ಕನ್ನಡ ಪ್ರೇಮಕ್ಕೆ ನೂರಾರು ಮುಖ!

ಇತ್ತೀಚಿಗೆ ವಿಜಯ ಕರ್ನಾಟಕದಲ್ಲಿ ಒಂದು ಲೇಖನ "ಇದು ಎಂಥಾ ಕನ್ನಡ ಪ್ರೇಮವಯ್ಯಾ?" ಅನ್ನೋ ತಲೆಬರಹದಡಿ ಬಂದಿತ್ತು. ನಮ್ ಗುರು ಅದನ್ನು ನೋಡುದ್ ಮೇಲೆ ಅದರೊಳಗಿನ ಟೊಳ್ಳಿಗೆ ಉತ್ರ ಕೊಡ್ಬೇಕು ಅಂತಾ ಅವತ್ತಿಂದ ಹಟ ಹಿಡದವ್ನೆ. ಬನ್ನಿ ನೋಡ್ಮಾ ಅದೇನ್ ಉತ್ರ ಕೊಟ್ಟಾನು ಅಂತಾ...

ಲೇಖಕ: ರಾಷ್ಟ್ರೀಯತೆಯ ವಾದ, ಕನ್ನಡತನದ ವಾದಗಳು ಎರಡೂ ಸರಿ, ಎರಡೂ ತಪ್ಪು ಅನ್ನೋ ಗೊಂದಲ, ತಾಕಲಾಟ ಹುಟ್ಟುತ್ತೆ. ಭಾರತದ ಮೂಲೆ ಮೂಲೆಗಳಲ್ಲಿ ಅಶಾಂತಿ ಇದೆ, ನೆಮ್ಮದಿ ಮತ್ತು ಶಾಂತಿ ತುಂಬಿರೋ ಬಾಳನ್ನು ಕಟ್ಕೋಬೇಕು ಅಂತ ಜನ ಕರ್ನಾಟಕಕ್ಕೆ ವಲಸೆ ಬರ್ತಾರೆ. ಸಹನಶೀಲತೆ, ಸೌಜನ್ಯಕ್ಕೆ ಕರ್ನಾಟಕ ಇನ್ನೊಂದು ಹೆಸರು. ಕರ್ನಾಟಕದಲ್ಲಿ ಇತ್ತೀಚಿಗೆ ನಡೆದಿರೋ ಕನ್ನಡ ಪರ ಹೋರಾಟಗಳಿಂದ ಕರ್ನಾಟಕದ ಇಮೇಜಿಗೆ ಧಕ್ಕೆ ಒದಗಿದೆ.
ಏನ್ಗುರು: ರಾಷ್ಟ್ರೀಯತೆ ಮತ್ತು ಕನ್ನಡತನವನ್ನು ಬೇರೆ ಅಂದ್ಕೊಳ್ಳೋದು, ಒಂದಕ್ಕಿಂತ ಇನ್ನೊಂದು ಹೆಚ್ಚು ಅಥವಾ ಕಡಿಮೆ ಅಂತ ಯೋಚ್ಸೋದೆ ಸರಿಯಲ್ಲ ಗುರು. ಕನ್ನಡಿಗರಿಗೆ ಕನ್ನಡತನವೇ ಭಾರತೀಯತೆ, ತಮಿಳರಿಗೆ ತಮಿಳುತನವೇ. ಭಾರತದ ಉದ್ಧಾರ ಅಂದ್ರೆ ಕನ್ನಡಿಗರಿಗೆ ಕರ್ನಾಟಕದ ಉದ್ಧಾರವೇ ಆಗಿದೆ. ಒಂದು ಪ್ರದೇಶದಲ್ಲಿ ಇರುವ ವ್ಯಾಪಾರ, ಉದ್ದಿಮ , ಆಡಳಿತ ಎಲ್ಲವೂ ಇರುವುದೇ ಆ ಪ್ರದೇಶದ ಜನರ ಅನುಕೂಲಕ್ಕಾಗಿ/ ಏಳಿಗೆಗಾಗಿ ಅನ್ನೋದನ್ನು ಅರ್ಥ ಮಾಡ್ಕೊಂಡ್ರೆ ವಲಸೆ, ಅನಿಯಂತ್ರಿತ ವಲಸೆ ಎಲ್ಲ ಅರ್ಥವಾಗುತ್ತೆ. ವಲಸೆ ಬಿಟ್ಕೊಳ್ಳೋದು ವಲಸಿಗರ ಬಾಳು ಹಸನಾಗಲೀ ಅನ್ನೋ ಕಾರಣಕ್ಕಲ್ಲ, ನಮ್ಮ ಜನರ ಬಾಳು ಹಸನಾಗಲಿ ಅಂತ. ಅಂದರೆ ವಲಸಿಗನಿಂದ ನಮಗೆ ಅನುಕೂಲವಾಗೋದಾದ್ರೆ ವಲಸೆ ಆಗಲಿ, ಇಲ್ಲದಿದ್ದರೆ ವಲಸೆ ಬೇಡ. ಅದು ಬಿಟ್ಟು ನಮ್ಮೂರಲ್ಲಿ ನಮ್ಮ ಬದುಕಿಗೆ ಧಕ್ಕೆ ಆಗ್ತಿದ್ರೂ ಪರ್ವಾಗಿಲ್ಲ, ಒಳ್ಳೇ ಇಮೇಜ್ ಮಾತ್ರಾ ಹಾಳಾಗಬಾರ್ದು ಅನ್ನೋ ಮನಸ್ಥಿತಿ ಸರಿಯಲ್ಲ ಗುರು. ನಿಜಾ ಹೇಳ್ಬೇಕು ಅಂದ್ರೆ ಇವತ್ತಿನ ದಿನಗಳಲ್ಲಿ ಕನ್ನಡಪರ ಚಿಂತನೆಗಳು ಹೆಚ್ತಾ ಇರೋದು, ಕನ್ನಡಿಗರ ಮೇಲೆ ಎಸಗಲಾಗುತ್ತಿರುವ ದೌರ್ಜನ್ಯಗಳಿಗೆ ತಕ್ಕ ಉತ್ತರ ಸಿಕ್ತಿರೋದು ಕನ್ನಡಪರ ಹೋರಾಟಗಳಿಂದಲೇ ಅಲ್ವಾ? ಗುರು.

ಲೇಖಕ: ಭಾಷೆ ಅನ್ನೋದು ಬರಿಯ ಸಂವಹನದ ಮಾಧ್ಯಮ. ಭಾಷೆಗಳ ಕಾರಣದಿಂದ ಪ್ರತ್ಯೇಕತೆಯ ಕೂಗೆದ್ದಿದೆ.
ಏನ್ಗುರು : ಭಾಷೆ ಅನ್ನೋದು ಬರೀ ಸಂವಹನ ಮಾಧ್ಯಮ ಅಲ್ಲಾ ಅದು ಸಹಕಾರದ ಮಾಧ್ಯಮ. ಭಾಷೆ ಒಂದು ಜನಾಂಗದ ನಡುವಿನ ನಂಬಿಕೆ ಸಹಕಾರಗಳಿಗೆ ಮೂಲಕಾರಕ ಮಾತ್ರವಲ್ಲದೆ ಆ ಜನಾಂಗದ ಏಳಿಗೆಗೆ ಸಾಧನ. ಬದುಕಿಗೆ ಭಾಷೆಯ ಅಗತ್ಯವಿಲ್ಲ ಅನ್ನೋದು, ಬದುಕನ್ನೂ ಭಾಷೆಯನ್ನೂ ಪ್ರತ್ಯೇಕಿಸಿ ನೋಡೋದು ತಪ್ಪು ಅನ್ನೋಕೆ ಒಂದು ಅಂಕಿ ಅಂಶ ಸಾಕು. ಪ್ರಪಂಚದ ಮುಂದುವರಿದ ದೇಶಗಳೆಲ್ಲವೂ ತಮ್ಮ ಕಲಿಕೆ, ಉದ್ಯೋಗ, ಆಡಳಿತ, ವ್ಯವಸ್ಥೆಗಳನ್ನು ತಮ್ಮ ತಾಯಿನುಡಿಯ ಸುತ್ತಲೇ ಕಟ್ಟಿಕೊಂಡಿವೆ. ಜರ್ಮನ್, ಜಪಾನ್, ಇಟಲಿ, ಫ್ರಾನ್ಸ್, ಇಸ್ರೇಲ್... ಇವೆಲ್ಲಾ ತಮ್ಮ ಭಾಷೆಯ ಸುತ್ತಲೇ ಕಟ್ಟಿಕೊಂಡ ನಾಡುಗಳಾಗಿವೆ ಮತ್ತು ಮುಂದುವರೆದಿಲ್ಲದ ಹೆಚ್ಚಿನ ನಾಡುಗಳಲ್ಲಿ ತಾಯಿನುಡಿಯ ಬಳಕೆಯನ್ನು ಹಲವಾರು ಕ್ಷೇತ್ರಗಳಲ್ಲಿ ಕಡೆಗಣಿಸಲಾಗಿರುವುದನ್ನು ನೋಡಬಹುದಾಗಿದೆ. ಭಾಷೆಗಳ ಕಾರಣದಿಂದ ಪ್ರತ್ಯೇಕತೆಯ ಕೂಗೆದ್ದಿದೆ ಅನ್ನೋದಕ್ಕಿಂತ ಒಂದು ಭಾಷಾ ಜನಾಂಗದ ಏಳಿಗೆ ಪರಭಾಷೆಯ, ಪರಭಾಷಿಕರ ಕಾರಣದಿಂದ ಅಪಾಯಕ್ಕೆ ಸಿಲುಕಿ ಅವನತಿ ಹೊಂದುತ್ತಿದೆ ಅನ್ನೋ ಕಾರಣದಿಂದ ಇಂಥಾ ಕೂಗುಗಳು ಹುಟ್ಟುತ್ತಿದೆ ಅನ್ನೋದೆ ಹೆಚ್ಚು ಸರಿಯಾದದ್ದು. ಒಕ್ಕೂಟ ವ್ಯವಸ್ಥೆ ಸರಿಯಾಗಿದ್ದು ಪ್ರತಿ ಭಾಷಿಕ ಜನಾಂಗಕ್ಕೂ ಸಮಾನ ಗೌರವ, ಏಳಿಗೆಯ ಅವಕಾಶ ಇದ್ದರೆ... ಒಕ್ಕೂಟದಲ್ಲಿ ಇರುವುದರಿಂದ ನಮ್ಮ ಏಳಿಗೆಯಾಗುತ್ತದೆ ಎನ್ನುವುದು ಆಯಾ ಪ್ರದೇಶದ ಜನಗಳಿಗೆ ಮನವರಿಕೆಯಾದರೆ, ಯಾರಾದ್ರೂ ಯಾಕೆ ಪ್ರತ್ಯೇಕತೆಯ ಕೂಗೆಬ್ಬಿಸುತ್ತಾರೆ? ಅಲ್ಲವೇ.

ಲೇಖಕ: ಇಂಗ್ಲಿಷ್ ಎಂಬ ರಕ್ಕಸ ಎಲ್ಲ ಭಾಷೆಗಳನ್ನು ನುಂಗುತ್ತಿದೆ. ಕನ್ನಡಕ್ಕೆ ಇಂಗ್ಲಿಷ್ ಭಾಷೆಯಿಂದ ಹೆಚ್ಚಿನ ಅಪಾಯವಿದೆ.
ಏನ್ಗುರು : ಇಂದಿನ ದಿನ ಇಂಗ್ಲಿಷ್ ಭಾಷೆಯಿಂದ ಜ್ಞಾನ, ವಿಜ್ಞಾನ, ತಂತ್ರಜ್ಞಾನ ಇವುಗಳೆಲ್ಲಾ ಸಿಗುತ್ತಿದೆ ಅಂತ ಅದನ್ನು ಜನ ಒಪ್ಕೋತಾರೆ. ಆದರೆ ನಮ್ಮ ನಿಜವಾದ ಏಳಿಗೆ ಈ ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳೆಲ್ಲಾ ಕನ್ನಡದಲ್ಲಿದ್ದಾಗ ಮಾತ್ರಾ ಅತ್ಯುತ್ತಮವಾಗೋದು ಅನ್ನೋದೂ ನಿಜ. ಹಾಗಾಗಿ ಇವತ್ತು ಇಂಗ್ಲಿಷೂ ಕೂಡಾ ತಾತ್ಕಾಲಿಕವಾದ ಪರಿಹಾರ ಮಾತ್ರವೇ ಆಗಿದೆ. ಹಾಗೆ ನೋಡಿದರೆ ಇಂದು ಕನ್ನಡಿಗರ ಬದುಕಿಗೆ ಕಲ್ಲು ಹಾಕುತ್ತಿರುವುದು ಇಂಗ್ಲಿಷ್ ಅಲ್ಲಾ, ಹಿಂದಿ ಭಾಷೆ.

ಲೇಖಕ: ಭಾಷೆ ಕಲ್ಲು ಹೊಡ್ಯೋದ್ರಿಂದ, ರಾಜ್ಯೋತ್ಸವ ಮಾಡಿದ್ರಿಂದ, ಮಸಿ ಬಳಿಯೋದ್ರಿಂದ ಉಳ್ಯಲ್ಲ...
ಏನ್ಗುರು : ಹೌದು, ಭಾಷೆ ಬರೀ ಇಷ್ಟರಿಂದಲೇ ಉಳ್ಯಲ್ಲ. ಆದರೆ ಭಾಷೆಯ ಉಳಿವಿಗೆ ಇರೋ ಅನೇಕ ವಿಧಾನಗಳಲ್ಲಿ ಇವುಗಳ ಪಾತ್ರವೂ ದೊಡ್ದದೇ. ಜನರಲ್ಲಿ ಜಾಗೃತಿ ಮೂಡ್ಸೋದ್ರಲ್ಲಿ, ಒಗ್ಗಟ್ಟು ಸಾಧ್ಸೋದ್ರಲ್ಲಿ ರಾಜ್ಯೋತ್ಸವಗಳೂ, ಕಲ್ಲು ತೂರಾಟಗಳೂ, ಮಸಿ ಬಳಿಯುವಿಕೆಗಳೂ ಕಾರಣವಾಗಿವೆ ಅನ್ನೋ ಮಾತನ್ನು ತೆಗೆದು ಹಾಕಕ್ಕೆ ಆಗಲ್ಲ ಗುರು. ಭಾಷೆ ಉಳೀಬೇಕು ಅಂದ್ರೆ ಬರೀ ಇವುಗಳಿಂದ ಮಾತ್ರಾ ಸಾಧ್ಯವಿಲ್ಲ ಅನ್ನೋದನ್ನು ಒಪ್ಪಬೇಕಾದ್ದೆ. ಭಾಷೇನ ಉಳಿಸಬೇಕು ಅಂದ್ರೆ ಭಾಷೆಯೆಂಬುದನ್ನು ಬದುಕು ಕೊಡೋ ಸಾಧನವಾಗಿಸಬೇಕು. ಕನ್ನಡದಿಂದ ಕನ್ನಡಿಗರ ಬದುಕಲ್ಲಿ ಏಳಿಗೆ ಸಾಧ್ಯವಾಗಬೇಕು. ಜಗತ್ತಿನ ಅತ್ಯುನ್ನತ ಜ್ಞಾನ ಕನ್ನಡಿಗರ ಕೈವಶವಾಗಬೇಕು. ಆಗ ಭಾಷೆ ಉಳಿದೀತು. ಕುವೆಂಪು ಅವರು ಹೇಳಿದ್ದು ಮರೀಬಾರ್ದಣ್ಣ... ಕಲ್ಲೋ ಸೊಲ್ಲೋ ಕನ್ನಡದ ಉಳಿವಿಗೆ ಎಲ್ಲವೂ ಬೇಕು ಅಂತ.

ಲೇಖಕ: ನಾಡು ನುಡಿಯನ್ನು ಮೀರಿದ್ದು ಮಾನವೀಯತೆಯ ಸಿದ್ಧಾಂತ. ಇದನ್ನೇ ಕುವೆಂಪು ಹೇಳಿದ್ದು.
ಏನ್ಗುರು : ಅನುಕೂಲಕ್ಕೆ ತಕ್ಕಷ್ಟನ್ನು ಮಾತ್ರಾ ವಾದಕ್ಕೆ ಬಳಸುವುದು ಸರಿಯಲ್ಲ ಗುರು. ಅದೇ ಕುವೆಂಪು ಅವರೇ "ಕನ್ನಡ ವಿರೋಧಿಗಳಿಗೆ ನಾನು ಯುದ್ಧ ಬುಲ್ಡೋಜರ್" "ಕನ್ನಡಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ" "ಕನ್ನಡವೇ ಸತ್ಯ, ಅನ್ಯವೆನಲದೇ ಮಿಥ್ಯಾ" ಎಂದೂ ಸಾರಿದ್ದಾರೆ. ಅವರ ಮಾತುಗಳಲ್ಲಿ ಯಾವ ದ್ವಂದ್ವವೂ ಇಲ್ಲ. ನಿನ್ನತನ ಮರೆತು ಜಗದ ಉದ್ಧಾರ ಸಾಧ್ಯವಿಲ್ಲ. ಮೊದಲು ಮನೆ ಗೆದ್ದು ಆಮೇಲೆ ಊರು ಗೆಲ್ಲು ಅನ್ನೋ ಮಾತಿನ ಹಾಗೆ ಇದು. ನಿನ್ನ ಪಾಲಿನ ದೇಶ, ಪ್ರಪಂಚ ನೀ ಬದುಕುತ್ತಿರುವ ನಾಡು, ಇದರ ಹಿತ ಕಡೆಗಣಿಸಿ ಇನ್ಯಾವ ಮಾನವ ಹಿತವನ್ನೂ ಸಾಧ್ಸಕ್ ಆಗಲ್ಲಾ ಅನ್ನೋದೇ ಸತ್ಯಾ ಗುರು.

ಲೇಖಕ: ಜಗತ್ತಿನ ಯಾವುದೋ ಮೂಲೆಯಲ್ಲಿ ಕುಳಿತ ಕನ್ನಡಿಗ ಅಂತರ್ಜಾಲದಲ್ಲಿ ಸುಮ್ಮನೆ ಕಮೆಂಟ್ ಬರೆದು ಸಾರ್ಥಕ್ಯದ ಭಾವನೆ ಹೊಂದುತ್ತಾನೆ. ವಾಸ್ತವವಾಗಿ ಅವನಿಗೆ ಕನ್ನಡ ನೆಲದ ಅಸಲಿ ಸಮಸ್ಯೆಗಳೇ ಅರ್ಥವಾಗಿರುವುದಿಲ್ಲ.
ಏನ್ಗುರು : ಜಗತ್ತಿನ ಯಾವುದೋ ಮೂಲೆಯಲ್ಲಿ ಕುಳಿತುಕೊಳ್ಳುವುದಕ್ಕೂ, ಕನ್ನಡ ನಾಡಿನ ಸಮಸ್ಯೆ ಅರ್ಥವಾಗುವುದಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯಾ? ಕಾಮೆಂಟ್ ಬರ್ಯೋರಿಗೆ ಸಮಸ್ಯೆ ಅರಿವಿರಲ್ಲ ಅಂತ ಸಾರ್ವತ್ರಿಕ ಅಭಿಪ್ರಾಯ ಕೊಡೋದು ಸರೀನಾ ಗುರು. ಒಂದು ನಾಡು ಅಂದಮೇಲೆ ಅದರಲ್ಲಿ ಪ್ರತಿಯೊಬ್ಬನಿಗೂ ಅವನದೇ ಆದ ಪಾತ್ರ ಇರುತ್ತೆ. ಬರಹ ಬರ್ಯೋದ್ರು ಮೂಲಕ ಜಾಗೃತಿ ಮೂಡ್ಸೋ ಹಾಗೇನೆ ಕಮೆಂಟ್ ಬರೆಯೋದ್ರ ಮೂಲಕವೂ ಜಾಗೃತಿ ಮೂಡಿಸಬಹುದಲ್ಲಾ ಗುರು. ನಾಡಿನ ಏಳಿಗೆಗೆ ಹೋರಾಟ ಮಾಡೋರು, ಚಿಂತನೆ ಮಾಡೋರು, ಉದ್ದಿಮೆ ಮಾಡೋರು, ಕಾಯಕ ಮಾಡೋರು, ಬರವಣಿಗೆ ಬರೆಯೋರು... ಹೀಗೆ ಎಲ್ಲಾ ಥರದೋರ ಕಾಣಿಕೆನೂ ಮುಖ್ಯಾನೆ ಗುರು. ಇದರಲ್ಲಿ ಒಂದು ಮೇಲು ಇನ್ನೊಂದು ಕೀಳು ಅನ್ನೋದಾಗ್ಲಿ, ಹೋರಾಟ ಮಾಡೋರಿಗೆ ಸಾಹಿತ್ಯದ ಪರಿಣಿತಿ ಇರಬೇಕು, ನಾಡಿನ ಉದ್ದಿಮೆದಾರನಿಗೆ ಇತಿಹಾಸ ಗೊತ್ತಿರಬೇಕು, ಜಾಗೃತಿ ಮಾಡೋರ್ಗೆ ಇನ್ನೊಂದು ಗೊತ್ತಿರಬೇಕು... ಅಂತೆಲ್ಲಾ ಬಯಸೋದು ಬಾಲಿಷ ಆಗಿಬಿಡುತ್ತೆ. ಏನಂತೀಯಾ? ಗುರು.

8 ಅನಿಸಿಕೆಗಳು:

Anonymous ಅಂತಾರೆ...

ಇಂಗ್ಲಿಷ್ ಗೆ ಇರುವ ಶಕ್ತಿ ನಮ್ಮ ಭಾಷೆಗಳಿಗೆ ನಾವು ಎಲ್ಲಿಯವರೆಗೆ ಒದಗಿಸುವುದಿಲ್ಲವೋ ಅಲ್ಲಿಯವರೆಗೂ ಈ ಕೀಳರಿಮೆ ನಮ್ಮನ್ನ ಬಿಡದು. ಲಕ್ಷಾಂತರ ಪದವೀಧರರು ಪ್ರತಿ ವರ್ಷ ಕಾಲೇಜುಗಳಿಂದ ಹೊರ ಬಂದ್ರೂ, ಅವರಿಂದ ಇಡೀ ವಿಶ್ವ ಬೆರಗಾಗುವಂಥಾ ಉತ್ಪನ್ನಗಳ ಸೃಷ್ಟಿ ಆಗಲಿ ಸಂಶೋಧನೆಗಳಾಗಲಿ ಆಗ್ತಿಲ್ಲ ಅನ್ನೋದು ಕಟುಸತ್ಯ. ಹಾಗಿದ್ರೆ ನಮ್ಮ ದೇಶದ ಜನರಲ್ಲಿ ಆ ಸಾಮರ್ಥ್ಯವೇ ಇಲ್ವಾ? ಸಾಮರ್ಥ್ಯ ಖಂಡಿತವಾಗಿಯೂ ಇದೆ, ಆದರೆ ಸಮಸ್ಯೆಯ ಮೂಲವಿರೋದು ಪ್ರತಿಭೆಗಲ್ಲದೆ ಇಂಗ್ಲೀಷಿಗೆ ಮಣೆ ಹಾಕೋ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ. ಅದನ್ನ ಸರಿಪಡಿಸದೆ ಕೊರಗುವುದರಲ್ಲಿ ಅರ್ಥವಿಲ್ಲ. ಎಲ್ಲಿಯವರೆಗೂ ಕನ್ನಡ ಹೊಟ್ಟೆಯ ಹಿಟ್ಟಿನ ಭಾಷೆಯಾಗದೆ ಜುಟ್ಟಿನ ಮಲ್ಲಿಗೆ ಭಾಷೆಯಾಗಿರುವುದೋ ಅಲ್ಲಿಯವರೆಗೂ ಇಂಗ್ಲಿಷ್ ಬಗೆಗಿನ ನಮ್ಮ ಆತಂಕ ಕಡಿಮೆ ಆಗದು.

Anonymous ಅಂತಾರೆ...

ನಾಡಿನ ಪ್ರತಿ ವಿಷಯದಲ್ಲೂ ಕನ್ನಡಿಗರಿಗೆ ಆಗ್ತಿರೋ ಮೋಸ ಏನು, ಇದರಿಂದ ನಾಡಿಗೆ ಹೇಗೆ ಕೆಡಕುಂಟಾಗ್ತಿದೆ, ಇದನ್ನ ತಡೆಗಟ್ಟೋದ್ರಲ್ಲಿ ತಮ್ಮ ಪಾತ್ರ ಏನು ಅಂತ ಅರ್ಥ ಮಾಡ್ಕೊಳಕ್ಕೆ ಬೇಕಾಗಿರೋ ಬುದ್ಧಿ ಯಾವ ರಾಜಕೀಯ ಪಕ್ಷಕ್ಕೂ ಇಲ್ಲ. ಅವರನ್ನ ಪ್ರಶ್ನಿಸಬೇಕಾದ ಜನರು, ಬೀದಿಗಿಳಿದು ಹೋರಾಡಿ ಕನ್ನಡಿಗರಿಗೆ ಆಗ್ತಿರೋ ಸಾಕಷ್ಟು ಅನ್ಯಾಯದ ಬಗ್ಗೆ ಬೆಳಕು ಚೆಲ್ಲೋ ಕನ್ನಡ ಹೋರಾಟಗಾರರನ್ನು ಪ್ರಶ್ನಿಸುವುದು ತಮಾಷೆಯಾಗಿದೆ

Anonymous ಅಂತಾರೆ...

ನಮ್ಮನ್ನ ಪ್ರಾಣಿಗಳಿಂದ ಪ್ರತ್ಯೇಕಿಸುವ ಒಂದೇ ಒಂದು ಕುರುಹು ಅಂದ್ರೆ ಭಾಷೆ. ಭಾಷೆಯ ನೆರಳಿನಲ್ಲೆ ನಾಗರಿಕತೆಗಳು ಅರಳಿರೋದು, ಇಂದು ನಮ್ಮ ಜನ, ನಮ್ಮ ಊರು ಹೀಗೆ ನಮ್ಮತನ ಅನ್ನುವ ಭಾವ ಅರಳುವುದೇ ಭಾಷೆಯ ತಳಹದಿಯ ಮೇಲೆ. ಬದುಕಿನಷ್ಟೇ ಪ್ರಾಮುಖ್ಯತೆ ಭಾಷೆಗೂ ಇದೆ.

Anonymous ಅಂತಾರೆ...

ಭಾಷೆ ಅನ್ನೋದು ಬರಿಯ ಸಂವಹನದ ಮಾಧ್ಯಮ, ಸಂವಹನದ ಮಾಧ್ಯಮ ಅಂತ ಜನ ಹೊಡ್ಕೋತಾರೆ. ಹಾಗೆ ನೋಡಿದರೆ ದೇಶ ಅನ್ನೋದೆ ಇರೋಕ್ಕೆ ಒಂದು ಜಾಗ ಅಷ್ಟೆ. ದಿನ ಬೆಳಗ್ಗೆ ಆದರೆ ದೇಶ ಬದಲಾಯಿಸೊ ಜನ ನೋಡ್ತೀವಿ. ನಮ್ಮ ಮನೆಗಳಲ್ಲೆ ಅಮೇರಿಕ ಪೌರತ್ವ ಸಿಕ್ತು ಅಂತ ಸಿಹಿ ಹಂಚೋದನ್ನ ನೋಡಿದೀವಿ. ಹಾಗೆ ನೋಡಿದರೆ ಭಾಷೇನೆ ಹೆಚ್ಚು ಸ್ಥಿರ ಅನ್ಸುತ್ತೆ. ನಾವು ೪೦೦೦ ಸಾವಿರ ವರ್ಷದಿಂದ ಅದೇ ಭಾಷೆ ಮಾತಾಡ್ತಾ ಇದ್ದೀವಿ, ಆದರೆ ಎಷ್ಟೋ ದೇಶ ನೋಡ್ ಬಿಟ್ಟಿದೀವಿ. ಈಗ ನೀವೇ ಹೇಳಿ ಭಾಷೆ ಮುಖ್ಯಾನೋ, ದೇಶ ಮುಖ್ಯಾನೋ ಅಂತ? ಯಾವುದನ್ನ ನಾವು ಮೊದಲು ಉಳಿಸ್ಕೋಬೇಕು ಅಂತ?

Anonymous ಅಂತಾರೆ...

ಅಯ್ಯೋ

ವಿಜಯ ಕರ್ನಾಟಕದ ಬರಹಗಳೇ. ಅದಕ್ಕೆ ತಲೆಗೆಡಿಸಿಕೊಳ್ಳಬೇಡಿ.. :)

ಅದರಲ್ಲಿ ಬರೆಯೋರು ಹೆಚ್ಚು ಮಂದಿ ಹಿಂಗೆ..

ಶ್ರೀವತ್ಸಜೋಶಿಗಳು ಸಾರು, ಕೂಟು ಎಲ್ಲ ತಮಿಳರು ಬಂದು ಹೇಳಿಕೊಟ್ಟಿದ್ದು ಅಂತ ಬರೇತಾರೆ.

ಇನ್ನು ಸುಜಾತ ಅನ್ನೋರು ಕನ್ನಡದ ತುಂಬ ತೆಲುಗ ಪದಗಳಿವೆ ಅಂತಾರೆ..

ಇನ್ನು ಇವರು ನಟೇಶ ಬಾಬು ಇವರಿಗೆ ಕನ್ನಡ ಬೇಕಾಗಿಲ್ಲ... ಇಲ್ಲಿ ಬದುಕುವುದು ಬೇಕು..

ಇನ್ನು ವಿಶ್ವೇಶ್ವರ ಭಟ್ರು ನಾರಾಯಣ ಗೌಡರು ಕನ್ನಡ ಸರಿಯಾಗಿ ಮಾತಾಡಲ್ಲ.. ಉಚ್ಚಾರದೋಷಗಳು.. ಮೊದಲು ಅವನ್ನು ಸರಿಮಾಡಿಕೊಂಡು, ಕನ್ನಡ ಹೋರಾಟಕ್ಕೆ ಇಳೀಬೇಕು ಅಂತ ದೊಡ್ಡ ಲೇಖ್ಹನ ಬರೇತಾರೆ...

ವಿಜಯ ಕರ್ನಾಟಕದಲ್ಲೇ
"ಸಂಸ್ಕೃತ ಇಲ್ಲದ ಕನ್ನಡ ಜಾಳು"
"ಕನ್ನಡ ಮಡಿ ಭಾಷೆ" - ರಾ ಗಣೇಶ

ಇಂತ ಬರಹಗಳು ಬಂದಿರೋದು, ಬರ್ತಾ ಇರೋದು.. !!

ಅದಕ್ಕೆ ವಿಜಯ ಕರ್ನಾಟಕ ಅಂದ್ರೆ "ಬೆತ್ತಲೆ ಜಗತ್ತು" :) ಮೂರು ಬಿಟ್ಟು ಬುಂಡ ಬುಂಡ ಬೆತ್ತಲೆ!!

Anonymous ಅಂತಾರೆ...

ಧರ್ಮಕಿಂತ ಭಾಷೆ ಜನರನ್ನು ಒಂದು ಮಾಡುತ್ತದೆ. ಕೇವಲ ತಮ್ಮ ಭಾಷೆ, ಬೆಂಗಾಲಿಯನ್ನು ಉಳಿಸಿಕೊಳ್ಳಲು, ಈಗಿನ ಬಂಗಾಳದೇಶದ ಜನರು, ಒಂದೇ ಧರ್ಮದ ಯಾಯಿಯಾಗಿದ್ದರು
ಪಾಕಿಸ್ಥಾನದಿಂದ್ದ ಪ್ರತ್ಯೇಕಗೊಂಡರು. ಒಂದು ಭಾಷೆ ಮಾತನಾಡುವ ಜನರು ತಮ್ಮದೆಯಾದ ಸಂಸ್ಕೃತಿಯನ್ನು, ಜೀವನಶೈಲಿಯನ್ನು ಹೊಂದಿರುತ್ತಾರೆ. ಉದಾಹರಣೆಗೆ ಓಣಂ ಹಬ್ಬ ಮಳಯಾಳಿಗಳಿಗೆ ವಿಷೀಶವಾದದ್ಧು, ಪೊಂಗಲ್ ತಮಿಳರಿಗೆ ಹಾಗೂ ಯುಗಾಧಿ ಕನ್ನಡಿಗರಿಗೆ. ಇದ್ದಲ್ಲದೆ ಆಹಾರ ಹಾಗೂ ಉಡುಗೆತೊಡಿಗೆಯಲ್ಲೂ ಬಿನ್ನತೆಯನ್ನು ಕಾಣಬಹುದು. ಫ್ರೆಂಚರು ಹಾಗೂ ಸ್ಪೈನಿನ ಜನರು ರೋಮನ್ ಕ್ಯಾಥೊಲಿಕಾಗಿದ್ಧರು ವಾಸ್ತುಶಿಲ್ಪದಿಂದ ಹಿಡಿದು ದಿನನಿತ್ಯದ ಜೀವನಶೈಲಿಯಲ್ಲಿ ವ್ಯತ್ಯಾಸ ಅವರ ನಡುವೆ ಕಾಣಬಹುದು. ಒಂದು ಭಾಷೆ ಅವನತಿಗೊಂಡರೆ ಆ ಭಾಷೆ ಮಾತಾಡುವ ಜನರ ಸಂಸ್ಕೃತಿ ನಶಸಿಹೊಗುತ್ತದೆ. ನಮ್ಮಲಿ ಹಿರಿಯರು ತಮ್ಮ ಮಕ್ಕಳು ಬೇರೆ ರಾಜ್ಯಕ್ಕೆ ವಿದ್ಯಾಭ್ಯಾಸ ಅಥವಾ ಕೆಲಸದ ಮೇಲೆ ಹೋದಾಗ ಆ ರಾಜ್ಯದ ಭಾಷೆಯನ್ನು ಕಲಿತು ಅಲ್ಲಿಯ ಜನರೊಂದಿಗೆ ಸಾಮರಸ್ಯದಿಂದ ಇರಿ ಎಂದು ತಮ್ಮ ಮಕ್ಕಳಿಗೆ ಬುದ್ಧಿವಾದ ಹೇಳಿದರೆ ವಲಸೇಗಾರರಿಂದ್ದ ಆ ರಾಜ್ಯಕ್ಕೆ ಸಮಸ್ಯೆ ಇರುವುದಿಲ್ಲ ಎಂದು ನನ್ನ ಅಭಿಪ್ರಾಯ.

Anonymous ಅಂತಾರೆ...

i think these vijaya karnataka writers have inferiority complex about kannada and karnataka. They do not know kannada how rich in all respects.We won highest janapeta awards.Many people do not know how other countries strict about thier languaze. I am now pharmacist in Dubai, i learned arabic for two years after clearing arabic exam(which includes reading, writing, speaking), i got licence to practice in pharmacy. That means we have to give respect to local languaze. If you go to germany you have to learn german like wise in Italy etc. Sameway their should be in karantaka. Just go chennai, open your eyes, watch how Tamilians behaves with other peoples.
First we have teach our generations respect our languaze and cultare.It should start from sweet home,like my mother,my father,my city,my people, my state, my nation. Just come to gcc countries observe how malayali behave with other people, they so unit even local govt also scares sometimes. they give all sort of support to thier people they do not see whether he is muslim, hindu or christian. that means languaze is the only way to keep society united.

Gangadhara ಅಂತಾರೆ...

ಕನ್ನಡಕ್ಕೆ ಪ್ರಾಶಸ್ತ್ಯ ಸಿಗಬೇಕು.. ಇಂತಾವ್ರಿಗೆ ಬುದ್ದಿ ಕಲಿಸಬೇಕು.. ತನ್ನ ಒಬ್ಬನ ಅಭಿಪ್ರಾಯವನ್ನ ಸಾರ್ವಜನಿಕ ಅಭಿಪ್ರಾಯವಂತೆ ಬಿಂಬಿಸುವುದು ತಪ್ಪು.. ವಿಜಯ ಕರ್ನಾಟಕ ಇಂತಹ ಬರಹಗಳನ್ನ ಯಾಕೆ ಪ್ರಕಟಿಸತ್ತೋ ಗೊತ್ತಿಲ್ಲ :(

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails