ನಮ್ಮ ದುಡ್ಡಿಂದ ಕನ್ನಡದ ಬೆಳವಣಿಗೆಯಲ್ಲ, ಹಿಂದಿ ಪ್ರಚಾರ!

ನಮ್ಮ ರಾಜಕಾರಣಿಗಳಿಗೆ ಭಾರತದ ಒಕ್ಕೂಟ ವ್ಯವಸ್ಥೆ ಅಂದ್ರೆ ಏನು ಅಂತ ಎಷ್ಟು ಅರ್ಥ ಆಗಿದೆ ಅನ್ನೋದಕ್ಕೆ ಒಂದು ಉದಾಹರಣೆ ಇಲ್ಲಿದೆ ನೋಡಿ (ಇವತ್ತಿನ ವಿ.ಕ.):

ರಾಜ್ಯ ಹಿಂದಿ ಪ್ರಚಾರ ಸಮಿತಿಯ ೩೩ನೇ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ [ಡಿ.ಎಚ್. ಶಂಕರಮೂರ್ತಿ] ಭಾನುವಾರ ಮಾತನಾಡಿ, ಹಿಂದಿ ದೇಶದ ಸಂಪರ್ಕ ಭಾಷೆ, ಇದರ ಪ್ರಸಾರಕ್ಕೆ ಮಹತ್ವ ಕೊಡಬೇಕು ಎಂದರು.

ಹಿಂದಿ ದೇಶದ ಸಂಪರ್ಕ ಭಾಷೆ ಈಗಾಗಲೇ ಆಗಿದೆ ಅನ್ನೋದು ಎಷ್ಟು ನಿಜ? ಹಾಗಾಗಬೇಕು ಅನ್ನೋದಾದರೂ ಎಷ್ಟು ಸರಿ? ಕನ್ನಡನಾಡಿಗೂ ತಮಿಳುನಾಡಿಗೂ ಮಾತುಕತೆ ಹಿಂದಿಯಲ್ಲೇಕೆ ಆಗಬೇಕು? ಕನ್ನಡಕ್ಕೂ ಹಿಂದಿಗೂ ಯಾವುದೇ ನಂಟೂ ಇಲ್ಲ ಅಂತ ಇಡೀ ಜಗತ್ತೇ ಸಾರಿ ಸಾರಿ ಹೇಳುತ್ತಿರುವಾಗ ಇದ್ಯಾವ ಪೆದ್ದತನ? ಇದು ಒಂದು ಪ್ರಜಾಪ್ರಭುತ್ವಕ್ಕೆ ಸರಿಹೊಂದುತ್ತಾ? ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ನಾವು, ಪ್ರಭುಗಳು ಹಿಂದಿಯವರು ಎಂದರೆ ಹೇಗೆ? ಹಿಂದಿಯನ್ನು ರಾಜ್-ಭಾಷಾ ಎಂದು ಮೆರೆಸುವುದು ಸರಿಯೆ? ವಾದಕ್ಕಾಗಿ ಸಂಪರ್ಕಭಾಷೆ ಎಂದು ಒಪ್ಪಿಕೊಂಡರೂ ಹಿಂದಿಯ ಪ್ರಚಾರಕ್ಕಾಗಿ ಪ್ರತಿಯೊಂದು ಊರಿನಲ್ಲೂ "ಹಿಂದೀ ಪ್ರಚಾರ ಸಭಾ" ಯಾಕೆ ಬೇಕು? ಕೆಲವೇ ಕೆಲವು ತರ್ಜುಮೆಗಾರರಿಗೆ ಕಲಿಸಿದರೆ ಸಾಲದೆ?

ಶಂಕರಮೂರ್ತಿಗಳು ಕರ್ನಾಟಕದಲ್ಲಿ ಹಿಂದಿ ಪ್ರಚಾರಕ್ಕೆ ದುಡ್ಡು ಬೇರೆ ಕೊಡಿಸುತ್ತಾರಂತೆ!

ಹಿಂದಿ ಪ್ರಚಾರ ಸಮಿತಿ, ಎಷ್ಟು ಅನುದಾನ ಅಗತ್ಯವಿದೆ ಎಂಬ ಮಾಹಿತಿಯೊಡನೆ ಮನವಿ ಸಲ್ಲಿಸಬೇಕು. ನಿಶ್ಚಿತವಾಗಿಯೂ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ಅಬ್ಬಬ್ಬಬ್ಬಬ್ಬ! ಕನ್ನಡನಾಡಿನಲ್ಲಿ ಕನ್ನಡಿಗರು ಕಟ್ಟುವ ತೆರಿಗೆಯಿಂದ ಕನ್ನಡಿಗರಿಗೇ ಹಿಂದಿ ಪ್ರಚಾರ! ಅದ್ಭುತ ಕಣ್ರೀ! ಎರಡು ನಿಮಿಷ ರಾಜ್ಯಗಳ ನಡುವೆಯ ಮಾತುಕತೆಗೆ ಹಿಂದಿಯನ್ನು ಉಪಯೋಗಿಸುವುದು ಸರಿ ಅಂತ ಒಪ್ಪಿಕೊಂಡರೂ ಅದು ರಾಜ್ಯಸರ್ಕಾರದ ಜೇಬಿನಿಂದ ಯಾಕೆ ಹೋಗಬೇಕು? ಕನ್ನಡ ಸಾಹಿತ್ಯ ಪರಿಷತ್ತಿಗೆ ಹಣ ಕೊಡಕ್ಕೆ ಮೀನ-ಮೇಷ ಏಣಿಸೋ ಸರ್ಕಾರಕ್ಕೆ ಹಿಂದಿಗೆ ಎಲ್ಲಿಂದ ಹಣ ಬಂತು ಸ್ವಲ್ಪ ಕೇಳು ಗುರು!

ಇಷ್ಟು ಸಾಲದು ಅನ್ನೋ ಹಾಗೆ ಕೃಷ್ಣಯರ್ ಅನ್ನೋ ಒಬ್ಬ ಹಿಂದೀಭಕ್ತ ಅದೇ ಸಭೆಯಲ್ಲಿ ಹೇಳಿದ್ದು ನೋಡಿ:

ಸಂಸತ್ತಿನಲ್ಲಿ ಹಿಂದಿ ಮಾತಾಡದಿದ್ದಲ್ಲಿ ಇತರರಿಂದ ಪ್ರತಿಕ್ರಿಯೆ ಬರುವುದು ಕಷ್ಟ

ಅಲ್ಲ ಗುರು - ಯಾವ ಸಂಸತ್ತಿನಲ್ಲಿ ನಮ್ಮ ಭಾಷೆಯಲ್ಲಿ ಮಾತಾಡಿದರೆ ಪ್ರತಿಕ್ರಿಯೆ ಬರೋದು ಕಷ್ಟವೋ ಅದು ನಿಜವಾಗಲೂ ನಮ್ಮ ಸಂಸತ್ತಾ ಅನ್ನೋ ಸಂದೇಹವೇ ಬರಲ್ವಾ? ಅದೇ ಇವತ್ತಿನ ದಿನ ಕಟ್ಟುತ್ತಿರೋ ಯೂರೋಪು ಒಕ್ಕೂಟದಲ್ಲಿ ಒಕ್ಕೂಟದ ಸದಸ್ಯ ರಾಜ್ಯಗಳ ಭಾಷೆಗಳಿಗೆ ಯಾವ ಸ್ಥಾನ ಇದೆ ಅಂತ ಇಲ್ಲಿ ನೋಡಿ. ಇದನ್ನು ನೋಡಾದ್ರೂ ಭಾರತ ಕಲೀಬಾರದೆ? ಯೂರೋಪಿನವರಿಗೆ ಇಡೀ ಯೂರೋಪಿನಲ್ಲಿ ಫ್ರೆಂಚನ್ನೋ ಜರ್ಮನ್ನನ್ನೋ "ಸಂಪರ್ಕಭಾಷೆ" ಅಂತೇನಾದ್ರೂ ಅಂದ್ರೆ ರಾತ್ರೋರಾತ್ರಿ ಯೂರೋಪ್ ಒಡೆದು ಚಿಂದಿಯಾಗೋಗತ್ತೆ! ಇರಲಿ. ಈ ಭೂಪ ಶಂಕರಮೂರ್ತಿಗಳಿಗೆ "ನೀವು ಮುಂದೆ ಲೋಕಸಭೆಗೇನಾದರೂ ಹೋದರೆ ನಿಮಗೆ ಹಿಂದಿ ಬೇಕಾಗತ್ತೆ", ಅದ್ದರಿಂದ (ಮೂರ್ತಿಗಳಿಗೆ ಮಾತ್ರ ಅಲ್ಲ, ಇಡೀ ಕರ್ನಾಟಕದಲ್ಲಿ) ಹಿಂದಿ ಪ್ರಚಾರಕ್ಕೆ ಕಾಸು ಕೊಡಿ ಅಂದಂಗಿಲ್ವಾ?

ಅಲ್ಲೇ ಕೂತಿದ್ದ ಮುಂದಿನ ಮಹಾನುಭಾವ ಯಾರೋ ಸುಧಾಕರ್ ಚತುರ್ವೇದಿ ಅಂತೆ. ಈ ವಯ್ಯ ಹೇಳೋದು ನೋಡಿ:

[...]ಹಿಂದಿಯನ್ನು ವಿಶೇಷ ಸಂಪರ್ಕ ಕೊಂಡಿಯೆಂದು ಮಾನ್ಯ ಮಾಡಲಾಗಿದೆ. ಇದರಿಂದ ಪ್ರಾಂತೀಯ ಭಾಷೆಗಳ ಅಸ್ತಿತ್ವಕ್ಕೆ ಭಂಗ ಬರುವುದಿಲ್ಲ [...]

ಇವರಿಗೆ ಹಿಂದಿ ಬಿಟ್ಟು ಮಿಕ್ಕಿದ್ದೆಲ್ಲ "ಪ್ರಾಂತೀಯ ಭಾಷೆ" - ಬ್ರಿಟಿಷರು ಹೇಳಿದಂಗಿದೆ ಮಾತು! ಇವರಿಗೆ ಈ ಭಾಷೆಗಳು ಅಸ್ತಿತ್ವದಲ್ಲಿದ್ದರೆ ಸಾಕು. ಇವರಿಗೇನು ಗೊತ್ತು ಭಾಷೆಯ ಹಿರಿತನ? ಇವರಿಗೇನು ಗೊತ್ತು ಕನ್ನಡಿಗನ ಕನಸು? ಇವರಿಗೇನು ಗೊತ್ತು ಕನ್ನಡದಲ್ಲಿ ಇನ್ನೂ ಏನೇನು ಆಗಬೇಕು ಅಂತ? ಇವರಿಗೇನು ಗೊತ್ತು ಕನ್ನಡಿಗ ಕಾಣುತ್ತಿರುವ ಕನ್ನಡದಲ್ಲೇ ಉನ್ನತ ಶಿಕ್ಷಣದ ಕನಸು? ಇವರಿಗೆ ಕನ್ನಡದ ಅಸ್ತಿತ್ವ ಒಂದೇ ಸಾಕು. ಆದರೆ ಅಸ್ತಿತ್ವ ಏನು ಬಿಟ್ಟಿ ಬರಲ್ಲ - ಆ ಅಸ್ತಿತ್ವಕ್ಕೂ ಮಚ್ಚಿನ ಏಟು ಬೀಳ್ತಿದೆ - ಯಾಕೆ ಅಂದರೆ ಈ ಉಪಯೋಗವಿಲ್ಲದ ಹಿಂದಿ ಪ್ರಚಾರಕ್ಕೆ ಹಾಕೋ ದುಡ್ಡನ್ನ ಕನ್ನಡದ ಪ್ರಚಾರಕ್ಕೆ ಹಾಕಬಹುದು. ಕನ್ನಡದಲ್ಲಿ ಆಗಬೇಕಾದ್ದು ಬಹಳ ಇದೆ.

ಹೋಗಲಿ. ಕರ್ನಾಟಕದ ಉನ್ನತಶಿಕ್ಷಣ ಸಚಿವರಿಗೆ ನಾವು ಸಂಬಳ ಕೊಡೋದು ಯಾಕೆ? ಕನ್ನಡಿಗರ ಉನ್ನತ ಶಿಕ್ಷಣಕ್ಕಾಗಿ ನಾಡಿನಲ್ಲಿ ಯಾವಯಾವ ಏರ್ಪಾಟಿರಬೇಕು? ಕನ್ನಡದಲ್ಲೇ ಉನ್ನತಶಿಕ್ಷಣ ಸಿಗಬೇಕಾದರೆ ಏನು ಮಾಡಬೇಕು? ಉನ್ನತಶಿಕ್ಷಣದ ಮೂಲಕ "ಮೇಲುಗರಲ್ಲಿ ಮೊದಲ್" ಅನ್ನೋ ಬಿರುದನ್ನ ಕನ್ನಡಿಗರು ಪಡೆಯಬೇಕು ಅನ್ನೋ ನಮ್ಮ ಕನಸನ್ನ ಆಗುಮಾಡಿಸಲಿ ಅಂತ ತಾನೆ? ಅದನ್ನು ಬಿಟ್ಟು ನಮ್ಮ ಡಿ.ಎಚ್. ಶಂಕರಮೂರ್ತಿಗಳಿಗೆ ಹಿಂದಿ ಪ್ರಚಾರಕ್ಕೆ ಸಹಾಯ ಮಾಡಬೇಕು ಅಂತ ಹೇಳಿದೋರು ಯಾರು? ಉನ್ನತಶಿಕ್ಷಣ ಮಂತ್ರಿಗೂ ಹಿಂದಿ ಪ್ರಚಾರಕ್ಕೂ ಎತ್ತಣಿಂದೆತ್ತಣ ನಂಟಯ್ಯ?

8 ಅನಿಸಿಕೆಗಳು:

Anonymous ಅಂತಾರೆ...

ನಿಮ್ಮ ವಿಚಾರಧಾರೆ ಸರಿಯಾಗಿದೆ. “ಹಿಂದಿಯಿಂದ ಪ್ರಾಂತೀಯ ಭಾಷೆಗಳಿಗೆ ತೊಂದರೆಯಿಲ್ಲ” ಎಂಬುದು ಪೊಳ್ಳು ಮಾತು. ಈಗಾಗಲೇ ಭಾರತದ ಅನೇಕ ರಾಜ್ಯಗಳು ತಮ್ಮ ಮೂಲಭಾಷೆಯನ್ನು ಕಳೆದುಕೊಂಡು ಹಿಂದಿಯ ದಾಸರಾಗಿವೆ. ಆ ರಾಜ್ಯಗಳಲ್ಲಿ ಹಿಂದಿ ಅಲ್ಲದ ಬೇರೊಂದು ಭಾಷೆ ತಮ್ಮ ಮಾತೃ ಭಾಷೆಯಾಗಿತ್ತು ಎಂಬ ವಿಚಾರವನ್ನೂ ಅಲ್ಲಿನ ಜನ ಮರೆತು ಹೋಗಿದ್ದಾರೆ! ನಮ್ಮಲ್ಲೂ ಈಗಾಗಲೇ ಸಮೂಹ ಮಾಧ್ಯಮಗಳಲ್ಲಿ ಹಿಂದಿಯ ಅನಗತ್ಯ ಬಳಕೆ ಕಾಣುತ್ತಿದ್ದೇವೆ.

ಅಂದಹಾಗೆ ಈ ಲೇಖನದಲ್ಲಿ ‘ಇವನಿಗೆ’, ‘ಇವನಿಗೇನು ಗೊತ್ತು’ ಮುಂತಾದ ಏಕವಚನ ಪ್ರಯೋಗಗಳು ಸರಿಕಾಣಲಿಲ್ಲ. ಸ್ವಲ್ಪ ಭಾಷೆಯ ಕಡೆಗೆ ಗಮನ ಇರಲಿ.

Anonymous ಅಂತಾರೆ...

ರಾಜಕಾರ್ಣಿಗಳ ಮಾತ್ನ ಗಂಭೀರವಾಗಿ ತಗೋಬೇಡ ಗುರು. ಅವ್ರೆಲ್ಲಾ ಆಯಾ ಸಂದರ್ಭಕ್ಕೆ, ಸಭೆಗೆ ಬೇಕಾದಂಗೆ ಮಾತಾಡ್ತಾರೆ. ಅವೆಲ್ಲಾ ಆವತ್ತು ಕೇಳಿ ಆವತ್ತೇ ಮರೀಬೇಕಾದ ಮಾತ್ಗಳು.

ಬನವಾಸಿ ಬಳಗ ಅಂತಾರೆ...

ರಾಮೇಗೌಡರೆ, ಬಹುವಚನಕ್ಕೆ ಬದಲಾಯಿಸಿದೆ. ಸಲಹೆಗೆ ನನ್ನಿ. ಹೀಗೇ ಏನ್ ಗುರು ಬ್ಲಾಗಿನ ಗುಣಮಟ್ಟವನ್ನು ಕಾಪಾಡಲು ಮುಂದೆಯೂ ಮುಂಬರುತ್ತೀರಿ ಎಂದುಕೊಂಡಿರುತ್ತೇನೆ.

Anonymous ಅಂತಾರೆ...

hindi namma raashtra baashe emba pollu-sullu chaltiyallide

A: Assaami
B: Bengali hego
H: Hindi ashte.

adakke visista stana kalpisi etti hidiyuva karya ellede nadeyuttide.

dehaliyalli kannada kalike prarambavagali. adu saha rashtriya baviktyatene. nantara navu namma janakke hindi kalisona

Anonymous ಅಂತಾರೆ...

ನೋಡೀಪ್ಪ, ಹಿಂಗೆ ಹೇಳ್ತೀನಿ ಅಂತ ಬೇಸರಪಟ್ಟುಕೋ ಬೇಡಿ.

ಈ ಹಿಂದಿಯವರಿಗೆ ನಾವು ಒಂದು soft target. ಇವರು ತಮಿಳುನಾಡು, ಬಂಗಾಳ, ಅಸ್ಸಾಮು ಇಲ್ಲೆಲ್ಲ ಬಾಲಬಿಚ್ಚೊಲ್ಲರು. ಅಲ್ಲಿ ಮಂದಿ, ಏನಾದರು ಹೆಚ್ಚುಕಡಮಿ ಆಡಿದ್ರ ಸರಿಯಾಗಿ ಬೆಂಡ್ ಎತ್ತಾರೆ.

ತಮಿಳನಾಡ್ನಾಗೆ ಹಿಂದಿ ಬೋರ್ಡು ಹಾಕೋ ಹಂಗಿಲ್ಲ. ಅಲ್ಲಿ ಮಂದಿ ಬಿಡೊಲ್ಲರು.

ಇನ್ನು ಈ ಶಂಕರಮೂರ್ತಿಯೋರ್ಗೆ ಇವೆಲ್ಲ ಗೊತ್ತಿದೆಯೋ ಇಲ್ವೋ? ಎಷ್ಟೇ ಆದರು ಇವರು ಭಾಜಪದಂತಹ ದಿಲ್ಲಿಯಿಂದ ಆಳುವ ಪಕ್ಷದೋರು.

ನಮಗೆ DMK/AIADMK ಅಂತ ಪಕ್ಷ ತುರ್ತಾಗಿ ಬೇಕು. ಅವರು ಸರಿ ನೋಡಿ, ಈ ಹಿಂದಿ-ಮಂದೀನ ಹತೋಟಿ ಮಾಡಕ್ಕೆ.

ನೋಡೋಣು, ಏನಾಗ್ತೈತಿ ಅಂತ.!!

ಬನವಾಸಿ ಬಳಗಕ್ಕೆ ತಮ್ಮದೇ ಒಂದು ವೆಬ್-ಸೈಟ್ ತೆರೀರಿ.!!

ವಸಂತ ಅಂತಾರೆ...

ನಿನ್ನೆ ದಿನ ವಿ.ಕ ಪತ್ರಿಕೆಯಲ್ಲಿ ಆ ವರದಿ ನೋಡಿದ ತಕ್ಷಣವೇ ಬನವಾಸಿ ಬಳಗದ ಬ್ಲಾಗಲ್ಲಿ ಇ ಬಗ್ಗೆ ಬಂದೆ ಬರುತ್ತೆ ಅಂತ,ನನ್ನ ನೀರೀಕ್ಷೆ ಸುಳ್ಳಾಗಲಿಲ್ಲ. ರಾಜ್ಯದ ಗಡಿ ಭಾಗದಲ್ಲಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಯಾವ ಮೂಲಭೂತ ಸೌಲಭ್ಯಗಳು ಇಲ್ಲದೆ ಅಲ್ಲಿನ ಜನ ಗಡಿಯಾಚೆಗಿನ ಊರಿನ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸುತ್ತಿದ್ದಾರೆ. ನಮ್ಮ ನಾಡಿನ ರಾಜಕೀಯ ನೇತಾರರು ಮೊದಲು ಇ ದನ್ನು ಸರಿ ಪಡಿಸಿ ಬೇಲಿ ಬಿಗಿಪಡಿಸುವ ಬಗ್ಗೆ ಗಮನ ಹರಿಸಲಿ.

Karuna ಅಂತಾರೆ...

hoTTege hiTTu illa andru juTTige mallige hoovu annO haage aithu namma raajakaaraNigaLa kate.

oLLe vishlEShaNe. ...
heege blog nalli elladara nijavaada swaroopa bayalaagali

Anonymous ಅಂತಾರೆ...

taleketta raajakaarnigaLige yaavaaga budhi barutto..karnatakakke ondu praadeshika paksha beku kanri..

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails