್ಯಾಯಾಲಯ ನೀಡಲು ಸಾಧ್ಯವೇ? ನದಿನೀರು ಹಂಚಿಕೆಯ ಬಿಕ್ಕಟ್ಟುಗಳ ಬಗೆಹರಿಸುವಿಕೆ ಸುಪ್ರಿಂಕೋರ್ಟ್ ವ್ಯಾಪ್ತಿಗೆ ಬರುತ್ತದೆಯೇ? ಬರಬೇಕೇ? ಸ್ವಾತಂತ್ರ್ಯ ಪೂರ್ವದ ಹೇರಲಾದ ಒಪ್ಪಂದಗಳು, ಶತಮಾನಗಳಿಂದ ಬಳಸುತ್ತಿದ್ದೇವೆ ಎನ್ನುವ ಹಕ್ಕು ಸಾಧಿಸುವಿಕೆಗಳು ನದಿ ನೀರು ಹಂಚಿಕೆಯ ಮಾನದಂಡವಾಗಬಲ್ಲವೇ? ನ್ಯಾಯಾಧಿಕರಣಗಳು ಯಾವ ಆಧಾರದ ಮೇರೆ ಯಾವ ಮಾನದಂಡದ ಮೇಲೆ ನದಿನೀರು ಹಂಚಿಕೆಯ ತೀರ್ಪು ನೀಡಿವೆ? ಯಾವ ಆಧಾರದ ಮೇರೆ ಪ್ರಧಾನಮಂತ್ರಿಗಳು ನೀರು ಬಿಡಲು ಆದೇಶ ನೀಡುತ್ತಾರೆ? ಯಾವ ಆಧಾರದ ಮೇರೆ ಸುಪ್ರಿಂಕೋರ್ಟ್ ನೀರು ಬಿಡಲು ಆದೇಶಿಸುತ್ತದೆ ಎನ್ನುವುದನ್ನೆಲ್ಲಾ ಮುಂದಿನ ಸಂಚಿಕೆಗಳಲ್ಲಿ ಚರ್ಚಿಸೋಣ.

(...ಮುಂದುವರೆಯುವುದು)

3 ಅನಿಸಿಕೆಗಳು:

Jnaneshwara ಅಂತಾರೆ...

Uttama lekhana sir




Unknown ಅಂತಾರೆ...

ಮೇಲ್ಕಂಡ ಎಲ್ಲಾ ಮಾಹಿತಿಗಳೂ ಚಿಂತನಾರ್ಹವಾಗಿದ್ದು ಮುಂದಿನ ಸಂಚಿಕೆಯನ್ನು ಕಾತರದಿಂದ ಎದುರು ನೋಡುವಂತಾಗಿದೆ.

talegari (ತಾಳೆಗರಿ) ಅಂತಾರೆ...

ಮುಂದಿನ ಸಂಚಿಕೆಗಾಗಿ ಕಾಯ್ತಿದ್ದೀನಿ ...

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails