‘ಮಂದಿಯಾಳ್ವಿಕೆ’ಯಲ್ಲಿ ಕನ್ನಡಿಗ: ಹೊತ್ತಗೆ ಬಿಡುಗಡೆ ಕಾರ್ಯಕ್ರಮಕ್ಕೆ ಬನ್ನಿ!


ಬನವಾಸಿ ಬಳಗ ಪ್ರಕಾಶನದ ವತಿಯಿಂದ ಬರುವ ಶನಿವಾರದಂದು ಬೆಳಗ್ಗೆ ೧೦ಕ್ಕೆ ಬಸವನಗುಡಿಯ "ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ಼್ ವರ್ಲ್‌ಡ್ ಕಲ್ಚರ್" ಸಂಸ್ಥೆಯ ಬಿ ಪಿ ವಾಡಿಯಾ ಸಭಾಂಗಣದಲ್ಲಿ ನಾಡಿನ ಹೊಸತಲೆಮಾರಿನ ಚಿಂತಕರಾದ ಶ್ರೀ ಕಿರಣ್ ಬಾಟ್ನಿಯವರ "ಮಂದಿಯಾಳ್ವಿಕೆಯಲ್ಲಿ ಕನ್ನಡಿಗ" ಎನ್ನುವ ಹೊತ್ತಗೆಯ ಬಿಡುಗಡೆ ಕಾರ್ಯಕ್ರಮವಿದೆ. ಸನ್ಮಾನ್ಯರಾದ ಶ್ರೀ ಲಕ್ಷ್ಮಣ್ ಹೂಗಾರ್, ಡಾ. ಪಿ ವಿ ನಾರಾಯಣ ಮತ್ತು ಡಾ. ಕೆ ವಿ ನಾರಾಯಣರವರು ಅಂದು ನಮ್ಮೊಡನೆ ಇರಲಿದ್ದಾರೆ. ನೀವೂ ಬನ್ನಿ. ನಮ್ಮ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ. 

ಹೊತ್ತಗೆಯ ಬಗ್ಗೆ


ಭಾರತ ದೇಶದಲ್ಲಿನ ಆಡಳಿತದ ಸ್ವರೂಪವು ಪ್ರಜಾಪ್ರಭುತ್ವದ್ದಾಗಿದೆ ಎಂದು ಜಗತ್ತೇ ನಂಬಿದೆ. ಇದು ಚುನಾವಣೆಗಳ ಮೂಲಕ ಜನಪ್ರತಿನಿಧಿಗಳನ್ನು ಆರಿಸುವ ಮೂಲಕವೂ, ಜನಪ್ರತಿನಿಧಿಗಳ ವಿವಿಧ ಹಂತದ ಸಭೆಗಳು ಜಾರಿಯಲ್ಲಿರುವ ಮೂಲಕವೂ ಮೇಲ್ನೋಟಕ್ಕೆ ದಿಟದಂತೆಯೇ ತೋರುತ್ತಿದೆ. ಆದರೆ ವಾಸ್ತವವಾಗಿ ಪ್ರಜಾಪ್ರಭುತ್ವದ ಮೂಲಸೆಲೆಯಾದ ವಿಕೇಂದ್ರಿಕರಣವೆನ್ನುವುದನ್ನು ವಿಡಂಬನೆ ಮಾಡುವಂತೆ ಈ ವ್ಯವಸ್ಥೆಯಿದೆ. ಅಧಿಕಾರವನ್ನು ಜನರ ಹತ್ತಿರಕ್ಕೆ ಒಯ್ಯಬೇಕಾದ ವ್ಯವಸ್ಥೆ ಹೇಗೆ ಜನರಿಂದ ದೂರ ಒಯ್ಯುತ್ತಿದೆ ಎನ್ನುವುದು ಆತಂಕಕಾರಿಯಾದುದಾಗಿದೆ. ರಾಜ್ಯಗಳ ಆಡಳಿತದಲ್ಲಿ ಕೇಂದ್ರದ ಬೇಡದ ಮೂಗುತೂರಿಸುವಿಕೆ, ನಮ್ಮ ಒಳಿತು ಕೆಡುಕುಗಳನ್ನು ಲೆಕ್ಕಕ್ಕಿಟ್ಟುಕೊಳ್ಳದಂತೆ ಮಾಡಲಾಗಿರುವ ಅನೇಕ ನೀತಿ ನಿಯಮಗಳು... ಇವೆಲ್ಲಾ ಭಾರತದಲ್ಲಿ ನಿಜಕ್ಕೂ ಪ್ರಜಾಪ್ರಭುತ್ವ  ಎನ್ನುವುದಿದೆಯೇ ಎನ್ನುವ ಅನಿಸಿಕೆಗೆ ಕಾರಣವಾಗುತ್ತದೆ. ಇದಕ್ಕೆಲ್ಲಾ ಕಾರಣವಾಗಿರುವ ಭಾರತೀಯ ಸಂವಿಧಾನಕ್ಕೆ ತುರ್ತು ಚಿಕಿತ್ಸೆಯ ಅಗತ್ಯ ಇಂದಿರುವುದನ್ನು ಈ ಹೊತ್ತಗೆ ಎತ್ತಿ ತೋರುತ್ತದೆ. ನಿಜವಾದ ಪ್ರಜಾಪ್ರಭುತ್ವ ರೂಪುಗೊಳ್ಳಬೇಕಾದ್ದು ಕನ್ನಡಿಗರ ಏಳಿಗೆಗೆ ಅತ್ಯಂತ ಅಗತ್ಯವಾದುದಾಗಿದೆ.

ಹೀಗೆ ಬದಲಾಗಬೇಕಾದ್ದು ಭಾರತೀಯ ಸಂವಿಧಾನ ಮಾತ್ರವೇ ಅಲ್ಲ, ಇನ್ನೂ ನಮ್ಮ ಸಮಾಜವು ಬದಲಿಸಿಕೊಳ್ಳಬೇಕಾದ ಜಾತಿಯೇರ್ಪಾಡು, ಕಲಿಕೆ ಏರ್ಪಾಡು, ಕಲಿಕೆಯಲ್ಲಿನ ನುಡಿ, ನುಡಿಯ ಕಲಿಕೆಗಳೆಲ್ಲಾ ಇವೆ. ಈ ನಿಟ್ಟಿನಲ್ಲಿ ಕಲಿಕೆ ಮತ್ತು ನುಡಿಗಳ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ, ಕಂಡುಕೊಳ್ಳಲಾದ ಕೆಲದಿಟಗಳಲ್ಲಿ ಪ್ರಮುಖವಾದದ್ದು "ಹೊಸಬರಹ". ತೊಡಕಾದ ಬರಹದಿಂದ ಕನ್ನಡಿಗರ ಕಲಿಕೆಗೆ ಆಗಿರುವ ಹಿನ್ನಡೆಗಳನ್ನು ಮೀರಬೇಕೆನ್ನುವ ತುಡಿತದ ಕಾರಣದಿಂದಾಗಿಯೇ ಉಲಿಯುವಂತೆಯೇ ಬರೆಯಬೇಕೆನ್ನುವ ಈ ಹೊಸಬರಹವನ್ನು ಈ ಪುಸ್ತಕದಲ್ಲಿ ಅಳವಡಿಸಿಕೊಳ್ಳಲಾಗಿದೆ. ಈ ಪುಸ್ತಕದಲ್ಲಿ ಕನ್ನಡಿಗರ ಉಲಿಕೆಯಲ್ಲಿರದ ಮಹಾಪ್ರಾಣಗಳೂ ಸೇರಿದಂತೆ ಕೆಲವು ಅಕ್ಷರಗಳನ್ನು ಕೈಬಿಡಲಾಗಿದೆ. ಕನ್ನಡದ್ದೇ ಬೇರಿನ ಹತ್ತಾರು ಪದಗಳನ್ನು ಕಟ್ಟಿ ಬಳಸಲಾಗಿದೆ. ಒಟ್ಟಾರೆ ಕನ್ನಡ ಸಮಾಜದ ಏಳಿಗೆಯ ತೀವ್ರ ತುಡಿತವನ್ನು ಈ ಹೊತ್ತಗೆಯಲ್ಲಿ ಕಾಣಬಹುದಾಗಿದೆ.

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails