ಕನ್ನಡ ಮತ್ತು ಕನ್ನಡಿಗರ ಏಳಿಗೆ - ೭: ಏಳಿಗೆಗೆ ಇಂಗ್ಲೀಷನ್ನು ಎಷ್ಟು ಬೇಕೋ ಅಷ್ಟು ಉಪಯೋಗಿಸಿಕೊಳ್ಳಬೇಕು

ಕನ್ನಡ ನುಡಿ ಮತ್ತು ಬರಹಗಳ ನಿಜವಾದ ಸ್ವರೂಪ ಮತ್ತು ಮಹತ್ವಗಳ ಬಗ್ಗೆ ಇತ್ತೀಚೆಗೆ ಜನರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡುತ್ತಿದೆ. ಈ ಅರಿವು ಹಳೆಯ ಶಾಲೆಯ ಅವೈಜ್ಞಾನಿಕತೆಯೆಂಬ ಕೊಳೆಯನ್ನು ತೊಳೆದು ವೈಜ್ಞಾನಿಕತೆಯ ಭದ್ರವಾದ ತಳಹದಿಯ ಮೇಲೆ ನಿಂತ ಒಂದು ಹೊಸ-ಶಾಲೆಯನ್ನು ಕಟ್ಟಲು ಅಣಿಮಾಡಿಕೊಡುತ್ತಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕನ್ನಡದ ಯುವಕ-ಯುವತಿಯರು ಈ ಹೊಸ ಶಾಲೆಯ ತತ್ವಗಳಿಂದ ಪ್ರೇರಿತರಾಗಿ ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳೆಂಬ ಏಳ್ಗೆಯ ಮೂರು ಕಂಬಗಳನ್ನು ಮತ್ತೆ ಅಲ್ಲಾಡದಂತೆ ನಿಲ್ಲಿಸಲು ಹೊರಟಿದ್ದಾರೆ. ಈ ಶಾಲೆಯ ಪರಿಚಯವನ್ನು ಮಾಡಿಕೊಡುವ ಒಂದು ಬರಹಗಳ ಸರಣಿಯನ್ನು ಬನವಾಸಿ ಬಳಗವು ನಿಮ್ಮ ಮುಂದಿಡುತ್ತಿದೆ. ಓದಿ, ನಿಮ್ಮ ಗೆಳೆಯರಿಂದಲೂ ಓದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ-- ಸಂಪಾದಕ, ಏನ್ ಗುರು

ಇಲ್ಲಿಯವರೆಗೆ:
ಹಿಂದೆ ಸಂಸ್ಕೃತವು ಹೇಗೆ ತಿಳುವಳಿಕಸ್ತ ಕನ್ನಡಿಗರ ಧರ್ಮ ಮತ್ತು ಮೋಕ್ಷಗಳ ಬೇಡಿಕೆಗಳನ್ನು ಪೂರೈಸಿತ್ತೋ, ಹಾಗೆ ಇಂದು ಇಂಗ್ಲೀಷು ತಿಳುವಳಿಕಸ್ತ ಕನ್ನಡಿಗರ ಅರ್ಥ ಮತ್ತು ಕಾಮಗಳ ಬೇಡಿಕೆಗಳನ್ನು ಪೂರೈಸುತ್ತಿದೆ. ಹೆಚ್ಚು ಹೆಚ್ಚು ಅರ್ಥ-ಕಾಮಗಳನ್ನು ತಂದುಕೊಡುವ ವಿದ್ಯೆಗಳು ಕನ್ನಡದಲ್ಲಿ ಇನ್ನೂ ಎಳವೆಯಲ್ಲಿವೆಯೆಂದರೆ ತಪ್ಪಾಗಲಾರದು. ಇವತ್ತಿನ ದಿವಸ ಇಂಗ್ಲೀಷಿನಿಂದ ಕನ್ನಡಿಗರು ಪಡೆದುಕೊಳ್ಳಬೇಕಾದದ್ದು ಬಹಳವಿದೆಯೆನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಪಡೆದುಕೊಳ್ಳಬೇಕಾದ್ದನ್ನು ಪಡೆದುಕೊಂಡು ಬೇಡದ್ದನ್ನು ದೂರವಿಡುವ ಬುದ್ಧಿವಂತಿಕೆ ನಮಗೆ ಬರಬೇಕಿದೆ. ಕನ್ನಡದ ದೀಪವನ್ನು ಹಚ್ಚಲು ಹೊರಟಾಗ ಇಂಗ್ಲೀಷಿನ ಗಾಳಿಯು ಬೇಕೇ ಬೇಕು. ಆದರೆ ಇಂಗ್ಲೀಷಿನ ಬಿರುಗಾಳಿ ಬಂದರೆ ಆ ದೀಪ ಆರಿಹೋಗುತ್ತದೆ. ಇಂಗ್ಲೀಷು ಇವತ್ತಿನ ದಿನ ಕನ್ನಡಕ್ಕಿಂತ ಹೆಚ್ಚು ಅನ್ನ ತಂದುಕೊಡುವ ಭಾಷೆಯಾಗಿದೆಯೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇದು ಹೀಗೇ ಮುಂದುವರೆದರೆ ಕನ್ನಡಜನಾಂಗಕ್ಕೆ ಏಳಿಗೆಯಿಲ್ಲ. ಕನ್ನಡಜನಾಂಗದ ಭಾಷೆ ಕನ್ನಡವಾಗಿರುವಾಗ ಎಲ್ಲರೂ ಇಂಗ್ಲೀಷಿನಿಂದಲೇ ಅನ್ನವನ್ನು ಗಳಿಸಿಕೊಳ್ಳಲಿ ಎನ್ನುವುದು ಮಾಡಿತೀರಿಸಲಾರದ ಮಾತು.

ಇಂಗ್ಲೀಷಿನಿಂದ ಪಡೆಯಬೇಕಾದ್ದನ್ನು ಪಡೆಯಬೇಕು, ಬಾರದ್ದನ್ನು ಕೈಬಿಡಬೇಕು. ಮಡಿವಂತಿಕೆ ಬೇಡ.

ಕೆಲವರಿಗೆ ಇಂಗ್ಲೀಷು ನಮ್ಮ ಮೇಲೆ ದಬ್ಬಾಳಿಕೆ ನಡೆಸಿದ ವಸಾಹತುಶಾಹಿ ಇಂಗ್ಲೇಂಡಿನ ನುಡಿ. ಆದ್ದರಿಂದ ಅದನ್ನು ನಮ್ಮ ಹತ್ತಿರವೇ ಸೇರಿಸಿಕೊಳ್ಳಬಾರದು ಎಂಬ ತಪ್ಪು ತಿಳಿವಳಿಕೆಯಿದೆ. ಆದರೆ ಇವತ್ತಿನ ದಿವಸ ಇಂಗ್ಲೀಷಿನಲ್ಲಿರುವಷ್ಟು ಜ್ಞಾನ-ವಿಜ್ಞಾನಗಳು ಪ್ರಪಂಚದ ಯಾವ ನುಡಿಯಲ್ಲೂ ಇಲ್ಲ. ಅದಕ್ಕೆ ಪ್ರಪಂಚದಲ್ಲೆಲ್ಲ ಒಪ್ಪಿಗೆಯೂ ಇದೆ. ಆದ್ದರಿಂದ ಅದನ್ನು ಕನ್ನಡಿಗರೆಲ್ಲ ಕಲಿಯಲೇಬೇಕು. ಇನ್ನೂ ಕೆಲವರಿಗೆ ಇಂಗ್ಲೀಷು ಕನ್ನಡದ ಹಗೆಯೆಂಬ ಅನಿಸಿಕೆಯಿದೆ. ಆದರೆ ಇಂಗ್ಲೀಷು ಕನ್ನಡದ ಹಗೆಯಲ್ಲ. ಇಂಗ್ಲೀಷಿನಿಂದ ನಮಗೆ ಸಿಗಬೇಕಾದದ್ದು ಬಹಳವಿದೆ. ಅದನ್ನು ಕನ್ನಡಿಗರು ಬೇಕಾದಷ್ಟು ಮಾತ್ರ ಬಳಸಿಕೊಂಡು, ಮಿಕ್ಕಿದ್ದನ್ನು ಬಿಡಬೇಕು. ಕನ್ನಡದ ತಿಳುವಳಿಕಸ್ತರಿಗೆ ಇಂಗ್ಲೀಷಿನ ಪದಗಳನ್ನು ಕನ್ನಡಕ್ಕೆ ಸೇರಿಸಿದರೆ ಕನ್ನಡ ಕೆಡುತ್ತದೆ ಎಂಬ ಅನಿಸಿಕೆಯಿದೆ. ಆದರೆ ಈ ಮಡಿವಂತಿಕೆಯ ಅವಶ್ಯಕತೆಯಿಲ್ಲವಷ್ಟೇ ಅಲ್ಲ, ಈ ಮಡಿವಂತಿಕೆಯನ್ನು ಜನರೇ ದೂರಮಾಡಿಕೊಂಡಿದ್ದಾರೆ. ಯಾವ ನುಡಿಯಿಂದ ಬೇಕಾದರೂ ಕನ್ನಡಕ್ಕೆ ಪದಗಳು ಎರವಲು ಬರಬಹುದು. ಎರವಲು ಬಂದ ಪದಗಳು ಕನ್ನಡಜನಾಂಗದ "ನಾಲಿಗೆಯ ಪರೀಕ್ಷೆ"ಯಲ್ಲಿ ಪಾಸಾಗಿ ಅವುಗಳು ಯಾವ ರೂಪವನ್ನು ಪಡೆಯುತ್ತವೋ ಅವೆಲ್ಲ ಕನ್ನಡದ ಪದಗಳೇ.

ಇಂಗ್ಲೀಷನ್ನು ಮುಂದುವರೆದ ಮತ್ತು ಮುಂದುವರೆಯದ ಜನಾಂಗಗಳು ಕಾಣುವ ಬಗೆಯಲ್ಲಿ ಇರುವ ಹೆಚ್ಚು-ಕಡಿಮೆ

ಮುಂದುವರೆದ ಜನಾಂಗಗಳಿಗೂ ಮುಂದುವರೆಯದ (ಇಲ್ಲವೇ ಮುಂದುವರೆಯುತ್ತಿರುವ) ಜನಾಂಗಗಳಿಗೂ ಇಂಗ್ಲೀಷನ್ನು ನೋಡುವ ರೀತಿಯಲ್ಲಿ ಬಹಳ ವ್ಯತ್ಯಾಸಗಳಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಸೇರಿಸಿದ್ದೇವೆ. ಈ ಪಟ್ಟಿಯನ್ನು ಓದುವಾಗ ನಾವು - ಎಂದರೆ ಕನ್ನಡಿಗರು - ಆಯಾ ಸಂದರ್ಭಗಳಲ್ಲಿ ಯಾವ ನಿಲುವನ್ನು ಇಟ್ಟುಕೊಂಡಿದ್ದೇವೆ ಎಂದು ನೀವೇ ಯೋಚನೆ ಮಾಡಿದಾಗ ನಾವು ಮುಂದುವರೆಯದ ಜನಾಂಗಗಳಂತೆ ನಮ್ಮ ನುಡಿಯನ್ನೇ ಕಡೆಗಣಿಸಿ ಇಂಗ್ಲೀಷಿಗೆ ಹಾಕಬಾರದ ಮಣೆಯನ್ನು ಹಾಕುತ್ತಿದ್ದೇವೆ ಎಂಬ ಅರಿವು ನಿಮಗಾಗುತ್ತದೆ. ಇಲ್ಲಿ ನಾವು ಮುಂದುವರೆದ ಜನಾಂಗಗಳೆಂದು ಕರೆದಿರುವುದು ಉದಾಹರಣೆಗೆ ಜಪಾನೀಸರು, ಡಚ್ಚರು, ಫ್ರೆಂಚರು, ಜರ್ಮನ್ನರು, ಇಸರೇಲಿಗಳು, ತೆಂಕಣ ಕೊರಿಯನ್ನರು, ಮುಂತಾದವರು. ಮುಂದುವರೆಯದವೆಂದು ಕರೆದಿರುವ ಜನಾಂಗಗಳಿಗೆ ಉದಾಹರಣೆಗಳು ಎಲ್ಲಾ ಭಾರತೀಯ ನುಡಿಜನಾಂಗಗಳು, ಆಫ್ರಿಕಾದ ನುಡಿಜನಾಂಗಗಳು, ಮುಂತಾದವು.

(ಗಮನಿಸಿ: ಕೆಲವು ಜನಾಂಗದವರಿಗೆ ಇಲ್ಲಿ ಏನನ್ನು ಇಂಗ್ಲೀಷೆಂದು ಕರೆದಿರುವೆವೋ ಅದು ಫ್ರೆಂಚ್, ಡಚ್ ಮುಂತಾದ ಇತರ ಯೂರೋಪಿನ ಭಾಷೆಗಳಾಗಿವೆ)
  • ಮುಂದುವರೆದ ಜನಾಂಗಗಳು ಇಂಗ್ಲೀಷನ್ನು ಇನ್ನೊಂದು ನುಡಿಜನಾಂಗದವರೊಡನೆ ವ್ಯಾಪಾರ ಮತ್ತು ಅರಿವೆಚ್ಚಳಗಳಿಗೆ (ಅರಿವಿನ ಹೆಚ್ಚಳಗಳಿಗೆ) ಬಳಸುತ್ತಿವೆ. ಮುಂದುವರೆಯದವು ತಮ್ಮೊಳಗೇ. ವ್ಯಾಪಾರ ಮತ್ತು ಅರಿವೆಚ್ಚಳಗಳಿಗೆ ಇಡೀ ಜಗತ್ತಿನಲ್ಲೆಲ್ಲ ಇಂಗ್ಲೀಷನ್ನೇ ಬಳಸಿಕೊಳ್ಳಬೇಕೆಂಬ ತಪ್ಪುತಿಳುವಳಿಕೆಯು ಮುಂದುವರೆಯದ ಜನಾಂಗದವರಿಗೆ ಇದೆ.
  • ಮುಂದುವರೆದ ಜನಾಂಗಗಳು ಇಂಗ್ಲೀಷನ್ನು ತಮ್ಮ ನಾಡಿನ ಎಲ್ಲೆಯೊಳಗೆ, ಎಂದರೆ ತಮಗಾಗಿಯೇ ಕಟ್ಟಿರುವ ಯಾವ ಏರ್ಪಾಟುಗಳಲ್ಲೂ ಬಳಸುವುದಿಲ್ಲ. ಮುಂದುವರೆಯದವು ಬಳಸುತ್ತವೆ. ಮುಂದುವರೆದ ಜನಾಂಗಗಳಿಗೆ ಮುಂದುವರಿಕೆಗೂ ತಮ್ಮ ನಾಡಿನ ಏರ್ಪಾಟುಗಳು ತಮ್ಮದೇ ನುಡಿಯಲ್ಲಿರುವುದಕ್ಕೂ ಯಾವ ವಿರೋಧವೂ ಕಾಣಿಸುವುದಿಲ್ಲ; ಇನ್ನೂ ಅದು ಪೂರಕವಾಗಿಯೇ ಕಾಣುತ್ತದೆ.
  • ಮುಂದುವರೆದ ಜನಾಂಗಗಳು ತಮ್ಮ ನುಡಿಯನ್ನು ಕೈಬಿಟ್ಟು ಇಂಗ್ಲೀಷನ್ನೇ ತಮ್ಮ ಜನಾಂಗದವರು ಎಲ್ಲಾ ಕೆಲಸಗಳಿಗೂ ಬಳಸಬೇಕು ಎಂದು ತಿಳಿದಿಲ್ಲ. ಮುಂದುವರೆಯದವು ತಿಳಿದಿವೆ. ಮುಂದುವರೆಯದ ಜನಾಂಗಗಳಿಗೆ ತಮ್ಮ ನುಡಿಯ ಕೈಯಲ್ಲಿ ಏನೂ ಆಗುವುದಿಲ್ಲವೆಂಬ ತಪ್ಪು ತಿಳುವಳಿಕೆಯಿದೆ. ಆದರೆ ನಿಜಕ್ಕೂ ನೋಡಿದರೆ ಆಗುವುದು ಬಿಡುವುದು ನುಡಿಯ ಕೈಯಲ್ಲಲ್ಲ, ಜನರ ಕೈಯಲ್ಲಿ. ಮುಂದುವರೆಯದ ಜನಾಂಗದ ಜನರ ಕೈಯಲ್ಲಿ ಕೆಲಸವಾಗಿದ್ದರೆ ಆಗ ಅವರ ನುಡಿಯೇ ಎಲ್ಲಾ ಕೆಲಸಗಳಿಗೂ ಬಳಸಲ್ಪಡುತ್ತಿತ್ತು.
  • ಮುಂದುವರೆದ ಜನಾಂಗಗಳು ತಮ್ಮ ನುಡಿಯಲ್ಲಿ ಜ್ಞಾನ-ವಿಜ್ಞಾನಗಳ ಅರಿವೆಚ್ಚಳಗಳಿಗೆ ಬಳಸಲು ಸಾಧ್ಯವಿಲ್ಲವೆಂದು ತಿಳಿದಿಲ್ಲ. ಮುಂದುವರೆಯದವು ತಿಳಿದಿವೆ. ಈ ಜ್ಞಾನ-ವಿಜ್ಞಾನಗಳಿಗಂತೂ ತಮ್ಮ ನುಡಿಯು ಹೇಳಿ ಮಾಡಿಸಿಲ್ಲವೆಂದೂ ಇಂಗ್ಲೀಷನ್ನು ಹೇಳಿ ಮಾಡಿಸಿದೆಯೆಂದೂ ಇವುಗಳು ತಿಳಿದಿವೆ. ಇದು ಬರೀ ತಪ್ಪು.
  • ಮುಂದುವರೆದ ಜನಾಂಗಗಳು ಬೇರೆ ನುಡಿಜನಾಂಗಗಳೊಡನೆಯೂ ಮೊದಲು ತಮ್ಮ ನುಡಿಯಲ್ಲೇ ವ್ಯವಹರಿಸಲು ಹೊರಡುತ್ತವೆ. ಮುಂದುವರೆಯದವು ಇಂಗ್ಲೀಷಿನಲ್ಲಿ. ಮುಂದುವರೆದ ಜನಾಂಗಗಳಿಗೆ ತಮ್ಮ ನುಡಿಯನ್ನು ಎಲ್ಲೆಲ್ಲೂ ಬಳಸಿ ಅಭ್ಯಾಸವಾಗಿಹೋಗಿರುತ್ತದೆ. ಆದ್ದರಿಂದ ಇನ್ನೊಬ್ಬರೊಡನೆ ಮಾತನಾಡುವಾಗಲೂ ಮೊದಲಿಗೆ ತಮ್ಮ ನುಡಿಯನ್ನೇ ಬಳಸಲು ಮುಂದಾಗುತ್ತವೆ. ಆದರೆ ಮುಂದುವರೆಯದವಕ್ಕೆ ಬೇರೆ ಜನಾಂಗದವರೊಡನೆ ಮಾತನಾಡಿದಾಗೆಲ್ಲ ಇಂಗ್ಲೀಷನ್ನೇ ಬಳಸಬೇಕು, ಇಲ್ಲದಿದ್ದರೆ ತಮ್ಮನ್ನು ಕೀಳಾಗಿ ಅವರು ಕಂಡಾರು ಎಂಬ ಆಧಾರವಿಲ್ಲದ ಕೀಳರಿಮೆಯಿರುತ್ತದೆ.
  • ಮುಂದುವರೆದ ಜನಾಂಗಗಳು ಇಂಗ್ಲೀಷಿನಲ್ಲಿರುವ ಒಳ್ಳೆಯದನ್ನು ಬಳಸಿಕೊಂಡು ತಮಗೆ ಹಾನಿಯಾಗುವುದನ್ನು ಬಿಡುತ್ತಾರೆ. ಮುಂದುವರೆಯದವು ಹಾನಿಯಾಗುವುದನ್ನೇ ಹೆಚ್ಚು ತೆಗೆದುಕೊಳ್ಳುತ್ತವೆ. ಮುಂದುವರೆದ ಜನಾಂಗಗಳಿಗೆ ಇಂಗ್ಲೀಷಿನ ಮಹತ್ವ ಚೆನ್ನಾಗಿ ಗೊತ್ತಿದೆ. ಅದರಿಂದ ಸಿಗಬೇಕಾದ್ದೇನು ಎನ್ನುವುದು ಚೆನ್ನಾಗಿ ಗೊತ್ತಿದೆ. ಅದರಿಂದ ಏನನ್ನು ಒಳಕ್ಕೆ ಸೇರಿಸಿಕೊಳ್ಳಬಾರದು ಎಂದೂ ಚೆನ್ನಾಗಿ ಗೊತ್ತಿದೆ. ಆದ್ದರಿಂದ ಅವುಗಳಿಗೆ ಈ ವಿಷಯದಲ್ಲಿ ನಿಧಾನವಾಗಿ ಅಳತೆ ಮಾಡಿ ಬೇಕಾದ್ದನ್ನು ಬರಮಾಡಿಕೊಳ್ಳುವ ಶಕ್ತಿಯಿದೆ.
  • ಮುಂದುವರೆದ ಜನಾಂಗಗಳು ಅವಕಾಶ ಸಿಕ್ಕಾಗೆಲ್ಲ ತಮ್ಮ ನುಡಿಯನ್ನು ಪ್ರಪಂಚದಲ್ಲೆಲ್ಲ ಹರಡುವ ಪ್ರಯತ್ನ ಮಾಡುತ್ತವೆ. ಮುಂದುವರೆಯದವು ಇಂಗ್ಲೀಷನ್ನು. ಮುಂದುವರೆದ ಜನಾಂಗಗಳಿಗೆ ತಮ್ಮ ನುಡಿಯನ್ನು ಆದಷ್ಟೂ ಬಳಕೆಯಲ್ಲಿಟ್ಟಿರಬೇಕು, ಪ್ರಪಂಚದವರಿಗೆಲ್ಲ ಅದನ್ನು ಕಲಿಸಬೇಕು ಎಂಬ ಆಸೆಯಿರುತ್ತದೆ. ಆದರೆ ಮುಂದುವರೆಯದವಕ್ಕೆ ತಮ್ಮ ನುಡಿಯು ತಮಗೇ ಬೇಡವಾಗಿರುತ್ತದೆ. ಆದ್ದರಿಂದ ಅದನ್ನು ಹರಡುವ ಆಸೆಯಾಗಲಿ ಅದಕ್ಕೆ ಬೇಕಾದ ಯೋಗ್ಯತೆಯಾಗಲಿ ಅವುಗಳಿಗಿರುವುದಿಲ್ಲ.
  • ಮುಂದುವರೆದ ಜನಾಂಗಗಳಿಂದ ಅವರವರ ನುಡಿಗೆ ಹೆಚ್ಚು ಹೆಚ್ಚು ಪದಗಳು ಸೇರಿಸಲ್ಪಡುತ್ತಿದೆ. ಮುಂದುವರೆಯದವಿಂದ ಇಂಗ್ಲೀಷಿಗೆ. ಮುಂದುವರೆದ ಜನಾಂಗಗಳು ಹೊಸ ಸಂಶೋಧನೆಗಳನ್ನು ತಮ್ಮ ನುಡಿಯಲ್ಲೇ ಮಾಡುವುದರಿಂದ, ತಮ್ಮ ಏರ್ಪಾಟುಗಳಿಗೆ ತಮ್ಮ ನುಡಿಯನ್ನೇ ಬಳಸುವುದರಿಂದ ಅವುಗಳಲ್ಲಿ ಬೇಕಾಗುವ ಹೊಸ ವಸ್ತು ಮತ್ತು ಎಣಿಕೆಗಳಿಗೆ ತಮ್ಮ ನುಡಿಯ ಪದವನ್ನೇ ಸಹಜವಾಗಿ ಹುಟ್ಟಿಸುತ್ತವೆ. ಆದರೆ ಮುಂದುವರೆಯದವು ಎಲ್ಲೆಲ್ಲೂ ಇಂಗ್ಲೀಷನ್ನು ಬಳಸುವುದೇ ಹೆಗ್ಗಳಿಕೆಯೆಂದು ತಪ್ಪಾಗಿ ತಿಳಿದಿರುವುದರಿಂದ ಇವುಗಳಿಂದ ಇಂಗ್ಲೀಷಿನ ಪದಗಳು ಹುಟ್ಟಿಸಲ್ಪಡುತ್ತವೆ.
  • ಮುಂದುವರೆದ ಜನಾಂಗಗಳಿಗೆ ಇಂಗ್ಲೀಷಿನ ಬಗ್ಗೆ ಗೌರವವೂ ಇದೆ, ಹೊಟ್ಟೆಕಿಚ್ಚೂ ಇದೆ. ಮುಂದುವರೆಯದವಿಗೆ ಗೌರವವು ಮಾತ್ರ. ಮುಂದುವರೆದ ಜನಾಂಗಗಳು ಇಂಗ್ಲೀಷನ್ನು ಅಖಾಡದಲ್ಲಿ ಸೋಲಿಸಬೇಕಾದ ತನ್ನದೇ ಮಟ್ಟದ ಕುಸ್ತಿಯ ಪಟುವೆಂದು ತಿಳಿದಿರುತ್ತವೆ. ಆದರೆ ಮುಂದುವರೆಯದವಿಗೆ ಇಂಗ್ಲೀಷೆಂಬುದು ಅಖಾಡದಲ್ಲಿ ಎಂದಿಗೂ ಸೋಲಿಸಲಾರದ ಇಡೀ ಜಗತ್ತನ್ನೇ ಗೆಲ್ಲುವ ಕುಸ್ತಿಯ ಪಟುವೆಂಬ ಕೀಳರಿಮೆಯಿರುತ್ತದೆ.
  • ಮುಂದುವರೆದ ಜನಾಂಗಗಳಿಗೆ ತಮ್ಮ ನುಡಿಯ ಉಪಯೋಗ ಬರೀ ಜುಟ್ಟಿಗೆ ಮಲ್ಲಿಗೆ ಹೂವಿಗೆ ಎನಿಸುವುದಿಲ್ಲ. ಮುಂದುವರೆಯದವಿಗೆ ಅನಿಸುತ್ತದೆ. ಮುಂದುವರೆದ ಜನಾಂಗಗಳಲ್ಲಿ ತಮ್ಮ ನುಡಿಯೆಂದರೆ ಬರೀ ನಾಟಕ, ಕವಿತೆ, ಕಾದಂಬರಿ ಮುಂತಾದವುಗಳಿಗೆ ಮೀಸಲಾಗಿರುವುದು ಎಂಬ ಅನಿಸಿಕೆಯಿರುವುದಿಲ್ಲ. ಮುಂದುವರೆಯದವಕ್ಕೆ ಇವುಗಳಿಗೆ ಮಾತ್ರವೇ ತಮ್ಮ ನುಡಿ ಹೇಳಿಮಾಡಿಸಿದೆಯೆಂಬ ತಪ್ಪು ತಿಳುವಳಿಕೆಯಿರುತ್ತದೆ.
  • ಮುಂದುವರೆದ ಜನಾಂಗಗಳಿಗೆ ತಮ್ಮ ನುಡಿಯು ಇಂಗ್ಲೀಷಿಗಿಂತ ಕಡಿಮೆ ಸ್ಥಾನದಲ್ಲಿರುವುದಕ್ಕೆ ತಾವೇ (ಎಂದರೆ ಆ ಜನಾಂಗದ ಜನರೇ) ಕಾರಣವೆಂಬ ಅರಿವಿದೆ. ಮುಂದುವರೆಯದವಕ್ಕೆ ವಿಧಿ ಕಾರಣವೆಂಬ ತಪ್ಪುತಿಳುವಳಿಕೆಯಿದೆ. ಎಂದರೆ - ಮುಂದುವರೆದ ಜನಾಂಗಗಳಿಗೆ ನುಡಿಯ ಮೇಲು-ಕೀಳೆಂಬುದು ತಮ್ಮ ಮೇಲು-ಕೀಳಿನ ಸ್ಥಿತಿಯನ್ನೇ ಪ್ರತಿಬಿಂಬಿಸುತ್ತದೆಯೆಂಬುದರ ಅರಿವಿರುತ್ತದೆ. ಆದರೆ ಮುಂದುವರೆಯದವಕ್ಕೆ ತಮ್ಮ ನುಡಿ ಕೀಳಾಗಿರುವುದಕ್ಕೆ ತಮ್ಮ ಕೈಗೆಟುಕದಂತಹ ಶಕ್ತಿಗಳು ಕಾರಣವೆಂಬ ತಪ್ಪುತಿಳುವಳಿಕೆಯಿರುತ್ತದೆ.
  • ಮುಂದುವರೆದ ಜನಾಂಗಗಳಿಗೆ ತಮ್ಮ ನುಡಿಯಲ್ಲಿ ಯಾವ ಕೊರತೆಯೂ ಇದೆಯೆನಿಸುವುದಿಲ್ಲ. ಮುಂದುವರೆಯದವಿಗೆ ಇದೆಯೆನಿಸುತ್ತದೆ. ನಿಜಕ್ಕೂ ನೋಡಿದರೆ ಯಾವ ನುಡಿಯಲ್ಲೂ ಕೊರತೆಯೆಂಬುದಿರುವುದಿಲ್ಲ. ಕೊರತೆಯೆಲ್ಲಾದರೂ ಇದ್ದರೆ ಅದನ್ನಾಡುವ ಜನರಲ್ಲಿ. ಹೀಗಿರುವುದರಿಂದ ಮುಂದುವರೆಯದ ಜನಾಂಗಗಳಿಗೆ ಇಂಗ್ಲೀಷಿನ ಬಗ್ಗೆ ಅತಿ ಹೆಚ್ಚು ಮೋಹವಿರುವುದಿಲ್ಲ.
  • ಮುಂದುವರೆದ ಜನಾಂಗಗಳಿಗೆ ಒಂದಲ್ಲೊಂದು ದಿನ ಇಂಗ್ಲೀಷಿಗಿರುವ ಪಟ್ಟವನ್ನು ತಮ್ಮ ನುಡಿಯು ತೆಗೆದುಕೊಳ್ಳಬೇಕೆಂಬ ಹಂಬಲವಿದೆ, ತಮ್ಮ ಸರದಿಗಾಗಿ ಕಾಯುತ್ತಿವೆ. ಮುಂದುವರೆಯದವಿಗಿಲ್ಲ. ಮುಂದುವರೆಯದ ಜನಾಂಗಗಳಿಗೆ ತಮ್ಮ ನುಡಿಯು ಇನ್ನೇನು ಸಾಯಿತ್ತಿದೆ, ಇದು ಇಂಗ್ಲೀಷನ್ನು ಸೋಲಿಸುವ ಮಟ್ಟಕ್ಕೆ ಬರುವುದು ಹಾಗಿರಲಿ, ತಾನು ಅಡುಗೆಮನೆಯಲ್ಲಿ ಬದುಕಿ ಬಾಳುವುದೇ ಕಷ್ಟವಿದೆಯೆಂಬ ಹೇಡಿತನವಿರುತ್ತದೆ.
  • ಮುಂದುವರೆದ ಜನಾಂಗಗಳಲ್ಲಿ ಇಂಗ್ಲೀಷ್ ಬಾರದವರಿಗೆ ತಮ್ಮ ನಾಡಿನಲ್ಲಿ ತಾವೇ ಪರದೇಸಿಗಳೆನಿಸುವುದಿಲ್ಲ. ಮುಂದುವರೆಯದವಲ್ಲಿ ಅನಿಸುತ್ತದೆ. ಇದು ಏಕೆಂದರೆ ಮುಂದುವರೆಯದ ಜನಾಂಗಗಳಲ್ಲಿ ಇಂಗ್ಲೀಷನ್ನು ತಲೆಯಮೇಲೆ ಕೂಡಿಸಿಕೊಂಡು ಪ್ರತಿಯೊಂದಕ್ಕೂ ಇಂಗ್ಲೀಷು ಬೇಕೇ ಬೇಕೆಂಬ ಪರಿಸ್ಥಿತಿ ಹುಟ್ಟಿಬಿಟ್ಟಿರುವುದರಿಂದ. ಆದರೆ ಮುಂದುವರೆದ ಜನಾಂಗಗಳಲ್ಲಿ ಇಂಗ್ಲೀಷನ್ನು ಎಲ್ಲಿಡಬೇಕೋ ಅಲ್ಲಿಟ್ಟಿರುವುದರಿಂದ ಜನರಿಗೆ ಇಂಗ್ಲೀಷ್ ಬರದೆ ಹೋದರೂ ಎಲ್ಲಾ ಸೌಲತ್ತುಗಳೂ ಕಲಿಕೆಯೂ ಕೆಲಸವೂ ಸಿಗದೆ ಹೋಗುವುದಿಲ್ಲ.
  • ಮುಂದುವರೆದ ಜನಾಂಗಗಳಲ್ಲಿ ದುಡಿಮೆಯಲ್ಲಿ ಅವರವರೇ ಇಂಗ್ಲೀಷಿನಲ್ಲಿ ಮಾತನಾಡಿಕೊಳ್ಳುವುದಿಲ್ಲ. ಮುಂದುವರೆಯದವಲ್ಲಿ ಹೀಗಿದೆ. ಇದೇಕೆಂದರೆ ಅನ್ನವೆಂಬುದು ಇಂಗ್ಲೀಷಿನಿಂದಲೇ ಗಿಟ್ಟಬಲ್ಲುದು ಎಂಬ ತಪ್ಪು ತಿಳುವಳಿಕೆಯು ಮುಂದುವರೆಯದ ಜನಾಂಗಗಳಲ್ಲಿ ಚೆನ್ನಾಗಿ ಹಬ್ಬಿರುತ್ತದೆ. ಇಂಗ್ಲೀಷನ್ನು ಬಳಸದೆ ತಮ್ಮ ನುಡಿಯನ್ನೇನಾದರೂ ಬಳಸಿದರೆ ಅವರನ್ನು ಯಾರಾದರೂ ಕೀಳೆಂದು ತಿಳಿದಾರು ಎಂಬ ಹೆದರಿಕೆ ಅವರಿಗಿರುತ್ತದೆ.
  • ಮುಂದುವರೆದ ಜನಾಂಗಗಳಲ್ಲಿ ತಮ್ಮ ನುಡಿಯನ್ನು ಕಡೆಗಣಿಸಿದರೆ ಒಗ್ಗಟ್ಟು ಹಾಳಾಗುತ್ತದೆಯೆಂಬ ಅರಿವಿದೆ. ಮುಂದುವರೆಯದವಿಗಿಲ್ಲ. ಮುಂದುವರೆಯದವಿಗೆ ತಮ್ಮ ಒಗ್ಗಟ್ಟೇ ಬೇಕಾಗಿರುವುದಿಲ್ಲ. ತಮ್ಮ ಒಗ್ಗಟ್ಟಿನಿಂದ ಏನನ್ನು ಸಾಧಿಸಬಹುದು ಎಂಬ ಅರಿವೂ ಅವುಗಳಿಗಿರುವುದಿಲ್ಲ.
  • ಮುಂದುವರೆದ ಜನಾಂಗಗಳಲ್ಲಿ ತಿಳುವಳಿಕಸ್ತರು ಇಂಗ್ಲೀಷಿನಿಂದ ಜನರು ಕಲಿಯಬೇಕಾದ್ದನ್ನೆಲ್ಲ ತಮ್ಮ ನುಡಿಗೆ ಅನುವಾದಿಸಿಕೊಳ್ಳುತ್ತಾರೆ. ಮುಂದುವರೆಯದವಲ್ಲಿ ಅನುವಾದಿಸುವುದಿಲ್ಲ, ಇಂಗ್ಲೀಷ್ ಬಲ್ಲವರು ಮಾತ್ರ ಅದನ್ನು ಕಲಿಯುತ್ತಾರೆ. ಇದು ಏಕೆಂದರೆ ಮುಂದುವರೆದ ಜನಾಂಗಗಳಿಗೆ ತಮ್ಮ ಜನರೆಲ್ಲ ಆ ತಿಳುವಳಿಕೆಯ ಉಪಯೋಗವನ್ನು ಪಡೆಯಬೇಕು, ಏಳಿಗೆಯೆಂಬುದು ಆದಷ್ಟೂ ತಮ್ಮ ಜನಾಂಗದಲ್ಲಿ ಹಬ್ಬಬೇಕೆಂಬ ಆಸೆಯಿರುತ್ತದೆ. ಮುಂದುವರೆಯದವಕ್ಕೆ ಹಾಗೆ ಆಸೆಯಿರುವುದಿಲ್ಲ.
  • ಮುಂದುವರೆದ ಜನಾಂಗಗಳಲ್ಲಿ ಇಂಗ್ಲೀಷಿನ ಮಾಧ್ಯಮಗಳಿಗೆ ಕ್ಯಾರೆಯೆನ್ನುವವರಿಲ್ಲ. ಮುಂದುವರೆಯದವಲ್ಲಿ ಅವುಗಳದೇ ಎತ್ತಿದ ಕೈ. ಮಾಧ್ಯಮಗಳು ಇತ್ತೀಚೆಗೆ ಬಹಳ ಮುಖ್ಯವಾದ ಪಾತ್ರವನ್ನು ಪಡೆದುಕೊಂಡಿವೆ. ಇಂಗ್ಲೀಷ್ ಮಾಧ್ಯಮಕ್ಕೆ ಮುಂದುವರೆಯದ ಜನಾಂಗಗಳಲ್ಲಿ ಅತಿಹೆಚ್ಚು ಪ್ರಾಮುಖ್ಯ ಸಿಗುವುದಕ್ಕೆ ಕಾರಣವೇನೆಂದರೆ ಈ ಜನಾಂಗಗಳಿಗೆ ಕೇಳಬೇಕಾದ, ಓದಬೇಕಾದ ಸುದ್ದಿಯಿರುವುದು ಇಂಗ್ಲೀಷಿನಲ್ಲೇ ಎಂಬ ತಪ್ಪು ತಿಳುವಳಿಕೆ.
  • ಮುಂದುವರೆದ ಜನಾಂಗಗಳಲ್ಲಿ ವಿಶ್ವವಿದ್ಯಾಲಯಗಳಿಗೆ ಹೋಗಲು ಇಂಗ್ಲೀಷ್ ಕಲಿಯಬೇಕೆಂಬ ಕಟ್ಟಳೆಯಿಲ್ಲ. ಮುಂದುವರೆಯದವಲ್ಲಿದೆ. ವಿಶ್ವವಿದ್ಯಾಲಯಗಳು ಒಂದು ಜನಾಂಗದ ಏಳಿಗೆಯಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿರುತ್ತವೆ. ಆದರೆ ಮುಂದುವರೆಯದ ಜನಾಂಗಗಳಿಗೆ ಆ ವಿಶ್ವವಿದ್ಯಾಲಯಗಳನ್ನು ತಮ್ಮ ಜನರಿಗೋಸ್ಕರ ಮಾಡಬೇಕೆಂಬುದರ ಅರಿವೇ ಇರುವುದಿಲ್ಲ. ಹಾಗಿದ್ದಿದ್ದರೆ ಅವುಗಳಲ್ಲಿ ತಮ್ಮ ನುಡಿಯನ್ನೇ ಹೆಚ್ಚಾಗಿ ಬಳಸುತ್ತಿದ್ದವು.
  • ಮುಂದುವರೆದ ಜನಾಂಗಗಳಲ್ಲಿ ತಮ್ಮ ನುಡಿಯ ಸೊಲ್ಲರಿಮೆಯನ್ನು ಬಲ್ಲ ಪಂಡಿತರಿದ್ದಾರೆ. ಮುಂದುವರೆಯದವಲ್ಲಿ ಇಂಗ್ಲೀಷಿನ ಸೊಲ್ಲರಿಮೆಯನ್ನು. ಇದೇಕೆಂದರೆ ಮುಂದುವರೆದ ಜನಾಂಗಗಳಿಗೆ ತಮ್ಮ ನುಡಿಯನ್ನು ಆಳವಾಗಿ ತಿಳಿಯುವುದರಿಂದ ಬಹಳ ಉಪಯೋಗಗಳಿವೆಯೆಂಬ ಅರಿವಿರುತ್ತದೆ. ಮುಂದುವರೆಯದ ಜನಾಂಗಗಳಿಗೆ ತಮ್ಮ ನುಡಿಯಿಂದ ಯಾವ ಬಿಡಿಗಾಸು ಪ್ರಯೋಜನವೂ ಇಲ್ಲವೆನಿಸಿರುವುದರಿಂದ ಅವುಗಳ ಸೊಲ್ಲರಿಮೆಯನ್ನು ಬಲ್ಲವರು ಅವುಗಳಲ್ಲಿ ಇರುವುದಿಲ್ಲ.
  • ಮುಂದುವರೆದ ಜನಾಂಗಗಳ ಅತ್ಯುತ್ತಮ ಶಾಲೆಗಳು ಇಂಗ್ಲೀಷ್ ಮಾಧ್ಯಮದವಲ್ಲ. ಮುಂದುವರೆಯದವಲ್ಲಿ ಇಂಗ್ಲೀಷ್ ಮಾಧ್ಯಮದವು. ಇದೇಕೆಂದರೆ ಮುಂದುವರೆದ ಜನಾಂಗಗಳಿಗೆ ತಮ್ಮ ಮಕ್ಕಳು ತಮ್ಮ ನುಡಿಯಲ್ಲೇ ಕಲಿತು ಅದನ್ನು ಇನ್ನು ಹೆಚ್ಚು ಬೆಳೆಸಲಿ, ಅದರಿಂದ ಪಡೆಯುವುದೆಲ್ಲವನ್ನೂ ಪಡೆಯಲಿ ಎಂಬ ಆಸೆಯಿರುತ್ತದೆ. ಆದರೆ ಮುಂದುವರೆಯದ ಜನಾಂಗಗಳಿಗೆ ಅನ್ನವೆಂಬುದೇ ಇಂಗ್ಲೀಷಿನಿಂದ ಸಿಕ್ಕುವುದು ಎಂಬ ತಪ್ಪು ತಿಳುವಳಿಕೆಯಿರುತ್ತದೆ.
ಕನ್ನಡವು ಇಂಗ್ಲೀಷಿನ ಸ್ಥಾನವನ್ನು ಕಿತ್ತುಕೊಳ್ಳುವಂತೆ ಮಾಡುತ್ತೇವೆ ಎಂಬ "ಹುಚ್ಚು ಆಸೆ"ಯನ್ನು ಕನ್ನಡಿಗರು ಇಟ್ಟುಕೊಳ್ಳಬೇಕು!

ಸಾರಾಂಶವಾಗಿ ಹೇಳುವುದಾದರೆ ಇಂಗ್ಲೀಷಿನಿಂದ ಕಲಿಯಬೇಕಾದ್ದನ್ನು ಕಲಿಯುವುದು ಇವತ್ತು ಅನಿವಾರ್ಯ. ಆದರೆ ಇಂಗ್ಲೀಷಿನಿಂದಲೇ ಕನ್ನಡಿಗರೆಲ್ಲರ ಏಳಿಗೆಯಾಗುತ್ತದೆ, ಏಳಿಗೆಯ ಹಂಚಿಕೆಯಾಗುತ್ತದೆ ಎಂಬ ಹುಚ್ಚು ಅನಿಸಿಕೆಯನ್ನು ಕನ್ನಡಿಗರು ಕೈಬಿಡಬೇಕು. ಬಲು ಎತ್ತರದಿಂದ ಹರಿದುಕೊಂಡುಬಂದಿರುವ ಹೊಳೆಯನ್ನು ಹೇಗೆ ನಿಲ್ಲಿಸಲಾಗುವುದಿಲ್ಲವೋ ಹಾಗೆ ಸಾವಿರಾರು ವರ್ಷಗಳಿಂದ ಬಾಳಿಕೊಂಡು ಬಂದಿರುವ ಕನ್ನಡವನ್ನು ಕಡೆಗಣಿಸಿ ಇಂಗ್ಲೀಷನ್ನು ಅದರ ಬದಲಾಗಿ ಕರ್ನಾಟಕದಲ್ಲೆಲ್ಲ ಬಳಸಲಾಗುವುದಿಲ್ಲ. ಆದ್ದರಿಂದ ಏಳಿಗೆಯ ಹಂಚಿಕೆ ಮತ್ತು ಜ್ಞಾನ-ವಿಜ್ಞಾನಗಳಿಗೆ ಕನ್ನಡಿಗರು ಕೊಡಬೇಕಾದ ಮುಂದಿನ ಕೊಡುಗೆಗಳನ್ನೆಲ್ಲ ಮನಸ್ಸಿನಲ್ಲಿಟ್ಟು ಕನ್ನಡಕ್ಕೆ ಕನ್ನಡಿಗರಲ್ಲಿರುವ ಮೊದಲ ಸ್ಥಾನವನ್ನು ಗಮನಿಸಬೇಕು. ನಿಧಾನವಾಗಿ ಕನ್ನಡವನ್ನು ಕಲಿಕೆಯಲ್ಲಿ ಎಲ್ಲೆಲ್ಲೂ ಬಳಸುವಂತೆ ಮಾಡಬೇಕು. ಹಾಗೆಯೇ ಇವತ್ತಿನ ದಿವಸ ಗ್ರಾಹಕ ಸೇವೆ, ಸರ್ಕಾರದ ಲೆಕ್ಕಪತ್ರಗಳು, ಬೀದಿಗಳಲ್ಲಿ ಬರೆದಿರುವುದೆಲ್ಲ ಇಂಗ್ಲೀಷುಮಯವಾಗಿರುವುದು ಹೋಗಿ ಎಲ್ಲವೂ ಕನ್ನಡಮಯವಾಗಬೇಕು. ಕನ್ನಡಕ್ಕೆ ಇಲ್ಲೆಲ್ಲೂ ನಿಲ್ಲಲು ಕಾಲಿಲ್ಲವೆಂದೇನಿಲ್ಲ.

ಇವತ್ತು ಉನ್ನತಶಿಕ್ಷಣವೊಂದನ್ನು ಬಿಟ್ಟು ಮಿಕ್ಕ ಇನ್ನೆಲ್ಲೆಲ್ಲಿ ಇಂಗ್ಲೀಷಿನ ಬಳಕೆಯಾಗುತ್ತಿದೆಯೋ ಅಲ್ಲೆಲ್ಲ ಕನ್ನಡವು ಇಂಗ್ಲೀಷಿನ ಬದಲಾಗಿ ಬರುವಂತಾಗಿಸುವುದು ಬಹಳ ಸುಲಭ. ಈ ನಿಟ್ಟಿನಲ್ಲಿ ಸರ್ಕಾರಗಳು ಮತ್ತು ಜನರು ಕೆಲಸ ಮಾಡಬೇಕು. ಕೊನೆಗೆ ಉನ್ನತಶಿಕ್ಷಣವೂ ಕನ್ನಡದಲ್ಲಿ ದಕ್ಕುವುದಿಲ್ಲ ಎಂಬ ಪರಿಸ್ಥಿತಿಯನ್ನು ನಿಧಾನವಾಗಿ ತೆಗೆದುಹಾಕಬೇಕು.

ಇವತ್ತು "ಹುಚ್ಚು" ಎನಿಸಿದರೂ ಕನ್ನಡವು ಒಂದು ದಿನ ಇಂಗ್ಲೀಷಿನ ಪಾತ್ರವನ್ನು ಜಗತ್ತಿನಲ್ಲೆಲ್ಲ ವಹಿಸಬೇಕೆಂಬ ಕನಸನ್ನು ಕನ್ನಡಿಗರು ಇಟ್ಟುಕೊಳ್ಳಬೇಕು. ಅದಕ್ಕೆ ಬೇಕಾದ ಎಲ್ಲ ಅರ್ಹತೆಗಳೂ ಕನ್ನಡಕ್ಕಿದೆ. ಪ್ರಶ್ನೆ ಇಲ್ಲಿ ಬರುವುದು "ಕನ್ನಡಿಗರಿಗೆ ಆ ಅರ್ಹತೆ, ಯೋಗ್ಯತೆಗಳು ಇವೆಯೆ?" ಎಂಬುದು. ಆ ಅರ್ಹತೆ, ಯೋಗ್ಯತೆಗಳನ್ನು ಕನ್ನಡಿಗರು ಬರಿಸಿಕೊಳ್ಳಬೇಕು. ಅದಕ್ಕೆ ಇಂಗ್ಲೀಷನ್ನು ಉಪಯೋಗಿಸಿದರೂ ಚಿಂತೆಯಿಲ್ಲ.

ಮುಂದಿನ ಬರಹ: ಈ ಸರಣಿಯ ಕಡೆಯ ಬರಹ.

1 ಅನಿಸಿಕೆ:

Anonymous ಅಂತಾರೆ...

ಬರಹ ತುಂಬಾ ಚೆನ್ನಾಗಿದೆ ಗುರು....ಕನ್ನಡಿಗರು ತಮ್ಮ ಇಂಗ್ಲಿಷ್/ಹಿಂದಿ ವ್ಯಾಮೋಹ ಬಿಟ್ಟು ಕನ್ನಡದ ಏಳಿಗೆಗೆ ಚಿಂತಿಸಬೇಕು... ಕನ್ನಡ ಕಲಿಸಿ, ಬೆಳಸಿ, ಉಳಿಸ ಬೇಕು... ನಮ್ಮ ಮುಂದಿನ ಪೀಳಿಗೆ ಕನ್ನಡ ಎಂಬುದನ್ನು ಬರಿ ಆಡು ಭಾಷೆಯಾಗಿ ತಿಳಿಯದೆ... ಕಲಿಕೆಯ ಭಾಷೆಯನ್ನಾಗಿಸಬೇಕು. ಮತ್ತೊಮ್ಮೆ ನಿಮ್ಮ ತಿಳಿವಳಿಕೆಯ ಬರಹಕ್ಕೆ ನನ್ನಿ....

ಕ್ಲಾನ್ಗೊರೌಸ್

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails