ಗ್ರಾಹಕ ಹಕ್ಕು: ಆಚರಣೆ ಒಂದು, ಚಲಾವಣೆ ಮತ್ತೊಂದು

ವಿಶ್ವ ಗ್ರಾಹಕ ಹಕ್ಕುಗಳ ದಿನ ಅಂತ ಇದೇ ಮಾರ್ಚಿ ತಿಂಗಳ ೧೫ನೇ ತಾರೀಖು ಆಚರಣೆಯಾಯ್ತು. ಈ ದಿನದ ಆಚರಣೆ ಇಡೀ ಪ್ರಪಂಚದಲ್ಲೇ ನಡ್ಯುತ್ತೆ ಗುರು. ಯಾಕೆ ಗೊತ್ತಾ? 1962ನೇ ಇಸ್ವಿಯಲ್ಲಿ ಇದೇ ದಿನ ಅಮೇರಿಕದ ರಾಷ್ಟ್ರಪತಿ ಕೆನಡಿಯವರು ಅಮೇರಿಕದ ಗ್ರಾಹಕರ ಕಷ್ಟಗಳನ್ನು ನಿವಾರಿಸಲು ಒಂದು ಘೋಷಣೆಯನ್ನೇ ಮಾಡಿದ್ರಂತೆ. ಆ ಘೋಷಣೇಲಿ ಜಗತ್ತೇ ಅನುಸರಿಸೋ ಅಂತದ್ದೇನಿತ್ತಪ್ಪ ಅಂತೀರ? ಅತಿ ಸರಳವೇ ಆದ್ರೂ ಗ್ರಾಹಕರ ಅತಿ ಮುಖ್ಯ ಹಕ್ಕುಗಳಾದ:
  1. ಸುರಕ್ಷೆಯ ಹಕ್ಕು
  2. ಮಾಹಿತಿಯ ಹಕ್ಕು
  3. ಆಯ್ಕೆ ಮಾಡುವ ಹಕ್ಕು
  4. ಅಳಲುಗಳನ್ನು ಹೇಳಿಕೊಳ್ಳುವ ಹಕ್ಕುಗಳ
ಬಗ್ಗೆ ಇಲ್ಲಿ ಹೇಳಿದಾರೆ ಗುರು. ಅಯ್ಯೋ, ಇದ್ರಲ್ಲೇನು ಹೊಸದಿದೆ ಅಂತೀರ? ಆದ್ರೆ ಇವೆಲ್ಲಾ ಓದಿದಾಗ ಸರಳ ಅನಿಸಿದ್ರೂ ಮಾರುಕಟ್ಟೇಲಿ ಕನ್ನಡಿಗ ಗ್ರಾಹಕ ಮೋಸ ಹೋಗ್ತಿರೋದು ಈ ಹಕ್ಕುಗಳ ಅನುಷ್ಠಾನ ಹೇಗೆಂಬುದರ ಗೊಂದಲದಿಂದ್ಲೇ! ಹಾಗೆ ನೋಡಿದ್ರೆ ನಮ್ಮ ಸುತ್ತಲಲ್ಲೇ ನಾವು ಈ ನಾಲ್ಕೂ ಹಕ್ಕುಗಳಿಂದ ವಂಚಿತರಾಗ್ತಿರೋ ಉದಾಹರಣೆ ಕಾಣತ್ತೆ ಗುರು.. ಬನ್ನಿ ನೋಡ್ಮ.

ಸುರಕ್ಷೆ

ನೀವು ಕೊಳ್ಳುವ ಅಡುಗೆ ಅನಿಲದ ಸಿಲಿಂಡರ್ ಮೇಲೆ ಸುರಕ್ಷತಾ ಮಾಹಿತಿ ಕನ್ನಡದಲ್ಲಿ ಇದೆಯೇ? ಇರಲೇಬೇಕು ತಾನೆ? ಏಕಿಲ್ಲ? ಈ ಪ್ರಶ್ನೆ ನಿಮಗೆ ಹೊಳೆದಿದೆಯೇ? ಹೊಳೆದಿದ್ರೆ ಅದಕ್ಕೆ ಏನ್ ಮಾಡಿದೀರ? ಏಕೆ ಇನ್ನೂ ಸರಿ ಹೋಗಿಲ್ಲ?



ಮಾಹಿತಿ


ನೀವು ಮಾಡಿಸಿಕೊಳ್ಳುವ ಮುಖ್ಯ ಆರೋಗ್ಯ ತಪಾಸಣೆಗಳ ಬಗ್ಗೆ ಮಾಹಿತಿ ನಿಮಗೆ ಕನ್ನಡದಲ್ಲ ಸಿಗುತ್ತಿದೆಯೇ? ಏಕೆ ಸಿಗುತ್ತಿಲ್ಲ? ಕನ್ನಡ ಅದಕ್ಕೆ ಅರ್ಹವಲ್ಲವೋ, ಅಥವಾ ನಾವು ಆ ಮಾಹಿತಿಗೇ ಅರ್ಹರಲ್ಲವೋ?

ಆಯ್ಕೆ

ಡಿ.ಟಿ.ಎಚ್ ಸೇವೆಯ ಪ್ಯಾಕ್ ಆಯ್ಕೆ ಮಾಡುವಾಗ ಅವುಗಳ ವಿವರ ನಿಮಗೆ ಕನ್ನಡದಲ್ಲಿ ಸಿಗುತ್ತಾ? ಇಲ್ವಾ? ಏಕೆ ಸಿಗಲ್ಲ, ಅದು ನಿಮ್ಮ ಆಯ್ಕೆ ಸುಲಭ ಮಾಡಬಲ್ಲದು ಅಂತ ನಿಮಗೆ ಹೊಳೆದಿಲ್ವ? ಬೇರೆ ಎಲ್ಲಾ ಭಾಷೆಗಳಲ್ಲಿ ಸೇವೆ ಸಿಗತ್ತೆ ಅಂತ ಕನ್ನಡ ಬಿಟ್ಟು ಆ ಭಾಷೆಗಳಲ್ಲೇ ವ್ಯವಹರಿಸೋದು ಯಾವ ಬುದ್ಧಿವಂತ ಗ್ರಾಹಕರ ಲಕ್ಷಣ ಗುರು?

ಅಳಲು/ದೂರು

ಬ್ಯಾಂಕುಗಳಲ್ಲಿ ನೀವು ಯಾವ ಭಾಷೆಯಲ್ಲಿ ದೂರು ಕೊಡ್ತಿದೀರ? ದೂರಿನ ಬಗ್ಗೆ ಯೋಚನೆ ನೀವು ಯಾವ ಭಾಷೆಯಲ್ಲಿ ಮಾಡ್ತೀರ? ಈ ವ್ಯತ್ಯಾಸದ ಪರಿಣಾಮ ಏನು ಅಂತ ಯೋಚನೆ ಮಾಡಿದೀರ? ಇದರಿಂದ ಕನ್ನಡಿಗರಿಗೆ ಉದ್ಯೋಗ-ವಂಚನೆಯಲ್ಲದೆ, ನಿಮ್ಮ ಸಮಸ್ಯೆ ಬ್ಯಾಂಕಿಗೆ ಸರಿಯಾಗಿ ಅರ್ಥವಾಗದೇ ಇರುವುದೂ ಸಾಧ್ಯ!

ಒಟ್ಟಿನಲ್ಲಿ ಗ್ರಾಹಕನ ಹಕ್ಕುಗಳ ದಿನಾಚರಣೆ ಮಾಡುವಾಗ ಈ ನಮ್ಮ ಹಕ್ಕುಗಳ ಅನುಷ್ಠಾನ ಏಕೋ ಆಗ್ತಿಲ್ಲ ಅಂತ ಅನಿಸೋದು ಬೇಡ್ವ ಗುರು? ಆದ್ರೆ ಇದಕ್ಕೆ ಕಾರಣ ಏನು? ಕಾನೂನಾ? ನಾವಾ? ಗ್ರಾಹಕ ಹಕ್ಕು ದಿನಾಚರಣೆಯ ಹಿನ್ನೆಲೆಯಲ್ಲಿ ನಾವೆಲ್ಲಾ ಕನ್ನಡಿಗ ಗ್ರಾಹಕರಾಗಿ ನಮ್ಮ ಒಳಿತಿಗಾಗಿಯೇ ಈ ರೀತಿಯ ಯೋಚನೆ ಮಾಡೋದು ಒಳ್ಳೇದು ಅಂತ ಅನಿಸಲ್ವ ಗುರು?

2 ಅನಿಸಿಕೆಗಳು:

Priyank ಅಂತಾರೆ...

ಈ ರೀತಿ ಯೋಚನೆ ಮಾಡದು ಖಂಡಿತ ಒಳ್ಳೇದು ಗುರು.
ನಮ್ಮ ಸುತ್ತಲು ನೋಡಿದರೆ ತಿಳಿಯುತ್ತೆ ಕೆನಡಿಯವರ ಘೋಷಣೆ ಹೇಗೆ ಮಣ್ಣಿಗೆ ತೂರಿದ್ದಾರೆ ನಮ್ಮ ಕೆಲವು ಉದ್ದಿಮೆದಾರರು ಅಂತ.

Akshaya ಅಂತಾರೆ...

vijay malya, narayanamurthy are the shining examplez for that

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails