ಕನ್ನಡಿಗರ ನೆತ್ತಿಯ ಮೇಲೆ ಬಿಜೆಪಿಯ ತೂಗುಕತ್ತಿ!

(ಫೋಟೋ ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್)
ಭಾರತೀಯ ಜನತಾ ಪಕ್ಷದ ಶಾಸಕರಾದ ಶ್ರೀ ಉಮೇಶ್ ಕತ್ತಿಯವರು ಮತ್ತೊಮ್ಮೆ ಉತ್ತರ ಕರ್ನಾಟಕವನ್ನು ಬೇರೆ ರಾಜ್ಯವಾಗಿಸುವ ಮಾತಾಡಿದ್ದಾರೆ. ಈ ಹಿಂದೆಯೂ ಕೂಡಾ ಉಮೇಶ್ ಕತ್ತಿಯವರು ಇದೇ ಮಾತಾಡಿದ್ದರು. ಇವರು ತಾವು ಈ ಬಾರಿ ಹೀಗೆ ಹೇಳಲು ಕಾರಣ ‘ಕರ್ನಾಟಕ ರಾಜ್ಯಸರ್ಕಾರವು ಪ್ರತಿ ಟನ್ ಕಬ್ಬಿಗೆ ಬೆಂಬಲ ಬೆಲೆಯಾಗಿ ೨೫೦೦ ರೂಪಾಯಿಗಳು ಎಂದು ಘೋಷಿಸಿರುವುದು’ ಎಂಬ ಸ್ಪಷ್ಟನೆಯನ್ನು ನೀಡಿ, ‘ಇಂತಹ ಬೇಡಿಕೆ ತಪ್ಪೇನಿಲ್ಲಾ’ ಎಂಬ ಸಮರ್ಥನೆಯನ್ನೂ ಕೊಟ್ಟಿದ್ದಾರೆ. ವಿಷಯ ಇಷ್ಟೇ ಆಗಿದ್ದರೆ... ಈ ಒಡಕು ಧ್ವನಿ ಕರ್ನಾಟಕ ಏಕೀಕರಣ ಇತಿಹಾಸದ ಅರಿವಿಲ್ಲದ, ಚಿಕ್ಕರಾಜ್ಯದ ತೊಡಕುಗಳ ಬಗ್ಗೆ ಗೊತ್ತಿಲ್ಲದ, ಒಗ್ಗಟ್ಟಿನಲ್ಲಿ ನಂಬಿಕೆಯಿಲ್ಲದ ಯಾವುದೋ ಕಿಡಿಗೇಡಿ ರಾಜಕೀಯ ಪುಡಾರಿಯದ್ದಷ್ಟೇ ಎಂದು ಕಡೆಗಣಿಸಬಹುದಾಗಿತ್ತು! 

ಬಿಜೆಪಿಯದ್ದು ಮೌನ ಸಮ್ಮತಿಯೇ?

ಆದರೆ  ಒಂದು ರಾಜಕೀಯ ಪಕ್ಷದ ನಾಯಕ, ಒಬ್ಬ ಶಾಸಕ, ಮಾಜಿ ಮಂತ್ರಿಯೊಬ್ಬರು ಈ ರೀತಿಯಾದ ಹೇಳಿಕೆ ಕೊಡುವುದರ ಅರ್ಥ ಸದರಿ ಮನುಷ್ಯ ಸೇರಿರುವ ಪಕ್ಷಕ್ಕೆ ಈ ವ್ಯಕ್ತಿಯ ಮೇಲೆ ಯಾವುದೇ ಹಿಡಿತವಿಲ್ಲಾ ಅಥವಾ ಈ ಪಕ್ಷವೇ ಇಂತಹ ಹೇಳಿಕೆಯನ್ನು ಹೇಳಿಸುತ್ತಿದೆ ಎಂದು. ಇಲ್ಲಿ ಯಾವುದು ದಿಟ? ಇದೀಗ ಸ್ಪಷ್ಟೀಕರಣ ನೀಡೋ ಹೊಣೆ ರಾಜ್ಯ ಬಿಜೆಪಿಯದ್ದು... ಈ ಪಕ್ಷ ಕಳೆದ ಬಾರಿಯೇ ಕತ್ತಿಯವರ ಬಾಯಿಗೆ ಬೀಗ ಹಾಕದೇ ಏನೂ ಸಂಬಂಧವಿಲ್ಲದ ಹಾಗೆ ಇದ್ದದ್ದು ಜಾಣಮೌನವೇ? ನಿಜಕ್ಕೂ ಬಿಜೆಪಿಯ ನಿಲುವು ಏನು? ಎಂಬುದು ಮುಖ್ಯವಾದ ವಿಷಯವಾಗಿದೆ.

ತನ್ನ ನಿಲುವು ಇದೇ ಆಗಿದ್ದರೆ ನೇರವಾಗಿ ಅದನ್ನು ಹೇಳಿಕೊಂಡೇ ರಾಜಕಾರಣ ಮಾಡಬೇಕಾದ್ದು ಬಿಜೆಪಿಯ ಹೊಣೆ. ಕನ್ನಡಿಗರ ಒಗ್ಗಟ್ಟನ್ನು, ಸಾವಿರಾರು ತ್ಯಾಗ ಬಲಿದಾನಗಳ ಏಕೀಕರಣ ಇತಿಹಾಸದ ಸಾರ್ಥಕ್ಯವನ್ನು, ನಮ್ಮ ತಾಯ್ನೆಲವಾದ ಕರ್ನಾಟಕವನ್ನು ಒಡೆಯೋದಾಗಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಳ್ಳುವ ನೇರವಂತಿಕೆ ತೋರಿಸಿಕೊಳ್ಳಲಿ...

ಇಲ್ಲದಿದ್ದರೆ ನಾಡಿನ ಹಿತಕ್ಕೆ ಮಾರಕವಾಗುವ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿದ್ದಕ್ಕೆ ಸದರಿ ರಾಜಕಾರಣಿಯನ್ನು ವಿವರಣೆ ಕೇಳುವ, ಬಾಯಿ ಮುಚ್ಚಿಸುವ, ಪಕ್ಷದಿಂದ ಹೊರಹಾಕುವ ನಾಡಪರ ಬದ್ಧತೆಯನ್ನಾದರೂ ತೋರಿಸಲಿ. ‘ಅದು ಚರ್ಚೆಯಾಗಲಿ ಎಂದು ಹೇಳಿದ ಹೇಳಿಕೆ’ ‘ಅದು ಅವರ ವೈಯುಕ್ತಿಕ ಹೇಳಿಕೆ’ ಎಂಬ ಬೂಟಾಟಿಕೆಯ ಮಾತುಗಳ ಪೊಳ್ಳು ಸಮರ್ಥನೆಗೆ ಭಾರತೀಯ ಜನತಾ ಪಕ್ಷ ಇಳಿಯದಿರಲಿ.

ನಾಡೊಂದನ್ನು ಒಡೆಯುವವರಿಗೇನು? ನಾಳೆ ಬಜೆಟ್ಟಲ್ಲಿ ಒಂದು ರೂಪಾಯಿ ಕಮ್ಮಿ ಎಂದೋ, ನ್ಯಾಯಾಲಯದಲ್ಲಿ ಕೃಷ್ಣಾ ನದಿನೀರಿಗೆ ಹೋರಾಟ ಸರಿಯಾಗಿ ಮಾಡಲಿಲ್ಲ ಎಂದೋ, ನೆರೆಬಂದಾಗ ನೆರವು ಸರಿಯಾಗಿ ನೀಡಲಿಲ್ಲವೆಂದೋ, ನಮ್ಮೂರ ರಸ್ತೆಗಳಲ್ಲಿ ಗುಂಡಿಗಳು ನಿಮ್ಮೂರಿಗಿಂತಾ ಹೆಚ್ಚು ಎಂದೋ... ನೆಪ ಹೇಳಿ ಜನರ ಮನಸ್ಸೊಡೆಯೋಕೆ ಮುಂದಾಗೋರು ಇದ್ದೇ ಇರುತ್ತಾರೆ... ಅದಕ್ಕೇ ಅಲ್ವಾ ಕಳ್ಳನಿಗೊಂದು ಪಿಳ್ಳೆ ನೆವಾ ಎನ್ನೋ ಗಾದೆ ಮಾಡಿರೋದು? 

ಕೊನೆಹನಿ: ದೊಡ್ಡರಾಜ್ಯಗಳನ್ನು ಆಳೋದು ಕಷ್ಟ. ಅದಕ್ಕೇ ಚಿಕ್ಕರಾಜ್ಯಗಳಾಗಿ ನಿಮ್ಮ ರಾಜ್ಯಾನ ಒಡೀತೀನಿ ಅನ್ನೋರಿಗೆ ಭಾರತವೂ ದೊಡ್ಡದು ಎಂಬ ಅರಿವಿದೆಯೇ?

2 ಅನಿಸಿಕೆಗಳು:

Anonymous ಅಂತಾರೆ...

ಕತ್ತಿಯವರು ಕತ್ತಿ ಬೀಸುವ ಮಾತನ್ನಷ್ಟೇ ಆಡಿದ್ದಾರೆ... ಇದು ಆಳುವ ಪಕ್ಷವನ್ನು ಹೆದರಿಸಲು ಇರಬಹುದು. ಆದರೆ ಆಳುವ ಪಕ್ಷದ ಮಂದಿ ಆಂಧ್ರದಲ್ಲಿ ಮಾಡಿಯೇ ತೋರಿಸಿದ್ದಾರಲ್ಲ!

ಆನಂದ್ ಅಂತಾರೆ...

ಹೌದೂ ಸಾರ್, ನಿಮ್ಮ ಮಾತು ನಿಜಾ... ಅದಕ್ಕೆ ಈ ಎಲ್ಲಾ ರಾಷ್ಟ್ರೀಯ ಪಕ್ಷಗಳನ್ನು ದೂರ ಇಡಬೇಕಾದ ಅನಿವಾರ್ಯತೆ ಕನ್ನಡಿಗರಿಗೆ ಇದೆ!

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails