ಹಳಿ ತಪ್ಪದಿರಲಿ ಒಕ್ಕೂಟ ವ್ಯವಸ್ಥೆ

ಹುಬ್ಬಳ್ಳಿ, ಮೈಸೂರು ಮತ್ತೆ ಬೆಂಗಳೂರಿನಲ್ಲಿ ನೈರುತ್ಯ ರೈಲು ವಿಭಾಗದಲ್ಲಿ ಖಾಲಿ ಇದ್ದ ಡಿ-ವರ್ಗದ ಹುದ್ದೆಗಳಲ್ಲಿ ಸಿಂಹಪಾಲು ಬಿಹಾರಿಗಳಿಗೇ ಸಿಗ್ಬೇಕು ಅಂತ, ಕೇಂದ್ರ ಸರ್ಕಾರದ ರೈಲ್ವೇ ಇಲಾಖೆಯೋರು ನಡೆಸಿರುವ ಹುನ್ನಾರದ ಬಗ್ಗೆ ಜನವರಿ ಐದರ ಕನ್ನಡಪ್ರಭದಲ್ಲಿ ವರದಿಯಾಗಿದೆ.
ಇತ್ತೀಚಿನ ಸುಮಾರು ತಿಂಗಳುಗಳಲ್ಲಿ ಇದು ಅದೆಷ್ಟನೇ ಬಾರಿ ಕನ್ನಡಿಗನಿಗೆ ರೈಲಿನ ವಿಚಾರದಲ್ಲಿ ಟೋಪಿ ಹಾಕಲಾಗಿದೆ ಅನ್ನೋದು ಎಣಿಕೆ ಮೀರಿ ಹೋಗಿದೆ.

ಏಳಿಗೆ ಆಗೋದು ಉದ್ಯೋಗ ಹುಟ್ಟಿದಾಗಷ್ಟೆ
ಯಾವುದೇ ಒಂದು ಪ್ರದೇಶದ ಜನರ ಏಳಿಗೆ ಆಗೋದೆ ಅಲ್ಲಿನ ನಿರುದ್ಯೋಗ ಸಮಸ್ಯೆ ಕಡಿಮೆ ಆಗೋದ್ರಿಂದ. ಅಲ್ಲಿನ ಜನ ದುಡಿಮೆ ಮಾಡಲು ತೊಡಗಿದಾಗ. ಇಂಥ ಏಳಿಗೆಗೆ ಸಾಧನವಾಗೇ ಪ್ರತಿ ಪ್ರದೇಶದಲ್ಲೂ ಉದ್ದಿಮೆಗಳು ಆರಂಭವಾಗಲಿ ಅಂತ ಆಯಾ ಸರ್ಕಾರಗಳು ಬಯಸೋದು. ಉದ್ಯೋಗ ಸೃಷ್ಟಿ ಆಗುತ್ತೆ ಅನ್ನೋ ಕಾರಣಕ್ಕೇ ಉದ್ದಿಮೆಗಾರಿಕೆಗೆ ಉತ್ತೇಜನ ಕೊಡೋದು.

ರೈಲ್ವೇಯಲ್ಲಿ ಇದೇನಾಗ್ತಿದೆ?
ನೈರುತ್ಯ ರೈಲ್ವೇ ವಲಯದಲ್ಲಿ ಇರೋ ಕೆಲಸಕ್ಕೆ ಅರ್ಜಿ ಸಲ್ಲಿಸುವಾಗಲೇ ಹಿಂದಿ ಕಲಿತಿರಬೇಕಾದ ಕಟ್ಟಳೆಯನ್ನು ವಿಧಿಸಲಾಯಿತು. ಅಂದರೆ ಯಾವ ಹುದ್ದೆಗೆ ಎಂಟನೆ ತರಗತಿ ಮಟ್ಟದ ವಿದ್ಯಾರ್ಹತೆ ಬೇಕೋ ಅದಕ್ಕೆ ನಮ್ಮದಲ್ಲದ ಹಿಂದಿ ಭಾಷೆಯಲ್ಲಿ ಅರ್ಜಿ ಬರೆಯಬೇಕಾದಷ್ಟು ಅರಿವು ಇರಲೇಬೇಕು. ಕೆಲ್ಸ ಸಿಗ್ಬೇಕು ಅಂದ್ರೆ ಹಿಂದಿ ಭಾಷೆ ತಿಳ್ದಿರ್ಬೇಕು ಅನ್ನೋ ಭೂತದ ಭಯ ಕಾಡ್ತಿದ್ದಾಗ ಅಭ್ಯರ್ಥಿಗಳಲ್ಲಿ ಕನ್ನಡಿಗರು ಶೇಕಡ 5.4ರಷ್ಟೇ ಇರೋದು ಆಶ್ಚರ್ಯವೇನು ಅಲ್ಲ. ನೇರವಾಗಿ ಇದು ಕೊಡ್ತಿರೋ ಸಂದೇಶವಾದರೂ ಏನು? ಕರ್ನಾಟಕದಲ್ಲಿ ನಿಮಗೆ ಬರಿ ಕನ್ನಡ ಗೊತ್ತಿದ್ದರೆ ಕೆಲಸ ಸಿಗಲ್ಲ. ನಿಮ್ಮ ಇಡೀ ಬದುಕಿನಲ್ಲಿ ಒಮ್ಮೆಯೂ, ಒಂದಾದರೂ ಹಿಂದಿ ಭಾಷಿಕ ಪ್ರದೇಶವನ್ನು ನೋಡಿರದಿದ್ದರೂ, ನೋಡುವ ಆಸೆಯೇ ಇಲ್ಲದಿದ್ದರೂ, ನಮ್ಮ ನಾಡಲ್ಲೇ ಬದುಕ ಬೇಕೆಂದರೂ ಹಿಂದಿಯನ್ನು ಕಲಿತಿರಬೇಕು. ಇದು ನಿಜಕ್ಕೂ ಒಕ್ಕೂಟ ವ್ಯವಸ್ಥೆಯ ಘೋರ ವಿಡಂಬನೆ.

ಭಾರತೀಯರೆಲ್ಲ ಒಂದೇ... ಆದರೆ..
ಬಿಹಾರಿಯೂ ಭಾರತೀಯಾನೆ ಕಣ್ರಿ ಅನ್ನೋ ಜನರು ಅರ್ಥ ಮಾಡ್ಕೊಬೇಕಾದದ್ದು ಏನಂದರೆ ಬಿಹಾರದಲ್ಲಿ ಬಿಹಾರಿ ಉಳಿದವರಿಗಿಂತ ಹೆಚ್ಚು ಭಾರತೀಯ. ಅಂತೆಯೇ ಕರ್ನಾಟಕದಲ್ಲಿ ಕನ್ನಡಿಗ. ಕನ್ನಡ ನಾಡಿನ ನೆಲ, ಜಲ, ಸಂಪನ್ಮೂಲ, ಉದ್ದಿಮೆಗಳು, ಉದ್ಯೋಗಗಳು, ವ್ಯವಸ್ಥೆಗಳು... ಇರೋದೆ ಕನ್ನಡಿಗರ ಏಳಿಗೆಗಾಗಿ ಮತ್ತು ಸೌಕರ್ಯಕ್ಕಾಗಿ. ಇದನ್ನು ಬಲಿಕೊಟ್ಟು ಭಾರತೀಯತೆ ಹೆಸರಲ್ಲಿ ಇಂತಹ ತ್ಯಾಗವನ್ನು ಕನ್ನಡಿಗರಿಂದ ನಿರೀಕ್ಷೆ ಮಾಡೋದು ಎಂಥಾ ಭಾರತೀಯತೆ ಗುರು?

ಹಳಿ ತಪ್ಪದಿರಲಿ ಒಕ್ಕೂಟ ವ್ಯವಸ್ಥೆ
ಇಡಿಯ ಭಾರತದಲ್ಲಿನ ವ್ಯವಸ್ಥೆಗಳು ಬಹುಸಂಖ್ಯೆಯ ನೆಪದಲ್ಲಿ ಹಿಂದಿ ಭಾಷಿಕರಿಗೆ ಅನುಕೂಲ ಮಾಡಿಕೊಡುವಂತೆ ರೂಪಿತವಾಗಿರುವುದು ಹೆಜ್ಜೆ ಹೆಜ್ಜೆಗೂ ಗೋಚರವಾಗುತ್ತಿದೆ. ಇಲ್ಲಿನ ಸರ್ಕಾರದ ಏಕೈಕ ಭಾರತೀಯ ಆಡಳಿತ ಭಾಷೆ ಹಿಂದಿ. ಭಾರತದ ಯಾವುದೇ ಮೂಲೆಯ ಕೇಂದ್ರ ಸರ್ಕಾರಿ ಕಛೇರಿಯಲ್ಲೂ ಹಿಂದಿಯಲ್ಲಿನ ಸೇವೆಯನ್ನು ನಿರಾಕರಿಸುವುಂತಿಲ್ಲ ಎನ್ನುವ ಆಡಳಿತ ಭಾಷಾ ಕಾನೂನು, ಕೇಂದ್ರ ಸರ್ಕಾರಿ ಕೆಲಸಗಳು ಬೇಕೆಂದರೆ ಹಿಂದಿ ಕಲಿತರಬೇಕು ಎನ್ನುವ ಕಟ್ಟಳೆಗಳು... ಒಂದೇ ಎರಡೇ? ಪ್ರಜಾಪ್ರಭುತ್ವ, ಸ್ವಾತಂತ್ರ ಇವುಗಳ ನಿಜವಾದ ಅರ್ಥವನ್ನೇ ಮರೆ ಮಾಚುತ್ತಿರುವ ಭಾರತದ ಈ ವ್ಯವಸ್ಥೆಗಳು ಆತಂಕಕ್ಕೆ ಕಾರಣವಾಗಿದೆ. ಭಾರತದ ಒಕ್ಕೂಟ ವ್ಯವಸ್ಥೆ ಹಳಿ ತಪ್ಪದಿರಲಿ.

ಒಕ್ಕೂಟ ವ್ಯವಸ್ಥೆ ಕನ್ನಡಿಗರ ಬದುಕನ್ನು ಹಸನು ಮಾಡಬೇಕೇ ಹೊರತು ಬರಿ ಬಲಿದಾನವನ್ನೇ ಬಯಸಬಾರದು.

6 ಅನಿಸಿಕೆಗಳು:

Anonymous ಅಂತಾರೆ...

ಹುಬ್ಬಳ್ಳಿಯನ್ನು ಕೇಂದ್ರವಾಗಿಸಿಕೊಂಡು, ಕರ್ನಾಟಕದ ಮುಖ್ಯ ರೈಲ್ವೇ ನಿಲ್ದಾಣಗಳನ್ನು ಒಳಗೊಂಡಂತೆ ಕಾರ್ಯನಿರ್ವಹಿಸುತ್ತಿರುವ 'ನೈರುತ್ಯ ರೈಲ್ವೇ ವಲಯ' ದಲ್ಲಿ ಭರ್ತಿ ಮಾಡಬೇಕಾಗಿರುವ ಡಿ ಗುಂಪಿನ ಸಾಮಾನ್ಯ ಕೆಲಸಗಳಿಗೂ ಸಹ, ಪರ ರಾಜ್ಯಗಳಿಂದ ಅಭ್ಯರ್ಥಿಗಳನ್ನು ನೇಮಕ ಮಾಡುವ ಪ್ರಕ್ರಿಯೆಯೊಂದು ನೆನ್ನೆ ಬೆಂಗಳೂರು-ಮೈಸೂರು-ಹುಬ್ಬಳ್ಳಿಗಳಲ್ಲಿ ಆರಂಭಗೊಂಡಾಗ, ಈ ಕೆಲಸಗಳು ಕನ್ನಡಿಗನಿಗೆ ಆಧ್ಯತೆಯ ಮೇಲೆ ದೊರಕಬೇಕು ಎಂಬ ಆಗ್ರಹದೊಂದಿಗೆ ಅಲ್ಲಿ ಪ್ರತಿಭಟನೆಗಿಳಿದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಈ ಅನೈತಿಕ ಆಯ್ಕೆ ಪ್ರಕ್ರಿಯೆಯನ್ನು ತಡೆ ಹಿಡಿಯುವಲ್ಲಿ ಯಶಸ್ವಿಯಾಗಿರುವುದು ಒಂದೆಡೆ ಸಂತಸ ತರುವ ಸಂಗತಿಯಾದರೂ, ಕನ್ನಡಿಗನ ಸ್ವಾಭಿಮಾನವನ್ನು ಕೆಣಕಿ ಆಕ್ರೋಷಕ್ಕೊಳಪಡಿಸುವ ಮತ್ತು ಮಣ್ಣಿನ ಮಕ್ಕಳ ಹಿತಕ್ಕೆ ಮಾರಕವಾಗುವ, ಇಂತಹ ಸನ್ನಿವೇಶಗಳಿಗೆ ಅವಕಾಶ-ಕುಮ್ಮಕ್ಕು ನೀಡುತ್ತಿರುವ ನಮ್ಮದೇ ರೈಲ್ವೇ ಮಂಡಳಿ, ಅಲ್ಲಿನ ಅಧಿಕಾರಿಗಳು, ಆಡಳಿತ ವ್ಯವಸ್ಥೆ ನೇರವಾಗಿ ಇದರಲ್ಲಿ ಶಾಮೀಲಾಗಿರುವುದು ವಿಷಾದಕರವಾಗಿದೆ.

ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವವರು ಕೇವಲ ಇಂಗ್ಲೀಷ್ ಅಥವ ಹಿಂದಿಯಲ್ಲಿ ಮಾತ್ರ ಭರ್ತಿ ಮಾಡಬೇಕು ಎಂದು, ನೈರುತ್ಯ ರೈಲ್ವೇ ಅಂದು ಹೊರಡಿಸಿದ್ದ ಆದೇಶವನ್ನು ಸಹ ನಾವು ಈ ಸಮಯದಲ್ಲಿ ಗಮನಿಸಬೇಕಿದೆ. ಪರೋಕ್ಷವಾಗಿ ಈ ಹುದ್ದೆಗಳಿಂದ ಕನ್ನಡಿಗನನ್ನು ಅನರ್ಹಗೊಳಿಸುವ ಷಡ್ಯಂತ್ರಗಳಲ್ಲಿ ಇದು ಸಹ ಒಂದಾಗಿದೆ. ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಕಡೆಗಣಿಸಲ್ಪಟ್ಟವನನಾಗಿ ತನ್ನ ನೆಲದಲ್ಲೇ ಕನ್ನಡಿಗ ನೆಲೆ ಕಳೆದುಕಂಡು ಗುಲಾಮನಾಗಿ ಬಿಡುವ ಪರಿಗೆ ಚಾಲನೆ ದೊರೆತಂತಿದೆ.

ಕರ್ನಾಟಕದಲ್ಲಿ ರೂಪುಗೊಳ್ಳುವ ಯಾವುದೇ ಉದ್ಯಮದಲ್ಲಿ ಕನ್ನಡಿಗನಿಗೆ ಉದ್ಯೋಗ ಮೀಸಲಾಗಿ ದೊರಕಬೇಕಾದದ್ದು ಈ ಮಣ್ಣಿನ ಮಗನಾದವನ ಹಕ್ಕು. ವ್ಯವಸ್ಥೆ ಮೂಲಕ ಈ ಉದ್ಯೋಗಗಳು ಕನ್ನಡಿಗನಿಗೆ ದೊರಕಿಸುವಲ್ಲಿ, ಇದು ಆ ಉದ್ದಿಮೆದಾರರ ಹೊಣೆಗಾರಿಕೆ ಸಹ ಎಂಬ ಜವಾಬ್ದಾರಿಯ ಅರಿವು ಅವರಲ್ಲಿ ಬಿತ್ತುವಲ್ಲಿ, ಅನಿಯಂತ್ರಿತ ವಲಸೆ ತಡೆಹಿಡಿದು ಪರಿಸ್ಥಿತಿ ಸುಧಾರಿಸುವಲ್ಲಿ, ಈವರೆಗೂ ನಮ್ಮನ್ನು ಆಳಿದವರು ವಿಫಲರಾಗಿದ್ದಾರೆ. ಈ ನಾಡಿನ ಹಿತಕಾಯುವ ಕಾಯಕವೇ ಇಲ್ಲಿ ಅಧಿಕಾರ ವಹಿಸಿಕೊಂಡು ಆಡಳಿತ ನಡೆಸುವವರ ಆಧ್ಯ ಕರ್ತವ್ಯ ಎಂದು ಮನಗಾಣದೆ, ಸುಭದ್ರ-ಸಮೃದ್ಧ ಕನ್ನಡ ನಾಡು ಕಟ್ಟುವೆಡೆ ಗಮನ ಹರಿಸದೆ, ಕೇಂದ್ರದದವರ ಅಡಿಯಾಳು, ಆಡಿಸಿಕೊಳ್ಳುವ ಗೊಂಬೆಗಳಾಗಿ, ಪೊಳ್ಳು ರಾಷ್ಟ್ರೀಯತೆಯ ಸೋಗಿನಲ್ಲಿ ಮುಳುಗಿ ಹೋಗಿ, ತಮ್ಮತನ ಮತ್ತು ಬದ್ಧತೆಯನ್ನು ಮರೆತು ಸಮಗ್ರ, ಕನ್ನಡ-ಕನ್ನಡಿಗ-ಕರ್ನಾಟಕ ದ ಅಭಿವೃದ್ಧಿ ಯನ್ನು ನಿರ್ಲಕ್ಷಿಸಿರುವುದು ಕಂಡುಬರುತ್ತದೆ.

ಕನ್ನಡಿಗರಿಗಾಗಿ, ಕನ್ನಡಕ್ಕೋಸ್ಕರ, ಕನ್ನಡಿಗರದೇ ಆದ ಎಡ-ಬಲ-ಮೇಲೆ-ಕೆಳಗೆ-ಮಧ್ಯದ[ಮದ್ಯ ಸಹ] ಹಂಗಿಲ್ಲದ ಕೇವಲ ಕನ್ನಡತ್ವದ ಸಿದ್ದಾಂತ ಪ್ರತಿಪಾದಿಸುವ ಪಡೆ ನಮ್ಮ ಆಡಳಿತ ಚುಕ್ಕಾಣಿ ಹಿಡಿಯುವ ಅವಶ್ಯಕತೆ ಇಂದು ಹೆಚ್ಚಾಗಿದೆ. ಸಧ್ಯಕ್ಕೆ ಕನ್ನಡದ ಎಲ್ಲಾ ಸಮಸ್ಯೆಗಳಿಗೆ ಹೆಗಲು ಕೊಟ್ಟು, ಎಲ್ಲೆಡೆ ಜನಾಂದೋಲನ ಮೂಡಿಸುವಲ್ಲಿ ಸಫಲರಾಗಿ, ಕನ್ನಡಿಗರ ಆಶಾಕಿರಣವಾಗಿ ಬೇರೂರುತ್ತಿರುವ ಕ.ರ.ವೇ. ಈ ನಾಡಿನ ದೊಡ್ಡ ರಾಜಕೀಯ ಶಕ್ತಿಯಾಗಿ ಬೆಳಗುವಲ್ಲಿ ಸಹ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳಬೇಕಿದೆ. ಕನ್ನಡ ನಾಡು-ನುಡಿ ಪರವಾದ ಇಂತಹ ಪ್ರಾಮಾಣಿಕ ಯುವ ಸಂಘಟನೆಯನ್ನು ಬೆಂಬಲ ಕೊಟ್ಟು ಬೆಳೆಸುವತ್ತ ಇಡೀ ಕನ್ನಡ ಸಮುದಾಯ ಕಂಕಣ ತೊಡಬೇಕಿದೆ.

Unknown ಅಂತಾರೆ...

ನಾನು ಈಗಾಗಲೆ ಬಹಳಷ್ಟು ಬಾರಿ ಈ ಬ್ಲಾಗ್‌ನಲ್ಲಿ ಹೇಳಿದ್ದೇನೆ. ಈಗಲೂ ಹೇಳುತ್ತಿದ್ದೇನೆ. ನಾವು ಪ್ರತ್ಯೇಕ ರಾಷ್ಟ್ರವನ್ನು ಡಿಮ್ಯಾಂಡ್ ಮಾಡಬೇಕು. ಈ ಶೋಷಣೆ ನಿಲ್ಲುವುದಿಲ್ಲ. ಇದೊಂದು ರೀತಿ ರಕ್ತ ಬೀಜಾಸುರನ ಸಂತತಿ ಯ ಹಾಗೆ. ಒಂದನ್ನು ಹೊರಡಲು ಹೋದಾಗ ನೂರೆಂಟು ತಲೆ ಎತ್ತುತ್ತದೆ.

ನಾಳೆ ಕರ್ನಾಟಕದಲ್ಲೇ ಬೇರೆ ಯಾವುದೋ ರಾಜ್ಯದವನ ಮನೆ ವಾಚ್‌ಮನ್ ಆಗಿಯೋ ಇಲ್ಲ ಮನೆ ಕೆಲಸದಾವಳಾಗಿಯೋ ಅಥವಾ ಅದಕ್ಕಿಂತ ಕೀಳಾದ ವೃತ್ತಿಗೋ ಇಳಿಯುವಂತೆ (ಜೀವನೋಪಾಯಕ್ಕೆ ಬೇರೆ ದಾರಿ ಇಲ್ಲದೇ) ಆಗುವ ಮೊದಲು ಎಚೆತ್ತುಕೊಳ್ಳಬೇಕು.

Deshpande N.R. ಅಂತಾರೆ...

ಇದು ಕೇವಲ ರೈಲ್ವೆ ಇಲಾಖೆಯಲ್ಲಿರುವ ಪಿಡುಗು ಮಾತ್ರವಲ್ಲ. ಇಂತಹ ಕೃತ್ಯಗಳು ಕರ್ನಾಟಕದ ಕಸ್ಟಮ್ಸ, ಸೆಂಟ್ರಲ್ ಎಕ್ಸೈಸ್, ಸರ್ವೀಸ್ ಟ್ಯಾಕ್ಸ್ ಸಂಸ್ಥೆಗಳಲ್ಲಿ ಸುಮಾರು ವರ್ಷಗಳಿಂದ ನಡೆದುಕೊಂಡೇ ಬಂದಿದೆ. ಇಲ್ಲಿ ಕನ್ನಡಿಗರು ತೀರ ಅಲ್ಪ ಸಂಖ್ಯಾತರು. ರಾಜಧಾನಿ ಬೆಂಗಳೂರಿನಲ್ಲಂತೂ ತಮಿಳರು, ತೆಲುಗರು, ಮಲಯಾಳಿಗಳ ಹಾವಳಿ ಮುಗಿಲು ಮುಟ್ಟಿದೆ. ಕಳೆದ ವರ್ಷದಿಂದ ಬಿಹಾರಿಗಳು, ಮರಾಠಿಗರೂ ಬಂದು ಸೇರಿದ್ದಾರೆ. ಇದೇ ಜನ ಕರ್ನಾಟಕದ ಬೇರೆ ಭಾಗಗಳಿಂದ ಬರುವ ಕನ್ನಡಿಗರನ್ನು ಆಡಳಿತದವರ ಜೊತೆಗೆ ಸೇರಿಕೊಂಡು ಬೆಂಗಳೂರಿಗೆ ಬರಲಾರದಂತೆ ತಡೆಯುತ್ತಾರೆ. ಇದನ್ನೂ ಮೀರಿ ಯಾರಾದರೂ ಕನ್ನಡಿಗರು ಬೆಂಗಳೂರಿಗೆ ಬಂದರೆ ಈ ಜನಕ್ಕೆ ಹೆದರಿಕೊಂಡು ತಾವು ಕನ್ನಡಿಗರು ಎನ್ನುವದನ್ನು ಹೇಳಿಕೊಳ್ಳುವುದನ್ನು ಬಿಟ್ಟು ಅವರವರ ಭಾಷೆಯಲ್ಲೇ ಅವರನ್ನು ಸಂಬೋಧಿಸುತ್ತಾರೆ. ಇದರಲ್ಲಿ ಇಲ್ಲಿರುವ ಮೇಲಧಿಕಾರಿಗಳ ಕುಮ್ಮಕ್ಕೂ ಸೇರಿದೆ ಯಾಕೆಂದರೆ ಈ ಅಧಿಕಾರಿಗಳಲ್ಲಿ ಒಬ್ಬರೂ ಕನ್ನಡಿಗರು ಸಿಗುವದಿಲ್ಲ. ಹೀಗಾಗಿ ತಮಿಳು ಅಧಿಕಾರಿಯು ತಮಿಳರನ್ನೇ, ತೆಲುಗು ಅಧಿಕಾರಿ ತೆಲಗರನ್ನೇ ಪೋಷಿಸಿ ಕನ್ನಡಿಗರು ಮೂಲೆಗುಂಪಾಗಿದ್ದಾರೆ.

Rohith B R ಅಂತಾರೆ...

bhaskar,
nimma mAtina sariyAda artha Enu aMta swalpa biDisi hELtIra? nIvu karnATaka annOdanna bEre dEsha AgbEku aMta kELtideeraa? athava innEnAdru bEre na?

Unknown ಅಂತಾರೆ...

sumsumke avare,

naanu heluthiruvudu bharathavannu European Union madariyalli punarvingadisabeku. ella rajyagaligu defence mathu foreigh relations bittu ulida ella vishayagalallu sampoorna swayuthate needabeku (citizenship olagondante)aaga namma bhavishyavannu naave roopisikollabeku. eega naveshte kiruchidaru 81 MPs iruva Utharapradesha, 40Mps iruva Bihara mathu TN ,48 MPs iruva APya munde namma rajakeeya shakti nadeyuvudu kashta. summane geluvu sigada daariyalli hogi enu prayojana? adakke sampoorna swayuthate athava J&K iruvante Article 370 ya swayuthathegadaru horadabeku.

Kishore ಅಂತಾರೆ...

ಭಾಸ್ಕರ್ ಅವರೇ, ಪ್ರತ್ಯೇಕ ರಾಷ್ಟ್ರ ಅಂದ್ರೆ ಸುಮ್ನೆ ಆದೀತೆ..? ಒಂದು ಸಲ ಯೋಚಿಸಿ ನೋಡಿ. ಕೇಂದ್ರ ಸರ್ಕಾರಕ್ಕೆ ಹೆದರಿಸಲು ಈ ರೀತಿ ಮತಾದಬಹುದೇ ಹೊರತು ಭಾರತದ ಒಕ್ಕೂಟದಿಂದ ಹೊರಗೆ ಬರುವ ಮಾತಾಡಬೇಡಿ. ಎಷ್ಟು ತಾಳ್ಮೆ ಬೇಕು ಅಂದ್ರೆ, ಇದು ಒಂದು ೫೦ ವರ್ಷದ ಕಾರ್ಯಕ್ರಮ. ೫.೫ ಕೋಟಿ ಜನರನ್ನು ನೀವು ಜಾಗೃತಿ ಗೊಳಿಸುವುದು ಬೇಡ.. ಅದರಲ್ಲಿ ೧% ಅಷ್ಟು ಜನರನ್ನು ಕನ್ನಡ ಸಿನಿಮಾ ನೋಡಲು ಪ್ರೇರೇಪಿಸಿ ನೋಡೋಣ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails