ಸಂಸ್ಕೃತ ವಿ.ವಿ : ಈಗ ಸರ್ಕಾರ ಏನ್ಮಾಡಬೇಕು?

ಘನ ಕರ್ನಾಟಕ ರಾಜ್ಯಸರ್ಕಾರವು ಸ್ಥಾಪಿಸಲು ಮುಂದಾಗಿರೋ ಸಂಸ್ಕೃತ ವಿಶ್ವವಿದ್ಯಾಲಯವು ನಮ್ಮ ನಾಡಿಗೆ ಬೇಕೇ? ಬೇಡವೇ? ಎನ್ನುವುದರ ಬಗ್ಗೆ ಸಮಸ್ತ ಕನ್ನಡಿಗರ ಹೆಮ್ಮೆಯ ಪತ್ರಿಕೆಯಾದ ವಿಜಯಕರ್ನಾಟಕದಲ್ಲಿ ಇತ್ತೀಚಿಗೆ ಒಂದು ಸಂವಾದ ನಡೀತು. ಇದರಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಬೇಕೆನ್ನೋ ವಾದವನ್ನು ಮಂಡಿಸಿದ ಮೊದಲಿಗರು ಡಾ. ಎಸ್.ಎಲ್.ಭೈರಪ್ಪನವರು. ಆಮೇಲೆ ಶತಾವಧಾನಿ ರಾ.ಗಣೇಶ್, ಡಾ. ಚಿದಾನಂದಮೂರ್ತಿ, ಡಾ. ಜಿ.ವೆಂಕಟಸುಬ್ಬಯ್ಯ, ಪ್ರೊ.ಎಲ್.ಎಸ್.ಶೇಷಗಿರಿರಾವ್ ಇವರುಗಳು ಇದೇ ವಾದಕ್ಕೆ ಬೇರೆ ಬೇರೆ ಮಗ್ಗುಲುಗಳಿಂದ ಶಕ್ತಿ ತುಂಬಲು ಪ್ರಯತ್ನ ನಡೆಸಿದರು. ಸಂಸ್ಕೃತ ವಿಶ್ವವಿದ್ಯಾಲಯ ಬೇಡವೇ ಬೇಡ ಎಂದವರಲ್ಲಿ ಶ್ರೀಯುತರಾದ ಬರಗೂರು ರಾಮಚಂದ್ರಪ್ಪ, ಜಿ.ಕೆ.ಗೋವಿಂದರಾವ್ ಮೊದಲಾದವರಿದ್ದರು. ಇಡೀ ವಾದ ಸಂವಾದದಲ್ಲಿ ಅಸಂಬದ್ಧವಿಲ್ಲದೆ ತೂಕವಾಗಿ ಬರೆದ ಡಾ.ಕೆ.ವಿ.ನಾರಾಯಣರಂತಹ ಭಾಷಾತಜ್ಞರೂ ಇದ್ದರು. ಇಡೀ ಸಂವಾದವನ್ನು ಸಂಸ್ಕೃತ ವೇದವಿಶ್ವವಿದ್ಯಾಲಯವು ಕರ್ನಾಟಕಕ್ಕೆ ಬೇಕು ಅನ್ನುವುದರಿಂದ ಆರಂಭವಾಗಿಸಿ ಸಂಸ್ಕೃತ ವಿಶ್ವವಿದ್ಯಾಲಯ ಬೇಗ ಶುರುವಾಗಲೀ ಅನ್ನೋದ್ರು ಮೂಲಕ ಕೊನೆಗೊಳಿಸಲಾಯ್ತು. ಎರಡನ್ನೂ ಮಾಡಿದವರು ಡಾ. ಭೈರಪ್ಪನವರು.

ವಿ.ವಿ ಬೇಕೆನ್ನುವ ವಾದದ ತಿರುಳು

ಈ ಸಂವಾದದಲ್ಲಿ ವಿಷಯವನ್ನು ಜಾಣತನದಿಂದ ಸಂಸ್ಕೃತ ವಿಶ್ವವಿದ್ಯಾಲಯದಿಂದ ಸಂಸ್ಕೃತದ ಹಿರಿಮೆಯೆಡೆಗೆ ತಿರುಗಿಸಿದ್ದೇ ಹೆಚ್ಚು. ಸಂಸ್ಕೃತದ ವ್ಯಾಕರಣ ಕನ್ನಡದ ವ್ಯಾಕರಣಕ್ಕೆ ಮೂಲ ಎಂಬ ಪೆದ್ದುಮಾತಿನಿಂದ ಹಿಡಿದು ಸಂಸ್ಕೃತವನ್ನು ಒಪ್ಪಿದ, ಬಳಸಿದ ಕನ್ನಡದ ಹಿರಿಯರ ಬಗ್ಗೆಯೂ, ಹೊರದೇಶದವರ ಬಗ್ಗೆಯೂ ಮಾತನಾಡಲಾಯ್ತು. ಇಡೀ ಭಾರತದ ಜನರೆಲ್ಲಾ ಬಳಸುವ ಸಾಮಾನ್ಯ ಪದಗಳನ್ನು ಹುಟ್ಟು ಹಾಕಬೇಕೆಂಬ ಮಹಾಮೂರ್ಖತನವನ್ನು ಒಂದು ಶಿಕ್ಷಣ ತಜ್ಞರ ಸಮಿತಿ ಯೋಚಿಸಿತ್ತು ಮತ್ತು ಹಾಗೆ ತರಲು ಮುಂದಾಗಿತ್ತು ಎಂಬ ಬೆರಗುಗೊಳಿಸುವ ಸತ್ಯವೂ ಈ ಸಂದರ್ಭದಲ್ಲಿ ಪ್ರಪಂಚದ್ ಮುಂದೆ ಮತ್ತೊಮ್ಮೆ ಹೊರಬಂತು. (ಈ ಕಾರಣದಿಂದಲೇ ಕೂಡುವುದು ಸಂಕಲನದಾಗಿ, ಕಳೆಯುವುದು ವ್ಯವಕಲನವಾಗಿ, ತಗ್ಗುಗನ್ನಡಿ ಉಬ್ಬುಗನ್ನಡಿಗಳು ನಿಮ್ನದರ್ಪಣ ಪೀನದರ್ಪಣಗಳಾಗಿ, ಎಲೆಹಸಿರು ಪತ್ರಹರಿತ್ತಾಗಿ... ಕನ್ನಡದಲ್ಲಿನ ಕಲಿಕೆ ಕನ್ನಡಿಗರಿಗೆ ಕಬ್ಬಿಣದ ಕಡಲೆಯಾದಂತಾಗಿರೋದು) ಸಂಸ್ಕೃತದಲ್ಲಿ ಭಾರೀ ಜ್ಞಾನ ಸಂಪತ್ತಿದೆ, ಅದರಿಂದ ಕನ್ನಡಿಗರಿಗೆ – ಭಾರತಕ್ಕೆ, ಜ್ಞಾನ ವಿಜ್ಞಾನ ತಂತ್ರಜ್ಞಾನ ತರಲು ಈ ವಿಶ್ವವಿದ್ಯಾಲಯ ಸಾಧನ ಎನ್ನಲಾಯಿತು. ಈ ಜನರೇ ಸಂಸ್ಕೃತವು ಹಿಂದೆ ಬ್ರಾಹ್ಮಣರ ಸ್ವತ್ತಾಗಿತ್ತು, ಈಗ ಎಲ್ಲರಿಗೂ ಈ ವಿವಿಯ ಮೂಲಕ ಸಿಗಲು ಸಾಧ್ಯ ಎಂದಂದ ಮಾತನ್ನ ಕಾಣಬೇಕಾಯ್ತು. ಜೊತೆಯಲ್ಲಿಯೇ ಕನ್ನಡ ಇನ್ನು ಕೆಲ ದಶಕಗಳಲ್ಲಿ ಸತ್ತು ಹೋಗುವ ಭಾಷೆ. ಅದಕ್ಕೆ ಜೀವ ನೀಡಲು ಸಂಸ್ಕೃತ ವಿವಿಯ ಅಗತ್ಯವಿದೆ ಎನ್ನುವರ್ಥದ ಮಾತೂ ತೇಲಿಬಂತು. ಇದೆಲ್ಲಾ ಸಮರ್ಥನೆಗಳು ಒಂದೆಡೆಯಾದರೆ, ಮತ್ತೊಂದೆಡೆ ಕನ್ನಡ ನುಡಿಯ ವೈಜ್ಞಾನಿಕ ಅಧ್ಯಯನವಾಗಲಿ ಎನ್ನುವ, ಕನ್ನಡದ ನುಡಿಯರಿಮೆಯ ನಿಜ ವಿದ್ವಾಂಸರನ್ನು ಗೇಲಿ ಮಾಡಿದ್ದೂ ನಡೆಯಿತು. ಸಂಸ್ಕೃತ ವಿವಿಗೆ ವಿರುದ್ಧವಾಗಿದ್ದ ಸಂಸ್ಕೃತ ವಿದ್ವಾಂಸರನ್ನು ತಮ್ಮ ನಿಲುವಿಗೆ ವಿರುದ್ಧರೆಂಬ ಕಾರಣಕ್ಕೆ ಮಾಜಿಗಳೆಂದು ಹಂಗಿಸಿದ್ದೂ ಆಯಿತು. ಭೈರಪ್ಪನವರಂತೂ ತಮ್ಮ ಕಡೆಯ ಬರಹದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಬೇಡವೆಂದು ಬರೆದವರ ಕುಲಮೂಲಗಳನ್ನೆಲ್ಲಾ ಹಿಡಿದು ಮಾನಸಿಕ ವಿಷ್ಲೇಷಣೆಗೊಳಪಡಿಸಿದವರಂತೆ ಅವರನ್ನು ಮೂರು ವರ್ಗವಾಗಿಸಿ, ಅವರ ವಿರೋಧಕ್ಕೆ ಕಾರಣಗಳೇನು ಎಂಬ ವಿಶ್ಲೇಷಣೆಯಲ್ಲಿ ತೊಡಗುವ ಮೂಲಕ ಸಂವಾದದ ಮೂಲವಿಷಯವನ್ನೇ ಗೌಣವಾಗಿಸಿಬಿಟ್ಟರು. ಸಂಸ್ಕೃತ ವಿಶ್ವವಿದ್ಯಾಲಯದಿಂದ ಕನ್ನಡ, ಕರ್ನಾಟಕ ಮತ್ತು ಕನ್ನಡಿಗರಿಗೆ ಬಹಳ ಶ್ರೇಯಸ್ಸಿದೆ, ಏಕೆಂದರೆ ಕನ್ನಡ ಸಂಸ್ಕೃತದ ಮೇಲೆ ಬಹುವಾಗಿ ಅವಲಂಬಿತವಾಗಿದೆ ಎನ್ನುವ ಅಭಿಪ್ರಾಯವೂ ವ್ಯಕ್ತವಾಯಿತು. ಭಾರತೀಯ ಸಂಸ್ಕೃತಿ ಹಿರಿಮೆಯನ್ನರಿಯಲು ಈ ವಿಶ್ವವಿದ್ಯಾಲಯ ಬೇಕು ಅನ್ನಲಾಯಿತು. ಸ್ವಲ್ಪ ಚೌಕಾಸಿ ಮಾಡ್ಕೊಳ್ಳೋ ಹಾಗೆ ಇದರಲ್ಲಿ ಸಂಸ್ಕೃತದ ಜೊತೆ ಪಾಲಿ, ಪ್ರಾಕೃತ ಇತ್ಯಾದಿಗಳೂ ಇರಲಿ ಅನ್ನಲಾಯಿತು, ಇದನ್ನು ಕನ್ನಡ-ಸಂಸ್ಕೃತ ವಿಶ್ವವಿದ್ಯಾಲಯ ಅನ್ನಬೇಕು ಅನ್ನಲಾಯಿತು ಮತ್ತು ಇದರ ಹೆಸರಿಂದ ವೇದ ಅನ್ನುವುದನ್ನು ಕೈಬಿಡಬೇಕು ಅನ್ನಲಾಯಿತು. ಇದ್ಯಾವುವೂ ನಿಜವಾದ ಸಂವಾದ ಅನ್ನಿಸಲೇ ಇಲ್ಲಾ ಗುರು!

ಸರ್ಕಾರ ಕೊಡಬೇಕಾಗಿರೋ ಸ್ಪಷ್ಟನೆ!

ಕರ್ನಾಟಕ ಸರ್ಕಾರ ಮೊದಲಿಗೆ ನಾಡಿಗೆ ಸ್ಪಷ್ಟಪಡಿಸಬೇಕಿರೋ ಕೆಲವಿಷಯಗಳಿವೆ. ಈ ವಿಶ್ವವಿದ್ಯಾಲಯದ ಹೆಸರಲ್ಲಿ ವೇದ ಎಂಬುದಿದೆಯೋ? ಇದ್ದಲ್ಲಿ ಈ ವಿವಿಯಲ್ಲಿನ ಕಲಿಕೆ ವೇದಕ್ಕೆ ಮಾತ್ರಾ ಸೀಮಿತವೋ? ಅಥವಾ ಇದು ಸಂಸ್ಕೃತ ವಿಶ್ವವಿದ್ಯಾಲಯವೋ? ಈ ಉದ್ದೇಶಿತ ವಿಶ್ವವಿದ್ಯಾಲಯದ ಕಾರ್ಯವ್ಯಾಪ್ತಿ ಏನು? ಇಲ್ಲಿ ಏನು ಕೆಲಸಗಳು ನಡೆಯುತ್ತವೆ? ಇದರಿಂದ ಕನ್ನಡ, ಕನ್ನಡಿಗ ಮತ್ತು ಕರ್ನಾಟಕಗಳಿಗೆ ಆಗುವ ಯೋಜಿತ ಉಪಯೋಗಗಳೇನು? ಇವನ್ನೆಲ್ಲಾ ಸ್ಪಷ್ಟಪಡಿಸದೆ ಕಾಲ್ಪನಿಕ ಕಾರ್ಯಕ್ಷೇತ್ರ ಮತ್ತು ಕಾಲ್ಪನಿಕ ಬೆದರಿಕೆಗಳನ್ನು ಮುಂದಿಟ್ಟುಕೊಂಡು ಬೇಕು ಅಥವಾ ಬೇಡ ಅನ್ನೋ ವಾದಗಳನ್ನು ಅರ್ಥಪೂರ್ಣವಾಗಿ ಮಾಡೋದಾದ್ರೂ ಹೇಗೆ?

ಏನೆಂದರೂ ಸಂಸ್ಕೃತ ವಿಶ್ವವಿದ್ಯಾಲಯ ಕನ್ನಡಿಗರಿಗೆ ಆದ್ಯತೆಯಲ್ಲ!

ನಿಜಕ್ಕೂ ಇಂದಿನ ಕರ್ನಾಟಕದಲ್ಲಿ ಕನ್ನಡಿಗರ ಬದುಕಿನ ಅಗತ್ಯಗಳೇನು? ಕನ್ನಡ ನುಡಿಯರಿಮೆಯ ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳೇನು? ಇದರಿಂದಾಗಿ ನಾಡಿನಲ್ಲಿ ಕನ್ನಡದ ಬಳಕೆ ಉಳಿಕೆ ಮತ್ತು ಕನ್ನಡಿಗರ ಏಳಿಗೆ ಹೇಗೆ ಸಾಧಿಸಬೇಕು ಎಂಬುದೆಲ್ಲಾ ನುಡಿಯರಿಗರ, ಆ ಮೂಲಕ ಕರ್ನಾಟಕ ರಾಜ್ಯಸರ್ಕಾರದ ಆದ್ಯತೆಯಾಗಬೇಕಿತ್ತು. ಇಂದು ಕರ್ನಾಟಕ ಸರ್ಕಾರ ಒಂದು ಅನ್ನ ಕೊಡುವ ಕಲಿಕೆಯ ವಿ.ವಿ ತೆರೆಯಲು ಸಹಾಯಮಾಡಿದ್ದರೆ ಈ ತೆರೆನಾದ ವಿರೋಧ ಇರುತ್ತಿರಲಿಲ್ಲವೇನೊ! ಆದರೆ ಸಂಸ್ಕೃತ ವೇದ ವಿಶ್ವವಿದ್ಯಾಲಯವು ನಿಶ್ಚಿತವಾಗಿ ಕನ್ನಡಿಗರಿಗೆ ಅನ್ನ ಗಳಿಸಿಕೊಡುವ ಸಂಸ್ಥೆಯಾಗಲಾರದು, ಅಥವಾ ಆ ಕಡೆಗಿನ ಅಗತ್ಯವಿರುವ ದಿಟ್ಟ ದಾಪುಗಾಲಾಗಲಾರದು. ಹಾಗಾದರೆ ಎಲ್ಲಾ ವಿವಿಗಳ ಗುರಿಯೂ ಅನ್ನ ಗಳಿಸಿಕೊಡುವುದೇ ಆಗಿಹುದೇನು? ಎಂಬಂತಿಲ್ಲ. ಅನ್ನ ಗಳಿಸಿಕೊಡದ ವಿದ್ಯೆ ನಮ್ಮ ರಾಜ್ಯಸರ್ಕಾರದ ಇಂದಿನ ಆದ್ಯತೆಯಾಗಿದೆ ಅನ್ನುವುದು ಈ ಮಾತಿನ ಅರ್ಥ. ಅದಾಗಬಾರದೆಂಬುದು ಆಶಯ. ಇದಕ್ಕಿಂತ ಮುಖ್ಯವಾಗಿ, ಇದು ಕನ್ನಡ ನುಡಿಯ ಸ್ವರೂಪ ಅರಿಯುವ, ಬೆಳೆಯುವ ಹೆಜ್ಜೆಗಳಿಗೆ ವಿರುದ್ಧ ದಿಕ್ಕಿನ ನಡೆಯಾಗುವುದು ಖಚಿತ. ಕನ್ನಡಿಗರಲ್ಲಿ ಮತ್ತಷ್ಟು ಮೇಲುಕೀಳು, ಮತ್ತಷ್ಟು ಮೇಲು ಕನ್ನಡ- ಕೆಳ ಕನ್ನಡವೆಂಬ ಭೇದಭಾವಗಳಿಗೆ ಕಾರಣವಾಗುವ ಸಂಭವವೇ ಹೆಚ್ಚು. ಇದು ತನ್ನ ಮನೆಮಕ್ಕಳನ್ನು ಉಪವಾಸ ಕೆಡವಿ ನೆರೆಮನೆ ಮಕ್ಕಳಿಗೆ ಅನ್ನವಿಟ್ಟಂತೆ ಅಷ್ಟೆ. ಹಾಗಾಗಿ ಸಂಸ್ಕೃತ ವಿಶ್ವವಿದ್ಯಾಲಯ ಆದ್ಯತೆಯ ವಿಷಯವಲ್ಲದ ಕಾರಣ ಸರ್ಕಾರ ಇದರ ಸ್ಥಾಪನೆಗೆ ಮುಂದಾಗುವ ತುರ್ತಿಲ್ಲವೆನ್ನುವುದೇ ವಾಸ್ತವವಾಗಿದೆ.

ಸಂಸ್ಕೃತ ತಾಯಿಯಾದರೂ ಅಷ್ಟೆ! ದಾಯಿಯಾದರೂ ಅಷ್ಟೆ!

ಸಂಸ್ಕೃತದಿಂದ ಕನ್ನಡ ಬಹಳ ಪಡೆದಿದೆ, ಪಡೆಯಬೇಕಾದ್ದು ಕೂಡಾ ಬಹಳ ಇರಬಹುದು. ಸಂಸ್ಕೃತವು ಸಮ್ಯಕ್ ಕೃತವಾದ ಪರಿಪೂರ್ಣ(?)ವಾದ ಸಮೃದ್ಧವಾದ ಭಾಷೆಯಿರಬಹುದು. ಇಡೀ ಜಗತ್ತೇ ಅದನ್ನು ಕೊಂಡಾಡುತ್ತಿರಬಹುದು. ಕನ್ನಡನಾಡಿನ ಆಗಿಹೋದ, ಮಾಗಿದ ವಿದ್ವಜ್ಜನರೇ ಸಂಸ್ಕೃತವನ್ನು ಪೂಜಿಸುತ್ತಿರಬಹುದು. ಇದ್ಯಾವುದೂ ಕರ್ನಾಟಕ ರಾಜ್ಯಸರ್ಕಾರಕ್ಕೆ ಸಂಸ್ಕೃತ/ ಸಂಸ್ಕೃತದಲ್ಲಿರುವ ವೇದದ ವಿಶ್ವವಿದ್ಯಾಲಯವೆನ್ನುವುದು ಆದ್ಯತೆಯ ವಿಷಯವಾಗಲು ಕಾರಣವಾಗಲಾರದು, ಆಗಬಾರದು.

ಕನ್ನಡ ಸಂಸ್ಕೃತದಿಂದ ಬೇರೆಯೇ ಆದ ಭಾಷೆ. ಇದು ಈ ಮಣ್ಣಿನ ಜನರ ಜೀವಂತ ಭಾಷೆ. ಈ ಭಾಷೆಗೆ ತನ್ನದೇ ಆದ ವ್ಯಾಕರಣವಿದೆ. ತನ್ನಕಾಲಮೇಲೆ ತಾನು ನಿಲ್ಲಬಲ್ಲ ತಾಕತ್ತು, ನಿಲ್ಲಬೇಕೆಂಬ ಹಂಬಲವಿದೆ ಮತ್ತು ಇದು ಕನ್ನಡಿಗರ ಏಳಿಗೆಗೆ ಇರುವ ದಾರಿಯಾಗಿದೆ. ಹಾಗಾಗಿ “ಕನ್ನಡಕ್ಕೆ ಈಗಿರುವ ನಾನಾ ಕ್ಷೇತ್ರಗಳಲ್ಲಿನ ಬಳಕೆಯ ವ್ಯಾಪ್ತಿಯನ್ನು ಮತ್ತಷ್ಟು ಹೇಗೆ ಹೆಚ್ಚಿಸುವುದು? ಹೇಗೆ ಈ ನುಡಿಯಿಂದಲೇ ಇಲ್ಲಿನ ಜನರು ಏಳಿಗೆ ಸಾಧಿಸುವಂತೆ ಮಾಡುವುದು? ಹೇಗೆ ಕನ್ನಡವನ್ನು ನಾಡಿನ ಸಾರ್ವಭೌಮ ನುಡಿಯಾಗಿಸುವುದು? ಹೊಸ ಸಂಸ್ಕೃತ ವೇದ ವಿಶ್ವವಿದ್ಯಾಲಯವು ಯಾವರೀತಿಯಲ್ಲಿ ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳ ಮೇಲೆ ಪರಿಣಾಮ ಬೀರಲಿದೆ?”. ಈಗ ಕರ್ನಾಟಕ ಸರ್ಕಾರ ಕೈಗೆತ್ತಿಕೊಳ್ಳಲು ಸಜ್ಜಾಗಿದ್ದು ಜನರ ತೆರಿಗೆಯ ಹಣವನ್ನು ಬಳಸಿ ಸಂಸ್ಕೃತ ವೇದವಿಶ್ವವಿದ್ಯಾಲಯವನ್ನು ಕಟ್ಟಲು ಮುಂದಾಗಿರುವುದು ಈ ಎಲ್ಲಾ ಪ್ರಶ್ನೆಗಳಿಗೆ ತೃಪ್ತಿಯಾಗುವ ಉತ್ತರವನ್ನು ಕಂಡುಕೊಂಡ ಮೇಲೇನು? ಹಾಗಲ್ಲದಿದ್ರೆ ಸಂಸ್ಕೃತ ವೇದ ವಿಶ್ವವಿದ್ಯಾಲಯವೆನ್ನುವುದು ಸಾರ್ವಜನಿಕರ ಹಣ ಬಳಕೆ ಮಾಡಿ ಕಟ್ಟುವ ಒಣಪ್ರತಿಷ್ಠೆಯ ಸ್ಥಾವರವಾಗುತ್ತದೆ ಅಷ್ಟೆ.

ಒಟ್ಟಾರೆ ಸಾರಾಂಶವೇನೆಂದರೆ:
  1. ಸಂಸ್ಕೃತ ವಿವಿಯೆಂಬುದು ಜುಟ್ಟಿಗೆ ಮಲ್ಲಿಗೆ ಹೂವಿನ ವಿವಿಯೆಂಬುದರಲ್ಲಿ ಸಂದೇಹವಿಲ್ಲ. ಅದನ್ನು ಹೊಟ್ಟೆಗೆ ಹಿಟ್ಟು ತರುವ ವಿವಿ ಎಂದು ಅನೇಕರು ತಪ್ಪಾಗಿ ತಿಳಿದಿದ್ದಾರೆ.
  2. ಹಾಗೆ ತಿಳಿಯುವುದರ ಹಿಂದೆ ಅನೇಕ ತಪ್ಪು ತಿಳುವಳಿಕೆಗಳಿವೆ: (ಅ) ಸಂಸ್ಕೃತದಲ್ಲಿ ಹಿಂದೆ ಹೊಟ್ಟೆಗೆ ಹಿಟ್ಟಿನ ವಿದ್ಯೆಗಳೆಲ್ಲ ಇದ್ದವು. (ಆ) ಅವುಗಳನ್ನು ಇಂದೂ ಬಳಸಿಕೊಳ್ಳಬಹುದು (ಇ) ಕೆಲವರಂತೂ ಹುಟ್ಟಬಹುದಾದ ಅರಿಮೆಯ ದಿಟಗಳೆಲ್ಲ ಸಂಸ್ಕೃತ ಶ್ಲೋಕಗಳಲ್ಲಿ ಈಗಾಗಲೇ ಇದೆಯೆಂಬ ಮೂರ್ಖತನದ ವಾದವನ್ನೂ ಮಾಡುತ್ತಾರೆ. (ಈ) ಸಂಸ್ಕೃತದ ಅಧ್ಯಯನವು ಕನ್ನಡದ ಅಧ್ಯಯನಕ್ಕೆ ಬೇಕೇ ಬೇಕು, ಅದರ ವ್ಯಾಕರಣವು ಇದರ ವ್ಯಾಕರಣಕ್ಕೆ ಬೇಕೇ ಬೇಕು. (ಉ) ಒಳ್ಳೆಯ ಕನ್ನಡವೆಂದರೆ ಸಂಸ್ಕೃತ. (ಊ) ಇಂಗ್ಲೀಷಿನಂತಹ ಇನ್ನಿತರ ನುಡಿಗಳಿಗಿಂತ ಸಂಸ್ಕೃತದಿಂದ ಪಡೆಯಬೇಕಾದದ್ದು ಹೆಚ್ಚಿದೆ...ಇತ್ಯಾದಿ.
  3. ನಿಜಕ್ಕೂ ನೋಡಿದರೆ ಸಂಸ್ಕೃತದ ಈ ಪೂಜೆಗೆ ಅದರ ಮೇಲಿರುವ ಕುರುಡುಭಕ್ತಿ ಮತ್ತು ಅರಿಮೆಗೆ ಬೆಲೆ ಕೊಡದಿರುವಿಕೆಯೇ (ಅವೈಜ್ಞಾನಿಕತೆಯೇ) ಕಾರಣ.
  4. ಕರ್ನಾಟಕ ರಾಜ್ಯ ಸರಕಾರವು ಇಂದು ಸಂಸ್ಕೃತ ವಿವಿ ಕಟ್ಟಲು ಮುಂದುವರೆದರೆ ಅದರಿಂದ ಕನ್ನಡಿಗರ ಏಳಿಗೆಗೆ ಆಗುವ ಉಪಯೋಗ ಬಹಳ ಕಡಿಮೆ. ಏಳಿಗೆಗೆ ದಾರಿದೀಪವಾಗುವ ಶಿಕ್ಷಣಕ್ಕೆಂದೇ ಆ ಹಣವನ್ನು ಬಳಸುವುದಾದರೆ ಬೇರೆ ಯಾವ ಯೋಜನೆಗಳಿಗೆ ಹಾಕಿದರೆ ಒಳ್ಳೆಯದೋ ಆ ಯೋಜನೆಗಳ ಬಗ್ಗೆ ಚಿಂತನೆ ನಡೆಸುವುದು ವಾಸಿ. ಅದು ಬಿಟ್ಟು ಕಟ್ಟೇ ಕಟ್ಟುತ್ತೇನೆ ಎಂದು ಮುಂದುವರೆದರೆ ಅದನ್ನು ತಡೆಗಟ್ಟುವ ಶಕ್ತಿ ನಮಗಿಲ್ಲ.
  5. ಹಾಗೆಯೇ, ಕನ್ನಡದ ಬಗ್ಗೆ ಅರಿಮೆಯಿಂದ ಕೂಡಿದ ಹೊಸಶಾಲೆಗೆ ಸೇರಿರುವ ತಜ್ಞರು ಯಾರಿರುವರೋ ಅಂಥವರು “ಹೊಸಶಾಲೆಯ ವಿವಿ” ಒಂದನ್ನು ತೆರೆಯಲು ಮುಂದಾಗಿ ಸರ್ಕಾರಕ್ಕೆ ಆ ಬಗ್ಗೆ ತಿಳಿಸಿ ಹಣಸಹಾಯವನ್ನು ಕೇಳುವುದು ಒಳಿತು. ಕರ್ನಾಟಕ ಸರ್ಕಾರವು ಯಾವ ಭೇದಭಾವವನ್ನೂ ಮಾಡದೆ ಈ “ಹೊಸಶಾಲೆ”ಯ ಕನ್ನಡ ವಿ.ವಿಯನ್ನೂ ತೆರೆಯಲಿ, ಮುಚ್ಚಟೆಯಿಂದ ಪೊರೆಯಲಿ. ಯಾವ ಶಾಲೆಯಿಂದ ನಾಡಿನ ಏಳಿಗೆ ಹೆಚ್ಚುತ್ತದೆ ಎನ್ನುವುದನ್ನು ಕಾಲವೂ, ಅರಿಮೆಯೂ ತೀರ್ಮಾನಿಸಲಿ.
  6. ನಮಗಂತೂ “ಹೊಸಶಾಲೆ”ಯಿಂದಲೇ ಅದು ಆಗುವುದು ಎಂಬುದರಲ್ಲಿ ಸಂದೇಹವಿಲ್ಲ. “ಹಳೇಶಾಲೆ”ಯವರಿಗೂ ಹಾಗೇ ಅನ್ನಿಸಿದ್ರೆ ಅದು ಅವರಿಗೆ ಬಿಟ್ಟಿದ್ದು. ಆದರೆ ಇವೆರಡು ಶಾಲೆಗಳನ್ನು ಸರ್ಕಾರವು ಸಮನೋಟದಲ್ಲಿ ನೋಡಬೇಕು. ಅದೇ ಅದಕ್ಕೆ ಶ್ರೇಯಸ್ಸು, ಏಕೆಂದರೆ ಅದರಿಂದ ಅಲ್ಲದಿದ್ದರೆ ಇದರಿಂದಂತೂ ನಾಡಿನ ಏಳಿಗೆಯಾಗುವುದು ಖಂಡಿತ... ಹೀಗೆ ಒಂದಲ್ಲ ಒಂದು ಸಾಧನದಿಂದ ನಾಡಿನ ಏಳಿಗೆಗೆ ನಾಂದಿ ಹಾಡಿದ ಸರ್ಕಾರವೆಂಬ ಹೆಗ್ಗಳಿಕೆಗೆ ಈ ಸರ್ಕಾರವು ಪಾತ್ರವಾಗಲಿ!

12 ಅನಿಸಿಕೆಗಳು:

Anonymous ಅಂತಾರೆ...

ಹಿಂದಿಯ ಹೇರಿಕೆಗೂ ಸಂಸ್ಕೃತದ ಹೇರಿಕೆಗೂ ಏನಾದರು ಬೇರೆತನವಿದೆಯೇ? ಒಂದು ಸುಳ್ಳೇ ಸುಳ್ಳು ರಾಷ್ಟ್ರ ಭಾಷೆ ಮತ್ತೊಂದು ಸುಳ್ಳು ಸುಳ್ಳೇ ಕನ್ನಡ ತಾಯಿ! ದೇವ ಭಾಷೆ! ಸಂಸ್ಕೃತಿಯ ಸೆಲೆ!

ಆರ್ಯ - ದ್ರಾವಿಡ ಸಿದ್ದಾಂತ ಸುಳ್ಳೋ ದಿಟವೋ, ಆದರೆ ಅದರಿಂದ ತಮಿಳರಲ್ಲಿ ತಮ್ಮತನದ ಎಚ್ಚರಿಕೆಯಂತೂ ಬಂತೂ, ಸಂಸ್ಕೃತ ಮತ್ತು ಹಿಂದಿ ಮೇಲಣ ಹಗೆ ಅವರ ಪ್ರಬಲ ಅಸ್ತ್ರ. ತಮಿಳುನಾಡಲ್ಲಿ ಭೈರಪ್ಪನವರೊಮ್ಮೆ ತಮ್ಮ ವಾದ ಮಂಡಿಸುವ ಪ್ರಯತ್ನ ಮಾಡಿದ್ದರೆ ಅದಕ್ಕೆ ತಮಿಳು ಪಂಡಿತರ ಉತ್ತರ ಮಜವಾಗಿ, ಚುರುಕ್ಕಾಗಿ ಇರುತ್ತಿತ್ತು.

ಈ ಹಿಂದಿ, ಸಂಸ್ಕೃತದ ಅಬ್ಬರ ಅದ್ಯಾಕೋ ದಕ್ಷಿಣ ರಾಜ್ಯಗಳಲ್ಲಿ ಬರೀ ಕರ್ನಾಟಕದಲ್ಲಿ ಮಾತ್ರ! :D

Rajashekhara ಅಂತಾರೆ...

ಇಲ್ಲಿನ ಚರ್ಚೆಯಲ್ಲಿ ಸಂಸ್ಕೃತವನ್ನು ಸತ್ತ ಭಾಷೆ, ದೇವ ಭಾಷೆ, ಭಾರತದ ಎಲ್ಲಾ ಭಾಷೆಗಳಿಗೆ ಮಾತೃ ಭಾಷೆ ಎಂದು ಬಣ್ಣಿಸಲಾಗಿದೆ, ದೇವ ಬಾಷೆ ಎನ್ನುವುದು ಅವರವರ ನಂಬಿಕೆಗೆ ಬಿಟ್ಟಿರುವ ವಿಷಯವಾಗಿದ್ದು ಸಂಸ್ಕೃತವು ಗ್ರೀಕ್ ಲ್ಯಾಟಿನ್ ನಂತೆ ಸತ್ತು ಹೋಗಿಲ್ಲ. ಬಳಸದೇ ಇರುವವರು ಇಲ್ಲದಿದ್ದರೂ ಅದನ್ನು ಓದುವವರು. ತಿಳಿದವರು ಇನ್ನೂ ಇದ್ದಾರೆ,
ಹಾಗೆ ಅದು ಸತ್ತ ಭಾಷೆಯಾಗಿಲ್ಲದೇ ಎಲ್ಲಾ ಭಾರತೀಯ ಭಾಷೆಗಳಿಗೆ ಮಾತೃ ಭಾಷೆಯಾಗಿದ್ದು , ಕುವೆಂಪು, ಗಾಂಧಿ, ಅಂಬೇಡ್ಕರ್ ಅಂತಹ ಮಹನೀಯರು ಪ್ರಾಮುಖ್ಹ್ಯ ಕೊಟ್ಟರು ಎಂದ ಮಾತ್ರಕ್ಕೆ ವಿ.ವಿ ಬೇಕೇ ಎನ್ನುವುದು ಪ್ರಸ್ತುತವಾಗುತ್ತದೆ.
ಸಂಸ್ಕೃತ ಕಲಿಕೆಯಿಂದ ಕನ್ನಡಕ್ಕೆ ಅಪಾಯ ಎನ್ನುವ ವಾದ ಹುರುಳಿಲ್ಲದ್ದು. ನಿಜವಾಗಲೂ ಕನ್ನಡಕ್ಕೆ ಅಪಾಯ ಅಪಾಯ ಇರುವುದು English ನಿಂದ ಮತ್ತು English ನ್ನು LKG ಯಿಂದ ಕಲಿಯುತ್ತಿರುವ ಈಗಿನ ಪೀಳಿಗೆಯಿಂದ ( ಆದರೆ English ಅನಿವಾರ್ಯವಾಗಿ ಬಿಟ್ಟಿದೆ)

ನನ್ನ ದೃಷ್ಟಿಯಲ್ಲಿ ಸಂಸ್ಕೃತದಲ್ಲಿರುವ ಗ್ರಂಥಗಳಿಂದ ತಿಳಿಯಬೇಕಾದ್ದು/ ಉಪಯೋಗವಾಗುವಂತಹದು ಇನ್ನೂ ಇದೆ ಅನ್ನಿಸುತ್ತೆ.

ಇತ್ತೀಚೆಗೆ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗಾಗಿ ೮.೯.೧೦ ನೇ ತರಗತಿಗಳ ಗಣಿತ ಪಾಠಗಳನ್ನು ಸಿದ್ಧಪಡಿಸುವ(www.FREEGanita. com) ಸಮಯದಲ್ಲಿ 'ಶೂನ್ಯ ಮತ್ತು ದಶಮಾಂಶ ಪದ್ಧತಿಯನ್ನು ಕಂಡು ಹಿಡಿದವರು ಭಾರತೀಯರಾಗಿದ್ದರೂ ನನಗೆ ಅದಕ್ಕೆ ಅಧಾರ ಸಿಕ್ಕಿದ್ದು 'ಯಜುರ್ವೇದ,ಬ್ರಹ್ಮಾಂಡ ಪುರಾಣ ಮತ್ತು ರಾಮಾಯಣ' ಗ್ರಂಥಗಳಲ್ಲಿ.
ಪೈಥೊಗೊರಸನ ಪ್ರಮೇಯ ಇರುವುದು ಯಾಜ್ನವಲ್ಕ್ಯರ ಶತಪಥ ಬ್ರಾಹ್ಮಣ ದಲ್ಲಿ, ವರ್ಗ ಸಮೀಕರಣದ ಸೂತ್ರ ಇರುವುದು ಶ್ರೀಧರನ ಗ್ರಂಥದಲ್ಲಿ, ಪೈ ಇರುವುದು ಆರ್ಯಭಟೀಯಂ ನಲ್ಲಿ !!
ಗಣಿತದ ವಿವಿಧ ಪಾಠಗಳಿಗೆ ಬಹಳ ಆಸಕ್ತಿದಾಯಕ ಸಮಸ್ಯೆಗಳು/ಉದಾಹರಣೆಗಳು ಸಿಕ್ಕಿದ್ದು ಬಿಜಾಪುರದಲ್ಲೆ ಹುಟ್ಟಿ ಕನ್ನಡಿಗನೇ ಆಗಿರುವ ಕ್ರಿ . ಶ.೧೨ ನೇಶತಮಾನದ ಭಾಸ್ಕರಾಚಾರ್ಯನ ಸಂಸ್ಕೃತದಲ್ಲಿನ ಲೀಲಾವತಿ ಗ್ರಂಥದಲ್ಲಿ
ಇದೂ ಅಲ್ಲದೇ ಕ್ರಿ. ಶ. ೧೭ ನೇ ಶತಮಾನದ ಅಪ್ಪಟ ಕನ್ನಡ ಕವಿ ಬಸವ ಭೂಪಾಲ ನು ಬರೆದ ೧೦೦% ಸಂಸ್ಕೃತದಲ್ಲಿ ರಚಿಸಿದ್ದ ಸಂಪದ್ಭರಿತ ವಿಶ್ವಕೋಶ ಗ್ರಂಥ ಶಿವತತ್ವ ರತ್ನಾಕರ
( ಕನ್ನಡ ಮಾತೃಭಾಷೆಯ ಈ ಶರಣ ಕವಿ ಸಂಸ್ಕೃತದಲ್ಲಿ ಏಕೆ ವಿಶ್ವಕೋಶವನ್ನು ರಚಿಸಿರಬಹುದು?) ದಲ್ಲಿ ಗಣಿತ, ಸಂಗೀತ, ಅರ‍ೋಗ್ಯ/ಸಸ್ಯ ಶಾಸ್ತ್ರ ಇತ್ಯಾದಿ ವಿಷಯಗಳ ಬಗ್ಗೆ ಬಹಳ ಇದೆ

ಕೆಲವರು ಇದೆಲ್ಲಾ ಕಂಡು ಹಿಡಿದಾಯಿತು ಇನ್ನೂ ಏನು ಪ್ರಯೋಜನ, ಕಂಡು ಹಿಡಿಯಲು ಏನಿದೆ ಎಂದು ಕೇಳಬಹುದು.
ಇದೇ ರೀತಿ ಎಲ್ಲರೂ ಆಲೋಚಿಸಿದ್ದರೆ ೧೯೫೦ ರ ಹೊತ್ತಿನಲ್ಲಿ ವೈದಿಕ ಗಣಿತ( ಗಮನಿಸಿ : ವೇದಕ್ಕೂ ಇದಕ್ಕೂ ಎನೇನೂ ಸಂಬಂಧವಿಲ್ಲ ) ಬೆಳಕಿಗೆ ಬರುತ್ತಿರಲಿಲ್ಲ
ಇದರಲ್ಲಿನ ಗಣಿತದಂತೆ ಗಣಿತ ಕಲಿಸುವಂತಿದ್ದರೆ ನಮ್ಮಲ್ಲಿ ಹೆಚ್ಚಿನವರು ಭಾಸ್ಕರನೋ, ಆರ್ಯಭಟನೋ ಇಲ್ಲ ಬಸವ ಭೂಪಾಲರು ಆಗ ಬಹುದೋ ಏನೋ?
ನಮ್ಮ ಪಾಶ್ಚಾತ್ಯ ಶಿಕ್ಷಣ ಕ್ರಮದಿಂದ ಕಲಿಯಬೇಕಾದ್ದನ್ನು ಸರಿಯಾಗಿ ಕಲಿಯದೇ ಇರುವುದು ನಮ್ಮ ದೌರ್ಭಾಘ್ಯ.
ಮೇಲಿನ ವಿಷಯಗಳ ವಿವರಗಳ ಚರ್ಚೆ ಇಲ್ಲಿ ಅಪ್ರಸ್ತುತ ಆಗಿರುವುದರಿಂದ ಆಸಕ್ತಿ ಇದ್ದವರು ಗಣಿತ ಡಿವಿಡಿ ಯಲ್ಲಿರುವ 'ಪ್ರಸ್ತಾವನೆಯ' ನ್ನು ಆಲಿಸಬಹುದು

ಗಣಿತವಲ್ಲದೆ ಇನ್ನೂ ಅನೇಕ ವಿಷಯಗಳು ನಮ್ಮ ಪ್ರಾಚೀನ ಗ್ರಂಥಗಳಲ್ಲಿ( ಅದು ಸಂಸ್ಕೃತ/ಹಳ ಕನ್ನಡ/ಕನ್ನಡ ಇರಬಹುದು) ಇವೆ ಅದನ್ನು ಸರಿಯಾಗಿ ಸಂಶೋಧಿಸಬೇಕು, ಅದಕ್ಕೆ ಭಾಷೆಯ ಮೇಲೆ ಪ್ರಭುತ್ವ ಇರಬೇಕು ಅಷ್ಟೇ.
ವಿಶ್ವವಿದ್ಯಾಲಯಗಳು ಬರೀ ಪದವಿ ನೀಡಿ , ಅದರಿಂದ ಬರೀ ಕೆಲಸಕೊಡಿಸುವ ಯಂತ್ರಗಳಾಗದೆ
ಸಂಶೋಧನೆ ಮಾಡುವಂತಿರಬೇಕು.

ಸಂಸ್ಕೃತ/ಕನ್ನಡ ವಿ ವಿ ಗಳು ಬೇಕೇ ಬೇಡವೇ ಎನ್ನುವ ಬದಲು ಈ ವಿ ವಿ ಗಳು ಯಾವ ರೀತಿಯ ಜನೋಪಯೋಗಿ ಸಂಶೋಧನಾ ಕಾರ್ಯ ನಡೆಸಬಹುದು ಎಂದು ಚರ್ಚಿಸುವುದು ಉತ್ತಮ ಅಲ್ಲವೇ?

ಸೋಮಯಾಜಿ

ಸಾಗರದಾಚೆಯ ಇಂಚರ ಅಂತಾರೆ...

ಸಂಸ್ಕ್ರತ ವಿ ವಿ ಗಳ ಅಗತ್ಯ ನಮಗೆಷ್ಟಿದೆ ಎಂದು ತಿಳಿಯುವುದು ಸೂಕ್ತ ಅನಿಸುತ್ತದೆ. ಸದಾ ವ್ರತ್ತಿಪರ ಶಿಕ್ಷನಗಳಿಗೆ ಮುಗಿ ಬೀಳುತ್ತಿರುವ ವಿಧ್ಯಾರ್ಥಿಗಳು ಹಾಗೂ ಪಾಲಕರು ಸಂಸ್ಕ್ರತ ವಿ ವಿ ಗೆ ಎಷ್ಟು ಸಮ್ಮತಿಸುತ್ತಾರೆ ಅಲ್ಲವೇ?
ಭಾಷೆಯ ಬಗ್ಗೆ ನಮಗೆ ತಿಳುವಳಿಕೆ ಬರದೆ ಬೇರೊಬ್ಬರಿಂದ ತಿಳಿಯಲು ಸಾದ್ಯವಿಲ್ಲ. ಮೊದಲು ನಾವು ನಮ್ಮತನವನ್ನು ಅರಿತುಕೊಂಡರೆ ಇಂಥಹ ಎಷ್ಟೋ ವಿ ವಿ ಗಳು ತನ್ನಿಂದ ತಾನೆ ತಲೆ ಎತ್ತುತ್ತವೆ. ದೇಶದಲ್ಲಿದ್ದೂ ಪರಕೀಯರಾಗಿದ್ದೇವೆ ನಾವು.

Shashank ಅಂತಾರೆ...

"ವಿಶ್ವವಿದ್ಯಾಲಯಗಳು ಬರೀ ಪದವಿ ನೀಡಿ , ಅದರಿಂದ ಬರೀ ಕೆಲಸಕೊಡಿಸುವ ಯಂತ್ರಗಳಾಗದೆ
ಸಂಶೋಧನೆ ಮಾಡುವಂತಿರಬೇಕು."

ಸೋಮಯಾಜಿ ಅವರ ಈ ಮಾತು ಸರಿ ಎಂದು ನನ್ನ ಅನಿಸಿಕೆ..

Svenskannadiga ಅಂತಾರೆ...

To Mr Somayaji,

After all the 'Jnan' from your words, I wanna know why did all the Sanskrit pundits in India with there divine knowledge could not find solution to the chaotic problems in India.

Why only people with English education in India are inventing and processing the scientific world? ( Starting Bose to Chandrashekar to Vishveshwaraiah )

Every year the central govt + all the Mutts + other bodies spends crores and crores of money on Sanskrit. Where is your 'Jnan' fruit?/

The amount of money spent for Kannada is around 10% for that of Sanskrit in India. But Kannada produced more Jnana Peethees than Sanskrit! Howcome?

Just by hyping a donkey doesn't become a horse.!

Enough of lies and sanskritization

ಸವಿತೃ ಅಂತಾರೆ...

ಸಂಸ್ಕೃತದಲ್ಲಿ ಏನೆಲ್ಲಾ ಒಳ್ಳೆಯದು ಇದೆ ಆದರೂ .. ಅದರಲ್ಲಿ ಸಾಕಷ್ಟು ವಿಷವೂ ಇದೆ. ವಿಷವನ್ನು ಬೇರ್ಪಡಿಸಿ ಹಾಲನ್ನಷ್ಟೇ ತೆಗೆದುಕೊಳ್ಳಲು ಸಾಕಷ್ಟು ಸಹೃದಯತೆ, ಪ್ರೌಡತೆ ಬೇಕು. ಅದು ಶೇಕಡಾ ಎಷ್ಟು ಜನರಲ್ಲಿ ಇದೆ ಅನ್ನುವುದು ಮತ್ತು ಅಂತವರ ಮಾತುಗಳಿಗೆ ಅದೆಷ್ಟು ಬೆಲೆ ಸಿಗುತ್ತೆ ಅನ್ನುವುದು ಒಂದು ಪ್ರಶ್ನೆ.

ಹಳ್ಳಿ ಹೈದ ಅಂತಾರೆ...

ಮಾಯ್ಸ ಅವರೆ, ಸರಿಯಾಗಿ ಹೇಳಿದ್ದೀರಿ.

ಇವೆಲ್ಲ ನಮ್ಮ ನಾಡಿನಲ್ಲೆ ಹೆಚ್ಚು, ಅದಕ್ಕೆ ಕಾರಣ, ನಮ್ಮ ನಾಡು ಒಂದು ಧರ್ಮಛತ್ರವಾಗಿರುವುದರಿಂದ. ಇಲ್ಲಿ ಯಾರು ಬೇಕಾದರು ಬಂದು ಅವರ ಬೇಳೆ ಬೇಯಿಸಿಕೊಳ್ಳಬಹುದು. ಇದು ಕನ್ನಡಿಗರಿಗೆ ಆ ದೇವರು ಕೊಟ್ಟಿರುವ ಶಾಪವೆಂದೇ ಕಾಣುತ್ತದೆ.

ಸಂಸ್ಕೃತ ಪಿತ್ತವನ್ನು ಹೋಗಲಾಡಿಸಬೇಕು.

Anonymous ಅಂತಾರೆ...

ಹಳ್ಳಿ ಹಯ್ದರೆ,

ಈ ಜಗದಲ್ಲಿರುವ ವಿವೆಕವೆಲ್ಲ, ಜಾಣತನವೆಲ್ಲ ಬರೀ ಸಂಸ್ಕೃತದಲ್ಲಿದೆ ಎಂಬುವವರಿಗೆ ಅದು ಯಾಕೋ ಚಿಕ್ಕ ಪುಟ್ಟ ಸತ್ಯಗಳಾಗಲಿ, ಸಂಗತಿಗಳಾಗಲಿ ತಿಳಿದೇ ಇಲ್ಲ, ತಿಳಿಸಿದರೂ ಅರ್ಥವಾಗುವುದೂ ಇಲ್ಲ. ಒಂದು ತರಹದ ಜಾಣ ಪೆದ್ದು, ಮೊಂಡುತನ.

ಕನ್ನಡ, ತಮಿಳು, ತೆಲುಗು, ಬೆಂಗಾಲಿ, ಮಲಯಾಳಿ, ತುಳು, ತೋದ, ಕೊರವ, ಬಡಗ, ಓರಿಯ, ಅಸ್ಸಾಮಿ, ಮಣಿಪುರಿ, ಬೋಡೊ, ಹೀಗೆ ಇಂಡಿಯಾ ದೇಶದಲ್ಲಿ ದಕ್ಷಿಣ ಹಾಗು ಪೂರ್ವದ ರಾಜ್ಯಗಳ ಭಾಷೆಗಳು ಸಂಸ್ಕ್ರುತದಿಂದಾಗಲಿ ಇಲ್ಲವೇ ಪ್ರಾಕ್ರುತದಿಂದಾಗಲಿ ಬಂದಿಲ್ಲ.

ಇಂಡಿಯಾದಲ್ಲಿ ಐದು ಲ್ಯಾಂಗ್ವೇಜ್ ಫ್ಯಾಮಿಲಿಗಳಿವೆ. ಅದರಲ್ಲಿ ಬರಿ ಒಂದು ಸಂಸ್ಕೃತಕ್ಕೆ ಸಂಬಂಧ ಹೊಂದಿರುವಂತದ್ದು.

ಇದನ್ನೇ ಮತ್ತೆ ಮತ್ತೆ ಎಷ್ಟು ಸರತಿ ಹೇಳಿದರು, 'ಹಾಡಿದ್ದೇ ಹಾಡೋ ಕಿಸು ಬಾಯ್ ದಾಸ' ಅನ್ನೋ ಗಾದೆಯಂತೆ ಸುಳ್ಳು ಸುಳ್ಳು ಸಂಗತಿಗಳನ್ನೂ ಸಂಸ್ಕೃತವನ್ನು ಹೊಗಳೋ ನೆವದಲ್ಲಿ ಹೇಳುತ್ತಾರೆ. ಹೊಸ ಹೊಸ ವಿಜ್ಞಾನ ಸಂಗತಿಗಳನ್ನೆಲ್ಲ ಮೊದಲೇ ಈ ಸಂಸ್ಕೃತ ಬುಕ್ಕಲ್ಲಿ ಇತ್ತು ಆ ಸಂಸ್ಕೃತ ಬುಕ್ಕಲ್ಲಿ ಇತ್ತು ಎಂದು, ಹೊಸದಾಗಿ Interpretationಗಳನ್ನೂ ಹುಟ್ಟಿಸಿ ಡಂಗೂರ ಹೊಡೆಯುತ್ತಾರೆ. Ex. Relativity Theory, Atomic Structure, TCP/IP, GSM, CDMA ಇವೆಲ್ಲ XYZನಲ್ಲಿ ಇದೆ.

ನಮ್ಮ ದೇಶದಲ್ಲಿ ಏನು ಸಂಸ್ಕೃತ ಪಂಡಿತರಿಗೆ ಕಡಮೆಯೇ? ಸಂಸ್ಕೃತದಲ್ಲಿ ಅಷ್ಟೊಂದು ವಿಜ್ಞಾನವಿದ್ದರೆ, ಅವರೆಲ್ಲ ಇಷ್ಟು ದಿವಸ ಜನರ ತೆರಿಗೆಯ ಹಣವನ್ನು ಸರಕಾರದಿಂದ ತಿಂದುಕೊಂಡು ನಮ್ಮ ದೇಶದ ಪ್ರಗತಿಗೆ ಏನೂ ಹೇಳಿಕೊಳ್ಳುವಂತಹ ಕೊಡುಗೆ ಕೊಡದೆ, ಗೆಣಸು ಹೆರೆಯುತ್ತಿದ್ದಾರೆ ಏ?

ನಾವು ತೆರುವ ತೆರಿಗೆಯ ಹಣವನ್ನು ಪೋಲೇ ಪೋಲು ಬಳಸುವುದನ್ನು ತದಯುವುದು ನಮ್ಮ ಹಕ್ಕು ಮತ್ತು ಕರ್ತವ್ಯ.

ನನ್ನಿ

Rajashekhara ಅಂತಾರೆ...

Dear Svenskannadiga


I do not think we are discussing here superiority of one language over the other.
I do not think I have said every problem has solution in Samskruta. It is like saying every problem in the world has solution in English.
Regarding Inventions by English educated people are there not contributions by Japanese Russians, Chinese, Hebrew speakers? Language is just a means of communication.
Regarding Jnana peethas, it is some what proportional to number of speakers in that language. This is just like asking a question why no Jnana Peethas for Tulu, kodava, Konkani?

Since I am student of Maths I have not said any thing without proof as far as Maths and Sanskrit texts are concerned (Proofs are given in the introduction part of Ganita DVD-www.FREEGanita. com) ) : To that extent they are not lies.

I still maintain that ancient books in whichever language they are have some ‘jnan’ for mankind and we need to do some research on that for our own benefit.

Anonymous ಅಂತಾರೆ...

I observe all the discussions in Enguru and Karnatique are getting digressed towards this Tulu and Konkani issue. I don't see any importance for bring these things in every topic.

ರವಿ ತುರುವೆಕೆರೆ ಅಂತಾರೆ...

ಕರ್ನಾಟಕದಲ್ಲಿ ಮುಂಚೆ ಸಂಸ್ಕೃತ ಮಾತನಾಡ್ತಾ ಇದ್ರೂ ಅನ್ನೋದು ಅಪರಂಜಿ ಸುಳ್ಳು. ಇದಕ್ಕೆ ಕರ್ನಾಟಕದ ಊರು-ಕೇರಿಗಳ ಹೆಸರುಗಳೇ ಸಾಕ್ಷಿ. ಇವತ್ತಿನ ಕರ್ನಾಟಕದ ಯಾವುದೇ ಊರಿನ ಹೆಸರು ತೆಗೆದುಕೊಳ್ಳಿ, ಸಂಸ್ಕೃತದಿಂದ ಹುಟ್ಟಿರುವ ಊರ ಹೆಸರುಗಳು ಸಾವಿರಕ್ಕೆ ಒಂದಿದ್ರೆ ಹೆಚ್ಚು.
ಉದಾಹರಣೆಗೆ:
ಶಿವಮೊಗ್ಗ, ಹುಬ್ಬಳ್ಳಿ, ಬೆಂಗಳೂರು, ಮೈಸೂರು, ಧಾರವಾಡ, ಬೆಳಗಾವಿ,, ಹೀಗೆ ಯಾವುದೇ ದೊಡ್ಡ ಊರಾಗಲಿ, ಇಲ್ಲ, ಮಳವಳ್ಳಿ, ಬಂಕಾಪುರ, ಬೈಲಹೊಂಗಲ್, ಹಾಲಾಡಿ, ಸಿದ್ಧಾಪುರ, ಬಳ್ಳಾರಿ,, ಯಾವುದೇ ಊರು ತೆಗೆದುಕೊಳ್ಳಿ,, ಒಂದರ ಮೂಲವೂ ಸಂಸ್ಕೃತವಲ್ಲ.

ಸಂಸ್ಕೃತ ಕರ್ನಾಟಕದ ಆಡು ನುಡಿಯಾಗಿದ್ರೆ, ಅದು ಹೇಗೆ ಊರು ಹೆಸರುಗಳೆಲ್ಲ ಅಪ್ಪಟ್ಟ ಕನ್ನಡದಲ್ಲಿವೆ ??

Anonymous ಅಂತಾರೆ...

ಶಿವಮೊಗ್ಗೆಯ ಮೂಲದ ಬಗ್ಗೆ ಒಂದು ಜೈನ ಕಲ್ಬರಹದಂತೆ, ಅದರ ಹೆಸರು ಸೀಮೊಗ್ಗೆ, ಸಿಹಿಮೊಗ್ಗೆ, ಸಿಹಿಯಾದ ನೀರನ್ನು ಮೊಗ್ಗು/ಬೊಗಸೆ ಮಾಡಿ ಕುಡಿಯುವ ಊರು ಎಂದಂತೆ.

ಇನ್ನು ತೀರ್ಥಹಳ್ಳಿ, ತೀರಿತ/ದ ಹಳ್ಳಿ ಇಂದ ಎಂದು ಕೊವೆಂ(?) ಅವರ ಹೊತ್ತಗೆ ಹೇಳುವುದು.

ಇನ್ನು ಕರ್ನಾಟ ಎಂಬ ಪದವೇ ಕರ್ ಮತ್ತು ನಾಟ್/ನಾಡ್ ಎಂಬ ಕನ್ನಡ ಪದಗಳಿಂದ ಬಂದಿವೆ. ಕರ್ನಾಟದ Sanskritized ರೂಪ ಕರ್ಣಾಟ ಎಂದು ಹಲ ಪಂಡಿತರ ಹೇಳಿಕೆ.

ಅದಿರಲಿ, ಚೆನ್ನುಡಿ/ಶಾಸ್ತ್ರೀಯ ನುಡಿಯಾಗಿ ಕನ್ನಡವನ್ನು ಹೆಸರಿಸಿದ ಮೇಲೆ ನಮಗೆ ಮೊದಲು ಬೇಕಾಗಿರುವುದು ಹಳಗನ್ನಡ ಹಾಗು ನಡುಗನ್ನಡಗಳು ಕುರಿತು ಆರಯ್ಯು ನಡೆಸುವ ಯುನಿವೆರ್ಸಿಟಿ. ನಮ್ಮ ಕನ್ನಡ ನುಡಿಯ ಬಗ್ಗೆ sufficient research ನಡೆಸಲು instituteಗಳಿಲ್ಲ. ಹಾಗಿರುವಾಗ ಸಂಸ್ಕೃತ ಯುನಿವರಿಸಿಟಿ ಕನ್ನಡಕ್ಕೆ ಮೋಸ ತಾನೇ?

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails